Tag: Chikkamagalur

  • ಕಲ್ಲುಕಂಬಕ್ಕೆ ಕಾರ್ ಡಿಕ್ಕಿ- ಓರ್ವ ಸಾವು, ಇಬ್ಬರಿಗೆ ಗಾಯ

    ಕಲ್ಲುಕಂಬಕ್ಕೆ ಕಾರ್ ಡಿಕ್ಕಿ- ಓರ್ವ ಸಾವು, ಇಬ್ಬರಿಗೆ ಗಾಯ

    ಚಿಕ್ಕಮಗಳೂರು: ಕೆರೆ ಏರಿಯ ಬದಿಯಲ್ಲಿದ್ದ ಕಲ್ಲುಕಂಬಕ್ಕೆ ಕಾರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಅಂತರಗಟ್ಟೆ ಗ್ರಾಮದ ಬಳಿ ನಡೆದಿದೆ.

    ಶನಿವಾರ ರಾತ್ರಿ ಅಜ್ಜಂಪುರದಿಂದ ಕಡೂರಿಗೆ ಬರುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಮೂವರು ಯುವಕರಲ್ಲಿ 21 ವರ್ಷದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರೋ ಇಬ್ಬರನ್ನ ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ಮದ್ಯ ಸೇವಿಸಿದ್ದರು ಎಂದು ಹೇಳಲಾಗುತ್ತಿದೆ.

    ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಸ್ಪೆಷಲ್ ಕ್ಲಾಸ್ ನೆಪದಲ್ಲಿ ಪ್ರಿನ್ಸಿಪಾಲ್‍ನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

    ಸ್ಪೆಷಲ್ ಕ್ಲಾಸ್ ನೆಪದಲ್ಲಿ ಪ್ರಿನ್ಸಿಪಾಲ್‍ನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

    – ನೊಂದ ವಿದ್ಯಾರ್ಥಿನಿ ಎಸ್‍ಪಿ ಅಣ್ಣಾಮಲೈಗೆ ದೂರು

    ಚಿಕ್ಕಮಗಳೂರು: ಕಾಲೇಜು ಪ್ರಿನ್ಸಿಪಾಲ್ ನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಚಿಕ್ಕಮಗಳೂರು ನಗರದ ಪಿಯು ಕಾಲೇಜುವೊಂದರ ಪ್ರಿನ್ಸಿಪಾಲ್ ಪರಮೇಶ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನೊಂದ ವಿದ್ಯಾರ್ಥಿನಿ ಎಸ್‍ಪಿ ಅಣ್ಣಾಮಲೈ ಅವರಿಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ.

    ಆರೋಪಿ ಪರಮೇಶ್ ಈ ಹಿಂದೆಯು ಕೂಡ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌಜನ್ಯ ಕುರಿತಂತೆ ಪ್ರಕರಣ ದಾಖಲಾಗಿತ್ತು. ಪರಮೇಶ್ 3-4 ವರ್ಷಗಳ ಹಿಂದೆ ಹೆಂಡತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದಾನೆ. ಈಗ ತಮ್ಮ ಕಾಲೇಜಿನಲ್ಲಿ ಓದುತ್ತಿದ್ದ ಪಿಯುಸಿ ವಿದ್ಯಾರ್ಥಿನಿಗೆ ಈದ್ ಮಿಲಾದ್ ಹಬ್ಬದ ದಿನ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಕಾಲೇಜಿಗೆ ಕರೆಸಿಕೊಂಡಿದ್ದಾನೆ.

    ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿನಿ ಒಬ್ಬಳೆ ಇದುದ್ದರಿಂದ ಆರೋಪಿ ಪರಮೇಶ್ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌಜನ್ಯ ಎಸಗಿದ್ದಾನೆ. ನಂತರ ವಿದ್ಯಾರ್ಥಿನಿ ಎಸ್‍ಪಿ ಅಣ್ಣಾಮಲೈಗೆ ಕರೆ ಮಾಡಿ ದೂರು ನೀಡಿದ್ದಾರೆ.  ಎಸ್‍ಪಿ ವಿದ್ಯಾರ್ಥಿನಿ ಜೊತೆ ಮಾತನಾಡಿ ವಿಚಾರ ತಿಳಿದುಕೊಂಡು ಬಳಿಕ ಚಿಕ್ಕಮಗಳೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೊಡಿಸಿದ್ದಾರೆ.

    ಮಹಿಳಾ ಪೊಲೀಸರು ಆರೋಪಿ ಪರಮೇಶ್ ನನ್ನು ಬಂಧಿಸಿ, ಆತನ ವಿರುದ್ಧ 354, 376, 511 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.

  • ಕಾರು ಹರಿದು 65ರ ಪಾದಚಾರಿ ಸಾವು- ಪರಾರಿಯಾಗಲೆತ್ನಿಸಿದ ಚಾಲಕನನ್ನ ಫಾಲೋ ಮಾಡಿ ಹಿಡಿದ ಸ್ಥಳೀಯರು

    ಕಾರು ಹರಿದು 65ರ ಪಾದಚಾರಿ ಸಾವು- ಪರಾರಿಯಾಗಲೆತ್ನಿಸಿದ ಚಾಲಕನನ್ನ ಫಾಲೋ ಮಾಡಿ ಹಿಡಿದ ಸ್ಥಳೀಯರು

    ಚಿಕ್ಕಮಗಳೂರು: ಕಾರು ಹರಿದ ಪರಿಣಾಮ ಪಾದಚಾರಿಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ನಗರದ ರಾಮನಹಳ್ಳಿಯಲ್ಲಿ ನಡೆದಿದೆ.

    65 ವರ್ಷದ ಹಾಲಪ್ಪ ಮೃತ ದುರ್ದೈವಿ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತ ಮಾಡಿದ ಕಾರು ಚಾಲಕ ಕಾರನ್ನ ನಿಲ್ಲಿಸದೇ ಹೋಗುತ್ತಿದ್ದ. ಕೂಡಲೇ ಸ್ಥಳೀಯರು ಕಾರನ್ನ ಫಾಲೋ ಮಾಡಿ ಅಡ್ಡಗಟ್ಟಿ ಕಾರು ಚಾಲಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ ಆಕ್ರೋಶಕ್ಕೊಳಗಾದ ಸ್ಥಳೀಯರು ಕಾರಿನ ಗಾಜನ್ನ ಪುಡಿ ಮಾಡಿದ್ದಾರೆ.

    ಈ ಬಗ್ಗೆ ರಾಮನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೇಸ್ಬುಕ್ ಪೋಸ್ಟ್ ನಿಂದಾಗಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ- ಆಸ್ಪತ್ರೆಗೆ ದಾಖಲು

    ಪೇಸ್ಬುಕ್ ಪೋಸ್ಟ್ ನಿಂದಾಗಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ- ಆಸ್ಪತ್ರೆಗೆ ದಾಖಲು

    ಚಿಕ್ಕಮಗಳೂರು: ಫೇಸ್ ಬುಕ್ ನಲ್ಲಿ ಬರೆದ ಸಂದೇಶದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿ ಮುಂಭಾಗವೇ ಬಿಜೆಪಿ ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆ ನಡೆಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

    ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಬಿಜೆಪಿ ಕಾರ್ಯಕರ್ತ ರಾಕೇಶ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗಾಯಾಳು ರಾಕೇಶ್ ತನ್ನ ಫೇಸ್ ಬುಕ್ ನಲ್ಲಿ `ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರೇ, ಬೂತ್ ಮಟ್ಟದ ಕಾರ್ಯಕರ್ತರಾಗಿದ್ದ ನೀವು ಬಿಜೆಪಿಗೆ ಬಂದ ಮೂರೇ ತಿಂಗಳಲ್ಲಿ ಎಲ್ಲಾ ಅಧಿಕಾರ ಅನುಭವಿಸಿ ಇದೀಗ ಮತ್ತೆ ಕಾಂಗ್ರೆಸ್ ಸೇರಿ, ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದೀರಾ ಎಂದು ಸಂದೇಶ ಹಾಕಿದ್ದರು. ಈ ಪೋಸ್ಟ್ ನೋಡಿದ ಕಾಂಗ್ರೆಸ್ ಕಾರ್ಯಕರ್ತ ರವೀಂದ್ರ, ಬಿಜೆಪಿ ಕಚೇರಿ ಮುಂಭಾಗದಲ್ಲೇ ರಾಕೇಶ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೇಳಲಾಗ್ತಿದೆ.

    ಎರಡೂ ಪಕ್ಷದ ಕಾರ್ಯಕರ್ತರ ಮಾತಿನ ಚಕಮಕಿ ಜೋರಾಗಿ ಕೈ-ಕೈ ಮಿಲಾಯಿಸುವ ಹಂತ ತಲುಪಿದಾಗ ಪರಿಸ್ಥಿತಿಯನ್ನ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಲಾಠಿ ಪ್ರಹಾರದ ವೇಳೆ ಮತ್ತಿಬ್ಬರು ಕಾರ್ಯಕರ್ತರಿಗೂ ಕೂಡ ಗಾಯಗಳಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕೊಪ್ಪ ಠಾಣೆ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

  • ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ 30 ಲಕ್ಷ ರೂ. ಸುಪಾರಿ- ಪತ್ನಿ ಸುಚಿತಾ ಪ್ರತಿಕ್ರಿಯಿಸಿದ್ದು ಹೀಗೆ

    ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ 30 ಲಕ್ಷ ರೂ. ಸುಪಾರಿ- ಪತ್ನಿ ಸುಚಿತಾ ಪ್ರತಿಕ್ರಿಯಿಸಿದ್ದು ಹೀಗೆ

    ಚಿಕ್ಕಮಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ರವಿಬೆಳಗೆರೆ ಅವರು ನೀಡಿದ ಸುಪಾರಿ ಪ್ರಕರಣ ಸಂಬಂಧ ಸುನಿಲ್ ಪತ್ನಿ ಸುಚಿತಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದು, ವಿಷಯ ಕೇಳಿ ನನಗೆ ಶಾಕ್ ಆಗಿದೆ ಎಂದು ಹೇಳಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಗ್ಗರವಳ್ಳಿಯಲ್ಲಿ ಮಾತಾನಾಡಿದ ಸುಚಿತಾ, ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ನನಗೆ ವಿಷಯ ತಿಳಿಯಿತು. ನೋಡಿದ ತಕ್ಷಣ ನಮಗೆ ಭಯ ಆಯಿತು. ಅಷ್ಟೇ ಅಲ್ಲದೇ ಇದನ್ನು ಕೇಳಿ ತುಂಬಾ ನೋವಾಗುತ್ತಿದೆ. ಮಗನ ತರ ಸಾಕಿ, ಆಶ್ರಯ ಕೊಟ್ಟು ಈ ರೀತಿ ಮಾಡಿದ್ದಾರೆ. 14 ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಬೇರೆಕಡೆ ಹೋಗಿಲ್ಲ. ಆದರೂ ಇಷ್ಟು ದೊಡ್ಡ ವ್ಯಕ್ತಿ ಜೊತೆಲಿದ್ದು, ಸುಪಾರಿ ಕೊಟ್ಟು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ನೋವಿನಿಂದ ಹೇಳಿದ್ದಾರೆ.

    ನಮಗೆ ಇನ್ನು ಜೀವ ಭಯ ಇದೆ. ಮುಂದೆ ಏನು ಮಾಡ್ತಾರೋ ಗೊತ್ತಿಲ್ಲ. ಸುಪಾರಿ ಕೊಟ್ಟು ಮಾಡಿದ್ದಾರೆ ಅಂದ್ರೆ ಇದನ್ನು ನಿಲ್ಲಿಸಲ್ಲ. ಆದ್ದರಿಂದ ರಾಜ್ಯ ಸರ್ಕಾರ ನಮಗೆ, ಮನೆಗೆ, ನನ್ನ ಗಂಡನಿಗೂ ರಕ್ಷಣೆ ಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

    ಹತ್ಯೆಗೆ ಯಾವುದೇ ಸಂಬಂಧ ಇಲ್ಲ. ಯಾಕೆಂದರೆ 2013 ರಲ್ಲಿ ಅವರನ್ನು ಎಂಡಿ ಆಗಿ ಹಾಯ್ ಬೆಂಗಳೂರು ಆಫಿಸ್‍ಗೆ ತಂದ್ರು. ಇವರು ಮ್ಯಾನೇಜರ್ ಆದ್ಮೇಲೆ ಆಫಿಸ್‍ಗೆ ವಾರದಲ್ಲಿ ಎರಡು ಬಾರಿ ಹೋಗಿ ಎಲ್ಲನೂ ಫೈನಲ್ ಮಾಡುತ್ತಿದ್ದರು. ಎಂಡಿ ಆಗಿ ಎಲ್ಲರಿಗೂ ಫೋನ್ ಮಾಡಿ ವಿಷಯವನ್ನು ತಿಳಿದುಕೊಳ್ಳಬೇಕು. ಆದ್ದರಿಂದ ಫೋನ್ ಮಾಡುತ್ತಿದ್ದರು.  ಈ ವಿಚಾರವನ್ನಿಟ್ಟುಕೊಂಡು ಅಕ್ರಮ ಸಂಬಂಧ ಇದೆ ಎಂದು ಈ ರೀತಿ ಮಾಡುವುದು ತಪ್ಪು ಎಂದು ಹೇಳಿದ್ದಾರೆ.

    ಇದೇ ವೇಳೆ ಮಾತನಾಡಿದ ಸುನೀಲ್ ಹೆಗ್ಗರವಳ್ಳಿ ಸಹೋದರ ಪರಮೇಶ್, 15 ವರ್ಷ ನನ್ನ ತಮ್ಮನನ್ನ ಸಾಕಿ, ಈಗ ಕೊಲೆಗೆ ಸುಪಾರಿ ಕೊಟ್ಟಿರೋದು ನಮಗೆ ತುಂಬಾ ದುಃಖವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.

  • ಕ್ಯಾಮೆರಾದಲ್ಲಿ ಸೆರೆಯಾಯ್ತು ಹುಲಿ ಓಡಾಟ – ಅತಂಕದಲ್ಲಿ ಮೂಡಿಗೆರೆ ಗ್ರಾಮಸ್ಥರು

    ಕ್ಯಾಮೆರಾದಲ್ಲಿ ಸೆರೆಯಾಯ್ತು ಹುಲಿ ಓಡಾಟ – ಅತಂಕದಲ್ಲಿ ಮೂಡಿಗೆರೆ ಗ್ರಾಮಸ್ಥರು

    ಚಿಕ್ಕಮಗಳೂರು: ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಹುಲಿ ಸಂಚರಿಸುವ ದೃಶ್ಯಗಳು ಸೆರೆಯಾಗಿದ್ದು, ಹುಲಿರಾಯನ ಭಯದಿಂದಲೇ ಮೂಡಿಗೆರೆಯ ಉದುಸೆ ಗ್ರಾಮದ ಜನರು ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.

    ಕಳೆದ ನಾಲ್ಕು ದಿನಗಳ ಹಿಂದೆ ಜಿಲ್ಲೆಯ ಉದುಸೆ ಗ್ರಾಮದಲ್ಲಿ ಹುಲಿ ಬಾಯಿಗೆ ಎರಡು ಹಸು ಒಂದು ಕರು ಬಲಿಯಾಗಿದೆ. ಜೀವನಕ್ಕೆ ಆಧಾರವಾಗಿದ್ದ ಹಸು ಕಳೆದಕೊಂಡ ರೈತರ ಗೋಳು ಹೇಳತೀರಾದಾಗಿದೆ. ಇನ್ನು ಹುಲಿ ಭಯಕ್ಕೆ ತಾಲೂಕಿನ ಚಕ್ಕೊಡಿಗೆ, ಹೆಗ್ಗರವಳ್ಳಿ, ದಿಣ್ಣೆಕೆರೆಯ ಸುತ್ತ ಮುತ್ತಲಿನ ಗ್ರಾಮಸ್ಥರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

    ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಮತ್ತೆ ಗ್ರಾಮ ರೈತರೊಬ್ಬರ ಹಸುವನ್ನು ಹುಲಿ ಬೇಟೆಯಾಡಿದೆ. ಹುಲಿ ಕಾಣಿಸಿಕೊಂಡಿರುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಉದುಸೆ ಗ್ರಾಮದ ರವಿ ಎಂಬುವರ ತೋಟದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಇದರಲ್ಲಿ ಹುಲಿ ಸಂಚರಿಸುವ ದೃಶ್ಯಗಳು ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಅತಂಕ ಹೆಚ್ಚಿಸಿದೆ.

    ಈ ಭಾಗದಲ್ಲಿ ಎರಡರಿಂದ ಮೂರು ಹುಲಿಗಳು ಇರುವ ಕುರಿತು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದು, ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಹುಲಿಗಳನ್ನು ಸೆರೆ ಹಿಡಿಯಲು ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಈದ್ ರ‍್ಯಾಲಿಗೆ ಚಾನ್ಸ್, ದತ್ತ ಯಾತ್ರೆಗೆ ಬ್ರೇಕ್ – ಚಿಕ್ಕಮಗ್ಳೂರು ಜಿಲ್ಲಾಡಳಿತದಿಂದ ಇಬ್ಬಗೆ ನೀತಿ

    ಈದ್ ರ‍್ಯಾಲಿಗೆ ಚಾನ್ಸ್, ದತ್ತ ಯಾತ್ರೆಗೆ ಬ್ರೇಕ್ – ಚಿಕ್ಕಮಗ್ಳೂರು ಜಿಲ್ಲಾಡಳಿತದಿಂದ ಇಬ್ಬಗೆ ನೀತಿ

    – ಸರ್ಕಾರದ ವಿರುದ್ಧ ಹಿಂದೂಗಳ ಆಕ್ರೋಶ

    ಚಿಕ್ಕಮಗಳೂರು: ಸದ್ಯದಲ್ಲೇ ಅಯೋಧ್ಯೆಯ ಹೋರಾಟವನ್ನು ನೆನಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಒಂದು ಕಣ್ಣಿಗೆ ಬೆಣ್ಣೆ-ಒಂದು ಕಣ್ಣಿಗೆ ಸುಣ್ಣವೆಂಬ ನೀತಿಯಿಂದ ಹಿಂದೂ ಸಂಘಟಕರಿಗೆ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ.

    ಜಿಲ್ಲಾಡಳಿತ ಸರ್ಕಾರದ ಏಜೆಂಟ್ ನಂತೆ ವರ್ತಿಸುತ್ತಿದೆ ಅಂತಿರೋ ಹಿಂದೂ ಸಂಘಟಕರು, ಡಿಸೆಂಬರ್ 3ರಂದು ದತ್ತಪೀಠದಲ್ಲಿ ನಡೆಯೋದೇ ಬೇರೆ ಎಂದು ಹೇಳುತ್ತಿದ್ದಾರೆ. ಆದರೆ ಇನ್ನೂ 11 ದಿನಗಳ ಕಾಲ ಕಾಫಿನಾಡು ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡ ಎನ್ನುವುದರಲ್ಲಿ ಅನುಮಾನವೇ ಬೇಡ.

    ಸರ್ಕಾರ ಅಲ್ಪಸಂಖ್ಯಾತರ ಮನವೊಲಿಕೆ ಮಾಡ್ತಿದ್ಯಾ? ಹಿಂದೂಗಳ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡ್ತಿದ್ಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿಗೆ ಬಜರಂಗದಳ ಹಾಗೂ ವಿಎಚ್‍ಪಿಯು ಚಾಲನೆ ನೀಡಿದೆ. 200ಕ್ಕೂ ಅಧಿಕ ಕಾರ್ಯಕರ್ತರು ಗುರುವಾರ ಮಾಲಾಧಾರಣೆಯೂ ಮಾಡಿದ್ದಾರೆ. ಆದರೆ ಜಿಲ್ಲಾಡಳಿತ ರಥಯಾತ್ರೆಗೆ ಬ್ರೇಕ್ ಹಾಕಿದೆ. ಈದ್-ಮಿಲಾದ್ ಮೆರವಣಿಗೆಗೆ ಅವಕಾಶ ಕೊಟ್ಟ ಜಿಲ್ಲಾಡಳಿತ ರಥಯಾತ್ರೆಗೆ ಅವಕಾಶ ಕೊಟ್ಟಿಲ್ಲ. ಇದು ಹಿಂದೂ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದ್ದು, ಸರ್ಕಾರಕ್ಕೆ ತಕ್ಕ ಉತ್ತರ ಕೊಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

    ದತ್ತ ಜಯಂತಿ ಅಂಗವಾಗಿ ರಥಯಾತ್ರೆ ಮೂಲಕ ಸಾರ್ವಜನಿಕರಿಗೆ ದತ್ತ ಪೀಠದ ಮಾಹಿತಿ ನೀಡೋದು ಹಿಂದೂ ಸಂಘಟನೆಯ ಉದ್ದೇಶ. ಆದರೆ ಜಿಲ್ಲಾಡಳಿತ ಈದ್-ಮಿಲಾದ್ ಹಬ್ಬದ ನೆಪವೊಡ್ಡಿ ನಮಗೆ ಅನುಮತಿ ನೀಡಿಲ್ಲ. ನಾವು ಮಾಡುತ್ತಿರೋ ಯಾತ್ರೆ ಯಾರ ವಿರುದ್ಧವೂ ಅಲ್ಲ, ರಾಜಕೀಯವೂ ಅಲ್ಲ. ಆದರೆ ಜಿಲ್ಲಾಡಳಿತ ಸರ್ಕಾರದ ಜೊತೆಗೂಡಿ ನಮ್ಮನ್ನ ಹತ್ತಿಕ್ಕಲು ಮುಂದಾಗಿದೆ ಎಂದು ಹಿಂದೂ ಸಂಘಟಕರು ಹೇಳುತ್ತಾರೆ.

    ಒಟ್ಟಿನಲ್ಲಿ ಇನ್ನೂ 11 ದಿನ ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡದಂತಿರುತ್ತೆ. ಈದ್-ಮಿಲಾದ್ ಹಾಗೂ ಬೃಹತ್ ಶೋಭಾಯಾತ್ರೆ ಒಂದೇ ದಿನವಿರೋದ್ರಿಂದ ಪೊಲೀಸರು ಜಿಲ್ಲೆಯಾದ್ಯಂತ ಹದ್ದಿನ ಕಣ್ಣು ಇಟ್ಟಿದ್ದಾರೆ.

  • ಒಬ್ಬರಿಗೆ ಗೊತ್ತಿಲ್ಲದೆ ಒಬ್ಬರು ಮಹಿಳೆಗೆ ದುಡ್ಡು ಕೊಟ್ರು- ಹಣ ಪಡೆದ ಮಹಿಳೆ ರಾತ್ರೋರಾತ್ರಿ ಎಸ್ಕೇಪ್

    ಒಬ್ಬರಿಗೆ ಗೊತ್ತಿಲ್ಲದೆ ಒಬ್ಬರು ಮಹಿಳೆಗೆ ದುಡ್ಡು ಕೊಟ್ರು- ಹಣ ಪಡೆದ ಮಹಿಳೆ ರಾತ್ರೋರಾತ್ರಿ ಎಸ್ಕೇಪ್

    ಚಿಕ್ಕಮಗಳೂರು: ಆಂಜನೇಯ ಬೀದಿಯ ಫಾತಿಮಾಗೆ 2 ಲಕ್ಷದ 55 ಸಾವಿರ, ಮೀನಾಕ್ಷಿಗೆ 75 ಸಾವಿರ ದುಡ್ಡು, 100 ಗ್ರಾಂ ಚಿನ್ನ, ಕಲಾಳಿಗೆ 50 ಸಾವಿರ, ಹೇಮಾಳಿಗೆ ಒಂದುವರೆ ಲಕ್ಷ ಧರ್ಮಸ್ಥಳದ ಮಂಜುನಾಥನಿಗೆ 60 ಸಾವಿರ.. ಇದೇನಿದು, ಇವರೆಲ್ಲಾ ಯಾರು ಅಂತ ಗಾಬರಿಯಾಗ್ಬೇಡಿ. ಇವರೆಲ್ಲಾ ಚಿಕ್ಕಮಗಳೂರಿನ ಆಂಜನೇಯ ಬೀದಿ ಹಾಗೂ ವಲ್ಲಭಾ ಗಣಪತಿ ರಸ್ತೆ ನಿವಾಸಿಗಳು.

    ತಮ್ಮ ಏರಿಯಾದಲ್ಲೇ ತಮ್ಮ ಮನೆ ಪಕ್ಕದಲ್ಲೇ ಹುಟ್ಟಿ ಬೆಳೆದವಳು ಎಂದು ರೇಣುಕಾ ಎಂಬಾಕೆಗೆ ಕೇಳಿದಂತೆಲ್ಲಾ ಒಬ್ಬರಿಗೆ ಗೊತ್ತಿಲ್ಲದೆ ಮತ್ತೊಬ್ಬರು ಎಂಬಂತೆ 20ಕ್ಕೂ ಹೆಚ್ಚು ಮಹಿಳೆಯರು 18 ಲಕ್ಷ ಹಣ ನೀಡಿದ್ದರು. ಹಣ ಕೊಟ್ಟವರಿಗೆಲ್ಲಾ ಚೆಕ್ ನೀಡಿದ್ದ ರೇಣುಕಾ ಇದೀಗ ರಾತ್ರೋರಾತ್ರಿ ಊರು ಬಿಟ್ಟಿದ್ದಾಳೆ. ಚೆಕ್ ಇಟ್ಕೊಂಡು ಮನೆ ಬಾಗಿಲಿಗೆ ಹೋದರೆ ಮನೆ ಬೀಗ ಹಾಕಿದೆ. ಅವರ ಅಪ್ಪ-ಅಮ್ಮನನ್ನ ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುವ ಸಿದ್ಧ ಉತ್ತರ ನೀಡುತ್ತಿದ್ದಾರೆ. ಇದೀಗ ಮೋಸ ಹೋದವರು ಚೆಕ್, ದೂರು ಪ್ರತಿ ಇಟ್ಕೊಂಡು ಪೊಲೀಸ್ ಸ್ಟೇಷನ್, ಡಿಸಿ ಆಫೀಸ್, ಎಸ್ಪಿ ಆಫೀಸ್ ಗೆ ಅಲೆಯುತ್ತಿದ್ದಾರೆ.

    ಜನರಿಗಷ್ಟೇ ಅಲ್ಲ ರೇಣುಕಾ ಧರ್ಮಸ್ಥಳ ಸಂಘದಿಂದಲೂ 60 ಸಾವಿರ ರೂ. ಎತ್ಕೊಂಡು ಓಡಿಹೋಗಿದ್ದಾಳೆ. ಅಂಗವಿಕಲನಾದ ಮಗನಿಗೆ ಹುಷಾರಿಲ್ಲ ಎಂದು ನಂಬಿಸಿ ಮನೆ ಕಟ್ಟೋದಕ್ಕೆ ಇಟ್ಟುಕೊಂಡಿದ್ದ ಹಣದಲ್ಲಿ 1 ಲಕ್ಷದ 75 ಸಾವಿರ ಹಣ ನೀಡಿದ್ದು, ಈಗ ಅನ್ನಂಗಿಲ್ಲ-ಅನುಭವಿಸುವಂತಿಲ್ಲ ಎನ್ನುವ ಹಾಗಾಗಿದೆ. ಕೆಲವರು ಬಡ್ಡಿಗೆ ಹಣ ಕೊಡಿಸಿ ಕೈ ಸುಟ್ಟುಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಕೇಸ್ ದಾಖಲಿಸಿಕೊಳ್ಳದೆ ದೂರು ಪಡೆದುಕೊಂಡು ಅವರನ್ನು ತೋರಿಸಿ, ಕರೆತರುತ್ತೀವಿ ಎಂದು ಹೇಳಿದ್ದಾರೆ.

  • ಜಾತಿ-ಮತ, ಕೋಮು ಭಾವನೆ ಮೀರಿರೋ ಮಕ್ಕಳು- ಕುರಾನ್, ಭಗವದ್ಗೀತೆ, ಬೈಬಲ್ ಎಲ್ಲಕ್ಕೂ ಸೈ

    ಜಾತಿ-ಮತ, ಕೋಮು ಭಾವನೆ ಮೀರಿರೋ ಮಕ್ಕಳು- ಕುರಾನ್, ಭಗವದ್ಗೀತೆ, ಬೈಬಲ್ ಎಲ್ಲಕ್ಕೂ ಸೈ

    ಚಿಕ್ಕಮಗಳೂರು: ಅದು ಸಣ್ಣ ಸರ್ಕಾರಿ ಶಾಲೆ. ಇರೋದು 150 ಮಕ್ಕಳು. ಒಂದೊಂದು ಮಗುನೂ ಸೌಹಾರ್ದತೆಯ ರಾಯಭಾರಿಗಳು. ಜಾತಿ-ಮತ-ಕೋಮು ಭಾವನೆಯನ್ನು ಮೀರಿರೋ ಇಲ್ಲಿನ ಮಕ್ಕಳು, ನಾವೆಲ್ಲಾ ಒಂದೇ ಎಂದು ಕುರಾನ್ ಗೂ ಸೈ, ಭಗವದ್ಗೀತೆಗೂ ಸೈ ಎಂದು ಹೇಳುತ್ತಿದ್ದಾರೆ.

    ಸದ್ಯಕ್ಕೆ ಕರ್ನಾಟಕ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಟಿಪ್ಪು ಜಯಂತಿ ಬೇಕು-ಬೇಡದ ಚರ್ಚೆ ಹಿಡಿದಿದೆ. ಆದ್ರೆ ಚಿಕ್ಕಮಗಳೂರಿನ ಕದ್ರಿಮಿದ್ರಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಮಕ್ಕಳು ನಾವೆಲ್ಲಾ ಒಂದೇ ಎಂದು ಕೂಗಿ ಹೇಳುತ್ತಿದ್ದಾರೆ. ಅದು ಭಗವದ್ಗೀತೆ, ಕುರಾನ್, ಬೈಬಲ್ ಪಠಿಸುವ ಮೂಲಕ.

    ಕ್ರಿಶ್ಚಿಯನ್ ಮಕ್ಕಳು ಬೈಬಲ್ ಹೇಳಿಕೊಟ್ಟರೆ, ಮುಸ್ಲಿಂ ಮಕ್ಕಳು ಕುರಾನ್ ಹೇಳಿಕೊಡುತ್ತಾರೆ ಹಾಗೂ ಹಿಂದೂ ಮಕ್ಕಳು ಭಗವದ್ಗೀತೆ ಕಲಿಸಿಕೊಡುತ್ತಾರೆ. ಹಿಂದೂ-ಮುಸ್ಲಿಂ-ಕ್ರೈಸ್ತ ಮಕ್ಕಳೆಲ್ಲಾ ನಾವೆಲ್ಲಾ ಒಂದೇ ಎಂದು ಸೌಹಾರ್ದಯುತವಾಗಿ ಬೆಳೆಯುತ್ತಿದ್ದಾರೆ.

    ಎರಡೂವರೆ ವರ್ಷಗಳಿಂದ ಮಕ್ಕಳ ಈ ಸಾಧನೆಗೆ ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಬೆಂಗಾವಲಾಗಿ ನಿಂತಿದ್ದಾರೆ. ಮಕ್ಕಳಿಗೆ ಕಷ್ಟವಾಗುವಂತಹ, ಅರ್ಥೈಸಿಕೊಳ್ಳಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಶಿಕ್ಷಕರು ತಿಳಿ ಹೇಳುತ್ತಾರೆ. ವಾರದಲ್ಲಿ ಮೂರು ದಿನ ಮೂರು ಪಿರಿಯಡ್‍ ಗಳು ಸೌಹಾರ್ದತೆಯ ಸಂದೇಶಕ್ಕೆ ಮೀಸಲಾಗಿದೆ. ಶಿಕ್ಷಕರ ಜೊತೆ ಪೋಷಕರು ಕೂಡ ಮಕ್ಕಳ ಕಲಿಕೆಗೆ ಬೆಂಗಾವಲಾಗಿದ್ದಾರೆ.

  • ಸಿಎಂಗೆ ಕೆಟ್ಟ ಬುದ್ಧಿ, ಹುಚ್ಚು ಬುದ್ಧಿ ಹೆಚ್ಚಾಗಿದ್ದು, ಅವರ ತಲೆಯಲ್ಲಿ ಮತಾಂಧತೆಯ ಭೂತ ಮೆಟ್ಟಿಕೊಂಡಿದೆ: ಸಿ.ಟಿ ರವಿ

    ಸಿಎಂಗೆ ಕೆಟ್ಟ ಬುದ್ಧಿ, ಹುಚ್ಚು ಬುದ್ಧಿ ಹೆಚ್ಚಾಗಿದ್ದು, ಅವರ ತಲೆಯಲ್ಲಿ ಮತಾಂಧತೆಯ ಭೂತ ಮೆಟ್ಟಿಕೊಂಡಿದೆ: ಸಿ.ಟಿ ರವಿ

    ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಟ್ಟ ಬುದ್ಧಿ, ಹುಚ್ಚು ಬುದ್ಧಿ ಹೆಚ್ಚಾಗಿದ್ದು, ಅವರ ತಲೆಯಲ್ಲಿ ಮತಾಂಧತೆಯ ಭೂತ ಮೆಟ್ಟಿಕೊಂಡಿದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.

    ರಾಜ್ಯದ ಜನತೆಯ ವಿರೋಧದ ನಡುವೆಯೂ ಓಟ್ ಬ್ಯಾಂಕ್ ನಿರ್ಮಿಸಿಕೊಳ್ಳಲು ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದಾರೆ. ಆದರೆ, ಸಿಎಂ ಕಣ್ಣಿಗೆ ಟಿಪ್ಪು ಸುಲ್ತಾನ್ ಹೇಗೆ ದೇಶಭಕ್ತನಾಗಿ ಕಾಣುತ್ತಾನೆ ಎಂದು ಪ್ರಶ್ನಿಸಿದ್ದಾರೆ.

    ಟಿಪ್ಪು ಜಯಂತಿ ಆಚರಣೆ ವಿರುದ್ಧದ ಮೆರವಣಿಗೆಯ ಮುನ್ನ ಚಿಕ್ಕಮಗಳೂರಿನ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಮಾತನಾಡಿದ ಶಾಸಕ ಸಿ.ಟಿ. ರವಿ, ಸಿದ್ದರಾಮಯ್ಯನವರೇ, ನಿಮ್ಮ ಕಣ್ಣಿಗೆ ಟಿಪ್ಪು ಸುಲ್ತಾನ್ ಹೇಗೆ ದೇಶಭಕ್ತನಾಗಿ ಕಾಣುತ್ತಾನೆ, ಒಂದು ನಿಮಗೆ ಹುಚ್ಚಿಡಿದಿರಬೇಕು ಅಥವಾ ಮತಾಂಧತೆಯ ಭೂತ ಆವರಿಸಿಕೊಂಡಿರಬೇಕು ಎಂದು ಲೇವಡಿ ಮಾಡಿದ್ದಾರೆ.


    ಕನ್ನಡ ರಾಜ್ಯೋತ್ಸವ ನಡೆಯುವ ವೇಳೆ ಕನ್ನಡ ವಿರೋಧಿ ಟಿಪ್ಪು ಆಚರಣೆ ಮಾಡುತ್ತಿದ್ದೀರ. ನಿಮಗೆ ಹಿಡಿದಿರೋ ಹುಚ್ಚನ್ನ ಬಿಡಿಸಲು ರಾಜ್ಯದ ಜನ ಹೋರಾಟ ಮಾಡಿದರೂ ಕೂಡ ನಿಮಗೆ ಹುಚ್ಚು ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಟಿಪ್ಪು ಜಯಂತಿ ಆಚರಿಸುವ ಬದಲು ಸರ್ ಮಿರ್ಜಾ ಇಸ್ಮಾಯಿಲ್, ಸಂತ ಶಿಶುನಾಳ ಶರೀಫ್, ಎಲ್ಲಾ ಧರ್ಮ ಹಾಗೂ ಮಕ್ಕಳ ಮನದಲ್ಲಿರೋ ಅಬ್ದುಲ್ ಕಲಾಂ ಜಯಂತಿ ಮಾಡಿ ದೇಶದ ಯಾವೊಬ್ಬ ಪ್ರಜೆಯೂ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

    ವಿರೋಧದ ನಡುವೆಯೂ ರಾಜ್ಯ ಸರ್ಕಾರ ಟಿಪ್ಪು ಜಯಂತಿಗೆ ಆಚರಣೆಗೆ ಮುಂದಾಗಿದೆ. ಇದು, ಮೈಸೂರು ಅರಸರಿಗೆ, ಕೊಡವರು ಹಾಗೂ ಇತಿಹಾಸಕ್ಕೆ ಮಾಡುತ್ತಿರೋ ಅಪಮಾನ. ಗಲಭೆ ಸೃಷ್ಟಿಸಿ, ಅಲ್ಪಸಂಖ್ಯಾತರಿಗೆ ಭಯ ಹುಟ್ಟಿಸಿ ಓಟ್ ಬ್ಯಾಂಕ್ ನಿರ್ಮಾಣ ಮಾಡಿಕೊಳ್ಳಬೇಕೆಂಬುದು ಸರ್ಕಾರದ ಉದ್ದೇಶ. ಆದರೆ ಬಿಜೆಪಿ ಅಸ್ತಿತ್ವಕ್ಕೆ ಬರುವ ಮುನ್ನವೇ ಇತಿಹಾಸಕಾರರು ಟಿಪ್ಪುವಿನ ಕ್ರೌರ್ಯವನ್ನ ಸಾರಿ ಹೇಳಿದ್ದಾರೆ. ಆ ದಾಖಲೆಗಳೊಂದಿಗೆ ನಾವು ಬಹಿರಂಗ ಚರ್ಚೆಗೆ ಸಿದ್ಧವಿದ್ದೇವೆ. ನೀವು ಬನ್ನಿ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಬಹಿರಂಗ ಸವಾಲು ಹಾಕಿದರು.

    ಟಿಪ್ಪುವಿಗೆ ಎರಡು ಮುಖವಿತ್ತು. 1773 ರಿಂದ 91ರ ವರೆಗೆ ಒಂದು ಮುಖ. ನಂತರ ಒಂದು ಮುಖ ಎಂದು ಟಿಪ್ಪುವಿನ ವಿರುದ್ಧವೂ ಕಿಡಿಕಾರಿದ್ದಾರೆ. ಮೈಸೂರು, ದೇವನಹಳ್ಳಿ, ಸಖಲೇಶಪುರ ಸೇರಿದಂತೆ ಹಲವು ಊರುಗಳ ಹೆಸರನ್ನು ಬದಲಿಸಿ ಆಡಳಿತ ಭಾಷೆ ಕನ್ನಡವಿದ್ದ ಕಡೆ ಪರ್ಷಿಯನ್ ಭಾಷೆಯನ್ನು ತಂದ ಟಿಪ್ಪು ನಿಮ್ಮ ಕಣ್ಣಿಗೆ ಹೇಗೆ ದೇಶ ಭಕ್ತನಂತೆ ಕಾಣುತ್ತಾನೆಂದು ಲೇವಡಿ ಮಾಡಿದರು.

    ಇದಕ್ಕೂ ಮುನ್ನ ಟಿಪ್ಪು ಜಯಂತಿ ಆಚರಣೆಯನ್ನ ವಿರೋಧಿಸಿ ಮೆರವಣಿಗೆಗೆ ಸಜ್ಜಾಗಿದ್ದ ಶಾಸಕ ಸಿ.ಟಿ. ರವಿ ಸೇರಿದಂತೆ 150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಜಿಲ್ಲಾದ್ಯಂತ ಗುರುವಾರ ಬೆಳಗ್ಗೆಯಿಂದ ಶನಿವಾರ ಸಂಜೆವರೆಗೂ 144 ಸೆಕ್ಷನ್ ಜಾರಿಯಾಲ್ಲಿದರೂ ಕೈಗೆ ಕಪ್ಪು ಪಟ್ಟಿ ಧರಿಸಿ ಮೆರವಣಿಗೆಗೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.