Tag: Chikkamagaluru

  • ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನಿಸಿದ ಮರಳು ದಂಧೆಕೋರರು

    ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನಿಸಿದ ಮರಳು ದಂಧೆಕೋರರು

    ಚಿಕ್ಕಮಗಳೂರು: ಅಕ್ರಮ ಮರಳು ಗಣಿಗಾರಿಕೆಯ ಅಡ್ಡೆ ಮೇಲೆ ದಾಳಿ ಮಾಡಲು ಮುಂದಾದಾಗ ಪೊಲೀಸರ ಮೇಲೆ ಲಾರಿ ಹತ್ನಿಸಲು ಮರಳು ದಂಧೆಕೋರರು ಯತ್ನಿಸಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ತಲಗೂರು ವ್ಯಾಪ್ತಿಯಲ್ಲಿ ಹೇಮಾವತಿ ನದಿ ಒಡಲಲ್ಲಿ ಮರಳುಗಾರಿಕೆ ನಡೆಯುತ್ತಿದ್ದ ಜಾಗಕ್ಕೆ ಪೊಲೀಸರು ರೇಡ್ ಮಾಡಿದ್ದಾರೆ. ಆಗ ಮರುಳುಗಾರಿಕೆ ಮಾಡುತ್ತಿದ್ದ ಮೊಹಿನುದ್ದಿನ್ ಎಂಬವನು ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನಿಸಿದ್ದನು. ಆಗ ಪೊಲೀಸರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಈ ಘಟನೆ ಬಳಿಕ ಆತ ಕೂಡ ಅಂದಿನಿಂದ ನಾಪತ್ತೆಯಾಗಿದ್ದಾನೆ.

    ಅಂದಿನಿಂದ ವಿಷಯವನ್ನು ಗೌಪ್ಯವಾಗಿಟ್ಟಿದ್ದ ಪೊಲೀಸರು ಸೋಮವಾರ ಸುಮಾರು ನೂರಕ್ಕೂ ಅಧಿಕ ಪೊಲೀಸರು ತಲಗೂರು ಗ್ರಾಮಕ್ಕೆ ನುಗ್ಗಿದ್ದಾರೆ. ಓರ್ವ ಮರಳು ದಂಧೆಕೋರನನ್ನು ಹಿಡಿಯಲು ಐವರು ಸಬ್ ಇನ್ಸ್ ಪೆಕ್ಟರ್, ಐವರು ಸರ್ಕಲ್ ಇನ್ಸ್ ಪೆಕ್ಟರ್, ಒಂದು ನಕ್ಸಲ್ ನಿಗ್ರಹ ಪಡೆ ತುಕಡಿ, ಒಂದು ಓಬವ್ವ ತುಕಡಿ ಹಾಗೂ ಒಂದು ಸಶಸ್ತ್ರ ಮೀಸಲ ಪಡೆಯ ತುಕಡಿಯ ನೂರಕ್ಕೂ ಅಧಿಕ ಪೊಲೀಸರು ಹೋಗಿದ್ದಾರೆ. ಪೊಲೀಸರು ಹೀಗೆ ಏಕಾಏಕಿ ನುಗ್ಗುವುದು ಕಂಡು ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು.

    ನೂರಕ್ಕೂ ಅಧಿಕ ಪೊಲೀಸರು ಗ್ರಾಮದ ಸುತ್ತಲೂ ನಾಕಾಬಂಧಿ ರಚಿಸಿ ಬೆಳಗ್ಗೆಯಿಂದ ಸಂಜೆವರೆಗೂ ಹುಡುಕಾಡಿದ್ದಾರೆ. ಆದರೆ ಆರೋಪಿಯ ಸುಳಿವು ಪತ್ತೆಯಾಗಿಲ್ಲ. ಬಳಿಕ ಆರೋಪಿಗೆ ಸೇರಿದ ಎರಡು ಟೆಂಪೋ, ಎರಡು ಬೈಕ್ ಹಾಗೂ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಹೊರ ಜಿಲ್ಲೆ, ರಾಜ್ಯಕ್ಕೆ ಹೋಗ್ತಿರೋ ಕಾಫಿನಾಡಿಗರು

    ಹೊರ ಜಿಲ್ಲೆ, ರಾಜ್ಯಕ್ಕೆ ಹೋಗ್ತಿರೋ ಕಾಫಿನಾಡಿಗರು

    ಚಿಕ್ಕಮಗಳೂರು: ಹೊಸ ವರ್ಷ ಆಚರಣೆಗೆ ಕಾಫಿನಾಡು ಈಗಾಗಲೇ ಸನ್ನದ್ಧವಾಗಿದೆ. ಹೊಸ ವರ್ಷವನ್ನು ವೆಲ್‍ಕಮ್ ಹೇಳಲು ಕಾಫಿನಾಡಿಗರು ಹೊರ ಜಿಲ್ಲೆ-ರಾಜ್ಯಕ್ಕೆ ಹೋಗುತ್ತಿದ್ದಾರೆ. ಹೊರರಾಜ್ಯ ಹಾಗೂ ಜಿಲ್ಲೆಯವರು ಕಾಫಿನಾಡಿನಲ್ಲಿ ಜಮಾಯಿಸಿದ್ದಾರೆ. ಆದರೆ ಪೊಲೀಸ್ ಇಲಾಖೆ ಹೊಸ ವರ್ಷ ಆಚರಣೆಗೆ ಚಿಕ್ಕಮಗಳೂರಿಗೆ ಬರೋ ಪ್ರವಾಸಿಗರಿಗೆ ಹಾಗೂ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಪೊಲೀಸ್ ಇಲಾಖೆ ಪ್ರವಾಸಿಗರಿಗೆ ನೀಡಿರುವ ಸೂಚನೆಗಳು:
    ಸವಾರರು ಪಾನಮತ್ತರಾಗಿ ವಾಹನ ಚಲಾಯಿಸುವಂತಿಲ್ಲ. ಅಲ್ಲದೇ ಏಕಾಂಗಿಯಾಗಿ ಅಥವಾ ಸಣ್ಣ ಗುಂಪುಗಳಾಗಿ ಪ್ರತ್ಯೇಕ ಸ್ಥಳಗಳಿಗೆ ಹಾಗೂ ಎಲ್ಲೆಂದರಲ್ಲಿ ಹೋಗುವಂತಿಲ್ಲ. ಇನ್ನೂ ನೋಂದಾಯಿಸದೇ ಇರುವ ಸ್ಥಳ, ಅಂಗಡಿ ಅಥವಾ ವ್ಯಕ್ತಿಗಳಿಂದ ಮದ್ಯವನ್ನ ಖರೀದಿಸಬೇಡಿ ಎಂದು ಸೂಚಿಸಿದೆ.

    ಅಕ್ರಮ ಹಾಗೂ ಮಾದಕ ವಸ್ತುಗಳ ಬಳಕೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಂತಹ ವಸ್ತುಗಳ ಬಳಕೆದಾರರಾಗಲಿ ಅಥವಾ ಮಾರಾಟಗಾರರು ಕಂಡು ಬಂದಲ್ಲಿ ಅವರ ವಿರುದ್ಧ ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸೋದಾಗಿ ಎಚ್ಚರಿಸಿದ್ದಾರೆ. ಅಲ್ಲದೇ ರಸ್ತೆಗಳಲ್ಲಿ ಕುಡಿದು ಗಲಾಟೆ ಮಾಡೋದಾಗಲಿ, ಅವ್ಯವಸ್ಥೆ ಮಾಡೋದು ಕಂಡು ಬಂದಲ್ಲಿ ಅಥವಾ ವೇಗವಾಗಿ ವಾಹನಗಳನ್ನ ಓಡಿಸಿದರೆ ಅಂತಹ ವಾಹನಗಳನ್ನ ವಶಪಡಿಸಿಕೊಂಡು ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

    ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಮಾಲೀಕರಿಗೆ ನೀಡಿರೋ ಸೂಚನೆಗಳು:
    ಅನುಮತಿ ನೀಡಿರುವ ಸಮಯವನ್ನ ಮೀರಿ ಮದ್ಯ ಮಾರಾಟ ಮಾಡೋದಾದರೆ ಎಲ್ಲಾ ಸಂಸ್ಥೆಗಳು ಅಬಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತವಾದ ಅನುಮತಿ ಪಡೆದಿರಬೇಕು. ಅನುಮತಿ ನೀಡಿದ ಸಮಯ ಬಿಟ್ಟು ಹೊರಾಂಗಣ ಅಥವಾ ಒಳಾಂಗಣದಲ್ಲಾಗಲಿ ಲೌಡ್‍ಸ್ಪೀಕರ್ ಹಾಗೂ ಡಿ.ಜೆ.ಗಳನ್ನ ಬಳಸುವಂತಿಲ್ಲ. ಒಂದು ವೇಳೆ ಬಳಸೋದಾದರೆ ಅನುಮತಿ ಕಡ್ಡಾಯ.

    ಹೋಂಸ್ಟೇಗಳು ಕೂಡ ವಾಣಿಜ್ಯೇತರ ಸಂಸ್ಥೆಗಳಾಗಿವೆ. ಆದ್ದರಿಂದ ಅನುಮತಿಯ ಸಮಯವನ್ನ ಮೀರಿ ಹೋಂಸ್ಟೇಗಳ ಹೊರಾಂಗಣದಲ್ಲಿ ಲೌಡ್ ಸ್ಪೀಕರ್ ಹಾಗೂ ಡಿ.ಜೆಗಳ ಬಳಕೆಗೆ ಅನುಮತಿ ಇಲ್ಲ. ಹೋಂಸ್ಟೇಗಳಲ್ಲಿ ಬಾರ್ ಹಾಗೂ ಮದ್ಯ ಮಾರಾಟಕ್ಕೆ ತಾತ್ಕಾಲಿಕ ಅಥವಾ ಶಾಶ್ವತವಾಗಿ ಅನುಮತಿ ಇಲ್ಲ. ಹೋಂಸ್ಟೇಗಳಿಗೆ ಸಂಬಂಧಿಸಿದ ಯಾರೇ ಆದರು ಮದ್ಯವನ್ನ ಮಾರಾಟ ಮಾಡುವುದು ಕಂಡು ಬಂದರೆ ಅವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತದೆ.

    ಸಾರ್ವಜನಿಕ ಸ್ಥಳಗಳಲ್ಲಿ ಹೊರಾಂಗಣ ಚಟುವಟಿಕೆಗಳನ್ನ ಆಯೋಜಿಸಲು ಪೊಲೀಸ್ ಹಾಗೂ ನಗರಗಳಲ್ಲಿ ನಗರಸಭೆ ಅನುಮತಿಯನ್ನ ಕಡ್ಡಾಯವಾಗಿ ಪಡೆದಿರಬೇಕು. ಪ್ರವಾಸಿಗರು ತಮ್ಮ ವಾಹನಗಳನ್ನ ಎಲ್ಲೆಂದರಲ್ಲಿ, ಹೇಗಂದರೆ ಹಾಗೆ ಅಪಾಯಕಾರಿಯಾಗಿ ಪಾರ್ಕ್ ಮಾಡುವಂತಿಲ್ಲ. ಸಂಸ್ಥೆಗಳು ಅವರ ನಿರೀಕ್ಷಿತ ಜನಸಂದಣಿಗೆ ಅನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಇದರಿಂದ ಟ್ರಾಫಿಕ್ ಜಾಮ್ ಆದರೆ ಸಂಬಂಧಪಟ್ಟ ಸಂಸ್ಥೆಗಳು ಸಮಾನ ಹೊಣೆ ಹೊರಬೇಕಾಗುತ್ತೆ.

    ಹೊಸ ವರ್ಷದ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಪ್ರವಾಸಿಗರು ಹಾಗೂ ಹೊಸ ವರ್ಷದ ಆಚರಣೆಗೆ ಕಾಫಿನಾಡಿಗೆ ಬರೋರ ಸ್ವಾತಂತ್ರಕ್ಕೂ ಧಕ್ಕೆಯಾಗದಂತೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ.

  • ಮಲೆನಾಡಿಗೆ ನಕ್ಸಲ್ ಪ್ಯಾಕೇಜ್, ನೀರಾವರಿ ಕ್ರಾಂತಿ, ದೇವಾಲಯಗಳ ಜೀರ್ಣೋದ್ಧಾರ

    ಮಲೆನಾಡಿಗೆ ನಕ್ಸಲ್ ಪ್ಯಾಕೇಜ್, ನೀರಾವರಿ ಕ್ರಾಂತಿ, ದೇವಾಲಯಗಳ ಜೀರ್ಣೋದ್ಧಾರ

    ಚಿಕ್ಕಮಗಳೂರು: ಶರಣಾಗತಿ ನಕ್ಸಲರಿಗೆ ನೀಡುವ ಶರಣಾಗತಿ ಪ್ಯಾಕೇಜ್‍ಗೆ ಪೇಜಾವರ ಶ್ರೀಗಳೇ ಕಾರಣಕರ್ತರು.

    ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರಿನಲ್ಲಿ ದಿಢೀರ್ ಉದ್ಭವವಾದ ರಕ್ತಸಿಕ್ತ ನಕ್ಸಲ್ ಚಳವಳಿ ಕಾರಾವಳಿ-ಮಲೆನಾಡಗರನ್ನು ಬೆಚ್ಚಿ ಬೀಳಿಸಿತ್ತು. ಮಲೆನಾಡಿಗರು ನೆಮ್ಮದಿಯಿಂದ ಓಡಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆಗ ಕರಾವಳಿ-ಮಲೆನಾಡಿನ ಅರಣ್ಯವಾಸಿಗಳ ಆಂತರಿಕ ಹಾಗೂ ಬೌದ್ಧಿಕ ಭಯವನ್ನು ಹೊಗಲಾಡಿಸಲು ಪೇಜಾವರರು ಆಳವಾದ ಅಧ್ಯಯನಕ್ಕೆ ಇಳಿದಿದ್ದರು.

    ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 70 ಗ್ರಾಮ ಪಂಚಾಯಿತಿಯ ಜನರೊಂದಿಗೆ ನಿಂತಿದ್ದರು. ಮಲೆನಾಡಿಗೆ ಮರಣಶಾಸನವಾಗಿದ್ದ ಕುದುರೆಮುಖ ನ್ಯಾಷನಲ್ ಪಾರ್ಕ್ ವಿರುದ್ಧ ಬಡವರ ಬೆನ್ನಿಗಿದ್ದರು. ನಕ್ಸಲ್ ಎನ್‍ಕೌಂಟರ್‍ಗಳಿಂದ ಬೆಚ್ಚಿ ಬಿದ್ದಿದ್ದ ಮಲೆನಾಡಿಗರು ಪ್ರತಿ ದಿನ ಆತಂಕದ ಬದುಕು ಸಾಗಿಸುತ್ತಿದ್ದರು. ಆ ಭಾಗದ ಶಾಂತಿ ಸ್ಥಾಪನೆಗೆ ಪೇಜಾವರ ಶ್ರೀಗಳು ಪಣ ತೊಟ್ಟಿದ್ದರು. ಸ್ವತಃ ಪಾದಯಾತ್ರೆ ಮೂಲಕ ಜನರಲ್ಲಿ ಧೈರ್ಯ ತುಂಬಿದ್ದರು. ಚಿಕ್ಕಮಗಳೂರಿನ ಕೆರೆಕಟ್ಟೆ, ಮುಂಡಗಾರು, ಮೆಣಸಿನ ಹಾಡ್ಯ ಸೇರಿದಂತೆ ನಾಲ್ಕು ಜಿಲ್ಲೆಯ 70 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಜನರಿಗೆ ಧೈರ್ಯ ತುಂಬಲು ನಡೆಸಿದ ಪಾದಯಾತ್ರೆಯಲ್ಲಿ ಶ್ರೀಗಳು ಯಶಸ್ವಿ ಕೂಡ ಆಗಿದ್ದರು.

    ದಿನದಿಂದ ದಿನಕ್ಕೆ ನಕ್ಸಲ್ ಚಟುವಟಿಕೆ ಗರಿಗೆದರಿದಾಗ ಸರ್ಕಾರದ ಮುಂದಿದ್ದದ್ದು ಎರಡೇ ಆಯ್ಕೆ. ಒಂದು ಎನ್‍ಕೌಂಟರ್, ಮತ್ತೊಂದು ಬಂಧಿಸಿ ಜೈಲಿಟ್ಟುವುದು. ಸರ್ಕಾರ ಕೂಡ ನಕ್ಸಲ್ ಸಮಸ್ಯೆ ಹಿಮ್ಮೆಟ್ಟಲು ಮುಂದಾಗಿತ್ತು. ಆಗ ಅವರಿಗೂ ಬದುಕಲು ಅವಕಾಶ ನೀಡಿ ಎಂದು ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರಕ್ಕೆ ಸಲಹೆ ನೀಡಿದ್ದು ಇದೇ ಪೇಜಾವರ ಶ್ರೀಗಳು. ಇವರ ಸಲಹೆಯ ಫಲದಿಂದ ದೇಶದಲ್ಲೇ ಮೊದಲ ಬಾರಿಗೆ ನಕ್ಸಲ್ ಪ್ಯಾಕೇಜ್ ಜಾರಿಗೆ ಬಂತು. ಶರಣಾಗುವ ನಕ್ಸಲರಿಗೆ ಸರ್ಕಾರ ನೀಡುವ ಪ್ಯಾಕೇಜಿಗೆ ಪೇಜಾವರರೇ ಕಾರಣಕರ್ತರಾದರು. ಕರ್ನಾಟಕದ ಬಳಿಕ ತಮಿಳುನಾಡು ಸರ್ಕಾರ ದೇಶದ ಎರಡನೇ ರಾಜ್ಯವಾಗಿ ಈ ಯೋಜನೆಯನ್ನ ಜಾರಿಗೆ ತಂದಿತು.

    ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಮಲೆನಾಡಿನ ಭಾಗದಲ್ಲಿ 28ಕ್ಕೂ ಹೆಚ್ಚು ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಿದ ಕೀರ್ತಿ ಪೇಜಾವರ ಶ್ರೀಗಳಿಗೆ ಸಲ್ಲುತ್ತದೆ. ಎಲ್ಲ ದೇವಾಲಯಗಳು ನಕ್ಸಲ್ ಪ್ರದೇಶದ್ದೆ. ಕೊಪ್ಪ ತಾಲೂಕಿನ ವರ್ಲೆ ಗ್ರಾಮದಲ್ಲಿ ಕುಮಾರಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ದೇವಸ್ಥಾನವನ್ನು ಅಗೆದು ದೇವರ ಮೂರ್ತಿಯನ್ನು ತೆಗೆದಾಗ ಅಲ್ಲಿ ಪೇಜಾವರರಿಗೆ ಸುಮಾರು 400 ವರ್ಷದ ಹಳೆಯ ಚಿನ್ನದ ನಾಣ್ಯ ಸಿಕ್ಕಿತ್ತು.

    ಸರ್ಕಾರ ಮಾಡಬೇಕಾದ ಕೆಲಸವನ್ನು ಪೇಜಾವರರೇ ಮಾಡಿದ್ದರು. ನಾಲ್ಕು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾವಿರಾರು ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಹೆಮ್ಮೆ ಪೇಜಾವರರದ್ದು. ಬಡ ಜನರ ಅಭಿವೃದ್ಧಿ, ಗ್ರಾಮಗಳ ಬೆಳವಣಿಗೆ, ಮಕ್ಕಳ ವಿದ್ಯಾಭ್ಯಾಸ, ಹಳ್ಳಿಗರ ಆರೋಗ್ಯ ಸೇರಿದಂತೆ ನೂರಾರು ಧರ್ಮಕಾರ್ಯ ಮಾಡಿದ್ದಾರೆ. ಇದೀಗ ಅವರ ಸಾವಿನಿಂದಾಗಿ ಮಲೆನಾಡಿಗೂ ಪೇಜಾವರರಿಗೂ ಇದ್ದ ಆತ್ಮೀಯತೆಯ ಕೊಂಡಿ ಕಳಚಿ ಬಿದ್ದಂತಾಗಿದೆ. ಅವರ ಹೆಜ್ಜೆ ಗುರುತುಗಳು ಮಲೆನಾಡಿಗರ ಅದರಲ್ಲೂ ಕುಗ್ರಾಮಗಳ ದಲಿತರ ಮನೆ-ಮನದಲ್ಲಿ ಎಂದೆಂದಿಗೂ ಚಿರಸ್ಥಾಯಿ.

  • ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಹಸ್ತ – ದಲಿತರ ಎದುರೇ ಕೃಷ್ಣನ ಪೂಜೆ

    ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಹಸ್ತ – ದಲಿತರ ಎದುರೇ ಕೃಷ್ಣನ ಪೂಜೆ

    ಚಿಕ್ಕಮಗಳೂರು: ಕೃಷ್ಣನ ಪರಮಭಕ್ತ ಪೇಜಾವರ ಶ್ರೀಗಳು ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಯ ಕನಸು ಕಂಡಿದ್ದರು. ಮಲೆನಾಡಿನ ಕುಗ್ರಾಮಗಲ್ಲಿ ಭೇಟಿ ನೀಡಿ ವಾಸ್ತವ್ಯ ಹೂಡಿದ್ದ ಶ್ರೀಗಳು ಮಲೆನಾಡಿಗೆ ಹಲವು ಕೊಡುಗೆಗಳನ್ನ ನೀಡಿದ್ದಾರೆ.

    ಜಿಲ್ಲೆಯ ಕೊಪ್ಪ ತಾಲೂಕಿನ ದಲಿತರ ಕುಗ್ರಾಮ ಮೆಣಸಿನಹಾಡ್ಯದಲ್ಲಿ ವಾಸ್ತವ್ಯ ಮಾಡಿದ್ದ ಪೇಜಾವರ ಶ್ರೀಗಳು ಬೆಳಗ್ಗೆ ಹಳ್ಳದ ಪಕ್ಕದಲ್ಲೇ ಕೃಷ್ಣನ ಪೂಜೆ ಮಾಡಿದ್ದರು. ಸ್ಥಳಿಯರ ಪ್ರಕಾರ ಋಷಿಮುನಿಗಳು ತಪ್ಪಸ್ಸು ಮಾಡಿದ್ದ ಜಾಗ, ಋಷಿಮುನಿಗಳ ಪರಂಪರೆ, ಸನ್ಯಾಸಿಗಳ ಸಂಸ್ಕೃತಿಯೇ ಕಾಡು ಎಂದು ಹಳ್ಳದಲ್ಲಿ ತಾವು ತಂದಿದ್ದ ಪೂಜಾ ಸಾಮಾಗ್ರಿಗಳನ್ನ ತೊಳೆದು ಅಲ್ಲೇ ಶ್ರೀಗಳು ಪೂಜೆ ಮಾಡಿದ್ದರು. ಕೃಷ್ಣನಿಗೆ ಎಡೆ ಇಡಲು ಅಲ್ಲೇ ಅನ್ನವನ್ನೂ ತಯಾರಿಸಿದ್ದರು. ಅವರ ಪೂಜಾ-ಕೈಂಕರ್ಯ ಎಲ್ಲಾ ಮುಗಿಯೋವರೆಗೂ ಪೂಜೆಯನ್ನ ನೋಡಲು ದಲಿತರಿಗೆ ಅವಕಾಶ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು.

    ಮಲೆನಾಡಿನಲ್ಲಿ ಶ್ರೀಗಳು:
    ಕಾಫಿನಾಡು ಹಾಗೂ ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶಕ್ಕೂ ಪೇಜಾವರ ಶ್ರೀಗಳಿಗೂ ಅವಿನಾಭಾವ ಸಂಬಂಧವಿತ್ತು. ಬಡವರು, ದೀನ-ದಲಿತರು ಹಾಗೂ ಹಿಂದುಳಿದ ವರ್ಗದವರ ಕಷ್ಟಕ್ಕೆ ನೆರವಾಗುತ್ತಿದ್ದ ಪೇಜಾವರ ಶ್ರೀಗಳು, ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿಯ ಕನಸು ಕಂಡು ಸಹಾಯ ಹಸ್ತ ನೀಡಿದ್ದರು.

    ದೂರದಿಂದ ಕುಡಿಯೋ ನೀರನ್ನ ಹೊತ್ತು ತರುತ್ತಿದ್ದ ಹಿಂದುಳಿದ ವರ್ಗದ ಕುಟುಂಬಸ್ಥರಿಗೆ ಪೈಪ್ ಲೈನ್ ಮೂಲಕ ನೀರಿನ ಸೌಲಭ್ಯ ಕಲ್ಪಿಸಿಕೊಳ್ಳಲು ಹಣದ ನೆರವನ್ನು ಶ್ರೀಗಳು ನೀಡಿದ್ದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಗ್ಗತ್ತಲಲ್ಲಿದ್ದ ಕುಟುಂಬಗಳಿಗೆ ಶ್ರೀಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಾಯ ಮಾಡಿದ್ದರು. ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾಭ್ಯಾಸಕ್ಕೂ ಪೇಜಾವರ ಶ್ರೀಗಳು ನೆರವಾಗಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣದ ನೆರವು ನೀಡಿದ್ದರು. ಮಲೆನಾಡಿನ ನಕ್ಸಲ್ ಪೀಡಿತ ಹಾಗೂ ಕುಗ್ರಾಮಗಳ ಅಭಿವೃದ್ಧಿಯ ಕನಸು ಕಂಡಿದ್ದ ಶ್ರೀಗಳು ಮಲೆನಾಡಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

    ಪೇಜಾವರ ಶ್ರೀಗಳ ಅಗಲಿಕೆಗೆ ಪಂಚಪೀಠಗಳ ಜಗದ್ಗುರು ಬಾಳೆಹೊನ್ನೂರಿನ ವೀರ ಸೋಮೇಶ್ವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ. ಪೇಜಾವರ ಶ್ರೀಗಳು, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಷ್ಟ್ರಾಭಿಮಾನದ ಸಂಸ್ಕೃತಿ ಸಂವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರ ಎಲ್ಲಾ ಆಶಯಗಳು ಸಕಾರಗೊಳ್ಳಲಿ ಎಂದು ಸಂತಾಪ ಸೂಚಿಸಿದರು.

  • ಕುವೆಂಪು ಮನೆಗೆ ವಾರ್ಷಿಕ 1.5 ಲಕ್ಷ ಜನ ಭೇಟಿ: ಆದಿಚುಂಚನಗಿರಿ ವಿವಿ ಕುಲಸಚಿವ

    ಕುವೆಂಪು ಮನೆಗೆ ವಾರ್ಷಿಕ 1.5 ಲಕ್ಷ ಜನ ಭೇಟಿ: ಆದಿಚುಂಚನಗಿರಿ ವಿವಿ ಕುಲಸಚಿವ

    ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರು 20ನೇ ಶತಮಾನ ಕಂಡ ಶ್ರೇಷ್ಠ ಕವಿ. ಅವರ ಮನೆಗೆ ವರ್ಷಕ್ಕೆ 1.5 ಲಕ್ಷ ಜನ ಭೇಟಿ ನೀಡುತ್ತಾರೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ್ ಹೇಳಿದ್ದಾರೆ.

    ನಗರದ ಕುವೆಂಪು ಕಲಾ ಮಂದಿರದಲ್ಲಿ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ, ಶಿವಮೊಗ್ಗದ ಸಹ್ಯಾದ್ರಿ ರಂಗತರಂಗ ಹಾಗೂ ಕುವೆಂಪು ನಾಟಕೋತ್ಸವ ಸಮಿತಿ ಹಮ್ಮಿಕೊಂಡಿರುವ 3 ದಿನಗಳ ಕಾಲದ ಕುವೆಂಪು ನಾಟಕೋತ್ಸವಕ್ಕೆ ಡಾ.ಸಿ.ಕೆ.ಸುಬ್ಬರಾಯ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕುವೆಂಪು ವಿಶೇಷವಾದ ಕವಿ, ಕಾದಂಬರಿಕಾರ, ಅವರ ಪಾಂಡಿತ್ಯವನ್ನು ಗಮನಿಸಿದರೆ ಅವರಿಗೆ ಭಗವಂತನ ಪ್ರೇರಣೆಯಾಗಿದೆ ಎಂದನಿಸುತ್ತದೆ. ಎಲ್ಲರೂ ಅವರ ವಿಶ್ವಮಾನವ ಸಂದೇಶವನ್ನು ಮೈಗೂಡಿಸಿಕೊಂಡರೆ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ ಎಂದರು.

    ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಲೇಖಕಿ ರಾಜೇಶ್ವರಿ ತೇಜಸ್ವಿ ಮಾತನಾಡಿ, ಕುವೆಂಪು ಅವರ ಬರವಣಿಗೆಯಲ್ಲಿ ತತ್ವಾದರ್ಶಗಳಿವೆ. ಅವರ ವಿಶ್ವಮಾನವ ಸಂದೇಶ ಜನರ ಹೃದಯಲ್ಲಿ ನಿತ್ಯವೂ ಮಂತ್ರವಾಗಬೇಕು, ಧ್ಯೇಯೋಕ್ತಿಯಾಗಬೇಕು ಎಂದು ಸಲಹೆ ನೀಡಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಕುವೆಂಪು ಅವರ ಮನೆಗೆ ವರ್ಷಕ್ಕೆ 1.5 ಲಕ್ಷ ಜನ ಭೇಟಿ ನೀಡುತ್ತಾರೆ. ಈಗ ಅದು ಸಾಂಸ್ಕೃತಿ ಕೇಂದ್ರವಾಗಿ ಬೆಳೆದಿದೆ ಎಂದು ಹೇಳಿದರು. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಯನ್ನ 5 ಲಕ್ಷ ರೂ. ನಗದಿನೊಂದಿಗೆ ನೀಡುತ್ತಿದ್ದು, ಈ ವರ್ಷ ಪಂಜಾಬ್‍ನ ಇಬ್ಬರು ಕವಿಗಳು ಪಡೆಯಲಿದ್ದಾರೆ. ಬೆಂಗಳೂರಿನ ಬಿಎಂಟಿಸಿ ಸಂಸ್ಥೆ ಪ್ರತಿಷ್ಠಾನಕ್ಕೆ 25 ಲಕ್ಷ ರೂ ನೀಡಿದ್ದು, ಅದರ ಬಡ್ಡಿ ಹಣದಲ್ಲಿ ಕುವೆಂಪು ನಾಟಕೋತ್ಸವ ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು. ಸಮಾರಂಭದ ಬಳಿಕ ಮೈಸೂರಿನ ರಂಗಾಯಣ ಕಲಾವಿದರಿಂದ ಕುವೆಂಪು ವಿರಚಿತ ಶೂದ್ರ ತಪಸ್ವಿ ನಾಟಕ ಪ್ರದರ್ಶನ ಕಂಡಿತು. ಕುವೆಂಪು ನಾಟಕೋತ್ಸವ ಸಮಿತಿಯ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್, ನಾಟಕ ಅಕಾಡಮಿ ಸದಸ್ಯ ನಾಗರಾಜರಾವ್ ಕಲ್ಕಟ್ಟೆ, ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್, ಸಹ್ಯಾದ್ರಿ ರಂಗತರಂಗದ ಗೌರವಾಧ್ಯಕ್ಷ ಕ್ರಾಂತೇಶ ಕದರ ಮಂಡಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಉಪಸ್ಥಿತರಿದ್ದರು.

  • ರಾತ್ರೋರಾತ್ರಿ ಹಾಸ್ಟೆಲ್‍ಗೆ ತೆರಳಿ ಸಾಂಬಾರ್ ಪರೀಕ್ಷಿಸಿದ ಶಾಸಕರು

    ರಾತ್ರೋರಾತ್ರಿ ಹಾಸ್ಟೆಲ್‍ಗೆ ತೆರಳಿ ಸಾಂಬಾರ್ ಪರೀಕ್ಷಿಸಿದ ಶಾಸಕರು

    ಚಿಕ್ಕಮಗಳೂರು: ಶಾಸಕರೊಬ್ಬರು ರಾತ್ರೋರಾತ್ರಿ ಹಾಸ್ಟೆಲ್‍ಗೆ ತೆರಳಿ ಸಾಂಬಾರ್ ಪರೀಕ್ಷೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ.

    ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ರಾತ್ರೋರಾತ್ರಿ ತಾಲೂಕಿನ ಹೆಸ್ಕಲ್ ಗ್ರಾಮದಲ್ಲಿರುವ ಗಿರಿದರ್ಶಿನಿ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತೆರಳಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಪರೀಕ್ಷೆ ಮಾಡಿದ್ದಾರೆ. ಶಾಸಕರು ದಿಢೀರ್ ಭೇಟಿ ನೀಡಿ ಅಡುಗೆ ಮನೆಗೆ ಧಾವಿಸಿ ಸಾಂಬಾರ್ ಕುಡಿದು ಆಹಾರ ಪರೀಕ್ಷೆ ಮಾಡಿದಾಗ ಅಡುಗೆಯವರು ಕಕ್ಕಾಬಿಕ್ಕಿಯಾಗಿದ್ದಾರೆ.

    ಆ ಬಳಿಕ ಆಹಾರ ಸಾಮಾಗ್ರಿಗಳು ಸೇರಿದಂತೆ ಊಟ ಇನ್ನಿತರ ಮೂಲಭೂತ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳ ಜೊತೆ ಮಾಹಿತಿ ಪಡೆದರು. ಈ ವೇಳೆ ಊಟ, ವಸತಿ ಮತ್ತು ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಶಾಸಕರಿಗೆ ದೂರು ನೀಡಿದರು. ಮೊನ್ನೆ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಹಾಸ್ಟೆಲ್ ಗಳ ಅವ್ಯವಸ್ಥೆ ಬಗ್ಗೆ ಚರ್ಚೆ ಆಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಪರಿಶೀಲನೆ ಮಾಡಿದ್ದಾರೆ.

  • ದಕ್ಷಿಣಕಾಶಿ ಸೋಂಪುರದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ

    ದಕ್ಷಿಣಕಾಶಿ ಸೋಂಪುರದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ

    ಚಿಕ್ಕಮಗಳೂರು: ದಕ್ಷಿಣಕಾಶಿ ಎಂದೇ ಪ್ರಸಿದ್ಧಿಯಾಗಿರುವ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಸೋಂಪುರ ಗ್ರಾಮದ ಸೋಮೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ. ರಥಬಲಿ, ಘಟಿಕಾಪೂಜೆ, ಮಂಗಳಾಷ್ಟಕ, ರಥಾರೋಹಣ ಸೇರಿದಂತೆ 12.30ರಿಂದ 1.15ರವರೆಗೆ ಸೋಮೇಶ್ವರ ಸ್ವಾಮಿಯ ರಥೋತ್ಸವ ವಿಜೃಂಬಣೆಯಿಂದ ನಡೆದಿದೆ. ಜಾತ್ರಾ ಮಹೋತ್ಸವದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.

    ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿ ಶಿಲಾಮಯವಾಗಿ ಕಟ್ಟಿರುವ ಪುರಾಣ ಪ್ರಸಿದ್ಧ ತ್ರಿಮೂರ್ತಾತ್ಮಕ ಸೋಮೇಶ್ವರಸ್ವಾಮಿ ದೇಗುಲದಲ್ಲಿ ಸೃಷ್ಟಿ, ಸ್ಥಿತಿ, ಸಂಹಾರಕರ್ತರಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರ ಕೂಡಿ ಉದ್ಭವಿಸಿದ ಜ್ಯೋತಿರ್ಲಿಂಗ ಸ್ವರೂಪದ ಮೂರ್ತಿಯು ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾನೆ. ಈ ದಿವ್ಯ ಲಿಂಗ 10 ಅಂಗುಲ ಎತ್ತರ ಹಾಗೂ 15 ಅಂಗುಲ ಸುತ್ತಳತೆಯಿಂದ ಕೂಡಿದ್ದು ಕೃಷ್ಣವರ್ಣದ್ದಾಗಿದೆ. ಶಿವಲಿಂಗದಲ್ಲಿ ತ್ರಿಮೂರ್ತಿಗಳು ವೃಷಭಾರೂಢವಾಗಿ ಮೂರು ತಲೆ ಹಾಗೂ ನಾಲ್ಕು ಭುಜಗಳನ್ನು ಹೊಂದಿ, ಕೈಯಲ್ಲಿ ಶಂಖ, ಢಮರುಗ, ಜಪಮಾಲೆಗಳನ್ನು ಹಿಡಿದು ಅವಿರ್ಭವಿಸುವಂತಿರುವ ಆಕರ್ಷಕ ಸುಂದರ ಮೂರ್ತಿ ನೋಡುಗರನ್ನು ಆಕರ್ಷಿಸುತ್ತಿದೆ.

    ಈ ದೇವಾಲಯವನ್ನು 12ನೇ ಶತಮಾನದಲ್ಲಿ ಚೋಳರ ನಿರ್ಮಿಸಿದ್ದು ಎಂಬುದನ್ನು ಇಲ್ಲಿನ ಶಾಸನಗಳೇ ಹೇಳುತ್ತವೆ. ಮಾತೃಹತ್ಯಾ ದೋಷದಿಂದ ಚಿಂತಿತನಾಗಿದ್ದ ಪರಶುರಾಮ ಸಕಲ ತೀರ್ಥಗಳಲ್ಲಿ ಮಿಂದು ಇಲ್ಲಿ ಪುಣ್ಯ ಸ್ನಾನ ಮಾಡಿ ತಪಸ್ಸಿನಲ್ಲಿ ಮಗ್ನನಾಗಿದ್ದ. ಹಾಗಾಗಿ, ಈ ಪುರಾಣ ಪುಣ್ಯ ಕ್ಷೇತ್ರವಾದ ಸೋಂಪುರವನ್ನು ಜಮದಗ್ನಿ ಹಾಗೂ ಪರಶುರಾಮ ಮಹರ್ಷಿಗಳ ತಪೋ ಭೂಮಿ ಎಂದು ಇತಿಹಾಸದ ಪುಟ ಸೇರಿದೆ. ಇಲ್ಲಿ ಪಶ್ಚಿಮಾಭಿಮುಖವಾಗಿ ಭದ್ರಾ ನದಿ ಹರಿಯುತ್ತಿದ್ದು, ಸೋಮೇಶ್ವರಸ್ವಾಮಿಯ ದೃಷ್ಠಿಯೂ ನದಿ ಮೇಲೆ ಬೀಳುತ್ತಿದೆ. ಇಲ್ಲಿ ಸ್ನಾನ ಮಾಡಿದರೆ ಜನ್ಮ-ಜನ್ಮಗಳ ಪಾಪವೂ ಕಳೆದು ಹೋಗುತ್ತೆ ಎನ್ನುವುದು ಭಕ್ತರ ನಂಬಿಕೆ. ಪ್ರತಿದಿನ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬಂದು ಇಲ್ಲಿ ಸ್ನಾನ ಮಾಡಿ ತಮ್ಮ ಪಾಪಗಳನ್ನು ಕಳೆದುಕೊಳ್ತಾರೆ. ಜಿಲ್ಲೆಯ ತರೀಕೆರೆ ತಾಲೂಕಿನಿಂದ 15 ಕಿ.ಮೀ. ದೂರವಿದೆ. ಭದ್ರಾ ನದಿ ದಂಡೆಯ ಮೇಲೆ ಐದು ಶಿವನ ದೇವಾಲಯಗಳಿದ್ದು. ಪ್ರತಿಯೊಂದಕ್ಕೂ 18 ಮೈಲಿ ಅಂತರ ಎನ್ನುವುದು ವಿಶೇಷ. ಕಳಸದ ಕಳಸೇಶ್ವರ, ಖಾಂಡ್ಯದ ಮಾರ್ಕಾಂಡೇಶ್ವರ, ಹೆಬ್ಬೆಯ ಭವಾನಿ ಶಂಕರ, ಭದ್ರಾವತಿಯ ಕೂಡ್ಲಿ ಸಮೀಪದ ಸಂಗಮೇಶ್ವರ ಹಾಗೂ ಸೋಂಪುರದ ಸೋಮೇಶ್ವರ. ಈ ಐದು ದೇವಸ್ಥಾನಗಳಲ್ಲಿ ಈ ಸೋಮೇಶ್ವರ ಸ್ವಾಮಿಗೆ ಅಗ್ರ ಸ್ಥಾನ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಏಕೆಂದರೆ ಹಿಂದಿನ ಕಾಲದಲ್ಲಿ ಈ ಕ್ಷೇತ್ರ ನ್ಯಾಯ-ಪಂಚಾಯ್ತಿಗೆ ಹೆಸರಾಗಿತ್ತು.

    ಇಂತಹ ಇತಿಹಾಸ ಪ್ರಸಿದ್ಧ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ 10 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ದೇವಾಲಯದ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡಿದ್ದ ಭಕ್ತರು ಭದ್ರೆಯ ಒಡಲಲ್ಲಿ ಮಿಂದು ಸೋಮೇಶ್ವರ ಸ್ವಾಮಿಯ ತೇರನ್ನ ಎಳೆದು ಸಂಭ್ರಮಿಸಿದರು. ಜಾತ್ರಾ ಮಹೋತ್ಸವದಲ್ಲಿ ಶಾಸಕ ಡಿ.ಎಸ್.ಸುರೇಶ್, ಮಾಜಿ ಜಿಪಂ ಅಧ್ಯಕ್ಷೆ ಚೈತ್ರ ಮಾಲತೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷರು ಅನ್ನಸಂತರ್ಪಣೆಯಲ್ಲಿ ಭಕ್ತರಿಗೆ ಊಟ ಬಡಿಸಿ ದೇವರ ಸೇವೆಗೈದಿದ್ದಾರೆ.

  • ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆ ಮೇಲೆ ದಾಳಿ

    ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆ ಮೇಲೆ ದಾಳಿ

    ಚಿಕ್ಕಮಗಳೂರು: ನಗರದ ಬೇಲೂರು ರಸ್ತೆ ಹಾಗೂ ಕೋಟೆ ಸರ್ಕಲ್ ವ್ಯಾಪ್ತಿಯ ಅಂಗಡಿ-ಮುಂಗಟ್ಟುಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ತನಿಖಾ ದಳ ವಿವಿಧ ಇಲಾಖೆಗಳ ಸಹಯೋಗದಲ್ಲಿ ದಾಳಿ ನಡೆಸಿ ದಂಡ ವಿಧಿಸಿದೆ.

    ಬೇಲೂರು ರಸ್ತೆ ಮತ್ತು ಕೋಟೆ ಸರ್ಕಲ್ ವ್ಯಾಪ್ತಿಯಲ್ಲಿನ ಶಾಲಾ ಆವರಣದ ಸುತ್ತ ಮುತ್ತಲಿನ ಅಂಗಡಿ-ಮುಂಗಟ್ಟುಗಳು, ಪಾನ್ ಶಾಪ್, ಬೇಕರಿ, ಜ್ಯೂಸ್ ಸೆಂಟರ್, ಹೋಟೆಲ್, ಪ್ರಾವಿಜನ್ ಸ್ಟೋರ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಇತರೆ ಚಿಲ್ಲರೆ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟದ 3 ತಿಳುವಳಿಕೆ ನೋಟಿಸ್ ನೀಡಲಾಗಿತ್ತು.

    ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಬರುವುದರ ಜೊತೆ ವ್ಯಸಿನಿಗಳ ಕುಟುಂಬಕ್ಕೂ ಆರ್ಥಿಕ ಹೊರೆ ಹೆಚ್ಚುತ್ತದೆ. ಇದಕ್ಕೆ ಕಡಿವಾಣ ಹಾಕಿ ವ್ಯಸನ ಮುಕ್ತ ಸಮಾಜ ರೂಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಅಪರಾಧವಾಗಿದೆ. ಅಂಗಡಿ ಮುಂಗಟ್ಟಿನ ಮಾಲೀಕರು ಈ ಬಗ್ಗೆ ಕಡ್ಡಾಯವಾಗಿ ನಾಮಫಲಕಗಳನ್ನು ಪ್ರದರ್ಶಿಸಬೇಕು. ಶಾಲಾ-ಕಾಲೇಜುಗಳ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದೆ ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿತ್ತು.

    ಆದರೂ ತಂಬಾಕು ಉತ್ಪನ್ನಗಳನ್ನ ಮಾರಾಟ ಮಾಡಿದ ಹಿನ್ನೆಲೆ 15 ಪ್ರಕರಣಗಳನ್ನು ದಾಖಲಿಸಿಕೊಂಡು ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಆರ್.ದಿನೇಶ್, ಸಾಮಾಜಿಕ ಕಾರ್ಯಕರ್ತ ಎಂ.ರಾಘವೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಎಂ.ಕೆ.ಪತ್ತಾರ್, ತಾಲೂಕು ಆರೋಗ್ಯ ಇಲಾಖೆಯ ಬಿ.ಹೆಚ್.ಇ.ಒ ಬೇಬಿ, ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಕುಮಾರ್, ಸಗನಯ್ಯ ಮತ್ತು ಗೋವರ್ಧನ್ ಪಾಲ್ಗೊಂಡಿದ್ದರು.

  • 5 ತಿಂಗಳ ನಂತರ ಮಿನಿ ಬಸ್ಸುಗಳ ಸಂಚಾರಕ್ಕೆ ಮುಕ್ತವಾಯ್ತು ಚಾರ್ಮಾಡಿ ಘಾಟ್

    5 ತಿಂಗಳ ನಂತರ ಮಿನಿ ಬಸ್ಸುಗಳ ಸಂಚಾರಕ್ಕೆ ಮುಕ್ತವಾಯ್ತು ಚಾರ್ಮಾಡಿ ಘಾಟ್

    ಚಿಕ್ಕಮಗಳೂರು: ಐದು ತಿಂಗಳ ಬಳಿಕ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಸಂಚಾರಕ್ಕೆ ಮುಕ್ತವಾಗಿದೆ.

    ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಭಾರೀ ಮಳೆಯಿಂದಾಗ ಚಿಕ್ಕಮಗಳೂರಿನ ಕೊಟ್ಟಿಗೆಹಾರದಿಂದ ಮಂಗಳೂರಿನ ಬೆಳ್ತಂಗಡಿಗೆ ಸಂಪರ್ಕ ಕಲ್ಪಿಸುವ 20 ಕಿ.ಮೀ. ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಜಾಗದಲ್ಲಿ ಕುಸಿದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಎರಡು ತಿಂಗಳ ಬಳಿಕ ಜಿಲ್ಲಾಡಳಿತ ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಕಾರು, ಬೈಕು, ಆಂಬುಲೆನ್ಸ್ ಸೇರಿದಂತೆ ಸಣ್ಣ-ಸಣ್ಣ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು. ಸರ್ಕಾರಿ ಬಸ್‍ಗಳಿಗೂ ಅವಕಾಶವಿರಲಿಲ್ಲ.

    ರಾತ್ರಿ ವೇಳೆಯಲ್ಲಿ ಆಂಬುಲೆನ್ಸ್ ಹೊರತುಪಡಿಸಿ ಯಾವುದೇ ವಾಹನಗಳಿಗೆ ಅವಕಾಶವಿರಲಿಲ್ಲ. ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ರು. ಸರ್ಕಾರಿ ಬಸ್‍ಗಳಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು. ಆದರೆ ಜಿಲ್ಲಾಡಳಿತ ಪ್ರವಾಸಿಗರು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ದೊಡ್ಡ-ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗಬೇಕಾದವರು ಸಕಲೇಶಪುರ ಮಾರ್ಗವಾಗಿ 60-70 ಕಿ.ಮೀ. ಸುತ್ತಿಬಳಸಿ ಮಂಗಳೂರು ತಲುಪಬೇಕಾಗಿತ್ತು.

    ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಇದೀಗ ಪ್ರಯಾಣಿಕರ ಸಮಸ್ಯೆಯನ್ನ ಅರಿತ ಜಿಲ್ಲಾಡಳಿತ ಮಳೆ ಸಂಪೂರ್ಣ ಕ್ಷೀಣಿಸಿರೊದ್ರಿಂದ ಚಾರ್ಮಾಡಿಯಲ್ಲಿ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಹಗಲಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು, ಕೆ.ಎಸ್.ಆರ್.ಟಿ.ಸಿಯ ಮಿನಿ ಬಸ್ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಚಾರ್ಮಾಡಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಪ್ರಯಾಣಿಕರು ಹಾಗೂ ಪ್ರವಾಸಿಗರಿಗೆ ಆದ ಸಂತೋಷಕ್ಕಿಂತ ಹೆಚ್ಚಿನ ಸಂತೋಷ ಕೊಟ್ಟಿಗೆಹಾರದ ಅಂಗಡಿ-ಮುಂಗಟ್ಟುಗಳ ಸಣ್ಣ-ಸಣ್ಣ ವ್ಯಾಪಾರಸ್ಥರಿಗೆ ಆಗಿದೆ.

    ಕಳೆದ ತಿಂಗಳು ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್  24 ಗಂಟೆಯೂ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನಗಳಿಗೆ ಸಂಚರಿಸಲು ಅನುಮತಿ ನೀಡಿದ್ದರು.  ಕಾರುಗಳು, ಜೀಪು, ಟೆಂಪೋ, ವ್ಯಾನ್, ಎಲ್‍ಸಿವಿ(ಮಿನಿ ವ್ಯಾನ್), ಅಂಬುಲೆನ್ಸ್, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಬುಲೆಟ್ ಟಾಂಕರ್ಸ್, ಷಿಪ್ ಕಾರ್ಗೋ ಕಾಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಸಾರ್ವಜನಿಕರು ಸಂಚರಿಸುವ ಎಲ್ಲ ಸರ್ಕಾರಿ, ಖಾಸಗಿ ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿತ್ತು.

  • ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಚಿಕ್ಕಮಗಳೂರು: ಈ ಶತಮಾನದ ಕೊನೆಯ ಸೂರ್ಯ ಗ್ರಹಣದಂದು ಯಾವುದೇ ಹೆದರಿಕೆ, ಅಂಜಿಕೆ ಇಲ್ಲದೆ ಗ್ರಹಣದ ಸಮಯದಲ್ಲಿ ಸ್ಮಶಾನದಲ್ಲಿ ಊಟ ಮಾಡಿದ್ದಾರೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಗಾಳಿಹಳ್ಳಿ ನಿವಾಸಿಗಳಾದ ಮೋಹನ್ ಹಾಗೂ ಪರಶುರಾಮ ಎಂಬವರು ಸ್ಮಶಾನದಲ್ಲಿ ಸಮಾಧಿಯೊಂದರ ಮೇಲೆ ಕೂತು ತಿಂಡಿ ತಿಂದಿದ್ದಾರೆ. ಅಷ್ಟೇ ಅಲ್ಲದೆ ಗ್ರಹಣ ಆರಂಭವಾದಾಗಿನಿಂದ ಸ್ಮಶಾನದಲ್ಲೇ ಇದ್ದು, ಸ್ಮಶಾನವನ್ನು ಶುಚಿ ಮಾಡಿದ್ದಾರೆ.

    ಮೋಹನ್ ಹಾಗೂ ಪರಶುರಾಮ ಸ್ಮಶಾನದಲ್ಲಿ ಅಲ್ಲಲ್ಲೇ ಬಿದ್ದಿದ್ದ ಪೇಪರ್, ಪ್ಲಾಸ್ಟಿಕ್, ಕಸ-ಕಡ್ಡಿಯನ್ನೆಲ್ಲಾ ಒಂದೆಡೆ ಹಾಕಿ ಬೆಂಕಿ ಹಾಕಿದ್ದಾರೆ. ಗ್ರಹಣ ಮುಗಿಯೋವರೆಗೂ ಸ್ಮಶಾನದಲ್ಲೇ ಇದ್ದು 12 ಗಂಟೆ ನಂತರ ಮನೆಗೆ ಹಿಂದಿರುಗಿದ್ದಾರೆ.

    ಸ್ಮಶಾನ, ಅಮವಾಸ್ಯೆ, ಗ್ರಹಣ ಇವ್ಯಾವು ನರಮಾನವನಷ್ಟು ಕ್ರೂರಿ ಅಲ್ಲ ಎನ್ನುವುದು ಈ ಯುವಕರ ನಂಬಿಕೆಯಾಗಿದೆ. ಇವುಗಳಿಗೆ ಮನುಷ್ಯನಲ್ಲಿರುವಷ್ಟು ಕೆಟ್ಟ ಯೋಚನೆ, ಆಲೋಚನೆ ಹಾಗೂ ಚಿಂತನೆಗಳಿಲ್ಲ ಎಂಬುದು ಇವರ ಧೃಡ ನಂಬಿಕೆಯಾಗಿದೆ. ಒಳ್ಳೆಯದ್ದನ್ನ ಯೋಚಿಸುವವರಿಗೆ ಒಳ್ಳೆಯದ್ದೆ ಆಗಲಿದ್ದು, ಕೆಟ್ಟ ಯೋಚನೆ ಇರುವವರಿಗೆ ಆಗುವುದೆಲ್ಲಾ ಕೆಟ್ಟದ್ದೇ ಎಂದು ಹೇಳಿದ್ದಾರೆ.

    ಅಲ್ಲದೆ ಮಾಡುವ ಕೆಲಸ, ಆಡುವ ಮಾತು, ನೋಡುವ ನೋಟ ಚೆನ್ನಾಗಿದ್ದರೆ ಆಗುವುದೆಲ್ಲಾ ಒಳ್ಳೆಯದ್ದೆ. ಗ್ರಹಣ, ಅಮವಾಸ್ಯೆ, ಹುಣ್ಣಿಮೆ ಇದ್ಯಾವುದು ಕೆಟ್ಟದ್ದು ಮಾಡುವುದಿಲ್ಲ ಎಂದು ಮೋಹನ್ ಹಾಗೂ ಪರಶುರಾಮ ನಂಬಿದ್ದಾರೆ.