Tag: Chikkamagalur

  • ಭದ್ರೆಯ ಭಯದಲ್ಲಿ ಸಾಗುತ್ತಿದೆ ಮಲೆನಾಡಿಗರ ಬದುಕು

    ಭದ್ರೆಯ ಭಯದಲ್ಲಿ ಸಾಗುತ್ತಿದೆ ಮಲೆನಾಡಿಗರ ಬದುಕು

    ಚಿಕ್ಕಮಗಳೂರು: ಸೇತುವೆ ಸಂಪರ್ಕ ಕಡಿತಗೊಂಡು ಜನರು ಭಯದಿಂದ ತೆಪ್ಪದಲ್ಲಿ ಸಾಗುತ್ತಿರುವ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಎನ್‍ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯ-ಬಾಳೆಗದ್ದೆಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಆಶ್ಲೇಷ ಮಳೆ ಹಾಗೂ ಭದ್ರೆ ನದಿಯಿಂದ ಹಾಳಾಗಿ ಹೋಗಿದೆ. ಇದೀಗ ಬಾಳೆಗದ್ದೆ ಗ್ರಾಮದ 70-80 ಮನೆ ಹಾಗೂ 200 ಜನ ನಗರಕ್ಕೆ ಬರಲು ತೆಪ್ಪವನ್ನು ಆಶ್ರಯಿಸಿದ್ದಾರೆ. 10 ವರ್ಷಗಳ ಹಿಂದೆ ತೆಪ್ಪದಲ್ಲಿ ಸಾಗುವಾಗ ತೆಪ್ಪ ಮಗುಚಿ ಮೂವರು ಮೃತಪಟ್ಟಿದ್ದರು.

    ಅಂದು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ ಇದಾಗಿದ್ದು, ರಾಜ್ಯದ ಅತಿ ದೊಡ್ಡ ಎರಡನೇ ಸೇತುವೆ ಕೂಡ ಆಗಿದೆ. ಆದರೆ ಇಂದು ಭದ್ರೆಯ ಅಬ್ಬರಕ್ಕೆ ಮುರಿದು ಬಿದ್ದು ಮತ್ತೊಂದು ಅನಾಹುತಕ್ಕೆ ಆಹ್ವಾನ ನೀಡಿದಂತಿದೆ. ಕೂಡಲೇ ಸರ್ಕಾರ ಇಲ್ಲಿಗೆ ಆದಷ್ಟು ಬೇಗ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ನಿವಾಸಿಗಳು ಮತ್ತೆ ತೆಪ್ಪದ ಮೊರೆ ಹೋಗಿದ್ದಾರೆ. ಎಲ್‍ಕೆಜಿಯಿಂದ ಡಿಗ್ರಿ ಓದುವ ಮಕ್ಕಳು ಕೂಡ ಇದೇ ತೆಪ್ಪದಲ್ಲಿ ಶಾಲೆಗೆ ಹೋಗಿಬರಬೇಕು. ಹೆತ್ತವರು ದಿನ ಬಂದು ತೆಪ್ಪದಲ್ಲಿ ಮಕ್ಕಳನ್ನು ಸಾಗಿಸಿ ಹೋಗುತ್ತಿದ್ದಾರೆ. ಬಾಳೆಗದ್ದೆ ಗ್ರಾಮದಿಂದ ಬೇರೆ ಮಾರ್ಗವಿದ್ದರೂ ಅದು, 12-15 ಕಿ.ಮೀ. ದೂರವಾಗುತ್ತದೆ ಅಲ್ಲದೆ ದಟ್ಟಕಾನನದೊಳಗೆ ಹೋಗಬೇಕಾಗುತ್ತದೆ. ಅಲ್ಲಿ 24 ಗಂಟೆಯೂ ದಾರಿ ಮಧ್ಯೆ ಹುಲಿ, ಆನೆ, ಕಾಡುಕೋಣ ಸೇರಿದಂತೆ ಎಲ್ಲಾ ಪ್ರಾಣಿಗಳು ಇರುತ್ತದೆ. ಜನ ಓಡಾಡೋದಕ್ಕೆ ಅಸಾಧ್ಯ. ಹಾಗಾಗಿ ಜನ ಅನಿವಾರ್ಯವಾಗಿ ಜೀವದ ಹಂಗು ತೊರೆದು ತೆಪ್ಪದಲ್ಲಿ ಬದುಕು ದೂಡುತ್ತಿದ್ದಾರೆ.

    ಅಂದು 50 ಲಕ್ಷದಲ್ಲಿ ಮುಗಿದಿದ್ದ ಈ ಸೇತುವೆಗೆ ಇಂದು 1.20 ಲಕ್ಷ ಬೇಕಾಗಿದೆ. ಸದ್ಯಕ್ಕೆ ಅರಣ್ಯ ಸಿಬ್ಬಂದಿಗಳು ಇದೇ ಜಾಗದಲ್ಲಿ ಸ್ಥಳೀಯರ ನೆರವಿಗೆ ಬಂದಿದ್ದಾರೆ. ಸ್ಥಳಕ್ಕೆ ಶಾಸಕರು ಹಾಗೂ ಅಧಿಕಾರಿಗಳು ಭೇಟಿ ನೀಡಿ, ಸೇತುವೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಆದರೆ ಜನ ಸೇತುವೆ ಮುಂದಿನ ಮಳೆಗಾಲಕ್ಕೆಲ್ಲ ತುರ್ತಾಗಿ ನಿರ್ಮಿಸಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  • ಜೀವ ಉಳಿಸಿದ ವೀರಯೋಧರಿಗೆ ರಾಖಿ ಕಟ್ಟಿ ಕಣ್ಣೀರಿನ ಬೀಳ್ಕೊಡುಗೆ

    ಜೀವ ಉಳಿಸಿದ ವೀರಯೋಧರಿಗೆ ರಾಖಿ ಕಟ್ಟಿ ಕಣ್ಣೀರಿನ ಬೀಳ್ಕೊಡುಗೆ

    ಚಿಕ್ಕಮಗಳೂರು: ಜೀವ ಉಳಿಸಿದ ವೀರ ಯೋಧರಿಗೆ ಗ್ರಾಮಸ್ಥರು ರಾಖಿ ಕಟ್ಟುವ ಮೂಲಕ ಬೀಳ್ಕೊಡುಗೆ ಕೊಟ್ಟಿದ್ದಾರೆ.

    ಚಿಕ್ಕಮಗಳೂರಿನ ಮೂಡಿಗೆರೆ ಗ್ರಾಮಸ್ಥರು, ನಿಮ್ಮಿಂದ ನಮ್ಮ ಜೀವ ಉಳಿದಿದೆ ಎಂದು ಕಣ್ಣೀರಿಟ್ಟು ಪ್ರತಿಯೊಬ್ಬ ಸೈನಿಕರಿಗೂ ರಾಖಿ ಕಟ್ಟಿದ್ದಾರೆ. ಈ ವೇಳೆ ಸೈನಿಕರು ತಂದಿದ್ದ ಹಣ್ಣು, ಬಿಸ್ಕೆಟ್‍ಗಳನ್ನು ಸಂತ್ರಸ್ತರಿಗೆ ಹಂಚಿದ್ದಾರೆ.

    ಯೋಧರ ರಕ್ಷಣಾ ಕಾರ್ಯಾಚರಣೆ ನೋಡಿ ನೂರಾರು ಜನರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೆ ಇಂಡಿಯನ್ ಆರ್ಮಿ ಸದಾ ನಿಮ್ಮ ಜೊತೆ ಇರುತ್ತದೆ. ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ ಎಂದು ಭಾರತೀಯ ಸೇನೆ ತಿಳಿಸಿದೆ. ಸದ್ಯ ಮಿಲಿಟರಿ ಪಡೆ ಕಾರ್ಯಾಚರಣೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಗ್ರಾಮಸ್ಥರು ಕಣ್ಣೀರು ಹಾಕುತ್ತಲೇ ಯೋಧರಿಗೆ ಬೀಳ್ಕೊಡುಗೆ ಕೊಟ್ಟಿದ್ದಾರೆ.

    ಮೂಡಿಗೆರೆ ತಾಲೂಕಿನ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತವಾಗಿತ್ತು. ಹೀಗಾಗಿ ಗ್ರಾಮದ ಮಾರ್ಗ ಬಂದ್ ಆಗಿ ಕಳೆದ 6 ದಿನಗಳಿಂದ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 10ಕ್ಕೂ ಮಂದಿಯನ್ನು ಸೇನಾಪಡೆ ಸೋಮವಾರ ರಕ್ಷಣೆ ಮಾಡಿದೆ. ವಾಹನ ವ್ಯವಸ್ಥೆ ಇಲ್ಲದ ಕಾರಣಕ್ಕೆ 4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆಯೇ ಹೊತ್ತು ಸಾಗಿಸುವ ಮೂಲಕ ತಂಡ ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದಾರೆ.

  • ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮಣ್ಣಿನಲ್ಲಿ ಸಂಪೂರ್ಣ ಮುಳುಗಡೆ

    ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮಣ್ಣಿನಲ್ಲಿ ಸಂಪೂರ್ಣ ಮುಳುಗಡೆ

    ಚಿಕ್ಕಮಗಳೂರು: ಕರುಣೆಯಿಲ್ಲದ ವರುಣನ ಅಬ್ಬರಕ್ಕೆ ಮಲೆನಾಡು ಕೊಚ್ಚಿ ಹೋಗಿದೆ. ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಸಾವಿರಾರು ಜನ ನಿರ್ಗತಿಕರಾಗಿದ್ದಾರೆ.

    ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ಮಲೆಮನೆ ಗ್ರಾಮದಲ್ಲಿ 12 ಮನೆ, 2 ದೇವಸ್ಥಾನ ಸಂಪೂರ್ಣ ನೆಲಸಮವಾಗಿವೆ. 3800 ಅಡಿ ಎತ್ತರದಿಂದ ಬಿದ್ದ ಗುಡ್ಡದ ಮಣ್ಣು ಇಡೀ ಗ್ರಾಮವನ್ನೇ ನಾಶ ಮಾಡಿದೆ. ಮನೆಯ ವಸ್ತುಗಳು 300 ಮೀಟರ್ ದೂರಕ್ಕೆ ಕೊಚ್ಚಿ ಹೋಗಿವೆ. ಮನೆ ಮುಂದಿದ್ದ ಬೈಕ್ ಕೂಡ ಸುಮಾರು 200 ಮೀಟರ್ ದೂರಕ್ಕೆ ಕೊಚ್ಚಿ ಹೋಗಿದೆ. ಬೈಕಿನ ಹಿಡಿ ಕಾಣುತ್ತಿದ್ದರಿಂದ ಸ್ಥಳೀಯರು ಸುತ್ತಲೂ ಅಗೆದು ಬಿಟ್ಟಿದ್ದಾರೆ.

    ಕಳೆದ ಸುಮಾರು 50 -60 ವರ್ಷ ಹಿಂದೆ ಕಾಣಿದ ಮಳೆ ಈಗ ಕಂಡು ಬಂದಿದ್ದರಿಂದ ಮಲೆನಾಡಿನ ಹತ್ತಾರು ಗ್ರಾಮಗಳು ಜಲಾವೃತಗೊಂಡಿದೆ. ಭಾರೀ ಮಳೆಗೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ 200 ಮೀ. ಕೊಚ್ಚಿಕೊಂಡು ಬಂದ ಬೈಕ್ ಸಂಪೂರ್ಣ ಮಣ್ಣಿನಲ್ಲಿ ಮುಳುಗಡೆ ಆಗಿದೆ. ಬೈಕಿನ ಅಡಿ ಕಾಣುತ್ತಿದ್ದರಿಂದ ಸ್ಥಳೀಯರು ಅದನ್ನು ಹೊರ ತೆಗೆದಿದ್ದಾರೆ. ಬೈಕ್ ಸೇರಿದಂತೆ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಹಲವು ವಸ್ತುಗಳು ಮಣ್ಣಿನಲ್ಲಿ ಮುಚ್ಚಿಕೊಂಡು ಹೋಗಿದೆ.

  • ಅಲ್ಲಲ್ಲಿ ಬಂಡೆ, ಗುಡ್ಡ ಜರಿತ – ಮಳೆಗೆ ಕೊಚ್ಚಿ ಹೋಗಿದೆ ಚಾರ್ಮಾಡಿ ರಸ್ತೆ

    ಅಲ್ಲಲ್ಲಿ ಬಂಡೆ, ಗುಡ್ಡ ಜರಿತ – ಮಳೆಗೆ ಕೊಚ್ಚಿ ಹೋಗಿದೆ ಚಾರ್ಮಾಡಿ ರಸ್ತೆ

    ಚಿಕ್ಕಮಗಳೂರು: ಮಹಾ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ ತತ್ತರಿಸಿ ಹೋಗಿದ್ದು ಸಂಚಾರಕ್ಕೆ ಮುಕ್ತವಾಗಲು ಬಹಳ ಸಮಯ ಬೇಕಾಗಿದೆ.

    ದಕ್ಷಿಣ ಕನ್ನಡ ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಮಳೆ ಬಂದಾಗ ಗುಡ್ಡದ ಮಣ್ಣು ಕುಸಿಯುತ್ತಿತ್ತು. ಆದರೆ ಈಗ ಕಳೆದ 7 ದಿನಗಳಿಂದ ನಿರಂತರವಾಗಿ ಮಳೆ ಬರುತ್ತಿರುವ ಕಾರಣ ರಸ್ತೆಯಲ್ಲಿ ರಾಶಿ ರಾಶಿ ಗುಡ್ಡದ ಮಣ್ಣು, ಬಂಡೆಗಳು ಬಿದ್ದಿದೆ. ಅಲ್ಲದೆ ಅಲ್ಲಲ್ಲಿ ರಸ್ತೆಗಳು ಕೊಚ್ಚಿ ಹೋಗಿವೆ.

    ಇತ್ತ ಚಿಕ್ಕಮಗಳೂರಿನಲ್ಲಿ ಮಳೆಯ ಅವಾಂತರಕ್ಕೆ ನೋಡ ನೋಡ್ತಿದ್ದಂತೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಎನ್. ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಮುಳುಗಡೆಯಾಗಿದ್ದ ಮನೆಗಳು ಶಿಥಿಲಾವಸ್ಥೆಯಾಗಿ ಕುಸಿದು ಬಿದ್ದಿದೆ. ಸ್ಥಳೀಯರು ಮನೆ ಕುಸಿಯುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

    ಬಾಳೆಹೊನ್ನೂರಿನಲ್ಲಿ ಒಟ್ಟು 112 ಮನೆಗಳು ನೆಲಸಮಗೊಂಡಿದ್ದು, ಮಾಗುಂಡಿ ಗ್ರಾಮದಲ್ಲಿ 53 ಮನೆಗಳು ನಾಶವಾಗಿದೆ. ಅಲ್ಲದೆ ಕಳಸ ಹೋಬಳಿಯಲ್ಲಿ 123 ಮನೆಗಳು ನೆಲಸಮ ಆಗಿದೆ.

  • ಚಿಕ್ಕಮಗಳೂರು ನದಿಯಲ್ಲಿ ತೇಲಿ ಬರುತ್ತಿವೆ ಶವಗಳು

    ಚಿಕ್ಕಮಗಳೂರು ನದಿಯಲ್ಲಿ ತೇಲಿ ಬರುತ್ತಿವೆ ಶವಗಳು

    ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಅಬ್ಬರಕ್ಕೆ ಜನರ ಬದುಕು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈಗ ನದಿಯಲ್ಲಿ ಶವಗಳು ತೇಲಿ ಬರುತ್ತಿವೆ.

    ಮಳೆಯಿಂದಾಗಿ ಮಲೆನಾಡಲ್ಲಿ ಊರೂರೇ ಕೊಚ್ಚಿ ಹೋಗುತ್ತಿದ್ದು, ನೂರಾರು ಜನ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೆ ಗ್ರಾಮಗಳು ನೀರಲ್ಲಿ ಮುಳುಗಿ ಜನ ಕಂಗಾಲಾಗಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಒಂದು ಪರಿಹಾರ ಕೇಂದ್ರವನ್ನು ತೆರೆದಿದ್ದು, ಈಗ ಅಧಿಕಾರಿಗಳನ್ನು ಅಲರ್ಟ್ ಮಾಡಬೇಕಿದೆ. ಮಳೆಯಿಂದಾಗಿ ಹೇಮಾವತಿ, ತುಂಗಾ-ಭದ್ರಾ ನದಿ ಪಾತ್ರದ ಹಲವು ಗ್ರಾಮಗಳು ಮುಳುಗಡೆ ಆಗಿದೆ.

    ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಅನೇಕ ಗ್ರಾಮಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದೆ. ಮುಗ್ರಹಳ್ಳಿ, ಕೋಳೂರು, ಬಕ್ಕಿ, ಬೆಟ್ಟಗೆರೆ, ಹಾಲೂರು, ಕಿತ್ತಲೆಗಂಡಿ ಸೇರಿದಂತೆ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸೇರಿದಂತೆ ರಸ್ತೆಗಳು ಸಂಪೂರ್ಣ ಮುಳುಗಡೆ ಆಗಿದ್ದು, ಸಾವಿರಾರು ಮಂದಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದಾರೆ. ಸದ್ಯ ಜನರು ಜಿಲ್ಲಾಡಳಿತದ ನೆರವನ್ನು ಎದುರು ನೋಡುತ್ತಿದ್ದಾರೆ.

    ಇತ್ತ ಮಹಾಮಳೆಯಿಂದಾಗಿ ಪ್ರವಾಹದ ಮಟ್ಟ ಮೀರಿ ಭದ್ರಾ ನದಿ ಹರಿಯಿತ್ತಿದೆ. ಭದ್ರಾ ನದಿ ಆರ್ಭಟಕ್ಕೆ ಖಾಂಡ್ಯ- ಬಾಳೆಗದ್ದೆ ತೂಗು ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ. ತೂಗು ಸೇತುವೆ ಕೊಚ್ಚಿ ಹೋದ ಪರಿಣಾಮ ಬಾಳೆಗದ್ದೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಭದ್ರಾ ನದಿ ದಾಟಲು ಈ ಗ್ರಾಮಕ್ಕೆ ಈ ತೂಗು ಸೇತುವೆಯೇ ಆಸರೆಯಾಗಿತ್ತು. ಆದರೆ ಈಗ ಸೇತುವೆ ಕೊಚ್ಚಿ ಹೋದ ಕಾರಣ 50ಕ್ಕೂ ಹೆಚ್ಚು ಕುಟುಂಬಗಳ ಸಂಪರ್ಕ ಬಂದ್ ಆಗಿದೆ.

  • ಏಕಾಏಕಿ ಕುಸಿದ ಮನೆಯ ಮೇಲ್ಛಾವಣಿ – ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರು

    ಏಕಾಏಕಿ ಕುಸಿದ ಮನೆಯ ಮೇಲ್ಛಾವಣಿ – ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರು

    ಚಿಕ್ಕಮಗಳೂರು: ಮಹಾ ಮಳೆಗೆ ಏಕಾಏಕಿ ಮನೆಯ ಮೇಲ್ಛಾವಣಿಗೆ ಕುಸಿದಿದ್ದು, ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರಿನ ಅರವಿಂದ ನಗರದಲ್ಲಿ ನಡೆದಿದೆ.

    ಅರವಿಂದ ನಗರದ ಕುಸುಮ ಎಂಬವರ ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಕುಸುಮ ಅವರ ಪತಿ ಬೆಳಗ್ಗೆ 6 ಗಂಟೆಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ಬೆಳಗ್ಗೆಯಿಂದ ಚಿಕ್ಕಮಗಳೂರಿನಲ್ಲಿ ಮಳೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಮನೆಯ ಮೇಲ್ಛಾವಣಿ ಕುಸಿದಿದೆ.

    ಮನೆಯ ಮೇಲ್ಛಾವಣಿ ಕುಸಿದು ಬಿದ್ದ ತಕ್ಷಣ ಮಲಗಿದ್ದ ಕುಸುಮ ಎಚ್ಚರಗೊಂಡು ಜೋರಾಗಿ ಕಿರುಚಿಕೊಂಡಿದ್ದಾರೆ. ಮಹಿಳೆಯ ಕಿರುಚಾಟದ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ಮನೆಯ ಹಂಚುಗಳನ್ನು ತೆಗೆದು ಮಗುವನ್ನು ರಕ್ಷಿಸಿದ್ದಾರೆ.

    ಮಲೆನಾಡು ಭಾಗದಲ್ಲಿ ಕಳೆದು ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ನಗರದಲ್ಲಿ ಕಳೆದ ಎರಡು ದಿನದಿಂದ ನಿರಂತರವಾಗಿ ಮಳೆ ಆಗುತ್ತಿದೆ. ಈ ಘಟನೆ ನಡೆದ ನಂತರ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

  • ಸಿದ್ಧಾರ್ಥ್ ‘ಕಾಫಿರಾಜ’ನಾದ ಕಥೆಯನ್ನು ಓದಿ

    ಸಿದ್ಧಾರ್ಥ್ ‘ಕಾಫಿರಾಜ’ನಾದ ಕಥೆಯನ್ನು ಓದಿ

    ಚಿಕ್ಕಮಗಳೂರು: ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಹುಟ್ಟಿದ್ದರು. ಆ ಬಳಿಕ ಪ್ರಾಥಮಿಕ ಶಿಕ್ಷಣ, ಉದ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಕಾಫಿರಾಜನಾದ ಕಥೆಯನ್ನೊಮ್ಮೆ ನೀವು ಓದಲೇ ಬೇಕು.

    ಸಿದ್ಧಾರ್ಥ್ ಹೆಗ್ಡೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚೇತನಹಳ್ಳಿಯ ಗಂಗಯ್ಯ ಹೆಗ್ಡೆ ಹಾಗೂ ವಾಸಂತಿ ದಂಪತಿಯ ಏಕೈಕ ಪುತ್ರ. ಚಿಕ್ಕಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದು, 1993-84ರಲ್ಲಿ ಮುಂಬೈನ ಜೆ.ಎಂ ಫೈನಾನ್ಸಿಯಲ್ ಲಿಮಿಟೆಡ್‍ನಲ್ಲಿ ಕೆಲಸಕ್ಕೆ ಸೇರಿಕೊಂಡರು.

    ಬಳಿಕ ಮಹೇಂದ್ರ ಕಂಪನಿಯ ಮ್ಯಾನೆಜ್ಮೆಂಟ್‍ನ ಸೆಕ್ಯೂರಿಟಿ ವಹಿವಾಟಿನಲ್ಲಿ ತರಬೇತಿದಾರನಾಗಿ ಕೆಲಸ ಮಾಡಿದ್ದರು. 2 ವರ್ಷಗಳ ಬಳಿಕ ಅಲ್ಲಿಂದ ವಾಪಸ್ ಬಂದು ತಂದೆ ಬಳಿ 2 ಲಕ್ಷ ಹಣ ಪಡೆದು ಮುಂಬೈಗೆ ಹೋಗಿದ್ದರು. ಅಲ್ಲಿ ನಷ್ಟವಾದ ಬಳಿಕ ಮತ್ತೆ ಅಪ್ಪನ ಬಳಿ ಬ್ಯುಸಿನೆಸ್‍ಗಾಗಿ 5 ಲಕ್ಷ ಹಣ ಕೇಳಿದ್ದರು. ಆಗ ಅವರ ತಂದೆ 2 ಲಕ್ಷ ಹಾಳು ಮಾಡಿದ್ದೀಯಾ ಎಂದು ಜರಿದಿದ್ದರು. ಬ್ಯಾಂಕಿನಲ್ಲಿ ಸಾಲ ಹಾಗೂ ಕಾಫಿ ತೋಟ ಮಾರಿ 5 ಲಕ್ಷ ಹಣ ಕೊಟ್ಟಿದ್ದರು.

    ಅಪ್ಪ ಕಷ್ಟದ ಮಧ್ಯೆಯೂ ತಂದು ಕೊಟ್ಟ ಆ ಹಣ ಸಿದ್ದಾರ್ಥ್ ಅವರ ಬದುಕಿನ ದಿಕ್ಕನ್ನೇ ಬದಲಿಸಿತ್ತು. 1993ರಲ್ಲಿ ಕಾಫಿ ಉದ್ದಿಮೆಗೆ ಕಾಲಿಟ್ಟ ಸಿದ್ದಾರ್ಥ್, ತಮ್ಮ ಜೀವಮಾನದಲ್ಲಿ ಮತ್ತೆಂದು ತಿರುಗಿಯೂ ನೋಡಲಿಲ್ಲ. 24ನೇ ವಯಸ್ಸಿಗೆ ಸ್ಟಾಕ್ ಮಾರ್ಕೆಟ್‍ನಲ್ಲಿ ಷೇರು ಖರೀದಿಸಿದ್ದರು. ಚಿಕ್ಕಮಗಳೂರು-ಹಾಸನ-ಮಡಿಕೇರಿಯಲ್ಲಿ ನಷ್ಟದಲ್ಲಿದ್ದ ಕಾಫಿ ತೋಟಗಳನ್ನು ಖರೀದಿಸಿ, ಹಂತಹಂತವಾಗಿ ಬೆಳೆಯುತ್ತಾ 13 ಸಾವಿರಕ್ಕೂ ಅಧಿಕ ಹೆಕ್ಟೇರ್ ಕಾಫಿ ತೋಟದ ಮಾಲೀಕರಾದರು.

    1996ರಲ್ಲಿ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭಿಸಿದ್ದರು. ಒಂದು ನೂರಾಗಿ, ನೂರು ಐನೂರಾಗಿ ವಿಶ್ವಾದ್ಯಂತ 10ಕ್ಕೂ ಹೆಚ್ಚು ದೇಶ ಸೇರಿದಂತೆ 1772 ಕಾಫಿ ಡೇ ಔಟ್‍ಲೇಟ್‍ನ ಒಡೆಯರಾದರು. ವಾರ್ಷಿಕ 28 ಸಾವಿರ ಟನ್ ಕಾಫಿ ರಫ್ತು ಮಾಡುವ ಮೂಲಕ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದರು. ಕಾಫಿ ಡೇಗಳಿಗೆ ಬೇಕಾದ ಬೀಜವನ್ನು ಸ್ವಂತ ತೋಟದಿಂದಲೇ ಬೆಳೆಯುತ್ತಿದ್ದರು. ಕಾಫಿಯ ಜೊತೆ 10ಕ್ಕೂ ಹೆಚ್ಚು ವಿವಿಧ ಕಂಪನಿಗಳನ್ನು ಆರಂಭಿಸಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ನಡೆದಾಡುವ ದೈವ ಆಗಿದ್ದರು.

    ಸಿದ್ಧಾರ್ಥ್ ಅವರು ಸಭೆ ಆರಂಭಕ್ಕೂ ಮೊದಲೇ ನಮ್ಮನ್ನು ಉಳಿಸೋದೆ ಹಸಿರು, ಹಸಿರನ್ನು ಬೆಳೆಸಿ ಎಂದು ಸಾರಿ-ಸಾರಿ ಹೇಳುತ್ತಿದ್ದರು. ಕಾರ್ಮಿಕರ ಮಕ್ಕಳ ಮದುವೆ, ಮನೆಗಾಗಿ ಬಂದವರಿಗೆಲ್ಲ ಸಹಾಯ ಮಾಡುತ್ತಿದ್ದ ಇವರನ್ನು ಜನ ಪೂಜ್ಯ ಭಾವನೆಯಿಂದಲೇ ನೋಡುತ್ತಿದ್ದರು.

  • ಉದ್ಯಮಿ ಸಿದ್ಧಾರ್ಥ್ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿ ಬಂದ್

    ಉದ್ಯಮಿ ಸಿದ್ಧಾರ್ಥ್ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿ ಬಂದ್

    ಚಿಕ್ಕಮಗಳೂರು: ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ಧಾರ್ಥ್ ಅವರು ನಿಗೂಢವಾಗಿ ಕಾಣೆಯಾದ ಬೆನ್ನಲ್ಲೇ ಅವರ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಬಂದ್ ಮಾಡಲಾಗಿದೆ.

    ಪ್ರತಿ ದಿನದಂತೆ ಸಿಬ್ಬಂದಿ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಕಂಪನಿಯನ್ನು ಬಂದ್ ಮಾಡಲಾಗಿದೆ. ಸಿದ್ಧಾರ್ಥ್ ಅವರು ಎಬಿಸಿ ಸೇರಿದಂತೆ ಹಲವು ಕಂಪನಿಯ ಮಾಲೀಕರಾಗಿದ್ದು, ಆ ಕಂಪನಿಯಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಸಿದ್ಧಾರ್ಥ್ ನಾಪತ್ತೆಯಾಗಿದ್ದ ಕಾರಣ ಕಾರ್ಮಿಕರು, ಸಿಬ್ಬಂದಿ ಆತಂಕಗೊಂಡಿದ್ದಾರೆ.

    ಸಿದ್ದಾರ್ಥ್ ನಾಪತ್ತೆ: ವ್ಯವಹಾರ ನಿಮಿತ್ತ ಸಿದ್ಧಾರ್ಥ್ ಅವರು ತಮ್ಮ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿದ್ದರು. ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ಇದ್ದು, ಇಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ. ಬಳಿಕ ಕಾರಿನಿಂದ ಇಳಿದು ಅವರು ಫೋನ್‍ನಲ್ಲಿ ಮಾತನಾಡುತ್ತಾ ಹೋಗಿದ್ದಾರೆ. ಆದರೆ ಅರ್ಧ ಗಂಟೆಯಾದರೂ ಸಿದ್ಧಾರ್ಥ್ ಅವರು ವಾಪಸ್ ಬರದೇ ಇದ್ದುದನ್ನು ಕಂಡು ಗಾಬರಿಯಾದ ಚಾಲಕ ಅವರಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಅವರ ಫೋನ್ ಸ್ವಿಚ್ಡ್ ಆಫ್ ಆಗಿದ್ದು ಗಮನಕ್ಕೆ ಬಂದಿದೆ.

    ಕಾರು ಚಾಲಕ ತಕ್ಷಣ ಈ ವಿಚಾರವನ್ನು ಸಿದ್ಧಾರ್ಥ್ ಮನೆಯವರಿಗೆ ತಿಳಿಸಿದ್ದಾರೆ. ಸಿದ್ಧಾರ್ಥ್ ಅವರು ಕಾರಿನಿಂದ ಇಳಿದ ಜಪ್ಪಿನ ಮೊಗರು ಪ್ರದೇಶ ನೇತ್ರಾವತಿ ನದಿ ತಟದಲ್ಲೇ ಇರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

  • ನಡುರಸ್ತೆಯಲ್ಲಿ ಲಾಂಗ್ ಹಿಡಿದು ಓಡಾಡಿದ ಅಪರಿಚಿತ – ಆತಂಕದಲ್ಲಿ ಜನರು

    ನಡುರಸ್ತೆಯಲ್ಲಿ ಲಾಂಗ್ ಹಿಡಿದು ಓಡಾಡಿದ ಅಪರಿಚಿತ – ಆತಂಕದಲ್ಲಿ ಜನರು

    ಚಿಕ್ಕಮಗಳೂರು: ಅಪರಿಚಿತ ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಲಾಂಗ್ ಹಿಡಿದು ಕೆಲ ಹೊತ್ತು ಜನರಿಗೆ ಆತಂಕ ಹುಟ್ಟಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.

    ಅಪರಿಚಿತ ವ್ಯಕ್ತಿ ಕೊಪ್ಪ ಬಸ್ ನಿಲ್ದಾಣ ಹಾಗೂ ಮುಖ್ಯ ರಸ್ತೆಯಲ್ಲಿ ಓಡಾಡಿದ್ದು, ಲಾಂಗ್ ಹಿಡಿದು ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಪೊಲೀಸರು ಕೊಪ್ಪ ಪಟ್ಟಣದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೂ ಸಹ ಆ ಅಪರಿಚಿತ ವ್ಯಕ್ತಿ ಪತ್ತೆ ಆಗಲಿಲ್ಲ. ಲಾಂಗ್ ಹಿಡಿದು ಓಡಾಡಿದ ನಂತರ ಆ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಹೀಗಾಗಿ ಪೊಲೀಸರು ಫೋಟೋ ಆಧರಿಸಿ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಸೋಮವಾರ ಸಂಜೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕರಾವಳಿಯಲ್ಲಿ ಧಾರಾಕಾರ ಮಳೆ – ಇತ್ತ ಬೀದರ್‌ನಲ್ಲಿ ವರುಣನಿಗಾಗಿ ಪ್ರಾರ್ಥನೆ

    ಕರಾವಳಿಯಲ್ಲಿ ಧಾರಾಕಾರ ಮಳೆ – ಇತ್ತ ಬೀದರ್‌ನಲ್ಲಿ ವರುಣನಿಗಾಗಿ ಪ್ರಾರ್ಥನೆ

    ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದ ಭಾರೀ ಮಳೆ ಸುರಿಯುತ್ತಿದೆ. ಉಡುಪಿಯಲ್ಲಿ ಕಳೆದ 24 ಗಂಟೆಯಲ್ಲಿ 60 ಮಿಲಿಮೀಟರ್ ಮಳೆ ದಾಖಲಾಗಿದ್ದು, ನಾಲ್ಕನೇ ದಿನವು ನಿರಂತರ ವರ್ಷಧಾರೆ ಆಗುತ್ತಿದೆ. ಜಿಲ್ಲೆಯ ಕುಂದಾಪುರ, ಕಾರ್ಕಳದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಾರ್ಮೋಡ ಮುಂದುವರಿದಿದ್ದು ಮಳೆ ಮುಂದುವರೆಯುವ ಸಾಧ್ಯತೆ ಇದೆ.

    ಮಂಗಳೂರು, ಕಾಸರಗೋಡು ತೀರ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಒಳಭಾಗದಲ್ಲಿ ಮಳೆ ಕಡಿಮೆಯಾಗಿದೆ. ಮಂಗಳೂರಿನ ಅತ್ತಾವರ, ಕೊಡಿಯಾಲ್ ಬೈಲಿನ ಎಂ.ಜಿ ರಸ್ತೆಯ ಬಳಿ ಮಳೆ ನೀರು ಹರಿಯಲಾಗದೆ ರಸ್ತೆಯಲ್ಲಿ ತುಂಬಿಕೊಂಡಿದೆ. ಮಧ್ಯಾಹ್ನ ಒಂದೂವರೆ ಗಂಟೆ ಕಾಲ ಸುರಿದ ಮಳೆಯಿಂದಾಗಿ ನಗರದ ಜನ ಹೈರಾಣಾಗಿದ್ದಾರೆ. ಯಾವಾಗಲೂ ಆಷಾಢ ಮಳೆ ಸಾಮಾನ್ಯವಾಗಿ ಸುರಿಯುತಿತ್ತು. ಆದರೆ ಈ ಬಾರಿ ಮಳೆಯೇ ಆಗದೆ ಜನ ಬಸವಳಿದಿದ್ದರು. ಇದೀಗ ಒಂದೇ ಸಮನೆ ಮಳೆಯಾಗಿದೆ.

    ರಾಜ್ಯ ಹವಾಮಾನ ಇಲಾಖೆಯ ಅಧಿಕಾರಿಗಳು, ಜುಲೈ 22ರಿಂದ 25ರ ವರೆಗೆ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. ಇದರಿಂದಾಗಿ ಜಿಲ್ಲಾಡಳಿತ ಕೂಡ ಮುಂಜಾಗ್ರತೆ ವಹಿಸಿಕೊಂಡಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಒಳಭಾಗದಲ್ಲಿ ಅಷ್ಟೇನೂ ಮಳೆಯಾಗಿಲ್ಲ. ಬೆಳ್ತಂಗಡಿ, ಸುಳ್ಯ, ಪುತ್ತೂರಿನಲ್ಲಿ ನಿರಂತರ ತುಂತುರು ಮಳೆಯಾಗುತ್ತಿದೆ.

    ಇತ್ತ ಚಿಕ್ಕಮಗಳೂರಿನಲ್ಲಿ ಮಳೆ ಜೋರಾಗಿಯೂ ಸುರಿಯುತ್ತಿಲ್ಲ. ಅತ್ತ ಬಿಡುವು ಕೊಡ್ತಿಲ್ಲ. ಇದರಿಂದ ಮಲೆನಾಡಿಗರು ಮನೆಯಿಂದ ಹೊರಬರಲು ಆಗ್ತಿಲ್ಲ. ಮುಂಜಾನೆಯಿಂದಲೇ ಆರಂಭವಾದ ಮಳೆ ನಿಧಾನವಾಗಿ ಎಡೆಬಿಡದೆ ಸುರಿಯುತ್ತಿದ್ದು, ಜನ ಹೈರಾಣಾಗಿದ್ದಾರೆ.

    ಚಿಕ್ಕಮಗಳೂರು ನಗರವೂ ಸೇರಿದಂತೆ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಕಳಸ, ಎನ್.ಆರ್ ಪುರದಲ್ಲಿ ಮಳೆರಾಯ ಆಟಕ್ಕೆ ಜನ ಬೆಸ್ತುಬಿದ್ದಿದ್ದಾರೆ. ಕುದುರೆಮುಖ, ಕೆರೆಕಟ್ಟೆ ಹಾಗೂ ಘಟ್ಟ ಪ್ರದೇಶದಲ್ಲಿ ಎರಡು ದಿನಗಳಿಂದಲೂ ಮಳೆ ಸುರಿಯುತ್ತಿದ್ದು ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

    ಬೀದರ್ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ಹಿಂಗಾರು ಮಳೆಯಾದರು ಕೃಪೆ ತೋರಲಿ ಎಂದು ಇಂದು ಬೆಳಗ್ಗೆಯಿಂದ ಗ್ರಾಮ ದೇವತೆಯಾದ ಭವಾನಿ ಮಾತಾ ದೇವಸ್ಥಾನದಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳು ಸೇರಿದಂತೆ ಭಜನೆ, ಹಾಡು, ನೃತ್ಯ ಮಾಡುತ್ತಾ ಮಳೆಗಾಗಿ ಪ್ರಾಥನೆ ಸಲ್ಲಿಸಿದ್ದಾರೆ. ಬರೋಬ್ಬರಿ ಒಂದು ತಿಂಗಳಿನಿಂದ ಅಹೋರಾತ್ರಿ ಭಜನೆ, ಹಾಡು ಹಾಡುತ್ತಾ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂದು ಗ್ರಾಮಸ್ಥರು ಒಂದು ಕಡೆ ಸೇರಿ ನೃತ್ಯ ಮಾಡುವ ಮೂಲಕ ಸ್ಥಳೀಯರ ಗಮನ ಸೆಳೆಯಿತು.