Tag: Chikkamagalur

  • ಶಿಕ್ಷಕರಿಗೆ 60 ಸಾವಿರ ಸಹಾಯ ಧನ ನೀಡಿದ ವಿದ್ಯಾರ್ಥಿಗಳು

    ಶಿಕ್ಷಕರಿಗೆ 60 ಸಾವಿರ ಸಹಾಯ ಧನ ನೀಡಿದ ವಿದ್ಯಾರ್ಥಿಗಳು

    – ಗುರು ದಕ್ಷಿಣೆ ನೀಡಿ, ಶಿಕ್ಷಕರ ದಿನ ಆಚರಣೆ

    ಚಿಕ್ಕಮಗಳೂರು: ತಾವು ಓದಿ ಬೆಳೆದು, ಉನ್ನತ ಹುದ್ದೆಯನ್ನೇರಿದ ವಿದ್ಯಾರ್ಥಿಗಳು ತಮ್ಮ ಗುರು ವೃಂದ ಸಂಕಷ್ಟದಲ್ಲಿದೆ ಎಂಬುದನ್ನು ಅರಿತು ಹಳೆ ವಿದ್ಯಾರ್ಥಿಗಳು ಶಿಕ್ಷಕ ದಿನಾಚರಣೆಯ ಅಂಗವಾಗಿ 20 ಶಿಕ್ಷಕರಿಗೆ ತಲಾ ಮೂರು ಸಾವಿರದಂತೆ 60 ಸಾವಿರ ರೂ. ಹಣ ನೀಡಿದ್ದಾರೆ. ಈ ಮೂಲಕ ಅರ್ಥಪೂರ್ಣವಾಗಿ ಶಿಕ್ಷಕರ ದಿನವನ್ನು ಆಚರಿಸಿದ್ದಾರೆ.

    ಜಿಲ್ಲೆಯ ಕಡೂರಿನ ಬ್ರೈಟ್ ಫ್ಯೂಚರ್ ಇಂಗ್ಲೀಷ್ ಸ್ಕೂಲಿನ ಹಳೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ. ಕೊರೊನಾ ಕಾಲದಲ್ಲಿ ಕಳೆದ ಐದಾರು ತಿಂಗಳಿಂದ ಖಾಸಗಿ ಶಾಲೆಯ ಶಿಕ್ಷಕರು ತೀವ್ರ ಸಂಕಷ್ಟದಲ್ಲಿದ್ದರು. ಶಾಲಾ ಆಡಳಿತ ಮಂಡಳಿ ಕೂಡ ಸಂಬಳ ನೀಡಲಾಗದೆ ಶಿಕ್ಷಕರಿಗೆ ಅರ್ಧ ಸಂಬಳ ನೀಡಿತ್ತು. ಹೀಗಾಗಿ ಹಳೆ ವಿದ್ಯಾರ್ಥಿಗಳು ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ.

    ಈ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿಗಳು ಅಮೆರಿಕಾ, ಜರ್ಮನಿಯಲ್ಲಿದ್ದಾರೆ. ಕೆಲವರು ವೈದ್ಯರು, ಇಂಜಿನಿಯರ್ ಆಗಿದ್ದಾರೆ. ಇನ್ನೂ ಹಲವರು ವಿವಿಧ ರೀತಿಯ ಉದ್ಯೋಗದಲ್ಲಿದ್ದು, ಆರ್ಥಿಕವಾಗಿ ಸದೃಢವಾಗಿದ್ದಾರೆ. ಉತ್ತಮ ಸ್ಥಾನದಲ್ಲಿರುವ ಸುಮಾರು 30 ವಿದ್ಯಾರ್ಥಿಗಳು ಹಣ ಹಾಕಿ ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ. ಇದೇ ವೇಳೆ ಶಾಲೆಯ ಬೋಧಕೇತರ ವರ್ಗದ 18 ಜನರಿಗೂ ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಾಗ್ರಿಯ ಕಿಟ್ ವಿತರಿಸಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಹಾಗೂ ಗೌರವವನ್ನು ಆಡಳಿತ ಮಂಡಳಿ, ಶಿಕ್ಷಕ ವೃಂದ ಶ್ಲಾಘಿಸಿದೆ.

  • ಡ್ರಗ್ ಮಾಫಿಯಾ ತನಿಖೆ ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ: ಸಿ.ಟಿ.ರವಿ

    ಡ್ರಗ್ ಮಾಫಿಯಾ ತನಿಖೆ ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ: ಸಿ.ಟಿ.ರವಿ

    ಚಿಕ್ಕಮಗಳೂರು: ಡ್ರಗ್ ಮಾಫಿಯಾ ತನಿಖೆ ಚುರುಕುಗೊಂಡಿದ್ದು, ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಬಳಿಕ ಮಾತನಾಡಿದ ಅವರು, ಕೆಲವರು ಇಂತಹ ವ್ಯವಸ್ಥೆ ಜೊತೆ ರಾಜಿ ಮಾಡಿಕೊಂಡು ಈ ಹಿಂದೆ ರಾಜಕಾರಣ ಮಾಡಿದ್ದಾರೆ. ಅಧಿಕಾರ ನಡೆಸಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದವರಿಗೆ ಓಲೈಸುವ, ಒತ್ತಡ ತರುವ ಕೆಲಸ ಮಾಡಬಹುದು. ಆದರೆ, ಬಿಜೆಪಿ ಇಂತಹವರ ಜೊತೆ ರಾಜಿ ಮಾಡಿಕೊಂಡು ಸರ್ಕಾರ ಮಾಡಿಲ್ಲ. ಹಾಗಾಗಿ ಅವರು ಒತ್ತಡ ತರುವ ಪ್ರಶ್ನೆ ಇಲ್ಲ. ಒಂದು ವೇಳೆ ಒತ್ತಡವಿದ್ದಿದ್ದರೆ ಇಷ್ಟು ಸಮಗ್ರ ತನಿಖೆಯೂ ನಡೆಯುತ್ತಿರಲಿಲ್ಲ.

    ರಾಜ್ಯದ ಇತಿಹಾಸದಲ್ಲಿ ಡ್ರಗ್ ಕೇಸ್ ಹೊಸದಲ್ಲ. ಆದರೆ ಇಷ್ಟು ಗಂಭೀರವಾಗಿರುವುದು ಇದೇ ಮೊದಲು. ಈಗ ತನಿಖೆ ನಡೆಯುತ್ತಿದೆ. ತನಿಖೆಯ ಎಳೆ ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ. ಆಗ ಎಲ್ಲ ವಿಷಯವೂ ಹೊರಬರುತ್ತೆ. ಅಲ್ಲಿವರೆಗೂ ಕಾಯಬೇಕು. ಸಾಂದರ್ಭಿಕ ಸಾಕ್ಷಿಯಲ್ಲಿ ನಟಿ ರಾಗಿಣಿ ಮೇಲೆ ಸಂಶಯ ಬಂದು ತನಿಖೆ ನಡೆಯುತ್ತಿದೆ. ಅವರಿಗೆ ನೇರವಾಗಿ ಪಕ್ಷದ ಯಾವುದೇ ಜವಾಬ್ದಾರಿ ಇಲ್ಲ. ನಟಿಯಾಗಿ ತನ್ನದೇ ಆದ ಸ್ಥಾನ ಪಡೆದಿದ್ದಾರೆ. ಅವರಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

    ಯಾರು ತಪ್ಪು ಮಾಡಿದ್ದರೂ ನಮ್ಮ ಸರ್ಕಾರ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೆ ಎಂಬುದಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ನಡೆಸುತ್ತಿರುವ ತನಿಖೆಯ ದಾಟಿಯೇ ಸಾಕ್ಷಿ. ಯಾರೇ ಇದ್ದರೂ ಕಾಂಪ್ರಮೈಸ್ ಮಾಡ್ಕೊಂಡು, ಅವರ ಜೊತೆ ಅಡ್ಜಸ್ಟ್‍ಮೆಂಟ್ ಮಾಡಿಕೊಂಡು ರಾಜಕಾರಣ ಮಾಡುವ ಪಕ್ಷ ಬಿಜೆಪಿಯಲ್ಲ. ನಮ್ಮ ಸರ್ಕಾರವೂ ಅಷ್ಟೇ ನಿಷ್ಪಕ್ಷಪಾತವಾದ ತನಿಖೆ ನಡೆಸುತ್ತಿದೆ. ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಹೊಸ ಆಯಾಮಗಳೇನಾದರೂ ಸಿಕ್ಕರೆ ಅದಕ್ಕೆ ತಕ್ಕ ಸಹಕಾರ ಹಾಗೂ ಸಹಾಯವನ್ನು ಕೇಂದ್ರದಿಂದಲೂ ಪಡೆಯಬಹುದು ಎಂದರು.

  • ಸ್ಥಳೀಯರಿಂದ ಶಾಸಕ, ಸಂಸದರಿಗೆ ರಸ್ತೆಯಲ್ಲೇ ತರಾಟೆ- ಹತ್ತೇ ದಿನದಲ್ಲಿ ಆರಂಭವಾಯ್ತು ಸೇತುವೆ ಕಾಮಗಾರಿ

    ಸ್ಥಳೀಯರಿಂದ ಶಾಸಕ, ಸಂಸದರಿಗೆ ರಸ್ತೆಯಲ್ಲೇ ತರಾಟೆ- ಹತ್ತೇ ದಿನದಲ್ಲಿ ಆರಂಭವಾಯ್ತು ಸೇತುವೆ ಕಾಮಗಾರಿ

    ಚಿಕ್ಕಮಗಳೂರು: ಹೇಮಾವತಿ ಅಬ್ಬರಕ್ಕೆ ಸೇತುವೆ ಕೊಚ್ಚಿ ಹೋಗಿ ವರ್ಷ ಕಳೆಯಿತು, ಇಲ್ಲಿಯವರೆಗೂ ಸೇತುವೆ ನಿರ್ಮಿಸಿ ಕೊಟ್ಟಿಲ್ಲ. ನಾವೇ ನಿರ್ಮಿಸಿಕೊಂಡಿದ್ದ ಸೇತುವೆ ಕೂಡ ಕೊಚ್ಚಿ ಹೋಗಿದೆ. ಈಗ ಮತ್ತೆ ಭೇಟಿ ಕೊಡ್ತಿದ್ದೀರಾ ಎಂದು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆಗೆ ಸ್ಥಳಿಯರು ಕ್ಲಾಸ್ ತೆಗೆದುಕೊಂಡಿದ್ದರು. ಇದರ ಫಲವಾಗಿ ಇದೀಗ ಕಾಮಗಾರಿ ಆರಂಭವಾಗಿದೆ.

    ಜನಪ್ರತಿನಿಧಿಗಳಿಗೆ ಸ್ಥಳಿಯರು ರಸ್ತೆ ಮಧ್ಯೆಯೇ ಪಾಠ ಮಾಡಿದ ಫಲವಾಗಿ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಕಳೆದ ವರ್ಷದ ಮಳೆ ಅಬ್ಬರಕ್ಕೆ ಬಂಕೇನಹಳ್ಳಿ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಇದರಿಂದ ನಾಲ್ಕೈದು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ನಂತರ ಸ್ಥಳೀಯರೇ ಹೇಮಾವತಿ ನದಿ ಒಡಲಿಗೆ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು. ಆದರೆ ಆಗಸ್ಟ್ ಮೊದಲ ವಾರದ ಮಳೆ-ಗಾಳಿಗೆ ಸ್ಥಳಿಯರೇ ನಿರ್ಮಿಸಿಕೊಂಡಿದ್ದ ಸೇತುವೆ ಕೂಡ ಕೊಚ್ಚಿ ಹೋಗಿತ್ತು.

    ಇದರಿಂದ ಸ್ಥಳಿಯರು ಮತ್ತಷ್ಟು ಆತಂಕಕ್ಕೀಡಾಗಿದ್ದರು. ಇದೇ ವೇಳೆ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಕುಮಾರಸ್ವಾಮಿ ಸ್ಥಳ ಪರಿಶೀಲನೆಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಪಾಠ ಮಾಡಿದ್ದರು. ಸ್ಥಳೀಯರು ಜನಪ್ರತಿನಧಿಗಳಿಗೆ ತರಾಟೆಗೆ ತೆಗೆದುಕೊಂಡ ಫಲವಾಗಿ ಇಂದು ಬಂಕೇನಹಳ್ಳಿ ಸೇತುವೆಗೆ ತಾತ್ಕಾಲಿಕ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಕಳೆದ ಬಾರಿ ಸೇತುವೆ ಕೊಚ್ಚಿ ಹೋದಾಗ ಸಚಿವರು, ಅಧಿಕಾರಿಗಳು ಮೇಲಿಂದ ಮೇಲೆ ಭೇಟಿ ಕೊಟ್ಟು ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಒಂದು ವರ್ಷವಾದರೂ ಸೇತುವೆ ನಿರ್ಮಾಣವಾಗಿಲ್ಲ ಎಂದು ಸ್ಥಳೀಯರು ಜನನಾಯಕರಿಗೆ ತರಾಟೆಗೆ ತೆಗೆದುಕೊಂಡಿದ್ದರು.

    ಇಂದು ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಇನ್ನೊಂದೆಡೆ ಸೇತುವೆ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಇದರಿಂದ ಬಂಕೇನಹಳ್ಳಿ ಹಾಗೂ ನಾಲ್ಕೈದು ಗ್ರಾಮದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಶಾಶ್ವತ ಸೇತುವೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

  • ಅಮ್ಮನನ್ನು ಕದ್ದ ಕಳ್ಳರು, ಕಾರಿನ ಹಿಂದೆಯೇ ಓಡಿದ ಕರು

    ಅಮ್ಮನನ್ನು ಕದ್ದ ಕಳ್ಳರು, ಕಾರಿನ ಹಿಂದೆಯೇ ಓಡಿದ ಕರು

    ಚಿಕ್ಕಮಗಳೂರು: ದನಗಳ್ಳರು ಹಸುವನ್ನು ಗಾಡಿಗೆ ತುಂಬಿಕೊಂಡು ಹೋಗುವಾಗ ಕರು ಅದೇ ಗಾಡಿಯ ಹಿಂದೆ ಓಡಿ ಹೋಗಿರುವ ಕರುಣಾಜನಕ ಘಟನೆ ನಡೆದಿದೆ.

    ತಾಲೂಕಿನ ತೇಗೂರಿನಲ್ಲಿ ಘಟನೆ ನಡೆದಿದ್ದು, ಅಮ್ಮನನ್ನು ಕದ್ದೊಯ್ದ ಕಳ್ಳರ ಕಾರಿನ ಹಿಂದೆ ಕರು ಓಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೂಕ ಪ್ರಾಣಿಯ ಅಮ್ಮನ ಪ್ರೀತಿ ಅನಾವರಣಗೊಂಡಿದೆ. ತಾಯಿಗಾಗಿ ಕರು ಓಡುವ ದೃಶ್ಯ ಕರುಳು ಹಿಂಡುವಂತಿದೆ. ಅಂಬಾ, ಅಂಬಾ ಎನ್ನು ಸುಮಾರು ದೂರ ಕಾರಿನ ಹಿಂದೆಯೇ ಓಡುತ್ತದೆ. ಆದರೆ ಕಟುಕರು ಮಾತ್ರ ಇದಾವುದನ್ನು ಲೆಕ್ಕಿಸದೆ ಹಸುವನ್ನು ಹೊತ್ತೊಯ್ಯುತ್ತಾರೆ.

    ಮಲೆನಾಡು ಭಾಗದಲ್ಲಿ ದನಗಳ್ಳರ ಹಾವಳಿ ವ್ಯಾಪಕವಾಗಿದೆ. ರಸ್ತೆ ಬದಿಯಲ್ಲಿರುವ ದನಗಳನ್ನು ಕ್ಸೈಲೋ, ಸ್ಕಾರ್ಪಿಯೋ ನಂತಹ ವಾಹನಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಇಷ್ಟು ದಿನ ರಸ್ತೆ ಬದಿಯಲ್ಲಿದ್ದ ದನಗಳನ್ನು ಹೊತ್ತೊಯ್ಯುತ್ತಿದ್ದ ಕಳ್ಳರು, ಇದೀಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳನ್ನೂ ಬಿಡುತ್ತಿಲ್ಲ. ಹೀಗೆ ಮನೆಯ ಪಕ್ಕದಲ್ಲಿ ಕಟ್ಟಿದ್ದ ಹಸುವನ್ನು ಕಳ್ಳರು ಕದ್ದೋಯ್ದಿದ್ದಾರೆ. ಈ ವೇಳೆ ಕರು ಸ್ವಲ್ಪ ದೂರ ಓಡಿ, ನಂತರ ಮೂಕರೋಧನೆ ಅನುಭವಿಸಿದೆ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹಸುವನ್ನ ಗಾಡಿಗೆ ತುಂಬುವ ರೀತಿ ಕೂಡ ಕರುಣೆಯೇ ಇಲ್ಲವೆಂಬಂತಿದೆ. ಕೆಲವರು ಇದೇ ರೀತಿ ಕದಿಯುವ ವೇಳೆ ಸಿಕ್ಕಿ ಬಿದ್ದಿದ್ದರು. ಇನ್ನೂ ಕೆಲವರು ದನವನ್ನು ಕಡಿದು ಮಾಂಸ ಸಾಗಿಸುವಾಗ ಸಿಕ್ಕಿಬಿದ್ದಿದ್ದರು. ಅಲ್ಲದೆ ಗಾಡಿಗಳು ಅಪಘಾತವಾಗಿ ಇನ್ನೂ ಕೆಲವರು ಸಿಕ್ಕಿಬಿದ್ದಿದ್ದಾರೆ. ಇಷ್ಟೆಲ್ಲ ಆದರೂ ಕಳ್ಳತನ ಮಾತ್ರ ಕಡಿಮೆಯಾಗಿಲ್ಲ. ರೈತರ ಹಸುಗಳು ನಿತ್ಯ ಮಾಯವಾಗುತ್ತಿವೆ.

  • ರಂಭಾಪುರಿ ಶ್ರೀಗಳ ಪಾದಪೂಜೆ ಮಾಡಿದ ವಿನಯ್ ಗುರೂಜಿ

    ರಂಭಾಪುರಿ ಶ್ರೀಗಳ ಪಾದಪೂಜೆ ಮಾಡಿದ ವಿನಯ್ ಗುರೂಜಿ

    – ಶ್ರೀಚಕ್ರವನ್ನ ರೇಣುಕಾಚಾರ್ಯ ಪ್ರತಿಮೆ ಕೆಳಗಿಡಲು ಮನವಿ

    ಚಿಕ್ಕಮಗಳೂರು: ವಿನಯ್ ಗುರುಜಿ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಶ್ರೀಗಳ ಪಾದ ಪೂಜೆ ನೆರವೇರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ವಿನಯ್ ಗುರೂಜಿ, ಪಂಚಪೀಠಗಳಲ್ಲಿ ಮೊದಲನೇ ಪೀಠವಾದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪಠದ ಶ್ರೀಗಳ ಪಾದಪೂಜೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದ ವಿನಯ್ ಗುರೂಜಿ, ರಂಭಾಪುರಿ ಶ್ರೀಗಳಾದ ಶ್ರೀ ವೀರ ಸೋಮೇಶ್ವರ ಸ್ವಾಮೀಜಿ ಪಾದಪೂಜೆ ಮಾಡಿ ಪುಷ್ಪಾರ್ಚನೆ ಗೈದಿದ್ದಾರೆ.

    ವಿನಯ್ ಗುರೂಜಿ ಇತ್ತೀಚಿಗೆ ಕಾಶಿಗೆ ಹೋಗಿ ಬಂದಿದ್ದರು. ಆಗ ಅಲ್ಲಿಂದ ಶ್ರೀಚಕ್ರ ತಂದಿದ್ದರು. ಅದನ್ನು ರಂಭಾಪುರಿ ಪೀಠಕ್ಕೆ ನೀಡಬೇಕೆಂದು ವಿನಯ್ ಗುರೂಜಿಗೆ ಅವರ ಗುರುಗಳ ಆಜ್ಞೆಯಾಗಿತ್ತಂತೆ. ಈ ಹಿನ್ನೆಲೆ ಇಂದು ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಶ್ರೀಗಳಿಗೆ ಪಾದಪೂಜೆ ಮಾಡಿ, ಪುಷ್ಪಾರ್ಚನೆ ಮಾಡಿ, ಶ್ರೀ ಚಕ್ರ ನೀಡಿದ್ದಾರೆ.

    ಪ್ರತಿಮೆ ಕೆಳಗೆ ಶ್ರೀಚಕ್ರ ಇಡುವಂತೆ ಮನವಿ: ಇತ್ತೀಚೆಗೆ ಕಾಶಿಗೆ ಹೋಗಿದ್ದ ವಿನಯ್ ಗುರೂಜಿ, ಎರಡು ಶ್ರೀಚಕ್ರಗಳನ್ನು ತಂದಿದ್ದರು. ಅದರಲ್ಲಿ ಒಂದನ್ನು ರಂಭಾಪುರಿ ಪೀಠಕ್ಕೆ ನೀಡಿದ್ದು, ಶೀಘ್ರದಲ್ಲೇ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯರ 61 ಅಡಿ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ. ಆ ಪ್ರತಿಮೆ ಕೆಳಗೆ ಶ್ರೀಚಕ್ರ ಇಡುವಂತೆ ವಿನಯ್ ಗುರೂಜಿ ರಂಭಾಪುರಿ ಶ್ರೀಗಳಿಗೆ ಮನವಿ ಮಾಡಿದ್ದಾರೆ. ಇಂದು ಬೆಳಗ್ಗೆ ರಂಭಾಪುರಿ ಪೀಠಕ್ಕೆ ಆಗಮಿಸಿದ ವಿನಯ್ ಗುರೂಜಿ, ಕ್ಷೇತ್ರನಾಥ ವೀರಭದ್ರ ಸ್ವಾಮಿಗೆ ತಾವೇ ಪೂಜೆ ಮಾಡಿ, ದರ್ಶನ ಪಡೆದಿದ್ದಾರೆ. ಮಠದ ಆವರಣದಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಳೆದು, ರಂಭಾಪುರಿ ಶ್ರೀಗಳ ಜೊತೆಯೂ ದೀರ್ಘ ಸಮಾಲೋಚನೆ ನಡೆಸಿದ್ದಾರೆ.

    ರಾಜಕಾರಣಿಗಳು ವಿನಯ್ ಗುರೂಜಿ ಪರಮ ಭಕ್ತರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶ್ರೀನಿವಾಸಪುರ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಕುಮಾರ್ ವಿನಯ್ ಗುರೂಜಿಯವರ ಪರಮ ಭಕ್ತರು ಹಾಗೂ ಈ ಹಿಂದೆ ವಿನಯ್ ಗುರೂಜಿಗೆ ಪಾದಪೂಜೆ ಸಹ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶೃಂಗೇರಿ ಶಾರದಾಂಬೆ ಹಾಗೂ ಕಿಗ್ಗಾ ಋಶ್ಯಶೃಂಗೇಶ್ವರನ ದೇವಾಲಯಕ್ಕೆ ಬಂದಾಗ ವಿನಯ್ ಗುರೂಜಿಯನ್ನು ಭೇಟಿ ಮಾಡದೆ ಹೋಗುವುದಿಲ್ಲ. ಇವರಷ್ಟೇ ಅಲ್ಲ, ಬಹುತೇಕ ರಾಜಕಾರಣಿಗಳು ವಿನಯ್ ಗುರೂಜಿಯ ಭಕ್ತರಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ವಿನಯ್ ಗುರೂಜಿ ಭಕ್ತರಾಗಿದ್ದು, ಅವರ ಮಠದಲ್ಲೇ ಹೋಮ ಕೂಡ ನಡೆಸಿದ್ದರು.

  • ಜಾಲತಾಣದಲ್ಲಿ ಪೋಸ್ಟ್ ಮಾಡಿದವರು, ಗಲಭೆಕೋರರು, ಇಬ್ಬರ ಮೇಲೂ ಕ್ರಮ ಕೈಗೊಳ್ಳಿ: ಕಾಂಗ್ರೆಸ್ ಶಾಸಕ ರಾಜೇಗೌಡ

    ಜಾಲತಾಣದಲ್ಲಿ ಪೋಸ್ಟ್ ಮಾಡಿದವರು, ಗಲಭೆಕೋರರು, ಇಬ್ಬರ ಮೇಲೂ ಕ್ರಮ ಕೈಗೊಳ್ಳಿ: ಕಾಂಗ್ರೆಸ್ ಶಾಸಕ ರಾಜೇಗೌಡ

    ಚಿಕ್ಕಮಗಳೂರು: ಗಲಭೆಯನ್ನು ಸಹಿಸುವುದಿಲ್ಲ ಬೆಂಗಳೂರು ಗಲಭೆಗೆ ಯಾರೇ ಕಾರಣಕರ್ತರಾದರೂ ಸೂಕ್ತ ಕ್ರಮಕೈಗೊಳ್ಳಬೇಕು. ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಆಗ್ರಹಿಸಿದ್ದಾರೆ.

    ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಈ ಘಟನೆಯನ್ನು ಅತ್ಯಂತ ಕಠಿಣ ಹಾಗೂ ತೀವ್ರ ಪದಗಳಿಂದ ಖಂಡಿಸುತ್ತೇನೆ. ಯಾವುದೇ ಜಾತಿ-ಧರ್ಮ ಇರುಬಹುದು. ಯಾವುದೇ ಧಾರ್ಮಿಕ ನಂಬಿಕೆ ಹಾಗೂ ಗುರುಗಳ ಮೇಲೆ ಹಗುರುವಾದ ಹೇಳಿಕೆಗಳನ್ನ ಕೊಡುವುದನ್ನ ಮೊದಲು ಎಲ್ಲ ಸಮುದಾಯದವರು ನಿಲ್ಲಿಸಬೇಕು. ಆಗ ಮಾತ್ರ ಈ ರೀತಿಯ ಭಾವನಾತ್ಮಕ ಘಟನೆಗಳು ನಡೆಯುವುದಿಲ್ಲ ಎಂದರು.

    ಈ ಘಟನೆ ತಪ್ಪು. ನ್ಯಾಯ ಕೇಳಲು ಕೋರ್ಟ್, ಕಾನೂನು, ಪೊಲೀಸ್ ವ್ಯವಸ್ಥೆ ಇದೆ. ದೂರು ನೀಡಿ ನ್ಯಾಯ ಕೇಳಬೇಕು. ಈ ರೀತಿ ದೌರ್ಜನ್ಯ, ಗಲಭೆ ಒಳ್ಳೆಯದಲ್ಲ ಇದನ್ನ ಯಾರೂ ಸಹಿಸಲ್ಲ. ಇದನ್ನು ಯಾರೂ ಒಪ್ಪುವುದಿಲ್ಲ. ಯಾರೋ ಶಾಸಕರ ಸಂಬಂಧಿ ಏನೋ ಹೇಳಿಕೆ ಕೊಟ್ಟನೆಂದು ದಾಂದಲೆ ತರವಲ್ಲ ಎಂದು ಗಲಭೆಕೋರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಘಟನೆ ಕುರಿತು ಸರ್ಕಾರ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಹೇಳಿಕೆ ಕೊಟ್ಟವನ ಮೇಲೂ ಕ್ರಮವಾಗಬೇಕು ಎಂದಿದ್ದಾರೆ. ಇಂತಹ ಘಟನೆಯಲ್ಲಿ ಅಮಾಯಕರಿಗೆ ಹೊಡೆತ ಬೀಳುತ್ತೆ. ಆದ್ದರಿಂದ ಗಲಭೆಗೆ ಕಾರಣಕರ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

  • ವೈದ್ಯ, ನರ್ಸ್ ಕಾವಲಿನಲ್ಲಿ ಸಿಇಟಿ ಬರೆದ ಸೋಂಕಿತ ವಿದ್ಯಾರ್ಥಿ

    ವೈದ್ಯ, ನರ್ಸ್ ಕಾವಲಿನಲ್ಲಿ ಸಿಇಟಿ ಬರೆದ ಸೋಂಕಿತ ವಿದ್ಯಾರ್ಥಿ

    ಚಿಕ್ಕಮಗಳೂರು: ವೈದ್ಯ ಹಾಗೂ ನರ್ಸ್ ಕಾವಲಿನ ಮಧ್ಯೆ ಕೊರೊನಾ ಸೋಂಕಿತ ವಿದ್ಯಾರ್ಥಿ ಪ್ರತ್ಯೇಕ ಕೊಠಡಿಯಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ವಿದ್ಯಾರ್ಥಿಗೆ ಬುಧವಾರ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಜಿಲ್ಲಾಡಳಿತ ವಿದ್ಯಾರ್ಥಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತ್ತು. ವಿದ್ಯಾರ್ಥಿಗೆ ಕೊರೊನಾ ಲಕ್ಷಣಗಳು ತೀರಾ ಕಡಿಮೆ ಇದ್ದ ಕಾರಣ ಹೋಮ್ ಐಸೋಲೇಷನ್‍ನಲ್ಲಿ ಚಿಕಿತ್ಸೆಗೆ ಅವಕಾಶ ನೀಡಲಾಗಿತ್ತು. ಇಂದು ಬೆಳಗ್ಗೆ ಅರ್ಧ ಗಂಟೆ ಮುಂಚಿತವಾಗಿ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆ ತರಲಾಗಿದೆ.

    ಮೂಡಿಗೆರೆ ತಾಲೂಕಿನ ಹಳ್ಳಿಯಿಂದ ಪ್ರತ್ಯೇಕ ಅಂಬುಲೆನ್ಸ್ ನಲ್ಲಿ ಓರ್ವ ನರ್ಸ್ ಜೊತೆ ಚಿಕ್ಕಮಗಳೂರಿಗೆ ಕರೆತರಲಾಗಿದೆ. ಚಿಕ್ಕಮಗಳೂರು ನಗರದ ಮಧುವನ ಲೇ ಔಟ್‍ನಲ್ಲಿನ ಕೆಎಸ್‍ಓಯು ಕಟ್ಟಡದಲ್ಲಿರುವ ಕೋವಿಡ್-19 ಸೆಂಟರ್‍ನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿ ಪರೀಕ್ಷೆ ಬರೆಯುವ ವೇಳೆ ಆತನ ಜೊತೆ ಓರ್ವ ವೈದ್ಯ ಹಾಗೂ ನರ್ಸ್ ಕೂಡ ಇದ್ದರು.

    ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಯನ್ನು ಮತ್ತೆ ಅಂಬುಲೆನ್ಸ್ ನಲ್ಲಿ ಮೂಡಿಗೆರೆ ತಾಲೂಕಿನ ಹಳ್ಳಿಯಲ್ಲಿನ ಆತನ ಮನೆಗೆ ಕಳುಹಿಸಲಾಗಿದೆ. ವಿದ್ಯಾರ್ಥಿಗೆ ನಾಳೆಯೂ ಪರೀಕ್ಷೆ ಇದ್ದು, ನಾಳೆಯೂ ಇದೇ ರೀತಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ವಿದ್ಯಾರ್ಥಿ ಪರೀಕ್ಷೆ ಬರೆಯುವ ವೇಳೆ ವೈದ್ಯ ಹಾಗೂ ನರ್ಸ್ ತೀವ್ರ ನಿಗಾ ವಹಿಸಿಸಿದ್ದರು ಎಂದು ಡಿಡಿಪಿಯು ನಾಗರಾಜ್ ಮಾಹಿತಿ ನೀಡಿದ್ದಾರೆ.

  • ಚಿಕ್ಕಮಗಳೂರಿನಲ್ಲಿ ಇಂದು ಕೊರೊನಾಗೆ ಮೂವರು ಬಲಿ

    ಚಿಕ್ಕಮಗಳೂರಿನಲ್ಲಿ ಇಂದು ಕೊರೊನಾಗೆ ಮೂವರು ಬಲಿ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾಗೆ ಬುಧವಾರ 2, ಗುರುವಾರ 2, ಇಂದು ಶುಕ್ರವಾರ ಮತ್ತೆ 3 ಜನ ಸಾವನ್ನಪ್ಪಿದ್ದಾರೆ.

    ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಜೊತೆ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಜುಲೈ 16ರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಪ್ರತಿದಿನ ಇಪ್ಪತ್ತಕ್ಕಿಂತ ಹೆಚ್ಚಿತ್ತು. ಕಳೆದ ನಾಲ್ಕು ದಿನಗಳಿಂದ ಈಚೆಗೆ 80ರ ಗಡಿ ಮುಟ್ಟಿತ್ತು. ಪ್ರತಿ ದಿನ ಏರುತ್ತಿದ್ದ ಸೋಂಕಿತರ ಸಂಖ್ಯೆ ಕಂಡು ಜಿಲ್ಲೆಯ ಜನ ಆತಂಕಕ್ಕೀಡಾಗಿದ್ದರು. ಆದರೆ ಕಳೆದ ಮೂರು ದಿನಗಳಲ್ಲಿ ಏರುತ್ತಿದ್ದ ಸೋಂಕಿತರ ಸಂಖ್ಯೆಗೆ ತಕ್ಕಂತೆ ಕ್ರೂರಿ ಕೊರೊನಾಗೆ ಏಳು ಜನ ಪ್ರಾಣ ಕಳೆದುಕೊಂಡಿರುವುದು ಜಿಲ್ಲೆಯ ಜನರನ್ನ ಚಿಂತೆಗೆ ದೂಡಿದೆ.

    ಜಿಲ್ಲೆಯಲ್ಲಿ ಪ್ರತಿದಿನ ಕರೊನಾ ಸೋಂಕಿನಿಂದ ಒಬ್ಬರು ಅಥವಾ ಇಬ್ಬರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದು 28 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚಿಕ್ಕಮಗಳೂರಿನಲ್ಲಿ 18, ಕಡೂರಿನಲ್ಲಿ 8 ಹಾಗೂ ಮೂಡಿಗೆರೆಯಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೀಗೆ ಎರಡಂಕಿಯಲ್ಲಿ ಏರಿಕೆಯಾಗುತ್ತಿದ್ದು, ಜಿಲ್ಲೆಯ ಜನ ಆತಂಕದಿಂದ ಬದುಕುವಂತಾಗಿದೆ.

    ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 574ಕ್ಕೆ ಏರಿದ್ದು, ಒಟ್ಟು 243 ಸಕ್ರಿಯ ಪ್ರಕರಣಗಳಿವೆ, ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ ಮೂರು ಸಾವು ಸೇರಿದಂತೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿದೆ.

  • ಚಿಕ್ಕಮಗಳೂರಲ್ಲಿ ಒಂದೇ ದಿನ 68 ಕೊರೊನಾ ಪ್ರಕರಣ, 400ರ ಗಡಿ ದಾಟಿದ ಸೋಂಕಿತರ ಸಂಖ್ಯೆ

    ಚಿಕ್ಕಮಗಳೂರಲ್ಲಿ ಒಂದೇ ದಿನ 68 ಕೊರೊನಾ ಪ್ರಕರಣ, 400ರ ಗಡಿ ದಾಟಿದ ಸೋಂಕಿತರ ಸಂಖ್ಯೆ

    – 55 ದಿನಕ್ಕೆ 168 ಪ್ರಕರಣಗಳು, ದಿನಕ್ಕೆ 234 ಆತಂಕದಲ್ಲಿ ಕಾಫಿ ನಾಡು

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ 5 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಮೂವತ್ತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಜಿಲ್ಲೆಯ ಜನ ಆತಂಕಕ್ಕೀಡಾಗಿದ್ದಾರೆ. ಇಂದು ಒಂದೇ ದಿನ 68 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

    ಇಂದಿನ 68 ಪ್ರಕರಣಗಳ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 402ಕ್ಕೆ ಏರಿದೆ. ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಚಿಕ್ಕಮಗಳೂರಿನಲ್ಲಿ 17, ಕಡೂರು 18, ಶೃಂಗೇರಿ 8, ಕೊಪ್ಪ 7, ಮೂಡಿಗೆರೆ 6, ಎನ್.ಆರ್.ಪುರ 7, ಅಜ್ಜಂಪುರ 3, ತರೀಕೆರೆಯಲ್ಲಿ 2 ಪ್ರಕರಣ ಪತ್ತೆಯಾಗಿವೆ. ಇದರಿಂದಾಗಿ ಜನ ಕಂಗಾಲಾಗಿದ್ದಾರೆ.

    ಪ್ರಮುಖವಾಗಿ ಕಳೆದ ಆರು ದಿನಗಳಲ್ಲಿ 234 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಜಿಲ್ಲೆಯಲ್ಲಿ ಒಂದೂ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ ಮೇ 19ರಿಂದ ಆರಂಭವಾದ ಸೋಂಕಿತರ ಸಂಖ್ಯೆ ಜುಲೈ 15ಕ್ಕೆ 158 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಜುಲೈ16 ಬಳಿಕ ಆರೇ ದಿನಕ್ಕೆ 234 ಪ್ರಕರಣಗಳು ಪತ್ತೆಯಾಗಿವೆ.

    ಈ 234 ಪ್ರಕರಣಗಳಲ್ಲಿ ಸುಮಾರು 50 ರಿಂದ 60 ಪ್ರಕಣರಗಳಿಗೆ ಟ್ರಾವೆಲ್ಸ್ ಹಿಸ್ಟರಿ ಇಲ್ಲ. ಶೀತ, ಕೆಮ್ಮು, ಜ್ವರ ಎಂದು ಆಸ್ಪತ್ರೆಗೆ ಹೋದವರಿಗೆ ಕರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

  • ಚಿಕ್ಕಮಗಳೂರಿನಲ್ಲಿ ಇಬ್ಬರು ಸಾವು, 41 ಕೊರೊನಾ ಪ್ರಕರಣಗಳು ಪತ್ತೆ

    ಚಿಕ್ಕಮಗಳೂರಿನಲ್ಲಿ ಇಬ್ಬರು ಸಾವು, 41 ಕೊರೊನಾ ಪ್ರಕರಣಗಳು ಪತ್ತೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 41 ಪಾಸಿಟಿವ್ ಪ್ರಕರಣಗಳು ಸೇರಿದಂತೆ 2 ಸಾವು ಸಂಭವಿಸಿರುವುದು ಜಿಲ್ಲೆಯ ಜನರ ನಿದ್ದೆಗಡಿಸಿದೆ.

    ಚಿಕ್ಕಮಗಳೂರು 18, ಶೃಂಗೇರಿ 11, ಕೊಪ್ಪ, ಎನ್.ಆರ್.ಪುರ, ಕಡೂರು, ತರೀಕೆರೆಯಲ್ಲಿ ತಲಾ 3 ಪ್ರಕರಣಗಳು ಪತ್ತೆಯಾಗಿದ್ದು, ಈ 41 ಪ್ರಕರಣಗಳು ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ. ನಾಲ್ಕು ದಿನದ ಹಿಂದೆ 168 ಪ್ರಕರಣಗದ್ದ ಜಿಲ್ಲೆಯಲ್ಲಿ ಇಂದು ಸೋಂಕಿತರ ಸಂಖ್ಯೆ 291ಕ್ಕೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ 30-40 ಪ್ರಕರಣಗಳು ಕಂಡುಬರುತ್ತಿದ್ದು, ಜಿಲ್ಲೆಯ ಜನ ಕರೊನಾದಿಂದ ಕಂಗಾಲಾಗಿದ್ದಾರೆ.

    ಕಳೆದ 4 ದಿನಗಳಲ್ಲಿ 124 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಜನ ಕಂಗಾಲಾಗಿದ್ದಾರೆ. 124 ಪ್ರಕರಣಗಳಲ್ಲಿ ಸುಮಾರು 40ಕ್ಕೂ ಅಧಿಕ ಪ್ರಕರಣಗಳಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಶೀತ, ಕೆಮ್ಮು, ಜ್ವರ ಎಂದು ಆಸ್ಪತ್ರೆಗೆ ಹೋದವರಿಗೆಲ್ಲ ಕರೊನಾ ಪಾಸಿಟಿವ್ ಬಂದಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

    ಇಂದು 2 ಸಾವು: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು. ಈ ವರೆಗೆ ಒಟ್ಟು 9 ಜನರನ್ನು ಬಲಿ ಪಡೆದುಕೊಂಡಿದೆ. ಚಿಕ್ಕಮಗಳೂರಿನ ನಗರಸಭಾ ಮಾಜಿ ಅಧ್ಯಕ್ಷ 72 ವರ್ಷದ ವೃದ್ಧ ಸೋಂಕಿಗೆ ಬಲಿಯಾಗಿದ್ದಾರೆ. ಮೃತರು ಸಕ್ಕರೆ ಖಾಯಿಲೆ, ಬಿಪಿ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕೊಪ್ಪದ ಬಾಳಗಡಿಯ 70 ವರ್ಷದ ವೃದ್ಧೆ ಕೂಡ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕರೊನಾಗೆ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.