Tag: Chikkamagalur

  • ಹೃದಯಾಘಾತದಿಂದ ಕರ್ತವ್ಯನಿರತ ಪೇದೆ ಠಾಣೆಯಲ್ಲೇ ಸಾವು

    ಹೃದಯಾಘಾತದಿಂದ ಕರ್ತವ್ಯನಿರತ ಪೇದೆ ಠಾಣೆಯಲ್ಲೇ ಸಾವು

    ಚಿಕ್ಕಮಗಳೂರು: ರಾತ್ರಿಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ಠಾಣೆಯಲ್ಲಿ ನಡೆದಿದೆ.

    ಯೋಗೀಶ್ (32) ಮೃತಪಟ್ಟ ಪೇದೆ. ಗುರುವಾರ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಯೋಗೀಶ್ ಠಾಣೆಯಲ್ಲಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಇತರೇ ಸಿಬ್ಬಂದಿ ತಕ್ಷಣ ಯೋಗೀಶ್‍ನನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗೀಶ್ ಸಾವನ್ನಪ್ಪಿದ್ದಾರೆ.

    ಇದು ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎನ್ನುವುದು ಮರಣೋತ್ತರ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ. ಆದರೆ ಸದ್ಯಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಹೇಳಲಾಗ್ತಿದೆ. ಮೃತ ಯೋಗೀಶ್ ಮೂಲತಃ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಮೈಲಿಮನೆ ನಿವಾಸಿಯಾಗಿದ್ದು, 2009ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಗಳು ಮೃತಪಟ್ಟಿದ್ದಕ್ಕೆ ಒಬ್ಬರ ಕೈಗೆ ಒಬ್ಬರು ವೇಲ್ ಕಟ್ಟಿಕೊಂಡು ಮೂವರು ಆತ್ಮಹತ್ಯೆ

    ಮಗಳು ಮೃತಪಟ್ಟಿದ್ದಕ್ಕೆ ಒಬ್ಬರ ಕೈಗೆ ಒಬ್ಬರು ವೇಲ್ ಕಟ್ಟಿಕೊಂಡು ಮೂವರು ಆತ್ಮಹತ್ಯೆ

    ಚಿಕ್ಕಮಗಳೂರು: ಒಬ್ಬರ ಕೈಗೆ ಒಬ್ಬರು ವೇಲ್ ಬಿಗಿದುಕೊಂಡು ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ.

    ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಕೆಳಪೇಟೆ ನಿವಾಸಿಗಳಾದ ಸುಬ್ಬಮ್ಮ, ಶಶಿಕಲಾ, ಉಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಮೇಶ್ ಹಾಗೂ ಶಶಿಕಲಾ ದಂಪತಿಯಾಗಿದ್ದು, ಸುಬ್ಬಮ್ಮ ಶಶಿಕಲಾಳ ತಾಯಿಯಾಗಿದ್ದಾರೆ.

    ದಂಪತಿಯ 2 ವರ್ಷದ ಮಗಳು ಅಮೂಲ್ಯಳಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದಿದ್ರಿಂದ ಹಾರ್ಟ್ ಆಪರೇಷನ್ ಮಾಡಿಸಿದ್ರು. ಹೀಗಿದ್ದರೂ ಮಗು ಬದುಕದೇ ಯುಗಾದಿ ಹಬ್ಬದಂದು ಸಾವನ್ನಪ್ಪಿತ್ತು. ಇದರಿಂದ ಮನನೊಂದ ಮನೆಯವರು, ಕುಟುಂಬದಲ್ಲಿ ನಾವ್ಯಾರು ಬದುಕಬಾರದೆಂದು ಎಲ್ಲರೂ ಕೈಗೆ ವೇಲ್ ಕಟ್ಟಿಕೊಂಡು ಇಂದು ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

    ನದಿಯಿಂದ ಒಮ್ಮೆಲೆ ಮೂರು ಮೃತದೇಹಗಳನ್ನು ಹೊರತೆಗೆಯುವಾಗ ಸ್ಥಳೀಯರು ಕಣ್ಣಾಲಿಗಳು ತೇವಗೊಂಡು, ನಮ್ಮ ಶತ್ರುಗಳಿಗೂ ಈ ಸ್ಥಿತಿ ಬರಬಾರದೆಂದು ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೀರಿನಿಂದ ತೆಗೆದ ಮೀನಿನಂತಾಗಿರುವ ಮಂಜು ಹಣಕ್ಕಾಗಿ ಬಿಜೆಪಿ ಸೇರ್ಪಡೆ: ಪ್ರಜ್ವಲ್

    ನೀರಿನಿಂದ ತೆಗೆದ ಮೀನಿನಂತಾಗಿರುವ ಮಂಜು ಹಣಕ್ಕಾಗಿ ಬಿಜೆಪಿ ಸೇರ್ಪಡೆ: ಪ್ರಜ್ವಲ್

    ಚಿಕ್ಕಮಗಳೂರು: ಒಂಬತ್ತು ತಿಂಗಳ ಹಿಂದೆ ಸೋಲನ್ನು ಅನುಭವಿಸಿರುವ ಎ. ಮಂಜು ಅಧಿಕಾರವಿಲ್ಲದೇ ನೀರಿನಿಂದ ತೆಗೆದ ಮೀನಿನಂತಾಗಿ, ಈಗ ಅಧಿಕಾರ ಹಾಗೂ ಹಣಕ್ಕಾಗಿ ಬಿಜೆಪಿ ಸೇರಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆರೋಪಿಸಿದ್ದಾರೆ.

    ಕಡೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನಿಂದ ಬಿಜೆಪಿಗೆ ಸೇರಿದ ಎ. ಮಂಜು ನಾಳೆ ನಿಮ್ಮ ಮನೆಗೆ ಬಂದರೂ ಆಶ್ಚರ್ಯವಿಲ್ಲ. ಮಂಜು ಲಜ್ಜೆಗೆಟ್ಟ ರಾಜಕಾರಣ ಮಾಡ್ತಿದ್ದಾರೆ ಎಂದು ಅರಕಲಗೂಡು ಜನರೇ ಹೇಳುತ್ತಿದ್ದಾರೆ. ಮೇ 23ರಂದು ಅವರು ಮತ್ತೆ ಮನೆಗೆ ಹೋಗುತ್ತಾರೆ. ಆಗ ಅವರು ಮತ್ತೆ ಬಿಎಸ್‍ವೈ ಬಿಟ್ಟು ಬೇರೆ ಪಕ್ಷ ನೋಡುತ್ತಾರೆ ಎಂದು ಭವಿಷ್ಯ ನುಡಿದರು.

    ಸದಾ ಅಭಿವೃದ್ಧಿ ರಾಜಕಾರಣಕ್ಕೆ ಹೆಸರಾಗಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈಗ ಜಾತಿ ರಾಜಕಾರಣವೂ ಆರಂಭವಾಗಿದೆ. ಎ.ಮಂಜು ಅವರು ಎಷ್ಟು ವೀರಶೈವ ನಾಯಕರನ್ನು ಬೆಳೆಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಮಗೆ ವೀರಶೈವರ ಮೇಲೆ ಪ್ರೀತಿ ಇಲ್ಲವೇ ಪ್ರೀತಿ ಇಲ್ಲದೆ ಬೇಲೂರಿನಲ್ಲಿ ಕ್ಷೇತ್ರ ತ್ಯಾಗ ಮಾಡಿ ಲಿಂಗೇಶ್‍ರನ್ನು ಗೆಲ್ಲಿಸಿಲ್ಲವೇ ಎಂದು ಪ್ರಶ್ನೆ ಮಾಡಿದರು.

    ಜೀವನ ಪೂರ್ತಿ ವೀರಶೈವರನ್ನು ತುಳಿದವರು ಈಗ ಬಿಜೆಪಿ ಸೇರಿದ್ದೇನೆ ಎಂದು ಹೇಳಿ ಯಾವ ನೈತಿಕತೆ ಇಟ್ಟುಕೊಂಡು ವೀರಶೈವರ ಮತ ಕೇಳ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು ಪ್ರಜ್ವಲ್ ರೇವಣ್ಣ ಎ. ಮಂಜು ವಿರುದ್ಧ ವಾಗ್ಧಾಳಿ ನಡೆಸಿದರು.

  • ಭಾರತ, ಪಾಕ್ ನಡ್ವೆ ಸಂಘರ್ಷ ಆಗಲಿದೆ ಅನ್ನೋದು 2 ವರ್ಷದ ಹಿಂದೆಯೇ ಗೊತ್ತಿತ್ತು- ಸಿಎಂ

    ಭಾರತ, ಪಾಕ್ ನಡ್ವೆ ಸಂಘರ್ಷ ಆಗಲಿದೆ ಅನ್ನೋದು 2 ವರ್ಷದ ಹಿಂದೆಯೇ ಗೊತ್ತಿತ್ತು- ಸಿಎಂ

    – ಎಚ್‍ಡಿಡಿ ಪ್ರಧಾನಿಯಾಗಿದ್ದಾಗ ದಾಳಿ ನಡೆದಿತ್ತಾ?
    – ಬಡ ಕುಟುಂಬದ ಸೈನಿಕರ ಜೊತೆ ಚೆಲ್ಲಾಟ

    ಚಿಕ್ಕಮಗಳೂರು: ಎರಡು ವರ್ಷದ ಹಿಂದೆಯೇ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ನಡೆಯಲಿದೆ ಎನ್ನುವ ಮಾಹಿತಿ ನನಗೆ ಸಿಕ್ಕಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಚಿಕ್ಕಮಗಳೂರಿನ ಕೊಪ್ಪದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಪ್ರಧಾನಿ ಮೋದಿ ಅವರ ಬಣ್ಣಬಣ್ಣದ ಮಾತುಗಳಿಗೆ ಮರುಳಾಗಬೇಡಿ. ನನಗೆ ಎರಡು ವರ್ಷದ ಹಿಂದೆಯೇ ನಿವೃತ ಸೈನ್ಯಾಧಿಕಾರಿಯೊಬ್ಬರು ಲೋಕಸಭಾ ಚುನಾವಣೆ ಮುನ್ನ ಭಾರತ-ಪಾಕ್ ನಡುವೆ ಸಂಘರ್ಷ ನಡೆಯುತ್ತದೆ ಎಂದು ತಿಳಿಸಿದ್ದರು. ಸಂಘರ್ಷದ ಏನಾದರೂ ಕಥೆ ಸೃಷ್ಟಿ ಮಾಡಿ ಮೋದಿ ಮತ ಕೇಳುತ್ತಾರೆ ಎಂದು ಅಂದೇ ಅಧಿಕಾರಿ ತಿಳಿಸಿದ್ದರು ಎಂಬುದಾಗಿ ಹೇಳಿದರು.

    ಎರಡು ವರ್ಷದ ಹಿಂದೆಯೇ ನನ್ನ ಬಳಿ ಚರ್ಚೆ ಮಾಡಿದ್ದರು. ಇವತ್ತು ಅದೇ ರೀತಿಯಲ್ಲಿ ಆಗಿದೆ. ಅಭಿವೃದ್ಧಿ ಹೆಸರಿನಲ್ಲಿ ಅವರು ನಿಮ್ಮ ಬಳಿ ಮತ ಕೇಳುತ್ತಿಲ್ಲ. ದೇಶವನ್ನು ಸುಭದ್ರವಾಗಿ ನಡೆಸುವ ಪ್ರಧಾನ ಮಂತ್ರಿಬೇಕಂತೆ. ಹಾಗಾದರೆ ಸ್ವತಂತ್ರ ಬಂದ 70 ವರ್ಷಗಳಲ್ಲಿ ಈ ದೇಶವನ್ನು ಆಳಿರುವವರೆಲ್ಲಾ ಅಭದ್ರತೆಯಲ್ಲಿ ಆಡಳಿತ ನಡೆಸಿದ್ದಾರಾ? ನಾನು ನಿಮ್ಮನ್ನು ಕೈ ಜೋಡಿಸಿ ಮನವಿ ಮಾಡುತ್ತೇನೆ ದಯವಿಟ್ಟು ಅವರನ್ನು ನಂಬಬೇಡಿ ಎಂದು ಮನವಿ ಮಾಡಿದರು.

    ನೀವೇ ಬೆಳೆಸಿದಂತಹ ಕನ್ನಡಿಗನಾಗಿ ದೇಶದಲ್ಲಿ ಪ್ರಧಾನ ಮಂತ್ರಿಯಾಗಿ 10 ತಿಂಗಳು ಕೆಲಸ ಮಾಡಿದ್ದಾರೆ. ಆಗ ಎಲ್ಲಾದರೂ ಬಾಂಬ್ ದಾಳಿ, ಅಮಾಯಕರ ಬಲಿ ನಡೆದಿತ್ತಾ? ಯೋಧರನ್ನು ಗುಂಡಿಕ್ಕಿ ಕೊಲ್ಲುವ ಘಟನೆ ಆಗ ನಡೆದಿತ್ತಾ? ಆದರೆ ಈಗ ಅವರ ಉಳಿವಿಗೆ ದೇಶದ ಬಡ ಕುಟುಂಬದ ಸೈನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ನಿಮ್ಮನ್ನು ದಾರಿ ತಪ್ಪಿಸುವ ಇಂತಹ ಪ್ರಧಾನ ಮಂತ್ರಿ ಬೇಕಾ? ದೇಶದಲ್ಲಿ ಶಾಂತಿ, ನೆಮ್ಮದಿ ಕಾಪಾಡುವಂತಹ ಪ್ರಧಾನಿ ಬೇಕಾ? ನೀವೇ ಯೋಚನೆ ಮಾಡಿ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

    ಇವರಿಗೆ ಅಭಿವೃದ್ಧಿ ಬೇಕಿಲ್ಲ. ಬದಲಿಗೆ ಧರ್ಮದ ರಾಜಕಾರಣ ಬೇಕಾಗಿದೆ. ನಮ್ಮ ಕುಟುಂಬದವರು ಶೃಂಗೇರಿಯ ಪರಮ ಭಕ್ತರು. ಧರ್ಮದ ರಕ್ಷಣೆಯಲ್ಲಿ ನಾವು ಅವರಿಗಿಂತ ಮುಂದಿದ್ದೇವೆ. ನಾವು ಯಾವ ಧರ್ಮದಲ್ಲಿ ಹುಟ್ಟಬೇಕು ಎಂದು ಕೇಳಿಕೊಂಡು ಹುಟ್ಟೋದಿಲ್ಲ ಎಂದರು.

  • ಹೆಸರಿಗೆ ಮಾತ್ರ ಪಕ್ಷೇತರ ಅಭ್ಯರ್ಥಿ, ಮೇ 23ರ ನಂತ್ರ ನಿಮಗೆ ಉತ್ತರಿಸ್ತೇನೆ: ಸಿಎಂ

    ಹೆಸರಿಗೆ ಮಾತ್ರ ಪಕ್ಷೇತರ ಅಭ್ಯರ್ಥಿ, ಮೇ 23ರ ನಂತ್ರ ನಿಮಗೆ ಉತ್ತರಿಸ್ತೇನೆ: ಸಿಎಂ

    ಚಿಕ್ಕಮಗಳೂರು: ದೇಶದಲ್ಲಿ ಮಂಡ್ಯ ಬಿಟ್ಟು ಬೇರೆ ಕಡೆ ಚುನಾವಣೆ ನಡೆಯುತ್ತಿಲ್ವಾ ಎಂದು ಪ್ರಶ್ನೆಸಿ ಇದಕ್ಕೆಲ್ಲಾ ನಾನು ಮೇ 23ರ ನಂತರ ನಿಮಗೆ ಉತ್ತರಿಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಮಂಡ್ಯದಲ್ಲಿ ಕೈ ಮೀರಿ ಹೋಗಿರುವ ಘಟನೆಗಳು ನಡೆದಿವೆ. ಇವತ್ತು ಬಿಜೆಪಿ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುತ್ತಿದೆ. ಮಂಡ್ಯದಲ್ಲಿ ಹೆಸರಿಗೆ ಮಾತ್ರ ಪಕ್ಷೇತರ ಅಭ್ಯರ್ಥಿಯಷ್ಟೇ. ಅವರಿಗೆ ಕಾಂಗ್ರೆಸ್, ಬಿಜೆಪಿ ಮತ್ತು ರೈತ ಸಂಘದ ಬೆಂಬಲವಿದೆ. ಇಷ್ಟೆಲ್ಲ ಸೇರಿ ಜೆಡಿಎಸ್ ಮಣಿಸುವುದಕ್ಕೆ ಹೊರಟಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದರು.

    ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಮೂರು ತಿಂಗಳಿನಿಂದ ಮಾಧ್ಯಮದಲ್ಲಿ ಬರುವುದು ಬೇರೆ. ಸ್ಥಳೀಯವಾಗಿ ಅಲ್ಲಿ ಇರುವ ಪರಿಸ್ಥಿತಿಯೇ ಬೇರೆಯಾಗಿದೆ. ಮೇ 23ರ ಬಳಿಕ ನಿಮಗೆ ಉತ್ತರಿಸುತ್ತೇನೆ. ದೇಶದಲ್ಲಿ ಮಂಡ್ಯ ಬಿಟ್ಟು ಬೇರೆ ಕಡೆ ಎಲೆಕ್ಷನ್ ನಡೆಯುತ್ತಿಲ್ವಾ ಎಂದು ಸಿಎಂ ಪ್ರಶ್ನೆ ಮಾಡಿದರು. ಜೆಡಿಎಸ್ ಮಣಿಸೋದಕ್ಕೆ ಎಲ್ಲಾ ರೀತಿಯ ಚಕ್ರವ್ಯೂಹ ರಚನೆ ಮಾಡಿದ್ದಾರೆ. ಮಂಡ್ಯ ಜನರು ಎಲ್ಲವನ್ನೂ ಮೆಟ್ಟಿ ನಿಲ್ಲುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

    ಐಟಿ ದಾಳಿಯ ಮೂಲಕ ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಕುಗ್ಗಿಸಲು ಸಾಧ್ಯವಿಲ್ಲ. ಐಟಿ ದಾಳಿಯ ಉದ್ದೇಶ ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರ ಮಾರ್ಗದರ್ಶನದಲ್ಲಿ ರೇಡ್ ನಡೆಯುತ್ತಿದೆ. ಅದಕ್ಕೆಲ್ಲಾ ಸೊಪ್ಪು ಹಾಕದೇ ಹೋರಾಟಕ್ಕೆ ಈಗಾಗಲೇ ತಯಾರು ಮಾಡಿಕೊಂಡು ಹೊರಟಿದ್ದೇವೆ ಎಂದರು.

  • ರಾಜ್ಯದಲ್ಲಿ ಹಲವೆಡೆ ತಂಪೆರೆದ ಮಳೆರಾಯ

    ರಾಜ್ಯದಲ್ಲಿ ಹಲವೆಡೆ ತಂಪೆರೆದ ಮಳೆರಾಯ

    ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯದ ಹಲವೆಡೆ ಮಂಗಳವಾರ ಸಂಜೆ ವರುಣ ತಂಪೆರೆದಿದ್ದಾನೆ. ಮಡಿಕೇರಿ, ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲಿ  ಮಳೆಯಾಗಿದೆ.

    ಪ್ರವಾಸಿಗರ ಹಾಟ್ ಸ್ಪಾಟ್, ಮಂಜಿನ ನಗರಿ ಪ್ರವಾಸಿಗರ ಸ್ವರ್ಗ ಎಂದೆಲ್ಲಾ ಕರೆಯುವ ಕೊಡಗಿಗೆ ವರುಣ ಎಂಟ್ರಿ ಕೊಟ್ಟಿದ್ದನು. ಹಾಟ್ ಸ್ಪಾಟ್ ಆಗಿದ್ದ ಕೊಡಗಿನ ಇಳೆಗೆ ಮಳೆರಾಯ ತಂಪೆರೆದಿದ್ದಾನೆ. ಇಷ್ಟು ದಿನ ಬಿಸಿಲ ಬೇಗೆಯಿಂದ ಜಿಲ್ಲೆಯ ಜನ ಬೇಸತ್ತು ಹೋಗಿದ್ದು, ಮಳೆಯ ಆಗಮನದಿಂದ ಜನ ಸಂತಸಗೊಂಡಿದ್ದಾರೆ.

    ಮಂಗಳವಾರ ಸಂಜೆ ವೇಳೆಗೆ ಕೊಡಗಿನ ವಿವಿಧ ಭಾಗದಲ್ಲಿ ಗುಡುಗು, ಅಲ್ಲಿಕಲು ಸಹಿತ ಮಳೆಯಾಗಿದೆ. ಒಂದೆಡೆ ಬೇಸತ್ತ ಕೊಡಗಿನ ಜನತೆ ಕೊಂಚ ನಿಟ್ಟುಸಿರು ಬಿಟ್ಟರೆ, ಇನ್ನೊಂದೆಡೆ ಭಾರೀ ಗುಡುಗಿನ ಸದ್ದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

    ಇತ್ತ ಚಿಕ್ಕಮಗಳೂರಿನಲೂ ಭರ್ಜರಿ ಮಳೆ ಆಗಿದೆ. ಚಿಕ್ಕಮಗಳೂರು ನಗರ ಸೇರಿ ಸುತ್ತಮುತ್ತ ಭಾರೀ ಮಳೆ ಆಗಿದ್ದು, ಭಯಂಕರ ಗುಡುಗು-ಸಿಡಿಲಿನೊಂದಿಗೆ ವರುಣ ತನ್ನ ಅಬ್ಬರವನ್ನು ತೋರಿದ್ದಾನೆ. ಚಿಕ್ಕಮಗಳೂರಿನಲ್ಲಿ ಅರ್ಧ ಗಂಟೆಗಳ ಕಾಲ ವರುಣ ಧಾರಾಕಾರವಾಗಿ ಸುರಿದಿದ್ದಾನೆ. ಮಳೆ ಕಂಡು ರೈತ ಸಮುದಾಯದಲ್ಲಿ ಸಂತಸ ವ್ಯಕ್ತವಾಗಿದೆ.

    ಮಂಗಳೂರು ನಗರದಲ್ಲಿ ಕೂಡ ಸಂಜೆ 5 ಗಂಟೆ ವೇಳೆಗೆ ಧೂಳು ಮಿಶ್ರಿತ ಪ್ರಬಲ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿತ್ತು. ಕಳೆದ ಕೆಲ ದಿನಗಳಿಂದ ಬಿಸಿಲಿನ ಧಗೆಯಲ್ಲಿದ್ದ ಕರಾವಳಿಯಲ್ಲಿ ಮಂಗಳವಾರ ಸುರಿದ ಮಳೆಯಿಂದ ವಾತಾವರಣ ತಂಪಾಗಿದೆ.

    ಕೆಲವೆಡೆ ಸಂಜೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಮರಗಳು ಧಾರಾಶಾಹಿಯಾಗಿವೆ. ಅಲ್ಲದೆ ತೆಂಗಿನ ಮರಗಳು ಮನೆ ಮೇಲೆ ಬಿದ್ದು ಅಪಾರ ಹಾನಿ ಸಂಭವಿಸಿದೆ. ಭಾರೀ ಗಾತ್ರದ ಮರಗಳು ನೆಲಕ್ಕುರುಳಿದ್ದರಿಂದ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಕೆಲಕಾಲ ಅಡ್ಡಿಯುಂಟಾದ ಘಟನೆಯೂ ನಡೆದಿದೆ.

  • ಮೋಡಕ್ಕೆ ಮುತ್ತಿಕ್ಕಿ ಹೊರಟ ಧೂಳಿನ ಕಣ: ವಿಡಿಯೋ ನೋಡಿ

    ಮೋಡಕ್ಕೆ ಮುತ್ತಿಕ್ಕಿ ಹೊರಟ ಧೂಳಿನ ಕಣ: ವಿಡಿಯೋ ನೋಡಿ

    ಚಿಕ್ಕಮಗಳೂರು: ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಗಾಳಿ, ನೀರು, ಬೆಂಕಿ ಪ್ರಕೃತಿ ಮುಂದೆ ಮನುಷ್ಯ ಸೊನ್ನೆಯೇ. ಚಿಕ್ಕಮಗಳೂರಿನಲ್ಲಿ ಈಗ 28-30 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಈ ಬಿಸಿಲಿಗೆ ಜನ ಬಸವಳಿದಿದ್ದಾರೆ.

    ಬೀಸುತ್ತಿರುವ ಗಾಳಿ ಕೂಡ ಬೆಂಕಿಯನ್ನು ಉಗುಳುತ್ತಿದೆ. ಹೀಗಿರುವಾಗ ಕಾಫಿನಾಡ ರಣಬಿಸಿಲ ಮಧ್ಯೆಯೂ ನೋಡ ನೋಡ್ತಿದ್ದಂತೆ ಜಿಲ್ಲಾ ಆಟದ ಮೈದಾನದಲ್ಲಿ ಬಿಸಿದ ಬಿರುಗಾಳಿಗೆ ಧೂಳಿನ ಕಣ ಕೂಡ ಮೋಡಕ್ಕೆ ಮುತ್ತಿಕ್ಕಿ ಹೊರಟಂತೆ ಭಾಸವಾಗಿದೆ.

    ಕ್ಷಣಾರ್ಧದಲ್ಲಿ ಬೀಸಿದ ಬಿರುಗಾಳಿ ಜನ ಅತ್ತ ದೃಷ್ಟಿ ಹಾಯುಸುವಷ್ಟರಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಈ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳಿಯರು ಪ್ರಕೃತಿಯಲ್ಲಿನ ಸತ್ಯ ಕಂಡು ಆಶ್ಚರ್ಯಕ್ಕೀಡಾಗಿದ್ದಾರೆ. ಅಲ್ಲದೆ ಈ ಘಳಿಗೆಯನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದ್ದಾರೆ.

  • ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ 4 ಹಸುಗಳು ಬಲಿ

    ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ 4 ಹಸುಗಳು ಬಲಿ

    ಚಿಕ್ಕಮಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ನಾಲ್ಕು ಹಸುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ಸಂಜೆ 4.30ರ ಸಮಯಕ್ಕೆ ಮೇವಿಗೆಂದು ಬಂದ ಹಸುಗಳು ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ಸಾವನ್ನಪ್ಪಿವೆ. ಈ 4 ಹಸುಗಳು ಕೂಡ ಗಂಗಮನಕ್ಕಿಯ ಸೀತಮ್ಮ ಎಂಬವರಿಗೆ ಸೇರಿದ್ದಾಗಿದ್ದು, ಹಾಲು ಕೊಡುತ್ತಿದ್ದವು.

    ಸೀತಮ್ಮ ಕುಟುಂಬ ಹೈನುಗಾರಿಕೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಏಕಾಏಕಿ ನಿಂತ ಜಾಗದಲ್ಲೇ ನಾಲ್ಕು ಜಾನುವಾರುಗಳು ಸಾವನ್ನಪ್ಪಿರೋದ್ರಿಂದ, ಸೀತಮ್ಮ ಕುಟುಂಬ ಭವಿಷ್ಯದ ಚಿಂತೆಯಿಂದ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

    ಹಸುಗಳು ಮೇವಿಗೆ ಹೋದ ಪ್ರದೇಶ ಸಾರ್ವಜನಿಕರು ಹಾಗೂ ಮಕ್ಕಳು ಓಡಾಡುವ ಜಾಗವಾಗಿದೆ. ಹೀಗಾಗಿ ಸ್ಥಳೀಯರು ಈ ಅನಾಹುತಕ್ಕೆ ಅಧಿಕಾರಿಗಳ ನಿರ್ಲಕ್ಯವೇ ಕಾರಣ ಎಂದು ಮೆಸ್ಕಾಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ನೀರು ಕುಡಿಯಲು ಹೋಗಿ ಆಯತಪ್ಪಿ ಬಾವಿಗೆ ಬಿದ್ದ ಹಸು

    ನೀರು ಕುಡಿಯಲು ಹೋಗಿ ಆಯತಪ್ಪಿ ಬಾವಿಗೆ ಬಿದ್ದ ಹಸು

    ಚಿಕ್ಕಮಗಳೂರು: ಮೇಯುತ್ತಾ ಬಂದ ಹಸುವೊಂದು ನೀರು ಕುಡಿಯಲು ಹೋಗಿ ಆಯತಪ್ಪಿ ಗ್ರಾಮ ಪಂಚಾಯ್ತಿ ಹಿಂಭಾಗವಿರುವ ಬಾವಿಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಸ್ಗಲ್ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ಪಂಚಾಯ್ತಿ ಹಿಂಭಾಗದಿಂದ ಮೇಯುತ್ತಾ ಬಂದು ಬಿಸಿಲಿನ ಧಗೆಗೆ ನೀರು ಕುಡಿಯಲು ಹೋಗಿ ಬಾವಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ. ಆದರೆ ಹಸು ಬಾವಿಗೆ ಬಿದ್ದಿದೆ ಎಂದು ಗೊತ್ತಾಗುತ್ತಿದ್ದಂತೆ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡರಿಂದ ಮೂರು ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಹಸುವನ್ನು ಮೇಲೆತ್ತಿದ್ದಾರೆ.

    ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಬಾವಿಗೆ ಇಳಿದ ಸ್ಥಳೀಯರು ಹಸುವಿನ ದೇಹಕ್ಕೆ ಯಾವುದೇ ಗಾಯವಾಗದಂತ ಬೆಲ್ಟ್ ರೀತಿಯ ಸಾಮಾಗ್ರಿ ಹಾಗೂ ಹಗ್ಗ ಕಟ್ಟಿ ಮೇಲೆತ್ತಿದ್ದಾರೆ. ಬಾವಿಯಲ್ಲೂ ಹೆಚ್ಚಾಗಿ ನೀರು ಇಲ್ಲದಿರೋದ್ರಿಂದ ಹಸುವನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುಲಭವಾಗಿ ಮೇಲೆತ್ತಿದ್ದಾರೆ.

    ಸದ್ಯ ಬಾವಿಯಲ್ಲಿ ನೀರು ಕಡಿಮೆ ಇದ್ದಿದ್ರಿಂದ ಹಸುವಿನ ಜೀವಕ್ಕೂ ಯಾವುದೇ ಅಪಾಯ ಸಂಭವಿಸಿಲ್ಲ.

  • ಮೋದಿ ಅವಧಿಯಲ್ಲಿ ಆದಾಯ ಹೆಚ್ಚಾಗಿದೆಯೆಂದು ಹೇಳಿದ್ರೆ ಸನ್ಮಾನ- ಪ್ರಮೋದ್

    ಮೋದಿ ಅವಧಿಯಲ್ಲಿ ಆದಾಯ ಹೆಚ್ಚಾಗಿದೆಯೆಂದು ಹೇಳಿದ್ರೆ ಸನ್ಮಾನ- ಪ್ರಮೋದ್

    ಚಿಕ್ಕಮಗಳೂರು: ಕಳೆದ ಐದು ವರ್ಷದ ಅವಧಿಯಲ್ಲಿ ನನ್ನ ಆದಾಯ ಹೆಚ್ಚಾಗಿದೆ ಎಂದು ಯಾರಾದರೂ ಒಬ್ಬರು ಹೇಳಿದ್ರು ಸಾಕು. ನಾನು ಅವರಿಗೆ ಸನ್ಮಾನ ಮಾಡುತ್ತೇನೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರೋಕ್ಷವಾಗಿ ಮೋದಿಗಿಂತ ಮನಮೋಹನ್ ಸಿಂಗ್ ಗ್ರೇಟ್ ಎಂದು ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಮೋದಿ ಅಧಿಕಾರದ ಅವಧಿಯಲ್ಲಿ ನನ್ನ ಆದಾಯ ಹೆಚ್ಚಾಗಿದೆ. ಹೀಗಂತ ಒಬ್ಬೇ ಒಬ್ಬರು ಬಂದು ನನ್ನ ಬಳಿ ಹೇಳಲಿ. ನಾನು ಅವರಿಗೆ ಸನ್ಮಾನ ಮಾಡುತ್ತೇನೆ ಎಂದು ಸಭೆಗಳಿಗೆ ಹೋಗಿ ಕೇಳುತ್ತಿದ್ದೇನೆ. ಆದರೆ ಇಲ್ಲಿವರೆಗೂ ಯಾರೊಬ್ಬರು ನನ್ನ ಸನ್ಮಾನ ಸ್ವೀಕರಿಸಲು ಮುಂದೆ ಬಂದಿಲ್ಲ ಎಂದು ಹೇಳಿದ್ರು.

    ನೋಟ್ ಬ್ಯಾನ್ ಹಾಗೂ ಜಿಎಸ್‍ಟಿಯಿಂದ ಆರ್ಥಿಕತೆ ಸಂಪೂರ್ಣ ಕುಸಿದಿದೆ. ನಾನು ಸಭೆಗಳಿಗೆ ಹೋಗಿ ಕೇಳುತ್ತಿದ್ದೇನೆ. ಮನಮೋಹನ್ ಸಿಂಗ್ ಕಾಲದಲ್ಲಿ ಇದ್ದ ನಿಮ್ಮ ಆರ್ಥಿಕ ಸ್ಥಿತಿಗೂ ಮೋದಿ ಕಾಲದ ನಿಮ್ಮ ಆರ್ಥಿಕ ಸ್ಥಿತಿಗೂ ಏನಾದರೂ ವ್ಯತ್ಯಾಸವಿದ್ಯಾ, ಆರ್ಥಿಕ ಸ್ಥಿತಿ ಹೆಚ್ಚಾಗಿದ್ಯಾ, ಕಡಿಮೆಯಾಗಿದ್ಯಾ ಅಥವಾ ಯಥಾ ಸ್ಥಿತಿ ಇದ್ಯಾ ಎಂದು ಪ್ರಶ್ನಿಸುತ್ತಿದ್ದೇನೆ ಅಂದ್ರು.

    ನಾನು ಆ ರೀತಿ ಕೇಳುವಾಗ ಎಲ್ಲಾ ಕಡೆ ಜನರು ಆರ್ಥಿಕವಾಗಿ ನಾವು ಸೋತಿದ್ದೇವೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ, ಯಾರಾದರೂ ನನ್ನ ಆದಾಯ ಹೆಚ್ಚಾಗಿದೆ ಎಂದು ಬಂದರೆ ನಾನು ಅವರಿಗೆ ಸನ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.