Tag: Chief Justice

  • ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಪ್ರಮಾಣವಚನ ಸ್ವೀಕಾರ

    ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಪ್ರಮಾಣವಚನ ಸ್ವೀಕಾರ

    ನವದೆಹಲಿ: ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್‍ನ ಹಿರಿಯ ನ್ಯಾಯಾಧೀಶರಾದ ಎನ್.ವಿ ರಮಣ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

    ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದಾಗಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎನ್.ವಿ.ರಮಣ ಅವರು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. ಎನ್.ವಿ.ರಮಣ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣವಚನ ಬೋಧಿಸಿದರು.

    ಕಳೆದ ತಿಂಗಳು ಹಾಲಿ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಅವರು ಮುಂದಿನ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಅವರನ್ನು ಶಿಫಾರಸು ಮಾಡಿದ್ದರು. ಇದರಂತೆ ಇದೀಗ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಅವರು ಅಧಿಕಾರ ಸ್ವೀಕರಿಸಿದ್ದಾರೆ. 1957 ಆಗಸ್ಟ್ 27ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ, ಪೊನ್ನವರಂನಲ್ಲಿ ಜನಿಸಿದ ರಮಣ ಅವರು, 1983 ಫೆಬ್ರವರಿ 10 ರಂದು ವಕೀಲರಾಗಿ ಸೇವೆ ಆರಂಭಿಸಿದರು. ನಂತರ 2000ರ ಜೂನ್ ನಲ್ಲಿ ಆಂಧ್ರ ಪ್ರದೇಶದ ಹೈಕೋರ್ಟ್‍ಗೆ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದರು. ಬಳಿಕ 2013 ರಲ್ಲಿ ರಮಣ ಅವರು ದೆಹಲಿ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡು ಸೇವೆ ಸಲ್ಲಿಸಿದ್ದರು. ನಂತರ 2014ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಅವರನ್ನು ಉನ್ನತೀಕರಿಸಲಾಯಿತು. ಇದೀಗ ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಅಧಿಕಾರ ಸ್ವೀಕರಿಸಿದ್ದಾರೆ.

    ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಅತಿ ಹೆಚ್ಚು ಸೇವಾ ಹಿರಿತನ ಹೊಂದಿರುವವರನ್ನು ಸಿಜೆಐ ಆಗಿ ನೇಮಕ ಮಾಡುವುದು ಸಂಪ್ರದಾಯ. ಹಾಲಿ ಸಿಜೆಐ ಎಸ್‍ಎ ಬೋಬ್ಡೆ ಬಳಿಕ ನ್ಯಾ.ಎನ್.ವಿ ರಮಣ ಅವರೇ ಸುಪ್ರೀಂಕೋರ್ಟ್‍ನಲ್ಲಿ ಅತಿ ಹಿರಿಯ ನ್ಯಾಯಮೂರ್ತಿ ಎನಿಸಿದ್ದಾರೆ. ಹಾಗಾಗಿ ನ್ಯಾ.ರಮಣ ಅವರನ್ನು ಮುಂದಿನ ಸಿಜೆಐ ಆಗಿ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೋಬ್ಡೆ ಅವರು ಶಿಫಾರಸು ಮಾಡಿದ್ದರು.

    ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ ಬೋಬ್ಡೆ ಶುಕ್ರವಾರ ನಿವೃತ್ತಿಗೊಂಡರು ಬಳಿಕ ಇಂದು ಈ ಮಹತ್ವದ ಸ್ಥಾನವನ್ನು 63 ವರ್ಷದ ನ್ಯಾಯಮೂರ್ತಿ ಎನ್.ವಿ.ರಮಣ ತುಂಬಿದ್ದಾರೆ. ನ್ಯಾ. ರಮಣ ಅವರಿಗೆ 2022, ಆಗಸ್ಟ್ 26 ರವರೆ ಸೇವಾವಧಿ ಇರಲಿದೆ.

  • ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಎಸ್‍ಎ ಬೊಬ್ಡೆ ನೇಮಕ

    ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಎಸ್‍ಎ ಬೊಬ್ಡೆ ನೇಮಕ

    ನವದೆಹಲಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ಶರಾದ್ ಅರವಿಂದ್ ಬೊಬ್ಡೆ ಅವರನ್ನು ಇಂದು ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ.

    ಈಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ನಂತರ ಹಿರಿಯ ನ್ಯಾಯಮೂರ್ತಿಯಾಗಿದ್ದ ಬಾಬ್ಡೆ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನವೆಂಬರ್ 18 ರಂದು ಪ್ರಮಾಣ ವಚನ ಭೋದಿಸಲಿದ್ದಾರೆ. ನ್ಯಾಯಮೂರ್ತಿ ಬೊಬ್ಡೆ ಅವರು ಮಧ್ಯಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕಾರ್ಯನಿರ್ವಹಿಸಿದ್ದಾರೆ. ಅವರು 23 ಏಪ್ರಿಲ್ 2021 ರಂದು ನಿವೃತ್ತರಾಗಲಿದ್ದಾರೆ.

    ಈ ಹಿಂದೆ ಈ ವಿಚಾರವಾಗಿಯೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೋಯ್ ಅವರು ತನ್ನ ನಂತರ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶ ಎಸ್.ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ರಂಜನ್ ಗೊಗೋಯ್ ಅವರು ನವೆಂಬರ್ 17 ರಂದು ಮುಖ್ಯ ನ್ಯಾಯಾಧೀಶರ ಸ್ಥಾನದಿಂದ ನಿವೃತ್ತಿ ಹೊಂದಲಿದ್ದು, ತನ್ನ ನಂತರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ಎಸ್.ಎ ಬೊಬ್ಡೆ ಅವರನ್ನು ನೇಮಕ ಮಾಡಿ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

    2018ರ ಅಕ್ಟೋಬರ್ 3 ರಂದು ಭಾರತದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾಯಮೂರ್ತಿ ರಂಜನ್ ಗೊಗೋಯ್, ಮುಂದಿನ ತಿಂಗಳು ಅಂದರೆ ನವೆಂಬರ್ 17 ರಂದು ನಿವೃತ್ತಿ ಆಗಲಿದ್ದಾರೆ. ಇವರ ನಂತರ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಅವರು ಆ ಸ್ಥಾನವನ್ನು ಪಡೆಯಲಿದ್ದಾರೆ.

    ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಅವರು ಮಧ್ಯಪ್ರದೇಶದ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಮಹಾರಾಷ್ಟ್ರದ ನಾಗ್ಪುರದಲ್ಲಿ 1956ರ ಏಪ್ರಿಲ್ 24 ರಂದು ಜನಿಸಿರುವ ಬೊಬ್ಡೆ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಹೆಚ್ಚುವರಿ ನ್ಯಾಯಾಧೀಶರಾಗಿ 2000ರಲ್ಲಿ ಬಾಂಬೆ ಹೈಕೋರ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. 2012 ರಲ್ಲಿ ಅವರು ಮಧ್ಯಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ನಂತರ ಅವರನ್ನು 2013 ರ ಏಪ್ರಿಲ್‍ನಲ್ಲಿ ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು. ಬೊಬ್ಡೆ ಅವರು 2021ರ ಏಪ್ರಿಲ್ 23 ರಂದು ನಿವೃತ್ತರಾಗಲಿದ್ದಾರೆ.

  • ಎಸ್‍ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರನ್ನಾಗಿ ಮಾಡಿ – ಗೊಗೋಯ್ ಶಿಫಾರಸು

    ಎಸ್‍ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರನ್ನಾಗಿ ಮಾಡಿ – ಗೊಗೋಯ್ ಶಿಫಾರಸು

    ನವದೆಹಲಿ: ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರಾದ ರಂಜನ್ ಗೊಗೋಯ್ ಅವರು ತನ್ನ ನಂತರ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶ ಎಸ್.ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

    ರಂಜನ್ ಗೊಗೋಯ್ ಅವರು ನವೆಂಬರ್ 17 ರಂದು ಮುಖ್ಯ ನ್ಯಾಯಾಧೀಶರ ಸ್ಥಾನದಿಂದ ನಿವೃತ್ತಿ ಹೊಂದಲಿದ್ದು, ತನ್ನ ನಂತರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ಎಸ್.ಎ ಬೊಬ್ಡೆ ಅವರನ್ನು ನೇಮಕ ಮಾಡಿ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

    ಅಕ್ಟೋಬರ್ 3, 2018 ರಂದು ಭಾರತದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಮುಂದಿನ ತಿಂಗಳು ಅಂದರೆ ನವೆಂಬರ್ 17 ರಂದು ನಿವೃತ್ತಿ ಆಗಲಿದ್ದಾರೆ.

    ಈ ಹಿಂದಿಯಿಂದಲೂ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ನಿವೃತ್ತಿ ಆಗುವ ಸಮಯದಲ್ಲಿ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಧೀಶರನ್ನು ತಮ್ಮ ಮುಂದಿನ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡುವುದು ಸಂಪ್ರದಾಯವಾಗಿದೆ. ಅದ್ದರಿಂದ ರಂಜನ್ ಗೊಗೋಯ್ ಅವರು ಹಿರಿಯ ನ್ಯಾಯಾಧೀಶರಾದ ಎಸ್.ಎ ಬೊಬ್ಡೆ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಸೂಚಿಸಿದ್ದಾರೆ .

    ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಅವರು ಮಧ್ಯಪ್ರದೇಶದ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದವರು. ಮಹಾರಾಷ್ಟ್ರದ ನಾಗ್ಪುರದಲ್ಲಿ ಏಪ್ರಿಲ್ 24, 1956 ರಂದು ಜನಿಸಿದ ನ್ಯಾಯಮೂರ್ತಿ ಬೊಬ್ಡೆ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಹೆಚ್ಚುವರಿ ನ್ಯಾಯಾಧೀಶರಾಗಿ 2000ರಲ್ಲಿ ಬಾಂಬೆ ಹೈಕೋರ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. 2012 ರಲ್ಲಿ ಅವರು ಮಧ್ಯಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ನಂತರ ಅವರನ್ನು 2013 ರ ಏಪ್ರಿಲ್‍ನಲ್ಲಿ ಸುಪ್ರೀಂ ಕೋರ್ಟ್‍ಗೆ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು. ಬೊಬ್ಡೆ ಅವರು 2021ರ ಏಪ್ರಿಲ್ 23 ರಂದು ನಿವೃತ್ತರಾಗಲಿದ್ದಾರೆ.

  • ನ್ಯಾಯಾಧೀಶರ ಹುದ್ದೆ ಭರ್ತಿ ಮಾಡುವಂತೆ ಪ್ರಧಾನಿ ಮೋದಿಗೆ ನ್ಯಾ.ಗೊಗೋಯ್ ಪತ್ರ

    ನ್ಯಾಯಾಧೀಶರ ಹುದ್ದೆ ಭರ್ತಿ ಮಾಡುವಂತೆ ಪ್ರಧಾನಿ ಮೋದಿಗೆ ನ್ಯಾ.ಗೊಗೋಯ್ ಪತ್ರ

    ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹಾಗೂ ನಿವೃತ್ತಿ ಅವಧಿಯನ್ನು ಹೆಚ್ಚಿಸುವಂತೆ ನ್ಯಾ.ರಂಜನ್ ಗೊಗೋಯ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ನ್ಯಾಯಮೂರ್ತಿಗಳ ನೇಮಕ ಮಾಡಿಕೊಳ್ಳುವ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಸಂವಿಧಾನ ವಿಧಿ 128 ಮತ್ತು 224ಎ ತಿದ್ದುಪಡಿ ತಂದು ಹಲವು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ 3 ಪತ್ರ ಬರೆದಿರುವ ನ್ಯಾ.ರಂಜನ್ ಗೊಗೋಯ್, ಈವರೆಗೆ 58,669 ಪ್ರಕರಣಗಳು ಬಾಕಿ ಉಳಿದಿದ್ದು, ಪ್ರತಿ ದಿನ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರಕರಣಗಳು ಬಾಕಿ ಉಳಿದಿವೆ. ಅಲ್ಲದೆ, ನ್ಯಾಯಾಧೀಶರ ಕೊರತೆಯಿಂದಾಗಿ ಕಾನೂನಿನ ಪ್ರಶ್ನೆಗಳನ್ನು ಒಳಗೊಂಡ ಪ್ರಕರಣ ನಿರ್ಧರಿಸಲು ಅಗತ್ಯ ಸಂವಿಧಾನ ಪೀಠಗಳನ್ನು ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

    1989ರಲ್ಲಿ ಅಂದರೆ ಮೂರು ದಶಕಗಳ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 18 ರಿಂದ 26ಕ್ಕೆ ಹೆಚ್ಚಿಸಲಾಗಿತ್ತು. ಇದಾದ ಎರಡು ದಶಕಗಳ ನಂತರ 2009ರಲ್ಲಿ ಈ ಸಂಖ್ಯೆಯನ್ನು ಮುಖ್ಯ ನ್ಯಾಯಮೂರ್ತಿಯೂ ಸೇರಿದಂತೆ 31ಕ್ಕೆ ಹೆಚ್ಚಿಸಲಾಯಿತು. ಈ ಕುರಿತು ನೆನಪು ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

    ಎರಡನೇ ಪತ್ರದಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ಅವಧಿಯನ್ನು 62ರಿಂದ 65 ವರ್ಷಕ್ಕೆ ಹೆಚ್ಚಿಸುವ ಕುರಿತು ಸಂವಿಧಾನ ತಿದ್ದುಪಡಿ ತರಬೇಕು ಎಂದು ಗೊಗೋಯ್ ಅವರು ಮನವಿ ಮಾಡಿದ್ದಾರೆ. ಹೈ ಕೋರ್ಟ್ ನ್ಯಾಯಾಧೀಶರ 399(ಶೇ.37) ಹುದ್ದೆಗಳೂ ಸಹ ಖಾಲಿ ಇದ್ದು, ಶಿಘ್ರವೇ ಈ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಕಾರ್ಯನಿರತ ನ್ಯಾಯಾಧೀಶರ ಬಲವನ್ನು ಅನುಮೋದಿತ ನ್ಯಾಯಾಧೀಶರ ಮಟ್ಟಕ್ಕೆ ತರಲು ಸಾಧ್ಯವಿಲ್ಲ. ಆದರೆ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತು ಗಮನಹರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ರಂಜನ್ ಗೊಗೋಯ್ ಪ್ರಮಾಣ ವಚನ: ದೇಶದ 46ನೇ ಸಿಜೆಐ ಬಗ್ಗೆ ಇಲ್ಲಿದೆ ಕಿರು ಮಾಹಿತಿ

    ರಂಜನ್ ಗೊಗೋಯ್ ಪ್ರಮಾಣ ವಚನ: ದೇಶದ 46ನೇ ಸಿಜೆಐ ಬಗ್ಗೆ ಇಲ್ಲಿದೆ ಕಿರು ಮಾಹಿತಿ

    ನವದೆಹಲಿ: ಸುಪ್ರೀಂ ಕೋರ್ಟ್ ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ರಂಜನ್ ಗೊಗೋಯ್‍ರವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಗೊಂಡಿದ್ದ ಜಸ್ಟಿಸ್ ರಂಜನ್ ಗೊಗೋಯ್‍ರವರಿಗೆ ಪ್ರಮಾಣ ವಚನ ಬೋಧಿಸಿದರು.

    ಪ್ರಮಾಣವಚನ ಕಾರ್ಯಕ್ರಮಕ್ಕೆ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಸೇರಿದಂತೆ ಸುಪ್ರೀಂ ಕೋರ್ಟ್ ನ ಬಹುತೇಕ ನ್ಯಾಯಾಧೀಶರು ಹಾಗೂ ಕೇಂದ್ರ ಸರ್ಕಾರದ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಹಾಲಿ ಸಿಜೆಐ ಆಗಿರುವ ದೀಪಕ್ ಮಿಶ್ರಾರವರ ಅಧಿಕಾರವಧಿ ಪೂರ್ಣಗೊಂಡು ನಿವೃತ್ತಿಯಾದ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯಾಗಿ ರಂಜನ್ ಗೊಗೋಯ್‍ರವರನ್ನು ಆಯ್ಕೆಮಾಡಲಾಗಿತ್ತು. 63 ವರ್ಷದ ರಂಜನ್ ಗೊಗೋಯ್ ಈ ಸ್ಥಾನವನ್ನು ಏರಿದ ಈಶಾನ್ಯ ಭಾರತದ ಪ್ರಥಮ ನ್ಯಾಯಾಧೀಶ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    1954 ರ ನವೆಂಬರ್ 18 ರಂದು ಜನಿಸಿದ್ದ ರಂಜನ್ ಗೊಗೋಯ್, 1978 ರಲ್ಲಿ ಬಾರ್ ಕೌನ್ಸಿಲ್‍ಗೆ ಸೇರಿ, ಗುವಾಹಟಿ ಹೈಕೋರ್ಟ್ ವಕೀಲರಾಗಿ ಕೆಲಸ ಮಾಡಿದ್ದರು. 2001 ರ ಫೆಬ್ರವರಿ 28 ರಂದು ಗುವಾಹಟಿ ಹೈ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಇದಾದ 9 ವರ್ಷಗಳ ಬಳಿಕ 2011 ರ ಫೆಬ್ರವರಿ 12 ರಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆಯಾದರು. 2012 ರ ಏಪ್ರಿಲ್ 23 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

    ರಂಜನ್ ಗೊಗೋಯ್ ಅತಿ ಕಡಿಮೆ ಅವಧಿಗಳ ಕಾಲ ಮುಖ್ಯ ನ್ಯಾಯಾಧೀಶರಾಗಿ ಕೆಲಸ ಮಾಡಲಿದ್ದಾರೆ. ಒಟ್ಟು 13 ತಿಂಗಳು ಕಾಲ ಸೇವೆ ಸಲ್ಲಿಸಲಿದ್ದು, 2019ರ ನವೆಂಬರ್ 17ರಂದು ನಿವೃತ್ತಿಯಾಗಲಿದ್ದಾರೆ. ರಂಜನ್ ಗೊಗೋಯ್ ಅವರ ತಂದೆ ಕೇಶಬ್ ಚಂದ್ರ ಗೊಗೋಯ್ ಕಾಂಗ್ರೆಸ್ ನಾಯಕರಾಗಿದ್ದು 1982 ರಲ್ಲಿ ಅಸ್ಸಾಂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv