ಚಿಕ್ಕಬಳ್ಳಾಪುರ: ಮನೆಯಲ್ಲಿ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿರುವ ಕಾಮುಕರು, ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗ್ರಾಮದ 9 ವರ್ಷದ ಬಾಲಕಿಯನ್ನ ಅಪಹರಿಸಿರುವ ದುಷ್ಕರ್ಮಿಗಳು, ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮನೆಯಲ್ಲಿ ಮಲಗಿದ್ದ ಬಾಲಕಿ ನಾಪತ್ತೆಯಾದ ನಂತರ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದ್ರೂ ಪತ್ತೆಯಾಗಿರಲಿಲ್ಲ. ರಾತ್ರಿ ನಾಪತ್ತೆಯಾದ ಬಾಲಕಿ ಬೆಳಗ್ಗೆ ಗ್ರಾಮದ ಹೊರವಲಯದ ತೋಟವೊಂದರ ಬಳಿಯ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಅರೆ ನಗ್ನ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಮೈ ಮೇಲೆ ತರಚಿದ ಗಾಯಗಾಳಗಿದ್ದು, ಕತ್ತು ಹಿಸುಕಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಸೇರಿದಂತೆ ಎಸ್ಪಿ ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಡಿಯಾ ಸ್ಯಾಟ್ಸ್ ಕಾರ್ಮಿಕರ ವೇತನ ಹೆಚ್ಚಳ ಮತ್ತು ಯೂನಿಯನ್ ಗೆ ಮಾನ್ಯತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೂರಾರು ಕಾರ್ಮಿಕರು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗೇಟ್ ಬಳಿ ಜಮಾಯಿಸಿದ ನೂರಾರು ಕಾರ್ಮಿಕರು ಏರ್ ಇಂಡಿಯಾ ಸ್ಯಾಟ್ಸ್ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏರ್‍ಪೋರ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕನಿಷ್ಟ ವೇತನ ಸೇರಿದಂತೆ ಸೂಕ್ತ ಸೌಲಭ್ಯಗಳನ್ನ ನೀಡುತ್ತಿಲ್ಲ. ಹೀಗಾಗಿ ಕಾರ್ಮಿಕರು ಬೇಡಿಕೆಗಳ ಈಡೇರಿಕೆಗೆ ಏರ್ ಇಂಡಿಯಾ ಸ್ಯಾಟ್ಸ್ ನ ಎಲ್ಲ ಕಾರ್ಮಿಕರು ಒಟ್ಟಾಗಿ ಯೂನಿಯನ್ ಸಂಘಟನೆ ಮಾಡಿಕೊಂಡಿದ್ರು. ಆದರೆ ಈ ಸಂಘಟನೆಗೆ ಆಡಳಿತ ಮಂಡಳಿ ಮಾನ್ಯತೆ ನೀಡುತ್ತಿಲ್ಲ ಅಂತ ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೂರು ದಿನಗಳ ಕಾಲ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು ಮೂರು ದಿನಗಳಲ್ಲಿ ಆಡಳಿತ ಮಂಡಳಿ ಕಾರ್ಮಿಕರ ಬೇಡಿಕೆಗಳಿಗೆ ಸ್ವಂದಿಸದಿದಲ್ಲಿ ಕಾರ್ಮಿಕರೆಲ್ಲ ಒಗ್ಗಟ್ಟಾಗಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಯೂನಿಯನ್ ಸಂಘಟನಾ ಕಾರ್ಯದರ್ಶಿ ಸತೀಶ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ: ಆಕ್ಟಿವಾ ಹೋಂಡಾ ಬೈಕಿಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಭೀಕರ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ಈ ಅಪಘಾತ ನಡೆದಿದೆ. ಇದು ಒಂದು ವಾರದ ಹಿಂದೆ ಅಪಘಾತ ನಡೆದಿದೆ ಎನ್ನಲಾಗಿದೆ. ಈ ಅಪಘಾತದ ದೃಶ್ಯ ಹೆದ್ದಾರಿ ಬದಿಯ ಹೋಟೆಲ್‍ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಕ್ಟಿವಾ ಹೋಂಡಾ ಬೈಕ್ ನಲ್ಲಿದ್ದ ಸವಾರ ನೋಡದೇ ಬಲಗಡೆಗೆ ಗಾಡಿಯನ್ನು ತಿರುಗಿಸಿದ್ದಾನೆ. ಈ ವೇಳೆ ಅತಿ ವೇಗದಿಂದ ಬರುತ್ತಿದ್ದ ಟಿಪ್ಪರ್ ಲಾರಿ ಬಂದು ಆಕ್ಟಿವಾಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿ ಹೊಡೆದ ರಭಸಕ್ಕೆ ಆಕ್ಟಿವಾ ಹೋಂಡಾ ನೆಲಕ್ಕುರುಳಿ ಬಿದ್ದು ಸವಾರನಿಗೆ ತೀವ್ರವಾದ ಗಾಯಗಳಾಗಿದೆ. ಅದೇ ಆಕ್ಟಿವಾ ಹೋಂಡಾದ ಹಿಂಬದಿ ಕುಳಿತಿದ್ದ ಮಹಿಳೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾಳೆ.
ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ತಿಳಿದುಬಂದಿದೆ. ಈ ಕುರಿತು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ: ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮುಂದಾಗಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಸ್ಪೆಕ್ಟ್ರಮ್ ರೇಸಿಂಗ್ ಖಾಸಗಿ ಸಂಸ್ಥೆ ಸಹಯೋಗದೊಂದಿಗೆ ಇದೇ ಪ್ರಥಮ ಭಾರಿಗೆ ನಂದಿಗಿರಿಧಾಮದಲ್ಲಿ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಿದೆ.
ನಂದಿಗಿರಿಧಾಮದ ಬೆಟ್ಟದ ಕ್ರಾಸ್‍ನಿಂದ ಬೆಟ್ಟದ ತುದಿ ವರೆಗೆ 8 ಕಿ.ಮೀ. ನಷ್ಟು ದೂರ ಸೈಕಲ್ ಸವಾರರು ಸೈಕಲ್ ರೇಸ್‍ನಲ್ಲಿ ಭಾಗವಹಿಸಿದ್ರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಸೈಕಲ್ ಏರಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಓ ಮಂಜುನಾಥ್ ಸೇರಿದಂತೆ ಕೆಲವು ಅಧಿಕಾರಿಗಳು ಕಾಲ್ನಡಿಗೆಯಿಂದ ಬೆಟ್ಟ ಏರುವುದರ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮತ್ತೊಂದೆಡೆ ನಂದಿಗಿರಿಧಾಮದಲ್ಲಿ ಸೈಕ್ಲಿಂಗ್ ಸ್ಪರ್ಧೆಯ ಹಿನ್ನೆಲೆಯಲ್ಲಿ ಗಿರಿಧಾಮಕ್ಕೆ ಬರುವ ಪ್ರವಾಸಿಗರ ವಾಹನಗಳನ್ನು ಬೆಟ್ಟದ ಕ್ರಾಸ್‍ನಲ್ಲಿ ತಡೆದಿದ್ದರಿಂದ ಪೊಲೀಸರ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ: ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಶವ ತೆರವುಗೊಳಿಸದ ಪರಿಣಾಮ ಶವದ ಮೇಲೆಯೇ ರೈಲು ಓಡಾಡಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ.
ಆನಂದಪುರ ಗ್ರಾಮದ 30 ವರ್ಷದ ಗಂಗಾಧರ ಎಂಬವರು ಇಂದು ಬೆಳಗ್ಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದ್ರೆ ಮಧ್ಯಾಹ್ನದವರೆಗೂ ಇವರ ಶವವವನ್ನು ತೆರವುಗೊಳಿಸದ ಕಾರಣ ರೈಲುಗಳು ಶವದ ಮೇಲೆಯೇ ಓಡಾಡಿವೆ. ಗಂಗಾಧರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಬೆಳಗ್ಗೆ ಸುಮಾರು 11 ಗಂಟೆಗೆ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಸಿಬ್ಬಂದಿ ಮಾತ್ರ ಸಂಜೆ 4.30 ಗಂಟೆಯ ವೇಳೆಯಲ್ಲಿ ದೇಹವನ್ನು ರೈಲು ಹಳಿಯಿಂದ ತೆಗೆದಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಶವದ ಮೇಲೆಯೇ ಸುಮಾರು 10 ರಿಂದ 15 ರೈಲುಗಳು ಓಡಾಟ ನಡೆಸಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಯಶವಂತಪುರ ರೈಲ್ವೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ: ಪ್ರಿಯಕರನ ಜೊತೆ ಸೇರಿಕೊಂಡ ಗೃಹಿಣಿಯೊರ್ವಳು, ಸ್ವತಃ ಗಂಡನಿಗೆ ವಿಷ ಪ್ರಾಶನ ಮಾಡಿ ಕೊಲೆ ಮಾಡಲು ಯತ್ನಿಸಿದ್ದು, ಈ ಸಂಚು ಮೊಬೈಲ್ ಆಡಿಯೋ ರೆಕಾರ್ಡ್ ಮೂಲಕ ಬಯಲಾಗಿದೆ.
ಪತ್ನಿ ಕೃಷ್ಣಮ್ಮ ಪತಿ ನರಸಿಂಹಪ್ಪ ಅವರ ಹತ್ಯೆಗೆ ಸಂಚು ರೂಪಿಸಿದ್ದು, ಪೊಲೀಸರು ಈಗ ಆಕೆಯನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕು ಚಿಕ್ಕಮುನಿಮಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ಆನಂದರೆಡ್ಡಿ ಎನ್ನುವ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ಗಂಡನನ್ನು ಮುಗಿಸಲು ಕೃಷ್ಣಮ್ಮಸಂಚು ರೂಪಿಸಿದ್ದಳು. ಒಂದೇ ಬಾರಿಗೆ ವಿಷ ಹಾಕಿದ್ರೆ ಗೊತ್ತಾಗುತ್ತೆ ಎನ್ನುವ ಕಾರಣ ಪ್ರತಿದಿನ ಊಟದಲ್ಲಿ ಸ್ವಲ್ಪ ಸ್ವಲ್ಪ ವಿಷ ಪ್ರಾಶನ ಮಾಡುತ್ತಿದ್ದಳು. ಆರೋಗ್ಯದಲ್ಲಿ ಏರು ಪೇರಾಗಿ ಗಂಡ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಇದನ್ನರಿತ ಆನಂದ ರೆಡ್ಡಿ ಕೃಷ್ಣಮ್ಮ ಜೊತೆ ವಿಚಾರಿಸುವ ಆಡಿಯೋ ಈಗ ಪೊಲೀಸರ ಕೈ ಸೇರಿದ್ದು, ಪೊಲೀಸರು ಕೃಷ್ಣಮ್ಮನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರೆ, ಪ್ರಿಯಕರ ಆನಂದ ರೆಡ್ಡಿ ನಾಪತ್ತೆಯಾಗಿದ್ದಾನೆ. ಮತ್ತೊಂದೆಡೆ ಕೃಷ್ಣಮ್ಮ ಪತಿ ನರಸಿಂಹಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ತೆಯಾಗಿದ್ದು ಹೇಗೆ: ಆನಂದ್ ರೆಡ್ಡಿ ಕೃಷ್ಣಮ್ಮನಿಗೆ ಮೊಬೈಲ್ ಉಡುಗೊರೆಯಾಗಿ ನೀಡಿದ್ದ. ಈ ಮೊಬೈಲನ್ನು ಬಳಸುವುದನ್ನು ನೋಡಿದ ಪತಿ ಎಲ್ಲಿಂದ ಬಂತು, ಯಾರು ಕೊಟ್ಟಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೃಷ್ಣಮ್ಮ ರಸ್ತೆಯಲ್ಲಿ ಸಿಕ್ಕಿತ್ತು, ಈಗ ಬಳಸುತ್ತಿದ್ದೇನೆ ಎಂದು ಹೇಳಿದ್ದಾಳೆ. ಈ ವಿಚಾರದ ಬಗ್ಗೆ ಇಬ್ಬರ ನಡುವೆ ಗಲಾಟೆ ನಡೆದು ಕೊನೆಗೆ ನರಸಿಂಹಪ್ಪ ಆ ಮೊಬೈಲ್ ತನ್ನ ಜೊತೆ ಇಟ್ಟುಕೊಂಡಿದ್ದಾರೆ. ಇದಾಗಿ ಕೆಲ ದಿನಗಳ ಬಳಿಕ ಸಂಬಂಧಿಯೊಬ್ಬ ಮನೆಗೆ ಬಂದಾಗ ಆತನ ಮೂಲಕ ಸಿಮ್ ತೆಗೆಯುತ್ತಾಳೆ. ಬಳಿಕ ಆ ಸಿಮ್ ನಲ್ಲಿ ಕರೆನ್ಸಿ ಇದೆ ಎಂದು ಹೇಳಿ ಸಂಬಂಧಿ ಫೋನ್ ಮೂಲಕ ಆನಂದ್‍ಗೆ ಕರೆ ಮಾಡುತ್ತಾಳೆ. ಮೂರು ಬಾರಿ ಆಕೆ ಕರೆ ಮಾಡಿದ್ದಾಳೆ. ಸಂಬಂಧಿ ತನ್ನ ಮೊಬೈಲ್ ನಲ್ಲಿ ಆಟೋಮ್ಯಾಟಿಕ್ ಆಗಿ ಕರೆಗಳನ್ನು ರೆಕಾರ್ಡ್ ಮಾಡುವಂತೆ ಸೆಟ್ ಮಾಡಿಕೊಂಡಿದ್ದ. ಇದಾದ ಬಳಿಕ ಸಂಬಂಧಿ ಕೃಷ್ಣಮ್ಮ ಯಾರ ಜೊತೆ ಏನು ಮಾತನಾಡಿದ್ದಾಳೆ ಎನ್ನುವುದನ್ನು ತಿಳಿಯಲು ಆಡಿಯೋ ಫೈಲ್‍ಗಳನ್ನು ಓಪನ್ ಮಾಡಿದಾಗ ಈಕೆಯ ಕೃತ್ಯ ಗೊತ್ತಾಗಿದೆ. ನಂತರ ಈ ಆಡಿಯೋ ಫೈಲನ್ನು ಸಂಬಧಿ ನರಸಿಂಹಪ್ಪಗೆ ಕೇಳಿಸಿದ್ದಾನೆ.
ಇಬ್ಬರ ಮೊಬೈಲ್ ಸಂಭಾಷಣೆಯಲ್ಲಿ ಏನಿದೆ?
ಆನಂದ್ ರೆಡ್ಡಿ: ಸರಿ ಈಗ ಏನು ಮಾಡೋದು?
ಕೃಷ್ಣಮ್ಮ: ಇದನ್ನೇ ಬಳಸೋಣ.
ಆನಂದ್ ರೆಡ್ಡಿ: ಸರಿ ಅದನ್ನೇ ಬಳಸ್ತೀಯಾ? ಆದ್ರೆ 10 ದಿನಗಳಿಂದ ಬಳಸ್ತೀದ್ದೀಯಾ ಏನು ಆಗಲಿಲ್ವಲ್ಲ
ಕೃಷ್ಣಮ್ಮ: 10 ದಿನಗಳಿಂದ ಎಲ್ಲಿ? ಡೈಲಿ ಇಲ್ಲ, ಒಂದು ದಿನ, ಎರಡು ದಿನಕ್ಕೆ ಒಂದು ಸಾರಿ
ಅನಂದ್ ರೆಡ್ಡಿ: ಈಗ ಸಿರೀಯಸ್ ಆಗೋದಾದ್ರೆ ಡೈಲಿ ಬಳಸು.
ಕೃಷ್ಣಮ್ಮ: ಡೈಲಿ ಬಳಸಬಹುದು, ಮಕ್ಕಳಿರ್ತಾರೆ, ಒಂದು ಸಾರಿ ಮನೆಯಲ್ಲಿ ಊಟ ಮಾಡ್ತಾನೆ, ಮತ್ತೊಂದು ಸಾರಿ ಅಚೆ ಊಟ ಮಾಡ್ತಾನೆ. ಆಚೆ ತಿಂದಾಗ ಏನೂ ಆಗಲ್ಲ. ಮನೆಯಲ್ಲಿ ತಿಂದಾಗ ಆಗುತ್ತೆ. ಆದರಿಂದ ಒಂದು ಸಾರಿ ಬಿಟ್ಟು ಮತ್ತೊಂದು ಸಾರಿ ಹಾಕಿದ್ರೇ ಸರಿ ಹೋಗುತ್ತೆ. ಅಲ್ಲಾ ಡೈಲಿ ಹಾಕಿದ್ರೇ ಡೌಟ್ ಬರಲ್ವಾ?
ಅನಂದ್ ರೆಡ್ಡಿ: ಏನ್ ಡೌಟ್ ಬರುತ್ತೆ?
ಕೃಷ್ಣಮ್ಮ: ಅಲ್ಲಾ ಮನೆಯಲ್ಲಿ ತಿಂದಾಗ ವಾಮಿಟ್ ಆಗುತ್ತಲ್ಲ. ಆಚೆ ತಿಂದಾಗ ಆಗಲ್ವಲ್ಲಾ
ಆನಂದ್ ರೆಡ್ಡಿ: ತಿಂತಾನೇ ವಾಮಿಟ್ ಆಗುತ್ತಾ?
ಕೃಷ್ಣಮ್ಮ : ತಿಂದ ಹತ್ತು ಹದಿನೈದು ನಿಮಿಷ ಆದ ಮೇಲೆ ಆಗುತ್ತೆ. ಅದು ಹಾಕಿದ ಹಾಗೆ ಜಾಸ್ತಿ ಹಾಕಿದ್ರೆ 10 ನಿಮಿಷ, ಕಡಿಮೆ ಹಾಕಿದ್ರೆ 15 ನಿಮಿಷ
ಅನಂದ್ ರೆಡ್ಡಿ : ಹುಂ ಅದು ವಾಂತಿ ಆಗದೆ ಇದ್ದ ಹಾಗೆ ನೋಡಿಕೊಳ್ಳಲಾಗುವುದಿಲ್ಲವೇ?ಸರಿ ಈಗ ಏನು ಮಾಡೋದು?
ಕೃಷ್ಣಮ್ಮ: ಹೇಗೆ? ಏನ್ ಮಾಡಿದ್ರು ಆಗುತ್ತೆ.
ಅನಂದ್ ರೆಡ್ಡಿ: ಹಾ..
ಕೃಷ್ಣಮ್ಮ: ಮೊನ್ನೆನೇ ಹೇಳ್ತಿದ್ದ ಮೊದಲು ವಾಂತಿ, ಅಮೇಲೆ ಜ್ವರ, ತಲೆ ನೋವು ಅಂತ ವರ್ಷದಿಂದ ಹೀಗೆ ಆಗ್ತಿದೆ ಎಲ್ಲೆಲ್ಲೋ ತೋರಿಸಿದೆ ಅಂತ ಅಂಜಪ್ಪಗೆ ಹೇಳ್ತಿದ್ದ.
ಅನಂದರೆಡ್ಡಿ: ಈಗ ಜ್ವರ ತಲೆ ನೋವು ಏನೂ ಇಲ್ವಾ?
ಕೃಷ್ಣಮ್ಮ: ತಲೆನೋವು ಅಂತೆ ಹಿಂದೆ ತಲೆ ನೋವು ಅಂತೆ ಜ್ವರ ಇಲ್ವೇನೋ.
ಅನಂದರೆಡ್ಡಿ: ಅದು ಚೆನ್ನಾಗಿ ಮೈಗೆ ಹತ್ತಿದಾಗ ತಲೆನೋವು ಜ್ವರ ಬರೋದು. ಚೆನ್ನಾಗಿ ಮೈಗೆ ಇಳಿಲಿ.
ಕೃಷ್ಣಮ್ಮ: ಹುಂ..
ಅನಂದರೆಡ್ಡಿ: ಯಾರದು
ಕೃಷ್ಣಮ್ಮ: ನನ್ನ ಮಗಳು.
ಅನಂದರೆಡ್ಡಿ: ಹುಂ ನನಗೆ ಬಹಳ ಬೇಜರಾಗಿ ಹೋಗಿದೆ. ಪ್ರಮಾಣಿಕವಾಗಿ ಹೇಳ್ತಿದ್ದೇನೆ. ತಡೆದುಕೊಳ್ಳಲು ಆಗುತ್ತಿಲ್ಲ.
ಕೃಷ್ಣಮ್ಮ: ಹಾ..
ಅನಂದರೆಡ್ಡಿ: ಅವನ ನೋಡಿದ್ರೆ ನಂಗೆ ಹಲ್ಲು ಕಚ್ಚಬೇಕು ಅನಿಸುತ್ತೆ ಕೋಪ ಬರುತ್ತೆ. ಏನಾದ್ರೂ ಮಾಡಿಬೇಗ ಮುಗಿಸಿಬಿಟ್ರೇ? ನನಗೆ ಓಕೆ. ಇಲ್ಲ ಅಂದ್ರೆ ನನಗೆ ಬಹಳ ಕಷ್ಟ ಆಗುತ್ತೆ. ಏನ್ ಮಾಡ್ತೀಯಾ ಈಗ
ಕೃಷ್ಣಮ್ಮ: ಹು ಹಂಗೆ ಮಾಡ್ತೀನಿ.
ಅನಂದರೆಡ್ಡಿ: ಹಾ
ಕೃಷ್ಣಮ್ಮ: ಹಾಗೆ ಮಾಡೋಣ ಬಿಡು.
ಅನಂದರೆಡ್ಡಿ: ಹುಂ ನಂಗೆ ಜಾಸ್ತಿ ಭಾದೆ ಆಗೋಗಿದೆ.
ಕೃಷ್ಣಮ್ಮ: ಹಲೋ ಏನು ಕೇಳಿಸ್ತಿಲ್ಲ.
ಅನಂದರೆಡ್ಡಿ: ಮೂರು ತಿಂಗಳು ಆಯ್ತೇನೇ? ಅವನ ಮುಖ ನೋಡಿದ್ರೇ ಆಗಲ್ಲ. ಏನೋ ಕಷ್ಟ ನಂಗೆ ಈ ಟೆನ್ಷನ್
ಕೃಷ್ಣಮ್ಮ: ಏನೂ ಟೆನ್ಷನ್ ತಗೋಬೇಡ ಆರಾಮಾಗಿರು.
ಅನಂದ್ ರೆಡ್ಡಿ: ಏನೂ ಟೆನ್ಷನ್ ಇಲ್ಲ. ವಯಸ್ಸಲ್ಲಿ ಏನೂ ಮಾಡಿದರ ವಯಸ್ಸಾದ ಮೇಲೆ ಏನು ಮಾಡೋದು ಅದೇ ಬಾಧೆ ನಂಗೆ.
ಕೃಷ್ಣಮ್ಮ: ಏನ್ ಮಾಡ್ತೀಯಾ? ಮೂರು ಸಲ ಮುಂದೆ ಬಂದು ಹೋಯ್ತು.
ಬೆಂಗಳೂರು: ಇಂಗ್ಲೆಂಡ್‍ನ ವೆಸ್ಟ್ ಸ್ವಿಂಡನ್ ಕೌನ್ಸಿಲ್‍ಗೆ ನಡೆದ ಚುನಾವಣೆಯಲ್ಲಿ ಕನ್ನಡಿಗ ಸುರೇಶ್ ಗಟ್ಟಪುರ್ ಜಯಸಾಧಿಸಿದ್ದಾರೆ.
ವೆಸ್ಟ್‍ಲೀ ವಾರ್ಡ್‍ನಿಂದ ಕನ್ಸರ್ವೇಟಿವ್ ಪಕ್ಷದಿಂದ ಸುರೇಶ್ ಕಣಕ್ಕಿಳಿದಿದ್ರು. ನೀರಜ್ ಪಾಟೀಲ್ ನಂತರ ಕೌನ್ಸಿಲ್ ಚುನಾವಣೆಯಲ್ಲಿ ಗೆದ್ದ ಎರಡನೇ ಕನ್ನಡಿಗರಾಗಿದ್ದಾರೆ.
ಸುರೇಶ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಕೊಂಡೇನಹಳ್ಳಿ ಗ್ರಾಮದವರಾಗಿದ್ದು, ಸುಮಾರು 13 ವರ್ಷಗಳಿಂದ ಇಂಗ್ಲೆಂಡ್‍ನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಸಾಫ್ಟ್ ವೇರ್ ಕಂಪನಿಯ ಡೈರೆಕ್ಟರ್ ಆಗಿ ಸುರೇಶ್ ಕಾರ್ಯನಿರ್ವಹಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ: ನೀವು ಬಳಸುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್ ಎಂಬುದನ್ನು ಒಮ್ಮೆ ನೀರಿಗೆ ಹಾಕಿ ಪರೀಕ್ಷೆ ಮಾಡಿ. ಕೆಲವು ದಿನಗಳ ಹಿಂದೆ ಅನ್ನಭಾಗ್ಯದ ಉಪ್ಪು ನೀಲಿ ಬಣ್ಣಕ್ಕೆ ತಿರುಗಿದ ಸುದ್ದಿ ಪ್ರಕಟವಾಗಿತ್ತು. ಇದೀಗ ಸಕ್ಕರೆಯ ಸರದಿ. ಚಿಕ್ಕಬಳ್ಳಾಪುರ ನಗರದ ಹೋಟೆಲ್‍ವೊಂದರಲ್ಲಿ ಸಕ್ಕರೆ ಹಸಿರು ಬಣ್ಣಕ್ಕೆ ತಿರುಗಿ ಜನರಲ್ಲಿ ಆತಂಕ ಉಂಟುಮಾಡಿದೆ.
ಇಂದು ಬೆಳಗ್ಗೆ ಗ್ರಾಹಕ ಸ್ನೇಕ್ ಪ್ರಥ್ವಿರಾಜ್ ಎಂಬವರು ಮೊಸರಿನ ಜೊತೆ ಸಕ್ಕರೆ ಮಿಶ್ರಣ ಮಾಡಿ ಸೇವಿಸುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಮತ್ತೆರೆಡು ಬಾರಿ ಇದೇ ರೀತಿ ಮೊಸರು ಹಾಗೂ ನೀರಿಗೆ ಸಕ್ಕರೆ ಮಿಶ್ರಣ ಮಾಡಿ ಪರಿಶೀಲನೆ ನಡೆಸಿದಾಗ ಸಕ್ಕರೆ ಮಿಶ್ರಿತ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ. ಸಕ್ಕರೆಯಲ್ಲಿ ಯಾವೋದೋ ಕೆಮಿಕಲ್ ಸೇರಿರಬೇಕೆಂಬ ಅನುಮಾನ ಮೂಡಿದೆ. ಹೀಗಾಗಿ ಸಂಬಂಧಪಟ್ಟವರು ಸಕ್ಕರೆಯ ಗುಣಮಟ್ಟದ ಪರೀಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.
ಪ್ಲಾಸ್ಟಿಕ್ ಅಕ್ಕಿ: ಪಡಿತರದಾರರಿಗೆ ಸೊಸೈಟಿಯಲ್ಲಿ ವಿತರಿಸಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ವಸ್ತು ಪತ್ತೆಯಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿಯ ನಿವಾಸಿ ಪುಟ್ಟರಾಜು ಅವರು ಮಾರ್ಚ್ 23 ರಂದು ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 40 ಕೆಜಿ ಅಕ್ಕಿ ತೆಗೆದುಕೊಂಡಿದ್ದರು.
ಕೆಲ ದಿನದ ಬಳಿಕ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಮಿಲ್ ಮಾಡಿಸಿಕೊಂಡು ಮನೆಗೆ ತಂದಿದ್ದಾರೆ. ಮನೆಯಲ್ಲಿ ರೊಟ್ಟಿ ಮಾಡಲು ಮುಂದಾದಾಗ ಪ್ಲಾಸ್ಟಿಕ್ ವಸ್ತು ಸಿಕ್ಕಿದೆ. ಬಳಿಕ ಮಿಲ್ ಮಾಡಿಸಿದ ಅಕ್ಕಿಯನ್ನು ಪರಿಶೀಲನೆ ನಡೆಸಿದಾಗ ಸುಮಾರು ಒಂದು ಹಿಡಿಯಷ್ಟು ಪ್ಲಾಸ್ಟಿಕ್ ವಸ್ತು ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಚಿಕ್ಕಬಳ್ಳಾಪುರ: ಕಲರ್ ಪುಲ್ ಕಾಸ್ಟೂಮ್ಸ್ ತೊಟ್ಟು ಮಿರ ಮಿರ ಅಂತ ಚೆಂದುಳ್ಳಿ ಚೆಲುವೆಯರು ಮಿಂಚುತ್ತಿದ್ರೆ, ನಾವೇನು ಕಮ್ಮಿ ಅಂತ ಪಂಚೆ ಶರ್ಟು ತೊಟ್ಟು ಪಡ್ಡೆ ಹುಡುಗುರು ತಮಟೆ ಸದ್ದಿಗೆ ಮಸ್ತ್ ಮಸ್ತ್ ಡ್ಯಾನ್ಸ್ ಮಾಡ್ತಿದ್ದರು. ಬಣ್ಣ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ವಿದ್ಯಾರ್ಥಿಗಳಿಂದ ನಗರದ ಎಸ್‍ಜೆಸಿಐಟಿ ಕಾಲೇಜು ಕ್ಯಾಂಪಸ್ ಕಲರ್ ಪುಲ್ ಕಂಗೊಳಿಸುತ್ತಿತ್ತು.
ನಗರದ ಹೊರವಲಯದ ಎಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್ ಇಂದು ಎತ್ನಿಕ್ ಡೇ ಅಂಗವಾಗಿ ರಂಗು ರಂಗಿನ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟ ವಿದ್ಯಾರ್ಥಿಗಳಿಂದ ಮಿಂಚುತ್ತಿತ್ತು. ಪ್ರತಿದಿನ ಕಾಲೇಜು ಸಮವಸ್ತ್ರ ತೊಟ್ಟು ಬೋರ್ ಹೊಡೆದಿದ್ದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇಂದು ತಮಗಿಷ್ಟದ ಸಾಂಪ್ರದಾಯಿಕ ಶೈಲಿಯ ಡ್ರೆಸ್ ತೊಟ್ಟು ಖುಷಿಪಟ್ಟರು.
ಕಾಲೇಜಿನ ಲಲನೆಯರು ಮಾಡೆಲ್‍ಗಳ ಹಾಗೆ ನಡೆಸಿದ ಕ್ಯಾಟ್ ವಾಕ್ ಎಲ್ಲರನ್ನು ಮೆಚ್ಚಿಸಿತು. ಹುಡುಗರು ನಾವೇನೂ ಯಾರಿಗೂ ಕಡಿಮೆಯಿಲ್ಲ ಎಂದು ಹಳ್ಳಿ ಹೈದರಂತೆ ಬಟ್ಟೆ ತೊಟ್ಟು ತಿರುಗಾಡುತ್ತಿದ್ದರು. ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಎತ್ನಿಕ್ ಡೇಯನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಚಿಕ್ಕಬಳ್ಳಾಪುರ: ಹೀಗೆ ಹುಟ್ಟಿದಾಗಿನಿಂದಲೇ ತನ್ನ ಎರಡು ಕಾಲುಗಳು ಅಂಗವೈಕಲ್ಯಕ್ಕೆ ಗುರಿಯಾಗಿ, ಮನೆ ಬಿಟ್ಟು ಬರಲಾಗದೆ, ಜೈಲು ಹಕ್ಕಿ ತರ ಮನೆಯಲ್ಲೇ ಬಂಧಿಯಾಗಿರೋ ಇವರ ಹೆಸರು ಆದಿನಾರಾಯಣ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮದ ಆದಿಮೂರ್ತಿ-ಅಂಜಿನಮ್ಮ ದಂಪತಿಯ ಏಕೈಕ ಪುತ್ರ.
ಹುಟ್ಟಿದಾಗಿನಿಂದಲೇ ಇವರ ಎರಡು ಕಾಲುಗಳು ಹಾಗೂ ಒಂದು ಕೈ ಅಂಗವೈಕಲ್ಯಕ್ಕೆ ತುತ್ತಾಗಿದೆ. ಹೀಗಾಗಿ 25 ವರ್ಷಗಳಿಂದಲೂ ಮನೆಯಲ್ಲೇ ಸುಖಾಸುಮ್ಮನೆ ಕೂತಿರೋ ಆದಿನಾರಾಯಣ ಅವರಿಗೆ ತನ್ನ ಬದುಕಿನ ಬಗ್ಗೆ ಎಲ್ಲಿಲ್ಲದ ಸಂಕಟ. ತನ್ನ ಬದಕು ಹೀಗಾಯ್ತು ಅನ್ನೋ ಕೊರಗು. ಆದ್ರೆ 25 ವರ್ಷ ಸಾಕಿ ಸಲುಹಿದ ತಂದೆ ತಾಯಿಗೆ ಕನಿಷ್ಠ ಈಗಾಲಾದ್ರೂ ಆಸರೆಯಾಗಬೇಕು ಅನ್ನೋ ಮಹದಾಸೆ ಆದಿನಾರಾಯಣರದ್ದು.
ಸುಖಾಸುಮ್ಮನೆ ಮನೆಯಲ್ಲಿ ಕೂರುವುದರ ಬದಲು ಏನಾದ್ರೂ ಕೆಲಸ ಮಾಡಿ ದುಡಿದು ತಂದೆ ತಾಯಿಯನ್ನ ಸಾಕೋಣ ಅನ್ನೋ ಮಹಾದಾಸೆ ಇವರಿಗಿದೆ. ಇದಕ್ಕೆ ಒತ್ತಾಸೆಯಾಗಿ ಬಾಗೇಪಲ್ಲಿಯ ಪೆಟ್ರೋಲ್ ಬಂಕ್‍ನ ಮಾಲೀಕರು ಇವರಿಗೆ ಕ್ಯಾಶಿಯರ್ ಕೆಲಸ ಕೊಡಲು ಒಪ್ಪಿದ್ದಾರೆ. ಆದ್ರೆ ಮನೆಯ ಹೊಸ್ತಿಲು ಬಿಟ್ಟು ಆಚೆ ಬರಲು ಹರಸಾಹಸ ಪಡಿಬೇಕಿರೋ ಆದಿನಾರಾಯಣ ಅವರು, ಯಾರಾದ್ರೂ ಒಂದು ವಿಕಲಚೇತನರ ವಾಹನ ಕೊಡಿಸಿದ್ರೆ ನಾನೇ ದುಡಿದು ತಂದೆ ತಾಯಿಯನ್ನ ಸಾಕುವ ಛಲ ನನ್ನದು ಅಂತಿದ್ದಾರೆ.
ಇನ್ನೂ ಕಡು ಬಡವರಾಗಿರೋ ಆದಿಮೂರ್ತಿ ಅಂಜಿನಮ್ಮ ದಂಪತಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕಬ್ಬಿಣದ ತಗಡಿನ ಶೀಟ್ ಮನೆಯಲ್ಲಿ ವಾಸವಾಗಿರೋ ಈ ದಂಪತಿಗೆ ಇತ್ತೀಚೆಗೆ ಬರಗಾಲ ಬಂದು ಕೂಲಿ ಸಿಗೋದು ಕೂಡ ಕಷ್ಟವಾಗಿ ಮನೆಯಲ್ಲಿ ಒಪ್ಪತ್ತಿನ ಊಟಕ್ಕೂ ಕಷ್ಟವಾಗಿದೆಯಂತೆ. ಇನ್ನೂ ಸ್ಥಳೀಯ ಜನಪ್ರತಿನಿಧಿ ಬಳಿ ವಾಹನಕ್ಕಾಗಿ ಅರ್ಜಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಯಾರಾದ್ರೂ ಸಹಾಯ ಮಾಡಿ ಅಂತಿದ್ದಾರೆ.
ವಿಕಲಚೇತನರಾದ್ರೂ ಉದ್ಯೋಗ ಮಾಡಿ ಹೆತ್ತವರನ್ನ ಸಾಕಬೇಕೆಂಬ ಆಸೆ ಹೊತ್ತಿರುವ ಈ ಸ್ವಾಭಿಮಾನಿಗೆ ಯಾರಾದ್ರೂ ಸಹಾಯ ಮಾಡಬೇಕಿದೆ.