Tag: chennai crime

  • ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್‌ಮೇಲ್‌ – ವಿದ್ಯಾರ್ಥಿಯನ್ನು ಕೊಂದ 10ನೇ ತರಗತಿ ವಿದ್ಯಾರ್ಥಿನಿಯರು

    ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್‌ಮೇಲ್‌ – ವಿದ್ಯಾರ್ಥಿಯನ್ನು ಕೊಂದ 10ನೇ ತರಗತಿ ವಿದ್ಯಾರ್ಥಿನಿಯರು

    ಚೆನ್ನೈ: ಖಾಸಗಿ ಫೋಟೋಗಳನ್ನು ತೋರಿಸಿ ತಮ್ಮನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ತಿರುವಳ್ಳೂರ್‌ ಜಿಲ್ಲೆಯ ಈಚಿಂಗಾಡು ಗ್ರಾಮದಲ್ಲಿ ವ್ಯಕ್ತಿಯೊಬ್ಬನ ರಕ್ತಸಿಕ್ತ ಹಲ್ಲು ಮತ್ತು ಕೂದಲು ಇರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಪೊಲೀಸರು ತನಿಖೆ ನಡೆಸಿದಾಗ, ಒಂದು ಜಾಗದಲ್ಲಿ ಶವ ಹೂತಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ ಕೊಲೆಯಾದವನ ಮೊಬೈಲ್‌ ಕೂಡ ಪೊಲೀಸರಿಗೆ ಸಿಕ್ಕಿದೆ. ಇದನ್ನೂ ಓದಿ: 2014ಕ್ಕೂ ಮೊದಲು ಗುಂಪು ಹತ್ಯೆ ನಡೆಯುತ್ತಲೇ ಇರಲಿಲ್ಲ: ರಾಹುಲ್ ಗಾಂಧಿ

    ಮೊಬೈಲ್‌ನಲ್ಲಿರುವ ಮಾಹಿತಿ ಪರಿಶೀಲಿಸಿದಾಗ ಚೆಂಗಾಲಪಟ್ಟು ಜಿಲ್ಲೆಯ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಸುಳಿವು ಪತ್ತೆಯಾಗಿದೆ. ವಿದ್ಯಾರ್ಥಿನಿಯರನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರೇಮ್‌ ಕುಮಾರ್‌ (ಹತ್ಯೆಯಾದ ವಿದ್ಯಾರ್ಥಿ) ತಮ್ಮನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

    ಆತ ಪರಸ್ಪರ ಬಾಲಕಿಯರಿಗೆ ತಿಳಿಯದಂತೆ ಇಬ್ಬರೊಂದಿಗೂ ಸಂಬಂಧ ಹೊಂದಿದ್ದ. ಬಾಲಕಿಯರ ಜೊತೆ ಆಕ್ಷೇಪಾರ್ಹ ಫೋಟೋಗಳನ್ನು ತೆಗೆದುಕೊಂಡು, ಅವರನ್ನು ಬ್ಲಾಕ್‌ಮೇಲ್‌ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ಕೊಡದಿದ್ದರೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್‌ ಮಾಡುವುದಾಗಿ ಹೆದರಿಸುತ್ತಿದ್ದ. ಇಬ್ಬರಿಂದಲೂ 50 ಸಾವಿರ ರೂ. ಸುಲಿಗೆ ಮಾಡಿದ್ದ ಎಂಬ ಮಾಹಿತಿ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಆತ ಬೇಡಿಕೆಯಿಟ್ಟಿದ್ದ ಹಣವನ್ನು ಒದಗಿಸಲು ವಿದ್ಯಾರ್ಥಿನಿಯರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಮತ್ತೊಬ್ಬ ಯುವಕ ಅಶೋಕ್‌ನೊಂದಿಗೆ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಅಶೋಕ್‌ ನೀಡಿದ ಸಲಹೆ ಮೇರೆಗೆ ಪ್ರೇಮ್‌ಕುಮಾರ್‌ಗೆ ಕರೆ ಮಾಡಿ ಶೋಲವರಮ್‌ ಟೋಲ್‌ ಪ್ಲಾಜಾ ಬಳಿಗೆ ಬಾಲಕಿಯರು ಕರೆಸಿಕೊಂಡಿದ್ದಾರೆ. ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಇನ್ಮುಂದೆ ಶ್ವಾನಗಳ ನೋಂದಾಯಿಸದವರಿಗೆ 50 ಸಾವಿರ ರೂ. ದಂಡ!

    ಪ್ರೇಮ್‌ಕುಮಾರ್‌ನನ್ನು ಅಪಹರಿಸಿ ಮೊಬೈಲ್‌ನಲ್ಲಿರುವ ಫೋಟೋಗಳನ್ನು ಡಿಲೀಟ್‌ ಮಾಡುವಂತೆ ಬಾಲಕಿಯರು ಕೇಳಿದ್ದಾರೆ. ನಂತರ ಅಶೋಕ್‌ ಮತ್ತು ಆತನ ಸ್ನೇಹಿತರೊಂದಿಗೆ ಪ್ರೇಮ್‌ಕುಮಾರ್‌ನನ್ನು ಈಚಂಗಾಡು ಗ್ರಾಮಕ್ಕೆ ಕರೆದೊಯ್ದು ಕೊಲೆ ಮಾಡಿ, ಹೂತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ತಲೆಮರೆಸಿಕೊಂಡಿರುವ ಅಶೋಕ್‌ ಮತ್ತು ಅವನ ಸ್ನೇಹಿತರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.