Tag: chemical factory

  • ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ – 5 ಸಾವು, 6 ಮಂದಿಗೆ ಗಾಯ

    ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ – 5 ಸಾವು, 6 ಮಂದಿಗೆ ಗಾಯ

    ಮುಂಬೈ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ ಸಂಭವಿಸಿ 5 ಜನ ಕಾರ್ಮಿಕರು ಮೃತಪಟ್ಟು, 6 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಬೋಯಿಸರ್ ಕೈಗಾರಿಕ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಶನಿವಾರ ರಾತ್ರಿ ಸುಮಾರು 7.20ಕ್ಕೆ ನಡೆದಿದ್ದು, ಮಹಾರಾಷ್ಟ್ರದ ಕೊಲ್ವಾಡೆ ಗ್ರಾಮದಲ್ಲಿದಲ್ಲಿರುವ ನೈಟ್ರೇಟ್ ಉತ್ಪಾದನಾ ಘಟಕದಲ್ಲಿ ಬೃಹತ್ ಸ್ಫೋಟ ಸಂಭವಿಸಿ, 5 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆರು ಮಂದಿಗೆ ಗಂಭೀರವಾದ ಗಾಯವಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪಲ್ಘಾರ್ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್, ನಾವು ಕಾರ್ಖಾನೆಯಲ್ಲಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದೇವೆ. ರಾಜ್ಯ ವಿಪತ್ತು ನಿರ್ವಹಣಾ ತಂಡವು ನಮ್ಮ ಕಾರ್ಯಾಚರಣೆಗೆ ಸಾಥ್ ನೀಡಿದೆ. ಕಾರ್ಖಾನೆಯಲ್ಲಿ ರಾಸಾಯನಿಕ ವಸ್ತು ಸ್ಫೋಟಗೊಂಡು ಈ ಘಟನೆ ಸಂಭವಿಸಿದೆ. ಈ ಸ್ಫೋಟದ ಸದ್ದು ಸುಮಾರು 15 ಕಿ.ಮೀ ವರೆಗೂ ಕೇಳಿದೆ ಎಂದು ಹೇಳಿದ್ದಾರೆ.

    ಈಗ ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದೆ. ಐದು ಜನರ ಮೃತದೇಹವು ಸಿಕ್ಕಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

  • ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟ-12 ಜನರ ಸಾವು

    ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟ-12 ಜನರ ಸಾವು

    ಮುಂಬೈ:  ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 58ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣೆ ಮತ್ತು ಬೆಂಕಿ ನಂದಿಸುವ ಕಾರ್ಯ ಸತತವಾಗಿ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಧುಲೆ ಜಿಲ್ಲೆಯ ಶಿರ್ಪುರ್ ತಾಲೂಕಿನ ವಾಘಡಿ ಎಂಬ ಗ್ರಾಮದಲ್ಲಿ ಈ ರಾಸಾಯಿನಿಕ ಕಾರ್ಖಾನೆ ಇದ್ದು, ಬೆಳಗ್ಗೆ ಸುಮಾರು 9.45 ರ ವೇಳೆಗೆ ಕಾರ್ಖಾನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಕಾರಣ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

    ಸಿಲಿಂಡರ್ ಸ್ಫೋಟಗೊಂಡ ವೇಳೆ ಕಾರ್ಖಾನೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದರು. ಈಗಾಗಲೇ 8 ಜನರ ಮೃತ ದೇಹಗಳು ಸಿಕ್ಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ, ವಿಪತ್ತು ನಿರ್ವಹಣ ದಳ ಬಂದು ಬೆಂಕಿ ನಂದಿಸುವ ಕೆಲಸ ಮಾಡುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಶಿರ್‍ಪುರ್ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು, ಪ್ರೈಮಾ ಫೇಸಿ ಎಂಬ ಕಾರ್ಖಾನೆಯಲ್ಲಿ ಸಿಲಿಂಡರ್‍ ಗಳು ಸ್ಫೋಟಗೊಂಡಿವೆ. ಇದರಿಂದ ಬೆಂಕಿ ಹೊತ್ತಿಗೊಂಡು ಈವರೆಗೆ ಕನಿಷ್ಠ ಎಂಟು ಜನರು ಮೃತ ಪಟ್ಟಿದ್ದು ಮೃತದೇಹಗಳನ್ನು ಪೊಲೀಸ್ ಮತ್ತು ರಕ್ಷಣಾ ತಂಡಗಳು ವಶಪಡಿಸಿಕೊಂಡಿವೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

  • ಕೆಮಿಕಲ್ ಫ್ಯಾಕ್ಟರಿಯಲ್ಲಿ ಸರಣಿ ಸ್ಫೋಟವಾಗಿ ಮೂವರ ಸಾವು, 15 ಮಂದಿಗೆ ಗಾಯ- 10 ಕಿ.ಮೀ ವರೆಗೆ ಕೇಳಿಸಿದ ಸ್ಫೋಟದ ಶಬ್ದ

    ಕೆಮಿಕಲ್ ಫ್ಯಾಕ್ಟರಿಯಲ್ಲಿ ಸರಣಿ ಸ್ಫೋಟವಾಗಿ ಮೂವರ ಸಾವು, 15 ಮಂದಿಗೆ ಗಾಯ- 10 ಕಿ.ಮೀ ವರೆಗೆ ಕೇಳಿಸಿದ ಸ್ಫೋಟದ ಶಬ್ದ

    ಮುಂಬೈ: ರಾಸಾಯನಿಕ ಕಾರ್ಖಾನೆಯಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ 3 ಜನರು ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಾಲ್‍ಘರ್ ನಲ್ಲಿ ನಡೆದಿದೆ.

    ಗುರುವಾರ ರಾತ್ರಿ ಸುಮಾರು 11.15ಕ್ಕೆ ಬೋಯಿಸರ್ ರಾಸಾಯನಿಕ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಸುತ್ತ-ಮುತ್ತ ಇದ್ದ ಪ್ರದಶಕ್ಕೆಲ್ಲಾ ಭುಕಂಪನದ ಅನುಭವದಂತೆ ನಡುಕ ಹುಟ್ಟಿಸಿತ್ತು. ಇದರಿಂದ ಮನೆಯಲ್ಲಿದ್ದ ಜನರೆಲ್ಲಾ ಭುಕಂಪನವಾಯಿತೆಂದು ಮನೆಯಿಂದ ಹೊರ ಬಂದು ಕುಳಿತಿದ್ದರು. ಸ್ಫೋಟದ ತೀವ್ರತೆಗೆ ಕೆಲವು ಮನೆಗಳ ಕಿಟಿಕಿಯ ಗಾಜುಗಳು ಪುಡಿಯಾಗಿದ್ದು, ಎಲ್ಲರನ್ನು ಆತಂಕಕ್ಕೆ ಎಡೆಮಾಡಿತ್ತು. ಫ್ಯಾಕ್ಟರಿಯ ಬಾಯ್ಲರ್ ರೂಮಿನಲ್ಲಿ ಸ್ಫೋಟ ನಡೆದಿರುವ ಸಾಧ್ಯತೆ ಇದೆ. ಆದರೂ ಸ್ಫೋಟಕ್ಕೆ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

    ಘಟನೆ ನಡೆದ ಸ್ಥಳಕ್ಕೆ ಧಾವಿಸಿದ 25 ದಕ್ಕೂ ಹೆಚ್ಚು ಅಗ್ನಿಶಾಮಕ ಪಡೆಗಳು ಹೊತ್ತಿ ಉರಿಯುತ್ತಿದ್ದ ಕಾರ್ಖಾನೆಯ ಬೆಂಕಿಯನ್ನ ನಂದಿಸಲು ಹರಸಾಹಸ ಪಡಬೇಕಾಯಿತು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಯಾರೋ ಬಾಂಬ್ ದಾಳಿ ನಡೆಸಿರುವ ಹಾಗೆ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

    ಮುಂಜಾಗ್ರತೆಯ ಕ್ರಮವಾಗಿ ಆ ಮಾರ್ಗದ ರಸ್ತೆ ಸಂಚಾರವನ್ನ ಸ್ಥಗಿತಗೊಳಿಸಿದ್ದು, ಪ್ರದೇಶದ ವಿದ್ಯುತ್ ಪೂರೈಕೆಯನ್ನ ಸ್ಥಗಿತಗೊಳಿಸಲಾಗಿದೆ. ಈ ಅವಘಡ ನಡೆದ ಪ್ರದೇಶದ ನಾಲ್ಕು ರಾಸಾಯನಿಕ ಕೇಂದ್ರಗಳಾದ- ಪ್ರಾಚಿ ಇಂಡಸ್ಟ್ರಿ, ಭಾರತ್ ರಾಸಾಯನ್, ಆರತಿ ಇಂಡಸ್ಟ್ರಿ ಮತ್ತು ಯುನಿಮಾಕ್ಸ್ ಕಾರ್ಖಾನೆಗಳಿಗೂ ಹಾನಿಯಾಗಿದೆ ಎಂದು ಹೇಳಲಾಗಿದೆ.

    ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಪಿ ಸಿಂಗ್, ವಾಸೈನ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ (ಡಿಐಎಸ್‍ಎಚ್) ನಿರ್ದೇಶಕರು ಈ ಅವಘಡದ ಕಾರಣವನ್ನ ಖಚಿತಪಡಿಸಿಕೊಂಡು ಬೋಯಿಸಾರ್ ಪೊಲೀಸರಿಗೆ ವರದಿ ಮಾಡುವುದಾಗಿ ತಿಳಿಸಿದರು.

  • ಬೆಂಗ್ಳೂರಲ್ಲಿ ಮತ್ತೊಂದು ಅಗ್ನಿ ದುರಂತ- ಹೊತ್ತಿ ಉರಿದ ಕೆಮಿಕಲ್ ಫ್ಯಾಕ್ಟರಿ

    ಬೆಂಗ್ಳೂರಲ್ಲಿ ಮತ್ತೊಂದು ಅಗ್ನಿ ದುರಂತ- ಹೊತ್ತಿ ಉರಿದ ಕೆಮಿಕಲ್ ಫ್ಯಾಕ್ಟರಿ

    ಬೆಂಗಳೂರು: ನಗರದಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಫ್ಲೋರ್ ಮಿಲ್ ರಸ್ತೆಯಲ್ಲಿ ಸೋಫಾ ಕೆಮಿಕಲ್ ತಯಾರು ಮಾಡುವ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ದುರಂತ ಘಟಿಸಿದೆ.

    ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಕೆಮಿಕಲ್ ತಯಾರಾಗುತ್ತಿದ್ದ ಸ್ಥಳವಾದ್ದರಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬೆಂಕಿ ಹೊತ್ತಿ ಉರಿದಿದೆ. ಕಟ್ಟದಲ್ಲಿದ್ದ ಕಾರ್ಮಿಕರನ್ನು ಸ್ಥಳೀಯರು ಸುರಕ್ಷಿತವಾಗಿ ಹೊರ ತಂದಿದ್ದಾರೆ.

    ಕಳೆದ ನಾಲ್ಕೈದು ವರ್ಷಗಳಿಂದ ಈ ಕಟ್ಟಡದಲ್ಲಿ ಸೋಫಾ ಮಾಲೀಷ್ ಮಾಡುವ ಕೆಮಿಕಲನ್ನು ತಯಾರಿಸಲಾಗುತ್ತಿದೆ. ಸೋಮವಾರದಂದು ಅಗ್ನಿ ಅವಘಡ ನಡೆದಾಗ ಸುಮಾರು 200ಕ್ಕೂ ಹೆಚ್ಚು ಕೆಮಿಕಲ್ ಟಿನ್ ಗಳು ಪತ್ತೆಯಾಗಿವೆ. ಸದ್ಯ ಕಟ್ಟಡ ಮಾಲೀಕ ವಾಜೀದ್ ಅಹ್ಮದ್ ತಲೆ ಮರೆಸಿಕೊಂಡಿದ್ದಾನೆ.

    ಬೆಂಕಿ ದುರಂತ ನಡೆದ ಕಟ್ಟಡದ ಪಕ್ಕದಲ್ಲೇ ಅನೇಕ ಮನೆಗಳಿದ್ದು ಬೆಂಕಿ ಆವರಿಸುವ ಆತಂಕ ಮನೆ ಮಾಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಲೀ ಹಾಗು ಇನ್ನಿತರೆ ತೊಂದರೆ ಕಂಡುಬಂದಿಲ್ಲ. ಕೆಮಿಕಲ್ ತಯಾರು ಮಾಡುವ ಘಟಕ ಸ್ಥಾಪನೆಗೆ ಅನುಮತಿಯನ್ನಾಗಲಿ, ಪರವಾನಿಗೆಯನ್ನಾಗಲಿ ಮಹಾನಗರಪಾಲಿಕೆ ನೀಡಿಲ್ಲ. ಮಾಲೀಕರು ಅವಘಡ ಸಂಭವಿಸಿದಾಗ ಎದುರಿಸಬೇಕಾಗಿರುವ ಯಾವುದೇ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡಿಲ್ಲ.

    ಬೆಂಕಿ ದುರಂತ ನಡೆದ ಸ್ಥಳಕ್ಕೆ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಮತ್ತು ನೂರಾರು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಮೇಯರ್ ಸಂಪತ್ ರಾಜ್ ಹಾಗೂ ಅಗ್ನಿಶಾಮಕ ತಂಡಗಳ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಟ್ಟಡ ಮತ್ತು ಕೆಮಿಕಲ್ ಫ್ಯಾಕ್ಟರಿ ಮಾಲೀಕನ ಬೇಜವಾಬ್ದಾರಿತನದ ವಿರುದ್ಧ ಡಿಜೆ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಮಾಲೀಕ ಮತ್ತು ಸಂಬಂಧಪಟ್ಟ ಇಲಾಖೆಗಳ ಬೇಜವಾಬ್ದಾರಿತನದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಹೊತ್ತಿ ಉರಿದ ಕೆಮಿಕಲ್ ಕಾರ್ಖಾನೆ- ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

    ಹೊತ್ತಿ ಉರಿದ ಕೆಮಿಕಲ್ ಕಾರ್ಖಾನೆ- ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

    ಬೆಂಗಳೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ಕೆಮಿಕಲ್ ಕಾರ್ಖಾನೆ ಹೊತ್ತಿ ಉರಿದ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಕ್ಷಣ ಕ್ಷಣಕ್ಕೂ ಬೆಂಕಿ ಹೆಚ್ಚಾಗಿ ಸಿಲಿಂಡರ್ ಸ್ಫೋಟಗೊಂಡಿವೆ. ಬೆಂಕಿ ನಂದಿಸಲು ಪೀಣ್ಯ, ಯಶವಂತಪುರ, ತುಮಕೂರುನಿಂದ ಅಗ್ನಿಶಾಮಕ ವಾಹನಗಳು ಬಂದಿದ್ವು. ಲಿಯೋನಿಡ್ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಕೆಮಿಕಲ್ ಹಾಗೂ ಇನ್ನಿತರೆ ವಸ್ತುಗಳು ಸುಟ್ಟು ಭಸ್ಮವಾಗಿದೆ.

    ಶಿವರಾತ್ರಿ ಹಬ್ಬವಾದುದರಿಂದ ಕಾರ್ಖಾನೆಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

  • ಬಾಯ್ಲರ್ ಸ್ಫೋಟದಿಂದ ಕೆಮಿಕಲ್ ಕಾರ್ಖಾನೆಗೆ ಬೆಂಕಿ – ಕಾರ್ಮಿಕ ಸಾವು

    ಬಾಯ್ಲರ್ ಸ್ಫೋಟದಿಂದ ಕೆಮಿಕಲ್ ಕಾರ್ಖಾನೆಗೆ ಬೆಂಕಿ – ಕಾರ್ಮಿಕ ಸಾವು

    ಬೀದರ್: ಬಾಯ್ಲರ್ ಸ್ಫೋಟದಿಂದ ಕೆಮಿಕಲ್ ಕಾರ್ಖಾನೆಗೆ ಬೆಂಕಿ ಬಿದ್ದು ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಆರ್.ಟಿ.ಓ ಚೆಕ್ ಪೋಸ್ಟ್ ಬಳಿ ನಡೆದಿದೆ.

    ಹೈದ್ರಾಬಾದ್ ಮೂಲದ 38 ವರ್ಷದ ವೆಂಕಟೇಶ್ ಸಾವನ್ನಪ್ಪಿರೋ ಕಾರ್ಮಿಕ ಅಂತ ಗೊತ್ತಾಗಿದೆ. ಆರ್.ಕೆ ಆರ್ಗಾನಿಕ್ ಕೆಮಿಕಲ್ ಕಾರ್ಖಾನೆಯಲ್ಲಿ ಗುರುವಾರ ರಾತ್ರಿ ಈ ಅವಘಡ ಸಂಭವಿಸಿದೆ. ಮೂರು ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಿವೆ.

    ಘಟನೆ ಬಗ್ಗೆ ಮಾಹಿತಿ ತಿಳಿದು ಹುಮ್ನಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.