Tag: Chief Ministers

  • ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ʻಕೋವಿಡ್‌ʼ ಸಭೆ

    ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ʻಕೋವಿಡ್‌ʼ ಸಭೆ

    ನವದೆಹಲಿ: ಕಳೆದ ಎರಡು ವಾರಗಳಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

    ಪ್ರಧಾನ ಮಂತ್ರಿ ಕಚೇರಿ (PMO) ಪ್ರಕಾರ, ವರ್ಚುವಲ್ ಸಭೆಯು ಬುಧವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಇದನ್ನೂ ಓದಿ: ಸಿನಿಮಾದಲ್ಲಿ ಅವಕಾಶ ಕೊಡಿಸೋ ನೆಪದಲ್ಲಿ ಲೈಂಗಿಕ ದೌರ್ಜನ್ಯ – ನಟ ವಿಜಯ್ ಬಾಬು ವಿರುದ್ಧ ಪ್ರಕರಣ ದಾಖಲು

    covid india

    ಪ್ರಧಾನ ಮಂತ್ರಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಆಯಾ ಸಚಿವಾಲಯಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

    ಈ ಹಿಂದೆಯೂ ಸಹ ಪ್ರಧಾನಿ ಮೋದಿ ಅವರು ಕೋವಿಡ್‌ ವಿಷಯವಾಗಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್

    ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,483 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬುಲೆಟಿನ್ ಪ್ರಕಾರ, ಸಕ್ರಿಯ ಪ್ರಕರಣ 15,636 ಇದ್ದರೆ, ಪಾಸಿಟಿವಿಟಿ ದರ ಶೇ.0.55 ಆಗಿದೆ.

    ಭಾನುವಾರದ ‘ಮನ್ ಕಿ ಬಾತ್’ ರೇಡಿಯೋ ಪ್ರಸಾರದಲ್ಲಿ ಪ್ರಧಾನಿ ಮೋದಿ ಅವರು, ಹಬ್ಬದ ಋತುವಿನಲ್ಲಿ ಕೋವಿಡ್‌ ವಿಚಾರವಾಗಿ ಜಾಗರೂಕರಾಗಿರಿ ಎಂದು ಜನರಿಗೆ ತಿಳಿಸಿದ್ದರು. ಕೋವಿಡ್ ನಿಯಂತ್ರಣಕ್ಕಾಗಿ ಜನರು ಮಾಸ್ಕ್ ಧರಿಸಿ ಹಾಗೂ ಕೋವಿಡ್‌ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಸಲಹೆ ನೀಡಿದ್ದರು.

  • ಕಾಂಗ್ರೆಸ್‌ ಟಿಕೆಟ್‌ ನಿರಾಕರಣೆ- ಚನ್ನಿ ಸಹೋದರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ

    ಕಾಂಗ್ರೆಸ್‌ ಟಿಕೆಟ್‌ ನಿರಾಕರಣೆ- ಚನ್ನಿ ಸಹೋದರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ

    ಚಂಡೀಗಢ: ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚಿನ್ನಿ ಸಹೋದರ ಮನೋಹರ್ ಸಿಂಗ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.

    ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಸಹೋದರ ಮನೋಹರ್ ಸಿಂಗ್‍ಗೆ ಟಿಕೆಟ್ ನಿರಾಕರಣೆ ಮಾಡಿದೆ. ಖರಾರ್ ಸಿವಿಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದ ಚನ್ನಿ ಸಹೋದರ ಮನೋಹರ್ ಸಿಂಗ್ ಬಸ್ಸಿ ಪಠಾನಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಅವರಿಗೆ ಟಿಕೇಟ್ ಸಿಗದ ಕಾರಣ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದ್ದಾರೆ. ಇದನ್ನೂ ಓದಿ: ನಟೋರಿಯಸ್ ಮೋಸ್ಟ್ ವಾಂಟೆಡ್ ರೌಡಿ ಶೀಟರ್ ಅರೆಸ್ಟ್

    ಕಾಂಗ್ರೆಸ್ ತನ್ನ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಒಟ್ಟು 79 ಶಾಸಕರ ಪೈಕಿ 61 ಶಾಸಕರಿಗೆ ಪಕ್ಷದ ಟಿಕೆಟ್ ನೀಡಿದೆ. ಈ ಹಿನ್ನೆಲೆಯಿಂದಾಗಿ ಪಕ್ಷದ ಶಾಸಕರುಗಳು ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದುಕೊಂಡಿದ್ದರೂ ಟಿಕೆಟ್ ಆಂಕಾಕ್ಷಿಗಳು ಮಾತ್ರ ಅಸಮಾಧಾನವಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಗುರುಪ್ರೀತ್ ಸಿಂಗ್ ಜಿಪಿ ಅವರನ್ನೇ ಕಣಕ್ಕೆ ಇಳಿಸಿದೆ. ಇದರಿಂದಾಗಿ ಅಸಮಾಧಾನಗೊಂಡಿರುವ ಮನೋಹರ್ ಸಿಂಗ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಅಕ್ರಮ ಬಡ್ಡಿ ವ್ಯವಹಾರ ಶಂಕೆ – ಮಹಿಳೆಯ ಮೇಲೆ ಶೂಟೌಟ್

     

  • ಅನ್‍ಲಾಕ್ ಒನ್‍ನಲ್ಲಿ ಆರ್ಥಿಕ ಸುಧಾರಣೆ ಕಂಡಿದೆ- ಪ್ರಧಾನಿ ಮೋದಿ

    ಅನ್‍ಲಾಕ್ ಒನ್‍ನಲ್ಲಿ ಆರ್ಥಿಕ ಸುಧಾರಣೆ ಕಂಡಿದೆ- ಪ್ರಧಾನಿ ಮೋದಿ

    ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿರುವವರ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಿದೆ.  ಹೀಗಾಗಿ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ.

    ಪ್ರಧಾನಿ ಮೋದಿ ಅವರು ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದಾರೆ. ಇಂದು ಕೂಡ ಆರಂಭಿಕವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿ ಅಭಯ ನೀಡಿದ್ದಾರೆ.

    ದೇಶದಲ್ಲಿ ಸೋಂಕು ಏರಿಕೆ ಕಾಣುತ್ತಿದೆ. ಇದರ ಜೊತೆಗೆ ಗುಣಮುಖರಾದವರ ಸಂಖ್ಯೆ ಏರಿದೆ. ಇದರಿಂದ ಜನರು ಭಯಪಡುವ ಅವಶ್ಯಕತೆ ಇಲ್ಲ. ಆದರೆ ಮೃತರ ಸಂಖ್ಯೆ ನೋಡಿದಾಗ ಆತಂಕವಾಗುತ್ತದೆ. ಆದ್ಯಾಗೂ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಪ್ರಮಾಣ ಕಡಿಮೆ ಎಂದರು.

    ದೇಶದಲ್ಲಿ ಅನ್‍ಲಾಕ್ ಆಗಿದ್ದು ಎಲ್ಲ ಚಟುವಟಿಕೆಗಳು ಆರಂಭವಾಗಿವೆ. ಮನೆಯಿಂದ ಜನರು ಹೊರ ಬರುತ್ತಿದ್ದಾರೆ. ಅಂಗಡಿ ಮುಂಗಟ್ಟು ತೆರೆದಿದ್ದು, ಆರ್ಥಿಕ ವ್ಯವಸ್ಥೆ ಮುಕ್ತವಾಗಿದೆ. ಈ ಸಂದರ್ಭದಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದ್ದು, ಜನರು ಮನೆಯಿಂದು ಹೊರ ಬರುವ ಮುನ್ನ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದರು.

    ಒಬ್ಬರ ಮಧ್ಯೆ ಮತ್ತೊಬ್ಬರು ಆರು ಅಡಿ ಅಂತರ ಕಾಯ್ದುಕೊಳ್ಳಿ, ಆಗ್ಗಾಗೆ ಕೈಗೆ ಸ್ಯಾನಿಟೈಜರ್ ಹಾಕಿಕೊಳ್ಳುವ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು. ಇದು ನಿಮ್ಮನ್ನು ಮಾತ್ರವಲ್ಲದೆ ಮನೆಯಲ್ಲಿರುವ ನಿಮ್ಮವರನ್ನು ಕೊರೊನಾದಿಂದ ದೂರ ಮಾಡಲಿದೆ ಎಂದು ಸಲಹೆ ನೀಡಿದರು.

    ಅನ್‍ಲಾಕ್ ಬಳಿಕ ದೇಶದ ಆರ್ಥಿಕತೆ ಸುಧಾರಿಸುತ್ತಿದೆ. ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಮೇ ತಿಂಗಳಿನಲ್ಲಿ ಅತಿ ಹೆಚ್ಚು ರಸಗೊಬ್ಬರ ಮಾರಾಟವಾಗಿದೆ. ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚಾಗಿದೆ. ಡಿಜಿಟಲ್ ವ್ಯವಹಾರಗಳು ಅಭಿವೃದ್ಧಿ ಕಾಣುತ್ತಿದೆ. ಅಲ್ಲದೇ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸರ್ಕಾರದ ವಿಶೇಷ ಪ್ಯಾಕೇಜ್ ಗಳಿಂದ ಚೇತರಿಕೆ ಕಾಣುತ್ತಿದ್ದು ಈ ಬೆಳವಣಿಗೆ ಮುಂದೆ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

  • ನಾಳೆ ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಸಭೆ

    ನಾಳೆ ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಸಭೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಹೇರಿದ್ದ ಲಾಕ್‍ಡೌನ್ ಸೇರಿದಂತೆ ವಿವಿಧ ಕ್ರಮ, ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಪ್ರಧಾನಿ ಸಭೆಯಲ್ಲಿ ಚರ್ಚಿಸಲಿದ್ದಾರೆ. ಮೇ 17ರಂದು ಮೂರನೇ ಹಂತದ ಲಾಕ್‍ಡೌನ್ ಮುಕ್ತಾಯವಾಗಲಿದೆ. ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕು, ರಾಜ್ಯದಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಎಂಬ ವಿಚಾರವಾಗಿ ಸಲಹೆ ಸಂಗ್ರಹಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಮೂಲಗಳ ಪ್ರಕಾರ, ಕೊರೊನಾ ಸೋಂಕಿತರ ಸಂಖ್ಯೆ ಆಧಾರದ ಮೇಲೆ ಮಾಡಿರುವ ರೆಡ್, ಆರೇಂಜ್ ಹಾಗೂ ಗ್ರೀನ್ ಝೋನ್ ನಿಯಮಗಳ ಬಗ್ಗೆ ಅನೇಕ ರಾಜ್ಯಗಳು ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿವೆ. ಜೊತೆಗೆ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಹೋಗಲು ನೀಡಿದ ಎಡವಟ್ಟಿನಿಂದ ಗ್ರೀನ್ ಝೋನ್ ಪ್ರದೇಶಗಳು ಕೂಡ ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿವೆ ಎಂಬುದು ಅನೇಕ ರಾಜ್ಯಗಳ ಆರೋಪವಾಗಿದೆ.

    ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಮೀಷನರ್ ಜೊತೆಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಮುಂದಿನ ನಡೆಯ ಬಗ್ಗೆ ಸಲಹೆಯನ್ನು ಪಡೆಯಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

  • ಏ. 27ರಂದು ಮತ್ತೆ ಮುಖ್ಯಮಂತ್ರಿಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್

    ಏ. 27ರಂದು ಮತ್ತೆ ಮುಖ್ಯಮಂತ್ರಿಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್

    ನವದೆಹಲಿ: ಏಪ್ರಿಲ್ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೂರನೇ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

    ಕೊರೊನಾ ವೈರಸ್ ಸೋಂಕು ಹರಡುವಿಕೆ ಹಾಗೂ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‍ಡೌನ್ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮೋದಿ ಅವರು ಚರ್ಚೆ ಮಾಡಲಿದ್ದಾರೆ. ಈ ಹಿಂದೆ ಲಾಕ್‍ಡೌನ್ ಹಾಗೂ ಕೊರೊನಾ ವೈರಸ್ ಹರಡುವಿಕೆ ತಡೆಯ ವಿಚಾರವಾಗಿ ಎರಡು ಬಾರಿ ಮೋದಿ ಅವರು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಮೊದಲ ಬಾರಿಗೆ ಮಾರ್ಚ್ 20ರಂದು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ, ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಪಡೆದು ಮಾರ್ಚ್ 24ರಂದು ದೇಶಾದ್ಯಂತ ಲಾಕ್‍ಡೌನ್ ಜಾರಿಗೆ ತರಲಾಯ್ತು.

    ಮಾಚ್ 24ರ ಬಳಿಕ 21 ದಿನಗಳ ಲಾಕ್‍ಡೌನ್ ಮುಕ್ತಾಯವಾಗುವುದಕ್ಕೂ ಮುನ್ನವೇ ಎರಡನೇ ವಿಡಿಯೋ ಕಾನ್ಫರೆನ್ಸ್ ಅನ್ನು ಏಪ್ರಿಲ್ 11ರಂದು ನಡೆಸಿ, ಏಪ್ರಿಲ್ 14ಕ್ಕೆ ಮುಗಿಯಬೇಕಿದ್ದ ಲಾಕ್‍ಡೌನ್ ಅನ್ನು ಮೇ 3ರವರೆಗೆ ವಿಸ್ತರಣೆ ಮಾಡಲಾಯಿತು.

    ಸದ್ಯ ಏಪ್ರಿಲ್ 20ರ ಬಳಿಕ ಕೇಂದ್ರದ ನಿರ್ದೇಶನದ ಪ್ರಕಾರವೇ ಕೆಲವು ರಾಜ್ಯಗಳು ಲಾಕ್‍ಡೌನ್ ನಿಯಮಗಳನ್ನು ಸಡಿಲಗೊಳಿಸಿವೆ. ಹೀಗಾಗಿ ಈ ಬಗ್ಗೆ ಚರ್ಚೆ, ಮಾಹಿತಿ ಪಡೆಯಲು ಏಪ್ರಿಲ್ 27ರಂದು ಮೋದಿ ಅವರು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.

    ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,486 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 49 ಜನ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈವರೆಗೆ ಭಾರತದಲ್ಲಿ 20,471 ಮಂದಿಗೆ ಸೋಂಕು ತಗುಲಿದ್ದು, 3,960 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 652 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

  • ನೀತಿ ಆಯೋಗದ ಮೊದಲ ಸಭೆಗೆ ಮೂವರು ಮುಖ್ಯಮಂತ್ರಿಗಳು ಗೈರು

    ನೀತಿ ಆಯೋಗದ ಮೊದಲ ಸಭೆಗೆ ಮೂವರು ಮುಖ್ಯಮಂತ್ರಿಗಳು ಗೈರು

    ನವದೆಹಲಿ: ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ನೀತಿ ಆಯೋಗದ ಸಭೆಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದಾರೆ.

    ನೀತಿ ಆಯೋಗದ ಐದನೇ ಆಡಳಿತ ಮಂಡಳಿ ಸಭೆ ಶನಿವಾರ ನಡೆದಿದ್ದು, ಸಭೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್(ಕೆಸಿಆರ್) ಅವರು ಸಭೆಗೆ ಗೈರಾಗಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜನಯಗಳಿಸಿ ಅಧಿಕಾರದ ಗದ್ದುಗೆಯನ್ನೇರಿದ ಎನ್‍ಡಿಎ ಸರ್ಕಾರದ ಮೊದಲ ನೀತಿ ಆಯೋಗದ ಸಭೆಯನ್ನು ಮೂವರು ಮುಖ್ಯಮಂತ್ರಿಗಳು ತಿರಸ್ಕರಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರದ ಪ್ರಮುಖ ನಾಯಕರು, ಅಧಿಕಾರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳು ಭಾಗವಹಿಸಿದ್ದರು.

    ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಹವಾಮಾನದ ವೈಪರಿತ್ಯದಿಂದಾಗಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಅಮರಿಂದರ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕರೆದಿದ್ದ ಸಭೆಗೂ ಗೈರಾಗಿದ್ದಾರೆ.

    ಕಾಲೇಶ್ವರಂ ನೀರಾವರಿ ಯೋಜನೆಗೆ ಚಾಲನೆ ನೀಡುತ್ತಿರುವ ಹಿನ್ನೆಲೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಟಿಆರ್‍ಎಸ್ ನಾಯಕ ಹಾಗೂ ಮಾಜಿ ಸಂಸದ ಬಿ.ವಿನೋದ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸಿ ಗುರುವಾರದ ನಂತರ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವ ಕುರಿತು ಕೆಸಿಆರ್ ಖಚಿತಪಡಿಸಿದ್ದರು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ರೈತಬಂಧು ಯೋಜನೆ ಕುರಿತು ನೀತಿ ಆಯೋಗದ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಗಮನ ಸೆಳೆಯಲು ತಯಾರಾಗಿದ್ದರು. ಈ ಯೋಜನೆ ವಿವಿಧ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಸಹ ಹೇಳಿದ್ದರು. ಆದರೆ, ದಿಢೀರನೆ ನೀತಿ ಆಯೋಗದ ಸಭೆಯನ್ನು ಕೆಸಿಆರ್ ತಿರಸ್ಕರಿಸಲು ಕಾರಣ ಏನೆಂಬುದು ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾಲೇಶ್ವರಂ ನೀರಾವರಿ ಯೋಜನೆ ಉದ್ಘಾಟನೆಗೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಪ್ರಧಾನಿಗಳ ಭೇಟಿಗೆ ಅನುಮತಿ ಕೋರಿದ್ದರು. ಆದರೆ, ಪ್ರಧಾನಿ ಕಾರ್ಯಾಲಯದಿಂದ ಅನುಮತಿ ದೊರೆಯದ ಹಿನ್ನೆಲೆ ಕೆಸಿಆರ್ ಅವರು ಅಸಮಾಧಾನಗೊಂಡು ನೀತಿ ಆಯೋಗದ ಸಭೆಗೆ ಗೈರಾಗುತ್ತಿದ್ದಾರೆ ಎಂದು ವರದಿಯಾಗಿದೆ.

    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯೊಂದಿಗೆ ತಮ್ಮ ಅಸಮಾಧಾನವನ್ನು ಮುಂದುವರಿಸಿದ್ದು, ನೀತಿ ಆಯೋಗದ ಸಭೆಯಿಂದ ಏನೂ ಫಲಪ್ರದವಿಲ್ಲ. ರಾಜ್ಯದ ಯೋಜನೆಗಳಿಗೆ ಹಣ ನೀಡುವ ಅಧಿಕಾರ ನೀತಿ ಆಯೋಗಕ್ಕಿಲ್ಲ ಎಂದು ದೂರಿದ್ದಾರೆ.