Tag: Chikkamagalur

  • ತಾಯಿ ತೀರಿದ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

    ತಾಯಿ ತೀರಿದ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

    – ತಾಯಿ ಸತ್ತಳು ಮಗಳ ಹೊಟ್ಟೆಯಲ್ಲಿ ಅಮ್ಮನೇ ಹುಟ್ಟಿದಳು

    ಚಿಕ್ಕಮಗಳೂರು: ಕೊರೊನಾ ಸೋಂಕಿತೆ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಖುಷಿ ವಿಚಾರವಾದರೆ, ಬೇಸರದ ಸಂಗತಿ ಎಂಬಂತೆ ಮಹಿಳೆಯ ತಾಯಿ ಕೊರೊನಾಗೆ ಬಲಿಯಾಗಿದ್ದಾರೆ.

    ಜಿಲ್ಲೆಯ ಕೋವಿಡ್-19 ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ದುರಾದೃಷ್ಟವಶಾತ್ ಕೊರೊನಾ ಸೋಂಕಿತೆ ಗರ್ಭಿಣಿಯ ತಾಯಿ ಕೊರೊನಾದಿಂದಾಗಿಯೇ ಸಾವನ್ನಪ್ಪಿದ್ದು, ಅಮ್ಮ ತೀರಿಕೊಂಡ ನೋವಿನಲ್ಲೂ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಮ್ಮನೇ ಮತ್ತೆ ನನ್ನ ಹೊಟ್ಟೆಯಲ್ಲೇ ಹುಟ್ಟಿದ್ದಾಳೆ ಎಂದು ಗರ್ಭಿಣಿ ಭಾವಿಸಿದ್ದಾಳೆ.

    ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ 23 ವರ್ಷದ ತುಂಬು ಗರ್ಭಿಣಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಬುಧವಾರ ಚಿಕ್ಕಮಗಳೂರಿನ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಗರ್ಭಿಣಿಯ ತಾಯಿಗೆ ಶೀತ, ಕೆಮ್ಮು, ಜ್ವರ ಎಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾದ ಬಳಿಕ ಅಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಇಂದು ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

    ಈ ಮಧ್ಯೆ ತುಂಬು ಗರ್ಭಿಣಿ ಅಮ್ಮನನ್ನು ಕಳೆದುಕೊಂಡ ನೋವಿನ ಮಧ್ಯೆಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ವೈದ್ಯರು ಇಬ್ಬರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಅಮ್ಮನನ್ನು ಕಳೆದುಕೊಂಡ ನೋವಿನಲ್ಲಿರುವ ತುಂಬು ಗರ್ಭಿಣಿ ಅಮ್ಮನೇ ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದಾರೆ ಎಂದು ಭಾವಿಸಿದ್ದಾರೆ.

  • ಮೂಡಿಗೆರೆ ವೈದ್ಯನಿಗೆ ಕೊರೊನಾ ನೆಗೆಟಿವ್- ಚಪ್ಪಾಳೆ ಮೂಲಕ ಸ್ವಾಗತಿಸಿದ ಜನ

    ಮೂಡಿಗೆರೆ ವೈದ್ಯನಿಗೆ ಕೊರೊನಾ ನೆಗೆಟಿವ್- ಚಪ್ಪಾಳೆ ಮೂಲಕ ಸ್ವಾಗತಿಸಿದ ಜನ

    – ಕ್ವಾರಂಟೈನ್‍ನಿಂದ 400ಕ್ಕೂ ಅಧಿಕ ಜನರು ಮುಕ್ತ
    – ನಿಟ್ಟುಸಿರುಬಿಟ್ಟ ಮೂಡಗೆರೆ ಜನರು

    ಚಿಕ್ಕಮಗಳೂರು: ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಯ 45 ವರ್ಷದ ವೈದ್ಯರಿಗೆ ಕೊರೊನಾ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನ ನಿಟ್ಟುಸಿರುಬಿಟ್ಟಿದ್ದಾರೆ. ಜೊತೆಗೆ ಮೂಡಿಗೆರೆಯ ಸುಶಾಂತ್ ನಗರದ ಜನರು ವೈದ್ಯರನ್ನು ಚಪ್ಪಾಳೆ ಮೂಲಕ ಸ್ವಾಗತಿಸಿದ್ದಾರೆ.

    ಮೂಡಿಗೆರೆ ವೈದ್ಯರೊಬ್ಬರಿಗೆ ಕೊರೊನಾ ಶಂಕೆ ವ್ಯಕ್ತವಾಗಿದ್ದರಿಂದ ಚಿಕ್ಕಮಗಳೂರಿನಲ್ಲಿ ಅವರಿಗೆ ಮೇ 19ರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಜಿಲ್ಲಾಡಳಿತ ವೈದ್ಯರಿಗೆ ಕೊರೊನಾ ಸೋಂಕು ತಗುಲಿಲ್ಲ. ತಾಂತ್ರಿಕ ದೋಷದಿಂದ ಪಾಸಿಟಿವ್ ಬಂದಿತ್ತು. ಅವರಿಗೆ ನೆಗೆಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿ, ವೈದ್ಯರನ್ನು ಕೊರೊನಾ ಚಿಕಿತ್ಸಾ ಘಟಕದಿಂದ ಬಿಡುಗಡೆಗೊಳಿಸಿತ್ತು.

    ವೈದ್ಯರು ಇಂದು ಆಸ್ಪತ್ರೆಯಿಂದ ಮೂಡಿಗೆರೆಯ ತಮ್ಮ ಮನೆಗೆ ಹೋಗುತ್ತಿದ್ದಂತೆ ಮೊದಲೇ ಕಾದು ನಿಂತಿದ್ದ ಸುಶಾಂತ್ ನಗರದ ಜನ ಕೊರೊನಾ ವಾರಿಯರ್ಸ್ ಗೆ ಚಪ್ಪಾಳೆಯ ಮೂಲಕ ಸ್ವಾಗತಿಸಿಕೊಂಡಿದ್ದಾರೆ. ಸ್ಥಳೀಯರ ಪ್ರೀತಿಗೆ ವೈದ್ಯರು ಕೂಡ ಅಭಿನಂದನೆ ಸಲ್ಲಿದ್ದಾರೆ.

    ನಿಟ್ಟುಸಿರುಬಿಟ್ಟ ಜನ:
    ಕೊರೊನಾ ಆರಂಭವಾದಾಗಿನಿಂದ ನೆಮ್ಮದಿಯಿಂದಿದ್ದ ಕಾಫಿನಾಡಿಗರಿಗೆ 55 ದಿನಗಳ ಬಳಿಕ ಬರಸಿಡಿಲು ಬಡಿದಂತಾಗಿತ್ತು. ಮೂಡಿಗೆರೆ ವೈದ್ಯರಿಗೆ ಸೋಂಕು ತಗುಲಿದೆ, 15 ದಿನಗಳ ಅಂತರದಲ್ಲಿ ಸಾವಿರಾರು ಜನರನ್ನ ಸಂಪರ್ಕ ಮಾಡಿದ್ದರೆಂಬ ವಿಷಯ ಮಲೆನಾಡಿಗರ ನಿದ್ದೆಗೆಡಿಸಿತ್ತು. ಆದರೆ ಇಂದು ಜಿಲ್ಲಾಡಳಿತ ಆರು ಪರೀಕ್ಷೆಗಳ ಮೂಲಕ ವೈದ್ಯರಿಗೆ ಸೋಂಕು ತಗುಲಿಲ್ಲ ಎನ್ನುವುದು ಸ್ಪಷ್ಟವಾಗಿದೆ.

    ವೈದ್ಯರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿದ್ದು ಮಲೆನಾಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮೇ 19ರಂದು ಬಂದ ವರದಿಯಲ್ಲಿ ವೈದ್ಯರಿಗೆ ಪಾಸಿಟಿವ್ ಇತ್ತು. ಆದರೆ ಜಿಲ್ಲಾಡಳಿತ ವೈದ್ಯರಲ್ಲಿ ಕೊರೊನಾ ಗುಣಲಕ್ಷಣಗಳು ಕಂಡು ಬರದ ಹಿನ್ನೆಲೆ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧ ಲ್ಯಾಬ್‍ಗಳಲ್ಲಿ ಆರು ಬಾರಿ ವೈದ್ಯರ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಿತ್ತು. ಎಲ್ಲಾ ಕಡೆ ನೆಗೆಟಿವ್ ಎಂದು ವರದಿ ಬಂದಿದೆ.

    ಜಿಲ್ಲಾಡಳಿತ ಇದನ್ನ ಸರ್ಕಾರದ ಗಮನಕ್ಕೆ ತಂದ ಬಳಿಕ ಸರ್ಕಾರ, ಪಾಸಿಟಿವ್ ಬಂದ ಸ್ಲ್ಯಾಬ್‍ನ ಬೆಂಗಳೂರಿಗೆ ಕಳುಹಿಸಿ ಎಂದು ಸೂಚಿಸಿತ್ತು. ಜಿಲ್ಲಾಡಳಿತ ಅದನ್ನ ಬೆಂಗಳೂರಿಗೆ ಕಳಿಸಿದ ಮೇಲೆ ವೈದ್ಯರ ಗಂಟಲ ದ್ರವವನ್ನ ಬೆಂಗಳೂರಿನ ಎನ್.ಐ.ವಿ. (ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ)ಗೆ ಕಳುಹಿಸಿದ್ದರು. ಅಲ್ಲೂ ಕೂಡ ವರದಿ ನೆಗೆಟಿವ್ ಎಂದು ಬಂದ ಮೇಲೆ ಇಂದು ಜಿಲ್ಲಾಡಳಿತ ವೈದ್ಯರು ಆರೋಗ್ಯವಾಗಿದ್ದಾರೆ. ಅವರಿಗೆ ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿದೆ.

    400ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್:
    ವೈದ್ಯರಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆ ಜಿಲ್ಲಾಡಳಿತ ಅವರೊಂದಿಗೆ ಸಂಪರ್ಕದಲ್ಲಿದ್ದ 800ಕ್ಕೂ ಅಧಿಕ ಜನರನ್ನ ಗುರುತಿಸಿತ್ತು. 400ಕ್ಕೂ ಅಧಿಕ ಜನರನ್ನ ಕ್ವಾರಂಟೈನ್ ಮಾಡಿತ್ತು. ವೈದ್ಯರು 15 ದಿನದಲ್ಲಿ ನೂರಾರು ಜನರನ್ನ ಪರೀಕ್ಷಿಸಿದ್ದಾರೆ. ಅವರಿಂದ ಯಾರಿಗಾದರೂ ಸೋಂಕು ತಗುಲಿರಬಹುದೆಂದು ನೂರಾರು ಜನರನ್ನ ಕ್ವಾರಂಟೈನ್ ಮಾಡಿತ್ತು. ಈಗ ವೈದ್ಯರಿಗೆ ಕೊರೊನಾ ಪಾಸಿಟಿವ್ ಇಲ್ಲ, ನೆಗೆಟಿವ್ ಬಂದಿದೆ ಎಂದಿರೋದ್ರಿಂದ ಮೂಡಿಗೆರೆಯ ಜನ ಸಂತಸಪಟ್ಟಿದ್ದಾರೆ. ಈ ವೈದ್ಯರ ಬಳಿಗೆ ಬೇಲೂರಿನಿಂದಲೂ ರೋಗಿಗಳು ಬಂದಿದ್ದರಿಂದ ಬೇಲೂರಿನಲ್ಲೂ ತಾಲೂಕು ಆಡಳಿತ ಮೈಕ್‍ನಲ್ಲಿ ಅನೌನ್ಸ್ ಮಾಡಿ, ಜನ ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಒಳಪಡಿ ಎಂದು ಸೂಚಿಸಿತ್ತು.

    ರಾಜ್ಯದಲ್ಲೇ ವಿಶಿಷ್ಟ ಪ್ರಕರಣ:
    ದೇಶ ಹಾಗೂ ರಾಜ್ಯದಲ್ಲಿ ಲಕ್ಷಾಂತರ ಜನಕ್ಕೆ ಕೊರೊನಾ ಬಂದಿದೆ. ಆದರೆ ಯಾವ ಪ್ರಕರಣ ಕೂಡ ವೈದ್ಯರ ಪ್ರಕರಣದಷ್ಟು ಆತಂಕ, ಕುತೂಹಲ ಹುಟ್ಟಿಸಿರಲಿಲ್ಲ. ಯಾಕಂದ್ರೆ, ಯಾವ ಪ್ರಕರಣದಲ್ಲೂ ಸಾವಿರಾರು ಪ್ರೈಮರಿ ಕಂಟಾಕ್ಟ್ ಹೊಂದಿದ್ದ ಪ್ರಕರಣಗಳಿರಲಿಲ್ಲ. ಹಾಗಾಗಿ, ಈ ಪ್ರಕರಣ ವಿಶಿಷ್ಟ ಹಾಗೂ ಕುತೂಹಲಭರಿತ ಪ್ರಕರಣವಾಗಿತ್ತು. ಈ ಕುತೂಹಲವೇ ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿತ್ತು. ಆದ್ರೀಗ ಜಿಲ್ಲೆಯ ಜನರ ಜೊತೆ ಜಿಲ್ಲಾಡಳಿತ ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

    ಅಧಿಕಾರಿಗಳ ವಿರುದ್ಧ ಜನ ಆಕ್ರೋಶ:
    ಯಾವಾಗ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂತೋ ಕೂಡಲೇ ಜಿಲ್ಲಾಡಳಿತ ಕೂಡ ಕಾರ್ಯಪ್ರವೃತರಾಗಿ ಫೀಲ್ಡಿಗಿಳಿದು ವೈದ್ಯರ ಸಂಪರ್ಕದಲ್ಲಿದ್ದವರನ್ನ ಗುರುತಿಸಿಲು ಮುಂದಾಗಿತ್ತು. 400ಕ್ಕೂ ಅಧಿಕ ಜನರನ್ನ ಕ್ವಾರಂಟೈನ್‍ಗೆ ಸಿದ್ಧತೆ ನಡೆಸಿತ್ತು. ಆದರೆ ತಾಲೂಕು ಮಟ್ಟದ ಅಧಿಕಾರಿಗಳು ಶ್ರೀಮಂತರಿಗೆ ಕೈಗೆ ಸೀಲ್ ಹಾಕಿ ಮನೆಗೆ ಕಳುಹಿಸುತ್ತಾರೆ. ಬಡವರನ್ನ ಕ್ವಾರಂಟೈನ್ ಘಟಕಕ್ಕೆ ಕೊಂಡೊಯ್ತಾರೆಂದು ಸ್ಥಳಿಯರು ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

    ನಮ್ಮ ಬದುಕು ಬಿಟ್ಟು ಬರಲ್ಲ:
    ಇಡೀ ಮೂಡಿಗೆರೆ ತಾಲೂಕಿಗೆ ಸಂಚಲನ ಹುಟ್ಟಿಸಿದ್ದ ವೈದ್ಯರ ಪಾಸಿಟಿವ್ ಪ್ರಕರಣದಿಂದ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸರು, ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಹೋಗಿ, ಗ್ರಾಮಕ್ಕೆ ಹೋಗಿ ತಪಾಸಣೆ ನಡೆಸಿದ್ದರು. ಈ ವೇಳೆ ಗ್ರಾಮೀಣ ಭಾಗದ ಜನ ನಾವು ಕ್ವಾರಂಟೈನ್ ಘಟಕಕ್ಕೆ ಬರೋದಿಲ್ಲ. ಏನ್ ಬೇಕಾದ್ರು ಮಾಡಿಕೊಳ್ಳಿ. ಬೇಕಾದ್ರೆ ಎತ್ತಾಕ್ಕೊಂಡ್ ಹೋಗಿ. ನಾವು ನಮ್ಮ ಬದುಕು ಬಿಟ್ಟು ಬರೋದಿಲ್ಲ. ಬೇಕಾದರೆ ತೋಟದಲ್ಲಿ ಒಂದು ಗುಡಿಸಲು ಹಾಕ್ಕೊಂಡ್ ಬೇಯಿಸಿಕೊಂಡು ತಿಂತೀವಿ. ಎಲ್ಲಗೂ ಬರೋದಿಲ್ಲ ಎಂದು ಸರ್ಕಾರದ ವಿರುದ್ಧ ಸವಾಲ್ ಹಾಕದ್ದರು.

    ದನ-ಕರು ನೋಡಿಕೊಳ್ಳೋರು ಯಾರು?:
    ಅಧಿಕಾರಿಗಳು ಗ್ರಾಮ ಹಾಗೂ ಮನೆಗೆ ಹೋಗಿ ಕ್ವಾರಂಟೈನ್ ಎಂದು ಹೇಳುತ್ತಿದ್ದಂತೆ ಜನ ಭಯಬೀತರಾಗಿದ್ದರು. ಅಧಿಕಾರಿಗಳು ಹಾಗೂ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮನೆಯಲ್ಲಿ ಐದಾರು ದನಕರುಗಳು ಹಾಗೂ ಕುರಿ-ಮೇಕೆಗಳಿವೆ. ಅವುಗಳನ್ನ ಯಾರು ನೋಡಿಕೊಳ್ಳುತ್ತಾರೆ. ನಾವು ಎಲ್ಲಿಗೂ ಬರೋದಿಲ್ಲ ಎಂದು ಬಂದವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಕೆಲವರು ಆರೋಗ್ಯ ಮುಖ್ಯವೆಂದು ಜಾನುವಾರುಗಳಿಗೆ ವ್ಯವಸ್ಥೆ ಮಾಡಿ ಕ್ವಾರಂಟೈನ್ ಘಟಕ ಸೇರಿದ್ದರು.

    ಊರಿನತ್ತ ಹೆಜ್ಜೆ ಹಾಕಿದ ಜನ:
    ಇಂದು ವೈದ್ಯರಿಗೆ ಕೊರೋನ ಪಾಸಿಟಿವ್ ಇಲ್ಲ. ನೆಗೆಟಿವ್ ಬಂದಿದೆ ಎಂದ ಕೂಡಲೇ ಕ್ವಾರಂಟೈನ್‍ನಲ್ಲಿ ಇದ್ದವರು ಇಲ್ಲದವರು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಅಬ್ಬಾ… ದೇವ್ರು ದೊಡ್ಡವನು ಎಂದು ಒಬ್ಬೊರಿಗೊಬ್ಬರು ಹರ್ಷೋದ್ಘಾರ ತೋರಿದ್ದರು. ಮಧ್ಯಾಹ್ನದ ಊಟದ ಬಳಿಕ ತಾಲೂಕಿನ ತುರುವೆ ಮೋರಾರ್ಜಿ ದೇಸಾಯಿ ಶಾಲೆ, ಕೊಟ್ಟಿಗೆಹಾರದ ಏಕಲವ್ಯ ವಸತಿ ಶಾಲೆಯಲ್ಲಿದ್ದ ನೂರಾರು ಜನ ಸಂತೋಷದಿಂದ ತಮ್ಮ ಗ್ರಾಮಗಳತ್ತ ಹೆಜ್ಜೆ ಹಾಕಿದ್ದಾರೆ.

    ಕಳೆದ ನಾಲ್ಕೈದು ದಿನಗಳಿಂದ ಮಲೆನಾಡನ್ನೇ ತಲ್ಲಣಗೊಳಿಸಿದ್ದ ಪ್ರಕರಣವೊಂದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಸುಖಾಂತ್ಯ ಕಂಡಿದೆ. ವೈದ್ಯರಿಗೆ ಪಾಸಿಟಿವ್ ಬಂದಿದೆ ಎಂದು ಮಲೆನಾಡಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಲೆನಾಡಿಗರು ಹಾಗೂ ಅಧಿಕಾರಿಗಳ ಮಧ್ಯೆ ಸಾಕಷ್ಟು ಅಸಮಾಧಾನಗಳು ಹುಟ್ಟಿಕೊಂಡಿದ್ದವು. ಆದರೀಗ ಜಿಲ್ಲಾಡಳಿತವೇ ವೈದ್ಯರಿಗೆ ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿರೋದ್ರಿಂದ ಮಲೆನಾಡು ತಣ್ಣಗಾಗಿದೆ.

  • 21 ವರ್ಷಗಳ ಬಳಿಕ ಚಿಕ್ಕಮಗಳೂರಿನಲ್ಲಿ ಉತ್ಸವ

    21 ವರ್ಷಗಳ ಬಳಿಕ ಚಿಕ್ಕಮಗಳೂರಿನಲ್ಲಿ ಉತ್ಸವ

    – ವಯಸ್ಸಿನ ಭೇದವಿಲ್ಲದೆ ಕಣಕ್ಕಿಳಿದ ಕಲಿಗಳು

    ಚಿಕ್ಕಮಗಳೂರು: 21 ವರ್ಷಗಳ ಬಳಿಕ ನಡೆಯುತ್ತಿರುವ ಚಿಕ್ಕಮಗಳೂರು ಉತ್ಸವದ ಅಂಗವಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಮಲೆನಾಡಿಗರು ಎಂಜಾಯ್ ಮಾಡುತ್ತಿದ್ದಾರೆ.

    ಇದೇ ತಿಂಗಳ 28, 29 ಹಾಗೂ ಮಾರ್ಚ್ 1ರಂದು ಚಿಕ್ಕಮಗಳೂರು ಉತ್ಸವ ನಡೆಯಲಿದ್ದು, ಅದಕ್ಕಾಗಿ ಕಾಫಿನಾಡಿಗರಿಗೆ ಹತ್ತಾರು ಕ್ರೀಡೆಗಳನ್ನು ಆಯೋಜಿಸಲಾಗಿದೆ. ಅಡ್ವೆಂಚರಸ್ ಗೇಮ್‍ಗಳನ್ನು ಜನ ಎಂಜಾಯ್ ಮಾಡುತ್ತಿದ್ದಾರೆ. ಹಗ್ಗದಲ್ಲಿ ಜಾರೋ ಜಿಪ್ ಲೈನ್ ಗೇಮಲ್ಲಿ ಯುವಕ-ಯುವತಿಯರು ಹೊಸ ಅನುಭವ ಪಡೆಯುತ್ತಿದ್ದಾರೆ. ದೊಡ್ಡವರಷ್ಟೇ ಅಲ್ಲದೆ ಮಕ್ಕಳು ಕೂಡ ಜಿಪ್ ಲೈನ್ ಸೇರಿದಂತೆ ಅಡ್ವೆಂಚರಸ್ ಕ್ರೀಡೆಯಲ್ಲಿ ಭಾಗಿಯಾಗಿ ಖುಷಿಪಡುತ್ತಿದ್ದಾರೆ.

    ಇದಕ್ಕೆ ಜೊತೆಗೆ ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಂತಿರುವ ನಲ್ಲೂರು ಕೆರೆಯಲ್ಲಿ ವಾಟರ್ ಸ್ಪೋರ್ಟ್ಸ್ ಆಯೋಜಿಸಲಾಗಿತ್ತು. ಇಲ್ಲೂ ಕೂಡ ಸಾಹಸಿ ಪ್ರಿಯರು ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ನೀರಿನ ಮೇಲೆ ವಾಟರ್ ಬೈಕ್‍ಗಳಲ್ಲಿ ತೇಲ್ತ ಜಗವನ್ನೇ ಮರೆಯುತ್ತಿದ್ದಾರೆ. ಸರ್. ಇನ್ನೊಂದು ರೌಂಡ್ ಪ್ಲೀಸ್ ಎಂದು ಗೋಗರೆಯುತ್ತಿದ್ದಾರೆ. ನೀರಿನ ಮೇಲೆ ಥ್ರಿಲ್ಲಿಂಗ್ ಬೈಕ್ ರೈಡ್ ಮಾಡಿ ವಾವ್, ಸೂಪರ್ ಎಂದು ಹೇಳುತ್ತಿದ್ದಾರೆ. ಜೊತೆಗೆ ಸ್ಟ್ರೀಟ್ ಬೋಟಿಂಗ್, ಬನಾನಾ ಬೋಟ್ ರೈಡ್, ಸ್ಕಯಿಂಗ್, ವಾಟರ್ ಜಾಬ್ರಿಂಗ್ ಸೇರಿದಂತೆ ಅನೇಕ ಜಲಕ್ರೀಡೆಗಳಲ್ಲಿ ಭಾಗಿಯಾಗಿ ಹೊಸ ಅನುಭವ ಪಡೆಯುತ್ತಿದ್ದಾರೆ.

    ವಾಟರ್ ಸ್ಪೋರ್ಟ್ಸ್ ನಲ್ಲೂ ಚಿಕ್ಕ-ಚಿಕ್ಕ ಮಕ್ಕಳು ಹಾಗೂ ದೊಡ್ಡವರು ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ಕಾಫಿನಾಡಲ್ಲಿ ಇಂತಹ ಕ್ರೀಡೆಗಳು ನಡೆದದ್ದು ಇದೇ ಮೊದಲಾದ್ದರಿಂದ ದಿನಂಪ್ರತಿ ಸಾವಿರಾರು ಜನ ಪಾಲ್ಗೊಂಡು ಖುಷಿಪಡುತ್ತಿದ್ದಾರೆ. ಚಿಕ್ಕಮಗಳೂರು ಫೆಸ್ಟ್ ಅಂಗವಾಗಿ ನಡೆಯುತ್ತಿರುವ ಕುಸ್ತಿಯ ಅಖಾಡವೂ ರಂಗೇರಿತ್ತು. ಮಣ್ಣಲ್ಲಿ ಮಿಂದೆದ್ದ ಜಗಜಟ್ಟಿಗಳು ಅಖಾಡದಲ್ಲಿ ಧೂಳ್ ಎಬ್ಬಿಸಿದ್ದರು.

  • ಕಾರ್ಮಿಕರ ಜೊತೆ ಉಪವಾಸ ಕೂರುತ್ತೇನೆ: ಸರ್ಕಾರಕ್ಕೆ ವಿನಯ್ ಗುರೂಜಿ ಎಚ್ಚರಿಕೆ

    ಕಾರ್ಮಿಕರ ಜೊತೆ ಉಪವಾಸ ಕೂರುತ್ತೇನೆ: ಸರ್ಕಾರಕ್ಕೆ ವಿನಯ್ ಗುರೂಜಿ ಎಚ್ಚರಿಕೆ

    ಚಿಕ್ಕಮಗಳೂರು: ನಾನು ಮಠ-ಮಾನ್ಯದ ಅಧಿಪತಿಯಲ್ಲ. ಗಾಂಧಿ ಟ್ರಸ್ಟಿನ ಅಧಿಪತಿ. ಅಧಿಪತಿಯೂ ಅಲ್ಲ ಕೆಲಸಗಾರನಷ್ಟೆ ಎಂದು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.

    ಜನರಿಗೆ 30 ವರ್ಷಗಳಿಂದ ಸೇವೆ ನೀಡುತ್ತಿದ್ದ ಮಲೆನಾಡಿನ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೀಡಾಗಿ ಸಂಸ್ಥೆಗೆ ಬೀಗ ಹಾಕಿದೆ. ಕೊಪ್ಪ ನಗರದಲ್ಲಿ ಕಳೆದ ಮೂರು ದಿನಗಳಿಂದ ಕಾರ್ಮಿಕರು ಸಂಸ್ಥೆಗೆ ಸರ್ಕಾರ ಸಹಕಾರ ನೀಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ವಿನಯ್ ಗುರೂಜಿ ಅವರು ಕೂಡ ಭಾಗವಹಿಸಿ ಮಾತನಾಡಿ ಸರ್ಕಾರಕ್ಕೆ ಎಚ್ಚರಿಸಿದರು.

    ನನ್ನೊಬ್ಬನ ಸ್ವರವೇ ಮುಷ್ಕರವಾಗುವುದಿಲ್ಲ. ಎಲ್ಲರ ಸ್ವರವೂ ಸೇರಿದರೆ ಅದು ಪ್ರತಿಭಟನೆಯಾಗುತ್ತದೆ. ನಾನೊಬ್ಬನೇ ಮಾತನಾಡಿದರೆ ಅದು ಧ್ವನಿಯಾಗುತ್ತದೆ. ನಿಮ್ಮೆಲ್ಲರ ಧ್ವನಿ ಸೇರಿಸಿ ನಿಮ್ಮ ಪ್ರತಿನಿಧಿಯಾಗಿ ನಾನು ಮಾತನಾಡಬೇಕು ಎಂದು ಕೊಂಡಿದ್ದೇನೆ ಎಂದರು.

    ನನಗೆ ತಿಳಿದಂತೆ ಈ ಸಮಸ್ಯೆ ಶೇಕಡಾ 100ರಷ್ಟು ಬಗೆ ಹರಿಯುತ್ತದೆ. ಯಾಕೆಂದರೆ, ನಾನು ಸೋಮವಾರ ಮಾತನಾಡಿದಾಗ, ಮೂರು ಪಕ್ಷದವರು ಸಂಸ್ಥೆ ಬಗ್ಗೆ ರಾಜಕೀಯ ಬೆರಸದೆ ಕೆಲಸ ಮಾಡುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ. ನನಗೆ ತಿಳಿದಂತೆ ಸಮಸ್ಯೆ ಬಗೆಹರಿಯುತ್ತದೆ. ಒಂದು ವೇಳೆ ಆಗದಿದ್ದರೆ ಕಾರ್ಮಿಕರು ಅನ್ನ-ನೀರು ಬಿಟ್ಟು ಉಪವಾಸ ಕೂರುವುದಕ್ಕಿಂತ ನಾವು ಹಾಗೂ ನಮ್ಮ ಆಶ್ರಮದವರು ಅನ್ನ-ನೀರು ಬಿಟ್ಟು ಇದೇ ಜಾಗದಲ್ಲಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

  • ವೃದ್ಧೆಗೆ ಖಾರದ ಪುಡಿ ಎರಚಿ ಸರ ಕಿತ್ತು ಪರಾರಿಯಾಗಿದ್ದ ಆರೋಪಿ ಸೆರೆ

    ವೃದ್ಧೆಗೆ ಖಾರದ ಪುಡಿ ಎರಚಿ ಸರ ಕಿತ್ತು ಪರಾರಿಯಾಗಿದ್ದ ಆರೋಪಿ ಸೆರೆ

    ಚಿಕ್ಕಮಗಳೂರು: ಜಮೀನಿನಲ್ಲಿ ಕೆಲಸ ಮಾಡುವಾಗ ಎಲೆ ಅಡಿಕೆ ಕೇಳುವ ನೆಪದಲ್ಲಿ 70 ವರ್ಷದ ವೃದ್ಧೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ 70 ವರ್ಷಮ್ಮ ಜಯಮ್ಮ ಎಂಬವರ ಬಳಿ ಎಲೆ-ಅಡಿಕೆ ಕೇಳುವ ವೇಳೆ 28 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದನು. ಜಯಮ್ಮ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಭೂತನಹಳ್ಳಿ ಗೋವಿಂದ ಎಂಬವನು ಆಕೆಯ ಬಳಿ ಎಲೆ ಬೇಕು ಎಂದು ಕೇಳಿದ್ದಾನೆ. ವೃದ್ಧೆ ಎಲೆ-ಅಡಿಕೆ ಹುಡುಕುತ್ತಿದ್ದಾಗ ಅವರ ಕುತ್ತಿಗೆಯಲ್ಲಿದ್ದ ಸರವನ್ನು ನೋಡಿ ಕಣ್ಣಿಗೆ ಕಾರದ ಪುಡಿ ಎರಚಿ ಸರವನ್ನು ಕದ್ದು ಪರಾರಿಯಾಗಿದ್ದನು.

    ಕೂಡಲೇ ಜಯಮ್ಮ ಅಜ್ಜಂಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಸ್ಥಳೀಯರ ಮಾಹಿತಿ ಮೆರೆಗೆ ಆರೋಪಿ ಗೋವಿಂದನನ್ನು ಅಜ್ಜಂಪುರದ ಬೇಗೂರು ಹಳ್ಳದ ಬಳಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿಯಿಂದ ಒಂದು ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಒಂದು ಬೈಕ್ ವಶ ಪಡಿಸಿಕೊಂಡಿದ್ದು, ಆರೋಪಿ ಗೋವಿಂದನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

  • ರಾಸುಗಳಿಗಾಗೇ ರಾಜ್ಯ ಮಟ್ಟದ ಜೋಡೆತ್ತಿನಗಾಡಿ ಸ್ಪರ್ಧೆ

    ರಾಸುಗಳಿಗಾಗೇ ರಾಜ್ಯ ಮಟ್ಟದ ಜೋಡೆತ್ತಿನಗಾಡಿ ಸ್ಪರ್ಧೆ

    ಚಿಕ್ಕಮಗಳೂರು: ವರ್ಷಪೂರ್ತಿ ಹೊಲಗದ್ದೆಗಳಲ್ಲಿ ದುಡಿಯುವ ರಾಸುಗಳಿಗಾಗೇ ಕಾಫಿನಾಡಿನಲ್ಲಿ ಜೋಡಿ ಎತ್ತಿನಗಾಡಿ ಸ್ಪರ್ಧೆ ಏರ್ಪಡಿಸಲಾಗಿತ್ತು. ತಾಲೂಕಿನ ತೇಗೂರು ಗ್ರಾಮದ ಅರಸು ಗೆಳೆಯರ ಬಳಗ ಹಾಗೂ ಮಾರುತಿ ಯುವಕರ ಸಂಘ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ಮೂಲೆಮೂಲೆಗಳಿಂದ 80ಕ್ಕೂ ಹೆಚ್ಚು ಜೋಡೆತ್ತುಗಳು ಪಾಲ್ಗೊಂಡಿದ್ದವು. ಮಧ್ಯರಾತ್ರಿ 12 ಗಂಟೆಯಾದ್ರು ಸಾವಿರಾರು ಜನ ಎತ್ತಿನಗಾಡಿ ಸ್ಪರ್ಧೆಯನ್ನು ನೋಡಿ ಖುಷಿಪಟ್ಟರು. ಅರಸು ಗೆಳೆಯರ ಬಳಗ 14 ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ.

    ತೇಗೂರು ಗ್ರಾಮದ ಹೊರವಲಯದ ವಿಸ್ತಾರವಾದ ಪ್ರದೇಶದಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗೆ ಬೆಂಗಳೂರು, ಮೈಸೂರು, ತುಮಕೂರು, ಮಂಡ್ಯ, ಹಾಸನ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 80ಕ್ಕೂ ಹೆಚ್ಚು ಜೋಡೆತ್ತುಗಳು ಸ್ಫರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನಕ್ಕಾಗಿ ಭಾರೀ ಪೈಪೋಟಿ ನೀಡಿದವು. ಮೊದಲ ಸ್ಥಾನ 60 ಸಾವಿರ, ಎರಡನೇ ಸ್ಥಾನ 50, ಮೂರು 40 ಹಾಗೂ ನಾಲ್ಕನೇ ಸ್ಥಾನಕ್ಕೆ 30 ಸಾವಿರ ಹಣ ಹಾಗೂ ಪಾರಿತೋಷಕವನ್ನು ನಿಗದಿ ಮಾಡಲಾಗಿತ್ತು.

    ಸ್ಪರ್ಧೆಗಾಗಿಯೇ ರೈತರು ಎತ್ತುಗಳನ್ನ ಮಕ್ಕಳಂತೆ ಸಾಕಿರುತ್ತಾರೆ. ಮೂರ್ನಾಲ್ಕು ಲಕ್ಷ ಬೆಲೆ ಬಾಳುವ ಎತ್ತುಗಳು ರೈತರಿಗೆ ಕುದುರೆಗಳಿದ್ದಂತೆ. ಹೊಲದಲ್ಲೇ ಭೂಮಿ ಉಳುಮೆಗೂ ಸೈ, ಬಯಲಲ್ಲಿ ಓಡೋದಕ್ಕೂ ಸೈ ಎಂಬಂತೆ ಬೆಳೆಸಿರುತ್ತಾರೆ. ಹೊಲಗದ್ದೆಗಳ ಕೆಲಸ ಕಾರ್ಯ ಮುಗಿದ ಮೇಲೆ ರೈತರು ರಾಸುಗಳನ್ನು ಇಂತಹ ಓಟಗಳಲ್ಲಿ ಭಾಗವಹಿಸಿ ಖುಷಿಪಡ್ತಾರೆ. ಸ್ಪರ್ಧೆಯ 15 ದಿನ ಮೊದಲೇ ಎತ್ತುಗಳಿಗೆ ವಿಶೇಷ ತರಬೇತಿ ಕೊಡುತ್ತಾರೆ. ಜೊತೆಗೆ ಇಂಡಿ, ಬೂಸಾ, ಹಸಿ ಹುಲ್ಲು, ರಾಗಿ ಹುಲ್ಲು, ಮೆಕ್ಕೆಜೋಳ, ಹಾಲು-ಮೊಸರು-ಬೆಣ್ಣೆ-ತುಪ್ಪ, ಮೆಂತೆ ಮುದ್ದೆ ಕೊಟ್ಟು ಚೆನ್ನಾಗಿ ತಯಾರಿ ಮಾಡಿರುತ್ತಾರೆ. ರೈತರಿಗೆ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವುದಕ್ಕಿಂತ ಭಾಗವಹಿಸುವುದೇ ಸಂತಸ.

    ಸ್ಪರ್ಧೆಯ ಮೈದಾನದ ಸುತ್ತಲೂ ಬಂದೋಬಸ್ತ್ ಮಾಡಲಾಗಿತ್ತು. ಏಕೆಂದರೆ ಕುದುರೆಯಂತೆ ಓಡುವ ರಾಸುಗಳು ಹೇಗೆ ಬೇಕೋ ಹಾಗೇ ನುಗ್ಗುವುದರಿಂದ ಪ್ರೇಕ್ಷಕರ ಹಿತದೃಷ್ಠಿಯಿಂದ ಮೈದಾನದ ಸುತ್ತಲೂ ಮರದಿಂದ ಬೇಲಿ ನಿರ್ಮಿಸಲಾಗಿತ್ತು. ಒಮ್ಮೆಲೆ ಎರಡು ಗಾಡಿಗಳು ಓಡಾಡುವುದರಿಂದ ಎ ಹಾಗೂ ಬಿ ಎಂಬ ಎರಡು ರ‍್ಯಾಕ್‌ನಲ್ಲಿ ಎರಡು ಗಾಡಿಗಳನ್ನು ಬಿಡಲಾಗ್ತಿತ್ತು. ನೋಡುಗರಿಗೆ ಅನುಕೂಲವಾಗಲೆಂದು ಎ ಹಾಗೂ ಬಿ ಎರಡೂ ಬದಿಯಲ್ಲೂ ಎರಡು ಎಲ್.ಇ.ಡಿ ವಾಲ್ ಅಳವಡಿಸಲಾಗಿತ್ತು. ಎತ್ತುಗಳು ಓಡುವ ವೇಗ ಕಂಡ ಜನ ಇವು ಎತ್ತೋ ಅಥವಾ ರೇಸ್ ಓಡುವ ಕುದುರೆಗಳೋ ಎಂದು ಶಿಲ್ಲೆ ಹೊಡೆದು ಕೇಕೆ ಹಾಕಿ ಕೂಗಾಡಿದರು.

    ಮಲೆನಾಡಲ್ಲಿ ಅಪರೂಪವೆನಿಸಿದ್ದ ಈ ಜೋಡೆತ್ತಿನಗಾಡಿ ಸ್ಪರ್ಧೆಯನ್ನು ಐದು ಸಾವಿರಕ್ಕೂ ಅಧಿಕ ಮಂದಿ ಕಣ್ತುಂಬಿಕೊಂಡರು. ಸ್ಪರ್ಧೆಯಲ್ಲಿ ಎತ್ತುಗಳನ್ನು ಓಡಿಸಿದ ರೈತರು ಖುಷಿ ಪಟ್ಟರು. ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸ್ತಿರೋ ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರಿನ ತೇಗೂರಿನಲ್ಲಿ ನಡೆದ ಈ ಸ್ಪರ್ಧೆ ಜನಮನ ಸೆಳೆಯಿತು. ಸ್ಥಳೀಯರು ಹಾಗೂ ದೂರದೂರಿನಿಂದ ಬಂದಿದ್ದ ಸ್ಪರ್ಧಾಳುಗಳು ಇಂತಹಾ ಗ್ರಾಮೀಣ ಕ್ರೀಡೆಗಳು ಜೀವಂತವಾಗಿರಲೆಂದು ಬಯಸಿದರು.

  • ಇಲ್ಲಿ ನಿಮ್ಮ ನೆಚ್ಚಿನ ಬ್ರ್ಯಾಂಡ್ ಮದ್ಯವೇ ದೇವರಿಗೆ ಎಡೆ

    ಇಲ್ಲಿ ನಿಮ್ಮ ನೆಚ್ಚಿನ ಬ್ರ್ಯಾಂಡ್ ಮದ್ಯವೇ ದೇವರಿಗೆ ಎಡೆ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಮೂರ್ಮನೆ ಗ್ರಾಮದ ಕೊರಗಜ್ಜ ಮದ್ಯಪಾನ ಬಿಡಿಸೋದರಲ್ಲಿ ಫೇಮಸ್. ನಿಮ್ಮ ಕುಟುಂಬದವರಿಗೆ ಮದ್ಯ ಸೇವನೆ ಬಿಡಿಸಬೇಕು ಎಂದ್ರೆ ನೀವು ಅವರು ಕುಡಿಯುವ ಬ್ರ್ಯಾಂಡ್ ಇಲ್ಲಿಯ ದೇವರಿಗೆ ಎಡೆ ಇಟ್ಟರೆ ನಿಮ್ಮ ಕೋರಿಕೆ ಈಡೇರುತ್ತದೆ ಎಂಬುವುದು ಇಲ್ಲಿಯ ನಂಬಿಕೆ.

    ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಆಪ್ತರು ಕುಡಿಯುವ ಮದ್ಯ ಮತ್ತು ಸೈಡ್ (ಚಕ್ಕಲಿ, ನಿಪ್ಪಟು, ಮಾಂಸಾಹಾರ)ನಲ್ಲಿ ತೆಗೆದುಕೊಳ್ಳುವ ಆಹಾರವನ್ನು ದೇವರಿಗೆ ಎಡೆಯಾಗಿ ತರುತ್ತಾರೆ. ಈ ರೀತಿ ಮಾಡಿದ್ರೆ ಮುಂದಿನ ಬಾರಿ ದೇವಸ್ಥಾನಕ್ಕೆ ಬರೋವಷ್ಟರಲ್ಲಿ ನಿಮ್ಮ ಆಪ್ತರು ಮದ್ಯವ್ಯಸನದಿಂದ ದೂರ ಆಗಿರುತ್ತಾರೆ ಎಂದು ಭಕ್ತರು ಹೇಳುತ್ತಾರೆ.

    ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಉಡುಪಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ. ದಟ್ಟ ಕಾನನದ ಕಾಫಿತೋಟದ ಮಧ್ಯೆ ಇರೋ ಈ ಕೊರಗಜ್ಜನ ಮಹಿಮೆ ಅಪಾರ ಅನ್ನೋದು ಅಸಂಖ್ಯಾತ ಭಕ್ತರ ನಂಬಿಕೆ. ಇಲ್ಲಿ ಪ್ರತಿ ಶುಕ್ರುವಾರ ಮದ್ಯಪಾನ ಬಿಡಿಸುವ ಪೂಜೆ ನಡೆಯಲಿದ್ದು, ಇಲ್ಲಿಯವರಗೆ 410ಕ್ಕೂ ಅಧಿಕ ಮಂದಿ ಕುಡಿಯೋದನ್ನ ಬಿಟ್ಟಿದ್ದಾರೆ ಸ್ಥಳೀಯರು ಹೇಳುತ್ತಾರೆ.

  • ಒಂದೂವರೆ ವರ್ಷದಿಂದ ಶಾಲೆಯಲ್ಲೇ ವಾಸಿಸ್ತಿದ್ದಾರೆ ಚಿಕ್ಕಮಗ್ಳೂರು ನೆರೆ ಸಂತ್ರಸ್ತರು

    ಒಂದೂವರೆ ವರ್ಷದಿಂದ ಶಾಲೆಯಲ್ಲೇ ವಾಸಿಸ್ತಿದ್ದಾರೆ ಚಿಕ್ಕಮಗ್ಳೂರು ನೆರೆ ಸಂತ್ರಸ್ತರು

    ಚಿಕ್ಕಮಗಳೂರು: ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಟುಂಬವೊಂದು ಕಳೆದ ಒಂದೂವರೆ ವರ್ಷಗಳಿಂದ ಸರ್ಕಾರಿ ಶಾಲೆಯಲ್ಲೇ ವಾಸ ಮಾಡುತ್ತಿರುವ ಕರುಣಾಜನಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ತಾತ್ಕಾಲಿಕವಾಗಿ ಇಲ್ಲಿ ಇರಿ, ಸೂಕ್ತ ಸೂರು ಒದಗಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಿಗಳು ಮತ್ತೆ ಇತ್ತ ತಲೆ ಹಾಕಲೇ ಇಲ್ಲ. ಅಧಿಕಾರಿಗಳು ಇಂದು ಬರುತ್ತಾರೆ, ನಾಳೆ ಬರುತ್ತಾರೆಂದು ಜಾತಕ ಪಕ್ಷಿಗಳಂತೆ ಕಾಯುತ್ತಿರೋ ಕುಟುಂಬ ಇಂದಿಗೂ ಸರ್ಕಾರಿ ಶಾಲೆಯಲ್ಲಿಯೇ ವಾಸ ಮಾಡುತ್ತಿದೆ. ನಾಲ್ಕು ಗೋಡೆ ಮಧ್ಯೆಯೇ ಅಡುಗೆ, ಊಟ-ತಿಂಡಿ, ವಾಸ, ನಿದ್ರೆ ಮಾಡುತ್ತಾರೆ. ಸ್ನಾನಕ್ಕೆ ಬಾತ್ ರೂಂ ಇಲ್ಲ. ಶೌಚಾಲಯವನ್ನ ಕೇಳೋದೇ ಬೇಡ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜಾವಾಬ್ದಾರಿತನಕ್ಕೆ ಈ ಕುಟುಂಬ ನಿರ್ಗತಿಕರಂತೆ ಬದುಕುವಂತಾಗಿದೆ.

    2019 ಅಲ್ಲ. 2018ರ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಮಲೆನಾಡಲ್ಲಿ ವರುಣನ ಅಬ್ಬರ ಹೇಳತೀರದ್ದಾಗಿತ್ತು. ಆಗ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಅಗಳಗಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲಿಗರ್ಡಿ ಗ್ರಾಮದ ರಾಘವೇಂದ್ರ ಭಟ್ ಹಾಗೂ ಶಾಂಭವಿ ದಂಪತಿಯ ಮನೆ ಮಳೆಗೆ ಆಹುತಿಯಾಗಿತ್ತು. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಜಯಪುರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಾತ್ಕಾಲಿಕವಾಗಿ ಇಲ್ಲಿರಿ ಎಂದು ಐದು ವರ್ಷಗಳ ಹಿಂದೆಯೇ ಮುಚ್ಚಿದ ಶಾಲೆಗೆ ತಂದು ಕುಟುಂಬವನ್ನು ಬಿಟ್ಟಿದ್ದರು. ಬಿಟ್ಟು ಹೋದವರು ಮತ್ತೆ ಈ ಕಡೆ ಬಂದೇ ಇಲ್ಲ. ಈ ಕುಟುಂಬ ಮನೆಯ ಎಲ್ಲಾ ಸಾಮಾಗ್ರಿಗಳನ್ನ ಶಾಲೆಯ ಮುಂಭಾಗ ಜೋಡಿಸಿಕೊಂಡು ಒಂದು ಕೊಠಡಿಯಲ್ಲೇ ವಾಸ ಮಾಡುತ್ತಿದೆ. ಆಗೊಮ್ಮೆ-ಈಗೊಮ್ಮೆ ಬರೋ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಸದಸ್ಯರು ನಾಳೆ, ನಾಡಿದ್ದು ಅಂತ ನೆಪ ಹೇಳ್ತಿದ್ದಾರೆಯೇ ವಿನಃ ನೊಂದ ಕುಟುಂಬದ ನೆರವಿಗೆ ನಿಂತಿಲ್ಲ.

    2019ರ ಲೋಕಸಭೆ ಚುನಾವಣೆ ವೇಳೆ ಇದೇ ಶಾಲೆ ಮತದಾನದ ಕೇಂದ್ರವಾಗಿತ್ತು. ಆಗ ಈ ಕುಟುಂಬದವರು ಎರಡು ದಿನಗಳ ಕಾಲ ಬೀಗ ಹಾಕಿಕೊಂಡು ನೆಂಟರ ಮನೆಗೆ ಹೋಗಿದ್ದರು. ಬೂತ್ ವೀಕ್ಷಣೆಗೆ ಬಂದಿದ್ದ ತಹಶೀಲ್ದಾರ್, ನಿಮಗೆ ಇನ್ನೂ ಮನೆ ಕೊಟ್ಟಿಲ್ಲವಾ ಎಂದು ಕೇಳಿದ್ದರು. ಬಳಿಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿಯವರಿಗೆ ಈ ಕುಟುಂಬಕ್ಕೆ ಬೇಗ ಮನೆ ಕಟ್ಟಿಕೊಡಿ ಎಂದು ಹೋಗಿದ್ದರು. ಆದರೆ ಇವರ ನೆರವಿಗೆ ಯಾರೂ ಬರಲೇ ಇಲ್ಲ. ಶಾಲೆ ಮುಚ್ಚಿದೆ. ಇರೋಕೆ ಸೂರಿಲ್ಲ ಎಂದು ಮಗನನ್ನ ಹಾಸ್ಟೆಲ್‍ನಲ್ಲಿ ಬಿಟ್ಟು ಈ ದಂಪತಿ ಶಾಲಾ ಕೊಠಡಿಯಲ್ಲಿ ವಾಸವಿದ್ದಾರೆ. 2019ರಲ್ಲಿ ಮಳೆಯಿಂದ ನೆಲೆ ಕಳೆದುಕೊಂಡವರಿಗೆ ಅಲ್ಪ-ಸ್ವಲ್ಪ ಪರಿಹಾರ ಬಂದಿದೆ. ಆದರೆ 2018ರಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಒಂದು ಆಶ್ರಯ ಯೋಜನೆ ಮನೆ ಕೂಡ ಕೊಟ್ಟಿಲ್ಲ ಅಂದರೆ ಇದು ವಿಪರ್ಯಸವೋ-ದುರಂತವೋ ದೇವರೇ ಬಲ್ಲ.

    ಇವರ ಮನೆ ಅರ್ಥಾತ್ ಶಾಲಾ ಕೊಠಡಿಗೆ ಶಾಸಕರಂತೂ ಬಂದೇ ಇಲ್ಲ. ಅಧಿಕಾರಿಗಳು ಬಂದಿಲ್ಲ. ಆಗೊಬ್ಬರು-ಈಗೊಬ್ಬರು ಬಂದರೂ ಯಾವುದೇ ಪ್ರಯೋಜನವಿಲ್ಲ. ಇರೋದು ಒಂದು ಎಕ್ರೆ ತೋಟ ಅದು ಹಳದಿ ಎಲೆ ರೋಗಕ್ಕೆ ಬಲಿಯಾಗಿ ಈ ಕುಟುಂಬದ ಬದುಕೇ ನಶ್ವರವಾಗಿದೆ. ತೋಟದಲ್ಲಿ ಫಸಲಿಲ್ಲ. ಇರೋಕೆ ಮನೆ ಇಲ್ಲ. ಈ ಮುಗ್ಧ ಜನಕ್ಕೆ ಪ್ರಶ್ನಿಸೋದು ಗೊತ್ತಿಲ್ಲ. ಆಕ್ರೋಶ ವ್ಯಕ್ತಪಡಿಸೋಕು ಬರಲ್ಲ. ಪರಿಹಾರ ಕೊಡುತ್ತಾರೆ ಎಂದು ಒಂದೂವರೆ ವರ್ಷದಿಂದ ಶಾಲೆಯಲ್ಲಿ ಬದುಕುತ್ತಿದ್ದಾರೆ. ಇವರ ಮುಗ್ಧತೆಯನ್ನೇ ಬಂಡವಾಳ ಮಾಡ್ಕೊಂಡಿರೋ ಅಧಿಕಾರಿಗಳು ಇತ್ತ ತಲೆ ಹಾಕದಿರೋದು ಮಾತ್ರ ಅರ್ಥರಹಿತ ವ್ಯವಸ್ಥೆಯ ಕೈಗನ್ನಡಿಯಾಗಿದೆ.

  • ನಂಗೆ ಹೋಳಿಗೆ ಊಟ ಬೇಡ – ನೆರೆ ಸಂತ್ರಸ್ತರೊಂದಿಗೆ ಊಟ ಮಾಡಿದ ಆರ್.ಅಶೋಕ್

    ನಂಗೆ ಹೋಳಿಗೆ ಊಟ ಬೇಡ – ನೆರೆ ಸಂತ್ರಸ್ತರೊಂದಿಗೆ ಊಟ ಮಾಡಿದ ಆರ್.ಅಶೋಕ್

    ಚಿಕ್ಕಮಗಳೂರು: ತನಗಾಗಿ ಬೇರೆ ಊಟ ಮಾಡಿಸಿದ್ದರೂ ಸಹ ಕಂದಾಯ ಸಚಿವ ಆರ್.ಅಶೋಕ್ ಅವರು ನಿರಾಶ್ರಿತರ ಜೊತೆಗೆ ಕುಳಿತು ಊಟ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲೆಯ ಮೂಡಿಗೆರೆಯ ಬಿದರಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಆರ್.ಅಶೋಕ್ ಭೇಟಿ ನೀಡಿದ್ದರು. ಈ ವೇಳೆ ಸಚಿವರಿಗೆ ಪ್ರತ್ಯೇಕವಾಗಿ ಹೋಳಿಗೆ ಊಟ ಮಾಡಿಸಿ, ಸಂತ್ರಸ್ತರಿಗೆ ಬೇರೆ ಊಟ ಮಾಡಿಸಿದ್ದರು. ಇದರಿಂದ ಕೋಪಿತರಾದ ಸಚಿವರು ನನಗೆ ಬೇರೆ ಊಟ ಬೇಡ, ನಾನೂ ಸಹ ಸಂತ್ರಸ್ತರ ಜೊತೆಯಲ್ಲೇ ಊಟ ಮಾಡುತ್ತೇನೆ. ಹಾಗೆಲ್ಲ ಬೇರೆ ಊಟ ಮಾಡಬಾರದು. ನನಗಾಗಿ ಯಾಕೆ ಬೇರೆ ಊಟ ಮಾಡಿಸಿದಿರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

    ನಾನು ನಿರಾಶ್ರಿತರ ಜೊತೆಯೇ ಊಟ ಮಾಡುತ್ತೇನೆ ಎಂದು”ಯಾರ್ಯಾರು ಊಟ ಮಾಡಿಲ್ಲ, ಬನ್ರಪ್ಪಾ ಊಟ ಮಾಡೋಣ” ಎಂದು ಆರ್.ಅಶೋಕ್ ಅವರು ನಿರಾಶ್ರಿತರನ್ನು ಊಟಕ್ಕೆ ಕರೆದಿದ್ದಾರೆ. ನಂತರ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಊಟದ ಬಳಿಕ ನಿತಾಶ್ರಿತರೊಂದಿಗೆ ಮಾತುಕತೆ ನಡೆಸಿದ್ದು, ಅವರ ಕಷ್ಟಗಳನ್ನು ಆಲಿಸಿದ್ದಾರೆ.

    ಮಾತುಕತೆ ವೇಳೆ ಸಚಿವ ಅಶೋಕ್ ಎದುರು ನಿರಾಶ್ರಿತರು ಕಣ್ಣೀರು ಹಾಕಿದ್ದು, ನೆರೆಯಿಂದ ಬದುಕು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ವೇಳೆ ನಿರಾಶ್ರಿತರಿಗೆ ಸಚಿವ ಅಶೋಕ್ ಭರವಸೆ ನೀಡಿದ್ದು, ಸಮಸ್ಯೆಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅಲ್ಲದೆ, ಯಾರಿಗೂ ಸಹ ಚೆಕ್ ವಿತರಣೆ ಮಾಡಬೇಡಿ ಬ್ಯಾಂಕ್‍ನಲ್ಲಿ ಸಮಸ್ಯೆಯಾಗುತ್ತದೆ. ಎಲ್ಲ ಸಂತ್ರಸ್ತರಿಗೂ ಬ್ಯಾಂಕ್ ಖಾತೆ ಮೂಲಕವೇ ಆನ್‍ಲೈನ್‍ನಲ್ಲಿ ಪೇಮೆಂಟ್ ಮಾಡಿ ಎಂದು ಅಧಿಕಾರಿಗಳಿಗೆ ಇದೇ ವೇಳೆ ಆರ್ ಅಶೋಕ್ ಸೂಚಿಸಿದರು. ಬಿದ್ರಳ್ಳಿ ನಂತರ ಸಚಿವರು ಮಲೆಮನೆ, ಮಧುಗುಂಡಿ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.

  • ಸರ್ಕಾರಿ, ಖಾಸಗಿ ಬಸ್ ಡಿಕ್ಕಿ – ಚಾಲಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಸರ್ಕಾರಿ, ಖಾಸಗಿ ಬಸ್ ಡಿಕ್ಕಿ – ಚಾಲಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಚಿಕ್ಕಮಗಳೂರು: ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಸರ್ಕಾರಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಡ್ಲೂರು ಸಮೀಪದ ಪುಂಡನಹಳ್ಳಿಯಲ್ಲಿ ನಡೆದಿದೆ.

    ಮೃತ ಚಾಲಕನನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗದ್ದಿಗೆರೆಯ ಪುಟ್ಟಸ್ವಾಮಿ ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಹೊಸಪೇಟೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

    ಬೀರೂರು ಸಮೀಪ ಸಾಧಾರಣ ಮಳೆ ಆಗುತ್ತಿರುವುದರಿಂದ ವೇಗವಾಗಿದ್ದ ಖಾಸಗಿ ಬಸ್ ಕಂಟ್ರೋಲ್ ಸಿಗದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಬಸ್ಸಿನ ಪ್ರಯಾಣಿಕರು ಹೇಳಿದ್ದಾರೆ.

    ಬಸ್ಸಿನಲ್ಲಿ ಸುಮಾರು 35 ಜನ ಪ್ರಯಾಣಿಸುತ್ತಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಗಾಯಾಳುಗಳನ್ನು ಬೀರೂರು, ಕಡೂರು ಹಾಗೂ ತರೀಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ತೀವ್ರ ಪೆಟ್ಟಾದವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.