Tag: Chief Minister BS Yeddyurappa

  • ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಿಎಂ

    ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಿಎಂ

    ಬೆಂಗಳೂರು: ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು.

    ಎತ್ತಿನಹೊಳೆ ಯೋಜನೆಯಲ್ಲಿ ಈ ವರೆಗೆ 9003.86 ಕೋಟಿ ರೂ. ವೆಚ್ಚವಾಗಿದ್ದು, ಮೊದಲ ಹಂತದಲ್ಲಿ ಜುಲೈ ಅಂತ್ಯದೊಳಗೆ ವೇದಾವತಿ ವ್ಯಾಲಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಅಲ್ಲದೆ ಎತ್ತಿನಹೊಳೆ ಯೋಜನೆಯು ಏಳು ಜಿಲ್ಲೆಯ 29 ತಾಲೂಕುಗಳ 6,557 ಗ್ರಾಮಗಳ 68 ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರು ಒದಗಿಸಲಿದೆ ಎಂದು ವಿವರಿಸಿದರು.

    ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೇಂದ್ರ ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ದೂರವಾಣಿ ಮೂಲಕ ಚರ್ಚಿಸಲಾಗಿದ್ದು, ಶೀಘ್ರ ಅನುಮೋದನೆ ನೀಡಲು ಕೋರಲಾಗಿದೆ. ಅಗತ್ಯ ಬಿದ್ದರೆ ಕೇಂದ್ರ ಸಚಿವರನ್ನು ಖುದ್ದು ಭೇಟಿ ಮಾಡಿ ಮಂಜೂರಾತಿಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

    ಈ ಯೋಜನೆಯಡಿ ಕಳೆದೆರಡು ವರ್ಷಗಳಲ್ಲಿ 2362.62 ಕೋಟಿ ರೂ.ಗಳ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದ್ದು, ಯೋಜನೆಯಿಂದ ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ನೀರಾವರಿ ಯೋಜನೆಗಳನ್ನು ಯಾವುದೇ ಲೋಪವಿಲ್ಲದಂತೆ ಅನುಷ್ಠಾನಗೊಳಿಸಬೇಕು. ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಿಎಂ ಎಚ್ಚರಿಸಿದರು.

    ಸಭೆಯಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • ಕಿಡ್ನಿ ಶಸ್ತ್ರಚಿಕಿತ್ಸೆ, ಔಷಧಿ ಸಿಗದೆ ಮಹಿಳೆ ನರಳಾಟ- ಮಾನವೀಯತೆ ಮೆರೆದ ಸಿಎಂ

    ಕಿಡ್ನಿ ಶಸ್ತ್ರಚಿಕಿತ್ಸೆ, ಔಷಧಿ ಸಿಗದೆ ಮಹಿಳೆ ನರಳಾಟ- ಮಾನವೀಯತೆ ಮೆರೆದ ಸಿಎಂ

    – ಟಿಕ್ ಟಾಕ್ ಮೂಲಕ ಗಮನ ಸೆಳೆದ ಮಗಳು
    – ವಿಡಿಯೋ ನೋಡುತ್ತಿದ್ದಂತೆ ಸಹಾಯ ಮಾಡುವಂತೆ ಸಿಎಂ ಸೂಚನೆ
    – ಪತ್ನಿಗೆ ಒಂದು ಕಿಡ್ನಿ ದಾನ ಮಾಡಿರುವ ಪತಿ

    ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಹಿಳೆಗೆ ಆಪರೇಷನ್ ಮಾಡಿ ಕಿಡ್ನಿ ಕಸಿ ಮಾಡಿದರೂ, ಸೂಕ್ತ ಔಷಧಿ ಇಲ್ಲದೆ ನರಳಾಡುತ್ತಿದ್ದರು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣವೇ ಸ್ಪಂದಿಸಿದ್ದು, ಮಹಿಳೆಗೆ ಒಂದು ತಿಂಗಳ ಔಷಧಿ ವ್ಯವಸ್ಥೆ ಮಾಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

    ಬೆಳಗಾವಿಯ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಶೇಖವ್ವ ಅರಂಭಾವಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ವೇಳೆ ಪತಿ ಪತ್ನಿಗಾಗಿ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದರು. ಜನವರಿ 17ರಂದು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ಘೋಷಣೆಯಾದ ಕಾರಣ ಶೇಖವ್ವ ಅವರಿಗೆ ಅಗತ್ಯ ಔಷಧಿಗಳು ದೊರೆಯದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.

    ಏನು ಮಾಡುವುದು ಎಂದು ತೋಚನೆ ಅವರ ಕುಟುಂಬ ತೀವ್ರ ನೋವಿನಲ್ಲಿತ್ತು. ಆಗ ಶೇಖವ್ವ ಅವರ ಮಗಳು ಪವಿತ್ರ ಹೊಳಿದಿದ್ದೇ ಟಿಕ್ ಟಾಕ್. ಟಿಕ್ ಟಾಕ್‍ನಲ್ಲಿ ವಿಡಿಯೋ ಮಾಡಿ. ತನ್ನ ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಕುರಿತು ಪವಿತ್ರ ತಿಳಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳು ಈ ಕುರಿತು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ವಿಡಿಯೋ ಸಿಎಂ ಗಮನಕ್ಕೆ ಬಂದಿದ್ದು, ತಕ್ಷಣವೇ ಎಚ್ಚೆತ್ತ ಬಿಎಸ್‍ವೈ ಬೆಳಗಾವಿ ಜಿಲ್ಲಾಧಿಕಾರಿಳಿಗೆ ಕರೆ ಮಾಡಿ ಪರಿಹಾರಕ್ಕೆ ಸೂಚಿಸಿದ್ದಾರೆ.

    ಬೆಳಗಾವಿಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಶೇಖವ್ವ ಅರಂಭಾವಿ ಅವರಿಗೆ ತಕ್ಷಣವೇ ಒಂದು ತಿಂಗಳಿಗಾಗುವಷ್ಟು ಅಗತ್ಯ ಔಷಧಿಗಳನ್ನು ಪೂರೈಸಿ ಎಂದು ಆದೇಶಿಸಿದರು. ಸಿಎಂ ಆದೇಶಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಶೇಖವ್ವ ಅರಂಭಾವಿ ಅವರಿಗೆ ಅಗತ್ಯ ಔಷಧಿ ಪೂರೈಸಿ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ.

  • ಹಾಲಿ ಸಿಎಂ ಹಂಗೆ ಹೋದ್ರು, ಮಾಜಿ ಸಿಎಂ ಮಾತನಾಡಿಸಿದ್ರು

    ಹಾಲಿ ಸಿಎಂ ಹಂಗೆ ಹೋದ್ರು, ಮಾಜಿ ಸಿಎಂ ಮಾತನಾಡಿಸಿದ್ರು

    – ಸಿಎಂ ವಿರುದ್ಧ ಸಂತ್ರಸ್ತರ ದೂರು
    – ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದ ಸಿದ್ದರಾಮಯ್ಯ

    ಚಿಕ್ಕಮಗಳೂರು: ರಸ್ತೆ ಬದಿಯಲ್ಲಿ ನಿಂತಿದ್ದ ಸಂತ್ರಸ್ತರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿಸಿ ಮಾನವೀಯತೆ ಮೆರೆದಿದ್ದಾರೆ. ಆದರೆ ಈ ಹಿಂದೆ ಇದೇ ಸ್ಥಳಕ್ಕೆ ಭೇಟಿ ನೀಡಿದ್ದ ಬಿಎಸ್‍ವೈ ರಸ್ತೆ ಪಕ್ಕ ಸಂತ್ರಸ್ತರು ನಿಂತಿದ್ದರೂ ಸಹ ಹಾಗೇ ಹೋಗಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿಯ ರಸ್ತೆ ಬದಿ ನಿಂತಿದ್ದ ಗ್ರಾಮಸ್ಥರನ್ನು ಸಿದ್ದರಾಮಯ್ಯ ಮಾತನಾಡಿಸಿದ್ದಾರೆ. ಸಂತ್ರಸ್ತರನ್ನು ಕಂಡ ಸಿದ್ದರಾಮಯ್ಯ ಕಾರನ್ನು ನಿಲ್ಲಿಸಿ ಸಂತ್ರಸ್ತರ ಅಹವಾಲು ಆಲಿಸಿದ್ದಾರೆ. ಈ ವೇಳೆ ಸಂತ್ರಸ್ತರು ತಮ್ಮ ಕಷ್ಟ-ನಷ್ಟವನ್ನು ಹೇಳಿಕೊಂಡಿದ್ದಾರೆ. ಸಂತ್ರಸ್ತರನ್ನು ಮಾತನಾಡಿಸಿದ ಅನಂತರ ಈ ಕುರಿತು ವಿಧಾನಸಭೆಯಲ್ಲಿ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಸಂತ್ರಸ್ತರಿಗೆ ಭರವಸೆ ನೀಡಿದ್ದಾರೆ.

    ಈ ಹಿಂದೆ ನೆರೆ ವೀಕ್ಷಣೆಗೆ ಮೂಡಿಗೆರೆಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಸ್ತೆ ಬದಿ ನಿರಾಶ್ರಿತರು ನಿಂತಿದ್ದರೂ ಸಹ ಅವರನ್ನು ಮಾತನಾಡಿಸದೆ ಹಾಗೆ ತೆರಳಿದ್ದರು. ಆದರೆ ಬಿದರಹಳ್ಳಿ ನಿರಾಶ್ರಿತರು ಸಿಎಂ ಬಿಎಸ್‍ವೈಗಾಗಿ ಕಾದು ನಿಂತಿದ್ದರು. ಇದಾವುದನ್ನು ಗಮನಿಸದ ಬಿಎಸ್‍ವೈ ಕಾರಿನಲ್ಲಿ ಹಾಗೇ ತೆರಳಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಅಧಿವೇಶನದಲ್ಲಿ ದೃಶ್ಯ ಮಾಧ್ಯಮ ನಿರ್ಬಂಧಕ್ಕೆ ಬಿಜೆಪಿ ಚಿಂತನೆ ಕುರಿತು ಕಳಸದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಹಳಷ್ಟು ಮಾಧ್ಯಮಗಳು ಬಿಜೆಪಿ ಪರವಾಗಿ ಕೆಲಸ ಮಾಡಿದ್ದವು ಹೀಗಾಗಿ ಅಧಿವೇಶನದಲ್ಲಿ ಮಾಧ್ಯಮಗಳಿಗೆ ನಿಷೇಧ ಹೇರಲು ಹೊರಟಿದ್ದಾರೆ. ನಾಮ್ಮ ಸರ್ಕಾರ ಇದ್ದಾಗ ನಿರ್ಬಂಧ ಹೇರಲು ಚಿಂತಿಸಿರಲಿಲ್ಲ. ಸರ್ಕಾರದ್ದೇ ಚಾನಲ್ ಮಾಡಲು ಚಿಂತನೆ ಮಾಡಿದ್ದೆವು. ನಿರ್ಬಂಧ ಹೇರಲು ನಾವು ಹೊರಟಿರಲಿಲ್ಲ. ಬಹಳ ಮಾಧ್ಯಮಗಳು ಬಿಜೆಪಿಯವರ ಪರ ಇದ್ದವು, ಹೀಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

  • ನಾನು ಒಂದು ರೀತಿ ತಂತಿಮೇಲೆ ನಡೆಯುತ್ತಿದ್ದೇನೆ: ಬಿಎಸ್‍ವೈ

    ನಾನು ಒಂದು ರೀತಿ ತಂತಿಮೇಲೆ ನಡೆಯುತ್ತಿದ್ದೇನೆ: ಬಿಎಸ್‍ವೈ

    – ಎಚ್‍ಡಿಕೆ ನಂತರ ಬಿಎಸ್‍ವೈ ಭಾವನಾತ್ಮಕ ಹೇಳಿಕೆ

    ದಾವಣಗೆರೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ನಾನು ಸಾಂದರ್ಭಿಕ ಶಿಶು, ವಿಷಕಂಠ ಎಂದು ಹೇಳಿದ್ದರು, ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹ ಅದೇ ರೀತಿಯ ಹೇಳಿಕೆ ನೀಡಿದ್ದಾರೆ.

    ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ದಸರಾ ಧರ್ಮ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಒಂದು ರೀತಿ ತಂತಿ ಮೇಲೆ ನಡೆಯುತ್ತಿದ್ದೇನೆ, ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಹತ್ತಾರು ಸಲ ವಿಚಾರ ಮಾಡಬೇಕಾಗಿದೆ. ನಿರ್ಧಾರ ತೆಗೆದುಕೊಳ್ಳುವಾಗ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಎನಾಗುತ್ತದೆ ಎಂಬುದನ್ನೂ ಚಿಂತನೆ ಮಾಡಬೇಕಾಗಿದೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭಮಂಟಪದ ನಿರ್ಮಾಣಕ್ಕೆ 50 ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಈಗ ರಾಜ್ಯದಲ್ಲಿ ಭೀಕರ ಪ್ರವಾಹವಾಗಿದ್ದು, ಇನ್ನೊಂದೆಡೆ ಬರಗಾಲವಿದೆ. ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಅನಿವಾರ್ಯವಾಗಿದೆ. ಬೇರೆ ಯೋಜನೆಗಳಿಗೆ ಹಣ ನೀಡಿದರೆ ಅದು ಅಪರಾಧವಾಗುತ್ತದೆ. ಯಾರೇ ಅನುದಾನ ಕೇಳಿದರೂ ಮುಂದಿನ ಬಜೆಟ್ ನಂತರ ಅನುದಾನ ನೀಡಲಾಗುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದಾಗ ನನಗೆ ಸನ್ಮಾನಿಸಿದರು. ಇದೀಗ ಅಭಿನವ ರೇಣುಕ ಮಂದಿರ ಕಟ್ಟಲು 2 ಕೋಟಿ ರೂ. ಕೊಡುತ್ತೇನೆ ನೀವು ಒಂದು ಕೋಟಿ ರೂ. ಜೋಡಿಸಿ ಅಭಿನವ ರೇಣುಕ ಮಂದಿರ ನಿರ್ಮಿಸೋಣ. ಎಲ್ಲ ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮ ವಹಿಸುತ್ತೇನೆ. ಈ ಸಂದರ್ಭದಲ್ಲಿ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಕಾರ್ಯಕ್ರಮಗಳಿಗೆ ಹಣ ಕೊಟ್ಟರೆ ಅಕ್ಷ್ಯಮ್ಯ ಅಪರಾಧವಾಗುತ್ತದೆ. ಮುಂದಿನ ಬಜೆಟ್‍ನಲ್ಲಿ ದಸರಾ ಮಾದರಿ ಸಮಾರಂಭಗಳಿಗೆ ಹಣ ನೀಡಲು 250 ಕೋಟಿ ರೂ.ಗಳನ್ನು ಮೀಸಲಿಡುತ್ತೇನೆ ಎಂದು ವಿವರಿಸಿದರು.

    ಕಾರ್ಯಕ್ರಮಕ್ಕೂ ಮುನ್ನ ಜಿಎಂಐಟಿ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 3ರಂದು ಸಚಿವ ಸಂಪುಟ ಸಭೆ ಇದೆ, ಇದಾದ ಬಳಿಕ 6ನೇ ತಾರೀಖು ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಕೇಂದ್ರ ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆ ನಿರೀಕ್ಷೆ ಇದೆ. ನಮ್ಮಲ್ಲೇ ಇರುವ ಅನುದಾನದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.

    ಜಿಲ್ಲೆ ವಿಭಜನೆ ಕುರಿತು ಪ್ರತಿಕ್ರಿಯಿಸಿದ ಅವರು, 10-11 ತಾಲೂಕುಗಳಿರುವ ದೊಡ್ಡ ಜಿಲ್ಲೆಗಳಾಗಿವೆ. ಅಯಾ ತಾಲೂಕಿನ ಜನಪ್ರತಿಧಿಗಳು ಹಾಗೂ ಅಧಿಕಾರಿಗಳನ್ನು ಕರೆದು ಈ ಕುರಿತು ಚರ್ಚೆ ಮಾಡುತ್ತೇನೆ. ಈಗಾಗಲೇ ಹತ್ತು ಹನ್ನೊಂದು ಜಿಲ್ಲೆಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಕೆಲವೆಡೆ ಹತ್ತು ಹಲವು ತಾಲೂಕುಗಳಿವೆ ಸಣ್ಣ ಜಿಲ್ಲೆಯಾದರೆ ಹೆಚ್ಚು ಉಪಯೋಗವಾಗುತ್ತದೆ ಎಂಬುದು ಸಾಮಾನ್ಯ ವಾಡಿಕೆ. ಆಯಾ ಕ್ಷೇತ್ರದ ಶಾಸಕರನ್ನು ಕರೆದು ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ. ನೆರೆ ಹಾವಳಿಯಿಂದ ಅಧಿವೇಶನವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಬಾರಿ ಬೆಂಗಳೂರಿನಲ್ಲಿ ಅಧಿವೇಶನ ಕರೆದಿದ್ದೇವೆ. ಮುಂದಿನ ಬಾರಿ ಬೆಳಗಾವಿಯಲ್ಲಿ ಅಧಿವೇಶನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    33 ವರ್ಷಗಳ ಬಳಿಕ ದಾವಣಗೆರೆ ನಗರದಲ್ಲಿ ದಸರಾ ಧರ್ಮ ಸಮ್ಮೇಳನ ನಡೆಯುತ್ತಿದೆ. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಲವು ಗಣ್ಯರು ಭಾಗಿಯಾಗಿದ್ದರು. ದಸರಾ ಕಾರ್ಯಕ್ರಮದಲ್ಲಿ ರಾಜ ಪೋಷಾಕಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಪಾಲ್ಗೊಂಡಿದ್ದರು.

  • ಅಧಿಕಾರ ಉಳಿಸಿಕೊಳ್ಳಲು ಬಿಎಸ್‍ವೈ ಅಮಾವಾಸ್ಯೆ ಪೂಜೆ ಮೊರೆ?

    ಅಧಿಕಾರ ಉಳಿಸಿಕೊಳ್ಳಲು ಬಿಎಸ್‍ವೈ ಅಮಾವಾಸ್ಯೆ ಪೂಜೆ ಮೊರೆ?

    – ಹೊನ್ನಾಂಬಿಕೆ ದೇವಿ ದರ್ಶನ ಪಡೆದ ಬಿಎಸ್‍ವೈ
    – ಸರ್ಕಾರ ಪೂರ್ಣಾವಧಿ ಪೂರೈಸಲೆಂದು ಪ್ರಾರ್ಥನೆ

    ತುಮಕೂರು: ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಾಲಯ ಅಮಾವಾಸ್ಯೆ ಪೂಜೆಯ ಮೊರೆ ಹೋದರಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

    ಬಿಎಸ್‍ವೈ ಇಂದು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯ ಹೊನ್ನಾಂಬಿಕೆ ದೇವಿ ಮೊರೆ ಹೋಗಿದ್ದು, ಯಡಿಯೂರಪ್ಪನವರು ಸಿಎಂ ಆಗುವುದಾಗಿ ಇದೇ ಹೊನ್ನಾಂಬಿಕೆ ದೇವಿ ಭವಿಷ್ಯ ನುಡಿದಿದ್ದಳು. ಈ ಕುರಿತು ಮೂರು ತಿಂಗಳ ಹಿಂದೆ ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ಯಡಿಯೂರಪ್ಪನವರ ಪರ ಭವಿಷ್ಯ ಕೇಳಿದ್ದರು. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ. ಆದರೆ ಮುಖ್ಯಮಂತ್ರಿಯಾದರೂ ಸಂಕಷ್ಟ ಇದೆ ಎಂದು ಹೊನ್ನಾಂಬಿಕೆ ದೇವಿ ಭವಿಷ್ಯ ನುಡಿದಿದ್ದಳು.

    ಸಂಕಷ್ಟ ಪರಿಹಾರಕ್ಕಾಗಿ ಮಹಾಲಯ ಅಮಾವಾಸ್ಯೆಯಂದು ಪೂಜೆ ಸಲ್ಲಿಸುವಂತೆ ಅರ್ಚಕರು ಈ ಹಿಂದೆ ಬಿಎಸ್‍ವೈ ಭೇಟಿ ನೀಡಿದಾಗ ಸೂಚಿಸಿದ್ದರು. ಹೀಗಾಗಿ ಆಪ್ತ ಸಹಾಯಕ ಸಂತೋಷ್ ಅವರ ಸಲಹೆಯಂತೆ ಸಿಎಂ ಯಡಿಯೂರಪ್ಪ ಹೊನ್ನಾಂಬಿಕಾ ದೇವಸ್ಥಾನಕ್ಕೆ ಮಧ್ಯಾಹ್ನ 1 ಗಂಟೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಿಎಸ್‍ವೈ ದೇವಿಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ಧೂತರಾಯನ ಬಳಿ ಸಿಎಂ ಪ್ರಶ್ನೆ ಹಾಕಿದರು. ಸಿಎಂ ಮತ್ತು ಅರ್ಚಕರಿಗೆ ಮಾತ್ರ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶ ಕಲ್ಪಿಸಲಾಗಿತ್ತು. ದೇವಸ್ಥಾನದ ಗರ್ಭಗುಡಿ ಬಾಗಿಲು ಮುಚ್ಚಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ಪೂಜೆ ನಂತರ ಪ್ರತಿಕ್ರಿಯಿಸಿದ ಬಿಎಸ್‍ವೈ, ತಾಯಿಯ ಆಶೀರ್ವಾದ ಪಡೆದಿದ್ದೇನೆ. ಜನತೆ ನೆಮ್ಮದಿ ಸುಭೀಕ್ಷದಿಂದ ಇರಲಿ, ನಮ್ಮ ಸರ್ಕಾರದ ಅವಧಿ ಪೂರ್ಣವಾಗಲಿ ಎಂದು ಪ್ರಾರ್ಥಿಸಿದ್ದೇನೆ. ನಮ್ಮ ಆಪ್ತ ಸಂತೋಷ್ ಒತ್ತಾಯದ ಮೇರೆಗೆ ಬಂದಿದ್ದೇನೆ. ಇಂದು ಮಹಾಲಯ ಅಮಾವಾಸ್ಯೆ ಒಳ್ಳೆದಾಗುತ್ತೆ ಎಂದಿದ್ದರು ಹಾಗಾಗಿ ಬಂದಿದ್ದೆ. ತಾಯಿಯ ದರ್ಶನದಿಂದ ನೆಮ್ಮದಿ ಸಮಾಧಾನ ತೃಪ್ತಿ ಹಾಗೂ ಪ್ರೇರಣೆ ಸಿಕ್ಕಿದೆ. ಇಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬ ಒತ್ತಾಯವಿದೆ. ಇದಕ್ಕಾಗಿ ತಕ್ಷಣ 50 ಲಕ್ಷ ರೂ. ಬಿಡುಗಡೆ ಮಾಡುತ್ತೇವೆ. ತಿಂಗಳೊಳಗೆ ಕೆಲಸ ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

  • ಬ್ಯಾಂಕಿನಿಂದ ರೈತರಿಗೆ ನೋಟಿಸ್ ನೀಡೋದು ತಪ್ಪಲ್ಲ- ಸಚಿವ ಮಾಧುಸ್ವಾಮಿ

    ಬ್ಯಾಂಕಿನಿಂದ ರೈತರಿಗೆ ನೋಟಿಸ್ ನೀಡೋದು ತಪ್ಪಲ್ಲ- ಸಚಿವ ಮಾಧುಸ್ವಾಮಿ

    – ನಮ್ಮ ಸರ್ಕಾರ ಇನ್ನು ಸಾಲ ಮನ್ನಾ ನಿರ್ಧಾರ ತೆಗೊಂಡಿಲ್ಲ

    ತುಮಕೂರು: ಬ್ಯಾಂಕ್‍ನಿಂದ ರೈತರಿಗೆ ನೋಟಿಸ್ ನೀಡುವುದು ತಪ್ಪಲ್ಲ. “ಕಮರ್ಷಿಯಲ್ ಬ್ಯಾಂಕ್‍ಗೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಹೇಳುವುದು ಕಷ್ಟ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಲ ಮನ್ನಾ ಮಾಡಿದರೂ ರೈತರಿಗೆ ನೋಟಿಸ್ ನೀಡುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ರೈತರಿಗೆ ಸಾಲದ ಕುರಿತು ನೋಟಿಸ್ ನೀಡಬೇಡಿ ಎಂದು ನಮ್ಮ ಸಹಕಾರಿ ಬ್ಯಾಂಕ್‍ಗಳಿಗೆ ನಿರ್ದೇಶನ ಕೊಡಬಹುದು. ಆದರೆ ಕಮರ್ಷಿಯಲ್ ಬ್ಯಾಂಕ್‍ಗಳಿಗೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಹೇಳುವುದು ಕಷ್ಟ. ಅಲ್ಲದೆ ಸಾಲ ಮನ್ನಾ ನಿರ್ಧಾರವನ್ನು ನಮ್ಮ ಸರ್ಕಾರ ಇನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಾಲ ವಸೂಲಾತಿಗೆ ಬ್ಯಾಂಕ್‍ಗಳು ಪ್ರತಿ ಸಾರಿ ಅದಾಲತ್ ಮಾಡುತ್ತವೆ. ಸಾಲ ಕಟ್ಟದೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿರಬಹುದು. ಸರ್ಕಾರ ಸಾಲಮನ್ನಾ ಯೋಜನೆಯ ಹಣವನ್ನು ಬ್ಯಾಂಕಿಗೆ ತುಂಬದೆ ಬ್ಯಾಂಕಿನವರಿಗೆ ನೋಟಿಸ್ ಕೊಡಬೇಡಿ ಎಂದು ಹೇಳಲು ಆಗುವುದಿಲ್ಲ. ಬ್ಯಾಂಕಿನವರು ಸಾಲದ ನೋಟಿಸ್ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ರೈತರ ಆಸ್ತಿಗಳನ್ನು ಜಪ್ತಿ ಮಾಡಿ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

  • ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ – ಸಂತ್ರಸ್ತರ ಆಕ್ರೋಶ

    ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ – ಸಂತ್ರಸ್ತರ ಆಕ್ರೋಶ

    – 500 ರೂ. ಇದೆ ನಾಲ್ಕು ದಿನ ಜೀವನ ನಡೆಸ್ತೇವೆ

    ರಾಯಚೂರು: ಮಳೆಯಿಂದ ಹಾನಿಯಾದರೂ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ, ಇಲ್ಲಿಗೆ ಬಂದು ಏನು ಮಾಡುತ್ತೀರಿ, ಯಡಿಯೂರಪ್ಪನವರೇ ನೀವು ಇಲ್ಲಿಗೆ ಬರಬೇಡಿ ಎಂದು ಸಂತ್ರಸ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದದ ಗ್ರಾಮಸ್ಥರು ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ. ನಾವಿನ್ನೂ ಸತ್ತಿಲ್ಲ, ಬದುಕಿದ್ದೇವೆ. ಮನೆಯಲ್ಲಿ ಅಕ್ಕಿ, ಜೋಳ ಇವೆ ಖರ್ಚಿಗೆ 500ರೂ. ಇದೆ. ಇನ್ನೂ ನಾಲ್ಕು ದಿನ ಮಳೆ ಬಂದರೂ ನಮಗೆ ಏನೂ ಆಗುವುದಿಲ್ಲ ತಲೆಕೆಡಿಸಿಕೊಳ್ಳಬೇಡಿ. ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದೀರಿ ಅಧಿಕಾರ ನಡೆಸಿ, ಇಲ್ಲಿಗೆ ಬರಲು ಹೋಗಬೇಡಿ, ನಾವು ಹೇಗಾದರೂ ಹಾಳಾಗಿ ಹೋಗಲಿ, ನೀವು ಮಾತ್ರ ಇಲ್ಲಿಗೆ ಬರಬೇಡಿ. ಇನ್ನೂ ನಾಲ್ಕು ದಿನ ಮಳೆ ಬಂದರೂ ಏನೂ ಆಗುವುದಿಲ್ಲ ಎಂದು ಕಿಡಿ ಕಾರಿದ್ದಾರೆ.

    ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳು ಜಲಾವೃತಗೊಂಡಿವೆ. ಯಾಪಲದಿನ್ನಿ ಸೋಲಾರ್ ಪ್ಲಾಂಟ್ ಬಳಿ ರಸ್ತೆ ಬಂದ್ ಆಗಿದೆ. ಜಮೀನಿಗೆ ನೀರು ನುಗ್ಗಿದೆ, ರೈತರು ಸಂಕಷ್ಟದಲ್ಲಿದ್ದಾರೆ ಹೀಗಿದ್ದರೂ ಸಹ ಸರ್ಕಾರದಿಂದ ಒಂದು ರೂಪಾಯಿ ಬಿಡಿಗಾಸೂ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ಇತ್ತ ತಿರುಗಿ ಸಹ ನೋಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಭಾರೀ ಮಳೆಗೆ ಇಷ್ಟೆಲ್ಲಾ ಹಾನಿಯಾದರೂ ಸಂತ್ರಸ್ತರಿಗೆ ಈವರೆಗೆ ಏನೂ ಕೊಟ್ಟಿಲ್ಲ, ಇನ್ನೂ ನಮಗೇನು ಕೊಡುತ್ತೀರಿ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲು ನಿಮ್ಮ ಕೈಯ್ಯಲ್ಲಿ ಆಗಿಲ್ಲ. ಹೀಗಾಗಿ ನಮ್ಮ ಬಳಿಗೂ ಬರಬೇಡಿ, ನಾವು ಹೇಗೋ ಬದುಕುತ್ತೇವೆ ಎಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಗ್ರಾಮಸ್ಥರ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

  • ಅಸ್ತಿತ್ವಕ್ಕಾಗಿ ಕಾಂಗ್ರೆಸ್ಸಿನಿಂದ ಪ್ರತಿಭಟನೆ, ಶೀಘ್ರವೇ 1 ಲಕ್ಷ ರೂ. ಸಂತ್ರಸ್ತರ ಖಾತೆಗೆ ಜಮೆ – ಸಿಎಂ

    ಅಸ್ತಿತ್ವಕ್ಕಾಗಿ ಕಾಂಗ್ರೆಸ್ಸಿನಿಂದ ಪ್ರತಿಭಟನೆ, ಶೀಘ್ರವೇ 1 ಲಕ್ಷ ರೂ. ಸಂತ್ರಸ್ತರ ಖಾತೆಗೆ ಜಮೆ – ಸಿಎಂ

    ಚಿಕ್ಕಮಗಳೂರು: ವಿರೋಧ ಪಕ್ಷ ಯಾವಾಗಲೂ ಚಟುವಟಿಕೆಯಿಂದಿರಬೇಕು. ಹೀಗಾಗಿ ಅಸ್ತಿತ್ವಕ್ಕಾಗಿ ಕಾಂಗ್ರೆಸ್‍ನವರು ಪ್ರತಿಭಟಿಸುತ್ತಿದ್ದಾರೆಯೇ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

    ಜಿಲ್ಲೆಯ ಶೃಂಗೇರಿಯ ಶಾರದಾಂಬೆಯ ದರ್ಶನದ ಬಳಿಕ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಬಂಧನಕ್ಕೆ ಹಾಗೂ ನೆರೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದರು. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿರುವುದರಿಂದ ಅಸ್ತಿತ್ವ ಉಳಿಸಿಕೊಳ್ಳಲು ಸಹಜವಾಗಿಯೇ ಪ್ರತಿಭಟನೆ ನಡೆಸುತ್ತಿದೆ ಎಂದು ಹರಿಹಾಯ್ದರು.

    ಶೃಂಗೇರಿ ಶಾರದಾಂಬೆ ಹಾಗೂ ಗೌರಿಗದ್ದೆಯಲ್ಲಿ ಪೂಜೆಗಾಗಿ ಬಂದಿದ್ದೇನೆ. ಹಿಂದೆ ಮಳೆ ಬರಲೆಂದು ಪೂಜೆ ಮಾಡುತ್ತಿದ್ದೆವು. ಇದೀಗ ಮಳೆ ನಿಲ್ಲಲ್ಲೆಂದು ಪೂಜೆ ಮಾಡುವ ಸ್ಥಿತಿಗೆ ಬಂದಿದ್ದೇವೆ. ಯಾರ ಮನೆ ಸಂಪೂರ್ಣ ಹಾಳಾಗಿದೆಯೋ ಅವರಿಗೆ 5 ಲಕ್ಷ ರೂ.ಗಳಲ್ಲಿ 1 ಲಕ್ಷ ರೂ. ನೀಡುವಂತೆ ಸರ್ಕಾರಿ ಆದೇಶ ಹೊರಡಿಸಲಾಗುತ್ತಿದೆ. ಶೀಘ್ರದಲ್ಲಿ 1 ಲಕ್ಷ ರೂ. ಸಂತ್ರಸ್ತರ ಖಾತೆಗೆ ಜಮೆಯಾಗಲಿದೆ ಎಂದು ಮಾಹಿತಿ ನೀಡಿದರು.

    ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾದರೂ ಪರವಾಗಿಲ್ಲ, ಸಂತ್ರಸ್ತರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ಕಾಂಗ್ರೆಸ್‍ನವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಅರ್ಥವಿಲ್ಲ. ಕೇಂದ್ರ ಸರ್ಕಾರದಿಂದಲೂ ಶೀಘ್ರವೇ ಪರಿಹಾರ ಹಣ ಬರಲಿದೆ ಎಂದರು.

    ಗುರು ಭವನಕ್ಕೆ ತೆರಳಿ ಭಾರತೀ ತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದರು. ಶ್ರೀಗಳ ಆರ್ಶೀವಾದ ಪಡೆದ ಬಳಿಕ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿಗಳಿಗೆ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸಿ.ಟಿ.ರವಿ ಸಾಥ್ ನೀಡಿದರು. ಪೂಜೆ ಬಳಿಕ ಗೌರಿಗದ್ದೆ ಆಶ್ರಮಕ್ಕೆ ಸಿಎಂ ಪ್ರಯಾಣ ಬೆಳೆಸಿದರು.

    ಕಳೆದ 6 ದಿನಗಳಿಂದ ಗೌರಿಗದ್ದೆಯ ವಿನಯ್ ಗುರೂಜಿಯವರ ದತ್ತಾಶ್ರಮದಲ್ಲಿ ನಡೆಯುತ್ತಿರುವ ಶತರುದ್ರಯಾಗ, ಗಣಪತಿ ಹೋಮದ ಪೂರ್ಣಾಹುತಿಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಅಧಿಕಾರಕ್ಕೂ ಮುನ್ನ ಹಲವು ಬಾರಿ ಆಶ್ರಮಕ್ಕೆ ಭೇಟಿ ನೀಡಿದ್ದ ಬಿಎಸ್‍ವೈ ಇದೀಗ ಯಾಗದಲ್ಲಿ ಭಾಗವಹಿಸುತ್ತಿದ್ದಾರೆ. ಸಿಎಂ ಆಗುವ ಮುನ್ನ ಹೊತ್ತಿದ್ದ ಹರಿಕೆ ತೀರಿಸಲು ತೆರಳುತ್ತಿದ್ದಾರೆ. ಅಧಿಕಾರ ಸಿಕ್ಕರೆ ಆಶ್ರಮದಲ್ಲಿ ಶತರುದ್ರ ಯಾಗ ಹೋಮದ ಮಾಡಿಸುವುದಾಗಿ ಸಿಎಂ ಹರಕೆ ಹೊತ್ತಿದ್ದರು. ಇದೀಗ ಹರಕೆ ತೀರಿಸುತ್ತಿದ್ದಾರೆ. ಆದರೆ, ಮಾಧ್ಯಮದವರಿಗೆ ಉತ್ತರಿಸುವಾಗ ನೆರೆ ಸಮಸ್ಯೆ ಪರಿಹಾರಕ್ಕಾಗಿ ಪೂಜೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

  • ಕೊಡಗಿನಲ್ಲಿ ಪ್ರವಾಹ, ಮನೆಗಳು ನೆಲಸಮ – ನಾಲ್ಕು ಮದುವೆ ರದ್ದು

    ಕೊಡಗಿನಲ್ಲಿ ಪ್ರವಾಹ, ಮನೆಗಳು ನೆಲಸಮ – ನಾಲ್ಕು ಮದುವೆ ರದ್ದು

    ಕೊಡಗು: ಜಿಲ್ಲೆಯ ನದಿ ಸಮೀಪದ ಗ್ರಾಮದಲ್ಲಿ ಭಾರೀ ಮಳೆಯಿಂದ ಪ್ರವಾಹ ಹೆಚ್ಚಾಗಿದ್ದು ಜನ ಪರದಾಡುತ್ತಿದ್ದಾರೆ. ಹೀಗಾಗಿ ಪ್ರವಾಹದ ಬಿಸಿ ಮದುವೆಗಳಿಗೂ ತಟ್ಟಿದ್ದು, ಮಡಿಕೇರಿಯ ತಾಲೂಕಿನ ಒಂದೇ ಗ್ರಾಮದ ನಾಲ್ಕು ಮದುವೆಗಳು ರದ್ದಾಗಿವೆ.

    ಕಟ್ಟೆಮಾಡು ಗ್ರಾಮದ ಒಂದೇ ಊರಿನಲ್ಲಿ ನಿಶ್ಚಯವಾಗಿದ್ದ ನಾಲ್ಕು ಮದುವೆಗಳು ರದ್ದಾಗಿವೆ. ಕಾವೇರಿ ಪ್ರವಾಹದಿಂದ ಕಟ್ಟೆಮಾಡುವಿನಲ್ಲಿ 34 ಮನೆಗಳು ನೆಲಸಮವಾಗಿದ್ದು, ಮನೆಗಳ ಜೊತೆಗೆ ಮದುವೆಯ ಚಿನ್ನಾಭರಣ ಮತ್ತು ಹಣ ಸಹ ಕಳೆದು ಹೋಗಿದೆ. ಹೀಗಾಗಿ ಕುಟುಂಬಗಳು ಕಂಗಾಲಾಗಿದ್ದು, ಪ್ರವಾಹದಿಂದಾಗಿ ಬೇಸತ್ತು ಹೋಗಿದ್ದಾರೆ. ಆಭರಣ ಹಾಗೂ ಹಣ ಮನೆಯ ಅವಶೇಷದಡಿಯೇ ಸಿಲುಕಿರುವುದರಿಂದ ಮದುವೆಯನ್ನು ಮುಂದೂಡಲಾಗಿದೆ.

    ಕಟ್ಟೆಮಾಡಿನ ರೇವತಿ, ರೇಷ್ಮಾ, ಶಿಲ್ಪಾ ಮತ್ತು ಲತೇಶ್ ಎಂಬುವರ ಮದುವೆಗಳು ರದಾಗಿದ್ದು, ಸೆಪ್ಟೆಂಬರ್ 3 ರಂದು ಶಿಲ್ಪಾ ಅವರ ಮದುವೆಯನ್ನು ನಿಶ್ಚಯಿಸಲಾಗಿತ್ತು. ಡಿಸೆಂಬರ್‍ನಲ್ಲಿ ರೇವತಿ, ರೇಷ್ಮಾ ಮತ್ತು ಲತೇಶ್ ಮದುವೆಯವೆಯನ್ನು ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಪ್ರವಾಹದ ಪರಿಸ್ಥಿತಿಯಿಂದಾಗಿ ಈ ನಾಲ್ಕು ಮದುವೆಗಳನ್ನು ರದ್ದುಪಡಿಸಲಾಗಿದೆ.

    ಮನೆಗಳು ಕುಸಿದು ಬಿದ್ದಿರುವುದರಿಂದ ಚಿನ್ನಾಭರಣ ಹಾಗೂ ಹಣ ಸಹ ಮನೆಯ ಅವಶೇಷಗಳಡಿಯೇ ಸಿಲುಕಿಕೊಂಡಿದ್ದು, ಮನೆ ಚಿನ್ನಾಭರಣ ಹಾಗೂ ಹಣ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿರುವ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಕೂಲಿ ಮಾಡಿ ಸೂರು ಕಟ್ಟಿಕೊಂಡಿದ್ದೆವು, ಅದೂ ನೆಲಸಮವಾಗಿದೆ. ಕೂಡಿಟ್ಟ ಬಿಡಿಗಾಸು ಸಹ ಕಳೆದು ಹೋಗಿದೆ. ಇದೀಗ ಮತ್ತೆ ಮನೆ ಕಟ್ಟಿ, ಹಣ ಹೊಂದಿಸಿ ಮದುವೆ ಮಾಡುವುದು ಹೇಗೆ ಎಂದು ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ.

    ಈಗಾಗಲೇ ಜಿಲ್ಲಾಡಳಿತ ಮಲೆನಾಡು, ಕರಾವಳಿ ಭಾಗದ 6 ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದೆ.