Tag: Chief Justice SA Bobde

  • ದುಬೆಗೆ ಪದೇ ಪದೇ ಜಾಮೀನು ನೀಡಿದ್ದೆ ಯುಪಿಯ ಈ ಪರಿಸ್ಥಿತಿಗೆ ಕಾರಣ: ಸಿಜೆಐ ಬೊಬ್ಡೆ

    ದುಬೆಗೆ ಪದೇ ಪದೇ ಜಾಮೀನು ನೀಡಿದ್ದೆ ಯುಪಿಯ ಈ ಪರಿಸ್ಥಿತಿಗೆ ಕಾರಣ: ಸಿಜೆಐ ಬೊಬ್ಡೆ

    – 64 ಪ್ರಕರಣದ ಆರೋಪಿಗೆ ಜಾಮೀನು ನೀಡಿದ್ದು ಯಾಕೆ?

    ನವದೆಹಲಿ: ಗ್ಯಾಂಗ್‍ಸ್ಟರ್ ವಿಕಾಸ್ ದುಬೆಗೆ ಯುಪಿ ನ್ಯಾಯಾಲಯಗಳು ಪದೇ ಪದೇ ಜಾಮೀನು ನೀಡಿದ್ದೆ ಉತ್ತರ ಪ್ರದೇಶದ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಎಸ್‍ಎ ಬೊಬ್ಡೆಯವರು ಅಭಿಪ್ರಾಯಪಟ್ಟಿದ್ದಾರೆ.

    ಇಂದು ಕೋರ್ಟ್‌ನಲ್ಲಿ ದುಬೆ ಪ್ರಕಣವನ್ನು ಉಲ್ಲೇಖಿಸಿ ಓರ್ವ ಆರೋಪಿಗೆ ಜಾಮೀನು ನೀಡುವುದನ್ನು ನಿರಾಕರಿಸಿದ್ದಾರೆ. ಸುಮಾರು 64 ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರೂ ವಿಕಾಸ್ ದುಬೆಗೆ ಜಾಮೀನು ನೀಡಿಯೇ ಉತ್ತರ ಪ್ರದೇಶದಲ್ಲಿ ನಡೆದ ಅತೀ ಅಮಾನುಷ ಘಟನೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

    ಸಮಾಜಕ್ಕೆ ಕೆಡಕನ್ನು ಉಂಟು ಮಾಡುವ ನಿಮ್ಮಂತಹ ವ್ಯಕ್ತಿಗಳಿಗೆ ಜಾಮೀನು ನೀಡಬಾರದು ಎಂದು ಆರೋಪಿಯ ಜಾಮೀನನ್ನು ರದ್ದು ಮಾಡಿದ್ದಾರೆ. ಜೊತೆಗೆ 64 ಪ್ರಕರಣದಲ್ಲಿ ಆರೋಪಿಯಾಗಿದ್ದರೂ ವಿಕಾಸ್ ದುಬೆಗೆ ಬೇಲ್ ಸಿಕ್ಕಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಆತನಿಗೆ ಪದೇ ಪದೇ ಬೇಲ್ ಸಿಕ್ಕಿದ ಕಾರಣ ಆತ ಎಂಟು ಮಂದಿ ಅಮಾಯಕ ಪೊಲೀಸರನ್ನು ಬಲಿ ಪಡೆದುಕೊಂಡ ಎಂದು ಬೊಬ್ಡೆ ಅವರು ಕೋರ್ಟಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ಬಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವೇಳೆ ಪೊಲೀಸರ ಮೇಲೆ ದುಬೆ ಮತ್ತು ಅವನ ಸಹಚರರು ಗುಂಡಿನ ಮಳೆ ಸುರಿಸಿದ್ದರು. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು. ಇದನ್ನು ಓದಿ: ಪೊಲೀಸರ ಹತ್ಯೆಗೈದಿದ್ದಕ್ಕೆ ನಾನೇ ಆತನನ್ನು ಗುಂಡಿಕ್ಕಿ ಕೊಲ್ಲಬೇಕು ಅಂದ್ಕೊಂಡಿದ್ದೆ- ವಿಕಾಸ್ ದುಬೆ ಪತ್ನಿ

    ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯನ್ನು ಜುಲೈ 10ರಂದು ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿತ್ತು.

    ಆಗ ಪೊಲೀಸರು ವಿಕಾಸ್‍ನನ್ನು ವಾಹನದಿಂದ ಹೊರಗೆ ಎಳೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡ ಗುಂಡಿನ ದಾಳಿ ಮಾಡಿದ್ದರು. ಈ ಶೂಟೌಟ್‍ನಲ್ಲಿ ಪೊಲೀಸರು ಆರೋಪಿ ವಿಕಾಸ್ ದುಬೆಯನ್ನ ಎನ್‍ಕೌಂಟರ್ ಮಾಡಿದ್ದರು.