Tag: Chikkamagaluru

  • ಮಂಚದ ಕೆಳಗಿತ್ತು 10 ಅಡಿ ಉದ್ದದ ಕಾಳಿಂಗ ಸರ್ಪ

    ಮಂಚದ ಕೆಳಗಿತ್ತು 10 ಅಡಿ ಉದ್ದದ ಕಾಳಿಂಗ ಸರ್ಪ

    ಚಿಕ್ಕಮಗಳೂರು: ಆಹಾರ ಅರಸಿ ಬಂದ 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮನೆಯೊಳಗೆ ಬಂದು ಮಂಚದ ಕೆಳಗೆ ಆಶ್ರಯ ಪಡೆದುಕೊಂಡಿದ್ದ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ಮೂಡಿಗೆರೆ ತಾಲೂಕಿನ ಸತ್ತಿಗನಹಳ್ಳಿಯ ಲಕ್ಷ್ಮಣ ಗೌಡ ಎಂಬವರ ಮನೆಯಲ್ಲಿ ಮಂಚದ ಅಡಿ ಕಾಳಿಂಗ ಸರ್ಪ ಅವಿತು ಕುಳಿತಿತ್ತು. ಕುಟುಂಬಸ್ಥರು ಮನೆಯ ಕಸ ಗುಡಿಸಲು ಮುಂದಾದಾಗ ಮಂಚದ ಕೆಳಗಿದ್ದ ಕಾಳಿಂಗನನ್ನ ಕಂಡು ಗಾಬರಿಗೊಂಡು, ಎಲ್ಲರೂ ಓಡಿ ಮನೆಯಿಂದ  ಹೊರ ಬಂದಿದ್ದರು. ಮನೆ ಮಾಲೀಕ ಲಕ್ಷ್ಮಣ ಗೌಡ ಅವರು ಕಾಳಿಂಗ ಸರ್ಪವನ್ನು ಕಂಡು ಉರಜ ತಜ್ಞ ಮಹ್ಮದ್ ಅವರಿಗೆ ಕರೆ ಮಾಡಿದರು. ಇದನ್ನೂ ಓದಿ: ಮೇಲೆ ಬರಲಾಗದೆ ಇಡೀ ರಾತ್ರಿ ಬಾವಿಯಲ್ಲೇ ಈಜಿದ ಹಾವು

    ತಕ್ಷಣವೇ ಸ್ಥಳಕ್ಕೆ ಬಂದ ಮಹ್ಮದ್ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಕಾರ್ಯಚರಣೆ ನಡೆಸಿ ಹಾವನ್ನು ಸೆರೆ ಹಿಡಿದಿದ್ದಾರೆ. ಮಂಚದ ಕೆಳಗಿದ್ದ ಸರ್ಪವನ್ನು ಬೆದರಿಸಿದಾಗ ಅದು ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗುತ್ತಾ ಸುಮಾರು ಒಂದು ಗಂಟೆಗಳ ಕಾಲ ಆಟವಾಡಿಸಿದೆ. ಬಳಿಕ ಮಹ್ಮದ್ ವರು ಅರಣ್ಯ ಅಧಿಕಾರಿಗಳ ಸಹಕಾರದೊಂದಿಗೆ ಕಾಳಿಂಗ ಸರ್ಪನನ್ನು ಸೆರೆ ಹಿಡಿದು ಅಧಿಕಾರಿಗಳೊಂದಿಗೆ ಹೋಗಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾಳಿಂಗನನ್ನ ಸೆರೆ ಹಿಡಿದು ಹೊರತಂದಾಗ ಮನೆಯವರು ಸರ್ಪವನ್ನ ನೋಡಿ ಲಕ್ಷ್ಮಣ ಗೌಡ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದರು.

  • ಮೇಲೆ ಬರಲಾಗದೆ ಇಡೀ ರಾತ್ರಿ ಬಾವಿಯಲ್ಲೇ ಈಜಿದ ಹಾವು

    ಮೇಲೆ ಬರಲಾಗದೆ ಇಡೀ ರಾತ್ರಿ ಬಾವಿಯಲ್ಲೇ ಈಜಿದ ಹಾವು

    ಚಿಕ್ಕಮಗಳೂರು: ಬಾವಿಯೊಳಗೆ ಬಿದ್ದ ಹಾವೊಂದು ಇಡೀ ರಾತ್ರಿ ನೀರಿನಲ್ಲಿ ಈಜಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಚಕಮಕಿ ಗ್ರಾಮದ ಕೃಷ್ಣ ಭಟ್ ಎಂಬವರು ಮನೆ ಹಿಂದೆ ಇದ್ದ ಬಾವಿಯಲ್ಲಿ ಶುಕ್ರವಾರ ಸಂಜೆ ಏನೂ ಇರಲಿಲ್ಲ. ಆದರೆ ಶನಿವಾರ ಬೆಳಗ್ಗೆ ಹೋಗಿ ನೋಡಿದಾಗ ಹಾವೊಂದು ಈಜುತ್ತಾ ಮೇಲೆ ಬರಲು ಯತ್ನಿಸುತ್ತಿತ್ತು. ಬಾವಿಗೆ ಸುತ್ತಲೂ ಸಿಮೆಂಟ್‍ನಿಂದ ಪ್ಲಾಸ್ಟರ್ ಮಾಡಿರುವುದರಿಂದ ಹಾವು ತೆವಳಲಾಗದೆ ನೀರಿನಲ್ಲಿ ಈಜುತ್ತಿತ್ತು. ಕೂಡಲೇ ಕೃಷ್ಣ ಭಟ್ ಅವರು ಹಾವನ್ನು ಕೋಲಿನಿಂದ ಮೇಲೆ ಎತ್ತಲು ಪ್ರಯತ್ನಿಸಿದ್ದಾರೆ.

    ಹಾವು ಎಡೆ ಬಿಟ್ಟುಕೊಂಡು ಜೋರಾಗಿ ಉಸಿರು ಬಿಡುತ್ತಿದ್ದರಿಂದ ಕೃಷ್ಣ ಭಟ್ ಅವರಿಗೆ ಧೈರ್ಯ ಸಾಕಾಗಿಲ್ಲ. ಕೂಡಲೇ ಉರಗ ತಜ್ಞ ಆರೀಫ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಆರೀಫ್ ಐದೇ ನಿಮಿಷಕ್ಕೆ ಬಾವಿಯಲ್ಲಿ ಈಜುತ್ತಿದ್ದ ಹಾವನ್ನ ಮೇಲೆ ಎತ್ತಿದರು. ಸುಸ್ತಾಗಿ ಜೋರಾಗಿ ಉಸಿರು ಬಿಡುತ್ತಿದ್ದ ಹಾವನ್ನು ಸ್ವಲ್ಪ ಹೊತ್ತು ನೆಲದ ಮೇಲೆ ಬಿಟ್ಟರು. ತದನಂತರ ಹಾವನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಇಡೀ ರಾತ್ರಿ ನೀರಿನಲ್ಲಿ ಈಜಿರುವ ಹಾವನ್ನ ಕಂಡು ಕೆಲವರು ಮರುಕ ವ್ಯಕ್ತಪಡಿಸಿದರು.

  • ಕಾಫಿನಾಡ ವಿವಾದಿತ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್

    ಕಾಫಿನಾಡ ವಿವಾದಿತ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್

    ಚಿಕ್ಕಮಗಳೂರು: ಕಾಫಿನಾಡಿನ ಶೃಂಗೇರಿಯಲ್ಲಿ ವಾದ-ವಿವಾದ, ಆರೋಪ-ಪ್ರತ್ಯಾರೋಪಗಳ ಮಧ್ಯೆ ನಡೆಯುತ್ತಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್ ಬಿದ್ದಿದ್ದು, ಎರಡನೇ ದಿನದ ಕಾರ್ಯಕ್ರಮವನ್ನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮುಂದೂಡಿದೆ. ಪೊಲೀಸರ ಅನುಮತಿ ಇಲ್ಲದ ಕಾರಣ ಕಾರ್ಯಕ್ರಮವನ್ನ ಮುಂದೂಡಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ.

    ಸಮ್ಮೇಳನ ಅಧ್ಯಕ್ಷರ ವಿರುದ್ಧ ತೀವ್ರವಾದ ವಿರೋಧದ ಮಧ್ಯೆಯೂ ಶುಕ್ರವಾರ ಸಮ್ಮೇಳನ ಆರಂಭಗೊಂಡಿತ್ತು. ಮೆರವಣಿಗೆಗೆ ಪೊಲೀಸರ ಅನುಮತಿ ನೀಡದ ಕಾರಣ ಅಧ್ಯಕ್ಷರ ಮೆರವಣಿಗೆ ಇಲ್ಲದೆ ನೇರವಾಗಿ ವೇದಿಕೆ ಕಾರ್ಯಕ್ರಮದ ಮೂಲಕ ಸಮ್ಮೇಳನ ಆರಂಭವಾಗಿತ್ತು. ಆದರೆ ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಡೆ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ, ನಕ್ಸಲ್ ವಿರೋಧಿ ಹೋರಾಟ ಸಮಿತಿ ಮತ್ತು ಶ್ರೀರಾಮಸೇನೆ ಸೇರಿದಂತೆ ಕೆಲವರು ಅಧ್ಯಕ್ಷರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದರು.

    ಕಳೆದೊಂದು ತಿಂಗಳಿಂದಲೂ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದ ಸಂಘಟನೆಗಳು ಕೂಡ ಸಮ್ಮೇಳನದ ಮುಂಭಾಗ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅನುಮತಿ ಇಲ್ಲದ ಕಾರಣ ಮಧ್ಯಾಹ್ನದ ಕಾರ್ಯಕ್ರಮವನ್ನ ಮೊಟಕುಗೊಳಿಸುವಂತೆ ಪೊಲೀಸರು ಸಾಹಿತ್ಯ ಪರಿಷತ್‍ಗೆ ಸೂಚಿಸಿದರು. ಆದರೆ ಕಸಾಪ ಕಾರ್ಯಕ್ರಮ ನಿಲ್ಲಿಸಲು ಮೀನಾಮೇಶ ಎಣಿಸಿತ್ತು.

    ಅಷ್ಟೇ ಅಲ್ಲದೇ ಕಸಾಪ ಅನುಮತಿ ಇಲ್ಲದೆ ಧ್ವನಿವರ್ಧಕ ಬಳಸಿತ್ತು. ನಾಳಿನ ಕಾರ್ಯಕ್ರಮಕ್ಕೂ ಪೊಲೀಸರು ಅನುಮತಿ ನೀಡದ ಹಿನ್ನೆಲೆ ಕಸಾಪ ಇಂದು ಸಮ್ಮೇಳನದ ಎರಡನೇ ದಿನ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನ ಮುಂದೂಡಿದೆ. ಮುಂದಿನ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ.

  • ಕಾಫಿನಾಡ ವಿವಾದಿತ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್

    ಕಾಫಿನಾಡ ವಿವಾದಿತ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್

    ಚಿಕ್ಕಮಗಳೂರು: ಕಾಫಿನಾಡಿನ ಶೃಂಗೇರಿಯಲ್ಲಿ ವಾದ-ವಿವಾದ, ಆರೋಪ-ಪ್ರತ್ಯಾರೋಪಗಳ ಮಧ್ಯೆ ನಡೆಯುತ್ತಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್ ಬಿದ್ದಿದ್ದು, ಎರಡನೇ ದಿನದ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮುಂದೂಡಿದೆ.

    ಪೊಲೀಸರ ಅನುಮತಿ ಇಲ್ಲದ ಕಾರಣ ಕಾರ್ಯಕ್ರಮವನ್ನು ಮುಂದೂಡಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ. ಸಮ್ಮೇಳನ ಅಧ್ಯಕ್ಷರ ವಿರುದ್ಧ ತೀವ್ರವಾದ ವಿರೋಧದ ಮಧ್ಯೆಯೂ ಶುಕ್ರವಾರ ಸಮ್ಮೇಳನ ಆರಂಭಗೊಂಡಿತ್ತು. ಮೆರವಣಿಗೆಗೆ ಪೊಲೀಸರ ಅನುಮತಿ ನೀಡದ ಕಾರಣ ಅಧ್ಯಕ್ಷರ ಮೆರವಣಿಗೆ ಇಲ್ಲದೆ ನೇರವಾಗಿ ವೇದಿಕೆ ಕಾರ್ಯಕ್ರಮದ ಮೂಲಕ ಸಮ್ಮೇಳನ ಆರಂಭವಾಗಿತ್ತು. ಆದರೆ ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಡೆ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ, ನಕ್ಸಲ್ ವಿರೋಧಿ ಹೋರಾಟ ಸಮಿತಿ, ಶ್ರೀರಾಮಸೇನೆ ಸೇರಿದಂತೆ ಕೆಲವರು ಅಧ್ಯಕ್ಷರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದರು.

    ಕಳೆದೊಂದು ತಿಂಗಳಿಂದಲೂ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದ ಸಂಘಟನೆಗಳು ಶುಕ್ರವಾರ ಕೂಡ ಸಮ್ಮೇಳನದ ಮುಂಭಾಗ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅನುಮತಿ ಇಲ್ಲದ ಕಾರಣ ಮಧ್ಯಾಹ್ನದ ಕಾರ್ಯಕ್ರಮವನ್ನು ಮೊಟಕುಗೊಳಿಸುವಂತೆ ಪೊಲೀಸರು ಸಾಹಿತ್ಯ ಪರಿಷತ್‍ಗೆ ಸೂಚಿಸಿದರು. ಆದರೆ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ನಿಲ್ಲಿಸಲು ಮೀನಾಮೇಶ ಎಣಿಸಿತ್ತು. ಅಷ್ಟೇ ಅಲ್ಲದೆ ಕಸಾಪ ಅನುಮತಿ ಇಲ್ಲದೆ ಧ್ವನಿವರ್ಧಕ ಬಳಸಿತ್ತು.

    ಶುಕ್ರವಾರ ಕಾರ್ಯಕ್ರಮಕ್ಕೂ ಪೊಲೀಸರು ಅನುಮತಿ ನೀಡದ ಹಿನ್ನೆಲೆ ಕಸಾಪ ಜನವರಿ 11ರಂದು ಸಮ್ಮೇಳನದ ಎರಡನೇ ದಿನ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಿದೆ. ಮುಂದಿನ ದಿನಾಂಕವನ್ನು ನಿರ್ಧರವಾಗಿಲ್ಲ. ಸರ್ಕಾರದ ವಿರುದ್ಧ ಕಾರ್ಯಕ್ರಮ ಮಾಡಿ ಕಸಾಪ ಗೆದ್ದಿದೆ. ಸರ್ಕಾರದ ಸಹಕಾರವಿಲ್ಲದ ಕಾರಣ ಕಾರ್ಯಕ್ರಮ ನಿಲ್ಲಿಸಿ ಸರ್ಕಾರವೂ ಗೆದ್ದಿದೆ. ಅಧ್ಯಕ್ಷರ ವಿರುದ್ಧ ಶೃಂಗೇರಿ ಬಂದ್ ಮಾಡಿ ಸಂಘಟನೆಗಳು ಗೆದ್ದವು. ಆದರೆ ಸರ್ಕಾರ ಹಾಗೂ ಕಸಾಪ ಮಧ್ಯೆ ಹೈರಾಣಾಗಿದ್ದು ಮಾತ್ರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಂಬ ಮಾತುಗಳು ಕೇಳಿ ಬಂದಿವೆ.

  • ಪೇಜಾವರರ ಜೊತೆಯೇ ಚಿರನಿದ್ರೆಗೆ ಜಾರಿದ ದೈವದ ಮರ

    ಪೇಜಾವರರ ಜೊತೆಯೇ ಚಿರನಿದ್ರೆಗೆ ಜಾರಿದ ದೈವದ ಮರ

    ಚಿಕ್ಕಮಗಳೂರು: ಕೃಷ್ಣನ ಪರಮ ಭಕ್ತ ಪೇಜಾವರ ಶ್ರೀಗಳು ಸಾವನ್ನಪ್ಪುತ್ತಿದ್ದಂತೆಯೇ 300 ವರ್ಷಗಳ ಇತಿಹಾಸವಿರುವ ದೈವದ ಬನ್ನಿ ಮರವೂ ಧರೆಗುರುಳಿದೆ.

    ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪಕ್ಕದಲ್ಲಿದ್ದ ಈ ಮರಕ್ಕೆ ಸ್ಥಳಿಯರು ದೈವದ ಮರ ಎಂದೇ ಹೇಳುತ್ತಿದ್ದರು. ಆದರೆ ಡಿಸೆಂಬರ್ 29ರ ಭಾನುವಾರ ಬೆಳಗ್ಗೆ ಪೇಜಾವರರು ಮರಣ ಹೊಂದುತ್ತಿದ್ದಂತೆ ಈ ಮರ ಕೂಡ ತಾನಾಗಿಯೇ ಧರೆಗುರುಳಿದೆ.

    ಈ ಮರಕ್ಕೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಹಾಗೂ ಸ್ಥಳಿಯರಿಂದ ದಿನಂಪ್ರತಿ ಪೂಜೆ ನಡೆಯುತ್ತಿತ್ತು. ದಾರಿಹೋಕರು ಓಡಾಡುವಾಗ ಕೈಮುಗಿದು ನಮಸ್ಕರಿಸುತ್ತಿದ್ದರು. ವಿಜಯ ದಶಮಿಯಂದು ಸುತ್ತಮುತ್ತಲಿನ ಗ್ರಾಮಸ್ಥರು ಇದೇ ಮರದ ಬಳಿ ಅಂಬನ್ನು ಹೊಡೆಯುತ್ತಿದ್ದರು. ಇದೀಗ ಪೇಜಾವರರು ಚಿರನಿದ್ರೆಗೆ ಜಾರುತ್ತಿದ್ದಂತೆ ಈ ಮರ ಕೂಡ ಉರುಳಿ ಬಿದ್ದಿದೆ.

    ಇದು ಕಾಕತಾಳಿಯವೋ ಅಥವಾ ದೈವದ ಶಕ್ತಿಯೋ ಗೊತ್ತಿಲ್ಲ. ಆದರೆ ಸ್ಥಳಿಯರು ಕೃಷ್ಣನ ಪರಮ ಭಕ್ತ ಪೇಜಾವರರು ಸಾವನ್ನಪ್ಪುತ್ತಿದ್ದಂತೆ ಈ ಮರ ಕೂಡ ಅವರೊಂದಿಗೆ ಸ್ವರ್ಗಕ್ಕೆ ಹೋಗಿದೆ ಎಂದೇ ಭಾವಿಸಿದ್ದಾರೆ.

  • ವಿವಾದದ ಮಧ್ಯೆ ಕಾಫಿನಾಡ ಸಾಹಿತ್ಯ ಸಮ್ಮೇಳನ

    ವಿವಾದದ ಮಧ್ಯೆ ಕಾಫಿನಾಡ ಸಾಹಿತ್ಯ ಸಮ್ಮೇಳನ

    ಚಿಕ್ಕಮಗಳೂರು: ಕನ್ನಡದ ಮನಸ್ಸುಗಳೆಲ್ಲಾ ಸೇರಿ ಒಟ್ಟಾಗಿ ಆಚರಿಸಬೇಕಾದ ಹಬ್ಬ ಸಾಹಿತ್ಯ ಸಮ್ಮೇಳನ. ಜನವರಿ 10ರ ಶುಕ್ರವಾರದಂದು ನಡೆಯಲಿರುವ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರೂ ಭಾಗವಹಿಸಿ, ವಿರೋಧಿಸಿದವರು ಮತ್ತೊಮ್ಮೆ ಆತ್ಮವಲೋಕನ ಮಾಡಿಕೊಳ್ಳಲಿ ಎಂದು ಸಮ್ಮೇಳನದ ದಿನಾಂಕದವರೆಗೂ ಉಪವಾಸ ಮಾಡಲು ನಿರ್ಧರಿಸಿರುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಕುಂದೂರು ಅಶೋಕ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಭಾಗವಹಿಸುವಂತೆ ಸಚಿವ ಸಿ.ಟಿ ರವಿ ಅವರನ್ನ ಆಮಂತ್ರಿಸಲು ಹೋದಾಗ ಅವರು, ಸಮ್ಮೇಳನಕ್ಕೆ ನಮ್ಮ ಸಹಕಾರವೂ ಇಲ್ಲ, ವಿರೋಧವೂ ಇಲ್ಲ. ನಿಮ್ಮದೊಂದು ಸ್ವಾಯತ್ತ ಸಂಸ್ಥೆ ನೀವೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದರು. ಸರ್ಕಾರದ ಅನುದಾನಕ್ಕೆ ರಾಜ್ಯ ಸಾಹಿತ್ಯ ಪರಿಷತ್‍ನ ಅಧ್ಯಕ್ಷರು, ಉಸ್ತುವಾರಿ ಸಚಿವರ ಪತ್ರ ಕೇಳಿದರು. ಶಿಫಾರಸು ಪತ್ರ ನೀಡಲು ಸಚಿವರು ನಿರಾಶಕ್ತಿ ತೋರಿದ್ದು, ಅನುದಾನ ನೀಡುವುದಿಲ್ಲ ಎಂದು ಮೌಖಿಕವಾಗಿ ಹೇಳಿದ್ದಾರೆ ಎಂದರು.

    ದೇಣಿಗೆ ರೂಪದಲ್ಲಿ ಹಣ ಸಂಗ್ರಹ:
    ಸಮ್ಮೇಳನಕ್ಕೆ ಸರ್ಕಾರ ನೀಡುವ ಅನುದಾನದ ಬಗ್ಗೆ ಅನುಮಾನವಿದ್ದ ಕಾರಣ ಸಮ್ಮೇಳನದ ಸ್ವಾಗತ ಹಾಗೂ ಉಪ ಸಮಿತಿಗಳು ಈಗಾಗಲೇ 2 ಲಕ್ಷ ರೂಪಾಯಿಗಳನ್ನ ಸಂಗ್ರಹಿಸಿವೆ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಗತ ಸಮಿತಿಯ ಖಾತೆ ಸಂಖ್ಯೆಯನ್ನ ಹಾಕಿರುವುದರಿಂದ ರಾಜ್ಯದ ಮೂಲೆ ಮೂಲೆಗಳಿಂದ ಸಾಹಿತ್ಯಾಸಕ್ತರು ದೇಣಿಗೆ ರೂಪದಲ್ಲಿ ಹಣವನ್ನ ಖಾತೆಗೆ ವರ್ಗಾಯಿಸುತ್ತಿದ್ದಾರೆ ಹಣದ ಕೊರತೆ ಕಾಡಿಸುವುದಿಲ್ಲ ಎಂದರು.

    ಸಮ್ಮೇಳನಕ್ಕೆ ಸಂಘಟನೆಗಳಿಂದ ವಿರೋಧವಿದ್ದು, ಎಸ್‍ಪಿಗೆ ರಕ್ಷಣೆ ನೀಡುವಂತೆ ಮನವಿ ಮಾಡಲು ಹೋದಾಗ ಅವರು ರಾಷ್ಟ್ರೀಯ ರಕ್ಷಣೆ ಉದ್ದೇಶಕ್ಕೆ ರಕ್ಷಣೆ ನೀಡಲಾಗುವುದಿಲ್ಲ ಎಂದರು. ಹಾಗಾಗಿ ಐಜಿಪಿ, ಡಿಜಿ ಹಾಗೂ ಎಸ್‍ಪಿಗೆ ನೋಂದಾಯಿತ ಅಂಚೆ ಮೂಲಕ ಮನವಿ ಪತ್ರ ರವಾನಿಸಲಾಗಿದೆ ಎಂದು ಕುಂದೂರು ಅಶೋಕ್ ಹೇಳಿದರು.

    ವಿರೋಧ ಏಕೆ:
    ಶೃಂಗೇರಿಯಲ್ಲಿ ಜನವರಿ 10ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಮೂಲತಃ ಶೃಂಗೇರಿಯವರಾದ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನ ಸಾಹಿತ್ಯ ಪರಿಷತ್ ಆಯ್ಕೆ ಮಾಡಿತ್ತು. ಆದರೆ ಅವರು ನಕ್ಸಲ್ ಬೆಂಬಲಿಗರೆಂಬ ಆರೋಪದ ಜೊತೆ ಅವರ ಮೇಲೆ ಈ ಹಿಂದೆ ಪ್ರಕರಣಗಳು ಕೂಡ ದಾಖಲಾಗಿದ್ದವು ಎಂದು ವಿವಿಧ ಸಂಘಟನೆಗಳು ಆರೋಪಿಸಿವೆ. ಹಾಗಾಗಿ ಸಮ್ಮೇಳನದ ಅಧ್ಯಕ್ಷರನ್ನು ಬದಲಿಸುವಂತೆ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಹಾಗೂ ನಕ್ಸಲ್ ವಿರೋಧಿ ಹೋರಾಟ ಸಮಿತಿ ಸಾಹಿತ್ಯ ಪರಿಷತ್‍ಗೆ ಆಗ್ರಹಿಸಿತ್ತು. ಈ ಕುರಿತು ಶೃಂಗೇರಿಯಲ್ಲಿ ಪ್ರತಿಭಟನೆ ಕೂಡ ನಡೆಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಅಧ್ಯಕ್ಷರ ಪರ-ವಿರೋಧ ಅಭಿಯಾನ ಕೂಡ ಆರಂಭವಾಗಿದೆ. ಇದೀಗ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿರುವುದರಿಂದ ಜನವರಿ 10ರಂದು ಶೃಂಗೇರಿ ಬಂದ್‍ಗೂ ಕರೆ ನೀಡಿದ್ದಾರೆ.

    ಅಧ್ಯಕ್ಷರ ವಿರುದ್ಧ ಸಿ.ಟಿ.ರವಿ ಆಕ್ರೋಶ:
    ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಸಿ.ಟಿ.ರವಿ ಅವರು, ಇಂದಿನ ಸಮ್ಮೇಳನಾಧ್ಯಕ್ಷರಿಗೆ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಅಭಿಪ್ರಾಯ ಕೇಳಿದಾಗ ಪೊಲೀಸ್ ಇಲಾಖೆ ಅವರಿಗಿರುವ ಟ್ರ್ಯಾಕ್ ರೆಕಾರ್ಡ್‍ನ ರಿಪೋರ್ಟ್ ಮಾಡಿ ಕೊಟ್ಟಿದೆ. ಪೊಲೀಸರ ವರದಿಯ ಆಧಾರದ ಮೇಲೆ ಅಂದಿನ ರಾಜ್ಯ ಕಾಂಗ್ರೆಸ್ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಲಿಲ್ಲ. ಸಮ್ಮೇಳನಾಧ್ಯಕ್ಷರ ನುಡಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಬ್ಯಾಡ್ ಟ್ರ್ಯಾಕ್ ರೆಕಾರ್ಡ್ ಇಟ್ಟುಕೊಂಡವರಿಂದ ಒಳ್ಳೆಯ ಸಂದೇಶದ ನಿರೀಕ್ಷೆ ಹೇಗೆ ಸಾಧ್ಯ ಎಂದು ಹೇಳಿದ್ದಾರೆ.

    ನಾನು ಸಚಿವನಾಗಿ, ಸರ್ಕಾರ ನಡೆಸುವವನಾಗಿ ನನ್ನ ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣದಲ್ಲಿ ಸಮ್ಮೇಳನ ನಡೆಯಬೇಕೆಂಬ ಅಪೇಕ್ಷೆ ಇದೆ. ಹಾಗಾಗಿ ಸಮ್ಮೇಳನವನ್ನ ಮುಂದೂಡಿ ಎಂದಿದ್ದೇನೆ. ನೀವು ಅದೇ ದಿನಾಂಕದಂದು ನಡೆಸುತ್ತೀವಿ ಅಂದ್ರೆ ನಮ್ಮ ಸಹಕಾರವಿಲ್ಲ ಎಂದು ಒಂದೂವರೆ ತಿಂಗಳ ಹಿಂದೆ ಸ್ಪಷ್ಟಪಡಿಸಿದ್ದೇನೆ. ನಾನು ಬರುವುದಿಲ್ಲ, ಯಾವುದೇ ರೀತಿಯ ಸಹಕಾರದ ನಿರೀಕ್ಷೆಯನ್ನೂ ಮಾಡಬೇಡಿ ಎಂದು ನೇರವಾಗಿ ಹೇಳಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

  • ಶೀಲದ ಬಗ್ಗೆ ಅಪಪ್ರಚಾರ- ರಸ್ತೆ ಮಧ್ಯೆಯೇ ಧರ್ಮದೇಟು

    ಶೀಲದ ಬಗ್ಗೆ ಅಪಪ್ರಚಾರ- ರಸ್ತೆ ಮಧ್ಯೆಯೇ ಧರ್ಮದೇಟು

    ಚಿಕ್ಕಮಗಳೂರು. ಶೀಲದ ಬಗ್ಗೆ ಎಲ್ಲರ ಬಳಿಯೂ ಅಪಪ್ರಚಾರ ಮಾಡುತ್ತಿದ್ದ ವ್ಯಕ್ತಿಗೆ ಮಹಿಳೆಯೊಬ್ಬಳು ರಸ್ತೆ ಮಧ್ಯೆಯೇ ಹಿಗ್ಗಾಮುಗ್ಗಾ ಧರ್ಮದೇಟು ಕೊಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೊಪ್ಪ ತಾಲೂಕಿನ ಜಯಪರದ ಸುಂದರೇಶ್ ಅದೇ ಊರಿನ ಶೋಭಾ(ಹೆಸರು ಬದಲಾಯಿಸಲಾಗಿದೆ) ಎಂಬವರ ಶೀಲದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದನು. ಆಕೆ ಸರಿ ಇಲ್ಲ ಎಂದು ಶೀಲದ ಬಗ್ಗೆ ಶಂಕಿಸಿ ಕರಪತ್ರ ಮಾಡಿಸಿ ಗ್ರಾಮಸ್ಥರ ಮನೆ ಬಾಗಿಲಿಗೂ ಅಂಟಿಸಿದ್ದನು. ಈ ಬಗ್ಗೆ ಶೋಭಾ ಜಯಪುರ ಠಾಣೆಗೆ ದೂರು ನೀಡಿದ್ದಳು.

    ಜಯಪುರ ಪೊಲೀಸರು ಆತನನ್ನ ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಜೈಲಿನಿಂದ ಬೇಲ್ ಮೇಲೆ ಬಂದ ಸುಂದರೇಶ್ ಮತ್ತೆ ಅದೇ ಕೆಲಸ ಮಾಡುತ್ತಿದ್ದನು. ಅಲ್ಲದೇ ದಾರಿ ಮಧ್ಯೆ ಸಿಕ್ಕವರಿಗೆಲ್ಲಾ ಅವಳು ಸರಿ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದನು. ಈ ರೀತಿ ಮಾಡಬೇಡ ಎಂದು ಶೋಭಾ ಹಲವು ಬಾರಿ ಎಚ್ಚರಿಕೆ ಕೂಡ ನೀಡಿದ್ದಳು. ಆದರೆ ಸಂದರೇಶ್ ಮತ್ತದೇ ಕೆಲಸ ಮಾಡುತ್ತಿದ್ದನು.

    ಇದರಿಂದ ಆಕ್ರೋಶಗೊಂಡ ಶೋಭಾ ದಾರಿ ಮಧ್ಯೆಯೇ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ನನ್ನ ಬಗ್ಗೆ ಏಕೆ ಮಾತನಾಡೋದು, ನಾನು ಸರಿ ಇಲ್ಲ ಅನ್ನೋದನ್ನ ನೀನು ನೋಡಿದ್ದೀಯಾ ಎಂದು ಚಪ್ಪಲಿಯಲ್ಲಿ ಹೊಡೆದಿದ್ದಾಳೆ.

  • ಸ್ಕೂಟಿ ಮೇಲೆ ಹಾರಿ ಬಿದ್ದ ಕಾಡು ಕೋಣ – ಇಬ್ಬರು ಗಂಭೀರ

    ಸ್ಕೂಟಿ ಮೇಲೆ ಹಾರಿ ಬಿದ್ದ ಕಾಡು ಕೋಣ – ಇಬ್ಬರು ಗಂಭೀರ

    ಚಿಕ್ಕಮಗಳೂರು: ಕಾಫಿ ತೋಟದ ಅಂಚಿನಿಂದ ರಸ್ತೆಗೆ ಹಾರಿದ ಕಾಡುಕೋಣ ಸ್ಕೂಟಿ ಮೇಲೆ ಬಿದ್ದ ಪರಿಣಾಮ ಬೈಕಿನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾಗಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ನೇರಂಕಿ ಗ್ರಾಮದ ಸಂದೀಪ್ ಹಾಗೂ ಮಂಗಳ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಆಗ ತೋಟದಿಂದ ಮತ್ತೊಂದು ತೋಟಕ್ಕೆ ಹೋಗಲು ತೋಟದ ಅಂಚಿನಿಂದ ರಸ್ತೆಗೆ ಹಾರಿದ ಕೋಣ ನೇರವಾಗಿ ಬೈಕಿನ ಮೇಲೆ ಬಿದ್ದಿದೆ.

    ಇದರಿಂದ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೂ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಕಳಸ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹೊಸ ವರ್ಷ ಸಂಭ್ರಮಾಚರಣೆ – ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್

    ಹೊಸ ವರ್ಷ ಸಂಭ್ರಮಾಚರಣೆ – ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ಹೊಸ ವರ್ಷ ಆಚರಣೆಗೆ ಕಾಫಿನಾಡು ಚಿಕ್ಕಮಗಳೂರು ತುಂಬಿ ತುಳುಕಿದ್ದು, ಭಾರೀ ವಾಹನಗಳಿಂದ ರಾಜ್ಯದ ಎತ್ತರದ ಶಿಖರ ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿ, ಪ್ರವಾಸಿಗರು ಪರದಾಡುವಂತಾಗಿದೆ.

    ಕಳೆದ ರಾತ್ರಿ ಹೋಂ ಸ್ಟೇ, ರೆಸಾರ್ಟ್‍ಗಲ್ಲಿ ವಾಸ್ತವ್ಯ ಮಾಡಿದ್ದ ಸಾವಿರಾರು ಪ್ರವಾಸಿಗರು ಇಂದು ಪ್ರಕೃತಿ ಸೌಂದರ್ಯ ಸವಿಯಲು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಆಗಮಿಸಿದ್ದರು. ಪರಿಣಾಮ ಮಾರ್ಗ ಮಧ್ಯೆ ಅಲ್ಲಲ್ಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರವಾಸಿಗರೇ ವಾಹನಗಳಿಂದ ಕೆಳಗಿಳಿದು ಟ್ರಾಫಿಕ್ ಪೊಲೀಸ್ ಕೆಲಸ ಮಾಡಿ ವಾಹನಗಳನ್ನು ನಿಯಂತ್ರಿಸಿದ್ದು ಸಾಮಾನ್ಯವಾಗಿತ್ತು.

    ರಾಜ್ಯ-ಹೊರರಾಜ್ಯಗಳಿಂದ ಬಂದಿದ್ದ ಸಾವಿರಾರು ಪ್ರವಾಸಿಗರು ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ನಿಂತು 2019ಕ್ಕೆ ಗುಡ್ ಬೈ ಹೇಳಿ, 2020ಕ್ಕೆ ಸ್ವಾಗತ ಕೋರಿದರು. ಗಿರಿಭಾಗದಲ್ಲಿ ಎಲ್ಲಿ ನೋಡಿದರು ಬೈಕು-ಕಾರುಗಳದ್ದೇ ಕಾರುಬಾರಾಗಿತ್ತು. ಇವತ್ತು ಒಂದೇ ದಿನ ಕಾರು, ಬೈಕ್, ಟೆಂಪೋ ಎಲ್ಲಾ ಸೇರಿ ಮೂರರಿಂದ ನಾಲ್ಕು ಸಾವಿರ ಬರೀ ವಾಹನಗಳೇ ಮುಳ್ಳಯ್ಯನಗಿರಿ ಜಮಾಯಿಸಿವೆ. ಸುಮಾರು 30 ರಿಂದ 40 ಸಾವಿರ ಪ್ರವಾಸಿಗರು ಕಾಫಿನಾಡ ಪ್ರಕೃತಿಗೆ ಸೌಂದರ್ಯಕ್ಕೆ ಶರಣಾಗತರಾಗಿದ್ದಾರೆ.

    ಟ್ರಾಫಿಕ್ ನಡುವೆ ಹರಸಾಹಸ ಪಟ್ಕೊಂಡು ಗಿರಿಯ ತುದಿಗೆ ಹೋದಾಗ ಪ್ರವಾಸಿಗರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸುತ್ತಲು ಹಸಿರ ರಾಶಿ. ಕಣ್ಣಿನ ದೃಷ್ಠಿ ಮುಗಿದ್ರು ಮುಗಿಯದ ಪ್ರಕೃತಿ ಸಂಪತ್ತು. ಮುಗಿಲೆತ್ತರದ ಬೆಟ್ಟಗುಡ್ಡಗಳ ಸಾಲು. ನಿಮಿಷಕ್ಕೊಮ್ಮೆ ಕಣ್ಣೆದುರಿಗೆ ಬಂದು ಮಾಯವಾಗೋ ಮಾಯಾವಿ ಮಂಜು. ಮೈಮರೆತು ನಿಂತ್ರೆ ನಾವು ಕಿಡ್ನ್ಯಾಪ್ ಆಗ್ತೀವೇನೀ ಎಂದು ಭಯವಾಗುವಂತೆ ಬೀಸೋ ಗಾಳಿ. ಸೆಲ್ಫಿಗೆ ಫೋಸೋ ಕೊಟ್ಟು ನಿಲ್ಲುವಷ್ಟರಲ್ಲಿ ತಬ್ಬಿಕೊಂಡು ಹಾಗೋ ಗಾಳಿಯ ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ಗಿರಿಯ ತುದಿಗೆ ಬಂದು ಪ್ರಕೃತಿ ಸೌಂದರ್ಯದಲ್ಲಿ ಸವಿಯುಷ್ಟರಲ್ಲಿ ಮುಳ್ಳಯ್ಯನ ಸ್ವಾಮಿಯ ದರ್ಶನ ಮಾಡಬೇಕು. ಆಗ ಮತ್ತೊಂದು ಗುಡ್ಡ ಹತ್ತಬೇಕು. ಆದರೆ ಎಷ್ಟೇ ಆಯಸವಾಗಿದ್ರು ಇಲ್ಲಿನ ಗಾಳಿ ಮೈ-ಮನವನ್ನು ತಿಳಿಗೊಳಿಸೋದ್ರಿಂದ ಪ್ರವಾಸಿಗರು ಸಂತೋಷದಿಂದಲೇ ಬೆಟ್ಟ ಹತ್ತಿ ದೇವರ ದರ್ಶನ ಪಡೆದರು.

    ಮುಳ್ಳಯ್ಯನಗಿರಿ ಇನ್ನು ಹತ್ತಾರು ಕಿ.ಮೀ. ಇರೋವಾಗ್ಲೇ ಟ್ರಾಫಿಕ್ ಜಾಮ್‍ನಿಂದ ನಿಂತಿದ್ದ ಗಾಡಿಗಳು ನೋಡುಗರಿಗೆ ಇರುವೆಯಂತೆ ಭಾಸವಾಗುತ್ತಿತ್ತು. ದೂರದ ಊರುಗಳಿಂದ ಬಂದಿದ್ದ ಪ್ರವಾಸಿಗರು ಕೂಡ ಇಲ್ಲಿನ ಸೌಲಭ್ಯ ನೋಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಾರ್ಕಿಂಗ್ ಇಲ್ಲ, ಪ್ಲಾಸ್ಟಿಕ್ ಕಡಿಮೆಯಾಗಿದ್ರು ಇನ್ನೂ ಇದೆ. ಎರಡೆರಡು ಕಡೆ ಹಣ ಕಟ್ಟಿಸಿಕೊಳ್ಳುತ್ತಾರೆ. ಆದರೆ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಇಂತಹಾ ಸೌಂದರ್ಯವನ್ನು ಎಲ್ಲರೂ ಸೇರಿ ಉಳಿಸಬೇಕು. ಇದನ್ನು ಮತ್ತೆ ಸೃಷ್ಠಿಸಲು ಅಸಾಧ್ಯ. ಹಾಗಾಗಿ ಸ್ಥಳೀಯರು, ಪ್ರವಾಸಿಗರು ಹಾಗೂ ಸರ್ಕಾರ ಮೂವರು ಸೇರಿ ಈ ಸೌಂದರ್ಯವನ್ನು ರಕ್ಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಕಳ್ಳ ಕದ್ದ ಪೊಲೀಸ್ ಜೀಪ್ ವಿರುದ್ಧವೇ ದೂರು ದಾಖಲು

    ಕಳ್ಳ ಕದ್ದ ಪೊಲೀಸ್ ಜೀಪ್ ವಿರುದ್ಧವೇ ದೂರು ದಾಖಲು

    ಚಿಕ್ಕಮಗಳೂರು: ನನ್ನ ಕಾರಿಗೆ ಅಪಘಾತ ಮಾಡಿದ್ದು ಪೊಲೀಸ್ ಜೀಪ್, ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಜೀಪ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಸೋಮವಾರ ನಗರದ ಗ್ರಾಮಾಂತರ ಠಾಣೆಯ ರಕ್ಷಾ ಪೊಲೀಸ್ ಜೀಪ್ ಡ್ರೈವರ್ ಜೀಪನ್ನ ನಿಲ್ಲಿಸಿ ಮೆಡಿಕಲ್ ಗೆ ಹೋಗಿ ಬರುವಷ್ಟರಲ್ಲಿ ಕಳ್ಳನೋರ್ವ ಜೀಪನ್ನು ಕದ್ದು ಪರಾರಿಯಾಗಿದ್ದ. ನಗರದಿಂದ ಐದು ಕಿ.ಮೀ. ದೂರ ಜೀಪನ್ನು ತೆಗೆದುಕೊಂಡು ಹೋಗಿ ಆಲ್ಟೋ ಕಾರಿಗೆ ಅಪಘಾತ ಮಾಡಿದ್ದ. ಹಿಂದೆ ಪೊಲೀಸರು ಫಾಲೋ ಮಾಡುತ್ತಿರುವುದನ್ನು ಗಮನಿಸಿ ಜೀಪನ್ನು ಅಲ್ಲೆ ಬಿಟ್ಟು ಕಾಡಿನೊಳಗೆ ಕಣ್ಮರೆಯಾಗಿದ್ದ.

    ಈಗ ಆಲ್ಟೋ ಕಾರಿನ ಮಾಲೀಕ ಸಖರಾಯಪಟ್ಟಣದ ಗುರುಮೂರ್ತಿ ಗ್ರಾಮಾಂತರ ಠಾಣೆಯಲ್ಲಿ ಪೊಲೀಸ್ ಜೀಪ್ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನ ಕಾರಿಗೆ ಪೊಲೀಸ್ ಜೀಪ್ ಗುದ್ದಿದೆ. ಡ್ರೈವರ್ ಯಾರೆಂದು ಗೊತ್ತಿಲ್ಲ. ಹಾಗಾಗಿ ಪೊಲೀಸ್ ಜೀಪ್ ವಿರುದ್ಧ ಸೂಕ್ತ ಕ್ರಮಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಅತ್ತ ಪೊಲೀಸ್ ಜೀಪ್ ಕದ್ದ ಯಾರೆಂದು ಪೊಲೀಸರಿಗೂ ಗೊತ್ತಿಲ್ಲ. ಇತ್ತ ಜೀಪ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ಬಂದಿದೆ. ಪೊಲೀಸರಿಗೆ ಈಗ ಏನು ಮಾಡುವುದು ಎಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ.