Tag: Chikkamagaluru Tourists

  • ಕಾಫಿನಾಡಲ್ಲಿ ಬರ್ತ್ ಡೇ ಆಚರಿಸಿಕೊಂಡ ಹೆಚ್‍ಡಿಕೆ

    ಕಾಫಿನಾಡಲ್ಲಿ ಬರ್ತ್ ಡೇ ಆಚರಿಸಿಕೊಂಡ ಹೆಚ್‍ಡಿಕೆ

    ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬವನ್ನ ಜಿಲ್ಲೆಯ ಮುಳ್ಳಯ್ಯನಗಿರಿ ಭಾಗದಲ್ಲಿರೋ ಜಾವರಿನ್ ರೆಸಾರ್ಟ್‍ನಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ.

    ಸೋಮವಾರ ರಾತ್ರಿಯೇ ಜಿಲ್ಲೆಗೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಎರಡು ದಿನಗಳ ಕಾಲ ರೆಸಾರ್ಟಿನಲ್ಲೇ ಕಾಲ ಕಳೆದಿದ್ದಾರೆ. ಕುಮಾರಸ್ವಾಮಿ ಅವರು ಜಿಲ್ಲೆಗೆ ಬಂದಿರೋ ವಿಷಯ ಜಿಲ್ಲೆಯ ಬಹುತೇಕ ಜೆಡಿಎಸ್ ಕಾರ್ಯಕರ್ತರಗೆ ಗೊತ್ತಿರಲಿಲ್ಲ. ಎರಡು ದಿನಗಳ ಕಾಲ ರೆಸಾರ್ಟ್ ನಲ್ಲೇ ವಿಶ್ರಾಂತಿ ಪಡೆದ ಮಾಜಿ ಸಿಎಂ ಇಂದು ಸರಳವಾಗಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಇಂದು ಅವರ ಹುಟ್ಟುಹಬ್ಬದ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತ ಸಿರಾಜ್ ಹಾಗೂ ಇತರೆ ಕಾರ್ಯಕರ್ತರೊಂದಿಗೆ ಸರಳವಾಗಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ವೇಳೆ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಜೊತೆಗಿದ್ದರು. ಎರಡು ದಿನಗಳ ಕಾಲ ಜಿಲ್ಲೆಯಲ್ಲಿದ್ದರೂ ಬಹುತೇಕ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಮಾಹಿತಿ ಇರಲಿಲ್ಲ ಎಂದು ತಿಳಿದು ಬಂದಿದೆ.

    ಇಂದು ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಆವರಣದಲ್ಲಿರೋ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ರಕ್ತದಾನ ಮಾಡಿದ್ದಾರೆ.

  • ದೇವರ ಮನೆ ಗುಡ್ಡದಲ್ಲಿ ಮೋಡಗಳ ಕಣ್ಣಾಮುಚ್ಚಾಲೆ- ಪ್ರವಾಸಿಗರು ಫಿದಾ

    ದೇವರ ಮನೆ ಗುಡ್ಡದಲ್ಲಿ ಮೋಡಗಳ ಕಣ್ಣಾಮುಚ್ಚಾಲೆ- ಪ್ರವಾಸಿಗರು ಫಿದಾ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ದೇವರ ಮನೆ ಗುಡ್ಡ ಸದ್ಯ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಮೋಡಗಳ ಕಣ್ಣಾಮುಚ್ಚಾಲೆ, ತಂಗಾಳಿ, ಮಂಜಿನಾಟ, ಹಸಿರು ಹೊದ್ದಿಕೊಂಡಿರುವ ಪ್ರಕೃತಿಗೆ ಪ್ರವಾಸಿಗರು ಮನಸೋಲುತ್ತಿದ್ದಾರೆ.

    ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿರುವ ಇಲ್ಲಿನ ಪ್ರಕೃತಿಯ ಸೌಂದರ್ಯವನ್ನ ನೋಡುವುದಕ್ಕೆ ಎರಡು ಕಣ್ಣು ಸಾಲದು. ಗುಡ್ಡದ ತುದಿಯಲ್ಲಿ ನಿಂತು ಸುತ್ತಲೂ ಕಣ್ಣಾಯಿಸಿದರೆ ಇಲ್ಲಿನ ಸೌಂದರ್ಯವನ್ನ ವರ್ಣಿಸುವುದಕ್ಕೆ ಪದವಿರದು. ಇಲ್ಲಿನ ಅಂದಚೆಂದಕ್ಕೆ ಮನಸೋಲದವರೇ ಇಲ್ಲ. ಟ್ರಕ್ಕಿಂಗ್ ಪ್ರಿಯರಿಗಂತೂ ನೆಚ್ಚಿನ ತಾಣವಾಗಿದೆ. ಚಾರಣಿಗರು ಆಗಾಗ್ಗೆ ಬಂದು ಇಲ್ಲಿನ ಪ್ರಕೃತಿ ಮಡಿಲಲ್ಲಿ ರಮಿಸಿ ಹೋಗುತ್ತಾರೆ. ಇಲ್ಲಿನ ಐತಿಹಾಸಿಕ ಕಾಲಭೈರವೇಶ್ವರನ ದರ್ಶನ ಪಡೆದು, ಮೈಕೊರೆವ ಚಳಿಯಲ್ಲಿ 20-25 ಕಿ.ಮೀ. ಟ್ರಕ್ಕಿಂಗ್ ಮಾಡುತ್ತಾರೆ ಎಂದು ಪ್ರವಾಸಿಗ ಕಿರಣ್ ಹೇಳಿದ್ದಾರೆ.

    ಕರಾವಳಿ, ಸಕಲೇಶಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನ ಇಲ್ಲೇ ನಿಂತು ನೋಡಬಹುದು. ಇಲ್ಲಿ ಪ್ರತಿದಿನ ಪ್ರವಾಸಿಗರೂ ಬರುತ್ತಾರೆ. ಮಳೆ-ಬಿಸಿಲು-ಚಳಿ ಯಾವುದೇ ಇರಲಿ ಪ್ರವಾಸಿಗರಂತು ಇದ್ದೇ ಇರುತ್ತಾರೆ. ಬೆಟ್ಟ-ಗುಡ್ಡಗಳನ್ನ ಹತ್ತಿ, ಕಾಡು-ಮೇಡು ಅಲೆದು ಎಂಜಾಯ್ ಮಾಡುತ್ತಾರೆ. ಮಳೆ ಪ್ರಮಾಣ ಯಥೇಚ್ಛವಾಗಿರುವುದರಿಂದ ದಿನದಿಂದ ದಿನಕ್ಕೆ ಇಲ್ಲಿನ ಸೌಂದರ್ಯ ಇಮ್ಮಡಿಗೊಳ್ಳುತ್ತಿದೆ.

    ಮಳೆಗಾಲವಾಗಿರುವುದರಿಂದ ಇಲ್ಲಿಗೆ ಬರುತ್ತಿರುವ ಪ್ರವಾಸಿಗರು ಸೌಂದರ್ಯವನ್ನ ಹಾಡಿ, ಹೊಗಳಿ ಪುಳಕಿತಗೊಳ್ಳುತ್ತಿದ್ದಾರೆ. ಸುತ್ತಮುತ್ತಲಿನ ಹಚ್ಚಹಸಿರ ವನರಾಶಿ ಕಂಡ ಕಾಂಕ್ರಿಟ್ ನಾಡಿಗರು ಕಾನನದ ಮಧ್ಯೆ ಒಂದಿಷ್ಟು ರಿಲ್ಯಾಕ್ಸ್ ಆಗುತ್ತಿದ್ದಾರೆ. ಗುಡ್ಡದ ಮೇಲೇರಿ ಸೆಲ್ಫಿಗೆ ಪೋಸ್ ನೀಡುತ್ತಾ, ಕುಣಿದು ಕುಪ್ಪಳಿಸುತ್ತಿದ್ದಾರೆ. ವಿಶಾಲವಾಗಿ ಹರಡಿಕೊಂಡಿರುವ ಪರ್ವತದ ಸಾಲುಗಳನ್ನ ನೋಡುವುದಕ್ಕೆ ಚೆಂದ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ.

    ಮುಂಗಾರಿನ ಸಿಂಚನದಿಂದ ದೇವರಮನೆ ದೇವಲೋಕದಂತಾಗಿದೆ. ಗಿರಿ ಶಿಖರಗಳು ಮತ್ತಷ್ಟು ರಂಗು ಪಡೆದಿವೆ. ಕಣ್ಮುಚ್ಚಿ ಬಿಡುವಷ್ಟರಲ್ಲಿ ಕಣ್ಮರೆಯಾಗುವ ಇಲ್ಲಿನ ಮಂಜಿನಾಟ ಅದ್ಭುತವಾಗಿದೆ.