Tag: Chikkamagalur

  • ಪೆರೋಲ್ ಮೇಲೆ ಹೊರಬಂದವ 11 ವರ್ಷದ ನಂತ್ರ ಸೆರೆಸಿಕ್ಕ!

    ಪೆರೋಲ್ ಮೇಲೆ ಹೊರಬಂದವ 11 ವರ್ಷದ ನಂತ್ರ ಸೆರೆಸಿಕ್ಕ!

    ಚಿಕ್ಕಮಗಳೂರು: ಪೆರೋಲ್ ಮೇಲೆ ಹೊರಬಂದು 11 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಮರುಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದ ಅಪರಾಧಿಯನ್ನು ಇದೀಗ ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

    2007ರಲ್ಲಿ ಹೆಂಡತಿಯನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಆರೋಪದಡಿ ಶಿವಮೊಗ್ಗ ಸಾಗರ ಮೂಲದ ಅಬ್ದಲ್ ಘನಿ ಪೆರೋಲ್ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದನು. ಆ ನಂತ್ರ ಆತ ಪೆರೋಲ್ ಮೇಲೆ ಹೊರಬಂದಿದ್ದ. ಬಂದವನು ವಾಪಸ್ ಹೋಗದೆ ತನ್ನ ಇತಿಹಾಸವನ್ನೆಲ್ಲಾ ಬದಲಿಸಿಕೊಂಡು, ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬೈಕಿನ ಲೈಸನ್ಸ್ ಎಲ್ಲವನ್ನೂ ಮಾಡಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದರೆ ಈತ ತನ್ನ ದ್ವಿಚಕ್ರವನ್ನು ಸ್ನೇಹಿತನಿಗೆ ನೀಡಿದ್ದನು.

    ಕುರಿ ಕದ್ದು ಸಿಕ್ಕಿಬಿದ್ದ:
    ಕುರಿ ಕದಿಯುವಾಗ ಸಿಕ್ಕಿಬಿದ್ದ ಅಬ್ದುಲ್ ಘನಿ, ದಕ್ಷಿಣ ಕನ್ನಡದ ಕಡಬ ಠಾಣೆ ಮೆಟ್ಟಿಲೇರಿದ್ದ. ಅಲ್ಲಿನ ಪೊಲೀಸರು ಈತನ ಫಿಂಗರ್ ಪ್ರಿಂಟ್ ಅನ್ನು ಪೊಲೀಸ್ ಇಲಾಖೆಯ ಕ್ರೈಂ ವಿಭಾಗದ ಡಾಟಾಸ್‍ಗೆ ಅಪ್‍ಲೋಡ್ ಮಾಡಿದ್ದಾರೆ. 11 ವರ್ಷದ ಹಿಂದೆ ಇದೇ ಅಬ್ದುಲ್ ಘನಿ ನೀಡಿದ್ದ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿ ಪೂರ್ವಪರ ಕೆದಕಿದಾಗ ಸಿಕ್ಕಿ ಬಿದ್ದಿದ್ದಾನೆ.

    ಜಾಮೀನು ಫೋರ್ಜರಿ:
    ಈತನ ಮೂಲ ಶಿವಮೊಗ್ಗ. ಪೆರೋಲ್ ಮೇಲೆ ಬಂದವನು ತನ್ನ ಜೀವನದ ಸತ್ಯವನ್ನೆಲ್ಲಾ ಬದಲಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದ್ರೆ ಇದೀಗ ಈತನನ್ನು ಬಂಧಿಸಿದ್ದು ಮಾತ್ರ ಚಿಕ್ಕಮಗಳೂರಿನ ಪೊಲೀಸರು. ಯಾಕಂದ್ರೆ ಈತ 2007ರಲ್ಲಿ ಪೆರೋಲ್ ಮೇಲೆ ಹೊರಬರುವಾಗ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಹೋಬಳಿಯ ಸೊಲ್ಲಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷ ಪೆರೋಲ್ ಗೆ ಜಾಮೀನಾಗಿದ್ದನು. ಆದರೆ ಈತ ಜೈಲಿಗೆ ವಾಪಸ್ ಬರದಾಗ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಜಾಮೀನು ಫೋರ್ಜರಿ ಎಂದು ತಿಳಿದು ಪೊಲೀಸರು ಕೈಚೆಲ್ಲಿದ್ರು. ಆದರೆ ಸದ್ಯ ಅಪರಾಧಿಯ ಫಿಂಗರ್ ಪ್ರಿಂಟ್ ಬರೋಬ್ಬರಿ 11 ವರ್ಷಗಳ ಬಳಿಕ ಈತನನ್ನು ಬಂಧಿಸುವಲ್ಲಿ ಸಹಾಯ ಮಾಡಿದೆ.

  • ಚಿಕ್ಕಮಗಳೂರಲ್ಲಿ ಆಲಿಕಲ್ಲು ಮಳೆ- ಪುತ್ತೂರಲ್ಲಿ ಸಿಡಿಲು ಬಡಿದು ಬಾಲಕಿಗೆ ಗಾಯ!

    ಚಿಕ್ಕಮಗಳೂರಲ್ಲಿ ಆಲಿಕಲ್ಲು ಮಳೆ- ಪುತ್ತೂರಲ್ಲಿ ಸಿಡಿಲು ಬಡಿದು ಬಾಲಕಿಗೆ ಗಾಯ!

    ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆಲಿಕಲ್ಲು ಮಳೆಯಾಗಿದೆ. ಸಂಜೆ ಸುರಿದ ಭಾರಿ ಮಳೆಯಲ್ಲಿ 10 ರಿಂದ 15 ಕೆಜಿಯ ಬೃಹತ್ ಗಾತ್ರದ ಆಲಿಕಲ್ಲು ಗಡ್ಡೆಗಳು ಬಿದ್ದಿದೆ.

    ಸುಮಾರು ಒಂದು ಗಂಟೆಯ ಕಾಲ ಎಡೆಬಿಡದೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ಅಡಿಕೆ ಹಾಗೂ ತೆಂಗಿನ ಮರಗಳು ಧರೆಗುರುಳಿದೆ. ವಿಟ್ಲಾಪುರ ಗ್ರಾಮದಲ್ಲಿ ಮದುವೆಗೆ ಹಾಕಿದ್ದ ಸ್ಟೇಜ್ ಸೆಟ್ ಕುಸಿದಿದ್ದು, ಶಾಮಿಯಾನ ಹಾರಿ ಹೋಗಿದೆ. ಬಳಿಕ ಮದುವೆ ಬೇರೆಡೆಗೆ ಸ್ಥಳಾಂತರಿಸಲಾಯಿತು. ಇನ್ನೂ ಲಕ್ಕವಳ್ಳಿ ಭಾಗದಲ್ಲೂ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

    ಸಿಡಿಲು ಬಡಿದು 8 ವರ್ಷದ ಬಾಲಕಿ ಗಾಯಗೊಂಡಿರುವ ಘಟನೆ ಕಡಬ ಸಮೀಪದ ಅಲಂಕಾರಿನ ಪಲ್ಲತ್ತಡ್ಕ ಎಂಬಲ್ಲಿ ನಡೆದಿದೆ. ಭವ್ಯ (8) ಗಾಯಗೊಂಡ ಬಾಲಕಿ. ಸದ್ಯ ಭವ್ಯ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪರಿಸರದಾದ್ಯಂತ ಭಾರೀ ಮಳೆ, ಗಾಳಿ, ಬೀಸಿದ್ದು, ಗಾಳಿಗೆ ಹಲವು ಮರಗಳು, ವಿದ್ಯುತ್ ಕಂಬಗಳು ಧರೆ ಉರುಳಿವೆ.

    ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಮಿಂಚು ಗುಡುಗು ಸಹಿತ ಭಾರಿ ಮಳೆಯಾಗಿದೆ. ಒಂದು ಗಂಟೆಯಿಂದ ಧಾರಾಕಾರ ಮಳೆ ಸುರಿದಿದ್ದು, ಪಾದಾಚಾರಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಇನ್ನೂ ಜಡಿಮಳೆಗೆ ಉಡುಪಿಯಲ್ಲಿ ಪವರ್ ಕಟ್ ಆಗಿದ್ದು, ಮೋಡ ಆವರಿಸಿದ್ದು ಮಳೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರ್ಕಳ, ಕುಂದಾಪುರದಲ್ಲೂ ವಿಪರೀತ ಮಳೆ ಸುರಿದಿದೆ.

  • ಅನಂತಕುಮಾರ್ ಹೆಗ್ಡೆ ಪೊಲೀಸ್ ಬೆಂಗಾವಲು ಕಾರಿಗೆ ಡಿಕ್ಕಿ ಹೊಡೆದ ಲಾರಿಯ ಒಡೆತನದ ಬಗ್ಗೆ ಒಂದಿಷ್ಟು ಮಾಹಿತಿ

    ಅನಂತಕುಮಾರ್ ಹೆಗ್ಡೆ ಪೊಲೀಸ್ ಬೆಂಗಾವಲು ಕಾರಿಗೆ ಡಿಕ್ಕಿ ಹೊಡೆದ ಲಾರಿಯ ಒಡೆತನದ ಬಗ್ಗೆ ಒಂದಿಷ್ಟು ಮಾಹಿತಿ

    ಚಿಕ್ಕಮಗಳೂರು: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಕಾರಿಗೆ ಅಪಘಾತ ಮಾಡಿದ KA 18 A 8733 ಸಂಖ್ಯೆಯ ಲಾರಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ನಾಜೀರ್ ಅಹಮದ್ ಸನ್ ಆಫ್ ನೂರಹಮದ್ ಎಂಬವರಿಗೆ ಸೇರಿದ ಲಾರಿ ಆಗಿದೆ.

    ನಾಜೀರ್ ಆಹಮದ್ ಈ ಲಾರಿಯನ್ನ ಖರೀದಿಸುವ ಮುನ್ನ ಕೊಪ್ಪ ತಾಲೂಕಿನ ಆಹಾರ ಇಲಾಖೆಯ ಅಧಿಕಾರಿ ರಮೇಶ್ ಸಹೋದರ ನಾಗೇಶ್ ಎಂಬವರ ಹೆಸರಿನಲ್ಲಿತ್ತು. ನಾಗೇಶ್ ಈ ಗಾಡಿಯನ್ನ ಫೆಬ್ರವರಿ 16, 2018 ರಂದು ಎನ್.ಆರ್.ಪುರ ತಾಲೂಕಿನ ಬೆಳಗುಳ ನಿವಾಸಿ ನಾಜೀರ್ ಎಂಬವರಿಗೆ ಮಾರಿದ್ದಾರೆ. ಲಾರಿಯ ಮೂಲ ಮಾಲೀಕ ನಾಗೇಶ್ ಕೊಪ್ಪ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದಾರೆ.

    ಅಂದು ಲಾರಿಗೆ ನೀಡುವಷ್ಟು ಹಣ ಇಲ್ಲದ ನಾಜೀರ್ ಎರಡು ಲಕ್ಷ ನೀಡಿ ಲಾರಿಯನ್ನ ಖರೀದಿಸಿದ್ದರು. ಲಾರಿ ಮೇಲೆ 2.91 ಲಕ್ಷ ಲೋನ್ ಇತ್ತು. ಗಾಡಿ ಖರೀದಿಸಿದ ನಾಜೀರ್ ಹಣಕ್ಕಾಗಿ ಬೇರೆ ಫೈನಾನ್ಸ್ ನಲ್ಲಿ ಸಾಲ ಕೇಳಿದ್ದ. ಅಲ್ಲಿ ಹಣ ಸಿಕ್ಕ ಮೇಲೆ ಲಾರಿ ನಾಗೇಶ್ ಹೆಸರಿನಲ್ಲಿದ್ದಾಗ ಶ್ರೀರಾಮ ಫೈನಾನ್ಸ್ ನಲ್ಲಿ ಇದ್ದ ಹಣವನ್ನ ಕಟ್ಟಿದ್ದಾರೆ.

    ಆದರೆ ಶ್ರೀರಾಮ ಫೈನಾನ್ಸ್ ಹೆಡ್ ಆಫೀಸ್ ಬಾಂಬೆಯಲ್ಲಿರೋದ್ರಿಂದ ಲೋನ್ ಕ್ಲಿಯರ್ ಆಗಿ ಬರೋದು ತಡವಾಗಿದೆ. ಲೋನ್ ಕ್ಲೀಯರ್ ಆಗಿ ಬಂದ ನಂತರ ಲಾರಿ ಮಾಲೀಕ ನಾಜೀರ್ ಏಪ್ರಿಲ್ 13, 2018 ರಂದು ಬಂದು ಲಾರಿ ಮಾಲೀಕ ನಾಗೇಶ್‍ಗೆ ಬಾಕಿ ಕೊಡಬೇಕಿದ್ದ ಹಣವನ್ನ ನೀಡಿ ಫಾರಂ 29-30 ಕ್ಕೆ ಸಹಿ ಹಾಕಿಸಿಕೊಂಡು ಎಲ್ಲಾ ಡಾಕ್ಯೂಮೆಂಟ್ ಪಡೆದುಕೊಂಡು ಬಂದಿದ್ದಾರೆ. ಆದರೆ ಡಾಕ್ಯೂಮೆಂಟ್ ತೆಗೆದುಕೊಂಡು ಬಂದ ನಾಜೀರ್ ಗಾಡಿಯನ್ನು ತನ್ನ ಹೆಸರಿಗೆ ಆರ್ ಟಿಓ ಕಚೇರಿಯಲ್ಲಿ ವರ್ಗಾವಣೆ ಮಾಡಿಸಿಕೊಂಡಿಲ್ಲ. ಲಾರಿ ಇನ್ನು ನಾಗೇಶ್ ಹೆಸರಿನಲ್ಲೇ ಇದೆ. ಆದರೆ ನಾಗೇಶ್ ಗಾಡಿ ಮಾರಾಟ ಮಾಡಿ ಮೂರು ತಿಂಗಳಾಗಿದೆ.

  • ಟಿಕೆಟ್ ತಪ್ಪಿದ್ದಕೆ ಹೆಚ್‍ಡಿಡಿ, ಹೆಚ್‍ಡಿಕೆಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಟಿ.ಎಚ್.ಶಿವಶಂಕರಪ್ಪ

    ಟಿಕೆಟ್ ತಪ್ಪಿದ್ದಕೆ ಹೆಚ್‍ಡಿಡಿ, ಹೆಚ್‍ಡಿಕೆಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಟಿ.ಎಚ್.ಶಿವಶಂಕರಪ್ಪ

    ಚಿಕ್ಕಮಗಳೂರು: ಜೆಡಿಎಸ್ ಟಿಕೆಟ್ ತಪ್ಪಿದ್ದಕ್ಕೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಟಿ.ಎಚ್.ಶಿವಶಂಕರಪ್ಪ ಬೆಂಬಲಿಗರು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಷ್ಟು ದಿನ ಟಿಕೆಟ್ ನಿನಗೆ ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಈಗ ಶ್ರೀನಿವಾಸ್‍ಗೆ ನೀಡಿದ್ದಾರೆ. ಅಪ್ಪ-ಮಗ ಇಬ್ಬರು ಹಣಕ್ಕಾಗಿ ಟಿಕೆಟ್ ಮಾರಿಕೊಂಡಿದ್ದಾರೆಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ತರೀಕೆರೆಯ ಹಾಲಿ ಕಾಂಗ್ರೆಸ್ ಶಾಸಕ ಜಿ.ಎಚ್. ಶ್ರೀನಿವಾಸ್‍ಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಶ್ರೀನಿವಾಸ್ ಬೆಂಗಳೂರಿಗೆ ತೆರಳಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

    ಟಿಕೆಟ್ ಕೂಡ ಶ್ರೀನಿವಾಸ್‍ಗೆ ಎಂದು ಮಾತುಕತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಟಿ.ಎಚ್. ಶಿವಶಂಕರಪ್ಪ ಬೆಂಬಲಿಗರು ತರೀಕೆರೆಯ ಗಾಂಧಿ ವೃತ್ತದಲ್ಲಿ ನೂರಾರು ಕಾರ್ಯಕರ್ತರು ರಸ್ತೆ ಬಂದ್, ರಸ್ತೆ ಮಧ್ಯೆ ಟೈರ್ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.

    ಇದೇ ವೇಳೆ ಶಿವಶಂಕರಪ್ಪ ಬೆಂಬಲಿಗರೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡರು. ಅಷ್ಟರಲ್ಲಿ ಅಲ್ಲೇ ಇದ್ದ ಪೊಲೀಸರು ಆತನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಜಾಗ್ರತ ಕ್ರಮವಾಗಿ ತರೀಕೆರೆಯಲ್ಲಿ 200ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಏರ್ಪಡಿಸಲಾಗಿದೆ. ಉದ್ರೇಕ ಬೆಂಬಲಿಗರು ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಅದೃಷ್ಟವಷಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

  • ಚಿಕ್ಕಮಗಳೂರಿನಲ್ಲಿ ಟಗರು ಶಿವ, ಡಾಲಿ ಹವಾ- ಡ್ರಮ್ ಸೆಟ್ ಬಾರಿಸಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು

    ಚಿಕ್ಕಮಗಳೂರಿನಲ್ಲಿ ಟಗರು ಶಿವ, ಡಾಲಿ ಹವಾ- ಡ್ರಮ್ ಸೆಟ್ ಬಾರಿಸಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು

    ಚಿಕ್ಕಮಗಳೂರು: ಟಗರು ಚಿತ್ರದ ಪ್ರಮೋಷನ್‍ಗಾಗಿ ನಟ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಭಾನುವಾರ ಚಿಕ್ಕಮಗಳೂರಿಗೆ ಭೇಟಿ ನೀಡಿದರು.

    ಭಾನುವಾರ ಸಂಜೆ 4 ಗಂಟೆಗೆ ಬಂದ ಶಿವಣ್ಣ ಹಾಗೂ ಧನಂಜಯ್ ಆಜಾದ್ ಪಾರ್ಕ್ ವೃತ್ತದಿಂದ ರೋಡ್ ಶೋ ಮೂಲಕ ಮಿಲನ ಚಿತ್ರಮಂದಿರಕ್ಕೆ ಆಗಮಿಸಿದರು. ಶಿವರಾಜ್ ಕುಮಾರ್ ಬರುತ್ತಾರೆಂದು ಅಭಿಮಾನಿಗಳು ಮೂರು ಗಂಟೆಯಿಂದಲೇ ಆಜಾದ್ ಪಾರ್ಕ್ ವೃತ್ತದಲ್ಲಿ ಡ್ರಮ್ ಸೆಟ್ ಬಾರಿಸಿಕೊಂಡು ಕುಣಿದು ಕುಪ್ಪಳಿಸಿದರು.

    ಶಿವಣ್ಣ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದಿದ್ದು, ತೆರೆದ ವಾಹನದ ಮೇಲೆಯೇ ಹತ್ತಿ ಸೆಲ್ಫಿ ತೆಗೆದುಕೊಂಡರು. ಶಿವಣ್ಣ ಥಿಯೇಟರ್ ಬಳಿ ಆಗಮಿಸುತ್ತಿದ್ದಂತೆ ನೂರಾರು ಯುವಕರು ಕುಣಿದು ಕುಪ್ಪಳಿಸಿದರು. ಶಿವಣ್ಣ ಜೊತೆಯೇ ಟಾಕೀಸ್ ಪ್ರವೇಶಿಸಲು ಯತ್ನಿಸಿದ ಅಭಿಮಾನಿಗಳನ್ನು ನಿಯಂತ್ರಿಸೋದಕ್ಕೆ ಪೊಲೀಸರು ಹರಸಾಹಸಪಟ್ಟರು.

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಹಿಟ್ ಆಗಿದ್ದು, ಈ ಹಿಂದೆ ಶಿವಮೊಗ್ಗದಲ್ಲಿ ಟಗರು ವಿಜಯೋತ್ಸವ ಮೆರವಣಿಗೆ ಮಾಡಿದ್ದರು.

    ಟಗರು ವಿಜಯೋತ್ಸವದಲ್ಲಿ ಡಾ. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಚಿಟ್ಟೆ ವಶಿಷ್ಟ ಭಾಗಿಯಾಗಿದ್ದು, ಶಿವಪ್ಪನಾಯಕನ ಪ್ರತಿಮಗೆ ಹೂವಿನ ಹಾರ ಹಾಕಿ ನಹೆರು ರಸ್ತೆಯಲ್ಲಿ ರೋಡ್ ಶೋ ನಡೆಸಿದ್ದರು.

    ಶಿವರಾಜ್ ಕುಮಾರ್ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ್, ಧನಂಜಯ್ ಹಾಗೂ ವಶಿಷ್ಟ ಅವರನ್ನು ನೋಡಿ ಕಣ್ತುಂಬಿಕೊಂಡು ಹರ್ಷೋದ್ಗಾರ ವ್ಯಕ್ತಪಡಿಸಿ, ಜಯ ಘೋಷ ಕೂಗಿದ್ದರು.

  • ರಕ್ತ ಟೆಸ್ಟ್ ಮಾಡ್ತೀನೆಂದು ಸೂಜಿಯಲ್ಲಿ ಮುಖಕ್ಕೆ ಚುಚ್ಚುತ್ತಿದ್ದ ವೈದ್ಯ- ನಿಮ್ಹಾನ್ಸ್ ಗೆ ಕಳಿಸಬೇಕೆಂದು ವರದಿ ನೀಡಿ 6 ತಿಂಗಳಾದ್ರೂ ಇಲ್ಲ ಕ್ರಮ

    ರಕ್ತ ಟೆಸ್ಟ್ ಮಾಡ್ತೀನೆಂದು ಸೂಜಿಯಲ್ಲಿ ಮುಖಕ್ಕೆ ಚುಚ್ಚುತ್ತಿದ್ದ ವೈದ್ಯ- ನಿಮ್ಹಾನ್ಸ್ ಗೆ ಕಳಿಸಬೇಕೆಂದು ವರದಿ ನೀಡಿ 6 ತಿಂಗಳಾದ್ರೂ ಇಲ್ಲ ಕ್ರಮ

    ಚಿಕ್ಕಮಗಳೂರು: ಆಸ್ಪತ್ರೆಗೆ ಬಂದ ರೋಗಿಗಳಿಗೆಲ್ಲಾ ನಿಂಗೆ ಏಡ್ಸ್ ಇದೆ, ರಕ್ತ ಟೆಸ್ಟ್ ಮಾಡುತ್ತೀನಿ ಎಂದು ಸೂಜಿಯಲ್ಲಿ ಮುಖಕ್ಕೆ ಚುಚ್ಚಿ, ನರ್ಸ್‍ಗಳಿಗೆ ನಿನ್ನ ಗೌನ್ ಬಿಚ್ಚು ಟೆಸ್ಟ್ ಮಾಡುತ್ತೀನಿ ಎಂದು ಹೇಳುತ್ತಿದ್ದ ಸರ್ಕಾರಿ ವೈದ್ಯ ಸೈಕೋಸೀಸ್‍ಗೆ ಒಳಗಾಗಿರೋದು ದೃಢಪಟ್ಟಿದೆ.

    ವೈದ್ಯನಿಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದ್ದು ಧಾರವಾಡ ಅಥವಾ ನಿಮ್ಹಾನ್ಸ್ ಗೆ ಕಳಿಸಬೇಕೆಂದು ಮಾನಸಿಕ ರೋಗ ತಜ್ಞರು ವರದಿ ನೀಡಿ ಆರು ತಿಂಗಳೇ ಕಳೆದಿದೆ. ಆದರೆ ತಾಲೂಕು ಹೆಲ್ತ್ ಆಫೀಸರ್ ಮಾತ್ರ ಇಂದಿಗೂ ಕ್ರಮ ಕೈಗೊಂಡಿಲ್ಲ. ಅವರಿಂದಲೇ ಟ್ರೀಟ್‍ಮೆಂಟ್ ಕೊಡಿಸುತ್ತಿದ್ದಾರೆ. ಇವರಿಂದ ಚಿಕಿತ್ಸೆ ಪಡೆಯುವ ರೋಗಿಗಳ ಸ್ಥಿತಿ ದೇವರೇ ಬಲ್ಲ.

    ವೀರೇಶ್ ವೈ ನರೇಗಲ್ ಎಂ.ಬಿ.ಬಿಎಸ್. ಡಿ ಆರ್ಥೋ ಅಂಡ್ ಎಂ.ಎಸ್.ಆರ್ಥೋ ಓದಿದ್ದಾರೆ. 35 ವರ್ಷ ಸರ್ವೀಸ್ ಇರೋ ಇವರು ಕಳೆದ ಒಂದೂವರೆ ವರ್ಷದಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ತಜ್ಞರಾಗಿದ್ದಾರೆ. ಆರು ತಿಂಗಳ ಹಿಂದೆ ಆಸ್ಪತ್ರೆಗೆ ಬರೋ ರೋಗಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ರಾತ್ರಿ ಆಸ್ಪತ್ರೆಗೆ ಬರೋ ರೋಗಿಗಳಿಂದ ಒಂದೊಂದು ಬಾಟಲಿ ರಕ್ತ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದರು.

    ಗಾಯಕ್ಕೆ ಹಾಕಿರೋ ಹೊಲಿಗೆಯನ್ನ ಬಿಚ್ಚಿ ಮತ್ತೆ ಹೊಲಿಗೆ ಹಾಕೋಕೆ ಮುಂದಾಗುತ್ತಿದ್ದರು. ಇವರ ವರ್ತನೆ ಕಂಡ ಸ್ಥಳೀಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಆಡಳಿತ ವೈದ್ಯಾಧಿಕಾರಿಗೆ ದೂರು ನೀಡಿದ್ದರು. ತಾಲೂಕು ವೈದ್ಯಾಧಿಕಾರಿ 20.09.2017ರಂದು ಜಿಲ್ಲೆಯ ಜಿಲ್ಲಾ ಮಾನಸಿಕ ರೋಗ ತಜ್ಞರಿಗೆ ವೀರೇಶ್‍ರನ್ನು ಪರೀಕ್ಷಿಸುವಂತೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಮಾನಸಿಕ ರೋಗ ತಜ್ಞರು ಕೊಟ್ಟ ಉತ್ತರ ವೀರೇಶ್ ಸೈಕೋಸೀಸ್‍ಗೆ ಒಳಗಾಗಿದ್ದಾರೆಂದು. ಆದರೆ ಆರು ತಿಂಗಳಿಂದ ತಾಲೂಕು ವೈದ್ಯಾಧಿಕಾರಿ ಇಂದಿಗೂ ಕ್ರಮ ಕೈಗೊಳ್ಳದಿರೋದು ಮಾತ್ರ ದುರಂತ.

    ವೀರೇಶ್ ಒಬ್ಬೊಬ್ಬರೇ ನಗುತ್ತಿದ್ದರು. ಒಬ್ಬೊಬ್ಬರೇ ಮಾತನಾಡುತ್ತಿದ್ದರು. ಒಂದು ಪ್ರಶ್ನೆ ಕೇಳಿದರೆ ಮತ್ತೊಂದು ಉತ್ತರ ಹೇಳಿ ಎಲ್ಲರ ಮೇಲೂ ರೇಗಾಡುತ್ತಿದ್ದರು. ಇವರನ್ನ ಪರೀಕ್ಷಿಸಿದ ಚಿಕ್ಕಮಗಳೂರಿನ ಮಾನಸಿಕ ರೋಗ ತಜ್ಞ ಡಾ.ವಿನಯ್ ಕುಮಾರ್ ಇವರಿಗೆ ನಾನು ಏನು ಮಾಡುತ್ತಿದ್ದೇನೆ, ಏನು ಮಾತನಾಡ್ತಿದ್ದೇನೆಂದು ಅರಿವಿಲ್ಲ. ಇವರು ಚಿಕಿತ್ಸೆ ನೀಡಲು ಅಶಕ್ತರಾಗಿದ್ದಾರೆ. ಇವರು ಚಿಕಿತ್ಸೆ ನೀಡಿದರೆ ಎಂತಹ ಅಚಾತುರ್ಯ ಬೇಕಾದರು ಆಗಬಹುದು. ಕೂಡಲೇ ಇವರನ್ನ ಇವರ ಮನೆಯವರ ಸಹಕಾರದೊಂದಿಗೆ ಇವರು ಮೊದಲು ಚಿಕಿತ್ಸೆ ಪಡೆಯುತ್ತಿದ್ದ ಧಾರವಾಡ ಅಥವಾ ನಿಮ್ಹಾನ್ಸ್‍ಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ವರದಿ ನೀಡಿದ್ದಾರೆ.

    ವೀರೇಶ್ ಎಲ್ಲರಂತೆಯೇ ಇರುತ್ತಾರೆ. ನೋಡೋದಕ್ಕೂ ನಾರ್ಮಲ್ ಇರುತ್ತಾರೆ. ನಾನು ಚೆನ್ನಾಗಿಯೇ ಇದ್ದೇನೆ ನನಗೇನು ಆಗಿಲ್ಲ ಎಂದು ಹೇಳುತ್ತಾರೆ. ಆದರೆ ಇವರು ಜವಾಬ್ದಾರಿಯುತ ಕೆಲಸ ಮಾಡಲು ಅಶಕ್ತರಾಗಿರುತ್ತಾರೆಂದು ವರದಿ ನೀಡಿದ್ದಾರೆ. ಆದರೆ ವರದಿ ನೀಡಿ ಆರು ತಿಂಗಳಾದರೂ ಕ್ರಮ ಕೈಗೊಳ್ಳದ ತಾಲೂಕು ಆಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿ ಸಾವು!

    ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿ ಸಾವು!

    ಚಿಕ್ಕಮಗಳೂರು: ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಚಿಕ್ಕಮಗಳೂರಿನ ಸಂಜೀವಿನಿ ಶಾಲೆಯಲ್ಲಿ ನಡೆದಿದೆ.

    ನವ್ಯಶ್ರೀ (28) ಸಾವನ್ನಪ್ಪಿದ್ದ ಶಿಕ್ಷಕಿ. ಮೂಲತಃ ಚಿಕ್ಕಮಗಳೂರಿನ ಹಿರೇಮಗಳೂರು ನಿವಾಸಿಯಾಗಿದ್ದಾರೆ. ಮದುವೆಯಾಗಿ 5 ವರ್ಷವಾಗಿರೋ ನವ್ಯಶ್ರೀಗೆ 10 ತಿಂಗಳ ಮಗು ಕೂಡ ಇದೆ. ಎಂದಿನಂತೆ ನವ್ಯ ಚಿಕ್ಕಮಗಳೂರು ನಗರದಲ್ಲಿರುವ ಸಾಲುಮರದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಪಸ್ ಬಂದಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿದ್ದ ತೆಂಗಿನ ಕಾಯಿಯ ಚೂರನ್ನು ತಿಂದಿದ್ದಾರೆ. ನಂತರ ಅದೇನಾಯ್ತೋ ಏನೋ ಗೊತ್ತಿಲ್ಲ. ಅವರ ಅನ್ನನಾಳಕ್ಕೆ ಕಾಯಿಯ ಚೂರು ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

    ನಗರದಲ್ಲಿರೋ ಸಂಜೀವಿನಿ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿರೋ ನವ್ಯಶ್ರೀಗೆ ದೇವರು ಎಂದರೆ ಅಪಾರ ಪ್ರೀತಿ-ಗೌರವ. ಶನಿವಾರ ಬೆಳಗ್ಗೆ ಶನಿ ದೇವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಶಾಲೆಗೆ ಬಂದಿದ್ದರು. ಒಂದು ಪಿರಿಯಡ್ ಫ್ರೀ ಇದ್ದ ಕಾರಣ ಶಾಲೆಯ ಪಕ್ಕದಲ್ಲಿರೋ ಸಾಲುಮರದಮ್ಮ ದೇವಸ್ಥಾನಕ್ಕೆ ಸಹಶಿಕ್ಷಕಿಯರ ಜೊತೆ ಹೋಗಿ ಬಂದಿದ್ದಾರೆ. ದೇವಸ್ಥಾನದಿಂದ ಬಂದು ಪೂಜೆ ಮಾಡಿಸಿದ್ದ ತೆಂಗಿನಕಾಯಿ ಚೂರನ್ನ ಎಲ್ಲರಿಗೂ ಹಂಚಿ ತಾನು ಸೇವಿಸಿದ್ದಾರೆ. ಇದನ್ನೂ ಓದಿ: ಇದು ನಿಜಕ್ಕೂ ಆತಂಕ..ಅಚ್ಚರಿ ನ್ಯೂಸ್- ಸೇಬು ತಿಂದ 11 ವರ್ಷದ ಬಾಲಕ ಸಾವು

    ತೆಂಗಿನಕಾಯಿಯ ಚೂರು ತಿನ್ನುತ್ತಿದ್ದಂತೆ ಅದೇನಾಯ್ತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಎದೆನೋವೆಂದು ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲೇ ಇದ್ದ ಶಿಕ್ಷಕರು ಅವರಿಗೆ ನೀರು ಕುಡಿಸಿ, ಎದೆ ಹೊತ್ತುತ್ತಿದಂತೆ ನವ್ಯಶ್ರೀಗೆ ಅನ್ನನಾಳದಲ್ಲಿ ಸಿಲುಕಿದ್ದ ತೆಂಗಿನಕಾಯಿ ಚೂರು ಬಾಯಿಂದ ಹೊರಬಂದಿದೆ. ಆದರೆ ಉಸಿರಿನ ತೊಂದರೆಯಿಂದ ತೀವ್ರವಾಗಿ ಬಳಲುತ್ತಿದ್ದ ನವ್ಯಶ್ರೀಯನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನವ್ಯಶ್ರೀ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

    ಒಟ್ಟಿನಲ್ಲಿ ತೆಂಗಿನಕಾಯಿ ಚೂರಿನಿಂದ ನವ್ಯಶ್ರೀ ಪ್ರಾಣ ಕಳೆದುಕೊಂಡಿರುವುದು ಮಾತ್ರ ದುರಂತ. ಇದೀಗ ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಪುಟ್ಟ ಮಗುವನ್ನ ಬಿಟ್ಟು ಅಗಲಿದ ತಾಯಿಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಮಕ್ಕಳ ಕೈಲಿ ಮೊಬೈಲ್ ಕೊಡೋ ಮುನ್ನ ಎಚ್ಚರ- ಆಟವಾಡುತ್ತಾ ಚಾರ್ಜರ್ ಕಚ್ಚಿ 4ರ ಕಂದಮ್ಮ ದಾರುಣ ಸಾವು

    ಮಕ್ಕಳ ಕೈಲಿ ಮೊಬೈಲ್ ಕೊಡೋ ಮುನ್ನ ಎಚ್ಚರ- ಆಟವಾಡುತ್ತಾ ಚಾರ್ಜರ್ ಕಚ್ಚಿ 4ರ ಕಂದಮ್ಮ ದಾರುಣ ಸಾವು

    ಚಿಕ್ಕಮಗಳೂರು: ಮನೆಯಲ್ಲಿ ಮೊಬೈಲ್ ಚಾರ್ಜ್‍ಗೆ ಇಡುವ ಮುನ್ನ ಹುಷಾರ್. ಯಾಕಂದ್ರೆ ಮೊಬೈಲ್ ಚಾರ್ಜರ್ ಕಚ್ಚಿ ನಾಲ್ಕು ವರ್ಷದ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ.

    ಅಭಿಷೇಕ ಮೃತ ದುರ್ದೈವಿ ಪುಟಾಣಿ. ಮನೆಯಲ್ಲಿ ಮೊಬೈಲ್ ಚಾರ್ಚಿಂಗ್ ಗೆ ಇಟ್ಟಿದ್ದ ವೇಳೆ ಅಭಿಷೇಕ ಅದರ ವೈಯರನ್ನು ಬಾಯಿಗೆ ಹಾಕಿಕೊಂಡಿದ್ದಾನೆ. ಪರಿಣಾಮ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾನೆ.

    ಗುರುವಾರ ಸುಮಾರು 10.30 ಕ್ಕೆ ಮನೆಯವರು ದಿವಾನ್ ಕಾಟ್ ಮೇಲೆ ಮೊಬೈಲ್ ಚಾರ್ಜ್ ಹಾಕಿದ್ದರು. ಅಲ್ಲೇ ಪಕ್ಕದಲ್ಲಿದ್ದ ಅಭಿಷೇಕ ಆಟವಾಡುತ್ತಾ ಮಲಗಿದ್ದನು. ಬಳಿಕ ಎದ್ದು ಅಲ್ಲೇ ಕಂಡ ಮೊಬೈಲ್ ಚಾರ್ಜರ್ ಜೊತೆ ಆಟವಾಡುತ್ತಾ ಅದರ ವೈಯರನ್ನು ಎತ್ತುಕೊಂಡು ಬಾಯಲ್ಲಿ ಕಚ್ಚಿದ್ದಾನೆ. ತಕ್ಷಣ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾನೆ.

    ಮಗ ಅಭಿಷೇಕ ಕೆಳಗೆ ಬಿದ್ದ ತಕ್ಷಣ ಮನೆಯವರು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಂಜೆ ಅಭಿಷೇಕ ಮೃತಪಟ್ಟಿದ್ದಾನೆ.

    ಈ ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ‘ನಮ್ಮುಡುಗ್ರು’ ವಾಟ್ಸಪ್ ಗ್ರೂಪಿನಿಂದ ಮೂಡಿಗೆರೆಯ ದೇವರಮನೆ ಗುಡ್ಡ ಕ್ಲೀನ್ ಆಯ್ತು!

    ‘ನಮ್ಮುಡುಗ್ರು’ ವಾಟ್ಸಪ್ ಗ್ರೂಪಿನಿಂದ ಮೂಡಿಗೆರೆಯ ದೇವರಮನೆ ಗುಡ್ಡ ಕ್ಲೀನ್ ಆಯ್ತು!

    ಚಿಕ್ಕಮಗಳೂರು: ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಇಂದು ಯುವ ಜನತೆ ಹಾಳಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ನಡುವೆ ಈ ಮಾಧ್ಯಮಗಳನ್ನು ಬಳಸಿ ಚಿಕ್ಕಮಗಳೂರಿನ ಯುವಕರು ಸಮಾಜ ಮೆಚ್ಚುವ ಕೆಲಸ ಮಾಡಿದ್ದಾರೆ.

    ಹೌದು. 4 ವರ್ಷದ ಹಿಂದೆ ನಿವಾಸಿ ದಿವಿನ್ ಎಂಬವರು ಮಾಡಿದ ನಮ್ಮುಡುಗ್ರು ಗ್ರೂಪ್ ಇಂದು ಒಂದು ಗುಡ್ಡವನ್ನೇ ಕ್ಲೀನ್ ಮಾಡಿದೆ.

    ಪ್ರವಾಸಿಗರಿಂದ ಹಾಳಾದ ಮೂಡಿಗೆರೆಯ ದೇವರಮನೆ ಗುಡ್ಡದ ಫೋಟೋವನ್ನ ಸದಸ್ಯರೊಬ್ಬರು ಗ್ರೂಪ್‍ನಲ್ಲಿ ಹಾಕಿದ್ದರು. ಈ ಫೋಟೋವನ್ನು ನೋಡಿ ಕೂಡಲೇ ಕಾರ್ಯಪ್ರವೃತರಾದ ಸದಸ್ಯರು ನಾವೇ ಕ್ಲೀನ್ ಮಾಡೋಣ ಎಂದು ನಿರ್ಧರಿಸಿ ಜನವರಿ 14ರ ಮಕರ ಸಂಕ್ರಾಂತಿ ಹಬ್ಬದ ದಿನದಂದು ಎಲ್ಲರೂ ಒಂದುಗೂಡಿ ದೇವರಮನೆ ಗುಡ್ಡವನ್ನ ಕ್ಲೀನ್ ಮಾಡಿದ್ದಾರೆ.

    ಗುಡ್ಡವನ್ನು ಕ್ಲೀನ್ ಮಾಡಿದ ಸದಸ್ಯರೇ ನಾಮಫಲಕವನ್ನು ಹಾಕಿದ್ದಾರೆ. ಇದು ನಿಮ್ಮ ಪ್ರಕೃತಿ, ಒಮ್ಮೆ ಹಾಳಾದರೆ ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ಇದನ್ನ ಉಳಿಸಿ-ಬೆಳೆಸುವ ಮನಸ್ಥಿತಿಯವರು ಮಾತ್ರ ಬನ್ನಿ ಎಂದು ಗ್ರೂಪ್ ಅಡ್ಮಿನ್ ದಿವಿನ್ ನಾಮಫಲಕ ಹಾಕಿದ್ದಾರೆ.

    ಮತ್ತೊಂದು ವಿಷಯ ಏನೆಂದರೆ ಈ ಗ್ರೂಪಿನ ಬಹುತೇಕರು ಒಬ್ಬರಿಗೊಬ್ಬರು ಪರಿಚಯವಿಲ್ಲ. ಮುಖವನ್ನೂ ನೋಡಿಲ್ಲ. ಆದರು ಗ್ರೂಪ್‍ನಲ್ಲಿ ಬಂದ ಒಂದು ಮೇಸೆಜ್ ಹಾಗೂ ಫೋಟೋಗೆ ಎಲ್ಲರೂ ಸ್ಪಂದಿಸಿದ್ದಾರೆ. ಹಬ್ಬ ಎನ್ನುವುದನ್ನು ಮರೆತು 250ಕ್ಕೂ ಅಧಿಕ ಗ್ರೂಪಿನ ಸದಸ್ಯರು ಎಲ್ಲರೂ ಒಂದೆಡೆ ಸೇರಿ ದೇವರಮನೆ ಗುಡ್ಡವನ್ನ ಸ್ವಚ್ಛ ಮಾಡಿದ್ದಾರೆ. ಸ್ವಚ್ಛತಾ ಕಾರ್ಯದ ವೇಳೆ ಎರಡೂ ಟ್ರ್ಯಾಕ್ಟರ್ ಬಿಯರ್ ಬಾಟಲಿ, ಎರಡು ಟ್ರ್ಯಾಕ್ಟರ್ ಪ್ಲಾಸ್ಟಿಕ್ ಸಿಕ್ಕಿದೆ.

    ಎಲ್ಲ ರಾಜಕೀಯ ಪಕ್ಷದ ಸದಸ್ಯರು ಈ ಗ್ರೂಪಿನಲ್ಲಿದ್ದು ಎಲ್ಲರೂ ರಾಜಕೀಯವನ್ನು ಬಿಟ್ಟು ಈ ಒಳ್ಳೆ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು ವಿಶೇಷ. ವಾಟ್ಸಪ್ ಹಾಗೂ ಫೇಸ್‍ಬುಕ್‍ಗಳು ಬರೀ ಮನೋರಂಜನೆಗಷ್ಟೆ ಇಲ್ಲ. ಇದರಿಂದಲೂ ಒಳ್ಳೆ ಕೆಲಸ ಆಗುತ್ತೆ ಅನ್ನೋದಕ್ಕೆ ಮಲೆನಾಡಿನ ಈ ಗ್ರೂಪ್ ಸಾಕ್ಷಿಯಾಗಿದೆ. ವಾಟ್ಸಪ್‍ನಿಂದ ಆರಂಭವಾದ ಒಂದು ಗ್ರೂಪ್ ಈ ಪ್ರಮಾಣದ ಕೆಲಸ-ಕಾರ್ಯ ಮಾಡಿರೋದಕ್ಕೆ ಮಲೆನಾಡಿಗರು ಶಹಬ್ಬಾಸ್ ಎಂದಿದ್ದಾರೆ.

  • ಧನ್ಯಶ್ರೀ ಆತ್ಮಹತ್ಯೆ ಪ್ರಕರಣ- ಆಘಾತಕಾರಿ ಅಂಶ ತೆರೆದಿಟ್ಟ ಎಸ್‍ಪಿ ಅಣ್ಣಾಮಲೈ

    ಧನ್ಯಶ್ರೀ ಆತ್ಮಹತ್ಯೆ ಪ್ರಕರಣ- ಆಘಾತಕಾರಿ ಅಂಶ ತೆರೆದಿಟ್ಟ ಎಸ್‍ಪಿ ಅಣ್ಣಾಮಲೈ

    ಚಿಕ್ಕಮಗಳೂರು : ಚಿಕ್ಕಮಗಳೂರಿನ ಮೂಡಿಗೆರೆ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರೋ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಆಘಾತಕಾರಿ ಅಂಶವನ್ನು ತೆರೆದಿಟ್ಟಿದ್ದಾರೆ.

    ಪೊಲೀಸ್ ಇಲಾಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ತಿರೋ ಸಂಘಟನಾಕಾರರು ಹಾಗೂ ವ್ಯಕ್ತಿಗಳ ಬಗ್ಗೆ ಹಾವಿನ ಜೊತೆ ಸರಸವಾಡಬೇಡಿ ಎಂದು ಎಚ್ಚರಿಕೆ ನೀಡಿದ ಅಣ್ಣಾಮಲೈ, ಮೃತ ಧನ್ಯಶ್ರೀಗೆ ಸಂತೋಷ್ ಸೇರಿದಂತೆ ಐವರು ಸಂಘಟನೆ ಕಾರ್ಯಕರ್ತರು ಧಮ್ಕಿ ಹಾಕಿದ್ದ ಹಿನ್ನೆಲೆಯಲ್ಲಿ ಧನ್ಯಶ್ರೀ ಸಾವಿಗೂ ಮುನ್ನ 36 ಗಂಟೆ ಏನನ್ನೂ ತಿನ್ನದೆ ಖಾಲಿ ಹೊಟ್ಟೆ ಇದ್ದದ್ದು ಮರಣೋತ್ತರ ಪರೀಕ್ಷೆಯಿಂದ ಧೃಡಪಟ್ಟಿದೆ ಎಂದು ಹೇಳಿದ್ದಾರೆ.

    ಧನ್ಯಶ್ರೀ ಮನೆಗೆ ಐವರು ಸಂಘಟನಾಕಾರರು ಎರಡು ಬಾರಿ ಹೋಗಿ ಬಂದಿರೋ ದಾಖಲೆ ಇದೆ. ಅವರ ಮನೆಗೆ ಹೋಗಿ ಹೆತ್ತವರ ಎದುರೇ ಸೊಂಟದ ಕೆಳಗಿನ ಭಾಷೆಯಲ್ಲಿ ಬಾಯಿಗೆ ಬಂದಂತೆ ಬಯ್ದಿರೋದು ಗೊತ್ತಾಗಿದೆ. ಎರಡು, ಮೂರು, ನಾಲ್ಕನೇ ತಾರೀಖು ಬೋಲ್ಡ್ ಆಗಿದ್ದ ಧನ್ಯಶ್ರೀ ಐದನೇ ತಾರೀಖು, ಐವರು ಎರಡು ಬಾರಿ ಮನೆಗೆ ಬಂದುಹೋದ ಮೇಲೆ ಆಕೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

    ಈ ಬಗ್ಗೆ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಧನ್ಯಶ್ರೀ ತಂದೆಯಿಂದ ತಪ್ಪಾಗಿ ದೂರು ನೀಡಿಸಿದವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾಕಂದರೆ ಧನ್ಯಶ್ರೀ ತಂದೆ ನೀಡಿದ್ದ ದೂರಿಗೂ, ಸಿಕ್ಕ ದಾಖಲೆಗಳು, ಡೆತ್‍ನೋಟ್‍ಗೂ 1 ಪರ್ಸೆಂಟ್ ಕೂಡ ಮ್ಯಾಚ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾಲದಕ್ಕೆ ಸಂತೋಷ್ ಎಂಬ ಹೆಸರಿನಲ್ಲಿ ಧನ್ಯಶ್ರೀ ಜೊತೆ ವಾಟ್ಸಪ್‍ನಲ್ಲಿ ಚಾಟ್ ಮಾಡಿರೋ ವ್ಯಕ್ತಿ ಸಂತೋಷ್ ಅಲ್ಲ. ಆತ ಯಾರೆಂಬುದು ಗೊತ್ತಾಗಿದೆ. ಸದ್ಯದಲ್ಲೇ ಅವನನ್ನೂ ಅರೆಸ್ಟ್ ಮಾಡ್ತೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.

    ಸಂಘಟನಾಕಾರರು ಪೊಲೀಸ್ ಇಲಾಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ತಿದ್ದಾರೆ. ನಾವು ಖಾಕಿ ಬಟ್ಟೆ ಹಾಕಿದ ಮೇಲೆ ನಮಗೆ ಎಲ್ಲರೂ ಒಂದೇ. ಎಲ್ಲಾ ಧರ್ಮವೂ ಒಂದೇ. ನನ್ನ ಸಬ್ ಇನ್ಸ್ ಪೆಕ್ಟರ್ ನನ್ನ ಅಣತಿಯಂತೆ ಕೆಲಸ ಮಾಡಿದ್ದಾರೆ. ಇಲಾಖೆ ಬಗ್ಗೆ ಕೇವಲವಾಗಿ ಮಾತನಾಡಿರೋರ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ. ಈ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರಕರಣದಲ್ಲಿ ಯಾರೇ ಇರಲಿ, ಎಷ್ಟೆ ದೊಡ್ಡ ವ್ಯಕ್ತಿಗಳೇ ಬರಲಿ, ಎಷ್ಟೆ ಒತ್ತಡ ಬಂದರು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅಣ್ಣಾಮಲೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.