Tag: charge sheet

  • ಚಾರ್ಜ್ ಶೀಟ್ ನಲ್ಲಿ ರಮ್ಯಾ ಹೆಸರು !

    ಚಾರ್ಜ್ ಶೀಟ್ ನಲ್ಲಿ ರಮ್ಯಾ ಹೆಸರು !

    – ಮತ್ತೊಂದು ಸಂಕಷ್ಟದಲ್ಲಿ ಸ್ಯಾಂಡಲ್‍ವುಡ್ ಪದ್ಮಾವತಿ

    ಬೆಂಗಳೂರು: ಮಾಜಿ ಸಂಸದೆ ಮತ್ತು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ನಟಿ ರಮ್ಯಾ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.

    ಕಾಂಗ್ರೆಸ್ ಐಟಿ ಸೆಲ್ ನಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಸಂತ್ರಸ್ತೆ ಮಹಿಳೆಗೆ ಐಟಿ ಸೆಲ್ ಮುಖ್ಯಸ್ಥೆ ರಮ್ಯಾರಿಂದ ನಿಂದನೆ ಆಗಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಈಗ ರಮ್ಯಾ ವಿರುದ್ಧ ದೂರುದಾರೆ ಗಂಭೀರ ಆರೋಪ ಮಾಡುತ್ತಿದ್ದಾರೆ.

    ದೂರು ಕೊಟ್ಟರೂ ಲೈಂಗಿಕ ಕಿರುಕುಳ ನೀಡಿದ್ದ ಪಟ್ನಾಯಕ್ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಆದರೆ ರಮ್ಯಾ ಅವರು ನನ್ನನ್ನೇ ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ಲೈಂಗಿಕ ಕಿರುಕುಳ ಕೊಟ್ಟ ಐಟಿ ಸೆಲ್ ಸದಸ್ಯ ಚಿರಾಗ್ ಪಟ್ನಾಯಕ್ ಪರವೇ ರಮ್ಯಾ ನಿಂತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸುತ್ತಿದ್ದಾರೆ.

    ಸದ್ಯ ಸಂತ್ರಸ್ತೆಯ ಆರೋಪದ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ನಲ್ಲಿ ರಮ್ಯಾ ಹೆಸರು ಉಲ್ಲೇಖವಾಗಿದೆ. ಐಟಿ ಸೆಲ್ ಸದಸ್ಯೆ 2013 ಏಪ್ರಿಲ್ 4ರಿಂದ ಮೇ 23ರವರೆಗೆ ಐಟಿ ಸೆಲ್ ಸದಸ್ಯ ಚಿರಾಗ್ ಪಟ್ನಾಯಕ್ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.

    ಈ ಹಿಂದೆ ಕೂಡ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ನಿಂದ ಪಕ್ಷಕ್ಕೆ ಮುಜುಗರವಾದ ಹಿನ್ನೆಲೆಯಲ್ಲಿ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹುದ್ದೆಯಿಂದ ಕಿಕ್‍ಔಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಇದಲ್ಲದೇ ರಾಹುಲ್ ಗಾಂಧಿಯವರ ಟ್ವೀಟ್ ಹಾಗೂ ಸಾರ್ವಜನಿಕ ಭಾಷಣಗಳ ಉಸ್ತುವಾರಿಗಳಿಂದಲೂ ಅವರಿಗೆ ಕೋಕ್ ನೀಡಲಾಗಿದೆ ಎಂದು ವರದಿಯಾಗಿತ್ತು.

    ಈ ಸುದ್ದಿಗೆ ಪೂರಕ ಎಂಬಂತೆ ರಮ್ಯಾ ಅವರು ಈ ಹಿಂದೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ, ಸಂಸದೆ ಎಂದು ಬರೆದುಕೊಂಡಿದ್ದರು. ಆದರೆ ಈಗ ಈ ಎಲ್ಲ ಮಾಹಿತಿಗಳನ್ನು ಡಿಲೀಟ್ ಮಾಡಿದ್ದಾರೆ.

    ಏನಿದು ಟ್ವೀಟ್?
    ರಫೇಲ್ ಒಪ್ಪಂದ ಕುರಿತು ರಮ್ಯಾ ಸೆಪ್ಟೆಂಬರ್ 24 ರಂದು ಮೋದಿ ಅವರ ಮೇಣದ ಪ್ರತಿಮೆಯ ಫೋಟೋ ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ಮೋದಿ ಸ್ವತಃ ತಮ್ಮ ಪ್ರತಿಮೆ ಮೇಲೆ ಕಳ್ಳ ಎಂದು ಬರೆಯುವಂತೆ ಚಿತ್ರಿಸಲಾಗಿದೆ. ಈ ಫೋಟೋಗೆ ಕಳ್ಳ ಪ್ರಧಾನಿ ಸುಮ್ಮನಿದ್ದಾರೆ (#ChorPMChupHai) ಎಂಬ ಹ್ಯಾಷ್ ಟ್ಯಾಗನ್ನು ರಮ್ಯಾ ಬಳಸಿ ಟ್ವೀಟ್ ಮಾಡಿದ್ದರು. ರಮ್ಯಾ ಮಾಡಿದ ಟ್ವಿಟ್ ನಲ್ಲಿ ನರೇಂದ್ರ ಮೋದಿ ವಿರುದ್ಧ ದ್ವೇಷ ಕಾರುವ ಅಂಶವಿದೆ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಿಜ್ವಾನ್ ಅಹ್ಮದ್ ದೂರು ನೀಡಿದ್ದರು. ದೂರು ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಎಫ್‍ಐಆರ್ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=h7Pafv4CDXY

  • ಕೋರ್ಟ್ ಗೆ 750 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ-ವಿಚಾರವಾದಿ ಭಗವಾನ್‍ಗೆ ಗುಂಡು ಹಾರಿಸಲು ಮುಂದಾಗಿದ್ದು ಯಾರು..?

    ಕೋರ್ಟ್ ಗೆ 750 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ-ವಿಚಾರವಾದಿ ಭಗವಾನ್‍ಗೆ ಗುಂಡು ಹಾರಿಸಲು ಮುಂದಾಗಿದ್ದು ಯಾರು..?

    – ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ 750 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ

    ಉಡುಪಿ: ವಿಚಾರವಾದಿ, ಸಾಹಿತಿ ಪ್ರೋ. ಕೆ.ಎಸ್.ಭಗವಾನ್ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ 750 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.

    ಗುಂಡುಗಳನ್ನು ನೀಡಿದ್ದು ಯಾರು?:
    ಭಗವಾನ್ ಹತ್ಯೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ, ಎರಡು ಜೀವಂತ ಗುಂಡುಗಳನ್ನು ನೀಡಿದ್ದನು. ನವೀನ್ ಬಳಿಯ ಎರಡು ಗುಂಡುಗಳನ್ನು ಪ್ರವೀಣ್ ಅಲಿಯಾಸ್ ಸುಜಿತ್ ಪಡೆದುಕೊಂಡಿದ್ದನು. ಪ್ರವೀಣ್ ಇದೇ ಗುಂಡುಗಳನ್ನು ನಿಹಾಲ್ ದಾದಾನಿಗೆ ತೋರಿಸಿದಾಗ, ಮುಂದೊಂದು ದಿನ ಧರ್ಮ ವಿರೋಧಿಗಳ ಸಮಾಪ್ತಿಗೆ ಗುಂಡುಗಳ ಉಪಯೋಗ ಆಗಲಿದೆ ಎಂದು ನಿಹಾಲ್ ದಾದಾ ಹೇಳಿದ್ದನು. ಗುಂಡುಗಳನ್ನು ಭದ್ರವಾಗಿ ಪ್ರವೀಣ್ ತನ್ನ ದಾವಣಗೆರೆಯ ಅಜ್ಜಿ ಮನೆಯಲ್ಲಿ ಅಕ್ರಮವಾಗಿ ಇರಿಸಿದ್ದನು.

    ಬೆಳಗಾವಿಯಲ್ಲಿ ಸ್ಕೆಚ್:
    ಭಗವಾನ್ ಹತ್ಯೆಗೆ ಬೆಳಗಾವಿ ಸುಖಸಾಗರ್ ಹೋಟೆಲ್‍ನಲ್ಲಿ ಸ್ಕೆಚ್ ರೂಪಿಸಲಾಗಿತ್ತು. ಹೋಟೆಲ್‍ನಲ್ಲಿ ಪ್ರವೀಣ್ ಅಲಿಯಾಸ್ ಸುಜಿತ್, ಅಮೋಲ್ ಕಾಳೆ, ಅಮಿತ್ ದಗ್ವೇಕರ್ ನಿಹಾಲ್ ದಾದಾ, ಮನೋಹರ್ ಯಡವೆ ಎಲ್ಲರೂ ಸೇರಿ ಹತ್ಯೆಗೆ ಸಂಚು ರೂಪಿಸಿದ್ದರು. ಕೆ.ಎಸ್.ಭಗವಾನ್ ಧರ್ಮಕ್ಕೆ ಅಪಮಾನ ಮಾಡುತ್ತಿರುವುದರಿಂದ ಅವರನ್ನ ಕೊಲೆ ಮಾಡಬೇಕೆಂದು ಎಲ್ಲರು ನಿರ್ಧರಿಸಿದ್ದರು.

    ಭಗವಾನ್ ಹತ್ಯೆ ಮಾಡಲು ಗುಂಡುಗಳು ಸಿದ್ಧವಾಗಿದ್ದವು ಆದ್ರೆ ಗನ್ ಸಿಕ್ಕಿರಲಿಲ್ಲ. ಅನಿಲ್ ಎಂಬಾತನಿಂದ ಏರ್ ಪಿಸ್ತೂಲ್ ಮತ್ತು ಏರ್‍ಗನ್ ಖರೀದಿ ಮಾಡಿದ್ದರು. ಏರ್ ಗನ್ ಖರೀದಿ ಮಾಡಲು ಆರೋಪಿ ಕೆ.ಟಿ.ನವೀನ್ ಧನ ಸಹಾಯ ಮಾಡಿದ್ದನು. ಬೆಳಗಾವಿಯಲ್ಲಿಯೇ ಏರ್‍ಗನ್ ಚಲಾಯಿಸುವ ತರಬೇತಿಯನ್ನು ಸಹ ಆರೋಪಿಗಳು ಪಡೆದುಕೊಂಡಿದ್ದರು.

    ಭಗವಾನ್ ಟಾರ್ಗೆಟ್ ಯಾಕೆ?:
    ಮೈಸೂರಿನ ಮೈಲಾರಿ ಹೋಟೆಲ್ ಬಳಿ ಆರೋಪಿಗಳೆಲ್ಲರೂ ಮತ್ತೊಮ್ಮೆ ನನ್ನ ಹತ್ಯೆಗೆ ಸ್ಕೆಚ್ ರೂಪಿಸಿದ್ದರು. ಇನ್ನು ಆರೋಪಿ ಕೆ.ಟಿ. ನವೀನ್ ಕುಮಾರ್‍ನನ್ನು ಎಲ್ಲೋ ನೋಡಿದ ಹಾಗಿದೆ. ಹಾಗಾಗಿ ನನ್ನ ಕೊಲೆಗೆ ಇವರೆಲ್ಲಾ ಸಂಚು ರೂಪಿಸಿರುವ ಸಾಧ್ಯತೆಗಳಿವೆ. ಹಿಂದೂ ಧರ್ಮದ ಶೋಷಣೆಗಳ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸನಾತನ ಸಂಸ್ಥೆ ಮತ್ತು ಶ್ರೀರಾಮ ಸೇನೆಯ ವಿಚಾರಣೆ ನಡೆಸಿ ಸತ್ಯಾಸತ್ಯೆತಯನ್ನು ಪತ್ತೆ ಹಚ್ಚಬೇಕೆಂದು ಕೆ.ಎಸ್.ಭಗವಾನ್ ಉಪ್ಪಾರ ಪೇಟೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

    ಹಿಂದೂ ಸಂಘಟನೆಯ ಕಾರ್ಯಕರ್ತನಾಗಿದ್ದ ಪ್ರವೀಣ್ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿದ್ದನು. ಯಾವ ಸಂಘಟನೆಯಲ್ಲಿ ಯಾರು ಮೂಲ ಹೆಸರುಗಳನ್ನು ಹೇಳುವಂತಿಲ್ಲ ಮತ್ತು ಕರೆಯುವಂತಿಲ್ಲ ಎಂದು ಎಲ್ಲ ಆರೋಪಿಗಳು ನಿರ್ಧರಿಸಿದ್ದರು. ಒಂದು ವೇಳೆ ಪೊಲೀಸರಿಗೆ ಯಾರಾದರೂ ಸಿಕ್ಕರೆ ನಮ್ಮ ಹೆಸರುಗಳು ಬಹಿರಂಗವಾಗಬಾರದು ಎಂಬ ಹಿನ್ನೆಲೆಯಲ್ಲಿ ಸಂಚು ರೂಪಿಸಿದ್ದರು. ನವೀನ್ ಬಂಧನದ ಬಳಿಕ ಬೆದರಿದ ಎಲ್ಲ ಆರೋಪಿಗಳಿಗೂ ತಪ್ಪಿಸಿಕೊಳ್ಳುವಂತೆ ಅಮಿತ್ ಸೂಚಿಸಿದ್ದನು.

    ಅಮಿತ್ ಸೂಚನೆಯಂತೆ ಎಲ್ಲರೂ ತಲೆ, ಮೀಸೆ ಬೋಳಿಸಿಕೊಂಡು ಗುರುತು ಸಿಗದಂತೆ ಮಹಾರಾಷ್ಟ್ರದಲ್ಲಿ ಅವಿತುಕೊಂಡಿದ್ದರು. ಬಹು ದಿನಗಳ ನಂತರ ದಾವಣಗೆರೆಗೆ ಆಗಮಿಸಿದ್ದ ಅಮೋಲ್ ಕಾಳೆ , ಬಸ್ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದನು.

    ಯಾರು ಅಮಿತ್ ದೆಗ್ವೇಕರ್?:
    ಸನಾತನ್ ಪ್ರಭಾತ್‍ನಲ್ಲಿ ಪ್ರೂಫ್ ರೀಡರ್ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ಅಮಿತ್ ದೆಗ್ವೇಕರ್. ಹಿಂದೂ ಧರ್ಮದ ಬಗ್ಗೆ ಕಾಳಜಿಯುಳ್ಳ ಅಮಿತ್ ಮಠ, ಮಂದಿರ ಆಶ್ರಮಗಳಿಗೆ ಭೇಟಿ ಕೊಡುತ್ತಿದ್ದನು. ಅಮಿತ್ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಧರ್ಮದ ಕಾರ್ಯಗಳಲ್ಲಿ ತೊಡಗಿದ್ದನು. ಕರ್ನಾಟಕಕ್ಕೆ ಬಂದಾಗ ಪ್ರವೀಣ್ ಮತ್ತು ದಾದಾನ ಪರಿಚಯವಾಗಿತ್ತು. ಮುಂದೆ ಇದೇ ಪ್ರವೀಣ್ ಮೂಲಕ ನವೀನ್‍ಕುಮಾರನ ಸ್ನೇಹ ಸಂಪಾದಿಸಿದ್ದನು. ನವೀನ್ ಮೂಲಕವೇ ಧರ್ಮದ ರಕ್ಷಣೆಗೆ ಶಸ್ತ್ರ ಸಜ್ಜಿತ ಹೋರಾಟಕ್ಕೆ ಅಮಿತ್ ಇಳಿದಿದ್ದನು.

    ಮತ್ತೋರ್ವ ಆರೋಪಿ ಮನೋಹರ್ ಯಡವೆ ಸಹ ಧರ್ಮ ರಕ್ಷಣೆಯ ಹೋರಾಟಕ್ಕಾಗಿ ನವೀನ್‍ಗ್ಯಾಂಗ್ ಸೇರಿಕೊಂಡಿದ್ದನು. ಗ್ಯಾಂಗ್ ಸೇರುವ ಮುನ್ನ ಭಾರತೀಯ ಸೇನೆ, ವೀರ ಹೋರಾಟಗಾರ ಹೆಸರಿನಲ್ಲಿ ಧರ್ಮ ರಕ್ಷಣೆಗೆ ಕೆಲಸ ಮಾಡುತ್ತಿದ್ದನು.

  • ಸುನಂದಾ ನಿಗೂಢ ಸಾವು: ತರೂರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

    ಸುನಂದಾ ನಿಗೂಢ ಸಾವು: ತರೂರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

    ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸಿದ ದೆಹಲಿಯ ವಿಶೇಷ ತನಿಖಾ ತಂಡದ ಪೊಲೀಸರು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306(ಆತ್ಮಹತ್ಯೆಗೆ ಕುಮ್ಮಕ್ಕು) ಸೆಕ್ಷನ್ 498 ಎ(ಮಹಿಳೆಯನ್ನು ಗಾಯಗೊಳಿಸುವುದು/ ಅಥವಾ ಪ್ರಾಣಾಪಾಯ ತಂದೊಡ್ಡುವುದು, ಅಥವಾ ಆತ್ಮಹತ್ಯೆಗೆ ಪ್ರಚೋದಿಸುವುದು) ಅಡಿಯಲ್ಲಿ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

    ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಸಿಂಗ್ ಮುಂದೆ ಸುಮಾರು 3000 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು, ಮೇ 24 ರಂದು ವಿಚಾರಣೆಗೆ ಬರಲಿದೆ.

    ಚಾರ್ಜ್‍ಶೀಟ್ ಸಲ್ಲಿಕೆಯಾದ ಬಳಿಕ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಶಶಿ ತರೂರ್, ತನಿಖಾ ವರದಿ ಅಸಮಂಜಸವಾಗಿದೆ. ಪುಷ್ಕರ್ ಅವರನ್ನು ಹತ್ತಿರದಿಂದ ಬಲ್ಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬುವುದಿಲ್ಲ. 4 ವರ್ಷ ತನಿಖೆಯ ನಂತರ ದೆಹಲಿ ಪೊಲೀಸರು ಆತ್ಮಹತ್ಯೆ ಪ್ರಚೋದನೆಯ ಆರೋಪವನ್ನು ನನ್ನ ಮೇಲೆ ಹೊರಿಸಿದ್ದಾರೆ. ಇದು ಉದ್ದೇಶ ಪೂರಿತವಾಗಿದೆ. ಈ ಪ್ರಕರಣದಲ್ಲಿ ಯಾರ ವಿರುದ್ಧವು ಸಾಕ್ಷಿ ದೊರೆತಿಲ್ಲವೆಂದು 2017ರ ಅಕ್ಟೋಬರ್‍ನಲ್ಲಿ ಕಾನೂನು ಅಧಿಕಾರಿಗಳು ಹೈಕೋರ್ಟ್ ಗೆ ಹೇಳಿಕೆ ನೀಡಿದ್ದರು. ಆದರೆ ಆರು ತಿಂಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಿದು ಪ್ರಕರಣ ಏನು?
    ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ 2014ರ ಜನವರಿಯಲ್ಲಿ ನಗರದ ಲೀಲಾ ಪ್ಯಾಲೆಸ್ ಹೋಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಮೊದಲಿಗೆ ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದರು. ನಂತರ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಯಲಾಯಿತು. ಏಮ್ಸ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಸುನಂದಾ ದೇಹದಲ್ಲಿ ಗಾಯವಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಅತಿ ಹೆಚ್ಚು ಮಾತ್ರೆಗಳನ್ನು ಸೇವಿಸಿದ ಪರಿಣಾಮ ಸುನಂದಾ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿತ್ತು. 2014ರ ಜುಲೈನಲ್ಲಿ ಏಮ್ಸ್ ವೈದ್ಯ ಸುದೀರ್ ಗುಪ್ತಾ ಸುಳ್ಳು ವರದಿ ನೀಡುವಂತೆ ನಮ್ಮ ಮೇಲೆ ಒತ್ತಡ ಇತ್ತು ಹೇಳಿಕೆ ನೀಡಿದ್ದರು. 2014ರ ಅಕ್ಟೋಬರ್ 10ರಂದು ಸುನಂದಾ ಅವರನ್ನು ವಿಷಪ್ರಾಶಣ ಮಾಡಿ ಹತ್ಯೆ ಮಾಡಲಾಗಿದೆ ಎಂದು ಈ ಪ್ರಕರಣವನ್ನು ತನಿಖೆ ನಡೆಸಿದ ವೈದ್ಯಕೀಯ ತಂಡ ವರದಿ ನೀಡಿತ್ತು. 2015ರ ಜನವರಿಯಲ್ಲಿ ದೆಹಲಿ ಪೊಲೀಸರು ತರೂರ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.

    ತರೂರ್ ನಿವಾಸದಲ್ಲಿದ್ದ ಮನೆ ಕೆಲಸ ಮಾಡುತ್ತಿದ್ದ ನರೈನ್ ಪೊಲೀಸ್ ವಿಚಾರಣೆ ವೇಳೆ ಸುನಂದಾ ಜೊತೆ ತರೂರ್ ನಿತ್ಯ ಗಲಾಟೆ ಮಾಡುತ್ತಿದ್ದರು. ಸುನಂದಾ ಮೃತಪಡುವ ಎರಡೂ ದಿನದ ಮೊದಲು ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ನಾನು ನಿಮ್ಮ ಎಲ್ಲ ವಿಚಾರಗಳನ್ನು ಮಾಧ್ಯಮಗಳಿಗೆ ತಿಳಿಸಿದರೆ ನಿಮ್ಮ ಜೀವನ ಅಂತ್ಯವಾಗುತ್ತದೆ ಎಂದು ಸುನಂದಾ ಪುಷ್ಕರ್ ಹೇಳಿದ್ದರು ಎಂದು ತಿಳಿಸಿದ್ದ. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಪ್ರತಿವಾದಿಯಾಗಿದ್ದಾರೆ.

  • ಬಿಜೆಪಿ ಚಾರ್ಜ್ ಶೀಟ್ ಕಸದ ಬುಟ್ಟಿಗೆ ಹಾಕೋದಕ್ಕೆ ಲಾಯಕ್ : ರಾಮಲಿಂಗಾ ರೆಡ್ಡಿ

    ಬಿಜೆಪಿ ಚಾರ್ಜ್ ಶೀಟ್ ಕಸದ ಬುಟ್ಟಿಗೆ ಹಾಕೋದಕ್ಕೆ ಲಾಯಕ್ : ರಾಮಲಿಂಗಾ ರೆಡ್ಡಿ

    ಬೆಂಗಳೂರು: ಬಿಜೆಪಿಯ ಚಾರ್ಜ್ ಶೀಟ್ ಕಸದ ಬುಟ್ಟಿಗೆ ಹಾಕುವುದಕ್ಕೆ ಲಾಯಕ್ಕಾಗಿರೋ ಪೇಪರ್ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

    ಸಿದ್ದರಾಮಯ್ಯ ಕಾಲದಲ್ಲಿ ಬೆಂಗಳೂರಿನ ಕಸದ ಸಮಸ್ಯೆಯ ಸುದ್ದಿ ನ್ಯೂಯಾರ್ಕ್ ಟೈಮ್ಸ್ ನಲ್ಲೂ ಪ್ರಕಟವಾಗಿದೆ ಎಂದು ಬಿಜೆಪಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಚಾರ್ಜ್ ಶೀಟ್ ನಲ್ಲಿನ ಆರೋಪಗಳ ಕುರಿತು ಬಿಜೆಪಿಯವರಿಗೆ ಕ್ಲಾರಿಟಿ ಇಲ್ಲ ಎಂದು ಕಿಡಿಕಾರಿದ್ದಾರೆ.

    ಬೆಂಗಳೂರಿನ ಮಾನ ಮರ್ಯಾದೆ ಕಳೆದಿದ್ದು ಬಿಜೆಪಿಯವರು. 2012ರ ಅಕ್ಟೋಬರ್ ನಲ್ಲಿ ನ್ಯೂಯಾರ್ಕ್ ಟೈಮ್ಸ್ ಗಾರ್ಡನ್ ಸಿಟಿಯನ್ನು ಗಾರ್ಬೆಜ್ ಸಿಟಿ ಅನ್ನೋದಾಗಿ ವರದಿ ಮಾಡಿತ್ತು. ಆಗ ಇದ್ದದ್ದು ಬಿಜೆಪಿ ಸರ್ಕಾರ. ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದ್ದರೂ ಬಿಜೆಪಿಯವರು ಬೆಂಗಳೂರಿನ ಕಸದ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಸೋತಿದ್ದರು ಎಂದು ಟೀಕಿಸಿದರು.  ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ವಿರುದ್ಧದ ಚಾರ್ಜ್ ಶೀಟ್ ನಲ್ಲಿ ಮತ್ತೆ ಎಡವಟ್ಟು ಮಾಡಿಕೊಂಡ ಬಿಜೆಪಿ

    ಕಾಂಗ್ರೆಸ್ ಸರ್ಕಾರ ಬಂದ ನಂತರ ಬೆಂಗಳೂರಿನಲ್ಲಿ ಏಳು ತ್ಯಾಜ್ಯ ಸಂಸ್ಕರಣಾ ಘಟಕ ಮಾಡಲಾಗಿದೆ. ತ್ಯಾಜ್ಯ ವಿಂಗಡಣೆ, ಸಂಸ್ಕರಣೆ ಸರಿಯಾಗಿಯೇ ನಡೆದಿದೆ. 2012ರ ಬಿಜೆಪಿಯವರ ಅವಧಿಯಲ್ಲಿ ನಡೆದಿದ್ದನ್ನು ನಮ್ಮ ಸರ್ಕಾರ ಬಂದ ಮೇಲೆ ಅಂತ ತಿರುಗಿಸಿ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಅಮಿತ್ ಶಾ ಸೂಚನೆಯಂತೆ ಬಿಜೆಪಿ ಚಾರ್ಜ್ ಶೀಟ್- 22 ಪುಟಗಳ ಆರೋಪ ಪಟ್ಟಿ ಬಿಡುಗಡೆ

    ಅಮಿತ್ ಶಾ ಸೂಚನೆಯಂತೆ ಬಿಜೆಪಿ ಚಾರ್ಜ್ ಶೀಟ್- 22 ಪುಟಗಳ ಆರೋಪ ಪಟ್ಟಿ ಬಿಡುಗಡೆ

    – ಸಿದ್ದರಾಮಯ್ಯ ಸರ್ಕಾರಕ್ಕೆ ಉರುಳಾಗುತ್ತಾ ಚಾರ್ಜ್ ಶೀಟ್?

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ರಾಜ್ಯ ಬಿಜೆಪಿ ಚಾರ್ಜ್ ಶೀಟ್ ತಯಾರಿಸಿದೆ. ಇವತ್ತು ಬಿಬಿಎಂಪಿ ಆಡಳಿತಕ್ಕೆ ಸಂಬಂಧಿಸಿದಂತೆ 22 ಪುಟಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಲಿದೆ.

    ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇವತ್ತು ಮಧ್ಯಾಹ್ನ 12.30ಕ್ಕೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಚಾರ್ಜ್ ಶೀಟ್ ಬಿಡುಗಡೆ ಮಾಡಲಿದ್ದಾರೆ. ವ್ಯಕ್ತಿ ಆಧಾರಿತ ಚಾರ್ಜ್ ಶೀಟ್ ಕೈ ಬಿಟ್ಟು, ವಿಷಯಾಧಾರಿತ ಚಾರ್ಜ್ ಶೀಟ್ ತಯಾರಿಸಿದೆ ಎನ್ನಲಾಗಿದೆ.

    ಕಾಮಗಾರಿಗಳಲ್ಲಿನ ಅವ್ಯವಹಾರ, ಕಸದ ಸಮಸ್ಯೆ, ವೈಟ್ ಟ್ಯಾಪಿಂಗ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚಾರ್ಜ್ ಶೀಟ್ ಬಿಡುಗಡೆ ಮಾಡಲಿದ್ದಾರೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ. ಇವತ್ತು ಬಿಡುಗಡೆಯಾಗುವ ಚಾರ್ಜ್ ಶೀಟ್ ಸಿದ್ದರಾಮಯ್ಯ ಸರ್ಕಾರಕ್ಕೆ ಚಾರ್ಜ್ ಆಗುವ ತರಹ ಇರುತ್ತಾ…? ಅನ್ನೋದನ್ನ ಕಾದುನೋಡಬೇಕಿದೆ.

  • ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಕೇಸ್: ಎನ್‍ಐಎಯಿಂದ ಚಾರ್ಜ್ ಶೀಟ್ ಸಲ್ಲಿಕೆ

    ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಕೇಸ್: ಎನ್‍ಐಎಯಿಂದ ಚಾರ್ಜ್ ಶೀಟ್ ಸಲ್ಲಿಕೆ

    ಬೆಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಸಂಬಂಧ ಎನ್‍ಐಎ ಅಧಿಕಾರಿಗಳು ಬೆಂಗಳೂರಿನ ಎನ್‍ಐಎ ವಿಶೇಷ ಕೋರ್ಟ್‍ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

    ಆರೋಪಿಗಳಾದ ಇರ್ಫಾನ್ ಪಾಷಾ, ವಸೀಮ್ ಅಹ್ಮದ್, ಮಹ್ಮದ್ ಸಾದಿಕ್, ಮಹ್ಮದ್ ಮುಜೀಬುಲ್ಲ, ಆಸೀಮ್ ಷರೀಫ್ ವಿರುದ್ಧ  ಎನ್‍ಐಎ ಚಾರ್ಜ್ ಶೀಟ್ ಸಲ್ಲಿಸಿದೆ.

    ಚಾರ್ಜ್ ಶೀಟ್ ನಲ್ಲಿ ಏನಿದೆ?
    ಆರೋಪಿಗಳು ಪಿಎಫ್‍ಐ ಸಂಘಟನೆಯ ಸದಸ್ಯರು ಎಂದು ಚಾರ್ಜ್ ಶೀಟ್ ನಲ್ಲಿ ಸ್ಪಷ್ಟಪಡಿಸಿದ ಎನ್‍ಐಎ, ಮೃತ ರುದ್ರೇಶ್ ಮೇಲೆ ಈ ಐವರಿಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಆದರೆ ಅಂದು ಯಾರಾದರೂ ಇಬ್ಬರು ಆರ್‍ಎಸ್‍ಎಸ್ ಮುಖಂಡರನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದರು. ಆದ್ರೆ ಯಾರನ್ನು ಕೊಲೆ ಮಾಡಬೇಕು ಅನ್ನೋ ಸ್ಪಷ್ಟ ಚಿತ್ರಣ ಇರಲಿಲ್ಲ. ಕೊಲೆ ಮಾಡುವ ಮುನ್ನ ಎಲ್ಲರೂ ಇಲ್ಲಿನ ಆಸ್ಕಾ, ಹಾಗೂ ಚೋಟಾ ಚಾರ್ಮಿನಾರ್ ಮಸೀದಿಯ ಬಳಿ ಗುಪ್ತ ಮಾತುಕತೆ ನಡೆಸಿದ್ರು ಅಂತಾ ಖಚಿತ ಪಡಿಸಿದೆ.

    ಸಮವಸ್ತ್ರದಲ್ಲಿ ಮುಖಂಡನ ಕೊಲೆ ನಡೆದರೆ ಆರ್ ಎಸ್ ಎಸ್ ಸಂಘಟನೆಗೆ ಸೇರಲು ಜನ ಹೆದರುತ್ತಾರೆ ಎಂಬ ಉದ್ದೇಶವೂ ಇತ್ತು ಮತ್ತು ಮುಸ್ಲಿಮ್ ಹಾಗೂ ಜಿಹಾದಿಯ ಪರಮ ವಿರೋಧಿಯನ್ನು ಕೊಲೆಗೈಯುವುದೇ ಆಗಿತ್ತು. ಪಿಎಫ್‍ಐ ಸಭೆ ಕರೆದು ಮುಸ್ಲಿಂ ವಿರುದ್ಧ ಮಾತನಾಡುತ್ತಿದ್ದವರ ವಿಡಿಯೋ ಸಿಡಿ ಪ್ಲೇ ಮಾಡುತ್ತಿದ್ದರು. ಅದನ್ನ ನೋಡಿ ಪ್ರಚೋದನೆಯಾಗುತ್ತಿದ್ದ ವ್ಯಕ್ತಿಗಳನ್ನು ಕೃತ್ಯ ಎಸಗಲು ಆಯ್ಕೆ ಮಾಡುತ್ತಿದ್ದರು ಎಂದು ಎನ್‍ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

    ಏನಿದು ಪ್ರಕರಣ?
    2016ರ ಅಕ್ಟೋಬರ್ 16 ರಂದು ಬೆಳಗ್ಗೆ ಪಥ ಸಂಚಲನ ಮುಗಿಸಿ ಮನೆಗೆ ಬರುತ್ತಿರುವಾಗ 35 ವರ್ಷದ ರುದ್ರೇಶ್ ಅವರು ಶಿವಾಜಿನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿರುವ ಶ್ರೀನಿವಾಸ ಮೆಡಿಕಲ್ ಸ್ಟೋರ್ ಎದುರು ಸ್ನೇಹಿತರ ಜತೆ ನಿಂತಿದ್ದಾಗ ಬಳಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣ ಸಂಬಂಧ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರನೇ ಆರೋಪಿ ಈಗಲೂ ತಲೆಮರೆಸಿಕೊಂಡಿದ್ದಾನೆ.