Tag: Check Post

  • ರಾತ್ರೋರಾತ್ರಿ ತೆಲಂಗಾಣದಿಂದ ರಾಯಚೂರಿಗೆ ಬಂದ 95 ಜನ

    ರಾತ್ರೋರಾತ್ರಿ ತೆಲಂಗಾಣದಿಂದ ರಾಯಚೂರಿಗೆ ಬಂದ 95 ಜನ

    ರಾಯಚೂರು: ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೋವಿಡ್-19 ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಇದಕ್ಕೆ ಜಿಲ್ಲಾಡಳಿತದ ಜೊತೆ ಪೊಲೀಸ್ ಇಲಾಖೆಯ ಕಾರ್ಯವನ್ನೂ ಶ್ಲಾಘಿಸಬೇಕು. ಆದರೆ ಜಿಲ್ಲೆಯ ಅಂತರರಾಜ್ಯ ಗಡಿಗಳಲ್ಲಿ ಮಾತ್ರ ಗಂಭೀರ ಪರಿಸ್ಥಿತಿಯಿದ್ದು, ಪೊಲೀಸರು ಸಿಕ್ಕ ಸಿಕ್ಕವರನ್ನ ಜಿಲ್ಲೆಯೊಳಗೆ ಬಿಡುತ್ತಿದ್ದಾರೆ ಎನ್ನುವ ದೂರು ಕೇಳಿಬಂದಿದೆ.

    ಕೊರೊನಾ ಗಂಭೀರತೆಯನ್ನ ಮರೆತ ಕೆಲ ಪೊಲೀಸರು ರಾಯಚೂರಿನ ಶಕ್ತಿನಗರದ ಅಂತರರಾಜ್ಯ ಚೆಕ್‌ ಪೊಸ್ಟ್‌ನಲ್ಲಿ ಶಿಲ್ಪಾ ಮೆಡಿಕೇರ್, ಕೆಪಿಸಿ ಕಂಪನಿ ಸಿಬ್ಬಂದಿಗೆ ವಿನಾಯಿತಿ ಕೊಟ್ಟಿದ್ದಾರೆ. ಜಿಲ್ಲಾಡಳಿತ ನಿರ್ಬಧ ಹೇರಿದ್ದರೂ ತೆಲಂಗಾಣದಿಂದ ಕಂಪನಿಗೆ ಬರುವ ಸುಮಾರು ಕಾರ್ಮಿಕರನ್ನ ಜಿಲ್ಲೆಯ ಒಳಗೆ ಬಿಡುತ್ತಿದ್ದಾರೆ.

    ಈಗಾಗಲೇ ಫಾರ್ಮಾ ಕಂಪನಿಗೆ ಹೊರರಾಜ್ಯದಿಂದ ಬರುವ ಕೆಲಸಗಾರರಿಗೆ ಜಿಲ್ಲೆಯಲ್ಲಿ ಊಟ, ವಸತಿ ಸೌಲಭ್ಯ ನೀಡಲು ಮೊದಲೇ ಸೂಚಿಸಲಾಗಿದೆ. ಆದರೂ ಕಂಪನಿ ತನ್ನ ಕೆಲಸಗಾರರಿಗೆ ಯಾವುದೇ ಸೌಕರ್ಯ ಒದಗಿಸಿಲ್ಲ. ಹೀಗಾಗಿ ತೆಲಂಗಾಣದ ಗಡಿಯಲ್ಲಿನ ಕಾರ್ಮಿಕರು ಪ್ರತಿ ನಿತ್ಯ ಬರುತ್ತಿದ್ದಾರೆ. ಇದನ್ನ ಪ್ರಶ್ನಿಸಿದ್ದಕ್ಕೆ ಮಾಧ್ಯಮದವರು ಹೇಳಿದರೆ ಅಂತರರಾಜ್ಯ ಗಡಿ ಬಂದ್ ಮಾಡುತ್ತೇವೆ ಅಂತ ಚೆಕ್‌ ಪೊಸ್ಟ್‌ನಲ್ಲಿನ ಪೊಲೀಸ್ ಸಿಬ್ಬಂದಿ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ.

    ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದ್ದರೂ ಚೆಕ್ ಪೋಸ್ಟ್‌ಗಳಲ್ಲಿ ನಿರ್ಲಕ್ಷ್ಯವಹಿಸಲಾಗುತ್ತಿದೆ. ಈಗಾಗಲೇ ರಾತ್ರೋರಾತ್ರಿ ಅಂತರರಾಜ್ಯ ಗಡಿಗಳಿಂದ 95 ಜನ ಜಿಲ್ಲೆಗೆ ಬಂದಿದ್ದಾರೆ. ಆದ್ದರಿಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಗಡಿ ಗ್ರಾಮಗಳ ಕಚ್ಚಾ ರಸ್ತೆಗಳ ಮೂಲಕ ಜನ ಎಗ್ಗಿಲ್ಲದೆ ಓಡಾಡುತ್ತಿರುವುದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ.

  • ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ಲೋಪ – 7 ಮಂದಿ ಪೊಲೀಸ್ ಸಿಬ್ಬಂದಿ ಅಮಾನತು

    ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ಲೋಪ – 7 ಮಂದಿ ಪೊಲೀಸ್ ಸಿಬ್ಬಂದಿ ಅಮಾನತು

    ಚಾಮರಾಜನಗರ: ಜಿಲ್ಲೆಯ ಹೆಗ್ಗವಾಡಿ ಕ್ರಾಸ್ ಹಾಗೂ ಪುಣಜನೂರು ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ಲೋಪ ಎಸಗಿ, ಪೂರ್ವಾನುಮತಿ ಇಲ್ಲದೇ ಹೆಚ್ಚು ವಾಹನಗಳನ್ನು ಬಿಟ್ಟಿದ್ದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಏಳು ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ ಆನಂದ್ ಕುಮಾರ್ ಏಳು ಮಂದಿ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಚಾಮರಾಜನಗರ ಗ್ರಾಮಾಂತರ ಠಾಣೆಯ ಎಎಸ್‍ಐ ಕೂಸಪ್ಪ, ಸೈಯದ್ ರಫಿ, ಪ್ರಸಾದ್, ಅಬ್ದುಲ್ ಖಾದರ್ ಹಾಗೂ ಚಾಮರಾಜನಗರ ಪೂರ್ವ ಠಾಣೆಯ ಮಹಾದೇವಸ್ವಾಮಿ, ಮಹೇಶ್, ಡಿವೈಎಸ್‌ಪಿ ಕಚೇರಿಯ ರೇವಣ್ಣಸ್ವಾಮಿ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ.

    ಹೆಗ್ಗವಾಡಿ ಕ್ರಾಸ್ ಹಾಗೂ ಪುಣಜನೂರು ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ಲೋಪ ಎಸಗಿ, ಪೂರ್ವಾನುಮತಿ ಇಲ್ಲದೇ ಹೆಚ್ಚು ವಾಹನಗಳನ್ನು ಬಿಟ್ಟಿರುವ ಚೆಕ್‌ಪೋಸ್ಟ್‌ಗಳ ಕಂದಾಯ ವಿಭಾಗದ 6  ಮಂದಿ  ನೌಕರರನ್ನು ಶನಿವಾರ ಡಿಸಿ ಅಮಾನತುಗೊಳಿಸಿದ್ದರು.

  • ಚೆಕ್​ಪೋಸ್ಟ್​ನಲ್ಲಿ ಕರ್ತವ್ಯ ಲೋಪ – ಆರು ಜನರ ಅಮಾನತು

    ಚೆಕ್​ಪೋಸ್ಟ್​ನಲ್ಲಿ ಕರ್ತವ್ಯ ಲೋಪ – ಆರು ಜನರ ಅಮಾನತು

    ಚಾಮರಾಜನಗರ: ಚೆಕ್​ಪೋಸ್ಟ್​ನಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಆರು ಜನರನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಜಿಲ್ಲೆಯ ಹೆಗ್ಗವಾಡಿ ಕ್ರಾಸ್ ಚೆಕ್‍ಪೋಸ್ಟ್ ನಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ ಹಾಗೂ ಪೂರ್ವಾನುಮತಿ ಪಡೆಯದೇ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಹಾದು ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಕ್ಕಡಹಳ್ಳಿಯ ಗ್ರಾ.ಪಂ. ಬಿಲ್ ಕಲೆಕ್ಟರ್ ಮಹದೇವಸ್ವಾಮಿ, ನಂಜದೇವನಪುರ ವೃತ್ತದ ಗ್ರಾಮ ಲೆಕ್ಕಿಗ ಸಂತೋಷ್ ಕುಮಾರ್, ತಮ್ಮಡಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ಕೆ. ಶ್ರೀಧರ್, ಮುಕ್ಕಡಹಳ್ಳಿ ಗ್ರಾಮ ಪಂಚಾಯತಿಯ ನೀರುಗಂಟಿ ನಂಜುಂಡಸ್ವಾಮಿ, ಕುಲಗಾಣ ವೃತ್ತದ ಲೆಕ್ಕಿಗ ಡಿ.ಜೆ. ಮಹೇಶ್, ಮುಕ್ಕಡಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ನಂದೀಶ್ ಆರು ಜನರನ್ನು ಅಮಾನತುಗೊಳಿಸಲಾಗಿದೆ.

    ಕೊರೊನಾ ವೈರಸ್ ತಡೆಗಾಗಿ ಹೆಗ್ಗವಾಡಿ ಕ್ರಾಸ್ ನಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿತ್ತು. ಮೊದಲನೇ ಮತ್ತು ಎರಡನೇ ಪಾಳಿಯಲ್ಲಿ ಕಾರ್ಯ ನಿರ್ವಹಿಸಿದ್ದ ಆರು ಮಂದಿ ನೌಕರರು 23 ವಾಹನಗಳನ್ನು ಪರಿಶೀಲನೆ ನಡೆಸದೇ ಬಿಟ್ಟಿದ್ದರು. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರದ ಮಾರ್ಗಸೂಚಿ ಅನ್ವಯ ಜೀವನಾವಶ್ಯಕ ವಸ್ತುಗಳನ್ನು ಮಾತ್ರ ಸಾಗಿಸಲು ಅವಕಾಶವಿದೆ. ಆದರೆ ಈ ನೌಕರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾದುಹೋಗಲು ಅವಕಾಶ ಕಲ್ಪಿಸಿದ್ದರಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

  • ಬಾಗಲಕೋಟೆ ಗಡಿಗೆ ಬಂದ ಸಾವಿರಾರು ಜನರು

    ಬಾಗಲಕೋಟೆ ಗಡಿಗೆ ಬಂದ ಸಾವಿರಾರು ಜನರು

    ಬಾಗಲಕೋಟೆ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹಾಗೂ ಹೊರ ರಾಜ್ಯದಿಂದ ಬಂದ ಸಾವಿರಾರು ಜನರನ್ನು ಜಿಲ್ಲೆಯ ಇಳಕಲ್ ತಾಲೂಕಿನ ಹನಮನಾಳ ಚೆಕ್ ಪೋಸ್ಟ್ ಬಳಿ ಜಿಲ್ಲಾಡಳಿತ ತಡೆ ಹಿಡಿದಿದೆ.

    ಕುರಿಗಳನ್ನು ತುಂಬಿದಂತೆ ಜನರನ್ನು ತುಂಬಿಕೊಂಡು ಬಂದಿರುವ ಲಾರಿಯನ್ನು ನೋಡಿದ ಚೆಕ್‌ಪೋಸ್ಟ್‌ ಸಿಬ್ಬಂದಿ ಬೆಚ್ಚಿಬಿದ್ದಿದೆ. ಬೆಂಗಳೂರಿನಿಂದ ಇಂದು 5ಕ್ಕೂ ಹೆಚ್ಚು ಲಾರಿಗಳಲ್ಲಿ ಬಂದಿರುವ ಕೂಲಿ ಕಾರ್ಮಿಕರು ಮಧ್ಯಪ್ರದೇಶ, ರಾಜಸ್ತಾನ ಸೇರಿ ಹೊರ ರಾಜ್ಯ ಮೂಲದವರು ಎನ್ನಲಾಗುತ್ತಿದೆ.

    ಬೆಂಗಳೂರಲ್ಲಿ ಕೆಲಸ ಬಂದ್ ಆಗಿದೆ. ತಮ್ಮ ಬಳಿ ದುಡ್ಡು ಇಲ್ಲ. ಊಟಕ್ಕೂ ತೊಂದರೆ ಆಗಿದೆ. ನಮ್ಮ ಊರುಗಳಿಗೆ ಹೋಗುತ್ತಿದ್ದೇವೆ ಎಂದು ಕಾರ್ಮಿಕರು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಆದರೆ ಅಂತರ್ ಜಿಲ್ಲಾ ಪ್ರವೇಶ ಬಂದ್ ಇರುವುದರಿಂದ ಚೆಕ್‌ಪೊಸ್ಟ್‌ನಲ್ಲಿ ಸಿಬ್ಬಂದಿ ಹಾಗೂ ಇಳಕಲ್ ಪೊಲೀಸರು ವಾಹನಗಳನ್ನು ನಡೆದಿದ್ದಾರೆ. ಜೊತೆಗೆ ಜನರನ್ನು ಬಂದ ಮಾರ್ಗದಲ್ಲೇ ವಾಪಸ್ ಕಳುಹಿಸಿದ್ದಾರೆ.

    ಹೀಗಾಗಿ ಸಾವಿರಾರು ಜನರು ವಾಹನ ಬಿಟ್ಟು ಹನಮನಾಳ ಗುಡ್ಡದಲ್ಲಿ ನಡೆದುಕೊಂಡು ಹೊರಟಿದ್ದಾರೆ. ಚಿಕ್ಕ ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು ಮೂರು ಸಾವಿರ ಜನರು ಬಂದಿದ್ದರು. ಆದರೆ ಅಂತರ್ ಜಿಲ್ಲಾ ಗಡಿ ಭಾಗ ಬಂದ್ ಆಗಿದ್ದರೂ ಬೆಂಗಳೂರಿನಿಂದ ಈ ಜನರು ಇಳಕಲ್‍ವರೆಗೂ ಹೇಗೆ ಬಂದರು ಎಂಬ ಪ್ರಶ್ನೆ ಮೂಡಿದೆ.

  • ಬಾಗಲಕೋಟೆಯಲ್ಲಿ ಮೂರು ಚೆಕ್ ಪೋಸ್ಟ್ – ಸರ್ಕಾರಿ, ಖಾಸಗಿ ವಾಹನಗಳಲ್ಲಿ ಬರುವವರ ತಪಾಸಣೆ

    ಬಾಗಲಕೋಟೆಯಲ್ಲಿ ಮೂರು ಚೆಕ್ ಪೋಸ್ಟ್ – ಸರ್ಕಾರಿ, ಖಾಸಗಿ ವಾಹನಗಳಲ್ಲಿ ಬರುವವರ ತಪಾಸಣೆ

    ಬಾಗಲಕೋಟೆ: ಕೊರೊನಾ ಭೀತಿ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಮೂರು ಕಡೆಗಳಲ್ಲಿ ಜಿಲ್ಲಾಡಳಿತ ಚೆಕ್ ಪೋಸ್ಟ್ ತೆರೆಯುವ ಮೂಲಕ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡುತ್ತಿದೆ.

    ಜಿಲ್ಲೆಯ ಇಳಕಲ್ ತಾಲೂಕಿನ ಗುಗ್ಗಲಮರಿ, ಮುಧೋಳ ತಾಲೂಕಿನ ಲೋಕಾಪುರ, ಬಾದಾಮಿ ತಾಲೂಕಿನ ಕುಳಗೇರಿ ಬಳಿಯಲ್ಲಿ ಜಿಲ್ಲಾಡಳಿತ ಚೆಕ್ ಪೋಸ್ಟ್‌ಗಳನ್ನು ತೆರೆದಿದೆ. ಶನಿವಾರ ರಾತ್ರಿಯಿಂದಲೇ ಈ ಚೆಕ್ ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗೆ ಬರುವ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದೆ.

    ಇಳಕಲ್ ತಾಲೂಕಿನ ಗುಗ್ಗಲಮರಿ ಚೆಕ್ ಪೋಸ್ಟ್‌ನಲ್ಲಿ ಶನಿವಾರ ರಾತ್ರಿಯಿಂದ ಬೆಳಿಗ್ಗೆಯವರೆಗೆ 65 ಪ್ರಯಾಣಿಕರ ಸ್ಕ್ರೀನಿಂಗ್ ಮಾಡಲಾಗಿದೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ಪ್ರತಿ ಬಸ್ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ಖಾಸಗಿ ವಾಹನಗಳ ತಪಾಸಣೆ ಕೂಡಾ ಮಾಡಲಾಗುತ್ತಿದೆ.

    ಮಕ್ಕಳು, ಮಹಿಳೆಯರು ಸೇರಿ ಬಸ್‍ನಲ್ಲಿದ್ದ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್‍ಗೆ ಒಳಪಡಿಸಲಾಗುತ್ತಿದೆ. ಪ್ರತಿಯೊಂದು ಚೆಕ್ ಪೋಸ್ಟ್‌ಗಳಿಗೂ ಆಯಾ ತಾಲೂಕಿನ ವೈದ್ಯಾಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ವೈದ್ಯರು, ನರ್ಸ್‍ಗಳನ್ನು ನಿಯೋಜನೆ ಮಾಡಲಾಗಿದೆ.

  • ಬೇರಂಬಾಡಿ ಬಳಿ ಸ್ಯಾಟಲೈಟ್ ಬಳಕೆ ಪತ್ತೆ – ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ

    ಬೇರಂಬಾಡಿ ಬಳಿ ಸ್ಯಾಟಲೈಟ್ ಬಳಕೆ ಪತ್ತೆ – ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ

    ಚಾಮರಾಜನಗರ: ಕೇರಳದಲ್ಲಿ ನಾಲ್ವರು ನಕ್ಸಲರ ಹತ್ಯೆ ಹಿನ್ನೆಲೆಯಲ್ಲಿ ಚಾಮರಾಜನಗರದ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

    ಗಡಿಭಾಗದ ಬಂಡೀಪುರ ಅರಣ್ಯಕ್ಕೆ ನಕ್ಸಲರು ನುಸುಳುವ ಸಾಧ್ಯತೆಗಳಿರುವುದರಿಂದ ಕರ್ನಾಟಕ ಕೇರಳ ಗಡಿಭಾಗದ ಮೂಲೆಹೊಳೆ ಹಾಗೂ ಕರ್ನಾಟಕ ತಮಿಳುನಾಡು ಗಡಿಭಾಗದ ಕೆಕ್ಕನಹಳ್ಳ ಬಳಿ ನಕ್ಸಲ್ ನಿಗ್ರಹದಳ ಹಾಗೂ ಜಿಲ್ಲಾ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪೊಲೀಸರಿಂದ ಗುಂಡಿನ ದಾಳಿ – ಮೂವರು ಮಾವೋವಾದಿಗಳು ಹತ್ಯೆ

    ನಕ್ಸಲ್ ನಿಗ್ರಹದಳದ ಜೊತೆಗೆ ಜಿಲ್ಲಾ ಪೊಲೀಸ್‍ನ 10 ಮಂದಿ ಕಮಾಂಡೋಗಳನ್ನು ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದ್ದು, ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಮಧ್ಯೆ ಗುಂಡ್ಲುಪೇಟೆ ತಾಲೂಕು ಗಡಿಭಾಗದ ಬೇರಂಬಾಡ ಬಳಿ ಸ್ಯಾಟಲೈಟ್ ಫೋನ್ ಬಳಕೆ ಆಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ಆನಂದಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಸ್ಯಾಟಲೈಟ್ ಫೋನ್ ಅನ್ನು ನಕ್ಸಲರು ಬಳಸಿದ್ದಾರೋ ಅಥವಾ ಬೇರೆ ಯಾರಾದರು ಬಳಸಿದ್ದಾರೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದೂವರೆಗೆ ನಕ್ಸಲರ ಚಟುವಟಿಕೆ ಕಂಡು ಬಂದಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲರ ಜೊತೆಗೆ ಗಿರಿಜನರು ಕೈ ಜೋಡಿಸದಂತೆ ಮನವಿ ಮಾಡಲಾಗಿದೆ. ಗಿರಿಜನ ಯುವಕರಿಗೆ ಉದ್ಯೋಗಾವಾಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಆನಂದಕುಮಾರ್ ಹೇಳಿದ್ದಾರೆ.

  • ಮಂಡ್ಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.60 ಲಕ್ಷ ರೂ. ವಶ

    ಮಂಡ್ಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.60 ಲಕ್ಷ ರೂ. ವಶ

    ಮಂಡ್ಯ: ಅಕ್ರಮವಾಗಿ ಸಾಗಿಸುತ್ತಿದ್ದ 2,60,500 ರೂಪಾಯಿ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ನಾಗಮಂಗಲ ತಾಲೂಕಿನ ಬೆಂಗಳೂರು-ಮಂಗಳೂರು ಹೆದ್ದಾರಿಯ ಕದಬಹಳ್ಳಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಹಣ ಸಿಕ್ಕಿದೆ. ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದ್ದು, ಚುನಾವಣಾ ಅಧಿಕಾರಿಗಳು ಆ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಗುರುವಾರ ಮತದಾನ ಇರುವುದರಿಂದ ಚುನಾವಣಾ ಅಧಿಕಾರಿಗಳು ಮಂಡ್ಯ ಜಿಲ್ಲೆಯಲ್ಲಿ ಹದ್ದಿನ ಕಣ್ಣನ್ನು ಇಟ್ಟಿದ್ದಾರೆ. ಮಂಡ್ಯದಲ್ಲಿ ಅಕ್ರಮ ಕಡಿವಾಣಕ್ಕೆ ಐಟಿ ಹಾಗೂ ಚುನಾವಣಾಧಿಕಾರಿಗಳು ಚಕ್ರವ್ಯೂಹ ರಚಿಸಿದ್ದಾರೆ. ಸುಮಾರು 50 ಕಡೆಗಳಲ್ಲಿ ಐಟಿ ತಂಡ ಸಿಸಿಟಿವಿ ಅಳವಡಿಸಿದ್ದು, ಮಂಗಳವಾರ ರಾತ್ರಿಯೇ ಐಟಿ ಅಧಿಕಾರಿಗಳ ತಂಡ ಮಂಡ್ಯಕ್ಕೆ ಶಿಫ್ಟ್ ಆಗಿದೆ.

    ಒಟ್ಟು 15ಕ್ಕೂ ಹೆಚ್ಚು ಕೇಂದ್ರಗಳ ಮೇಲೆ ಐಟಿ ತಂಡ ಹದ್ದಿನ ಕಣ್ಣನ್ನು ಇಟ್ಟಿದೆ. ತೋಟದ ಮನೆ, ಸಿನಿಮಾ ಥಿಯೇಟರ್, ರೈಸ್ ಮಿಲ್, ಸಾ ಮಿಲ್, ಕಲ್ಯಾಣ ಮಂಟಪಗಳು, ಗೋಡೌನ್‍ಗಳು, ನಿರ್ಮಾಣ ಹಂತದ ಕಟ್ಟಡಗಳು, ಅಕ್ರಮ ಹಣ ಸಾಗಾಣಿಗೆ, ಹಂಚಿಕೆ ನಡೆಯುವ ಜಾಗಗಗಳ ಗುರುತಿಗೆ ಐಟಿ ಮಾಸ್ಟರ್ ಪ್ಲಾನ್ ಮಾಡಿದೆ. ಚುನಾವಣಾ ವೀಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯಕ್ಕೆ ಶಿಫ್ಟ್ ಆಗಿದ್ದಾರೆ.

  • ಕೊಡಗಿನಲ್ಲಿ 28 ಲಕ್ಷ ಮೌಲ್ಯದ ಮದ್ಯ, 6.31 ಲಕ್ಷ ರೂ. ನಗದು ವಶ

    ಕೊಡಗಿನಲ್ಲಿ 28 ಲಕ್ಷ ಮೌಲ್ಯದ ಮದ್ಯ, 6.31 ಲಕ್ಷ ರೂ. ನಗದು ವಶ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕಡೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.31 ಲಕ್ಷ ರೂ. ನಗದು ಮತ್ತು 28 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

    ಕೊಡಗು ಅಬಕಾರಿ ಇಲಾಖೆಯೂ ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ ಮಹಾರಾಷ್ಟ್ರದ ಮದ್ಯ ವಶ ಪಡಿಸಿಕೊಂಡಿದ್ದಾರೆ. ಮೈಸೂರಿಂದ ವಯನಾಡಿಗೆ ಲಾರಿಯಲ್ಲಿ ಮದ್ಯವನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದ ಮೇರೆಗೆ ಕೊಡಗು ಜಿಲ್ಲೆಯ ಪೆರುಂಬಾಡಿ ಬಳಿ ಕೊಡಗು ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮದ್ಯ ಪತ್ತೆಯಾಗಿದೆ.

    28 ಲಕ್ಷ ಮೌಲ್ಯದ ಮದ್ಯ, ಲಾರಿ ಮತ್ತು ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕುಶಾಲನಗರದಲ್ಲಿ ಕೇರಳ ನೋಂದಣಿಯ ಜೀಪ್‍ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6 ಲಕ್ಷ ನಗದು ಪತ್ತೆಯಾಗಿದೆ.

    ಕೊಪ್ಪ ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸುವಾಗ ಈ ಹಣ ಪತ್ತೆಯಾಗಿದೆ. ಕೇರಳ ಮೂಲದ ಜೀವನ್ ಹಾಗೂ ಸಂತೋಷ್ ಬಳಿ ಹಣ ಪತ್ತೆಯಾಗಿದೆ. ಸದ್ಯಕ್ಕೆ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಫ್ಲೈಯಿಂಗ್ ಸ್ಕ್ವಾಡ್ ಅವರು 6,31,050 ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಜವರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬಿಸಿಲಿನಿಂದ ಹೈರಾಣಾದ ಚುನಾವಣಾ ಸಿಬ್ಬಂದಿ ನೆರವಿಗೆ ಬಂದ ಜಿಲ್ಲಾಡಳಿತ

    ಬಿಸಿಲಿನಿಂದ ಹೈರಾಣಾದ ಚುನಾವಣಾ ಸಿಬ್ಬಂದಿ ನೆರವಿಗೆ ಬಂದ ಜಿಲ್ಲಾಡಳಿತ

    – ವಿಶೇಷ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಧಿಕಾರಿಗೆ ಶ್ಲಾಘನೆ

    ಬಳ್ಳಾರಿ: ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೆ ಬಿಸಿಲಿನ ತಾಪ ಬಲುಜೋರಾಗಿದೆ. ಚುನಾವಣಾ ಸಿಬ್ಬಂದಿ ಸಾಕಪ್ಪ ಸಾಕು ಈ ಬಿಸಿಲು ಎಂದಿದ್ದಾರೆ. ಹೀಗಾಗಿಯೇ ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಸಿಬ್ಬಂದಿಗೆ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಮಾಡಿದೆ.

    ಈಗ ಎಲ್ಲೆಡೆ ದಿನೇ ದಿನೇ ಚುನಾವಣೆ ಬಿಸಿ ಏರುತ್ತಿದೆ. ಆದ್ರೆ ಬಳ್ಳಾರಿಯಲ್ಲಿ ಮಾತ್ರ ಚುನಾವಣಾ ಬಿಸಿಗಿಂತಲೂ ಬಿಸಿಲಿನ ಬಿಸಿ ಜೋರಾಗುತ್ತಿದೆ. ಬಿಸಿಲಿನ ಬೇಗೆಗೆ ಹಗಲಿರುಳು ಕೆಲಸ ಮಾಡೋ ಚುನಾವಣಾ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ. ಸೂರ್ಯನ ಪ್ರಪಾತ ಕಂಡು ಸಾಕಪ್ಪ ಸಾಕು ಈ ಬಿಸಿಲು ಬೇಗೆ ಅಂತಿದ್ದಾರೆ. ಆದ್ರೆ ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಚುನಾವಣಾ ಸಿಬ್ಬಂದಿಗೆ ಬಳ್ಳಾರಿ ಜಿಲ್ಲಾಡಳಿತ ಎಲ್ಲ ಚೆಕ್‍ಪೊಸ್ಟ್ ಗಳಿಗೆ ಏರ್ ಕೂಲರ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಿಬ್ಬಂದಿಯ ನೆರವಿಗೆ ಧಾವಿಸಿದೆ ಎಂದು ಕರ್ತವ್ಯ ನಿರತ ಪೊಲೀಸ್ ಪೇದೆ ಮುದುಕಯ್ಯ ತಿಳಿಸಿದ್ದಾರೆ.

    ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ 40 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪವಿದೆ. ಹಗಲು ಹೊತ್ತಿನಲ್ಲಿ ಹೊರಬರಲಾಗದಷ್ಟು ಬಿಸಿಲಿನ ಬೇಗೆ ಹೆಚ್ಚಳವಾಗಿರುವುದರಿಂದ ಚೆಕ್‍ಪೊಸ್ಟ್ ಗಳಲ್ಲಿ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಹೈರಣಾಗಿ ಹೋಗಿದ್ದಾರೆ. ಹೀಗಾಗಿ ಬಳ್ಳಾರಿ ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್ ವಿಶೇಷ ಕಾಳಜಿ ತೆಗೆದುಕೊಳ್ಳುವ ಮೂಲಕ ಎಲ್ಲ ಚೆಕ್‍ಪೊಸ್ಟ್ ಗಳಿಗೆ ಏರ್ ಕೂಲರ್ ಹಾಗೂ ತಣ್ಣೀರಿನ ಗಡಿಗೆಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಜಿಲ್ಲಾಡಳಿತದ ಈ ವ್ಯವಸ್ಥೆಯಿಂದ ಬಿಸಿಲಿನ ಬೇಗೆ ತಪ್ಪಿಸಿಕೊಳ್ಳಲು ಅನೂಕೂಲವಾಗಿದೆ ಎಂದು ಕರ್ತವ್ಯನಿರತ ಚುನಾವಣಾ ಸಿಬ್ಬಂದಿ ರಾಜಶೇಖರ್ ಹೇಳುತ್ತಾರೆ.

    ಹಗಲು ರಾತ್ರಿಯೆನ್ನದೆ ಚೆಕ್‍ಪೊಸ್ಟ್ ಗಳಲ್ಲಿ ಕರ್ತವ್ಯನಿರ್ವಹಿಸುವ ಸಿಬ್ಬಂದಿಗೆ ಜಿಲ್ಲಾಡಳಿತ ಏರ್ ಕೂಲರ್ ವ್ಯವಸ್ಥೆ ಮಾಡಿರುವುದರಿಂದ ಸಿಬ್ಬಂದಿಗೆ ಖುಷಿ ತಂದಿದೆ. ಹೀಗಾಗಿ ಬಳ್ಳಾರಿ ಜಿಲ್ಲಾಡಳಿತದ ಈ ಕಾರ್ಯಕ್ಕೆ ಚುನಾವಣಾ ಸಿಬ್ಬಂದಿ ಶಾಘ್ಲನೆ ವ್ಯಕ್ತಪಡಿಸುವ ಮೂಲಕ ಹುರುಪಿನಿಂದ ಚುನಾವಣಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.

  • ಚುನಾವಣಾ ಆಯೋಗದಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ!

    ಚುನಾವಣಾ ಆಯೋಗದಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ!

    ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸಹೋದರರ ವಿರುದ್ಧ ಈ ಹಿಂದೆ ಆಂಬುಲೆನ್ಸ್ ನಲ್ಲಿ ಹಣ ಸಾಗಾಟ ಮಾಡಿದ ಆರೋಪ ಕೇಳಿ ಬಂದಿತ್ತು. ಹೀಗಾಗಿಯೇ ಈ ಬಾರಿಯ ಚುನಾವಣೆಯಲ್ಲಿ ಚುನಾವಣಾ ಆಯೋಗ ರೆಡ್ಡಿ- ರಾಮುಲು ನಡೆಯ ಮೇಲೆ ಹದ್ದಿನ ಕಣ್ಣಿಟ್ಟಿದೆ.

    ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀರಾಮುಲು ಅವರನ್ನು ಗೆಲ್ಲಿಸುವ ಸಂಪೂರ್ಣ ಹೊಣೆ ಹೊತ್ತಿರುವ ಜನಾರ್ದನ ರೆಡ್ಡಿ, ಚುನಾವಣೆಯಲ್ಲಿ ಅಕ್ರಮ ಮಾಡದಂತೆ ಚುನಾವಣಾ ಆಯೋಗ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಇದಕ್ಕಾಗಿಯೇ ರೆಡ್ಡಿ ವಾಸವಿರುವ ಮೊಳಕಾಲ್ಮೂರು ತಾಲೂಕಿನ ಮೇಗಲಹಟ್ಟಿ ಮನೆಯ ಮುಂದೆಯೇ ಇದೀಗ ಚೆಕ್ ಪೋಸ್ಟ್ ನಿರ್ಮಿಸಿದೆ.

    ಈ ಮೂಲಕ ಜನಾರ್ದನ ರೆಡ್ಡಿ ಮನೆಗೆ ಬಂದು ಹೋಗುವ ಎಲ್ಲ ವಾಹನಗಳನ್ನು ಚುನಾವಣಾಧಿಕಾರಿಗಳು ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಅಲ್ಲದೇ ರೆಡ್ಡಿ ಮನೆಗೆ ಬಂದೂ ಹೋಗುವ ವ್ಯಕ್ತಿಗಳ ಮೇಲೂ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ನಡೆಯದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.

    ಸದ್ಯ ರೆಡ್ಡಿಗೆ ಇದೀಗ ಮನೆಯ ಮುಂದೆಯೇ ಚೆಕ್ ಪೋಸ್ಟ್ ನಿರ್ಮಿಸಿರುವುದು ದೊಡ್ಡ ತಲೆನೋವಾಗಿ ಪರಿಗಣಿಸಿದೆ.