Tag: Channarayapattana

  • ಕೊಟ್ಟ ಬೊಕ್ಕೆ ಬಿಸಾಕಿ ಸಿದ್ದರಾಮಯ್ಯ ಕೋಪ ಮಾಡಿಕೊಂಡಿದ್ದು ಏಕೆ?

    ಕೊಟ್ಟ ಬೊಕ್ಕೆ ಬಿಸಾಕಿ ಸಿದ್ದರಾಮಯ್ಯ ಕೋಪ ಮಾಡಿಕೊಂಡಿದ್ದು ಏಕೆ?

    ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖುಷಿಯಲಿದ್ದಾಗ ಜಾಲಿಯೋ ಜಾಲಿ. ಅಭಿಮಾನಿಗಳು ಕಾರ್ಯಕರ್ತರ ಮೊಗದಲ್ಲಂತೂ ಹೌದು ಹುಲಿಯಾ ಎಂಬ ಸಂಭ್ರಮ ಇರುತ್ತದೆ. ಆದರೆ ಸಿದ್ದರಾಮಯ್ಯಗೆ ಸಿಟ್ಟು ನೆತ್ತಿಗೇರಿದರೆ ಅಕ್ಕ-ಪಕ್ಕ, ಎದುರಿಗಿದ್ದವರೆಲ್ಲ ಮಾರುದ್ದ ದೂರ ನಿಲ್ಲುತ್ತಾರೆ. ಕೋಪ ಇಳಿಯುವ ತನಕ ಕೈ ಕಟ್ಟಿ ಸುಮ್ಮನೆ ನಿಲ್ಲುತ್ತಾರೆ. ಇವತ್ತು ಕೂಡ ಅದೇ ಸೀನ್ ನಡೆದಿದೆ.

    ಇದು ಒಂದು ಬೊಕ್ಕೆ ಕೋಪದ ಕಥೆ. ಅಷ್ಟಕ್ಕೂ ಆ ಬೊಕ್ಕೆ ಕೋಪದ ಕಥೆ ನಡೆದಿದ್ದು ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ. ಸಿದ್ದರಾಮಯ್ಯ ಅವರಿಗೆ ಆ ಒಂದೇ ಒಂದು ಬೊಕ್ಕೆ ಕೋಪ ನೆತ್ತಿಗೇರುವಂತೆ ಮಾಡಿತ್ತು ಅಂದರೆ ನೀವು ನಂಬಲ್ಲ ಅನ್ಸುತ್ತೆ. ಆದರೆ ಅದು ಸತ್ಯ. ಇದನ್ನೂ ಓದಿ: RSS ಬಗ್ಗೆ ಸಿದ್ದರಾಮಯ್ಯಗೆ 1 ಪರ್ಸೆಂಟ್ ಅಷ್ಟೂ ಗೊತ್ತಿಲ್ಲ: ಎಸ್.ಟಿ.ಸೋಮಶೇಖರ್ ತಿರುಗೇಟು

    SIDDARAMAIAH

    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚನ್ನರಾಯಪಟ್ಟಣ ಪ್ರವಾಸಕ್ಕೆ ತೆರಳುವ ಮುನ್ನ ಸರ್ಕಾರಿ ನಿವಾಸದಲ್ಲಿ ಬೆಂಬಲಿಗರು ಮುತ್ತಿಕೊಂಡಿದ್ದರು. ಆಗ ಚಿತ್ರದುರ್ಗದಿಂದ ಆಗಮಿಸಿದ ಮುಖಂಡನೊಬ್ಬ ಬೊಕ್ಕೆಯನ್ನು ಕೊಟ್ಟಾಗ ಸ್ವೀಕರಿಸಿದ ಸಿದ್ದರಾಮಯ್ಯ ಸುಮ್ಮನಿದ್ದರು. ಆದರೆ ಅದೇ ಬೊಕ್ಕೆಯನ್ನು ಇನ್ನೊಬ್ಬ ಮುಖಂಡ ಎರಡನೇ ಬಾರಿ ಕೊಟ್ಟಾಗಲೂ ಸ್ವೀಕರಿಸಿದ್ದಾರೆ. ಆದರೆ ಮೂರನೇ ಬಾರಿ ಅದೇ ಬೊಕ್ಕೆಯನ್ನು ಇನ್ನೊಬ್ಬ ಮುಖಂಡ ಕೊಡಲು ಹೋದಾಗ ಸಿದ್ದರಾಮಯ್ಯ ಕೋಪ ನೆತ್ತಿಗೇರಿದೆ. ಕೊಟ್ಟದನ್ನೇ ಎಷ್ಟು ಸಲ ಕೊಡುತ್ತೀರಾ.. ಹೋಗಿ ಅತ್ಲಾಗೆ ಅಂತಾ ಗದರಿ ಬೊಕ್ಕೆಯನ್ನು ಬಿಸಾಕಿದ್ದಾರೆ. ಆಗ ಸಿದ್ದರಾಮಯ್ಯ ಕೋಪತಾಪ ಕಂಡ ಬೆಂಬಲಿಗರು ಸೈಲೆಂಟ್ ಆಗಿ ದೂರ ನಿಂತಿದ್ದಾರೆ. ಬಿಸಾಕಿದ ಬೊಕ್ಕೆಯನ್ನು ಮತ್ತೆ ಎತ್ತಿಕೊಂಡ ಸಿದ್ದರಾಮಯ್ಯ ಬೆಂಬಲಿಗ ಕೈ ಕಟ್ಟಿ ನಿಂತು ಸಾರಿ ಕೇಳಿದ್ದಾರೆ. ಬಳಿಕ ಸಿದ್ದರಾಮಯ್ಯ ಕಾರನ್ನು ಹತ್ತಿ ಯಾರನ್ನೂ ಮಾತಾಡಿಸಿದೆ ತೆರಳಿದರು. ಇದನ್ನೂ ಓದಿ: ಬಿಜೆಪಿಗೆ ತಾಕತ್ತಿದ್ದರೆ SDPIನ್ನು ನಿಷೇಧ ಮಾಡಲಿ: ದಿನೇಶ್ ಗುಂಡೂರಾವ್

    SIDDARAMAIHA SPOKE

    ಅಂದಹಾಗೆ ಸಿದ್ದರಾಮಯ್ಯ ಒಳ್ಳೆ ಮೂಡ್‍ನಲ್ಲಿ ಇದ್ದರೆ ಎಲ್ಲರಿಗೂ ಅಪರಂಜಿ, ಮೂಡ್ ಸರಿ ಇಲ್ಲದಿದ್ದರೆ ಹತ್ತಿರನೂ ಸುಳಿಯಲ್ಲ ಗುಲಗಂಜಿ. ಈ ಸತ್ಯ ಬಹುತೇಕ ಆಪ್ತರು, ಬೆಂಬಲಿಗರು ಚೆನ್ನಾಗಿ ಗೊತ್ತಿದೆ. ಆ ಕಾರಣಕ್ಕೆ ಸಿದ್ದರಾಮಯ್ಯ ಕೋಪ ನೆತ್ತಿಗೇರಿದಾಗ ಸೈಲೈಂಟ್ ಆಗುತ್ತಾರೆ, ಕೋಪ ಇಳಿದ ಮೇಲೆ ಅಣ್ಣ.. ಬಾಸು ಅಂತಾ ತಳ್ಳಾಡಿಕೊಂಡು ಸಿದ್ದರಾಮಯ್ಯ ಬಳಿ ಹೋಗುತ್ತಾರೆ.

  • ತೆಂಗಿನ ಚಿಪ್ಪಿನಲ್ಲಿ ಆಟವಾಡ್ತಿದ್ದ ಬಾಲಕಿ ನೀರಿನ ತೊಟ್ಟಿಗೆ ಬಿದ್ದು ಸಾವು

    ತೆಂಗಿನ ಚಿಪ್ಪಿನಲ್ಲಿ ಆಟವಾಡ್ತಿದ್ದ ಬಾಲಕಿ ನೀರಿನ ತೊಟ್ಟಿಗೆ ಬಿದ್ದು ಸಾವು

    ಹಾಸನ: ತೆಂಗಿನ ಚಿಪ್ಪು ಹಿಡಿದು ನೀರಿನಲ್ಲಿ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕಿಯನ್ನು ಶ್ರೇಯಾ(4) ಎಂದು ಗುರುತಿಸಲಾಗಿದೆ. ಈಕೆ ಚನ್ನರಾಯಪಟ್ಟಣ ತಾಲೂಕಿನ ಬಿಳಿಕೆರೆ ಗ್ರಾಮದ ನಿವಾಸಿ ಧರಣೇಶ್ ಹಾಗೂ ಕುಮಾರಿ ದಂಪತಿ ಪುತ್ರಿ.

    ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಶ್ರೇಯಾ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಳು. ಕಂದಮ್ಮ ಆಟವಾಡುತ್ತಿರುವುದನ್ನು ಗಮನಿಸಿಕೊಂಡ ಪೋಷಕರು ಕೂಡ ಕೆಲಸದಲ್ಲಿ ತೊಡಗಿದ್ದರು. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೇಯಾ ಎಲ್ಲೂ ಕಾಣಿಸುತ್ತಿರಲಿಲ್ಲ.

    ಮಗು ಕಾಣಿಸದಿದ್ದಾಗ ಗಾಬರಿಗೊಂಡ ಪೋಷಕರು ಸುತ್ತಮುತ್ತ ಹುಡುಕಾಟ ಆರಂಭಿಸಿದ್ದಾರೆ. ಕೊನೆಗೆ ಮನೆಯ ಹಿತ್ತಲಿನಲ್ಲಿರುವ ಬಾತ್ ರೂಮ್ ನಲ್ಲಿ ಹುಡುಕಿದಾಗ ಮಗುವಿನ ಮೃತದೇಹ ನೀರಿನ ತೊಟ್ಟಿಯಲ್ಲಿ ತೇಲುತ್ತಿತ್ತು. ತೆಂಗಿನ ಚಿಪ್ಪಿನಲ್ಲಿ ಆಟವಾಡುತ್ತಿದ್ದ ಶ್ರೇಯ ಅದರಲ್ಲಿ ನೀರು ತರಲು ಹೋದಾಗ ತೊಟ್ಟಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

    ಇತ್ತ ಕಂದನ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಸಂಜೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

  • ಮಗನನ್ನೇ ಕೊಲ್ಲಲು 2 ಲಕ್ಷಕ್ಕೆ ಸುಪಾರಿ – ಪಾಪಿ ತಂದೆ ಸೇರಿ 6 ಮಂದಿ ಅರೆಸ್ಟ್

    ಮಗನನ್ನೇ ಕೊಲ್ಲಲು 2 ಲಕ್ಷಕ್ಕೆ ಸುಪಾರಿ – ಪಾಪಿ ತಂದೆ ಸೇರಿ 6 ಮಂದಿ ಅರೆಸ್ಟ್

    – ಏರಿ ಮೇಲೆ ಮಗನಿಗೆ ಗುಂಡು ಹೊಡೆಸಿದ್ದ ಅಪ್ಪ

    ಹಾಸನ: ಆಸ್ತಿ ವಿವಾದದ ವಿಚಾರವಾಗಿ ಮಗನನ್ನೇ ಕೊಲೆ ಮಾಡಿಸಿದ ಅಪ್ಪನನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಕೆರೆ ಏರಿ ಮೇಲೆ ಕಳೆದ ತಿಂಗಳು ಕೊಲೆಯಾಗಿತ್ತು. ಆಗಸ್ಟ್ 27ರ ರಾತ್ರಿ ಬೈಕಿನಲ್ಲಿ ಬರುತ್ತಿದ್ದ ಪುನೀತ್(26) ಎಂಬಾತನನ್ನು ಶೂಟೌಟ್ ಮಾಡಲಾಗಿತ್ತು. ಕುಟುಂಬ ಕಲಹ ಮತ್ತು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತರನ್ನು ಪುನೀತ್ ತಂದೆ ಹೇಮಂತ್, ಕಾಂತರಾಜು, ಪ್ರಶಾಂತ್, ಸುನಿಲ್, ನಂದೀಶ, ನಾಗರಾಜ್ ಎಂದು ಗುರುತಿಸಲಾಗಿದೆ. ಮಗನ ಜೀವ ತೆಗೆಯಲು ನಾಲ್ಕೈದು ತಿಂಗಳಿಂದ ಪ್ಲಾನ್ ಮಾಡಿದ್ದ ತಂದೆ ಹೇಮಂತ್, ಇದಕ್ಕಾಗಿ 2 ಲಕ್ಷ ರೂಪಾಯಿಗೆ ಸುಪಾರಿ ಕೂಡ ನೀಡಿದ್ದ. ಕೆರೆ ಏರಿ ಮೇಲೆ ಆರೋಪಿಗಳಾದ ಸ್ವಾಮಿ, ನಂದೀಶ್ ಮತ್ತು ಕಾಂತರಾಜು ಬಂದೂಕಿನಿಂದ ಶೂಟ್ ಮಾಡಿ ಕೊಲೆ ಮಾಡಿದ್ದರು. ಇನ್ನಿಬ್ಬರು ಪುನೀತ್ ಬೈಕ್‍ನಲ್ಲಿ ಬರುತ್ತಿರುವ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡಿದ್ದರು.

    ಪುನೀತ್ ಕೊಲೆಯ ನಂತರ ಆತನ ತಾಯಿ ಯಶೋಧಮ್ಮ ದೂರು ನೀಡಿದ್ದು, ತಂದೆ ಹೇಮಂತ್ ಮತ್ತು ಪುನೀತ್ ನಡುವೆ ಕೆಲ ವರ್ಷಗಳಿಂದ ಆಸ್ತಿ ಹಂಚಿಕೆ ವಿಚಾರವಾಗಿ ವೈಷಮ್ಯ ಇತ್ತು. ಈ ಕಾರಣದಿಂದ ಪತಿ ಹಾಗೂ ಇನ್ನೊಬ್ಬ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪದ ಮೇರೆಗೆ ತಂದೆ ಹೇಮಂತ್ ಅನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆಯ ವಿಚಾರ ಹೊರಗೆ ಬಂದಿದೆ.

    2 ಲಕ್ಷ ರೂ.ಗೆ ಮಗನನ್ನೇ ಡೀಲ್ ಮಾಡಿದ್ದ ತಂದೆ ಮುಂಗಡವಾಗಿ 5 ಸಾವಿರ ನೀಡಿದ್ದ ಎನ್ನಲಾಗಿದೆ. ಈಗ ಪಾಪಿ ತಂದೆ ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 5 ಮೊಬೈಲ್, 1.88 ಲಕ್ಷ ರೂ ನಗದು ವಶಕ್ಕೆ ಪಡೆದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್.ಪಿ ಶ್ರೀನಿವಾಸ್ ಗೌಡ, ಕಗ್ಗಂಟಾಗಿದ್ದ ಪ್ರಕರಣ ಬೇಧಿಸಿದ ತನಿಖಾ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

  • ಚನ್ನರಾಯಪಟ್ಟಣದಲ್ಲಿ ಜೋಡಿ ಕೊಲೆ – 80 ಎಕ್ರೆ ಜಮೀನು ಹೊಂದಿದ್ದ ದಂಪತಿಯ ಬರ್ಬರ ಹತ್ಯೆ

    ಚನ್ನರಾಯಪಟ್ಟಣದಲ್ಲಿ ಜೋಡಿ ಕೊಲೆ – 80 ಎಕ್ರೆ ಜಮೀನು ಹೊಂದಿದ್ದ ದಂಪತಿಯ ಬರ್ಬರ ಹತ್ಯೆ

    – ಸರಣಿ ಕೊಲೆಗಳಿಂದ ಬೆಚ್ಚಿಬಿದ್ದ ಜನ

    ಹಾಸನ: ಚನ್ನರಾಯಪಟ್ಟಣ ತಾಲೂಕಿನಲ್ಲಿ ಸರಣಿ ಕೊಲೆಗಳು ಮುಂದುವರಿದಿದ್ದು, ಇಂದು ಮತ್ತೆ ವೃದ್ಧ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಆಲಗೊಂಡನಹಳ್ಳಿಯಲ್ಲಿ ನಡೆದಿದೆ.

    ಮುರುಳಿಧರ್ (71), ಉಮಾದೇವಿ (67) ಕೊಲೆಯಾದ ವೃದ್ಧ ದಂಪತಿ. ದಿಂಬಿನಿಂದ ಉಸಿರುಗಟ್ಟಿಸಿ ಇಬ್ಬರನ್ನು ಕೊಲೆ ಮಾಡಲಾಗಿದೆ. ಮನೆಯನ್ನು ದರೋಡೆ ಮಾಡಲು ಬಂದು, ದಂಪತಿಯನ್ನು ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 9 ಮರ್ಡರ್ ಆಗಿವೆ.

    ಮುರುಳಿಧರ್ ಅವರ ತಂದೆ ಕೃಷ್ಣಮೂರ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಹೀಗಾಗಿ ಸರ್ಕಾರ ಅವರಿಗೆ 80 ಎಕರೆ ಜಮೀನು ನೀಡಿತ್ತು. ಮುರುಳಿಧರ್ ದಂಪತಿಗೆ ಮಕ್ಕಳು ಇರಲಿಲ್ಲ. ಜೊತೆಗೆ ಮುರುಳಿಧರ್ ಬಿ.ಎಸ್ಸಿ ಅರ್ಗಿಕಲ್ಚರ್ ವ್ಯಾಸಂಗ ಮಾಡಿದ್ದರು. ಕೃಷಿಯಲ್ಲಿ ಆಸಕ್ತಿ ಹೊಂದಿದ್ದರಿಂದ ಗ್ರಾಮದ ಹೊರಗಿರುವ 80 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಅಲ್ಲೇ ದಂಪತಿ ವಾಸವಿದ್ದರು.

    ಆದರೆ ಇತ್ತೀಚೆಗೆ ಅವರು ತಮ್ಮ ಜಮೀನನ್ನು ಮಾರಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಅವರು ಮನೆಯಲ್ಲಿ ಜಮೀನು ಮಾರಿರುವ ದುಡ್ಡನ್ನು ಇಟ್ಟಿಕೊಂಡಿದ್ದಾರೆ ಎಂದು ಯಾರೋ ಕಿಡಿಗೇಡಿಗಳು ಮನೆಗೆ ನುಗ್ಗಿದ್ದಾರೆ. ಹಣಕ್ಕಾಗಿ ದಂಪತಿಯನ್ನು ಕೊಲೆ ಮಾಡಿ ಮನೆ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನೂ ಕೊಲೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನು ಓದಿ: ಚನ್ನರಾಯಪಟ್ಟಣದಲ್ಲಿ ಮತ್ತೊಂದು ಕೊಲೆ – ಕಳೆದ ಒಂದೂವರೆ ತಿಂಗ್ಳಲ್ಲಿ ಜಿಲ್ಲೆಯಲ್ಲಿ 9 ಮರ್ಡರ್

    ಚನ್ನರಾಯಪಟ್ಟಣ ತಾಲೂಕಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ಸುಮಾರು 6 ಕೊಲೆಗಳು ಆಗಿವೆ. ಜೊತೆಗೆ ಓರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಪೊಲೀಸ್, ಕಾನೂನು ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈಗ ಘಟನಾ ಸ್ಥಳಕ್ಕೆ ಎಸ್.ಪಿ. ಶ್ರೀನಿವಾಸಗೌಡ ಭೇಟಿ ಪರಿಶೀಲನೆ ಮಾಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಸಾರ್ವಜನಿಕ ಸ್ಥಳದಲ್ಲಿ ಬಾಲಣ್ಣ ಬ್ರಿಗೇಡ್ ವತಿಯಿಂದ ಸೆನ್ಸರ್ ಸ್ಯಾನಿಟೈಸರ್ ಅಳವಡಿಕೆ

    ಸಾರ್ವಜನಿಕ ಸ್ಥಳದಲ್ಲಿ ಬಾಲಣ್ಣ ಬ್ರಿಗೇಡ್ ವತಿಯಿಂದ ಸೆನ್ಸರ್ ಸ್ಯಾನಿಟೈಸರ್ ಅಳವಡಿಕೆ

    – ಕೊರೊನಾ ತಡೆಯಲು ಮುಂದಾದ ಶಾಸಕ ಬಾಲಕೃಷ್ಣ

    ಹಾಸನ: ಜಿಲ್ಲೆಯಲ್ಲಿ ಕೋವಿಡ್ ಎಂಬ ಹೆಮ್ಮಾರಿ ಕೈ ಮೀರಿ ಹೋಗುತ್ತಿದೆ. ಅದೆಷ್ಟೋ ಅಧಿಕಾರಿಗಳು ಇದನ್ನು ಹತೋಟಿಗೆ ತರಲು ಶ್ರಮಿಸಿದರೂ ಪ್ರಯೋಜನವಾಗಿಲ್ಲ.

    ಈಗಾಗಲೇ ಹಾಸನ ಜಿಲ್ಲೆಯಲ್ಲಿ ಕೊರೊನಾ ಸಮೂದಾಯಕ್ಕೆ ಹಬ್ಬಿರುವ ಸೂಚನೆ ಸಿಕ್ಕಿದೆ. ಇದಕ್ಕೆ ಮದ್ದು ಅಂದರೆ ಜನರು ಸಾರ್ವಜನಿಕ ಸ್ಥಳದಲ್ಲಿ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಹೀಗೆ ಮಾಡಿದರೆ ಮಾತ್ರ ಒಂದಿಷ್ಟು ಕೊರೊನಾ ಸೋಂಕು ಕಡಿಮೆ ಮಾಡಬಹುದು.

    ಇದನ್ನು ಗಮನದಲ್ಲಿಟ್ಟುಕೊಂಡು ಚನ್ನರಾಯಪಟ್ಟಣದ ಶ್ರವಣಬೆಳಗೂಳ ಕ್ಷೇತ್ರದ ಶಾಸಕ ಬಾಲಕೃಷ್ಣ ಮತ್ತು ಅವರ ಅಭಿಮಾನಿಗಳು ಆಸ್ಪತ್ರೆ, ಪೊಲೀಸ್ ಠಾಣೆ ಮತ್ತು ಮಾರುಕಟ್ಟೆಯಂತಹ ಜನಜಂಗುಳಿ ಇರುವ ಪ್ರದೇಶದಲ್ಲಿ ಸ್ಯಾನಿಟೈಸರ್ ಹಾಗೂ ಸೆನ್ಸರ್ ಸ್ಯಾನಿಟೈಸರ್ ಅಳವಡಿಸುವ ಮೂಲಕ ಕೊರೊನಾ ಸೋಂಕು ತೊಲಗಿಸಲು ಪಣತೊಟ್ಟಿದ್ದಾರೆ. ಬಾಲಣ್ಣ ಬ್ರಿಗೇಡ್ ಎಂಬ ಸಂಘದ ವತಿಯಿಂದ ಈ ಕಾರ್ಯ ಮಾಡಲಾಗಿದೆ.

    ಇದೇ ವೇಳೆ ಬಾಲಣ್ಣ ಬ್ರಿಗೇಡ್ ಸಂಘದ ಅಧ್ಯಕ್ಷ ರಾಚೇನಹಳ್ಳಿ ರಿತೇಶ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಕೊರೊನಾ ಸೋಂಕು ಮೈಮೀರಿ ಹೋಗುತ್ತಿದೆ. ಹೀಗಾಗಿ ನಾವು ಹೆಚ್ಚು ಸಾರ್ವಜನಿಕರು ಓಡಾಡುವ ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಮತ್ತು ಮಾರುಕಟ್ಟೆಗಳಲ್ಲಿ ಸೆನ್ಸರ್ ಸ್ಯಾನಿಟೈಸರ್ ಗಳನ್ನು ಅಳವಡಿಸಿದ್ದೇವೆ. ಈ ಸ್ಯಾನಿಟೈಸರ್ 8 ಲೀಟರ್ ಹಿಡಿಯಲಿದ್ದು, ಸುಮಾರು 2,000 ಜನ ಬಳಸಬಹುದಾಗಿದೆ ಎಂದು ಹೇಳಿದ್ದಾರೆ.

    ಜಿಲ್ಲೆಯಲ್ಲಿ ಮೊದಲು ಕೊರೊನಾ ಶುರುವಾಗಿದ್ದೆ ಚನ್ನರಾಯಪಟ್ಟಣ ತಾಲೂಕಿನಲ್ಲಿ, ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಾಗ ಎಲ್ಲರಿಗೂ ಆತಂಕ ಮನೆ ಮಾಡಿತ್ತು. ಆದರೆ ಸ್ಥಳೀಯ ಶಾಸಕ ಸಿಎನ್ ಬಾಲಕೃಷ್ಣ ಅವರು ಸೋಂಕನ್ನು ತಡೆಗಟ್ಟುವ ಕೆಲಸಕ್ಕೆ ಮುಂದಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ಅವರ ಅಭಿಮಾನಿಗಳ ಸಂಘ ಕೂಡ ಸೋಂಕು ತಡೆಗೆ ಹೋರಾಡುತ್ತಿದೆ. ಇದೇ ವೇಳೆ ಸಂಘದ ಸದಸ್ಯರಾದ ಲೊಕೇಶ್, ಸಾಗರ್, ಹರ್ಷ, ರಂಜಿತ್, ಪವನ್, ಪ್ರವೀಣ್, ಸಂದೀಪ್, ಸಂಜು ಮತ್ತು ಅಭಿ ಮತ್ತಿತರು ಉಪಸ್ಥಿತರಿದ್ದರು.

  • ಸಿಬ್ಬಂದಿಯ ಸಮಸ್ಯೆ ತಿಳಿಯಲು ರಸ್ತೆಗಿಳಿದ ಹಾಸನ ಎಸ್‍ಪಿ ಶ್ರೀನಿವಾಸ್‍ ಗೌಡ

    ಸಿಬ್ಬಂದಿಯ ಸಮಸ್ಯೆ ತಿಳಿಯಲು ರಸ್ತೆಗಿಳಿದ ಹಾಸನ ಎಸ್‍ಪಿ ಶ್ರೀನಿವಾಸ್‍ ಗೌಡ

    -ಚನ್ನರಾಯಪಟ್ಟಣ ಸಂಚಾರ

    ಹಾಸನ: ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಚಾಕು ಇರಿತದಂತ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಆಗುತ್ತಿರುವ ಸಮಸ್ಯೆಯನ್ನು ಸ್ವತಃ ಪರೀಕ್ಷಿಸಲು ಎಸ್‍ಪಿ ಶ್ರೀನಿವಾಸ್‍ಗೌಡ ಏಕಾಏಕಿ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದ್ದಾರೆ.

    ಕೆಲವು ದಿನಗಳ ಹಿಂದೆ ಚನ್ನರಾಯಪಟ್ಟಣ ಟೌನ್ ಠಾಣೆಯ ಪಿಎಸ್‍ಐ ಕಿರಣ್‍ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ರು. ಅವರು ಆತ್ಮಹತ್ಯೆಗೆ ಶರಣಾಗಲು ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ನಡೆದ ಎರಡು ಕೊಲೆಗಳು, ಕೆಲಸದ ಒತ್ತಡ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣದಲ್ಲಿ ತಮ್ಮ ಸಿಬ್ಬಂದಿ ಕೆಲಸ ನಿರ್ವಹಿಸಲು ಆಗುತ್ತಿರುವ ಸಮಸ್ಯೆಯನ್ನು ಸ್ವತಃ ಪರಿಶೀಲಿಸಲು ನಿನ್ನೆ ಸಂಜೆ ಎಸ್‍ಪಿ ಶ್ರೀನಿವಾಸ್‍ಗೌಡ ಏಕಾಏಕಿ ರಸ್ತೆಗಿಳಿದು ಪಟ್ಟಣ ಸಂಚಾರ ಮಾಡಿದ್ದಾರೆ.

    ಈ ವೇಳೆ ನಿಯಮ ಮೀರಿ ಮಧ್ಯ, ಸಿಗರೇಟ್ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‍ಪಿ ಶ್ರೀನಿವಾಸ್ ಗೌಡ, ಇತ್ತೀಚೆಗೆ ಚನ್ನರಾಯಪಟ್ಟಣದಲ್ಲಿ ಕ್ರೈಂ ಹೆಚ್ಚಾಗುತ್ತಿತ್ತು. ನಾವು ನಮ್ಮ ಸಿಬ್ಬಂದಿಗೆ ಪ್ರೆಷರ್ ಹಾಕುವ ಬದಲು ಅವರಿಗೆ ಫೀಲ್ಡಲ್ಲಿ ಇರುವ ಕಷ್ಟ ನೇರವಾಗಿ ವೀಕ್ಷಿಸಲು ಸ್ವಯಂ ಆಗಿ ಬಂದೆ. ಇಲ್ಲಿ ಪಾರ್ಕಿಂಗ್ ಸಮಸ್ಯೆ ಇದೆ, ತುಂಬಾ ಜನ ಹೆಲ್ಮೆಟ್ ಹಾಕಲ್ಲ. ಕುಡಿಯೋದು ತುಂಬಾ ಕಂಪ್ಲೇಂಟ್ ಬರ್ತಿದೆ. ಲೈಸೆನ್ಸ್ ಇದೆ ಮಾರುತ್ತಿದ್ದೇವೆ ಅಂತಾರೆ. ಹೀಗಾಗಿ ಫ್ಯಾಕ್ಟ್ ಚೆಕ್‍ಗಾಗಿ ಫೀಲ್ಡಿಗಿಳಿಯಬೇಕಾಯ್ತು. ಕೆಲವೊಬ್ಬರು ಲೈಸೆನ್ಸ್ ನಿಯಮ ಮೀರಿದ್ದಾರೆ. ಎಲ್ಲೆಂದರಲ್ಲಿ ಸಿಗರೇಟ್ ಸೇದಿ ಹೆಣ್ಣುಮಕ್ಕಳಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆಯೂ ಕಾನೂನು ಕ್ರಮ ಜರುಗಿಸಿದ್ದೇವೆ. ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಲು ನಮ್ಮ ಪೊಲೀಸರಿಗೆ ಸೂಚಿಸಿದ್ದು ಅವರ ಜೊತೆ ನಾವು ಇರಲಿದ್ದೇವೆ ಎಂದು ಎಸ್‍ಪಿ ತಿಳಿಸಿದ್ದಾರೆ.

  • ಹಾಸನದಲ್ಲಿ 14 ದಿನ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ನಿರ್ಧಾರ

    ಹಾಸನದಲ್ಲಿ 14 ದಿನ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ನಿರ್ಧಾರ

    ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕೊರೊನಾ ಸೋಂಕು ಹೆಚ್ಚು ಕಂಡುಬರುತ್ತಿರುವುದರಿಂದ 14 ದಿನಗಳ ಕಾಲ ಸ್ವಯಂಪ್ರೇರಿತವಾಗಿ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ.

    ವರ್ತಕ ಸಂಘ, ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಸಂಘ-ಸಂಸ್ಥೆಗಳ ಮುಖಂಡರು ಸಭೆ ಸೇರಿ ಸ್ವಯಂಪ್ರೇರಿತರಾಗಿ ತಾಲೂಕಿನಾದ್ಯಂತ 14 ದಿನಗಳವರೆಗೆ ಲಾಕ್‍ಡೌನ್ ಮಾಡಲು ನಿರ್ಧರಿಸಿದ್ದಾರೆ. ಚನ್ನರಾಯಪಟ್ಟಣ ತಹಶೀಲ್ದಾರ್ ಮಾರುತಿ ಮತ್ತು ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಭೆ ಸೇರಿದ್ದು, ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಬೆಳಗ್ಗೆ 6:30 ರಿಂದ 11:30ರ ವರೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಬಹುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳನ್ನು ತಾಲೂಕಿನಾದ್ಯಂತ ನಿರ್ಬಂಧಿಸುವಂತೆ ತಾಲೂಕು ಆಡಳಿತ, ಜನಪ್ರತಿನಿಧಿಗಳು ಸೂಚಿಸಿದ್ದಾರೆ. ಸ್ವಯಂಘೋಷಿತ ಲಾಕ್‍ಡೌನ್‍ಗೆ ತಾಲೂಕಿನ ಎಲ್ಲ ಜನತೆ ಸಹಕರಿಸುವಂತೆ ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ತಾಲೂಕು ದಂಡಾಧಿಕಾರಿ ಜೆ.ಬಿ.ಮಾರುತಿ ಮನವಿ ಮಾಡಿದ್ದಾರೆ.

  • ಹಾಸನದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆ

    ಹಾಸನದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆ

    – ಚನ್ನರಾಯಪಟ್ಟಣ ಮೂಲದ ವ್ಯಕ್ತಿ ಸಾವು

    ಹಾಸನ: ಹಾಸನ ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೊನಾ ಸಾವು ಸಂಭವಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

    ಇಂದು ಚನ್ನರಾಯಪಟ್ಟಣ ಮೂಲದ 65 ವರ್ಷದ ಪುರುಷ ಸೋಂಕಿತ ಮೃತಪಟ್ಟಿದ್ದಾರೆ. ಕಳೆದ ರಾತ್ರಿ 12:45ಕ್ಕೆ ಖಾಸಗಿ ಆಸ್ಪತ್ರೆಯಿಂದ ರೆಫರ್ ಆಗಿ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ಬಂದಿರುತ್ತಾರೆ. ಬೆಳಿಗ್ಗೆ 7:45ಕ್ಕೆ ಸಾವು ಸಂಭವಿಸಿದೆ. ಮೃತ ಸೋಂಕಿತ ಮಧುಮೇಹ ರೋಗದಿಂದ ಬಳಲುತ್ತಿದ್ದರು. ಜೊತೆಗೆ ಎದೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು.

    ಸೋಂಕಿತರ ಗಂಟಲು ದ್ರವವನ್ನು ತೆಗೆದುಕೊಳ್ಳಲಾಗಿತ್ತು. ಅದರ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಎಂದು ಬಂದಿದೆ. ಇಂದು ಹಾಸನ ಜಿಲ್ಲೆಯಲ್ಲಿ ಹೊಸದಾಗಿ 6 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

  • ಹಾಸನದಲ್ಲಿಂದು 18 ಮಂದಿಗೆ ಕೊರೊನಾ- ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 85ಕ್ಕೇರಿಕೆ

    ಹಾಸನದಲ್ಲಿಂದು 18 ಮಂದಿಗೆ ಕೊರೊನಾ- ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 85ಕ್ಕೇರಿಕೆ

    – 18 ಸೋಂಕಿತರು ಚನ್ನರಾಯಪಟ್ಟಣ ಮೂಲದವರು

    ಹಾಸನ: ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ 18 ಕೋವಿಡ್-19 ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 85ಕ್ಕೆ ಏರಿಕೆಯಾಗಿದೆ.

    ಇಂದು ವರದಿಯಾದ ಎಲ್ಲಾ ಪ್ರಕರಣಕ್ಕೆ ಮುಂಬೈ ಮೂಲದ ನಂಟಿದೆ. ಎಲ್ಲರೂ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವಾರಗಿದ್ದು, ಮುಂಬೈನಿಂದ ಆಗಮಿಸಿ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದವರಾಗಿದ್ದಾರೆ. ಈ ಮೂಲಕ ಚನ್ನರಾಯಪಟ್ಟಣದಲ್ಲಿ 60, ಆಲೂರಿನಲ್ಲಿ 3, ಅರಕಲಗೂಡಿನಲ್ಲಿ 2, ಅರಸಿಕೇರೆಯಲ್ಲಿ 1, ಬೇಲೂರಿನಲ್ಲಿ 0, ಹಾಸನದಲ್ಲಿ 3, ಹೋಳೆನರಸಿಪುರದಲ್ಲಿ 16 ಮತ್ತು ಸಕಲೇಶಪುರದಲ್ಲಿ 0 ಪ್ರಕರಣಗಳು ದಾಖಲಾಗಿವೆ.

    ಜಿಲ್ಲೆಗೆ ಮಹಾರಾಷ್ಟ್ರದಿಂದ ಆಗಮಿಸಿದವರಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಇನ್ನೂ 500 ಮಂದಿಯ ಟೆಸ್ಟಿಂಗ್‍ಗಳ ವರದಿ ಬಾಕಿಯಿದೆ. ಮುಂದಿನ ದಿನಗಳಲ್ಲಿ ಹಾಸನದಲ್ಲಿ ಮತ್ತಷ್ಟು ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.ಹಾಸನ ಜಿಲ್ಲೆಯಲ್ಲಿ 85ಕ್ಕೇರಿದ ಕೊರೊನಾ ಸೋಂಕಿತರು – ಇಂದು 18 ಪ್ರಕರಣಗಳು ದೃಢ

  • ಹಾಸನ ಜಿಲ್ಲೆಯಲ್ಲಿ ಇಂದು 13 ಮಂದಿಗೆ ಕೊರೊನಾ – ಮಹಾರಾಷ್ಟ್ರದಿಂದ ಬಂದವರಿಂದ ಸೋಂಕು

    ಹಾಸನ ಜಿಲ್ಲೆಯಲ್ಲಿ ಇಂದು 13 ಮಂದಿಗೆ ಕೊರೊನಾ – ಮಹಾರಾಷ್ಟ್ರದಿಂದ ಬಂದವರಿಂದ ಸೋಂಕು

    – ಚನ್ನರಾಯಪಟ್ಟಣದಲ್ಲೇ 42 ಮಂದಿಗೆ ಸೋಂಕು

    ಹಾಸನ: ಹಾಸನ ಜಿಲ್ಲೆಯಲ್ಲಿ ಹೊಸದಾಗಿ 13 ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 67 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅರ್.ಗಿರೀಶ್ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಇಂದು ವರದಿಯಾದ ಪ್ರಕರಣದಲ್ಲಿ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ ಎಂದು ತಿಳಿಸಿದರು. ಹಾಸನ ಜಿಲ್ಲೆಯ ಪಾಲಿಗೆ ಮಹಾರಾಷ್ಟ್ರ ದಿಂದ ಅಗಮಿಸಿದವರಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಇಂದು ಸೋಂಕು ಪತ್ತೆಯಾದವರಲ್ಲಿ ಆರು ಮಂದಿ ಹೊಳೆನರಸೀಪುರ ತಾಲೂಕು ಹಾಗೂ 7 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದವಾರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಗಿರೀಶ್ ಹೇಳಿದರು.

    ಈವರೆಗಿನ ವರದಿಯಂತೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ಗರಿಷ್ಠ 42 ಮಂದಿ ಸೋಂಕಿತರು ಪತ್ತೆಯಾಗಿದ್ದು, ಹೊಳೆನರಸೀಪುರ 16, ಆಲೂರು ತಾಲೂಕಿನಲ್ಲಿ 3, ಅರಕಲಗೂಡು 2, ಅರಸೀಕೆರೆ 1, ಹಾಸನದಲ್ಲಿ ಮೂರು ಪ್ರಕರಣ ದಾಖಲಾಗಿವೆ ಎಂದು ಅವರು ವಿವರ ಒದಗಿಸಿದರು. ಹಾಸನ ತಾಲೂಕಿನ ಮೂರು ಪ್ರಕರಣಗಳಲ್ಲಿ ಎರಡು ತಮಿಳುನಾಡು ಮೂಲದಿಂದ ಬಂದಿದ್ದು, ಉಳಿದ ಎಲ್ಲ 65 ಪ್ರಕರಣಗಳು ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದರು.