Tag: Chennapatna

  • ರಾಮನಗರ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸಿಪಿ ಯೋಗೇಶ್ವರ್

    ರಾಮನಗರ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸಿಪಿ ಯೋಗೇಶ್ವರ್

    ರಾಮನಗರ: ಕಾರ್ಯಕರ್ತರ ಸಭೆಯಲ್ಲಿ ಚನ್ನಪಟ್ಟಣದಲ್ಲೇ ಇರುತ್ತೇನೆ ಎಂದು ಹೇಳಿದ್ದ ಮಾಜಿ ಶಾಸಕ ಸಿಪಿ ಯೋಗೇಶ್ವರ್ ರಾಮನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

    ಉಪ ಚುನಾವಣೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ದಿನಾಂಕ ನಿಗದಿಯಾಗಿಲ್ಲ. ನಮ್ಮ ಪಕ್ಷ ಈ ಬಗ್ಗೆ ಕರೆದು ಮಾತನಾಡಿಲ್ಲ. ಪಕ್ಷದ ತೀರ್ಮಾನವೇ ನನ್ನ ತೀರ್ಮಾನ ಎಂದು ಹೇಳಿದ್ದಾರೆ.

    ಎಚ್‍ಡಿ ಕುಮಾರಸ್ವಾಮಿಯವರ ಕುಟುಂಬದ ಎದುರು ಮೂರು ಚುನಾವಣೆ ಮಾಡಿದ್ದೇನೆ. ಅನಿತಾ ಕುಮಾರಸ್ವಾಮಿ ಯವರನ್ನ ಸೋಲಿಸಿದ್ದೇನೆ. ಎಚ್‍ಡಿಕೆ ವಿರುದ್ದ ಒಂದು ಎಂಪಿ, ಒಂದು ಎಂಎಲ್‍ಎ ಚುನಾವಣೆ ಎದುರಿಸಿದ್ದೇನೆ. ಮುಂಬರುವ ಉಪಚುನಾವಣೆಯಲ್ಲಿ ಪಕ್ಷ ಆದೇಶ ಕೊಟ್ರೆ ಸ್ಪರ್ಧಿಸುತ್ತೇನೆ. ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ರು.

    ರಾಮನಗರ ವಿಧಾನಸಭಾ ಕ್ಷೇತ್ರದಿಂದ ಹೆಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ರು. ಆದ್ರೆ ಇತ್ತ ಚನ್ನಪಟ್ಟಣದಲ್ಲಿಯೂ ಗೆಲುವು ಸಾಧಿಸಿದ್ದರಿಂದ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಈ ಮೊದಲು ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹೆಚ್.ಲೀಲಾವತಿ ಸ್ಪರ್ಧೆ ಮಾಡಿದ್ದರು. ಚುನಾವಣೆಗೂ ಮುನ್ನವೇ ಸಿ.ಪಿ.ಯೋಗೇಶ್ವರ್ ರಾಮನಗರದತ್ತ ಒಲವು ತೋರುತ್ತಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡಲಿದೆ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

  • ಬೇಕಿದ್ರೆ ಬೆಟ್ ಕಟ್ತೀನಿ, ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲ್ಲ: ಡಿಕೆ ಶಿವಕುಮಾರ್

    ಬೇಕಿದ್ರೆ ಬೆಟ್ ಕಟ್ತೀನಿ, ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲ್ಲ: ಡಿಕೆ ಶಿವಕುಮಾರ್

    ಬೆಂಗಳೂರು: ನೋಡಿ ಬೇಕಾದರೆ ನಾನು ಬೆಟ್ ತೆಗೆದುಕೊಳ್ಳುತ್ತೇನೆ. ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನ ಏನು ಬಯಸುತ್ತರೋ ಆ ರೀತಿಯ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕೆ ಇಳಿಸಲಿದೆ. ಆದರೆ ನನ್ನ ಕುಟುಂಬದ ಯಾವ ಸದಸ್ಯರು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಯಾವಾಗಲೂ ರಾಜಕೀಯದಲ್ಲಿ ಕ್ಲೀಯರ್ ಆಗಿದ್ದೇನೆ. ರಾಜಕೀಯದಲ್ಲಿ ನನ್ನ ಆಚಾರ, ವಿಚಾರ, ಚಿಂತನೆ, ನಡೆ ಮತ್ತು ನುಡಿ ಇವೆಲ್ಲವೂ ಕೂಡ ಪಕ್ಷ, ಪಕ್ಷದ ಕಾರ್ಯಕರ್ತರ ಹಾಗೂ ಜನರ ಅಭಿಪ್ರಾಯವಾಗಿದೆ ಅಂತಾ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರಿದ ಸಿ.ಪಿ.ಯೋಗೇಶ್ವರ್ ಅವ್ರಿಗೆ ಟಾಂಗ್ ನೀಡಿದರು.

    ಬುಧವಾರ ಚೆನ್ನಪಟ್ಟಣ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಸಿಎಂ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ರಾಮನಗರ ಜಿಲ್ಲೆಯಲ್ಲೇ ಚನ್ನಪಟ್ಟಣಕ್ಕೆ ಅತೀ ಹೆಚ್ಚು ಅನುದಾನ ನೀಡಲಾಗಿದೆ. ಕೆರೆ ತುಂಬಿಸುವ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಹತ್ತು ಹಲವಾರು ಯೋಜನೆಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ ಅಂತಾ ಅಂದ್ರು.

    ಪಬ್ಲಿಕ್ ಟಿವಿ ನಡೆಸಿದ ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ, ಹೈದರಾಬಾದ್ ಹಾಗೂ ಮುಂಬೈ ಕರ್ನಾಟಕದಲ್ಲಿ ಕಾಂಗ್ರೆಸ್ ಓಟ್ ಶೇರಿಂಗ್ ಜಾಸ್ತಿ ಇರುವ ಅಂಶ ಬಹಿರಂಗವಾಗಿದೆ. ನಮ್ಮ ಸರ್ಕಾರದ ಯೋಜನೆಗಳು ರಾಜ್ಯದ ಜನತೆಗೆ ತಲುಪಿವೆ. ರಾಜ್ಯದ ಜನ ನಮ್ಮ ಪರವಾಗಿ ಇದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಅಂತಾ ತಿಳಿಸಿದರು.

    https://www.youtube.com/watch?v=AdBjKaLEe1Y

  • ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಶಾಸಕ ಸಿ.ಪಿ.ಯೋಗೇಶ್ವರ್-ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ

    ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಶಾಸಕ ಸಿ.ಪಿ.ಯೋಗೇಶ್ವರ್-ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ

    ರಾಮನಗರ: ಕಾಂಗ್ರೆಸ್ ಪಕ್ಷಕ್ಕೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

    ಸುದ್ದಿಗೋಷ್ಠಿ ನಡೆಸಿದ ಯೋಗೇಶ್ವರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ವಿಚಾರವನ್ನು ತಿಳಿಸಿದರು.

    ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾವಚಿತ್ರ ಹೆಸರು ಬಳಸುವುದು ಬೇಡ. ಕಾಂಗ್ರೆಸ್ ಪಕ್ಷದ ವರಿಷ್ಟರು ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಸಾರ್ವಜನಿಕ ಬದುಕಿನಲ್ಲಿ ನನ್ನನ್ನು ಸರಿಯಾಗಿ ಬಳಕೆ ಮಾಡಲಿಲ್ಲ. ನಾಯಕರಿಗೆ ನನ್ನ ಅವಶ್ಯಕತೆ ಇಲ್ಲ ಎನ್ನುವುದು ನನ್ನ ಭಾವನೆ. ಜಿಲ್ಲೆಯಲ್ಲಿ ಏಳೆಂಟು ಜನ ನಾಯಕರುಗಳ ಬಲಿಷ್ಠತ್ವ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ತಿಳಿಸಿದರು.

    ಡಿಕೆಶಿ ವಿರುದ್ಧ ವಾಗ್ದಾಳಿ: ಮೊದಲನೇ ಬಾರಿ ನಾನು ಕಾಂಗ್ರೆಸ್ ನಲ್ಲಿದ್ದಾಗ ನನಗೆ ಕೊಟ್ಟಿರುವ ಟಿಕೆಟನ್ನು ಮಾನ್ಯ ಡಿ.ಕೆ.ಶಿವಕುಮಾರ್ ಅವರು ನನ್ನ ಮುಂದೆಯೇ ಹರಿದು ಹಾಕಿದರು. 20 ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಗೆ ಬಂದರೂ ಹಿಂದಿನ ಚುನಾವಣೆಯಲ್ಲಿ ಬೇಡ ಅಂದವರಿಗೆ ಟಿಕೆಟ್ ನೀಡಿ ನನಗೆ ನೀಡಲಾಗುತ್ತಿದ್ದ ಟಿಕೆಟ್ ನ್ನು ತಪ್ಪಿಸಿದರು. ಭಾನುವಾರ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಿವಕುಮಾರ್ ಅವರು 1 ಕೋಟಿ ರೂ. ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ ಎಂದು ಆರೋಪಿಸಿದರು.

    ಹಣ ಬಲವಿಲ್ಲ, ನನಗೆ ಜನಬಲ: ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ಅಷ್ಟು ಹಣ ಸಿಕ್ಕತ್ತು, ತೆಗೆದುಕೊಂಡು ಹೋದರು ಅಂತಾ ಹೇಳುತ್ತಿದ್ದರು. ಆದರೆ ನಾವೆಲ್ಲ ಆ ರೀತಿ ಏನು ಇಲ್ಲ ಅಂತಾ ಅನ್ನಿಸುತ್ತದೆ. ಆದರೆ ದೇಶದ ಯಾವುದೇ ಕಾನೂನುಗಳು ಶಿವಕುಮಾರ್ ಅವರನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ನನಗೂ ಬಂದಿದೆ. ಇವತ್ತು ನಮ್ಮ ತಾಲೂಕಿನಲ್ಲಿ ಹಂಚಿಕೆ ಆಗುತ್ತಿರುವ ಹಣ ನೋಡಿದರೆ ದೇಶದಲ್ಲಿರುವ ಕಾನೂನುಗಳನ್ನು ಅವರನ್ನು ಆರ್ಥಿಕವಾಗಿ ಮುಟ್ಟಲು ಆಗುವುದಿಲ್ಲ ಎಂಬ ಆತಂಕ ನನ್ನಲ್ಲಿ ಮೂಡಿದೆ. ಶಿವಕುಮಾರ್ ಅವರಿಗೆ ಹಣಬಲ ಇರಬಹುದು, ನನಗೆ ಜನ ಬಲವಿದೆ. ಜನ ಬೆಂಬಲದ ಮೇಲೆ ನಾನು ಇವತ್ತು ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವ ನಿರ್ಧಾರ ಮಾಡಿದ್ದೇನೆ. ನನ್ನ ದಾರಿಯನ್ನು ನಾನು ಮುಂದಿನ ದಿನಗಳಲ್ಲಿ ನೋಡಿಕೊಳ್ಳುತ್ತೇನೆ ಅಂತಾ ತಿಳಿಸಿದರು.

    ನಾಯಕತ್ವದಲ್ಲಿ ಕಿತ್ತಾಟ: ಕನಕಪುರ ಕ್ಷೇತ್ರದಲ್ಲಿ ಪ್ರಬಲ ಮೂರು ಜನ ನಾಯಕರಿದ್ದಾರೆ. ರಾಮನಗರದ ಕ್ಷೇತ್ರದ ಲಿಂಗಪ್ಪ ಅವರು ಎಂಎಲ್‍ಸಿ ಆಗಿದ್ದಾರೆ. ರೇವಣ್ಣ ಅವರು ಸಹ ಎಂಎಲ್‍ಸಿ ಆಗಿ ಮಂತ್ರಿಗಳಾಗಿದ್ದಾರೆ. ಮಾಗಡಿ ಕ್ಷೇತ್ರದ ನಾಯಕರಾದ ಬಾಲಕೃಷ್ಣ ಅವರು ಪಕ್ಷಕ್ಕೆ ಬಂದಿದ್ದಾರೆ. ಇರೋದು ನಾಲ್ಕು ತಾಲೂಕಿನ ಸಣ್ಣದೊಂದು ಜಿಲ್ಲೆ ರಾಮನಗರ ಹಾಗಾಗಿ ನಾಯಕತ್ವದಲ್ಲಿ ಸಣ್ಣದೊಂದು ಕಿತ್ತಾಟವಿದೆ ಎಂದರು.

    ಕ್ಷೇತ್ರಕ್ಕೆ ಅನುದಾನವಿಲ್ಲ: ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ, ತಾಲೂಕಿನ ಅಭಿವೃದ್ದಿಗೆ ಪ್ರೋತ್ಸಾಹ ದೊರಕಲಿಲ್ಲ ಹಾಗೂ ವಿಶೇಷವಾದ ಅನುದಾನ ನನ್ನ ತಾಲೂಕಿಗೆ ಸಿಗಲಿಲ್ಲ. ನಮ್ಮ ಜೊತೆ ಕೆಲಸ ಮಾಡುವ ಮುಖಂಡರಿಗೆ ಸರಿಯಾದ ಸ್ಥಾನಮಾನಗಳು ಸಿಗುತ್ತಿಲ್ಲ. ತಾಲೂಕಿನಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ರಸ್ತೆಗಳು ಹಾಳಾಗಿವೆ. ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಮ್ಮನ್ನು ಸಮಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ನಮಗೆ ಗೊತ್ತಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ದೂರ ಹೋಗಬೇಕೆಂದು ತೀರ್ಮಾನಿಸಿದ್ದೇವೆ ಎಂದರು.

    ಕಾಂಗ್ರೆಸ್ ಪಕ್ಷದಿಂದ ಹೊರ ಬಂದು 22ನೇ ತಾರೀಖಿನಂದು ನಗರದ ಚೌಡೇಶ್ವರಿ ಭವನದಲ್ಲಿ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ಕ್ಷೇತ್ರದ ಮುಖಂಡರು ಭಾಗಿಯಾಗಲಿದ್ದಾರೆ. ಅಂದು ನಮ್ಮ ಸಾರ್ವಜನಿಕ ಬದುಕಿನ ಬಗೆಗಿನ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಲಾಗುದು ಎಂದು ಯೋಗೇಶ್ವರ್ ಹೇಳಿದರು.