Tag: Chikkamagalur

  • ಕೆಲಸ ಮಾಡಿಸಬೇಕಾದ ಅಣ್ಣಾಮಲೈ, ಹರೀಶ್ ಪೂಂಜಾರೆ ಚಾರ್ಮಾಡಿಯಲ್ಲಿ ಕೆಲಸಕ್ಕೆ ನಿಂತಿದ್ರು

    ಕೆಲಸ ಮಾಡಿಸಬೇಕಾದ ಅಣ್ಣಾಮಲೈ, ಹರೀಶ್ ಪೂಂಜಾರೆ ಚಾರ್ಮಾಡಿಯಲ್ಲಿ ಕೆಲಸಕ್ಕೆ ನಿಂತಿದ್ರು

    ಚಿಕ್ಕಮಗಳೂರು: ಒಂದೆಡೆ ಧೋ ಎಂದು ಸುರಿಯುತ್ತಿದ್ದ ಮಳೆ. ಮತ್ತೊಂದೆಡೆ ನೋಡ-ನೋಡುತ್ತಿದ್ದಂತೆ ನಾನಾ-ನೀನಾ ಅಂತ ಸರತಿ ಸಾಲಲ್ಲಿ ಕುಸಿಯುತ್ತಿದ್ದ ಗುಡ್ಡಗಳ ಸಾಲು. ಮಗದೊಡೆ ಟ್ರಾಫಿಕ್ ಜಾಮ್‍ನಿಂದ ಮಕ್ಕಳು-ಮರಿ-ರೋಗಿಗಳ ನರಳಾಟ. ಶೌಚಾಲಯಕ್ಕೂ ಹೋಗಲಾಗದೆ ಹೆಣ್ಮಕ್ಕಳ ಪರದಾಟ.

    ಕಳೆದೊಂದು ವಾರದ ಹಿಂದೆ ಚಾರ್ಮಾಡಿಯಲ್ಲಿ ಸುರಿದ ವರುಣನ ರೌದ್ರನರ್ತನಕ್ಕೆ ಸಾವಿರಾರು ಪ್ರವಾಸಿಗರು ಅನುಭವಿಸಿದ ಪರಿಪಾಟಲು ಒಂದೆರಡಲ್ಲ. ಸ್ಥಳಿಯರು, ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹೋರಾಡುತ್ತಿದ್ದರು. ಪ್ರಕೃತಿ ಎದುರು ಕೈಕಟ್ಟಿ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಏಕೆಂದರೆ ಎರಡ್ಮೂರು ಜೆಸಿಬಿ ಹಾಗೂ ನೂರಾರು ಕೆಲಸಗಾರರಿದ್ದರೂ ವರುಣನ ಅಬ್ಬರದ ಮುಂದೆ ಮೂಕ ವಿಸ್ಮಿತರಾಗಿದ್ದರು.

    ಆದರೆ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸ್ಥಳಕ್ಕೆ ಬಂದ ಮೇಲೆ ನಡೆದ ಕೆಲಸವೇ ಬೇರೆ. ಸುರಿಯೋ ಮಳೆಗೂ ಸೆಡ್ಡು ಹೊಡೆದು ಟ್ರಾಫಿಕ್ ಕ್ಲಿಯರ್ ಮಾಡಿ ವಾಹನ ಸಾಗಿಸೋದಕ್ಕೆ ಮುಂದಾದರು.

    ಮೊಣಕಾಲುದ್ದ ಕೆಸರನ್ನೂ ಲೆಕ್ಕಿಸದೆ ತಾನೊಬ್ಬ ಶಾಸಕನೆಂದು ಹರೀಶ್ ಹಾಗೂ ನಾನೊಬ್ಬ ಐಪಿಎಸ್ ಆಫೀಸರ್ ಎಂಬ ಅಹಂ ಇಲ್ಲದ ಅಣ್ಣಾಮಲೈ ಕಾರು ನಿಲ್ಲುತ್ತಿದ್ದಂತೆ ಸುರಿಯೋ ಮಳೆಯಲ್ಲೂ ಟ್ರಾಫಿಕ್ ಕ್ಲಿಯರ್ ಮಾಡಲು ಮುಂದಾದರು. ಅವರಿಗೆ ಶಾಸಕ ಹರೀಶ್ ಪೂಂಜಾ ಕೂಡ ಅಷ್ಟೇ ಸಾಥ್ ನೀಡಿದರು.

    ಎಸ್ಪಿ ಅಣ್ಣಾಮಲೈ ಮಳೆಯಲ್ಲಿ ಕೊಚ್ಚಿಕೊಂಡು ಬಂದಿದ್ದ ಮುಷ್ಟಿ ಗಾತ್ರದ ಕಲ್ಲನ್ನ ಎತ್ತಿ ಹಾಕ್ತಿದರೆ, ಹರೀಶ್ ಕೂಡ ಮುರಿದು ಬಿದ್ದಿದ್ದ ಮರದ ಟೊಂಗೆಗಳನ್ನ ಕೆಳಗೆ ಎಸೆಯುತ್ತಿದರು. ಧಾರಾಕಾರ ಮಳೆಯ ನಡುವೆ ಎದುರಿನ ವ್ಯಕ್ತಿಯೂ ಕಾಣದಂತ ಮಂಜಿನ ನಡುವೆಯೂ, ಎಸ್ಪಿ ಅಣ್ಣಾಮಲೈ ಜೆಸಿಬಿಯ ಡ್ರೈವರ್ ನಿರ್ದೇಶನ ಮಾಡ್ತಾ ಕುಸಿದಿದ್ದ ಗುಡ್ಡಗಳ ಮಣ್ಣನ್ನು ಎತ್ತಿ ಹಾಕಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಈ ನಡುವೆ ಕಳೆದ ಚಾರ್ಮಾಡಿ ಮಾರ್ಗದಲ್ಲಿ ಮಂಗಳೂರಿಗೆ ಹೋಗ್ತಿದ್ದ ರೋಗಿಗಳು ಕೂಡ ಅಸ್ವಸ್ಥರಾಗಿದರು. ಕೂಡಲೇ ಅಂಬುಲೆನ್ಸ್ ಕರೆಸಿ ಅವರನ್ನೂ ಆಸ್ಪತ್ರೆಗೆ ಸೇರಿಸಿದರು. ಇಷ್ಟೆಲ್ಲಾ ಕೆಲಸ ಮಾಡುವ ಹೊತ್ತಿಗೆ ಶಾಸಕ ಹರೀಶ್ ಹಾಗೂ ಎಸ್ಪಿ ಅಣ್ಣಾಮಲೈ ಮಳೆಯಲ್ಲಿ ತೊಯ್ದು ಹೋಗಿದರು.

    ಕೆಲಸದ ಬಗೆಗಿನ ಇವರ ಕಮಿಟ್ಮೆಂಟ್ ಕಂಡ ಸ್ಥಳಿಯರು ಹಾಗೂ ಕೆಲಸಗಾರರಿಗೆ ಇಷ್ಟವಾದರೆ ಪ್ರವಾಸಿಗರು ಹಾಗೂ ಮಕ್ಕಳು ತುಂಬು ಹೃದಯದ ಥ್ಯಾಂಕ್ಸ್ ಹೇಳಿದರು. ಒಂದು ವೇಳೆ, ಹರೀಶ್ ಹಾಗೂ ಅಣ್ಣಾಮಲೈ ನಾವು ಕೆಲಸ ಮಾಡೋರಲ್ಲ, ಮಾಡಿಸೋರೆಂದು ಅನ್ನೋರಾಗಿದರೆ ಚಾರ್ಮಾಡಿಯಲ್ಲಿನ ಸಮಸ್ಯೆ ಬಗೆಹರಿಯಲು ವಾರವೇ ಬೇಕಾಗಿತ್ತೋ ಏನೋ ಎಂದು ಅಲ್ಲಿದ್ದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

  • ತಾನೊಬ್ಬ ಎಸ್ಪಿ ಅನ್ನೋದನ್ನೆ ಮರೆತು ಮಹತ್ವದ ಕೆಲಸ ಮಾಡಿದ್ರು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ!

    ತಾನೊಬ್ಬ ಎಸ್ಪಿ ಅನ್ನೋದನ್ನೆ ಮರೆತು ಮಹತ್ವದ ಕೆಲಸ ಮಾಡಿದ್ರು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ!

    ಚಿಕ್ಕಮಗಳೂರು: ಕಳೆದೊಂದು ವಾರದ ಹಿಂದೆ ಕಾಫಿನಾಡಿನ ಚಾರ್ಮಾಡಿ ಘಾಟ್‍ನಲ್ಲಿ ಸುರಿದ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನಲ್ಲಿ ಮೂರು ದಿನಗಳ ಕಾಲ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು.

    ಭಾರೀ ಮಳೆ-ಗಾಳಿಯಿಂದ ಚಾರ್ಮಾಡಿಯಲ್ಲಿ ಸುಮಾರು ಒಂಬತ್ತು ಗುಡ್ಡಗಳು ಕುಸಿದು ಮಣ್ಣು ರಸ್ತೆಗೆ ಹರಡಿ ಸಂಚಾರ ಮಾಡದಂತಾಗಿತ್ತು. ಸುಮಾರು 18 ಗಂಟೆಗಳ ಕಾಲ ಜನ ಸುರಿಯೋ ಮಳೆಯಲ್ಲೇ ಊಟ-ತಿಂಡಿ ಇಲ್ಲದೆ ನಿಂತಲ್ಲೇ ನಿಲ್ಲುವಂತಹಾ ಸ್ಥಿತಿ ನಿರ್ಮಾಣವಾಗಿತ್ತು.

    ಚಾರ್ಮಾಡಿಯಲ್ಲಿ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿ, ಜನ ಮಳೆಯಲ್ಲಿ ಸಿಕ್ಕಿಬಿದ್ದಿದ್ದಾಗ ಸ್ಥಳಕ್ಕೆ ಬಂದ ಎಸ್ಪಿ ಅಣ್ಣಾಮಲೈ ತಾನೊಬ್ಬ ಎಸ್ಪಿ ಎನ್ನುವುದನ್ನೇ ಮರೆತು ಕೆಲಸಗಾರರ ಜೊತೆ ಕೆಲಸಗಾರರಾಗಿ ಕುಸಿದಿದ್ದ ಮಣ್ಣನ್ನು ಸರಿಸೋಕೆ ಮುಂದಾದರು.

    ಎಸ್ಪಿಯ ಶೈಲಿಯನ್ನು ಪ್ರದರ್ಶಿಸದೇ ಕೆಲಸಗಾರರೊಂದಿಗೆ ಮರದ ಟೊಂಗೆಗಳನ್ನು ಎತ್ತಿ ಹಾಕಿದ್ದರು. ಸುರಿಯೋ ಮಳೆಯನ್ನೂ ಲೆಕ್ಕಿಸದೆ ಸ್ಪಾಟ್‍ನಲ್ಲಿ ನಿಂತು ಟ್ರಾಫಿಕ್ ಕ್ಲಿಯರ್ ಮಾಡಿದರು. ಎಸ್ಪಿಯ ಗನ್ ಮ್ಯಾನ್ ಛತ್ರಿ ಹಿಡಿದು ಎಸ್ಪಿಯ ಹಿಂದಿನಿಂದ ಬಂದರೂ ಛತ್ರಿಯನ್ನ ಬೇಡವೆಂದು ಎಸ್ಪಿ ಮೊಣಕಾಲುದ್ದ ಕೆಸರಿನ ಮಧ್ಯೆಯೂ ಟ್ರಾಫಿಕ್ ಕ್ಲಿಯರ್ ಮಾಡಲು ಮುಂದಾದರು.

    ಇದನ್ನೆಲ್ಲಾ ಗಮನಿಸಿದ ಸ್ಥಳಿಯರು, ಕೆಲಸಗಾರರು, ವಾಹನ ಸವಾರರು ಎಸ್ಪಿ ಎಂದರೆ ಹೀಗಿರಬೇಕು ಎಂದು ಹೇಳಿದ್ದಾರೆ. ಸದ್ಯ ಅಣ್ಣಮಲೈ ಕೆಲಸ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

  • 30 ಮಂದಿ ಪ್ರಯಾಣಿಕರಿದ್ದ KSRTC ಸ್ಲೀಪರ್ ಬಸ್ ಪಲ್ಟಿ!

    30 ಮಂದಿ ಪ್ರಯಾಣಿಕರಿದ್ದ KSRTC ಸ್ಲೀಪರ್ ಬಸ್ ಪಲ್ಟಿ!

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಸ್ಲೀಪರ್ ಕೋಚ್ ಬಸ್ಸೊಂದು ಹಳ್ಳಕ್ಕೆ ಪಲ್ಟಿಯಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಗುಡ್ಡೆಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗುರುವಾರ ರಾತ್ರಿ ಬೆಂಗಳೂರಿನಿಂದ ಹೊರಟ ಬಸ್, ಕೊಪ್ಪ-ಶೃಂಗೇರಿ ಮಧ್ಯೆಯ ಗುಡ್ಡೆಹಳ್ಳಿ ಎಂಬ ಗ್ರಾಮದಲ್ಲಿ ಪಲ್ಟಿಯಾಗಿದೆ. ಮುಂಜಾನೆ ಸುಮಾರು 6 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವತಾಶ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

    ಬಸ್‍ನಲ್ಲಿ ಸುಮಾರು 25-30 ಜನರಿದ್ದು, 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‍ನಲ್ಲಿದ್ದ ನಾಲ್ಕೈದು ಜನರಿಗೆ ಗಂಭೀರ ಗಾಯವಾಗಿರೋದ್ರಿಂದ ಅವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಎನ್.ಆರ್.ಪುರ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಫಸ್ಟ್ ಟೈಂ ಮುಳುಗಿತು ನೆಲ್ಲಿಬೀಡು ಸೇತುವೆ- ಚಾರ್ಮಾಡಿ ಆಯ್ತು, ಈಗ ಬದಲಿ ಕುದುರೆಮುಖ ರಸ್ತೆಯೂ ಬಂದ್!

    ಫಸ್ಟ್ ಟೈಂ ಮುಳುಗಿತು ನೆಲ್ಲಿಬೀಡು ಸೇತುವೆ- ಚಾರ್ಮಾಡಿ ಆಯ್ತು, ಈಗ ಬದಲಿ ಕುದುರೆಮುಖ ರಸ್ತೆಯೂ ಬಂದ್!

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮಲೆನಾಡು ಭಾಗದ ಪ್ರಮುಖ ರಸ್ತೆಗಳು ಬಂದ್ ಆಗಿದೆ.

    ಜಿಲ್ಲೆಯ ಮಲೆನಾಡು ಭಾಗದ ಪ್ರಮುಖ ರಸ್ತೆಗಳಾದ ಚಾರ್ಮಾಡಿ ಘಾಟ್, ಕಳಸ-ಕುದುರೆಮುಖ-ಮಂಗಳೂರು ರಸ್ತೆ ಸಂಚಾರ, ಕಳಸ-ಹೊರನಾಡು ರಸ್ತೆ ಸಂಚಾರ, ಶೃಂಗೇರಿ-ದಕ್ಷಿಣ ಕನ್ನಡ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಭದ್ರಾ ಹಾಗೂ ಶೃಂಗೇರಿ ಶಾರದಾಂಭ ದೇವಾಲಯದ ಪಕ್ಕದಲ್ಲಿರುವ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಂಧ್ಯವಂದನಾ ಮಂಟಪ ಹಾಗೂ ಕಪ್ಪೆ ಶಂಕರ ದೇವಸ್ಥಾನ ಮುಳುಗಡೆಯಾಗಿದೆ. ಶೃಂಗೇರಿ ದೇವಸ್ಥಾನಕ್ಕೆ ಸಾಗುವ ಪ್ಯಾರಲಲ್ ರಸ್ತೆ ಸಹ ಮುಳುಗಡೆಯಾಗಿದೆ.

    ಇನ್ನೂ ರಾಷ್ಟ್ರೀಯ ಹೆದ್ದಾರಿ 169 ಶೃಂಗೇರಿ ಕೆರೆಕಟ್ಟೆ ಮಂಗಳೂರು ಬಸ್ ಸಂಚಾರ ಸ್ಥಗಿತವಾಗಿದ್ದು, ದಕ್ಷಿಣ ಕನ್ನಡದಿಂದ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯ ಅಗುಂಬೆ ಘಾಟ್ ನಲ್ಲಿ ಮಿನಿ ವಾಹನಗಳು ಸಂಚರಿಸುತ್ತಿದೆ.

    ಚಿಕ್ಕಮಗಳೂರಲ್ಲಿ ಮುಂದುವರೆದ ಮಳೆಯಿಂದಾಗಿ ಚಿಕ್ಕಮಗಳೂರು-ಮಂಗಳೂರು ಬದಲಿ ಮಾರ್ಗವೂ ಬಂದ್ ಆಗಿದೆ. ಕಳಸ, ಕುದುರೆಮುಖ, ಮಂಗಳೂರು ಮಾರ್ಗವೂ ಬಂದ್ ಆಗಿದ್ದು, ಚಾರ್ಮಾಡಿ ರಸ್ತೆ ಬಂದ್ ಆದ ಮೇಲೆ ಕುದುರೆಮುಖ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿತ್ತು. ಆದರೆ ಈಗ ಕಳಸ ಕುದುರೆಮುಖ ಮಾರ್ಗವೂ ಜಲಾವೃತಗೊಂಡಿದ್ದು, ಕಳಸಾದ 150 ಅಡಿ ನೆಲ್ಲಿಬೀಡು ಸೇತುವೆ ಇತಿಹಾಸದಲ್ಲಿ ಮೊದಲ ಬಾರಿ ಮುಳುಗಿದೆ.

    ಇನ್ನೂ ಮೂಡಿಗೆರೆ ತಾಲೂಕಿನ ಕಳಸ ಹಾಗೂ ಕುದುರೆಮುಖದಲ್ಲಿ ಬಾರಿ ಮಳೆಯಿಂದ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಒಂದು ಕಿ.ಮೀವರೆಗೂ ವಾಹನಗಳು ಸಾಲುಗಟ್ಟಿ ನಿಂತಿದೆ. ಶೃಂಗೇರಿಯ ಎಸ್.ಕೆ.ಬಾರ್ಡ್ ರಸ್ತೆ ಮಧ್ಯೆಯೇ ಮರ ಬಿದ್ದು ಹಾಗೂ ಮಣ್ಣು ಕುಸಿತವಾಗಿದೆ. ಹಾಗಾಗಿ ಬೈಕ್ ಹಾಗೂ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಇನ್ನೂ ಬಾರಿ ವಾಹನ ಸಂಚಾರಕ್ಕೆ ಪೊಲೀಸರು ತಡೆ ನೀಡಿದ್ದಾರೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

    ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ರಸ್ತೆಗಳು ಕೆರೆಯಂತಾಗಿದ್ದು, ಕೊಟ್ಟಿಗೆಹಾರದ ರಸ್ತೆ ಮೇಲೆ ನೀರಿ ವೈಭವ ಹರಿಯುತ್ತಿದೆ. ಅನೇಕ ಕಡೆಗಳಲ್ಲಿ ರಸ್ತೆ ಕಾಣದಂತೆ ಸಂಪೂರ್ಣ ನೀರು ಆವರಿಸಿದೆ. ಹಾಗಾಗಿ ರಸ್ತೆ ಸಂಚಾರಕ್ಕೆ ತೊಂದರೆ ಆಗಿದೆ. ಗುಡ್ಡದ ಮೇಲಿನಿಂದ ನೀರು ಹರಿದು ಬರುತ್ತಿರುವ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

    ಇನ್ನೂ ಮೂಡಿಗೆರೆ ತಾಲೂಕಿನ ಹೊರನಾಡು ಸಮೀಪದಲ್ಲಿರುವ ಹೆಬ್ಬಾಳೆ ಸೇತುವೆ ಕಾಣದಂತೆ ನೀರು ಹರಿಯುತ್ತಿದ್ದು, ಸೇತುವೆ ಸಂಪೂರ್ಣ ಮುಳುಗಿದೆ. ಕಳಸ – ಹೊರನಾಡು – ಕುದುರೆಮುಖ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ತಗ್ಗುವವರೆಗೂ ಖಾಸಗಿ ಬಸ್, ಪ್ರವಾಸಿ ವಾಹನಗಳಿಗೆ ಸಂಚಾರ ಇಲ್ಲ. ಅಲ್ಲದೇ ಕಳಸ- ಹೊರನಾಡು ಸಂಪರ್ಕ ಬಂದ್ ಆಗಿದೆ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಆತಂಕದಲ್ಲಿದ್ದಾರೆ.

    ಚಿಕ್ಕಮಗಳೂರಲ್ಲಿ ಮುಂದುವರಿದ ಮಳೆಯ ಅಬ್ಬರಕ್ಕೆ ಶೃಂಗೇರಿಯ ಭಾರತಿ ಬೀದಿ ಹಾಗೂ ರಸ್ತೆಗಳು ಕೆರೆಯಂತಾಗಿದೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಶಂಗೇರಿಯ ಅನೇಕ ಕಡೆಗಳಲ್ಲಿ ರಸ್ತೆ ಕಾಣದಂತೆ ಸಂಪೂರ್ಣ ನೀರು ಆವರಿಸಿದೆ. ರಸ್ತೆಯ ತುಂಬೆಲ್ಲ ನೀರು ಹರಿಯುತ್ತಿದ್ದು ಸಂಚಾರಕ್ಕೆ ತೊಂದರೆ ಆಗಿದೆ. ಅಲ್ಲದೇ ತುಂಗಾ ನದಿ ತುಂಬಿ ಅಕ್ಕಪಕ್ಕದ ಜಮೀನಿಗೂ ನೀರು ನುಗ್ಗುತ್ತಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

    ಮಳೆಯಿಂದಾಗಿ ಶೃಂಗೇರಿ, ಕೊಪ್ಪ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಭದ್ರಾ, ತುಂಗಾ, ಹೇಮಾವತಿ ನದಿಗಳ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅಪಾಯ ಮಟ್ಟವನ್ನು ಮೀರಿ ನೀರು ಹರಿಯುತ್ತಿದೆ.

  • ಚಾರ್ಮಾಡಿಯಲ್ಲಿ ಸಂಚಾರ ಬಂದ್- ಕುದುರೆಮುಖ ಸಂಚಾರ ನಿರ್ಬಂಧ ತೆರವು

    ಚಾರ್ಮಾಡಿಯಲ್ಲಿ ಸಂಚಾರ ಬಂದ್- ಕುದುರೆಮುಖ ಸಂಚಾರ ನಿರ್ಬಂಧ ತೆರವು

    ಚಿಕ್ಕಮಗಳೂರು: ರಾತ್ರಿ ಒಂಬತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೆ ಸಂಚಾರಕ್ಕೆ ನಿರ್ಬಂಧವಿದ್ದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಮುಖ ಮಾರ್ಗದಲ್ಲಿ ಇದೀಗ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಶಿರಾಡಿ ಘಾಟ್ ಬಂದ್ ಆದ ಮೇಲೆ ಕಳೆದ 4 ತಿಂಗಳಿನಿಂದ ಕುದುರೆಮುಖದಿಂದ ಮಂಗಳೂರಿಗೆ ಹೋಗುವ ಭಾರೀ ವಾಹನಗಳು ಹಾಗೂ ಇತರೇ ವಾಹನಗಳು ಮಾರ್ಗದಲ್ಲಿ ರಾತ್ರಿ ಪಾಳಯದಲ್ಲೂ ಸಂಚರಿಸಲು ಸರ್ಕಾರ ಅನುವು ಮಾಡಿಕೊಟ್ಟಿತ್ತು. ಆದರೆ ಕುದುರೆಮುಖ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ 45 ನಿಮಿಷಗಳ ಕಾಲ ಸಮಯದ ಮಿತಿಯನ್ನು ಹೇರಲಾಗಿತ್ತು. ಅಷ್ಟರಲ್ಲಿ ವಾಹನಗಳು ಕುದುರೆಮುಖದಿಂದ ಮಂಗಳೂರಿನ ಗಡಿ ಮುಟ್ಟಬೇಕಿತ್ತು.

    ಈಗ ಚಾರ್ಮಾಡಿಯಲ್ಲಿ ಸಮಸ್ಯೆ ಆಗಿರುವ 45 ನಿಮಿಷಗಳವರೆಗಿನ ನಿರ್ಬಂಧವನ್ನು ತೆರೆಯಲಾಗಿದೆ. ದಿನದ 24 ಗಂಟೆಯೂ ಯಾವಾಗ ಬೇಕಾದರು, ಯಾವ ವಾಹನ ಬೇಕಾದರು ಈ ಮಾರ್ಗದಲ್ಲಿ ಯಾವುದೇ ಟೈಂ ಲಿಮಿಟ್ ಇಲ್ಲದೆ ಸಾಗಲು ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ಇದರಿಂದ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗಬೇಕಾದ ಪ್ರವಾಸಿಗರು ಮೂಡಿಗೆರೆ, ಕಳಸ ಮಾರ್ಗವಾಗಿ ಕುದುರೆಮುಖದಿಂದ ಮಂಗಳೂರು ತಲುಪಬಹುದು.

    ಕುದುರೆಮುಖ ರಸ್ತೆಯಲ್ಲಿ ಕಾಡು ಪ್ರಾಣಿಗಳ ಹತ್ಯೆ ನಡೆಯುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ 45 ನಿಮಿಷಗಳ ಕಾಲ ಸಮಯದ ಮಿತಿಯನ್ನು ವಿಧಿಸಿತ್ತು.

    ಇಂದು, ನಾಳೆ ಬಂದ್: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಭೂಕುಸಿತ ಆಗಿದ್ದರಿಂದ ಎರಡೂ ಕಡೆಯಿಂದ ವಾಹನ ಸಂಚಾರ ಬಂದ್ ಆಗಿತ್ತು. ಈ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಎಲ್ಲಾ ವಾಹನಗಳು ಸುಮಾರು ಮೂರು ಕಿಮೀ ಉದ್ದಕ್ಕೆ ಸಾಲುಗಟ್ಟಿ ನಿಂತಲ್ಲಿಯೇ ಸಿಲುಕಿಕೊಂಡಿದ್ದವು. ಚಾರ್ಮಾಡಿ ಘಾಟ್ ಭೂಕುಸಿತ ಹಿನ್ನೆಲೆ ಸದ್ಯ ಕಾಮಗಾರಿ ಮುಂದುವರಿಕೆಗೆ ಅವಕಾಶ ಕೇಳಿದ ಅಧಿಕಾರಿಗಳು ಮತ್ತೆರಡು ದಿನ ಚಾರ್ಮಾಡಿ ಘಾಟ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಬುಧವಾರ ಮತ್ತು ಗುರುವಾರ ಈ ರಸ್ತೆ ಬಂದ್ ಆಗಲಿದೆ.

    ಮಳೆಯಿಂದ ಮತ್ತಷ್ಟು ಮರ, ಗುಡ್ಡಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನಮಗೆ 48 ಗಂಟೆಗೆ ಸಮಯ ಕೊಡಿ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತದ ನೆರವಿಂದ ಎಲ್ಲವನ್ನೂ ತೆರವುಗೊಳಿಸ್ತೇವೆ ಎಂದು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಹೇಳಿದ್ದಾರೆ.

  • ಚಾರ್ಮಾಡಿ ಘಾಟ್‍ನಲ್ಲಿ ಮಣ್ಣು ಕುಸಿತ- ವಾಹನ ಸಂಚಾರ ಬಂದ್

    ಚಾರ್ಮಾಡಿ ಘಾಟ್‍ನಲ್ಲಿ ಮಣ್ಣು ಕುಸಿತ- ವಾಹನ ಸಂಚಾರ ಬಂದ್

    ಚಿಕ್ಕಮಗಳೂರು: ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲಾದ್ಯಂತ ಮಳೆಯ ಅಬ್ಬರ ಮುಂದುವರೆದಿದೆ. ಚಾರ್ಮಾಡಿ ಘಾಟ್‍ನಲ್ಲಿ ರಸ್ತೆಗೆ ಅಡ್ಡಲಾಗಿ ಮಣ್ಣು ಕುಸಿದು ಬಿದ್ದಿದ್ದು, ವಾಹನ ಸಂಚಾರ ಬಂದ್ ಆಗಿದೆ.

    ಚಾರ್ಮಾಡಿ ಘಾಟ್‍ನಲ್ಲಿ ರಾತ್ರಿಯಿಡೀ ಮಣ್ಣು ತೆರವು ಕಾರ್ಯಾಚರಣೆ ನಡೆಯಿತು. ಹಾಗಾಗಿ ಎಸ್‍ಕೆ ಬಾರ್ಡರ್, ಕುದುರೆಮುಖ ಮೂಲಕ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನಿಂದ ಬರುವ ವಾಹನಗಳಿಗೆ ಧರ್ಮಸ್ಥಳ, ಉಜಿರೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.

    ಬೆಂಗಳೂರು- ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗುವ ವಾಹನಗಳಿಗೆ ಕೊಟ್ಟಿಗೆಹಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಇನ್ನು ಚಿಕ್ಕಮಗಳೂರಿನಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪ್ರಮುಖ ರಸ್ತೆಗಳೆಲ್ಲಾ ಜಲಾವೃತಗೊಂಡಿದೆ.

    ಈ ಹಿನ್ನೆಲೆ ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪದ ಶಾಲಾ ಕಾಲೇಜುಗಳಿಗೆ ಇಂದು ಸಹ ರಜೆ ಘೋಷಿಸಲಾಗಿದೆ.

  • ಅಪಘಾತಗೊಂಡಿದ್ದ ಆಲ್ಟೋ ಕಾರು ನೋಡಲು ಹೋಗಿ ಲಾರಿಗೆ ಸಫಾರಿ ಕಾರು ಡಿಕ್ಕಿ

    ಅಪಘಾತಗೊಂಡಿದ್ದ ಆಲ್ಟೋ ಕಾರು ನೋಡಲು ಹೋಗಿ ಲಾರಿಗೆ ಸಫಾರಿ ಕಾರು ಡಿಕ್ಕಿ

    ಚಿಕ್ಕಮಗಳೂರು: ಅಪಘಾತವಾಗಿ ನಿಂತಿದ್ದ ಕಾರನ್ನ ನೋಡಲು ಹೋಗಿ ಸಫಾರಿ ಕಾರೊಂದು ಲಾರಿಗೆ ಡಿಕ್ಕಿ ಹೊಡೆದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾರ್ಗಲ್ ಗ್ರಾಮದಲ್ಲಿ ನಡೆದಿದೆ.

    ಆಲ್ಟೋ ಕಾರೊಂದು ಇಂದು ಬೆಳಗ್ಗೆ ಅಪಘಾತವಾಗಿ ರಸ್ತೆ ಬದಿ ನಿಂತಿತ್ತು. ಮಂಗಳೂರಿನಿಂದ ಬರುತ್ತಿದ್ದ ಸಫಾರಿ ಕಾರಿನ ಚಾಲಕ ಅಪಘಾತವಾಗಿ ನಿಂತಿದ್ದ ಈ ಕಾರನ್ನು ನೋಡಲು ಹೋಗಿ ಎದುರಿನಿಂದ ಬಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾದ್ರೆ, ಚಾಲಕನಿಗೆ ಮಾತ್ರ ಗಂಭೀರ ಗಾಯವಾಗಿದೆ.

    ಚಿಕ್ಕಮಗಳೂರಿನ ಗಾಂಧಿ ನಗರ ನಿವಾಸಿಗಳಾದ ಗೌಸ್ ಹಾಗೂ ಶಬನಂ ಕುಟುಂಬ ಮಗಳನ್ನ ಮಂಗಳೂರಿನ ಕಾಲೇಜಿಗೆ ಸೇರಿಸಿ ಬರುವಾಗ ಈ ಅಪಘಾತ ಸಂಭವಿಸಿದೆ. ಕಾರಿನ ಚಾಲಕ ಸರ್ದಾರ್ ಗೆ ಗಂಭೀರ ಗಾಯವಾದರೆ, ಸಹಪ್ರಯಾಣಿಕರಾದ ಗೌಸ್, ಶಬನಂ ಹಾಗೂ ಶಿಫಾಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಧಾರಾಕಾರವಾಗಿ ಸುರಿಯುತ್ತಿರೋ ಮಳೆಯ ಮಧ್ಯೆಯೂ ಸಾರ್ವಜನಿಕರು ಹಾಗೂ ಪೊಲೀಸರು ಹರಸಾಹಸ ಪಟ್ಟು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅದೃಷ್ಟವತಾಶ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಈ ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • KSRTC, ಕಾರು ಮುಖಾಮುಖಿ ಡಿಕ್ಕಿ- ಯುವಕರಿಬ್ಬರು ಗಂಭೀರ!

    KSRTC, ಕಾರು ಮುಖಾಮುಖಿ ಡಿಕ್ಕಿ- ಯುವಕರಿಬ್ಬರು ಗಂಭೀರ!

    – ಚಾಲಕನನ್ನು ಹೊರತೆಗೆಯಲು ಹರಸಾಹಸಪಟ್ಟ ಸ್ಥಳೀಯರು

    ಚಿಕ್ಕಮಗಳೂರು: ಕೆಎಸ್‍ಆರ್ ಟಿಸಿ ಹಾಗೂ ಕಾರು ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದ ಬಳಿ ನಡೆದಿದೆ.

    ಶಿವಮೊಗ್ಗದಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಸರ್ಕಾರಿ ಬಸ್ ಹಾಗೂ ಕಡೂರಿನಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಕಾರು ಮುಖಾಮುಖಿಯಾಗಿ ಡಿಕ್ಕಿಯಾಗಿವೆ. ಪರಿಣಾಮ ಕಾರಿನಲ್ಲಿದ್ದ 25 ರಿಂದ 28 ವರ್ಷದ ಇಬ್ಬರು ಯುವಕರ ಸ್ಥಿತಿ ಗಂಭೀರವಾಗಿದೆ.

    ಅಪಘಾತವಾದ ಕೂಡಲೇ ಕಾರಿನ ಸಹಚಾಲಕನನ್ನ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅಪಘಾತದಿಂದ ನಜ್ಜುಗುಜ್ಜಾಗಿದ್ದ ಕಾರಿನ ಡೋರ್ ಜಾಮ್ ಆದ ಪರಿಣಾಮ ಚಾಲಕನನ್ನ ಸ್ಥಳೀಯರು ಅರ್ಧ ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟು ಹೊರತೆಗೆದು ಶಿವಮೊಗ್ಗಕ್ಕೆ ರವಾನಿಸಿದ್ದಾರೆ.

    ಇಬ್ಬರು ಗಾಯಾಳು ಯುವಕರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರ ಯುವಕರ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕಪ್ಪೆ ನುಂಗಿ ವಾಷಿಂಗ್ ಮಷೀನ್ ಸೇರಿದ ಹಾವು

    ಕಪ್ಪೆ ನುಂಗಿ ವಾಷಿಂಗ್ ಮಷೀನ್ ಸೇರಿದ ಹಾವು

    ಚಿಕ್ಕಮಗಳೂರು: ಕಪ್ಪೆ ನುಂಗಿ ವಾಷಿಂಗ್ ಮಷೀನ್ ಸೇರಿದ್ದ ಹಾವಿನ ರಕ್ಷಣೆ ಮಾಡಿದ ಘಟನೆ ಚಿಕ್ಕಮಗಳೂರಿನ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

    ಪ್ರದೀಪ್ ಎಂಬವರ ಮನೆಯೊಳಗಡೆ ಹಾವು ಸೇರಿದ್ದು, ಕೆರೆ ಹಾವು ಸುಮಾರು ಆರು ಅಡಿ ಉದ್ದವಿತ್ತು. ಹಾವು ದೊಡ್ಡ ಕಪ್ಪೆ ನುಂಗಿ ತೆವಳಲು ಆಗದೆ ವಾಷಿಂಗ್ ಮಷೀನ್ ಸೇರಿತ್ತು. ವಾಷಿಂಗ್ ಮಷೀನ್ ಬಳಿ ರಕ್ತ ನೋಡಿ ಮನೆಯವರು ಗಾಬರಿಗೊಂಡರು.

    ಮೊದಲು ಹಾವನ್ನು ನೋಡಿ ನಾಗರಹಾವೆಂದು ಮನೆಯವರು ಹೆದರಿಕೊಂಡರು. ವಾಷಿಂಗ್ ಮಷೀನ್ ಬಿಚ್ಚಿದ ಮೇಲೆ ಅದು ಕೆರೆ ಹಾವು ಎಂದು ತಿಳಿಯಿತು. ಬಳಿಕ ಸ್ನೇಕ್ ನರೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ನರೇಶ್ ಹಾವನ್ನು ರಕ್ಷಿಸಿದ್ದಾರೆ.

  • ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಸಾವು- ಫೇಸ್ ಬುಕ್ ನಲ್ಲಿ ಫೇಕ್ ಸುದ್ದಿ ಶೇರ್

    ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಸಾವು- ಫೇಸ್ ಬುಕ್ ನಲ್ಲಿ ಫೇಕ್ ಸುದ್ದಿ ಶೇರ್

    ಚಿಕ್ಕಮಗಳೂರು: ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಚಿವೆ ಹಾಗೂ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಹೃದಯಾಘಾತದಿಂದ ಸಾವು ಎಂದು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.

    ವೀರೇಂದ್ರ ಭಗತ್ ಎಂಬ ವ್ಯಕ್ತಿಯ ಹೆಸರಿನಿಂದ ಈ ಸಂದೇಶ ಶೇರ್ ಆಗಿದ್ದು, ಈ ಕುರಿತು ಮೂಡಿಗೆರೆ ಕಾಂಗ್ರೆಸ್ ವಕ್ತಾರ ಅನಂತ್ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೀವಂತವಾಗಿರುವ ವ್ಯಕ್ತಿಯನ್ನು ಸತ್ತಿದ್ದಾರೆಂದು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.

    ಇದರಿಂದ ಕುಟುಂಬಸ್ಥರು ಹಾಗೂ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಕೂಡಲೇ ಫೇಸ್‍ಬುಕ್‍ನಲ್ಲಿ ಸಂದೇಶ ರವಾನೆ ಮಾಡಿದ ವ್ಯಕ್ತಿ ವೀರೇಂದ್ರ ಭಗತ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅನಂತ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರೋ ಮೂಡಿಗೆರೆ ಪೊಲೀಸರು ವೀರೇಂದ್ರ ಭಗತ್ ಬಗ್ಗೆ ತನಿಖೆ ನಡೆಸಿ, ಆತನ ಫೇಸ್‍ಬುಕ್ ಖಾತೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ಚುನಾವಣೆ ಹೊತ್ತಲ್ಲಿ ಕಾರ್ಯಕರ್ತರು ತಮ್ಮ ವಿರೋಧ ಪಕ್ಷದ ಅಭ್ಯರ್ಥಿಗಳ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿ, ತಮ್ಮ ಅಭ್ಯರ್ಥಿಗಳನ್ನ ಹಾಡಿ ಹೊಗಳೋದು ಮಾಮೂಲಿ. ಆದರೆ ಓರ್ವ ಬದುಕಿರುವ ವ್ಯಕ್ತಿಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಾಯಿಸುವ ಮಟ್ಟಕ್ಕೆ ಆಧುನಿಕ ಸಮಾಜ ಬೆಳೆದು, ಸಮಾಜ ತಂತ್ರಜ್ಞಾನವನ್ನ ಹೇಗೆಲ್ಲಾ ಬಳಕೆ ಮಾಡಿಕೊಳ್ತಿದೆ ಎಂದು ಎಂದು ಮೋಟಮ್ಮ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.