Tag: chikkaballapur< mother

  • ತಾಯಿ ಸಾಕುವ ವಿಚಾರಕ್ಕೆ ಮಗ-ಮಗಳ ಕುಟುಂಬಸ್ಥರ ಮಧ್ಯೆ ಮಾರಾಮಾರಿ

    ತಾಯಿ ಸಾಕುವ ವಿಚಾರಕ್ಕೆ ಮಗ-ಮಗಳ ಕುಟುಂಬಸ್ಥರ ಮಧ್ಯೆ ಮಾರಾಮಾರಿ

    – ಬೀದಿಗೆ ಬಿದ್ದ ತಾಯಿ, ಐವರಿಗೆ ಗಂಭೀರ ಗಾಯ

    ಚಿಕ್ಕಬಳ್ಳಾಪುರ: ಹೆತ್ತ ತಾಯಿಯನ್ನು ಸಾಕುವ ವಿಚಾರದಲ್ಲಿ ಮಗ ಹಾಗೂ ಮಗಳ ಕುಟುಂಬಸ್ಥರ ಮಧ್ಯೆ ಮಾರಾಮಾರಿ ನಡೆದ ದೇವನಹಳ್ಳಿ ತಾಲೂಕಿನ ದೊಡ್ಡ ಸಾಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ದೊಡ್ಡ ಸಾಗರಹಳ್ಳಿ ಗ್ರಾಮದ ಬಿಜುಮಾ ಎಂಬವರ ಮಗ ಇಮಾಂಸಾಬ್ ಹಾಗೂ ಮಗಳು ಜಂಗಮಾ ಕುಟುಂಬಸ್ಥರು ಮಧ್ಯೆ ಗಲಾಟೆಯಾಗಿದೆ. ವಯಸ್ಸಾಗಿದ್ದ ತಾಯಿ ಬಿಜುಮಾ ಕಳೆದ 15 ವರ್ಷಗಳಿಂದ ಮಗಳ ಜೊತೆಗೆ ವಾಸವಾಗಿದ್ದಾರೆ. ಆದರೆ ಇತ್ತೀಚೆಗೆ ಬಿಜುಮಾ ಅವರಿಗೆ ಬರುತ್ತಿದ್ದ ಪಿಂಚಣಿ ಹಣವನ್ನು ಮಗಳಾದ ಜಂಗುಮಾ ಪಡೆದುಕೊಳ್ಳುತ್ತಿದ್ದಾರೆ ಅಂತ ಇಮಾಂಸಾಬ್ ಹೆಂಡತಿ ನನ್ನಿಮಾ ಜಂಗುಮಾ ಕಂಡಾಗ ಗ್ರಾಮದಲ್ಲಿ ಬೈದಾಡಿ ತಿರುಗುತ್ತಿದ್ದಂತೆ. ಹೀಗಾಗಿ ತಮ್ಮ ಮನೆಯಲ್ಲಿದ್ದ ತಾಯಿಯನ್ನು ಮಗಳು ಜಂಗುಮಾ ತನ್ನ ಅಣ್ಣನಾದ ಇಮಾಂಸಾಬ್ ಮನೆಗೆ ಹೋಗುವಂತೆ ಕಳುಹಿಸಿ ಬಿಟ್ಟಿದ್ದಾಳೆ.

    ಇತ್ತ ಮನೆಗೆ ಬಂದ ತಾಯಿ ಬಿಜುಮಾ ಅವರನ್ನು ಮನೆಗೆ ಸೇರಿಸಿಕೊಳ್ಳದ ಮಗ ಹಾಗೂ ಆತನ ಕುಟುಂಬಸ್ಥರು ಮನೆಯಿಂದ ಹೊರಗೆ ಹಾಕಿದ್ದಾರೆ. ಈ ವಿಚಾರದಲ್ಲಿ ಗ್ರಾಮದ ಹಿರಿಯ ಮುಖಂಡರು ಎರಡು ಕುಟುಂಬಸ್ಥರನ್ನು ಕರೆಯಿಸಿ ಮಸೀದಿಯಲ್ಲಿ ಭಾನುವಾರ ರಾಜೀ ಪಂಚಾಯಿತಿಗೆ ಮುಂದಾಗಿದ್ದರು. ಆದರೆ ಈ ವೇಳೆ ಇಮಾಂಸಾಬ್ ಕಡೆಯವರು ಎನ್ನಲಾದ ಅಪರಿಚಿತರ ಗುಂಪು ಜಂಗುಮಾ ಅವರ ಮನೆಯ ಮೇಲೆ ದಾಳಿ ಮಾಡಿದ್ದಾರೆ.

    ದುಷ್ಕರ್ಮಿಗಳು ಜಂಗುಮಾ ಹಾಗೂ ಮಕ್ಕಳಾದ ಬಿಬಿಜಾನ್, ರೇಷ್ಮಾ ಮತ್ತು ಅವರ ಅಳಿಯನಾದ ಮೌಲಾ ಸೇರಿದಂತೆ ಬಿಬಿಜಾಂಗ್ ಮಗಳಾದ ಅಲಿಯಾ ಮೇಲೆ ಮಚ್ಚು ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಗಾಯಾಳುಗಳು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಗಂಭೀರವಾಗಿ ಗಾಯಗೊಂಡ ಐವರಲ್ಲಿ ಬಿಬಿಜಾನ್ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಲಾಗಿದ್ದು, ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಗಾಯಾಳುಗಳ ಸಂಬಂಧಿಕರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಮಗ ಹಾಗೂ ಮಗಳ ನಡುವಿನ ಜಗಳದಲ್ಲಿ ಹೆತ್ತತಾಯಿ ಬೀದಿಗೆ ಬಿದ್ದಿದ್ದಾರೆ.

  • ಮೀಟರ್ ಬಡ್ಡಿ ದಂಧೆ- ಮೂವರು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆಗೆ ಯತ್ನ!

    ಮೀಟರ್ ಬಡ್ಡಿ ದಂಧೆ- ಮೂವರು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆಗೆ ಯತ್ನ!

    ಚಿಕ್ಕಬಳ್ಳಾಪುರ: ಮೀಟರ್ ಬಡ್ಡಿದಂಧೆಕೋರರ ಕಾಟದಿಂದ ಬೇಸತ್ತ ತಾಯಿ, ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ತಾಯಿ ರಾಜಮ್ಮ, ತನ್ನ ಮಕ್ಕಳಾದ ಮನೋಜ್, ಅಮೃತ, ಭೂಮಿಕಾಳ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಸದ್ಯ ನಾಲ್ವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರಾಜಮ್ಮ ತನ್ನ ಮೂವರು ಮಕ್ಕಳ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಬಳಿಕ ಜಿರಳೆ ಔಷಧಿ ನುಂಗಿ, ತನ್ನ ಕತ್ತನ್ನು ಕೂಡ ಕೊಯ್ದುಕೊಳ್ಳುವ ಮೂಲಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕತ್ತು ಕೊಯ್ಯುವಾಗ ನೋವಿನಿಂದ ಚೀರಾಡುತ್ತಿರುವ ಮಕ್ಕಳ ಧ್ವನಿ ಅಕ್ಕ-ಪಕ್ಕದ ಮನೆಯವರಿಗೆ ಕೇಳಿಸಿದೆ. ಕೂಡಲೇ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿ ಎಲ್ಲರನ್ನು ರಕ್ಷಿಸಿದ್ದಾರೆ. ಸದ್ಯ ತಾಯಿ ಸೇರಿ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಅಕ್ಕ-ಪಕ್ಕದ ಮನೆಯ ಮಹಿಳೆಯರು ಬಡ್ಡಿಗೆ ಹಣ ಕೊಡುತ್ತಿದ್ದರು. ಹೀಗಾಗಿ ನಾನು 1 ಲಕ್ಷದಷ್ಟು ಹಣವನ್ನು ಬಡ್ಡಿಗೆ ಪಡೆದುಕೊಂಡಿದ್ದೆ. ಆದ್ರೆ ಪತಿ ವೆಂಕಟೇಶ್ ಕುಡಿತದ ದಾಸನಾಗಿದ್ದರಿಂದ ಬಡ್ಡಿ ಕಟ್ಟಿಲ್ಲ. ಸದ್ಯ ನನಗೆ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಬಡ್ಡಿಯವರು ಪದೇ ಪದೇ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ. ಪರಿಣಾಮ ಮನನೊಂದು ಈ ಕೃತ್ಯ ಎಸಗಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆಯನ್ನು ಹೋಗಲಾಡಿಸಬೇಕು ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪ್ರಯತ್ನ ಮಾಡುತ್ತಿದ್ದರೂ, ಕೆಲವೆಡೆ ದಂಧೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಇದೊಂದು ನೈಜ ಉದಾಹರಣೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv