Tag: Chief Minister HD Kumaraswamy

  • ಬಳ್ಳಾರಿ, ಜಮಖಂಡಿ ಪ್ರಚಾರಕ್ಕೆ ಸಿಎಂ ಗೈರು- ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ ಜಿ.ಪರಮೇಶ್ವರ್

    ಬಳ್ಳಾರಿ, ಜಮಖಂಡಿ ಪ್ರಚಾರಕ್ಕೆ ಸಿಎಂ ಗೈರು- ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ ಜಿ.ಪರಮೇಶ್ವರ್

    ಹುಬ್ಬಳ್ಳಿ: ಚುನಾವಣೆ ಪ್ರಚಾರದ ವಿಚಾರವಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಸಿಎಂ ಎಚ್.ಡಿ.ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ. ಆರೋಗ್ಯದ ದೃಷ್ಠಿಯಿಂದ ಸಿಎಂ ಬೆಂಗಳೂರು ಸಮೀಪದ ಮಂಡ್ಯ ಹಾಗೂ ರಾಮನಗರದಲ್ಲಿ ಮಾತ್ರ ಪ್ರಚಾರ ಮಾಡಬಹುದು ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.

    ಹುಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ಜಮಖಂಡಿ ಹಾಗೂ ಬಳ್ಳಾರಿ ಕ್ಷೇತ್ರಗಳ ಚುನಾವಣೆ ಪ್ರಚಾರಕ್ಕೆ ಬಂದರೂ ಬರಬಹುದು. ಮೈತ್ರಿ ಸರ್ಕಾರದಲ್ಲಿ ಯಾವುದೇ ಅಸಮಾಧಾನವಿಲ್ಲ. ಐದು ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರು ನಮ್ಮ ಜೊತೆ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು.

    ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗುಡುಗಿದ ಡಿಸಿಎಂ ಪರಮೇಶ್ವರ್, ಬಿಜೆಪಿಯವರು ಮೂರು ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ ಪ್ರಚಾರ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿ. ಈಗಾಗಲೇ ಗೆದ್ದಿದ್ದರೆ ಪ್ರಚಾರ ಯಾಕೆ ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟ ಅವರು, ಐದು ಕ್ಷೇತ್ರಗಳ ಉಪಚುನಾವಣೆ ಪ್ರಚಾರ ಬಿರುಸಾಗಿದೆ. ನಾನು ಮೊದಲೇ ಹೇಳಿದಂತೆ ಐದು ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ಹೇಳಿದರು.

    ಜಮಖಂಡಿ ಕ್ಷೇತ್ರದಲ್ಲಿ ಮೊದಲ ಹಂತದ ಪ್ರಚಾರ ಪೂರ್ಣಗೊಳಿಸಿರುವೆ. ಭಾನುವಾರದಿಂದ ಎರಡನೇ ಹಂತದ ಪ್ರಚಾರ ಮಾಡುತ್ತೆನೆ. ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಮೈತ್ರಿಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬಳ್ಳಾರಿಯಲ್ಲಿ ಬಿಜೆಪಿಯವರು ಎಷ್ಟೇ ಪ್ರಯತ್ನ ಮಾಡಿದರೂ ನಾವೇ ಗೆಲ್ಲುತ್ತೆವೆ ಎಂದ ಅವರು, 371-(ಜೆ)ಗೆ ಸಂಬಂಧಿಸಿದ ಯಾವುದೇ ಅನುದಾನ ನಮ್ಮ ಸರ್ಕಾರ ಕಡಿತ ಮಾಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಜೆಟ್‍ನಲ್ಲಿ ಮೀಸಲಿಟ್ಟಿದ್ದ ಹಣವನ್ನು ಮುಂದುವರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಣ್ಣಾ ಮಲೈ ಸೇರಿ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳು ಬೆಂಗ್ಳೂರಿಗೆ ವರ್ಗಾವಣೆ

    ಅಣ್ಣಾ ಮಲೈ ಸೇರಿ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳು ಬೆಂಗ್ಳೂರಿಗೆ ವರ್ಗಾವಣೆ

    ಬೆಂಗಳೂರು: ಅಲೋಕ್ ಕುಮಾರ್ ಮತ್ತು ಗಿರೀಶ್ ಅವರಂತಹ ಖಡಕ್ ಪೊಲೀಸ್ ಅಧಿಕಾರಿಗಳನ್ನು ಸಿಸಿಬಿಗೆ ಹಾಕಿ, ದಂಧೆಕೋರರಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಸಿ ಮುಟ್ಟಿಸಿದ್ದಾರೆ. ಇದರ ಬೆನ್ನಲ್ಲೇ ಐವರು ಖಡಕ್ ಆಫೀಸರ್ ಗಳನ್ನು ವರ್ಗಾವಣೆ ಮಾಡಿದ್ದಾರೆ.

    ಭೂ ಮಾಫಿಯಾ ಮಟ್ಟ ಹಾಕಲು ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಅಣ್ಣಾ ಮಲೈ ಹಾಗೂ ಪೂರ್ವ ವಿಭಾಗ ಡಿಸಿಪಿಯಾಗಿ ರಾಹುಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಬೆಂಗಳೂರು ವಿಭಾಗದ ಹೆಚ್ಚುವರಿ ಸಂಚಾರ ಆಯುಕ್ತರಾಗಿ ಹರಿಶೇಖರನ್, ಕೆಎಸ್‍ಆರ್‍ಪಿ 1ನೇ ಬೆಟಾಲಿಯನ್ ಕಮಾಂಡೆಂಟ್‍ಗೆ ಅಜಯ್ ಹಿಲೋರಿ ಹಾಗೂ ಚಿಕ್ಕಮಗಳೂರು ಎಸ್‍ಪಿಯಾಗಿ ಹರೀಶ್ ಪಾಂಡೆ ಅವರು ವರ್ಗಾವಣೆಯಾಗಿದ್ದಾರೆ. ಇದನ್ನು ಓದಿ: ಭೂಕಳ್ಳರನ್ನು ಮಟ್ಟ ಹಾಕಲು ಬೆಂಗ್ಳೂರಿಗೆ ಬರ್ತಿದ್ದಾರೆ ಎಸ್‍ಪಿ ಅಣ್ಣಾ ಮಲೈ

    ಈ ಮೂಲಕ ಮತ್ತೆ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಮಣೆ ಹಾಕಿ, ಕಳ್ಳರಿಗೆ ಹಾಗೂ ನಿಯಮ ಉಲ್ಲಂಘನೆ ಮಾಡುವವರಲ್ಲಿ ನಡುಕ ಹುಟ್ಟಿಸಲು ಎಚ್.ಡಿ.ಕುಮಾರಸ್ವಾಮಿ ಅವರು ತಂತ್ರ ಹೆಣೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಲ ಮರುಪಾವತಿ ಮಾಡದ್ದಕ್ಕೆ ದಂಧೆಕೋರನಿಂದ ಮಗು ಕಿಡ್ನಾಪ್!

    ಸಾಲ ಮರುಪಾವತಿ ಮಾಡದ್ದಕ್ಕೆ ದಂಧೆಕೋರನಿಂದ ಮಗು ಕಿಡ್ನಾಪ್!

    ಬೆಂಗಳೂರು: ಒಂದು ಕಡೆ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಸ್ ನಡೆಸುತ್ತಿದ್ದರೆ ಬಡ್ಡಿ ದಂಧೆಕೋರರ ದರ್ಬಾರ್ ಮುಂದುವರಿದಿದೆ. ಸಾಲದ ಹಣಕ್ಕಾಗಿ ಕಂದಮ್ಮನನ್ನೇ ಅಪಹರಣ ಮಾಡಿದ ಅಮಾನವೀಯ ಕೃತ್ಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಕಂದಮ್ಮನ ಚಿಕಿತ್ಸೆಗೆಂದು ಪಡೆದ 30 ಸಾವಿರ ರೂ. ಸಾಲವನ್ನು ಹಿಂತಿರುಗಿಸಲಿ ಅಂತಾ ಲೇವಾದೇವಿಯೊಬ್ಬ ಮಗುವನ್ನೇ ಅಪಹರಣ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆನೇಕಲ್ ತಾಲೂಕಿನ ಕಿತ್ತಾಗನಹಳ್ಳಿಯಲ್ಲಿ ವಾಸವಾಗಿದ್ದ ಬಾಡಿಗೆ ಮನೆಗೂ ಬೀಗ ಜಡಿದು ದಂಪತಿಯನ್ನು ಬೀದಿ ಪಾಲು ಮಾಡಿದ್ದಾನೆ.

    ಭದ್ರಾವತಿಯ ಚಂದ್ರ ಮೂರ್ತಿ ಮಗುವನ್ನು ಕಿತ್ತುಕೊಂಡು ಹೋದ ಲೇವಾದೇವಿ. ವಿನಾಯಕ್ ದಂಪತಿ ಮಗು ಈಗ ಭದ್ರಾವತಿಯಲ್ಲಿದ್ದು, ಸಾಲ ಮರುಪಾವತಿ ಮಾಡಿ ಮಗುವನ್ನು ತಗೆದುಕೊಂಡು ಹೋಗಿ ಅಂತಾ ಚಂದ್ರ ಮೂರ್ತಿ ಪಟ್ಟು ಹಿಡಿದಿದ್ದಾನೆ ಎಂದು ದಂಪತಿ ಆರೋಪಿಸಿದ್ದಾರೆ.

    ಏನಿದು ಪ್ರಕರಣ?:
    ಹಾಸನ ಮೂಲದ ವಿನಾಯಕ್ ದಂಪತಿ ಐದು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಆನೇಕಲ್ ಸಮೀಪದ ಕಿತ್ತಾಗನಹಳ್ಳಿಗೆ ಬಂದಿದ್ದರು. ಅಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡು ಗಾರೆ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದರು. ಒಂದು ವರ್ಷದ ಹಿಂದೆ ಮಗುವಿನ ಜನನವಾಗಿದ್ದು, ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಮಗುವಿಗೆ ಚಿಕಿತ್ಸೆ ಕೊಡಿಸಲು ಭದ್ರಾವತಿಯ ಚಂದ್ರ ಮೂರ್ತಿ ಬಳಿ ವಿನಾಯಕ್ ದಂಪತಿ 30 ಸಾವಿರ ರೂ. ಸಾಲ ಪಡೆದಿದ್ದರು.

    ಆರ್ಥಿಕವಾಗಿ ಕುಗ್ಗಿದ್ದ ವಿನಾಯಕ್ ಸಾಲ ಮರುಪಾವತಿ ಮಾಡಲು ಆಗಿರಲಿಲ್ಲ. ಇದಿಂದಾಗಿ ಚಂದ್ರ ಮೂರ್ತಿ ವಿನಾಯಕ್ ದಂಪತಿಯನ್ನು ಭದ್ರಾವತಿಗೆ ಕರೆಸಿಕೊಂಡಿದ್ದರು. ಮಗುವನ್ನು ಅಪಹರಣ ಮಾಡಿ, ಮಗು ಬೇಕಾದರೆ ಸಾಲ ಮರು ಪಾವತಿ ಮಾಡಿ ಅಂತಾ ಬೆದರಿಕೆ ಹಾಕಿದ್ದಾರಂತೆ. ಒಂಬತ್ತು ತಿಂಗಳ ಹೆತ್ತು ಹೊತ್ತು ಸಾಕಿದ ಮಗುವನ್ನು ಕಳೆದುಕೊಂಡ ತಂದೆ-ತಾಯಿ ದಿಕ್ಕು ತೋಚದೆ ಪಬ್ಲಿಕ್ ಟಿವಿ ಬಳಿ ಬಂದು ಮಗುವನ್ನು ಕೊಡಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.

    ಕಿತ್ತಾಗನ ಹಳ್ಳಿಯಲ್ಲಿ ಬಾಡಿಗೆಗೆ ಇದ್ದ ಮನೆಗೂ ಸಹ ಚಂದ್ರ ಮೂರ್ತಿ ಬೀಗ ಜಡಿದಿದ್ದು, ಇರುವುದಕ್ಕೂ ಮನೆಯಿಲ್ಲದಾಗಿದೆ. ಕೈಯಲ್ಲಿ ಬಿಡಿಗಾಸು ಇಲ್ಲದೇ ಐದು ದಿನಗಳಿಂದ ದೇವಸ್ಥಾನ, ಬಸ್‍ಸ್ಟ್ಯಾಂಡ್, ಆಸ್ಪತ್ರೆಗಳ ಬಳಿ ಮಲಗಿಯೇ ಕಾಲ ಕಳೆಯುತ್ತಿದ್ದಾರೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/eOPS66BnUYM