Tag: Chife minister

  • ಪ್ರಧಾನಿ ಮೋದಿ ಭೇಟಿ ಮಾಡಿ ಮನವಿ ಸಲ್ಲಿಸಿದ ಅರವಿಂದ್ ಕೇಜ್ರಿವಾಲ್

    ಪ್ರಧಾನಿ ಮೋದಿ ಭೇಟಿ ಮಾಡಿ ಮನವಿ ಸಲ್ಲಿಸಿದ ಅರವಿಂದ್ ಕೇಜ್ರಿವಾಲ್

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೋಕಸಭೆಯ ಕಹಿ ಘಟನೆಗಳು ಮರೆಮಾಚುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದೆಹಲಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

    ಹೊಸ ಎನ್‍ಡಿಎ ಸರ್ಕಾರ ರಚನೆಯಾದ ನಂತರ ಪ್ರಥಮ ಬಾರಿಗೆ ಪ್ರಧಾನಿ ಮೋದಿಯನ್ನು ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿದ್ದು, ದೆಹಲಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ‘ನೀರು ಉಳಿಸಿ’ ಅಭಿಯಾನವನ್ನು ತಮ್ಮದೇ ಯೋಜನೆಯೊಂದಿಗೆ ಜಾರಿಗೊಳಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರಧಾನಿ ಮೋದಿ ಭೇಟಿ ಕುರಿತು ತಮ್ಮ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯ ವಿಜಯದ ಕುರಿತು ಶುಭಾಶಯ ಕೋರಿದೆ ಎಂದು ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ರಾಂಚಿಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಂತರ ಮರಳುವಾಗ ಕೇಜ್ರಿವಾಲ್ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

    ಯಮುನಾ ನದಿ ನೀರನ್ನು ಕೊಯ್ಲು ಮಾಡುವ ಯೋಜನೆ ಮೂಲಕ ರಾಜಧಾನಿಯಲ್ಲಿ ಹೆಚ್ಚುತ್ತಿರುವ ನೀರಿನ ಕೊರತೆಯನ್ನು ನೀಗಿಸಲು ಮುಂದಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ಮಳೆಗಾಲದಲ್ಲಿ ಯಮುನಾ ನದಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸರ್ಕಾರದ ಉದ್ದೇಶವಾಗಿದ್ದು, ಒಂದು ಋತುಮಾನದ ನೀರಿನಿಂದ ದೆಹಲಿಯ ಒಂದು ವರ್ಷದ ನೀರಿನ ಕೊರತೆಯನ್ನು ನೀಗಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯನ್ನು ಪೂರೈಸಲು ಕೇಜ್ರಿವಾಲ್ ಕೇಂದ್ರ ಸರ್ಕಾರದ ನೆರವಿಗೆ ಮನವಿ ಮಾಡಿದ್ದಾರೆ. ದೆಹಲಿ ಹಾಗೂ ಕೇಂದ್ರ ಸರ್ಕಾರ ಜೊತೆಯಾಗಿ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ ಎಂದು ಕೇಜ್ರಿವಾಲ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಸಂಸತ್ ಜಂಟಿ ಅಧಿವೇಶನಲ್ಲಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಈ ಕುರಿತು ಭಾಷಣ ಮಾಡಿದ್ದು, ನೀರು ಉಳಿಸುವ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬದ್ಧತೆಯನ್ನು ವಿವರಿಸಿದ್ದರು. ಇದು ಸರ್ಕಾರದ ಎರಡನೇ ಅವಧಿಯ ವಿಶೇಷ ಅಭಿಯಾನವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಸ್ವಚ್ಛ ಭಾರತ’ ಅಭಿಯಾನ ಜನಪ್ರಿಯವಾಗಿತ್ತು.

    ಅಭಿಯಾನದ ಭಾಗವಾಗಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಗ್ರಾಮ ಪಂಚಾಯತ್‍ಗಳಿಗೆ ಪತ್ರ ಬರೆದು ಈ ಬಾರಿಯ ಮಳೆಗಾಲದಲ್ಲಿ ನೀರನ್ನು ಕೊಯ್ಲು ಮಾಡುವ ಮೂಲಕ ಅಭಿಯಾನಕ್ಕೆ ಕೈ ಜೋಡಿಸುವಂತೆ ಸೂಚಿಸಿದ್ದಾರೆ.

    ಅಲ್ಲದೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೊಹಲ್ಲಾ ಕ್ಲಿನಿಕ್ (ಸಣ್ಣ ಕ್ಲಿನಿಕ್) ಹಾಗೂ ಅಧುನೀಕರಣಗೊಳಿಸಿದ ದೆಹಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವಂತೆಯೂ ಇದೇ ವೇಳೆ ಮನವಿ ಮಾಡಿದ್ದಾರೆ. ಮೊಹಲ್ಲಾ ಕ್ಲಿನಿಕ್ ಸ್ಥಾಪನೆ ಹಾಗೂ ಸರ್ಕಾರಿ ಶಾಲೆಗಳನ್ನು ಅಧುನೀಕರಣಗೊಳಿಸುವ ಯೋಜನೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾಗಿದ್ದು, ಈ ಕುರಿತು ಹೆಚ್ಚು ಪ್ರಶಂಸೆ ವ್ಯಕ್ತವಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ನಿಧನದಿಂದ ಹಿಡಿದು ಅಂತ್ಯಕ್ರಿಯೆಯವರೆಗೂ ಅಚ್ಚುಕಟ್ಟಾಗಿ ಬಂದೋಬಸ್ತ್ ಒದಗಿಸಿದ ಪೊಲೀಸ್ ಇಲಾಖೆಯ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕಂಠೀರವ ಸ್ಟೇಡಿಯಂ ಬಳಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬೆಂಗಳೂರು ಹಾಗೂ ಮಂಡ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯ ಎಲ್ಲರು ಎರಡು ದಿನಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ ಭದ್ರತೆ ಒದಗಿಸಿದ್ದಾರೆ. ಬಹಳ ಶಾಂತಿಯುತವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಹೇಳಿದರು.

    ಜನರಿಂದಲೂ ಪೊಲೀಸರು ಶ್ಲಾಘನೆ ಪಡೆದುಕೊಂಡಿದ್ದಾರೆ. ಪೊಲೀಸರು ಮುಂದಿನ ದಿನಗಳಲ್ಲಿ ಹೀಗೆಯೇ ಬಂದೋಬಸ್ತ್ ಒದಗಿಸುವ ಮೂಲಕ ಜನರ ಮೆಚ್ಚುಗೆ ಪಡೆಯಲಿ. ಪೊಲೀಸ್ ವಿಭಾಗಕ್ಕೆ ನನ್ನ ಅಭಿನಂದನೆಗಳು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಕ್ಕರೆ ಸಾಹುಕಾರರ ಜೊತೆ ಸಿಎಂ 50:50 ಸಂಧಾನ

    ಸಕ್ಕರೆ ಸಾಹುಕಾರರ ಜೊತೆ ಸಿಎಂ 50:50 ಸಂಧಾನ

    – ರೈತರಿಗೆ ಹೆಚ್ಚುವರಿ ಸಿಗಲಿದೆ 300 ರೂ.

    ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ನಡೆಸಿದ ಸಂಧಾನ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಮುಂದಿಟ್ಟ 50:50 ಸೂತ್ರಕ್ಕೆ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಕಬ್ಬು ಬೆಳೆದು ಕಣ್ಣೀರು ಸುರಿಸಿದ್ದ ರೈತರ ಕಣ್ಣೀರನ್ನು ಒರೆಸಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ.

    ಸಂಧಾನ ಸಭೆಯ ನಿರ್ಣಯ:
    ನ್ಯಾಯ ಹಾಗೂ ಲಾಭದಾಯಕ ಬೆಲೆಗಿಂತ (ಎಫ್.ಆರ್.ಪಿ) ಹೆಚ್ಚಿನ ಮೊತ್ತ ನೀಡುವ ಪ್ರಸ್ತಾವನೆಗೆ ಮಾಲೀಕರಿಂದ ವಿರೋಧ ವ್ಯಕ್ತವಾಯಿತು. ಬಳಿಕ ಎಫ್.ಆರ್.ಪಿ ದರವನ್ನು ಕೊಡುವುದಕ್ಕೆ ಒಪ್ಪಿಕೊಂಡರು. ಈಗ ಎಫ್.ಆರ್.ಪಿ ದರ 2,750 ರೂ. ಇದೆ. ಉಳಿದಂತೆ ಮಾಲೀಕರಿಂದ 150 ರೂ., ಸರ್ಕಾರದಿಂದ 150 ರೂ. ಸೇರಿ ಒಟ್ಟು 300 ರೂ. ಪ್ರೋತ್ಸಾಹಧನವಾಗಿ ನೀಡಲು ಸಭೆ ನಿರ್ಧಾರ ಕೈಗೊಳ್ಳಲಾಯಿತು. ಈ ಮೂಲಕ ರೈತರು ಪ್ರತಿ ಟನ್ ಕಬ್ಬಿಗೆ 3,050 ರೂ. ಪಡೆಯಲಿದ್ದಾರೆ.

    ಹೆಚ್ಚು ಬಾಕಿ ಉಳಿಸಿಕೊಂಡಿರುವ ಬಾಗಲಕೋಟೆ, ವಿಜಯಪುರ ಕಾರ್ಖಾನೆ ಮಾಲೀಕರು ಮುರುಗೇಶ್ ನಿರಾಣಿ, ಆನಂದ್ ನ್ಯಾಮಗೌಡ, ಎಸ್.ಆರ್ ಪಾಟೀಲ ಅವರು ತಕ್ಷಣ ಬಾಕಿ ಬಿಲ್ ಪಾವತಿ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಲೀಕರು, ತಕ್ಷಣ ಪಾವತಿ ಕಷ್ಟ, ಹಂಗಾಮು ಒಳಗೆ ಕೊಡುತ್ತೇವೆ ಎಂದು ಭರವಸೆ ನೀಡಿದರು. ಇತ್ತ ಬೆಳಗಾವಿ ಸಕ್ಕರೆ ಕಾರ್ಖಾನೆ ಮಾಲೀಕರು 15 ದಿನ ಗಡುವು ಕೇಳಿದ್ದಾರೆ.

    ಬರೀ ರೈತರ ವಾದ ಕೇಳಿದರೆ ನಮ್ಮದೂ ಸಮಸ್ಯೆ ಇದೆ. ಅದನ್ನು ಸ್ವಲ್ಪ ಕೇಳಿ ಎಂದು ಮಾಲೀಕರು ತಮ್ಮ ವಾದವನ್ನು ಸಿಎಂ ಕುಮಾರಸ್ವಾಮಿ ಅವರ ಮುಂದೆ ಮಂಡಿಸಿದ್ದಾರೆ.

    ಸಕ್ಕರೆ ಸಾಹುಕಾರರ ವಾದವೇನು?: ಎಫ್.ಆರ್.ಪಿ ದರದಲ್ಲಿ ಒಪ್ಪಂದ ಮಾಡಿಕೊಂಡಾಗ ಸಕ್ಕರೆ ದರ ಕೆಜಿಗೆ 35 ರಷ್ಟಿತ್ತು, ಈಗ 27ಕ್ಕೆ ಇಳಿದಿದೆ. ಟನ್‍ಗೆ 2,900 ರೂ. ಒಪ್ಪಂದ ಆಗಿದ್ದೂ ಲಾಭ ಬಂದ ಸಂದರ್ಭದಲ್ಲಿ 3,400 ರೂ. ನೀಡಿದ್ದೇವೆ. ಕಂಪೆನಿಗಳಿಂದ ವಿದ್ಯುತ್ ಖರೀದಿಯಲ್ಲಿ ಸರ್ಕಾರ ಮೋಸ ಮಾಡಿದೆ. ಪ್ರತಿ ಯೂನಿಟ್‍ಗೆ 5.87 ರೂ. ಒಪ್ಪಂದ ಮಾಡಿಕೊಂಡಿತ್ತು, ಈಗ 3.87 ರೂ. ನೀಡುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶಗಳ ಕಾರ್ಖಾನೆಗಳು ಉತ್ತಮ ದರದಲ್ಲಿ ವಿದ್ಯುತ್ ಖರೀದಿಸುತ್ತಿವೆ ಎಂದು ಹೇಳಿದ್ದಾರೆ.

    ಬರಗಾಲದಿಂದ ಕೇವಲ 8ರಿಂದ 10 ಲಕ್ಷ ಟನ್ ಕಬ್ಬು ಅರೆಯುತ್ತಿದ್ದೇವೆ. ಇದಕ್ಕೂ ಮೊದಲು 30 ರಿಂದ 40 ಲಕ್ಷ ಟನ್ ಕಬ್ಬು ಅರೆಯಲಾಗುತ್ತಿತ್ತು. ಇಥೆನಾಲ್‍ಗೆ ಕೇಂದ್ರ ಸರ್ಕಾರ ಸಬ್ಸಿಡಿ ಕೊಟ್ಟಿದೆ. ರಾಜ್ಯದಿಂದ ಯಾವುದೇ ಪ್ರೋತ್ಸಾಹ ಇಲ್ಲ. ನೆರೆ ರಾಜ್ಯಗಳು ಬಡ್ಡಿ ರಹಿತ ಸಾಲ ನೀಡಿ ಸಹಾಯಕ್ಕೆ ಬಂದಿವೆ, ರಾಜ್ಯದಲ್ಲಿ ಏನೂ ಆಗಿಲ್ಲ. 6-8 ತಿಂಗಳಾದ್ರೂ ಕಾರ್ಖಾನೆ ಖರೀದಿಸಿದ ವಿದ್ಯುತ್‍ಗೆ ಸರ್ಕಾರ ಹಣ ಪಾವತಿಸಿಲ್ಲ. 15 ದಿನದೊಳಗೆ ಪಾವತಿಸಿ ಅಂದರೆ ಹೇಗೆ? ಸರ್ಕಾರವೂ ಬಾಕಿಯನ್ನು 15 ದಿನದಲ್ಲಿ ಪಾವತಿಸಲಿ. 10 ತಿಂಗಳಾದರೂ ಹೈಲೆವೆಲ್ ಕಮಿಟಿ ಸಭೆ ನಡೆಸಿಲ್ಲ. ಕಾರ್ಖಾನೆಗಳಿಗೆ ಬೇಕಾದ ಕ್ಲಿಯರೆನ್ಸ್ ಸಿಕ್ಕಿಲ್ಲ ಎಂದು ಮಾಲೀಕರು ಸಿಎಂಗೆ ತಿಳಿಸಿದ್ದಾರೆ.

    ಸಭೆ ಬಳಿಕ ಮಾತನಾಡಿದ ಸಕ್ಕರೆ ಕಾರ್ಖಾನೆ ಮಾಲೀಕ ಬಾಲಚಂದ್ರ ಜಾರಕಿಹೊಳಿ, ಮೇಜರ್ ಸಮಸ್ಯೆ ಬಾಗಲಕೋಟೆಯದ್ದು. ನಾವು ಎಫ್.ಆರ್.ಪಿಗಿಂತ ಹೆಚ್ಚು ದರ ಕೊಟ್ಟಿದ್ದೇವೆ. ನಮ್ಮದು ಸಮಸ್ಯೆ ಇಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಕೆಲವರು ಬಾಕಿ ಪಾವತಿಗೆ ಸಮಯ ಕೇಳಿದ್ದಾರೆ. ಎಲ್ಲ ಸರಿ ಹೋಗುತ್ತೆ ಅಂದ್ರು. ಆದರೆ ಸಭೆಯಲ್ಲಿ ನಡೆದ ಚರ್ಚೆ ವಿಷಯದಲ್ಲಿ ಗೊಂದಲವಿದೆ. ಕಬ್ಬಿನ ದರ ಹಾಗೂ ಬಾಕಿ ವಿಚಾರದಲ್ಲಿ ಸ್ಪಷ್ಟತೆಯಿಲ್ಲ. ಹೀಗಾಗಿ ಅಹೋರಾತ್ರಿ ಧರಣಿ, ಆಮರಣ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಬೆಳಗಾವಿಯಲ್ಲಿ ರೈತ ಸಂಘದ ಮುಖಂಡ ಚೂನಪ್ಪ ಪೂಜಾರಿ ಹೇಳಿದ್ದಾರೆ.

    ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಶಾಸಕರಾಗಿರುವ ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್.ಆರ್.ಪಾಟೀಲ್, ಶ್ರೀಮಂತ ಪಾಟೀಲ್, ಶಶಿಕಲಾ ಜೊಲ್ಲೆ, ಆನಂದ ನ್ಯಾಮಗೌಡ ಹಾಜರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಹಾರಾಷ್ಟ್ರ ಅರಣ್ಯ ಸಚಿವರನ್ನು ಮಂತ್ರಿಗಿರಿಯಿಂದ ಕೈಬಿಡಿ – ಮನೇಕಾ ಗಾಂಧಿ ಒತ್ತಾಯ

    ಮಹಾರಾಷ್ಟ್ರ ಅರಣ್ಯ ಸಚಿವರನ್ನು ಮಂತ್ರಿಗಿರಿಯಿಂದ ಕೈಬಿಡಿ – ಮನೇಕಾ ಗಾಂಧಿ ಒತ್ತಾಯ

    ನವದೆಹಲಿ: ಅವನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುಂಗತಿವಾರ್ ಅವರನ್ನು ಮಂತ್ರಿಗಿರಿಯಿಂದ ವಜಾ ಮಾಡುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಒತ್ತಾಯಿಸಿದ್ದಾರೆ.

    ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇ0ದ್ರ ಫಡ್ನವೀಸ್ ಅವರಿಗೆ ಮನೇಕಾ ಗಾಂಧಿ ಪತ್ರ ಬರೆದಿದ್ದಾರೆ. ವನ್ಯ ಜೀವಿಗಳನ್ನು ರಕ್ಷಿಸುವ ಸ್ಥಾನದಲ್ಲಿದ್ದು, ಅವನಿ ಹತ್ಯೆಗೆ ಅವಕಾಶ ನೀಡಿರುವುದು ದುರಂತ. ಹೀಗಾಗಿ ಸಚಿವ ಸುಧೀರ್ ಮುಂಗತಿವಾರ್ ಅವರನ್ನು ಅರಣ್ಯ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

    ಅರಣ್ಯ ಅಧಿಕಾರಿಗಳು ಪ್ರಾಣಿಗಳನ್ನು ರಕ್ಷಿಸಲು ಇರುವುದೇ ಹೊರತು, ಹತ್ಯೆ ಮಾಡಲು ಸೂಚಿಸಲು ಅಲ್ಲ. ಮಕ್ಕಳ ಅಭಿವೃದ್ಧಿ, ಏಳಿಗೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಶ್ರಮಿಸುತ್ತದೆ. ಅದರಂತೆ ಅರಣ್ಯ ಇಲಾಖೆ ವನ್ಯ ಜೀವಿಗಳ ಸಂರಕ್ಷಣೆಗೆ ಶ್ರಮಿಸಬೇಕು ಎಂದು ಕಿಡಿಕಾರಿದ್ದಾರೆ.

    ಏನಿದು ಪ್ರಕರಣ?:
    ಕಳೆದ ಎರಡು ವರ್ಷಗಳಿಂದ 14 ಮಂದಿಯನ್ನು ತಿಂದು ಹಾಕಿದ್ದ ಹೆಣ್ಣು ಹುಲಿ ಅವನಿಯನ್ನು ನವೆಂಬರ್ 2ರಂದು ಮಹಾರಾಷ್ಟ್ರದ ಯಾವತ್ಮಲ್ ನಲ್ಲಿ ಹತ್ಯೆ ಮಾಡಲಾಗಿತ್ತು. ಆದರೆ ಸೆಪ್ಟಂಬರ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಅವನಿ ಹೆಣ್ಣು ಹುಲಿಯನ್ನು ಕಂಡಲ್ಲಿ ಗುಂಡು ಹಾರಿಸುವಂತೆ ಅನುಮತಿ ನೀಡಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಅವನಿ ಹತ್ಯೆ ಬಳಿಕ ಅದರ ಜೊತೆಗಿದ್ದ ಎರಡು ಹುಲಿ ಮರಿಗಳನ್ನು ರಕ್ಷಿಸಲಾಗಿದೆ.

    2012 ರಲ್ಲಿ ಯವತ್ಮಾಲ್ ಕಾಡಿನಲ್ಲಿ ಅವನಿ ಹೆಣ್ಣು ಹುಲಿ ಮೊದಲಿಗೆ ಕಾಣಿಸಿಕೊಂಡಿತ್ತು. 14 ಮಂದಿಯನ್ನು ಕೊಂದಿದ್ದ ದೇಹಗಳು ಕೂಡ ಕಾಡಿನಲ್ಲಿ ಪತ್ತೆಯಾಗಿತ್ತು. ಅದರಲ್ಲಿ 5 ಮಂದಿಯ ಸಾವಿಗೆ ಈ ಹುಲಿಯೇ ಕಾರಣ ಎಂಬುದು ಸಾಕ್ಷ್ಯಾಧಾರಗಳಿಂದ ತಿಳಿದು ಬಂದಿದೆ. ಸಮೀಕ್ಷೆಗಳ ಪ್ರಕಾರ ಕೆಲ ವರ್ಷಗಳಿಂದ ಆ ಅರಣ್ಯ ಪ್ರದೇಶದಲ್ಲಿ ಅವನಿ ಬಿಟ್ಟರೆ ಗಂಡು ಹುಲಿಯೊಂದು ವಾಸವಾಗಿರುವುದು ತಿಳಿದುಬಂದಿದೆ. ಮೃತಪಟ್ಟವರಲ್ಲಿ ಒಬ್ಬರ ದೇಹದಲ್ಲಿ ಮಾತ್ರ ಆ ಹುಲಿಯ ಡಿಎನ್‍ಎ ಪತ್ತೆಯಾಗಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ಮತ್ತೆ ಸಿಎಂ ಆಗ್ತೀನಿ- ಕಾಂಗ್ರೆಸ್ಸಿನಲ್ಲಿ ಮತ್ತೆ ಬಣ ರಾಜಕೀಯ: ಯಾರು ಏನು ಹೇಳಿದ್ರು?

    ನಾನು ಮತ್ತೆ ಸಿಎಂ ಆಗ್ತೀನಿ- ಕಾಂಗ್ರೆಸ್ಸಿನಲ್ಲಿ ಮತ್ತೆ ಬಣ ರಾಜಕೀಯ: ಯಾರು ಏನು ಹೇಳಿದ್ರು?

    ಬೆಂಗಳೂರು: ಕುಮಾರಸ್ವಾಮಿ ಸರ್ಕಾರ 100 ದಿನ ಪೂರೈಸಿದ ಬೆನ್ನಲ್ಲೆ ಕೆಲ ಕೈ ಶಾಸಕರು ಬೆಂಬಲವನ್ನು ವಾಪಸ್ ಪಡೆಯುತ್ತಾರೆ ಎನ್ನುವ ವದಂತಿಯ ಹರಿದಾಡುತ್ತಿದ್ದು, ಈಗ ಮಾಜಿ ಸಿಎಂ ಸಿದ್ದರಾಮಯ್ಯ ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಮಾಜಿ ಸಿಎಂ ಪರವಾಗಿ ಹೇಳಿಕೆ ನೀಡಿದರೆ ಡಿಕೆಶಿವಕುಮಾರ್ ಅವರು ಟಾಂಗ್ ನೀಡಿ ಪ್ರತಿಕ್ರಿಯಿಸಿದ್ದಾರೆ.

    ಯಾರು ಏನು ಹೇಳಿದ್ದಾರೆ?
    ದುಷ್ಟರು ಆರಂಭದ ಯುದ್ಧದಲ್ಲಿ ಗೆಲ್ಲಬಹುದು. ಆದರೆ ಅಂತಿಮ ಯುದ್ಧದಲ್ಲಿ ಅಲ್ಲ. ನೀವು ಜನನಾಯಕನಾಗಿರುವ ಕಾರಣ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದೀರಿ. ಬಂಡೆಕಲ್ಲಿನಂತೆ ನಾವು ನಿಮ್ಮ ಜೊತೆ ಇದ್ದೇವೆ ಎಂದು ಸುಧಾಕರ್ ಅವರು ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.

    ಸಿದ್ದರಾಮಯ್ಯ ಅವರಿಗೆ ಅಧಿಕಾರ ಪಡೆಯಬೇಕು ಎನ್ನುವ ಆಸೆ ಇರಬಹುದು. ಆದರೆ ಎಲ್ಲದಕ್ಕೂ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಸಮ್ಮಿಶ್ರ ಸರ್ಕಾರ ಬರಲು ಎಐಐಸಿ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲ ಮುಖಂಡರ ಜೊತೆ ಚರ್ಚಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿಯೇ 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.

    ನೀವೇ ಸಿಎಂ ಸ್ಥಾನ ತೆಗೆದುಕೊಳ್ಳಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದರು. ಆದರೆ ಪ್ರಾದೇಶಿಕ ಪಕ್ಷವನ್ನು ಉಳಿಸಬೇಕಿದೆ. ಹೀಗಾಗಿ ನಿಮ್ಮವರೇ ಮುಖ್ಯಮಂತ್ರಿಯಾಗಲಿ ಅಂತಾ ನಾವು ಮಾತು ಕೊಟ್ಟಿದ್ದೇವು. ಈಗ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಗೊಂದಲ ಬೇಡ, ಅವರು ಕಾರ್ಯಕರ್ತರಿಗೆ ಧೈರ್ಯ ಹೇಳುವ ಕೆಲಸ ಮಾಡಿರಬಹುದು ಅಷ್ಟೇ ಎಂದು ಡಿಕೆಶಿ ಪ್ರತಿಕ್ರಿಯಿಸಿದರು.

    ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ, ನನಗೆ ಸಂತೋಷವಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಖ ತಿರುಗಿಸಿ ಪ್ರತಿಕ್ರಿಯಿಸಿದ್ದಾರೆ.

    ಮಾಜಿ ಸಿಎಂ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮಗಳ ಪ್ರಶ್ನಿಸುತ್ತಿದ್ದಂತೆ ಸ್ಥಳದಿಂದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.

    ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎನ್ನುವುದಕ್ಕೆ ನನ್ನ ಬೆಂಬಲವಿದೆ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆಳಗಿಳಿಸಿ ಅವರು ಸಿಎಂ ಆಗುವುದಿಲ್ಲ. ನಾನು ಮತ್ತು ಸಿದ್ದರಾಮಯ್ಯ 30 ವರ್ಷಗಳಿಂದ ಸ್ನೇಹಿತರು. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರ ಹೇಳಿಕೆ ಬಗ್ಗೆ ಗೊಂದಲ ಮೂಡಿಸದೇ ಸಮ್ಮಿಶ್ರ ಸರ್ಕಾರ ನಡೆಸುವುದಕ್ಕೆ ಬಿಡಿ ಎಂದು ಮಾಧ್ಯಮಗಳ ಮೇಲೆಯೇ ಕಂದಾಯ ಸಚಿವ ಆರ್‍ವಿ. ದೇಶಪಾಂಡೆ ಗರಂ ಆದರು.

    ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ ಯಾವ ಸಂದರ್ಭದಲ್ಲಿ ಹೇಳಿರುವರೋ ಗೊತ್ತಿಲ್ಲ. ಸಿಎಂ ಸ್ಥಾನವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಗಾಳಿ ಸುದ್ದಿ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದರು.

    ಸರ್ಕಾರ ಬರುವುದು, ಹೋಗುವುದು ನಿರಂತರ ಪ್ರಕ್ರಿಯೆ. ಹೀಗಾಗಿ ಮುಂದೆ ಮತ್ತೆ ಆಗುತ್ತೇನೆ ಅಂತಾ ಹೇಳಿರಬಹುದು. ಆದರೆ ಅವರ ಹೇಳಿಕೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಅವರು ಮುಂದೆ ಸಿಎಂ ಆಗಲೂಬಹುದು ಎಂದು ಅರಣ್ಯ ಸಚಿವ ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv