Tag: chatting

  • ಚಾಟಿಂಗ್ ಮಾಡ್ತಿದ್ದಾಗ ನಿರಂತರವಾಗಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನಿಗೆ ಗುಂಡು ಹಾರಿಸ್ದ

    ಚಾಟಿಂಗ್ ಮಾಡ್ತಿದ್ದಾಗ ನಿರಂತರವಾಗಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನಿಗೆ ಗುಂಡು ಹಾರಿಸ್ದ

    – ರಾತ್ರಿ ತಡವಾಗಿದ್ರೂ ಸ್ನೇಹಿತರೊಂದಿಗೆ ಚಾಟಿಂಗ್
    – ಕಾಡಿನಲ್ಲಿ ಆರೋಪಿ ಮಗ ಅರೆಸ್ಟ್

    ಪಾಟ್ನಾ: ಯುವಕನೊಬ್ಬ ಸ್ನೇಹಿತರೊಂದಿಗೆ ಚಾಟಿಂಗ್ ಮಾಡುತ್ತಿದ್ದಾಗ ಹಲವಾರು ಬಾರಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನ ಮೇಲೆ ಗುಂಡು ಹಾರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಪಾಟ್ನಾದ ಮರಂಚಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೊಪಿಯನ್ನು ಅಂಗಾದ್ ಯಾದವ್ (20) ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯನ್ನು ಗನ್ ಸಮೇತ ಪೊಲೀಸ್ ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಯಾದವ್ ನಿವಾಸದ ಹೊರಗೆ ತನ್ನ ಕೆಲ ಸ್ನೇಹಿತರೊಂದಿಗೆ ನಿರಂತರವಾಗಿ ಮೊಬೈಲಿನಲ್ಲಿ ಚಾಟಿಂಗ್ ಮಾಡುತ್ತಿದ್ದ. ರಾತ್ರಿ ತಡವಾಗಿದ್ದರಿಂದ ಯಾದವ್ ತಾಯಿ ಮಂಜು ದೇವಿ ಒಳಗೆ ಬಂದು ಊಟ ಮಾಡುವಂತೆ ಹಲವಾರು ಬಾರಿ ಕರೆದಿದ್ದಾರೆ. ಆದರೆ ಆರೋಪಿ ಯಾದವ್ ಪ್ರತಿ ಬಾರಿಯೂ ತಾಯಿಯ ಮಾತನ್ನು ನಿರ್ಲಕ್ಷಿಸಿದನು. ಕೊನೆಗೆ ಮಂಜು ದೇವಿ ತನ್ನ ಮಗನ ಬಳಿಗೆ ಹೋಗಿ ಮತ್ತೆ ಊಟಕ್ಕೆ ಬರುವಂತೆ ಕರೆದು ಮನೆಯೊಳಗೆ ಬರುತ್ತಿದ್ದರು.

    ಆಗ ಆರೋಪಿ ಸ್ನೇಹಿತರೊಂದಿಗೆ ಮಾತನಾಡುವಾಗ ಅಡ್ಡಿಪಡಿಸಿದ ಕಾರಣಕ್ಕಾಗಿ ಕೋಪದಿಂದ ತನ್ನ ತಾಯಿಗೆ ಗುಂಡು ಹಾರಿಸಿದ್ದಾನೆ. ತಕ್ಷಣ ಮಂಜು ದೇವಿ ಸ್ಥಳದಲ್ಲೇ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಮಂಜು ದೇವಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸ್ ಅನಿಲ್ ಕುಮಾರ್ ತಿಳಿಸಿದ್ದಾರೆ.

    ಈ ಘಟನೆಗೆ ಮಂಜು ದೇವಿ ಸಹೋದರಿ ಇಂದೂ ದೇವಿ ಸಾಕ್ಷಿಯಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇಂದೂ ದೇವಿಯ ಹೇಳಿಕೆಯ ಆಧಾರದ ಮೇಲೆ ಅಂಗದ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಂತರ ಯಾದವ್‍ನನ್ನು ನಿವಾಸದ ಹಿಂದಿನ ಅರಣ್ಯದಲ್ಲಿ ಬಂಧಿಸಲಾಗಿದೆ. ಆರೋಪಿ ಬಂಧನದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಕೊನೆಗೆ ಪೊಲೀಸರು ಆರೋಪಿಯನ್ನು ಪಿಸ್ತೂಲ್ ಸಮೇತ ಬಂಧಿಸಿದ್ದಾರೆ.

    ಆರೋಪಿ ಯಾದವ್ ತಂದೆ ರಂಬಾಬು ಯಾದವ್ ಮತ್ತು ಅವರ ಇಬ್ಬರು ಹಿರಿಯ ಸಹೋದರರು ಪಂಜಾಬ್‍ನಲ್ಲಿ ದೈನಂದಿನ ಕೂಲಿ ಕೆಲಸ ಮಾಡುತ್ತಾರೆ. ಆರು ತಿಂಗಳ ಹಿಂದೆ 7,500 ರೂ. ಕೊಟ್ಟು ಪಿಸ್ತೂಲ್ ಖರೀದಿಸಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಗುರುವಾರ ಕೋವಿಡ್ -19 ಪರೀಕ್ಷೆಯ ನಂತರ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.

  • ಮದ್ವೆ ಆಗೋಣ ಅಂತ ಲಕ್ಷ ಲಕ್ಷ ದೋಚಿದ ಇಟಲಿ ಬ್ಯೂಟಿ-ಸುಂದರಿಯ ಚಾಟಿಂಗ್ ಚೀಟಿಂಗ್ ಕಥೆ

    ಮದ್ವೆ ಆಗೋಣ ಅಂತ ಲಕ್ಷ ಲಕ್ಷ ದೋಚಿದ ಇಟಲಿ ಬ್ಯೂಟಿ-ಸುಂದರಿಯ ಚಾಟಿಂಗ್ ಚೀಟಿಂಗ್ ಕಥೆ

    -ಬ್ಯೂಟಿ ಮೋಸದಾಟಕ್ಕೆ ಸಾಲಗಾರನಾದ ಹಳ್ಳಿ ಹೈದ

    ಚಿಕ್ಕಬಳ್ಳಾಪುರ: ಮ್ಯಾಟ್ರಿಮೋನಿಯಲ್ ನಲ್ಲಿ ವಧು-ವರ ಹುಡುಕಾಟದಲ್ಲಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೀವು ನೋಡಲೇಬೇಕು. ಇಟಲಿ ಬ್ಯೂಟಿಯ ಮದುವೆ ಆಗಲು ಹೊರಟ ಭಾರತದ ಹಳ್ಳಿ ಹೈದನೋರ್ವ ಲಕ್ಷ ಲಕ್ಷ ಪಂಗನಾಮ ಹಾಕಿಸಿಕೊಂಡು ಸಾಲಗಾರನಾಗಿ ಈಗ ಪೊಲೀಸ್ ಠಾಣೆ ಅಲೆದಾಡುವಂತಾಗಿದೆ.

    ವಿಚ್ಚೇಧಿತನಾದ ಚಿಕ್ಕಬಳ್ಳಾಪುರ ನಗರದ ನಿವಾಸಿ ಮುನಿರಾಜು ಮೋಸಕ್ಕೊಳಗಾದ ವ್ಯಕ್ತಿ. ಮುನಿರಾಜು ಮದುವೆ ಆಗಬೇಕು ಎಂದು ಕನ್ನಡ ಮ್ಯಾಟ್ರಿಮೋನಿಯಲ್ ನಲ್ಲಿ ತಮ್ಮ ಫ್ರೊಫೈಲ್ ಕ್ರಿಯೇಟ್ ಮಾಡಿ ವಧುವಿನ ಹುಡಕಾಟದಲ್ಲಿ ತೊಡಗಿದ್ದರು. ಒಂದು ದಿನ ಇಂಟರ್ ನ್ಯಾಷನಲ್ ನಂಬರ್ ನಿಂದ ವಾಟ್ಸಾಪ್ ಮುಖಾಂತರ ಚಾಟ್ ಮಾಡಿದ ಬ್ಯೂಟಿ ನಾನು ಮ್ಯಾಟ್ರಿಮೋನಿಯಲ್‍ನಲ್ಲಿ ನಿಮ್ಮ ಪ್ರೊಫೈಲ್ ನೋಡಿದೆ. ನಿಮ್ಮನ್ನ ಮದುವೆ ಆಗಬೇಕು ಅಂತಿದ್ದೀನಿ ಅಂದಿದ್ದಾಳೆ.

    ಬ್ಯೂಟಿಯ ಪೋಟೋ ನೋಡಿ ಆಕಾಶಕ್ಕೆ ಮೂರೇ ಗೇಣು ಅಂತ ಕುಣಿದಾಡಿದ ಮುನಿರಾಜು ಬ್ಯೂಟಿ ಜೊತೆ ಚಾಟಿಂಗ್ ಗೆ ಇಳಿದಿದ್ದಾರೆ. ಅತ್ತ ಕಡೆಯಿಂದ ವಾಟ್ಸಪ್ ಮುಖಾಂತರ ಕರೆ ಮಾಡಿದ ಬ್ಯೂಟಿ, ನಾನು ಭಾರತದವಳು ಸದ್ಯ ಇಟಲಿಯಲ್ಲಿ ಪೆಪ್ಸಿಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಮನೆಯವರಿಗೆಲ್ಲಾ ನಿಮ್ಮ ಪ್ರೊಫೈಲ್ ತೋರಿಸಿದ್ದೇನೆ ಭಾರತಕ್ಕೆ ಬಂದು ನಿಮ್ಮನ್ನ ಮದುವೆಯಾಗ್ತೀನಿ ಅಂದಿದ್ದಾಳೆ. ಮೊದೆಲೆರೆಡು ತಿಂಗಳು ಇದೇ ರೀತಿ ಚಾಟಿಂಗ್, ಇಂಟರ್ನೆಟ್ ಕಾಲ್ ಮಾಡಿದ ಬ್ಯೂಟಿ, ನಾನು ಇಂಡಿಯಾಗೆ ಬರ್ತೀನಿ ಇಟಲಿಯಿಂದ ಟಿಕೆಟ್ ಬುಕ್ ಮಾಡಬೇಕು ಹಣ ಕಳಿಸು ಎಂದು ದುಡ್ಡು ಪಡೆದುಕೊಂಡಿದ್ದಾಳೆ.

    ಇಟಲಿಯಿಂದ ದೆಹಲಿಗೆ ಬಂದಿದ್ದೀನಿ. ನನ್ನ ಬಳಿ ಇಟಲಿಯ ಒಂದೂವರೆ ಕೋಟಿ ಕರೆನ್ಸಿ ಇದೆ. ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಹಿಡಿದುಕೊಂಡಿದ್ದಾರೆ. ಅವರಿಗೆ ಟ್ಯಾಕ್ಸ್ ಪೇ ಮಾಡಿದರೆ ಎಲ್ಲಾ ಹಣ ವಾಪಾಸ್ ಮಾಡುತ್ತಾರೆ. ಆ ಹಣ ನಿನಗೆ ಕೊಡ್ತೀನಿ ಅಂತ ಹೇಳಿ ಹಣ ಹಾಕಿಸಿಕೊಂಡಿದ್ದಾಳೆ. ಹೀಗೆ ಒಂದಲ್ಲ ಒಂದು ನೆಪ ಹೇಳಿ ಮುನಿರಾಜು ಬಳಿ ಬರೋಬ್ಬರಿ 27 ಲಕ್ಷ ರೂಪಾಯಿ ಹಣ ಪಡೆದ ಬ್ಯೂಟಿ ಕೊನೆಗೆ ಫೋನ್ ಸ್ವಿಚ್ ಆಫ್ ಮಾಡಿ ಸುಮ್ಮನಾಗಿದ್ದಾಳೆ.

    ಫೋನ್ ಸ್ವಿಚ್ಛ್ ಅಫ್ ಆದರಿಂದ ಅನುಮಾನಗೊಂಡ ಮುನಿರಾಜು ಮೊದಲು ಬ್ಯಾಂಕಿಗೆ ಹೋಗಿ ಹಣ ಹಾಕಿದ ಖಾತೆಗಳನ್ನು ಪರೀಶೀಲನೆ ಮಾಡಿಸಿದ್ದಾರೆ. ಆಗ ಅವೆಲ್ಲವೂ ಫೇಕ್ ಅಕೌಂಟ್ಸ್ ಅಂತ ಗೊತ್ತಾಗಿದೆ. ಹೀಗಾಗಿ ಸುಂದರಿ ಸಿಗ್ತಾಳೆ ಮದುವೆ ಅಗೋಣ ಅಂತ ಒಂದಲ್ಲ ಎರಡಲ್ಲ ಅಂತ ಸಾಲ ಸೋಲ ಮಾಡಿ ಸರಿಸುಮಾರು 30 ಲಕ್ಷ ಸುರಿದ ಮುನಿರಾಜು ಈಗ ಚಿಕ್ಕಬಳ್ಳಾಪುರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.

    ಒಟ್ಟಿನಲ್ಲಿ ಇಟಲಿ ಸುಂದರಿಯ ಸೌಂದರ್ಯಕ್ಕೆ ಮರುಳಾದ ಹಳ್ಳಿ ಹೈದ ಈಗ ಸಾಲದ ಸುಳಿಗೆ ಸಿಲುಕಿದ್ದಾರೆ. ಸ್ವಾಮಿ ನನ್ನ ದುಡ್ಡು ವಾಪಾಸ್ ಕೊಡಿಸಿ ಅಂತ ಪೊಲೀಸರ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ.

  • Facebookನಲ್ಲಿ ಸಮಾಜಸೇವಕಿಗೆ ಅವಾಚ್ಯ ಪದಗಳಿಂದ ನಿಂದನೆ-ಖಾಸಗಿ ಕಂಪೆನಿ ನೌಕರನ ಬಂಧನ!

    Facebookನಲ್ಲಿ ಸಮಾಜಸೇವಕಿಗೆ ಅವಾಚ್ಯ ಪದಗಳಿಂದ ನಿಂದನೆ-ಖಾಸಗಿ ಕಂಪೆನಿ ನೌಕರನ ಬಂಧನ!

    ಮೈಸೂರು: ಫೇಸ್‍ಬುಕ್ ನಲ್ಲಿ ಸಮಾಜ ಸೇವಕಿವೊಬ್ಬರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಖಾಸಗಿ ಕಂಪೆನಿ ನೌಕರನನ್ನು ಮೈಸೂರಿನ ಕೆ.ಆರ್. ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಹೂಟಗಳ್ಳಿ ಕೈಗಾರಿಕಾ ಬಡಾವಣೆಯ ಡೆಟಾಲ್ ಕಂಪೆನಿಯ ನೌಕರ ರವಿ.ಕೆ.ಗೌಡ ಬಂಧಿತ ಆರೋಪಿ. ರವಿ ಮೂಲತಃ ಹುಣಸೂರು ತಾಲೂಕಿನ ಕಲ್ಕುಣಿಕೆ ಗ್ರಾಮದವನಾಗಿದ್ದು, ಮೈಸೂರಿನ ಹೊಸಬಂಡೀಕೇರಿಯ ಹಾಗೂ ಸಮಾಜಸೇವಕಿಯಾಗಿರುವ ಚೈತ್ರ ಎಂಬ ಯುವತಿಗೆ ಫೇಸ್ ಬುಕ್‍ನಲ್ಲಿ ಅಶ್ಲೀಲ ಪದಗಳನ್ನು ಬಳಸಿ ಚಾಟ್ ಮಾಡಿದ್ದಾನೆ. ಈ ಮೊದಲು ರವಿ ಹಾಗೂ ಚೈತ್ರ ಒಂದೂವರೆ ವರ್ಷದಿಂದ ಫೇಸ್ ಬುಕ್ ನಲ್ಲಿ ಪರಿಚಿತರಾಗಿದ್ದರು.

    ಕೆಲ ದಿನಗಳ ಹಿಂದೆ ಚೈತ್ರ ಹಾಕಿದ ಪೋಸ್ಟ್ ಒಂದಕ್ಕೆ ರವಿ ಗೌಡ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ. ಅಲ್ಲಿಂದ ಶುರುವಾದ ಇಬ್ಬರ ಸಂಭಾಷಣೆ ಹಾದಿ ತಪ್ಪಿದ್ದು, ಚೈತ್ರಾಗೆ ಅಶ್ಲೀಲವಾಗಿ ಕಮೆಂಟ್‍ಗಳನ್ನು ಹಾಕಿದ್ದಾನೆ. ಇದರಿಂದ ನೊಂದ ಯುವತಿ ನಗರದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಸಭ್ಯವಾಗಿ ಯುವತಿಯೊಂದಿಗೆ ಜಾಲತಾಣಗಳಲ್ಲಿ ವರ್ತಿಸಿದ ಹಿನ್ನೆಲೆಯಲ್ಲಿ ರವಿ ಗೌಡನನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾಟಿಂಗ್ ಮಾಡ್ಬೇಡ ಅಂದಿದ್ದಕ್ಕೆ ಮನೆ ಬಿಟ್ಟು ಹೋದ ಎಂಜಿನಿಯರಿಂಗ್ ವಿದ್ಯಾರ್ಥಿ!

    ಚಾಟಿಂಗ್ ಮಾಡ್ಬೇಡ ಅಂದಿದ್ದಕ್ಕೆ ಮನೆ ಬಿಟ್ಟು ಹೋದ ಎಂಜಿನಿಯರಿಂಗ್ ವಿದ್ಯಾರ್ಥಿ!

    ಬೆಂಗಳೂರು: ವಾಟ್ಸಾಪ್ ಚಾಟಿಂಗ್ ಬಿಟ್ಟು ಓದಿಕೋ ಎಂದು ಹೇಳಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋಗಿದ್ದಾನೆ.

    ಪ್ರಶಾಂತ್ ಗೌಡ ಮನೆ ಬಿಟ್ಟು ಹೋದ ಯುವಕ. ನಗರದ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ದ್ವಿತೀಯ ವರ್ಷ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಶಾಂತ್, ಬೆಂಗಳೂರಿನ ವಿಜಯನಗರ ತಮ್ಮ ಮಾವನ ಮನೆಯಲ್ಲಿ ವಾಸವಿದ್ದನು.

    ಇಂಟರ್ನಲ್ ಎಕ್ಸಾಂ ಇದೆ ವಾಟ್ಸಾಪ್ ಚಾಟಿಂಗ್ ಬಿಟ್ಟು ಓದಿಕೋ ಎಂದು ಮಾವ ಸ್ವಾಮಿ ಬುದ್ಧಿಹೇಳಿದ್ದಕ್ಕೆ ಪ್ರಶಾಂತ್ ಮರುದಿನವೇ ಹಿರಿಯೂರಿಗೆ ಬರುವುದಾಗಿ ತಂದೆ ತಾಯಿಗೆ ಫೋನ್ ಮಾಡಿ ತಿಳಿಸಿದ್ದಾನೆ. ಬಳಿಕ ತನ್ನ ಫೇಸ್ ಬುಕ್ ಅಕೌಂಟ್, ಗೂಗಲ್ ಅಕೌಂಟ್, ವಾಟ್ಸಾಪ್, ಗ್ಯಾಲರಿಯಲ್ಲಿದ್ದ ಫೊಟೋಗಳನ್ನ ಡಿಲೀಟ್ ಮಾಡಿ ಮನೆ ಬಿಟ್ಟು ಹೋಗಿದ್ದಾನೆ.

    ನಾಗರಾಜ್, ಹಾಗೂ ಚಿಂತಾಮಣಿ ದಂಪತಿಯ ಒಬ್ಬನೇ ಮಗನಾಗಿದ್ದ ಪ್ರಶಾಂತ್ ಹತ್ತು ದಿನದಿಂದ ಕಣ್ಮರೆಯಾಗಿದ್ದು. ಪ್ರಶಾಂತ್ ತಂದೆ-ತಾಯಿ ಆತನಿಗೆ ಕಣ್ಣೀರಿಟ್ಟು ಪರಿತಪಿಸುತ್ತಿದ್ದಾರೆ.

    ಪ್ರಶಾಂತ್ ತಂದೆ ತಾಯಿ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಗನಿಗಾಗಿ ಹುಡುಕಾಡುತ್ತಿದ್ದಾರೆ. ಮಗ ಬಾರದಿದ್ದರೆ ನಾನು ಬದುಕುವುದಿಲ್ಲ ಎಂದು ಪ್ರಶಾಂತ್ ತಾಯಿ ಚಿಂತಾಮಣಿ ಕಣ್ಣೀರು ಹಾಕುತ್ತಿದ್ದಾರೆ.

    ಚೆನ್ನಾಗಿ ಓದುತ್ತಿದ್ದ ಪ್ರಶಾಂತ ಹೀಗೆ ಕಣ್ಮರೆಯಾಗಿರುವುದು ಹಲವು ಅನುಮಾನಕ್ಕೆ ಕಾರಣ ವಾಗಿದೆ. ಕಾಲೇಜಿನಲ್ಲಿ ವಿಚಾರಿಸಿದರೆ ಒಳ್ಳೇ ಹುಡುಗ ಎಂದು ಹೇಳುತ್ತಾರೆ. ಸ್ನೇಹಿತರ ಬಳಗದಲ್ಲೂ ಒಳ್ಳೆಯ ಹುಡುಗ ಎನಿಸಿಕೊಂಡಿದ್ದ ಎಂದು ಪ್ರಶಾಂತ್ ತಾಯಿ ತಿಳಿಸಿದ್ದಾರೆ. ಈ ಬಗ್ಗೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

  • ಕಲ್ಲಿನಿಂದ ತಲೆಗೆ ಹೊಡೆದು 500 ಅಡಿ ಆಳದ ಕಂದಕಕ್ಕೆ ನೂಕಿದ್ರು- 5 ದಿನಗಳ ನಂತರ ಜೀವಂತವಾಗಿ ಸಿಕ್ಕ ಯುವಕ

    ಕಲ್ಲಿನಿಂದ ತಲೆಗೆ ಹೊಡೆದು 500 ಅಡಿ ಆಳದ ಕಂದಕಕ್ಕೆ ನೂಕಿದ್ರು- 5 ದಿನಗಳ ನಂತರ ಜೀವಂತವಾಗಿ ಸಿಕ್ಕ ಯುವಕ

    ಇಂದೋರ್: ಅಪಹರಣಕ್ಕೊಳಗಾಗಿ, ತಲೆಗೆ ಕಲ್ಲಿನಿಂದ ಹೊಡೆದು 500 ಅಡಿ ಆಳದ ಕಂದಕಕ್ಕೆ ತಳ್ಳಿದರೂ 5 ದಿನಗಳ ನಂತರ ಪವಾಡಸದೃಶವಾಗಿ ಯುವಕ ಜೀವಂತವಾಗಿ ಸಿಕ್ಕಿರುವ ಘಟನೆ ಇಂದೋರ್‍ನಲ್ಲಿ ನಡೆದಿದೆ.

    ಸಾಗರ್ ಜಿಲ್ಲೆಯ ಶಾಹ್‍ಘರ್‍ನವನಾದ ಮೃದುಲ್ ಅಲಿಯಾಸ್ ಮನು ಭಲ್ಲಾ(20) ಅಪಹರಣಕ್ಕೊಳಗಾದ ಯುವಕ. ಸದ್ಯ ಇಂದೋರ್‍ನ ಬಾಂಬೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.

    ಪೊಲೀಸರ ಪ್ರಕಾರ ಮೃದುಲ್ ಇಂದೋರ್‍ನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ. ಇಲ್ಲಿನ ಪರ್ದೇಶಿಪುರದ ಕ್ಲರ್ಕ್ ಕಾಲೋನಿಯಲ್ಲಿ ತನ್ನ ಸ್ನೇಹಿತ ಸೌರಭ್ ಸೇನ್‍ನೊಂದಿಗೆ ಬಾಡಿಗೆ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಿದ್ದ. ಜನವರಿ 7 ರಂದು ಮೃದುಲ್ ಕಾಣೆಯಾಗಿದ್ದ. ಸೋಮವಾರದಂದು ಸೌರಭ್ ಹಾಗೂ ಆತನ ಸ್ನೇಹಿತರು ಮೃದುಲ್ ಕಾಣೆಯಾಗಿರುವ ಬಗ್ಗೆ ತಿಳಿಸಲು ಪೊಲೀಸರ ಬಳಿ ಹೋದಾಗ ಅವರು ಈ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದ್ರೆ ಮೃದುಲ್ ತಂದೆ ಮೋಹಿತ್ ಭಲ್ಲಾ ಮರುದಿನ ಸಾಗರ್‍ನಿಂದ ಬಂದ ಬಳಿಕ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ರು.

    ಸಿಸಿಟಿವಿ ದೃಶ್ಯವಾಳಿ, ಕಾಲ್ ಡೀಟೇಲ್ಸ್ ಹಾಗೂ ಕೆಲವು ಸಾಕ್ಷ್ಯಾಧಾರದ ಮೇಲೆ ಪೊಲೀಸರು ಆಕಾಶ್ ರತ್ನಾಕರ್ ಹಾಗೂ ಆತನ ಇಬ್ಬರು ಸಹಚರರಾದ ರೋಹಿತ್ ಅಲಿಯಾಸ್ ಪಿಯೂಶ್ ಹಾಗೂ ವಿಜಯ್‍ನನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ 20 ವರ್ಷ ವಯಸ್ಸಿನವರಾಗಿದ್ದು ಇಂದೋರ್‍ನವರಾಗಿದ್ದಾರೆ. ಆರೋಪಿ ಆಕಾಶ್ ವೈದ್ಯರೊಬ್ಬರ ಚಾಲಕನಾಗಿ ಕೆಲಸ ಮಾಡುತ್ತಿದ್ದು, ರೋಹಿಲ್ ಕಬ್ಬಿಣ ಫ್ಯಾಬ್ರಿಕೇಟರ್ ಆಗಿ ಹಾಗೂ ವಿಜಯ್ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.

    ಕಿಡ್ನಾಪ್ ಮಾಡಿದ್ದು ಯಾಕೆ?: ಮೃದುಲ್ ಮನೆ ಬಳಿ ವಾಸಿಸುತ್ತಿದ್ದ ಯುವತಿಯೊಬ್ಬಳನ್ನ ಆಕಾಶ್ ಪ್ರೀತಿಸುತ್ತಿದ್ದು. ಆಕೆಯನ್ನ ಸೆಳೆಯಲು ಮೃದುಲ್ ಪ್ರಯತ್ನಿಸುತ್ತಿದ್ದಾನೆ ಎಂದು ಆಕಾಶ್ ಅನುಮಾನಿಸಿದ್ದ. ಅಲ್ಲದೆ ಮೃದುಲ್ ಮತ್ತು ಯುವತಿ ತಡರಾತ್ರಿಯ ವೇಳೆ ಚಟ್ ಮಾಡುತ್ತಿದ್ದರೆಂದು ಮೃದುಲ್‍ನನ್ನು ಕೊಲ್ಲಲು ಆಕಾಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಪಿತೂರಿ ಮಾಡಿದ್ದ. ಭಾನುವಾರದಂದು ಆಕಾಶ್ ತನ್ನ ಅಣ್ಣನ ಕಾರ್ ತೆಗೆದುಕೊಂಡು ಹೋಗಿ ಯುವತಿಯ ಅಂಕಲ್ ನಿನ್ನ ಜೊತೆ ಮತಾಡಬೇಕೆಂತೆ ಎಂದು ಹೇಳಿ ಮೃದುಲ್‍ನನ್ನು ಕರೆದುಕೊಂಡು ಹೋಗಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.

    ಮೃದುಲ್‍ನನ್ನು ಕಾರಿನಲ್ಲಿ ಕೂರಿಸಿಕೊಂಡ ತಂಡ ಇಂದೋರ್‍ನಿಂದ 35 ಕಿ.ಮೀ ದೂರದ ಪೆದ್ಮಿ- ಉದಯ್‍ನಗರ್ ರಸ್ತೆಯಲ್ಲಿನ ಮೌರಾ ಘಾಟ್ ಹತ್ತಿರದ ಕಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮೃದುಲ್‍ಗೆ ಥಳಿಸಿ, ಆತನ ತಲೆಗೆ ಕಲ್ಲಿನಿಂದ ಹೊಡೆದು ನಂತರ ಆತನ್ನನ್ನು ಕಟ್ಟಿದ್ದಾರೆ. ಈ ವೇಳೆ ಮೃದುಲ್ ಸತ್ತಿದ್ದಾನೆ ಎಂದು ತಿಳಿದಿದ್ದ ಅವರು, ಆಳವಾದ ಕಂದಕಕ್ಕೆ ಮೃದುಲ್‍ನನ್ನು ಎಸೆದಿದ್ದಾರೆ.

    ಪೊಲೀಸರು ಮೃದುಲ್‍ಗಾಗಿ ಶೋಧ ಕಾರ್ಯ ನಡೆಸಿದಾಗ 5 ದಿನಗಳ ನಂತರವೂ ಕಾಡಿನಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾನೆ. ಕಿಡ್ನಾಪರ್‍ಗಳು ತಾವು ಮೃದುಲ್‍ನನ್ನು ಕೊಲೆ ಮಾಡಿದ್ದಾಗಿ ಹೇಳಿದ್ರು ಎಂದು ಎಎಸ್‍ಪಿ ಪ್ರಶಾಂತ್ ಚೌಬೆ ಹೇಳಿದ್ದಾರೆ.

    ಮೃದುಲ್‍ನನ್ನು ಪರೀಕ್ಷೆ ಮಾಡಿದ ವೈದ್ಯರು ಆತನ ನಾಡಿಬಡಿತ 46ಕ್ಕೆ ಕುಸಿದಿದ್ದು, ಹೈಪೋಥರ್ಮಿಯಾದಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದರು. ಆತನ ದೇಹದಲ್ಲಿ ಗ್ಲೂಕೋಸ್ ಅಂಶ ಕಡಿಮೆಯಾಗಿದ್ದು, ಆತ ಬದುಕಿರೋದೇ ಒಂದು ಪವಾಡ ಎಂದು ವೈದ್ಯರಾದ ರವಿ ಬಗೇಲ್ ಹೇಳಿದ್ದಾರೆ.

    ನನ್ನ ಮಗ ಸತ್ತಿದ್ದಾನೆಂದು ತಿಳಿದು ಎಲ್ಲಾ ನಂಬಿಕೆ ಕಳೆದುಕೊಂಡಿದ್ದೆ. ಇಂದೋರ್‍ನ ಮನೆಗೆ ಬಂದ ಸಂಬಂಧಿಕರಿಗೂ ಹೀಗೆ ಹೇಳಿದ್ದೆ. ಈಗ ಆತ ಬದುಕಿರೋದು ದೇವರ ದಯೆ ಎಂದು ಮೃದುಲ್ ತಂದೆ ಹೇಳಿದ್ದಾರೆ.