Tag: Chewing gum

  • ಒಂದಲ್ಲ ಎರಡಲ್ಲ.. 40 ಚ್ಯೂಯಿಂಗ್‌ ಗಮ್‌ ನುಂಗಿದ 5 ವರ್ಷದ ಬಾಲಕ – ಮುಂದೇನಾಯ್ತು?

    ಒಂದಲ್ಲ ಎರಡಲ್ಲ.. 40 ಚ್ಯೂಯಿಂಗ್‌ ಗಮ್‌ ನುಂಗಿದ 5 ವರ್ಷದ ಬಾಲಕ – ಮುಂದೇನಾಯ್ತು?

    ನ್ಯೂಯಾರ್ಕ್‌: ಅಮೆರಿಕದ (America) 5 ವರ್ಷದ ಬಾಲಕನೊಬ್ಬ 40 ಚ್ಯೂಯಿಂಗ್‌ ಗಮ್‌ (Chewing Gum) ನುಂಗಿದ ಪರಿಣಾಮ ಜಠರದಲ್ಲಿ ಸಮಸ್ಯೆಯಾಗಿ ಗಂಭೀರ ಸ್ಥಿತಿಗೆ ತಲುಪಿದ್ದಾನೆ. ಬಾಲಕನನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹೊಟ್ಟೆ ಸಮಸ್ಯೆಯಿಂದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಹೊಟ್ಟೆ ಸ್ಕ್ಯಾನ್‌ ಮಾಡಿದಾಗ, ಹೆಚ್ಚಿನ ಪ್ರಮಾಣದ ಚ್ಯೂಯಿಂಗ್‌ ಗಮ್‌ ನುಂಗಿರುವುದು ಪತ್ತೆಯಾಗಿದೆ. ಜೀರ್ಣವಾಗದ ಈ ಪದಾರ್ಥ ಬಾಲಕನ ಜಠರದಲ್ಲಿ ಅಡಚಣೆ ಉಂಟುಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ವಿವಾಹವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಸಾವು

    ವೈದ್ಯರು ಅವನ ಗಂಟಲಿನ ಕೆಳಗೆ ಲೋಹದ ಟ್ಯೂಬ್ ಇರಿಸುವ ಮೂಲಕ ಚ್ಯೂಯಿಂಗ್‌ ಗಮ್ ತೆಗೆದುಹಾಕಿದರು. ಚಿಕಿತ್ಸೆಯಿಂದ ಬಾಲಕನಿಗೆ ಸದ್ಯದ ಮಟ್ಟಿಗೆ ಗಂಟಲು ನೋವಿದ್ದರೂ, ದೀರ್ಘಾವಧಿಯ ಆರೋಗ್ಯ ಸಮಸ್ಯೆ ಇರಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ಬಳಿಕ ಬಾಲಕನನ್ನು ಡಿಸ್ಚಾರ್ಜ್‌ ಮಾಡಿದ್ದಾರೆ.

    ಜೀರ್ಣವಾಗದ ಚ್ಯೂಯಿಂಗ್‌ ಗಮ್‌ ಪದಾರ್ಥವನ್ನು ಅಕಸ್ಮಾತ್‌ ನುಂಗಿದರೆ 7 ವರ್ಷಗಳ ವರೆಗೆ ಹೊಟ್ಟೆಯಲ್ಲಿರುತ್ತದೆ ಎಂದು ನಂಬಲಾಗಿತ್ತು. ಇದು ತಪ್ಪು ಕಲ್ಪನೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಇಂತಹ ಪದಾರ್ಥ ಸುಮಾರು 40 ಗಂಟೆಗಳ ವರೆಗೆ ದೇಹದಲ್ಲಿರುತ್ತದೆ. ನಂತರ ಮಲದ ಮುಖಾಂತರ ಹೊರಬರುತ್ತದೆ. ಅದರನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಂಪೂರ್ಣ ಹೊರಬರುತ್ತದೆ ಎಂದು ಡಯೆಟಿಷಿಯನ್‌ ಬೆತ್‌ ಸೆರ್ವೊನಿ ತಿಳಿಸಿದ್ದಾರೆ. ಇದನ್ನೂ ಓದಿ: ಬೈಬಲ್‌ ಹೊಂದಿದ್ದಕ್ಕೆ 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!

  • ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

    ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

    ನ್ಯೂಯಾರ್ಕ್: ಕೊರೊನಾ ವೈರಸ್ ನಿಯಂತ್ರಿಸಲು ವಿಜ್ಞಾನಿಗಳು ಈಗಾಗಲೇ ಅನೇಕ ಲಸಿಕೆಗಳನ್ನು ಕಂಡು ಹಿಡಿದಿದ್ದು, ಇನ್ನು ವಿಜ್ಞಾನಿಗಳು ಈ ಕುರಿತಾಗಿ ಸಂಶೋಧನೆ ಮಾಡುತ್ತಿದ್ದಾರೆ. ಆದರೆ ಇದೀಗ ವೈರಸ್‍ಗೆ ಪರಿಹಾರ ಕಂಡುಕೊಳ್ಳಲು ವಿಜ್ಞಾನಿಗಳು ಚೂಯಿಂಗಮ್ ಮೊರೆ ಹೋಗಿದ್ದಾರೆ.

    ಸಸ್ಯಜನ್ಯ ಪ್ರೊಟೀನ್‌ ಲೇಪಿತ ಚೂಯಿಂಗಮ್‍ನ್ನು ಸೇವಿಸುವ ಮೂಲಕ ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ನ್ಯಾಷನಲ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ಇದನ್ನು ಸಾಬೀತು ಪಡಿಸಿದೆ. ಇದನ್ನೂ ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

    ಸಸ್ಯಜನ್ಯ ಪ್ರೊಟೀನ್‌ ಲೇಪಿತ ಚೂಯಿಂಗಮ್‍ನ್ನು ಜಗಿಯುವ ಮೂಲಕ ಕೊರೊನಾ ಹರಡುವುದನ್ನು ತಡೆಯಬಹುದು ಎಂದು ಹೇಳಲಾಗಿದೆ. ವೈರಸ್ ಬಾಯಿಯ ಲಾಲಾರಸದಲ್ಲಿ ಅಡಗಿರುತ್ತದೆ. ಇದು ಕೆಮ್ಮಿದಾಗ, ಸೀನಿದಾಗ ವೇಗವಾಗಿ ಪ್ರಸರಣ ಹೊಂದುತ್ತದೆ. ಸಂಶೋಧಿಸಲಾದ ಚೂಯಿಂ ಗಮ್ ಅಗೆಯುವ ಮೂಲಕ ಲಾಲಾರಸದಲ್ಲಿನ ವೈರಸ್‍ಗಳನ್ನು ಕೊಲ್ಲಬಹುದು ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕ ಹೆನ್ರಿ ಡೆನೀಯಲ್ ಹೇಳಿದ್ದಾರೆ. ಇದನ್ನೂ ಓದಿ: ಪಾಸಿಟಿವ್ ಬಂದಿದ್ದ ವಿದ್ಯಾರ್ಥಿಗಳಿಗೆ ಎರಡೇ ದಿನದಲ್ಲಿ ನೆಗೆಟಿವ್ ರಿಪೋರ್ಟ್!

    ಕೋವಿಡ್ ರೋಗಿಗಳಿಗೆ ಈ ಗಮ್ ಅನ್ನು ನೀಡಿದಾಗ ಅವರ ಲಾವಾರಸದಲ್ಲಿನ ಕೊರೊನಾ ವೈರಸ್‍ನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಕಂಡು ಬಂದಿದೆ. ಇದನ್ನು ಕ್ಲಿನಿಕಲ್ ಟ್ರಯಲ್‍ಗೆ ನೀಡಬೇಕಾಗಿದೆ ಎಂದು ಹೆನ್ರಿ ಡೇನಿಯಲ್ ಹೇಳಿದ್ದಾರೆ.

  • ಸಿಸಿಟಿವಿ ಕ್ಯಾಮೆರಾಕ್ಕೆ ಚೂಯಿಂಗ್ ಗಮ್ ಅಂಟಿಸಿ ಎಟಿಎಂ ಕಳ್ಳತನಕ್ಕೆ ಯತ್ನ

    ಸಿಸಿಟಿವಿ ಕ್ಯಾಮೆರಾಕ್ಕೆ ಚೂಯಿಂಗ್ ಗಮ್ ಅಂಟಿಸಿ ಎಟಿಎಂ ಕಳ್ಳತನಕ್ಕೆ ಯತ್ನ

    – 15 ಲಕ್ಷ ರೂ. ಕದ್ದು ಎಸ್ಕೇಪ್ ಆಗುವಾಗ್ಲೆ ತಗ್ಲಾಕೊಂಡ್ರು
    – 100 ಕೆ.ಜಿ ತೂಕದ ಗ್ಯಾಸ್ ಕಟರ್‌ನಿಂದ ಎಟಿಎಂ ಒಡೆದ ಕಳ್ಳರು

    ಬೆಂಗಳೂರು: ಕಳ್ಳರು ಎಟಿಎಂನ ಸಿಸಿಟಿವಿ ಕ್ಯಾಮೆರಾಗೆ ಚೂಯಿಂಗ್ ಗಮ್ ಅಂಟಿಸಿ, ಬ್ಲಾಕ್ ಸ್ಪ್ರೇ ಹೊಡೆದು ಕಳ್ಳತನಕ್ಕೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬರೋಬ್ಬರಿ 15 ಲಕ್ಷ ರೂ. ಹಣ ಕದ್ದು ಪರಾರಿಯಾಗುವಷ್ಟರಲ್ಲಿ ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಬೆಂಗಳೂರಿನ ದೀಪಾಂಜಲಿನಗರದ ಎಸ್‍ಬಿಐ ಎಟಿಎಂನಲ್ಲಿ ಕಳ್ಳರು ಈ ಕೃತ್ಯವೆಸೆಗಿದ್ದಾರೆ. 100 ಕೆ.ಜಿ ತೂಕದ ಗ್ಯಾಸ್ ಕಟರ್‌ನಿಂದ ಎಟಿಎಂ ಮಿಷನ್ ಒಡೆದ ಕಳ್ಳರು ಅದರಲ್ಲಿದ್ದ 15 ಲಕ್ಷ ಹಣವನ್ನ ಬ್ಯಾಗ್‍ಗೆ ತುಂಬಿಕೊಂಡಿದ್ದರು. ಇನ್ನೇನು ಸ್ಥಳದಿಂದ ಹೊರಡಬೇಕು ಎನ್ನುವಷ್ಟರಲ್ಲಿ ಪೊಲೀಸರ ಕೈಗೆ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ.

    ಭಾನುವಾರ ಮಧ್ಯರಾತ್ರಿ 1:30ರ ವೇಳೆಗೆ ಎಟಿಎಂಗೆ ಎಂಟ್ರಿ ಕೊಟ್ಟ ಕಳ್ಳರು ಹೊರಗಿದ್ದ ಎರಡು ಸಿಸಿಟಿವಿ ಕ್ಯಾಮೆರಾಗಳಿಗೆ ಚೂಯಿಂಗ್ ಗಮ್ ಅಂಟಿಸಿದರು. ಬಳಿಕ ಒಳಗಿದ್ದ ಸಿಸಿಟಿವಿಗೆ ಬ್ಲಾಕ್ ಸ್ಪ್ರೇ ಹೊಡೆದಿದ್ದಾರೆ. ಯಾವಾಗ ಆರೋಪಿಗಳು ಸಿಸಿಟಿವಿಗೆ ಚೂಯಿಂಗ್ ಗಮ್ ಮತ್ತು ಬ್ಲ್ಯಾಕ್ ಸ್ಪ್ರೇ ಹೊಡೆದ್ರೊ, ಚಿತ್ರಣಗಳು ಸ್ಪಷ್ಟವಾಗಿ ಗೋಚರಿಸದಿರೋದನ್ನ ಗಮನಿಸಿದ ಮುಂಬೈ ಎಸ್‍ಬಿಐ ಪ್ರಧಾನ ಕಚೇರಿ ಕಂಟ್ರೋಲ್ ರೂಮ್ ಸಿಬ್ಬಂದಿ ಕೂಡಲೇ ಮುಂಬೈನಿಂದ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮ್ ಗೆ ಅಲರ್ಟ್ ಮೆಸೇಜ್ ರವಾನಿಸಿದರು.

    ತಕ್ಷ ಎಚ್ಚೆತ್ತ ಪೊಲೀಸರಿಗೆ ಯಾವ ಎಟಿಎಂ ಎಂಬ ನಿಖರ ಮಾಹಿತಿ ಇರಲಿಲ್ಲ. ಹೀಗಾಗಿ ದೀಪಾಂಜಲಿನಗರದ ಎಲ್ಲಾ ಎಸ್‍ಬಿಐ ಎಟಿಎಂಗಳನ್ನು ಪರಿಶೀಲಿಸುತ್ತ ಬಂದಿದ್ದಾರೆ. ಈ ವೇಳೆ ಶೆಟರ್ ಮುಚ್ಚಿದ್ದ ಎಂಟಿಎಂ ಒಂದರ ಒಳಗಿಂದ ಬೆಂಕಿಯ ಕಿಡಿಗಳು ಕಾಣಿಸಿದ್ದು, ಹೊರಗಿನಿಂದ ಲಾಕ್ ಮುರಿದು ಶೆಟರ್ ಓಪನ್ ಮಾಡಿದಾಗ ಇಬ್ಬರು ಕಳ್ಳರು ಸಿಕ್ಕಿಬಿದ್ದಿದ್ದಾರೆ. ಇಬ್ಬರು ಹೈ ಫೈ ಕಳ್ಳರನ್ನ ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳನ್ನು ಹರ್ಷಾ ಆರೊ, ಸುರಬ್ಜಿತ್ ಎಂದು ಗುರುತಿಸಲಾಗಿದೆ. ಈ ಖತರ್ನಾಕ್ ಕಳ್ಳರು ಪಂಜಾಬ್ ಮೂಲದವರಾಗಿದ್ದು, 15 ಲಕ್ಷ ಹಣದ ಸಮೇತ ರೆಡ್ ಹ್ಯಾಂಡಾಗಿ ಕಳ್ಳರನ್ನ ಪೊಲೀಸರು ಹಿಡಿದಿದ್ದಾರೆ. ಬೆಂಗಳೂರಿನ ಎರಡು ಮೂರು ಎಟಿಎಂಗಳ ಕಳ್ಳತನದಲ್ಲೂ ಆರೋಪಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ವಿಚಾರಣೆಯನ್ನು ಬ್ಯಾಟರಾಯನಪುರ ಪೊಲೀಸರು ಮುಂದುವರಿಸಿದ್ದಾರೆ.

  • ಚುಯಿಂಗ್ ಗಮ್ ನಿರಾಕರಿಸಿದ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟ ಪತಿ

    ಚುಯಿಂಗ್ ಗಮ್ ನಿರಾಕರಿಸಿದ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟ ಪತಿ

    ಲಕ್ನೋ: ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ಜಾರಿಗೊಳಿಸಿದೆ. ಆದರೆ ತ್ರಿವಳಿ ತಲಾಖ್ ನೀಡುವುದು ಮಾತ್ರ ತಪ್ಪುತ್ತಿಲ್ಲ. ಚುಯಿಂಗ್ ಗಮ್ ತಿನ್ನಲು ಪತ್ನಿ ನಿರಾಕರಿಸಿದಕ್ಕೆ ನ್ಯಾಯಾಲಯದ ಆವರಣದಲ್ಲೇ, ವಕೀಲರ ಸಮ್ಮುಖದಲ್ಲಿ ಪತಿ ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಅಮ್ರಾಯ್ ಗ್ರಾಮದ ಸೈಯದ್ ರಶೀದ್ ತನ್ನ ಪತ್ನಿ ಸಿಮ್ಮಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ವರದಕ್ಷಿಣೆ ಕಿರುಕುಳ ನೀಡಿರುವುದಾಗಿ ಪತ್ನಿ ಸಿಮ್ಮಿ ಪತಿ ವಿರುದ್ಧ ದೂರು ನೀಡಿದ್ದಳು. ಈ ಹಿನ್ನೆಲೆ ಲಕ್ನೋದ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಹೀಗಾಗಿ ನ್ಯಾಯಾಲಯಕ್ಕೆ ಪತಿ ಹಾಗೂ ಪತ್ನಿ ಬಂದಿದ್ದರು. ಈ ವೇಳೆ ಪತ್ನಿ ವಕೀಲರ ಜೊತೆ ಮಾತನಾಡುತ್ತಿದ್ದಾಗ ಸ್ಥಳಕ್ಕೆ ಬಂದ ಪತಿ ಆಕೆಗೆ ಚುಯಿಂಗ್ ಗಮ್ ನೀಡಿದ್ದಾನೆ. ಆದರೆ ಅದನ್ನು ಪತ್ನಿ ನಿರಾಕರಿಸಿದ್ದಳು. ಇಷ್ಟಕ್ಕೆ ಕೋಪಗೊಂಡ ಪತಿ ವಕೀಲರ ಮುಂದೆಯೇ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟು ನ್ಯಾಯಾಲಯದಿಂದ ಹೊರಹೋಗಿದ್ದಾನೆ.

    ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ವಿವಿಧ ವಿಭಾಗಗಳ ಅಡಿಯಲ್ಲಿ ಈಗಾಗಲೇ ರಶೀದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

    ಈ ಹಿಂದೆ ಕೂಡ ಕ್ಷುಲ್ಲಕ ಕಾರಣಕ್ಕೆ ತ್ರಿವಳಿ ತಲಾಖ್ ಕೊಟ್ಟ ಪ್ರಕರಣಗಳು ನಡೆದಿದ್ದವು. ಕೆಲವು ಪ್ರಕರಣಗಳಲ್ಲಿ ಪತಿ ಕರೆ ಅಥವಾ ಮೆಸೇಜ್ ಮಾಡಿ ಪತ್ನಿಗೆ ತಲಾಖ್ ಕೊಟ್ಟಿದ್ದಾರೆ. ಸರ್ಕಾರ ಈ ತ್ರಿವಳಿ ತಲಾಖ್ ಪದ್ಧತಿ ಮೇಲೆ ನಿರ್ಬಂಧ ಹೇರಿದ್ದರು, ಈಗಲೂ ಈ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ ಈ ಬಗ್ಗೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿದೆ.

  • ಚ್ಯೂಯಿಂಗಮ್ ತಿಂದು ಮಲಗಿದ ಬಾಲಕಿಯ ದುರ್ಮರಣ

    ಚ್ಯೂಯಿಂಗಮ್ ತಿಂದು ಮಲಗಿದ ಬಾಲಕಿಯ ದುರ್ಮರಣ

    ಹಾವೇರಿ: ಬಬಲ್ ಗಮ್ ತಿಂದು ಮಲಗಿದ ಬಾಲಕಿಯೊಬ್ಬಳು ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ದಾರುಣ ಘಟನೆ ಹಾವೇರಿ ತಾಲೂಕಿನ ಗುತ್ತಲ ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಓಣಿಯ ಗೌರಮ್ಮ ಗಂಗಣ್ಣನವರ್(14) ಎಂದು ಗುರುತಿಸಲಾಗಿದೆ. ಗೌರಮ್ಮ ಎಂದಿನಂತೆ ರಾತ್ರಿ ಊಟ ಮಾಡಿ ಮಲಗಲು ತೆರಳಿದ್ದಾಳೆ. ಅಂಗಡಿಯಿಂದ ತಂದಿದ್ದ ಎರಡು ಚ್ಯುಯಿಂಗ್ ಗಮ್ ತಿನ್ನುತ್ತಾ ಹಾಗೆ ಮಲಗಿದ್ದಾಳೆ.

    ಸ್ವಲ್ಪ ಸಮಯದ ನಂತರ ಚ್ಯೂಯಿಂಗಮ್ ಗಂಟಲಲ್ಲಿ ಸಿಲುಕಿಕೊಂಡಿದೆ. ಇದರಿಂದ ಉಸಿರಾಟದ ತೊಂದರೆ ಅನುಭವಿಸಿ ಕೆಮ್ಮಿನೊಂದಿಗೆ ರಕ್ತದ ವಾಂತಿ ಮಾಡಿಕೊಂಡಿದ್ದು, ಗೌರಮ್ಮ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಕುಟುಂಬದವರು ಸಮುದಾಯದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದ್ದಾರೆ.

    ಆದರೆ ಕೋಮಾ ಸ್ಥಿತಿಗೆ ಹೋದ ಕಾರಣ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯ ಮೃತಪಟ್ಟಿದ್ದಾಳೆ. ಚ್ಯೂಯಿಂಗಮ್ ಶ್ವಾಸನಾಳ, ಅನ್ನನಾಳಕ್ಕೆ ಸೇರಿಕೊಂಡು ಗೌರಮ್ಮ ಮೃತಪಟ್ಟಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.