Tag: Chikaballapur

  • ಕೊರೊನಾಗೆ ಹೆದರಿ ಆಸ್ಪತ್ರೆಯಿಂದ ಪರಾರಿಯಾಗಿ ವ್ಯಕ್ತಿ ಆತ್ಮಹತ್ಯೆ

    ಕೊರೊನಾಗೆ ಹೆದರಿ ಆಸ್ಪತ್ರೆಯಿಂದ ಪರಾರಿಯಾಗಿ ವ್ಯಕ್ತಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಕೊರೊನಾಗೆ ಹೆದರಿದ ವ್ಯಕ್ತಿಯೋರ್ವ ಕೋವಿಡ್-19 ಆಸ್ಪತ್ರೆಯಿಂದ ಪರಾರಿಯಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಚಿಂತಾಮಣಿ ತಾಲೂಕು ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ 55 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಶರಣಾದವ. ಒಂದು ತಿಂಗಳ ಹಿಂದೆ ಅನಾರೋಗ್ಯ ಸಮಸ್ಯೆಯಿಂದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದು ಹೋಗಿದ್ದ ಈತನಿಗೆ, ಗ್ರಾಮದಲ್ಲಿ ಕೆಲವರು ನಿನಗೆ ಕೊರೊನಾ ಬಂದಿದೆ ಅಂತ ಹೆದರಿಸುತ್ತಿದ್ದರಂತೆ. ಇದರಿಂದ ವಿಚಲಿತನಾದ ಈತ ಅಂದಿನಿಂದ ಕೊರೊನಾ ಭಯದಲ್ಲೇ ಬದುಕನ್ನು ದೂಡುತ್ತಿದ್ದ.

    ಮನೆಗೂ ಹೋಗದೆ ಗ್ರಾಮದಲ್ಲಿ ತೋಟದ ಮನೆಯಲ್ಲಿ ವಾಸ ಮಾಡ್ತಾ ಜೀವನ ಕಳೆಯುತ್ತಿದ್ದನಂತೆ. ಹೀಗಾಗಿ ಕಳೆದ ಎರಡು ದಿನಗಳ ಹಿಂದೆ ಮಗ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಈತನಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದು ನೆಗಟಿವ್ ಸಹ ಬಂದಿತ್ತು. ಆದರೆ ಅದ್ಯಾಕೋ ಏನೋ ಅದೇ ಭಯದಲ್ಲೇ ಇದ್ದ ಈತ, ಅಂದು ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಕೂಡಲೇ ಮನೆಯವರು ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಶಿಪ್ಟ್ ಮಾಡಿದ್ರು. ಚಿಕಿತ್ಸೆ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ಕೋವಿಡ್ ಟೆಸ್ಟ್ ಮಾಡಿಸಿದ್ದು ಕೋವಿಡ್ ಪಾಸಿಟಿವ್ ಎಂದು ತಿಳಿದುಬಂದಿದೆ.

    ಇದರಿಂದ ಶುಕ್ರವಾರ ಸಂಜೆ ಈತನನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ ಇಡೀ ರಾತ್ರಿ ನಾನು ಮನೆಗೆ ಹೋಗಬೇಕು ಅಂತ ಪಟ್ಟು ಹಿಡಿದಿದ್ದಾನೆ. ಕೊನೆಗೆ ಮನೆಗೆ ಕಳುಹಿಸಲ್ಲ ಅಂದಿದ್ದಕ್ಕೆ ಆಸ್ಪತ್ರೆಯಲ್ಲಿ ಎಲ್ಲರೂ ಮಲಗಿದ ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕು ಗುಂತಪನಹಳ್ಳಿ ಗ್ರಾಮದ ಬಳಿ ಹೋಗಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇಂದು ಮಧ್ಯಾಹ್ನ ವಿಷಯ ತಿಳಿದು ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್‍ಐ ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಿಸಿದ್ದಾರೆ.

    ಅಪರಿಚಿತ ವ್ಯಕ್ತಿ ಯಾರು ಅಂತ ಪತ್ತೆ ಮಾಡಲು ಮುಂದಾದಾಗ, ಕೋವಿಡ್ ಪಾಸಿಟಿವ್ ಬಂದಿದ್ದ ವ್ಯಕ್ತಿ ಅಂತ ಗೊತ್ತಾಗಿದೆ. ಸದ್ಯ ಮೃತನ ಮಗ ಹಾಗೂ ಸಂಬಂಧಿಕರು ಸಮ್ಮುಖದಲ್ಲಿ ಕೋವಿಡ್-19 ವಿಧಿವಿಧಾನಗಳಂತೆ ಅಂತ್ಯಕ್ರಿಯೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಂಪ್ಲೇಂಟ್ ಕೊಟ್ಟವನೇ ಕಳ್ಳ-ಪೊಲೀಸರ ತನಿಖೆಯಲ್ಲಿ ಸಂಚು ಬಯಲು

    ಕಂಪ್ಲೇಂಟ್ ಕೊಟ್ಟವನೇ ಕಳ್ಳ-ಪೊಲೀಸರ ತನಿಖೆಯಲ್ಲಿ ಸಂಚು ಬಯಲು

    -ಪೊಲೀಸರ ಅತಿಥಿಯಾದ ದೂರುದಾರ

    ಚಿಕ್ಕಬಳ್ಳಾಪುರ: ನನ್ನನ್ನ ಅಡ್ಡಗಟ್ಟಿದ ದರೋಡೆಕೋರರು ಹಲ್ಲೆ ಮಾಡಿ ನನ್ನ ಬಳಿ ಇದ್ದ ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡಿಕೊಂಡು ಹೋದ್ರು ಅಂತ ಪೊಲೀಸ್ ಠಾಣೆಗೆ ದೂರು ನೀಡಿದ ದೂರುದಾರನೇ ಪೊಲೀಸರ ಅತಿಥಿಯಾಗಿ ಜೈಲು ಸೇರಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಕೋಳಿ ಮಾರಾಟ ಮಾಡುವ ಲೋಟಸ್ ಖಾಸಗಿ ಕಂಪನಿಯ ಸೂಪರ್ ವೈಸರ್ ಉದಯ್ ಕುಮಾರ್ ಬಂಧಿತ ದೂರುದಾರ. ಜುಲೈ 21 ರಂದು ಚಿಕ್ಕಬಳ್ಳಾಪುರ ತಾಲೂಕು ಆನೆಮಡುಗು ಗ್ರಾಮದ ಬಳಿಯ ಹರೀಶ್ ಎಂಬುವರಿಗೆ ಸೇರಿದ ಕೋಳಿ ಫಾರಂ ಗೆ ಭೇಟಿ ನೀಡಿ ಅಲ್ಲಿದ್ದ ಕೋಳಿಗಳನ್ನ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದನು. ಮಾರಾಟದಿಂದ ಬಂದ 7 ಲಕ್ಷದ 91 ಸಾವಿರ ರೂಪಾಯಿ ಪಡೆದು ತನ್ನೂರಾದ ಗುಡಿಬಂಡೆ ತಾಲೂಕು ಎಲ್ಲೋಡು ಗ್ರಾಮದತ್ತ ತೆರಳಿದ್ದನು.

    ಈ ವೇಳೆ ಕೇತೇನಹಳ್ಳಿ ಬಳಿ ನನ್ನನ್ನು ಅಡ್ಡಗಟ್ಟಿದ್ದ ಗೌರಿಬಿದನೂರು ತಾಲೂಕು ಸಾಗಾನಹಳ್ಳಿ ಗ್ರಾಮದ ಪ್ರಶಾಂತ್, ನರಸಿಂಹಮೂರ್ತಿ, ಪ್ರಥ್ವಿರಾಜ್, ಕಿರಣ್, ನವೀನ್ ಕುಮಾರ್ ಹಲ್ಲೆ ಮಾಡಿ ಹಣ ಕಸಿದುಕೊಂಡು ಹೋದರು ಎಂದು ಉದಯ್ ಕುಮಾರ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಈ ಸಂಬಂಧ ತನಿಖೆಗಿಳಿದ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಇದೆಲ್ಲವೂ ದೂರುದಾರ ಉದಯ್ ಕುಮಾರ್ ಪ್ಲಾನ್ ಎಂಬ ವಿಷಯ ತಿಳಿದಿದೆ. ಉದಯಕುಮಾರ್ ನಮಗೆ ಈ ರೀತಿ ದರೋಡೆ ಮಾಡಿ ತನ್ನ ಕಂಪನಿಯ ಹಣ ಎಗಿರಿಸುವ ಸಂಚು ರೂಪಿಸಿದ್ದನು. ಅವನ ಸೂಚನೆಯಂತೆ ನಾವು ಈ ಕೃತ್ಯ ಮಾಡಿದ್ದೀವಿ ಅಂತ ಬಾಯಿ ಬಿಟ್ಟಿದ್ದಾರೆ.

    ಹೀಗಾಗಿ ದೂರುದಾರನನ್ನೇ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತರ ಬಳಿ 7 ಲಕ್ಷದ 60 ಸಾವಿರ ಹಾಗೂ ಕೃತ್ಯಕ್ಕೆ ಬಳಿಸಿದ ಇನ್ನೋವಾ ಕಾರು 4 ಮೊಬೈಲ್ ಪೋನ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ವರದಕ್ಷಿಣೆ ತರಲು ಒಪ್ಪದ ಪತ್ನಿಗೆ ಬೆಲ್ಟ್ ನಿಂದ ಬಾಸುಂಡೆ ಬರುವಂತೆ ಹೊಡೆದ ಪತಿ

    ವರದಕ್ಷಿಣೆ ತರಲು ಒಪ್ಪದ ಪತ್ನಿಗೆ ಬೆಲ್ಟ್ ನಿಂದ ಬಾಸುಂಡೆ ಬರುವಂತೆ ಹೊಡೆದ ಪತಿ

    ಚಿಕ್ಕಬಳ್ಳಾಪುರ: ವರದಕ್ಷಿಣೆ ಯಾಕೆ ತರಬೇಕು ಎಂದು ಕೇಳಿದ್ದಕ್ಕೆ ಪತಿಯೊರ್ವ ಪತ್ನಿಗೆ ಬಾಸುಂಡೆ ಬರುವಂತೆ ಬೆಲ್ಟ್ ನಿಂದ ಹೊಡೆದಿರುವ ಪೈಶಾಚಿಕ ಕೃತ್ಯ ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ ನಡೆದಿದೆ.

    ಪತ್ನಿ ಸಿಮ್ರಾನ್ ಹಲ್ಲೆಗೊಳಗಾದಾಕೆ. ಅಬ್ದುಲ್ ರಜಾಕ್ ಹಲ್ಲೆ ಮಾಡಿರುವ ಪಾಪಿ ಪತಿಮಹಾಶಯ. ಅಂದಹಾಗೆ ವೃತ್ತಿಯಲ್ಲಿ ಚಾಲಕನಾಗಿದ್ದ ಅಬ್ದುಲ್ ರಜಾಕ್ 3 ವರ್ಷಗಳ ಹಿಂದೆ ಸಿಮ್ರಾನ್‍ಳನ್ನು ಮದುವೆಯಾಗಿದ್ದ.

    ಮದುವೆಯಾಗಿ ಇಬ್ಬರು ಮಕ್ಕಳಾದರೂ ಪದೇ ಪದೇ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಮದುವೆ ಸಮಯದಲ್ಲೂ ಸಹ 1 ಲಕ್ಷ ವರದಕ್ಷಿಣೆ ಕೊಟ್ಟು ಸಿಮ್ರಾನ್ ತಂದೆ ತಾಯಿ ವಿವಾಹ ಮಾಡಿಕೊಟ್ಟಿದ್ದರು. ನಂತರವೂ ಎರಡು ಮೂರು ಬಾರಿ ಹಣ ಕೊಟ್ಟಿದ್ದಾರೆ. ಇನ್ನೂ ಪದೇ ಪದೇ ಇದೇ ರೀತಿ ವರದಕ್ಷಿಣೆಗಾಗಿ ಅಬ್ದುಲ್ ರಜಾಕ್ ಪೀಡಿಸುತ್ತಿದ್ದು ಎಷ್ಟು ಸಾರಿ ದುಡ್ಡು ತರೋದು ಎಂದು ಸಿಮ್ರಾನ್ ಪ್ರಶ್ನೆ ಮಾಡಿದ್ದಾಳೆ.

    ಇದರಿಂದ ಕೆರಳಿದ ಗಂಡ ಅಬ್ದುಲ್ ರಜಾಕ್ ನನಗೆ ಎದುರು ಜವಾಬು ಕೊಡುತ್ತೀಯ ಎಂದು ಮನೆಯಲ್ಲಿ ಕೂಡಿ ಹಾಕಿ ಬೆಲ್ಟ್ ನಿಂದ ಮನಸ್ಸೋ ಇಚ್ಚೆ ಬಾಸುಂಡೆ ಬರುವಂತೆ ಬಾರಿಸಿದ್ದಾನೆ. ಇದರಿಂದ ಸಿಮ್ರಾನ್ ಮೈ ಕೈ ಎಲ್ಲಾ ರಕ್ತ ಹೆಪ್ಪುಗಟ್ಟಿ ಕೆಂಪಾಗಿ ಬಾಸುಂಡೆ ಬಂದಿದೆ. ಸದ್ಯ ಅಸ್ವಸ್ಥಗೊಂಡಿರುವ ಸಿಮ್ರಾನ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದಾಗ ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ – ನಾಲ್ವರ ದುರ್ಮರಣ

    ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದಾಗ ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ – ನಾಲ್ವರ ದುರ್ಮರಣ

    ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಓಮ್ನಿ ಕಾರಿಗೆ ಹಿಂಬದಿಯಿಂದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.

    ಮಧ್ಯರಾತ್ರಿ ಸುಮಾರು 1.30ಗಂಟೆಗೆ ಅಪಘಾತ ಸಂಭವಿಸಿದ್ದು, ವೆಂಕಟೇಶ್, ಸತೀಶ್, ವಿಕಾಸ್ ಮತ್ತು ಸುಂದರ್ ಮೃತ ದುರ್ದೈವಿಗಳು. ಓಮ್ನಿ ಕಾರಿನಲ್ಲಿದ್ದವರು ಬೆಂಗಳೂರಿನ ಆರ್.ಟಿ ನಗರದಲ್ಲಿ ಫ್ಲವರ್ ಡೆಕೋರೇಷನ್ ಕೆಲಸ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ.

    ಪ್ಲವರ್ ಡೆಕೋರೇಷನ್ ಮಾಡುತ್ತಿದ್ದ ಯುವಕರು ತಮ್ಮ ಸ್ನೇಹಿತನ ಬರ್ತ್ ಡೇ ಪಾರ್ಟಿಗೆ ಅಂತ ನಂದಿ ಬೆಟ್ಟದ ಕಡೆಗೆ ತೆರಳುತ್ತಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹೀಗಾಗಿ ಓಮ್ನಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋವಾ ಕಾರಿನಲ್ಲಿದ್ದ ಮೂವರು ಸಹ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ಅಪಘಾತಕ್ಕೆ ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳ ಬೇಜವಾಬ್ದಾರಿತನವೇ ಕಾರಣ ಅಂತ ಹೇಳಲಾಗುತ್ತಿದೆ. ಪ್ರಮುಖವಾಗಿ ಬೆಂಗಳೂರು ನಗರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಸುಸಜ್ಜಿತ ಹೆದ್ದಾರಿ ನಿರ್ಮಾಣ ಮಾಡಿರುವ ಅಧಿಕಾರಗಳು ಏರ್ ಪೋರ್ಟ್ ಟೋಲ್ ಮುಗಿದ ನಂತರ ಉತ್ತಮ ರಸ್ತೆ ಮಾಡಿಲ್ಲ. ಹೈದರಾಬಾದ್ ಕಡೆಯ ಟೋಲ್ ಮುಗಿದ ನಂತರ ಕನ್ನಮಂಗಲಪಾಳ್ಯ ಗೇಟ್ ಬಳಿ ಸೇತುವೆ ನಿರ್ಮಿಸಲಾಗಿದ್ದು, ಈ ಸೇತುವೆ ಮೇಲೆ ನೂತನವಾಗಿ ಡಾಂಬರೀಕರಣ ಮಾಡಲಾಗಿದೆ. ಹೀಗಾಗಿ ಡಾಂಬರೀಕರಣ ಮಾಡಿರುವ ಪರಿಣಾಮ ಹೆದ್ದಾರಿ ಮಧ್ಯದ ಡಿವೈಡರ್ ಸಮತಟ್ಟಾಗಿದ್ದು ಎರಡು ಬದಿಯ ರಸ್ತೆಗಳು ಒಂದೇ ಸಮನಾಗಿವೆ.

    ಮೇಲ್ಸುತುವೆ ಮೇಲೆ 6 ಪಥದ ರಸ್ತೆ ಇದಾಗಿದ್ದು ಸಾಕಷ್ಟು ವಿಶಾಲವಾಗಿದೆ. ಡಾಂಬರೀಕರಣ ಕಡು ಕಪ್ಪಾಗಿದ್ದು, ವಾಹನಗಳ ಹೆಡ್ ಲೈಟ್ ಎಷ್ಟೇ ಇದ್ದರೂ ಮುಂದಿನ ವಾಹನಗಳು ಬಹಳ ಹತ್ತಿರ ಬರುವವರೆಗೂ ಬಹುಬೇಗ ಕಾಣುವುದಿಲ್ಲ. ಇದರ ಜೊತೆಗೆ ಕತ್ತಲಲ್ಲಿ ಹೊಳೆಯುವ ರೇಡಿಯಂ ಸ್ಟಿಕರ್ ಮಾರ್ಗ ಸೂಚಿಗಳನ್ನ ಸಹ ಇಲ್ಲಿ ಅಳವಡಿಸಿಲ್ಲ. ಹೀಗಾಗಿ ಈ ಸ್ಥಳದಲ್ಲೇ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುತ್ತವೆ.

    ಕಳೆದ ರಾತ್ರಿಯೂ ಸಹ ಇದೇ ರೀತಿ ಮುಂದೆ ಚಲಿಸುತ್ತಿದ್ದ ಓಮ್ನಿ ಕಾರು ಕಾಣದೆ ಹಿಂಬದಿಯಲ್ಲಿ ವೇಗವಾಗಿ ಬಂದ ಇನ್ನೋವಾ ಕಾರು ಡಿಕ್ಕಿಯಾಗಿದೆ. ಈ ಸಂಬಂಧ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv