Tag: Channarayapatnam

  • ಸಣ್ಣ ರಾಜಕೀಯ ಮಾಡಿಲ್ಲ – ವೇದಿಕೆ ಮೇಲೆ ಬಾಲಣ್ಣ, ಗೋಪಾಲಸ್ವಾಮಿ ವಾಕ್ಸಮರ

    ಸಣ್ಣ ರಾಜಕೀಯ ಮಾಡಿಲ್ಲ – ವೇದಿಕೆ ಮೇಲೆ ಬಾಲಣ್ಣ, ಗೋಪಾಲಸ್ವಾಮಿ ವಾಕ್ಸಮರ

    – 21 ಕೋಟಿ ವೆಚ್ಚದ ವಿವಿಧ ಕಾಮಗಾರಿ ಶಂಕುಸ್ಥಾಪನೆ

    ಹಾಸನ: ಅಧಿಕಾರಿಗಳು ಎಂಎಲ್‍ಎ ಮಾತು ಕೇಳಿ ಆಹ್ವಾನ ಪತ್ರಿಕೆಯನ್ನು ಮನೆಗೆ ತಂದು ಎಸೆದು ಹೋಗುತ್ತಾರೆ ಎಂದು ವೇದಿಕೆ ಮೇಲೆಯೇ ಕಾಂಗ್ರೆಸ್ ಎಂಎಲ್‍ಸಿ ಗೋಪಾಲಸ್ವಾಮಿ ಆರೋಪ ಮಾಡಿದ್ದು, ಅಲ್ಲೇ ಇದ್ದ ಜೆಡಿಎಸ್ ಪಕ್ಷದ ಶಾಸಕ ಬಾಲಕೃಷ್ಣ ನಾನು ಆ ರೀತಿ ನಡೆದುಕೊಂಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

    ಇಂದು ಹಾಸನ ಜಿಲ್ಲೆಯ ಶ್ರವಣಬೆಳಗೂಳ ಕ್ಷೇತ್ರದಲ್ಲಿ ಸುಮಾರು 21 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಗೋಪಾಲಯ್ಯ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ತಾಲೂಕಿನ ಅಭಿವೃದ್ಧಿಗೆ ತಾವು ಮಾಡಿರುವ ಹೋರಾಟದ ಬಗ್ಗೆ ಪ್ರಸ್ತಾಪಿಸಿದ ಎಂಎಲ್‍ಸಿ ಗೋಪಾಲಸ್ವಾಮಿ, ಅಧಿಕಾರಿಗಳು ಸಚಿವರ ಕಾರ್ಯಕ್ರಮಕ್ಕೆ ತಮ್ಮನ್ನು ಸರಿಯಾಗಿ ಕರೆದಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

    ಈ ವೇಳೆ ಅಧಿಕಾರಿಗಳಿಗೆ ಬಹಿರಂಗ ಎಚ್ಚರಿಕೆ ನೀಡಿದ ಗೋಪಾಲಸ್ವಾಮಿ, ನಾನು ಕೂಡ ಒಬ್ಬ ವಿಧಾನಪರಿಷತ್ ಸದಸ್ಯ ಎಂಬ ಗೌರವ ಇರಲಿ. ನನಗೆ ಟಿಪಿ ನೋಡಿದ ನಂತರ ಉಸ್ತುವಾರಿ ಸಚಿವರು ಬರುತ್ತಿರುವುದು ಗೊತ್ತಾಯಿತು. ಇದು ಸಚಿವರೆದುರು ಅಧಿಕಾರಿಗಳಿಗೆ ಕೊನೆ ಎಚ್ಚರಿಕೆ. ಎಂಎಲ್‍ಎಯವರು ಹೇಳಿದರು ಎಂದು ಆಹ್ವಾನ ಪತ್ರಿಕೆಯನ್ನು ಎಸೆದು ಹೋಗುವ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದು ಬೇಸರ ಹೊರಹಾಕಿದರು.

    ನಂತರ ಮಾತನಾಡಿದ ಶಾಸಕ ಬಾಲಕೃಷ್ಣ ಇಂದಿನ ಕಾರ್ಯಕ್ರಮ ನಡೆಯಲು ತಾವು ಪಟ್ಟ ಶ್ರಮದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ನಂತರ ಗೋಪಾಲಸ್ವಾಮಿ ಅವರ ಆರೋಪಕ್ಕೆ ವೇದಿಕೆ ಮೇಲೆ ಸಮಜಾಯಿಷಿ ನೀಡಿದ ಅವರು, ಎಂಎಲ್‍ಸಿ ಹೇಳಿದ ರೀತಿ ನಾನು ಸಣ್ಣ ರಾಜಕಾರಣ ಮಾಡಿಲ್ಲ. ಮಂತ್ರಿಗಳು ಬರುತ್ತಿದ್ದಾರೆ ಎಂದು ನಾನೇ ನಿಮಗೆ ಹೇಳಿದ್ದೆ. ಆದರೆ ನಿಮಗೆ ಆಹ್ವಾನ ಪತ್ರಿಕೆಯನ್ನು ತಡವಾಗಿ ನೀಡಿ ಎಂದು ನಾನು ಹೇಳಿಲ್ಲ. ಈ ಬಗ್ಗೆ ದಯಮಾಡಿ ತಪ್ಪಾಗಿ ತಿಳಿಯಬೇಡಿ ಎಂದು ಮನವಿ ಮಾಡಿದರು.

  • ಚನ್ನರಾಯಪಟ್ಟಣದಲ್ಲಿ ಮತ್ತೊಂದು ಕೊಲೆ – ಕಳೆದ ಒಂದೂವರೆ ತಿಂಗ್ಳಲ್ಲಿ ಜಿಲ್ಲೆಯಲ್ಲಿ 9 ಮರ್ಡರ್

    ಚನ್ನರಾಯಪಟ್ಟಣದಲ್ಲಿ ಮತ್ತೊಂದು ಕೊಲೆ – ಕಳೆದ ಒಂದೂವರೆ ತಿಂಗ್ಳಲ್ಲಿ ಜಿಲ್ಲೆಯಲ್ಲಿ 9 ಮರ್ಡರ್

    – ಎದೆಗೆ ಗುಂಡು ಹಾರಿಸಿ ಯುವಕನ ಬರ್ಬರ ಹತ್ಯೆ

    ಹಾಸನ: ಬಡವರ ಊಟಿ ಎನಿಸಿಕೊಂಡಿರುವ ಹಾಸನ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು 9 ಕೊಲೆಗಳು ನಡೆದಿದ್ದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

    ಕಳೆದ ರಾತ್ರಿ ಕೂಡ ಚನ್ನರಾಯಪಟ್ಟಣ ತಾಲೂಕಿನ, ಬೇಡಿಗನಹಳ್ಳಿ ಸಮೀಪ ಸುಮಾರು 25 ವರ್ಷದ ಯುವಕನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ತಾಲೂಕಿನ ಹೊಸೂರು ಗ್ರಾಮದ ಹೇಮಂತ್ ಎಂಬವರ ಹಿರಿಯ ಮಗ ಪುನೀತ್ (25) ಮೃತ ಯುವಕ.

    ಮೃತ ಯುವಕನ ತಂದೆ ಹೇಮಂತ್ ಹಾಗೂ ಪತ್ನಿ ಯಶೋಧಾ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಹೊಸೂರು ಗ್ರಾಮದಲ್ಲಿ ತಂದೆ ಹೇಮಂತ್ ಜೊತೆ ಎರಡನೇ ಮಗ ಪ್ರಶಾಂತ್ ಇದ್ದರೆ, ತಾಯಿ ಯಶೋಧಾ ಜೊತೆ ಬೇಡಿಗನಹಳ್ಳಿ ಗ್ರಾಮದಲ್ಲಿ ಪುನೀತ್ ವಾಸವಾಗಿದ್ದನು. ರಾತ್ರಿ 8 ಗಂಟೆ ಸುಮಾರಿನಲ್ಲಿ ಹೊಸೂರು ಗ್ರಾಮದ ದೊಡ್ಡಪ್ಪನ ಮನೆಯಲ್ಲಿ ಊಟ ಮುಗಿಸಿಕೊಂಡು ಬೇಡಿಗನಹಳ್ಳಿಗೆ ಕೆರೆ ಏರಿ ಮೇಲೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಪುನೀತನ ಎಡಗೈ ಹಾಗೂ ಎದೆಯ ಭಾಗಕ್ಕೆ ಎರಡು ಗುಂಡು ಬಿದ್ದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಹಾಸನ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು 9 ಕೊಲೆ ಪ್ರಕರಣಗಳು ವರದಿಯಾಗಿದ್ದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಲಾಕ್‍ಡೌನ್ ನಂತರ ಹಾಸನದಲ್ಲಿ ಕ್ರೈಂ ಹೆಚ್ಚಳವಾಗುತ್ತಿದೆ ಎಂಬ ಆತಂಕ ಮೂಡಿಸಿದೆ.

  • ರಾಜಕೀಯ ಒತ್ತಡ – ಚನ್ನರಾಯಪಟ್ಟಣ ಟೌನ್ ಎಸ್‍ಐ ಆತ್ಮಹತ್ಯೆ

    ರಾಜಕೀಯ ಒತ್ತಡ – ಚನ್ನರಾಯಪಟ್ಟಣ ಟೌನ್ ಎಸ್‍ಐ ಆತ್ಮಹತ್ಯೆ

    ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಟೌನ್ ಪೊಲೀಸ್ ಠಾಣೆಯ ಎಸ್‍ಐ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಲಾಳಿನಕೆರೆ ಗ್ರಾಮದವಾರದ ಕಿರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ. ಎರಡು ದಿನದಲ್ಲಿ ಚನ್ನರಾಯಟ್ಟಣದಲ್ಲಿ ಎರಡು ಕೊಲೆ ನಡೆದಿದ್ದು, ಕೊಲೆ ನಡೆದ ಸ್ಥಳಕ್ಕೆ ಹೋಗಿ ಕಿರಣ್ ಕುಮಾರ್ ಪರಿಶೀಲನೆ ಮಾಡಿದ್ದರು. ಜೊತೆಗೆ ಈ ಕೊಲೆಗೆ ಸಂಬಂಧಿದಂತೆ ಆರೋಪಿಗಳ ಬಂಧಿಸುವಲ್ಲಿ ಅವರಿಗೆ ರಾಜಕೀಯ ಒತ್ತಡವಿತ್ತು ಎಂದು ಹೇಳಲಾಗುತ್ತಿದೆ.

    ಇಂದು ವರಮಹಾಲಕ್ಷ್ಮಿ ಹಬ್ಬ ಇದ್ದರಿಂದ ಪತ್ನಿ ತಂದೆ ಮನೆಗೆ ಹೋಗಿದ್ದರು. ಇವರು ಸಹ ಮಾವನ ಮನೆಗೆ ಹೋಗಿ ಬೆಳಗ್ಗೆ ಉಪಹಾರ ತಿಂದು ಬಂದು ತಾವು ವಾಸವಿದ್ದ ಮನೆಯಲ್ಲಿ ಪ್ಯಾನ್‍ಗೆ ನೇಣು ಬಿಗಿದುಕೂಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ್ಗೆ ಎರಡು ದಿನಗಳಲ್ಲಿ ನಗರದಲ್ಲಿ ಎರಡು ಕೊಲೆಗಳಾಗಿದ್ದು ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರ ದಲ್ಲಿ ಮೃತ ದೇಹ ಇಡಲಾಗಿದೆ.

  • ಹಾಡಹಗಲೇ ಅಟ್ಯಾಕ್ – ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಯುವಕ

    ಹಾಡಹಗಲೇ ಅಟ್ಯಾಕ್ – ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಯುವಕ

    ಹಾಸನ: ರಸ್ತೆ ಮಧ್ಯದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಯುವಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿರುವ ಘಟನೆ ಹಾಸನ ಚನ್ನರಾಯಪಟ್ಟದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಯುವಕನನ್ನು ನಗರದ ಎಂ.ಜಿ ರಸ್ತೆಯ ನಿವಾಸಿ ಅಭಿ (26) ಎಂದು ಗುರುತಿಸಲಾಗಿದೆ. ಈ ಘಟನೆ ನಗರದ ನೇತಾಜಿ ರಸ್ತೆಯಲ್ಲಿರುವ ಅರುಣ್ ಐಸ್ ಕ್ರೀಮ್ ಅಂಗಡಿಯ ಮುಂಭಾಗ ನಡೆದಿದ್ದು, ದುಷ್ಕರ್ಮಿಗಳು ಅಭಿಯನ್ನು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ.

    ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ತನ್ನ ಡಿಯೋ ಬೈಕಿನಲ್ಲಿ ಬರುತ್ತಿದ್ದ ಅಭಿಯನ್ನು ಮೂವರು ಯುವಕರು ನಡು ರಸ್ತೆಯಲ್ಲೇ ಅಡ್ಡಗಟ್ಟಿ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಅಭಿ ಕೂಡ ನಗರದಲ್ಲಿ ರೌಡಿ ಶೀಟರ್ ಆಗಿದ್ದು, ಕಳೆದ ಕೆಲ ತಿಂಗಳ ಹಿಂದೆ ನಾಗಸಮುದ್ರದ ವ್ಯಕ್ತಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿದ್ದ. ನಂತರ ಜಾಮೀನು ಪಡೆದು ಹೊರಗೆ ಬಂದಿದ್ದ.

    ಹಲ್ಲೆಗೊಳಗಾಗಿ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅಭಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಇರಿತಕ್ಕೊಳಗಾದ ಅಭಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಭಾರೀ ಮಳೆಗೆ ಒಂದೇ ದಿನಕ್ಕೆ ತುಂಬಿ ಕೋಡಿ ಬಿದ್ದ ಕೆರೆ – ಬೆಳೆ ನಾಶ

    ಭಾರೀ ಮಳೆಗೆ ಒಂದೇ ದಿನಕ್ಕೆ ತುಂಬಿ ಕೋಡಿ ಬಿದ್ದ ಕೆರೆ – ಬೆಳೆ ನಾಶ

    ಹಾಸನ: ತಡರಾತ್ರಿ ಸುರಿದ ಭಾರೀ ಮಳೆಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಕರೆಕೋಡಿಹಳ್ಳಿ ಗ್ರಾಮದ ಕೆರೆ ಒಂದೇ ರಾತ್ರಿಗೆ ತುಂಬಿ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

    ಕಳೆದ ಕೆಲ ವರ್ಷದಿಂದ ಕೆರೆ ತುಂಬದೆ ಕೆರೆಕೋಡಿಹಳ್ಳಿ ಗ್ರಾಮಸ್ಥರು ಬಹಳ ತೊಂದರೆ ಅನುಭವಿಸುತ್ತಿದ್ದರು. ಆದರೆ ತಡರಾತ್ರಿ ಬಂದ ಭಾರೀ ಮಳೆಗೆ ಒಂದೇ ದಿನದಲ್ಲಿ ಕೆರೆ ಸಂಪೂರ್ಣ ತುಂಬಿದ್ದು, ಕೋಡಿ ಬಿದ್ದ ಕೆರೆಯ ನೀರು ಗದ್ದೆಗೆ ನುಗ್ಗಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಭತ್ತದ ಬೆಳೆ ನಾಶವಾಗಿದೆ.

    ಅಚ್ಚರಿಯ ಸಂಗತಿ ಎಂದರೆ ನೂರಾರು ಎಕರೆ ವ್ಯಾಪ್ತಿಯಲ್ಲಿ ಇರುವ ಕೆರೆ ಹಲವು ವರ್ಷಗಳಿಂದ ಸಂಪೂರ್ಣ ತುಂಬಿರಲಿಲ್ಲ. ಆದರೆ ಈ ಭಾರಿ ಬಿದ್ದ ಮಳೆಗೆ ಒಂದೇ ರಾತ್ರಿಯಲ್ಲಿ ತುಂಬಿ ಹರಿದಿದ್ದು ಕೆರೆಕೋಡಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಂತಸ ತಂದಿದೆ. ಇದರ ಜೊತೆಗೆ ಕಟ್ಟೆಗಳೆಲ್ಲ ತುಂಬಿದ್ದು, ತೆಂಗಿನ ತೋಟಕ್ಕೆ ನೀರು ನುಗ್ಗಿದ ಪರಿಣಾಮ ಸ್ವಾಮಿ ಎಂಬುವರ ಎರಡು ಸಾವಿರ ತೆಂಗಿನ ಕಾಯಿಗಳು ನೀರಿನಲ್ಲಿ ತೇಲಿ ಹೋಗಿವೆ.

    ಕೋಡಿ ಒಡೆದ ಪರಿಣಾಮವಾಗಿ ಭಾರೀ ಪ್ರಮಾಣದ ನೀರು ಪಕ್ಕದಲ್ಲಿರುವ ಭತ್ತದ ಗದ್ದೆಗಳಿಗೆ ನುಗ್ಗಿದೆ. ಇದರಿಂದ ಇತ್ತೀಚೆಗೆ ನಾಟಿ ಮಾಡಿದ್ದ ಕುಮಾರ್, ಕರೀಗೌಡ ಮತ್ತು ಪುಟ್ಟರಾಜ ಸೇರಿದಂತೆ ಸುತ್ತಮುತ್ತಲಿನ ಊರಿನ ರೈತರಿಗೆ ಸೇರಿದ ಸುಮಾರು 30 ಎಕ್ರೆ ಭತ್ತದ ಪೈರು ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

  • ಗರ್ಭಗುಡಿ ಬಾಗಿಲು ಮುರಿದು ದೇವರ ಆಭರಣ ದೋಚಿದ ಕಳ್ಳರು

    ಗರ್ಭಗುಡಿ ಬಾಗಿಲು ಮುರಿದು ದೇವರ ಆಭರಣ ದೋಚಿದ ಕಳ್ಳರು

    ಹಾಸನ: ಗರ್ಭಗುಡಿಯ ಬಾಗಿಲು ಮುರಿದ ಕಳ್ಳರು ದೇವರ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆರೆಕೋಡಿಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ತಡರಾತ್ರಿ ನಡೆದಿದ್ದು, ಗ್ರಾಮದ ಹೊರಭಾಗದಲ್ಲಿ ಇರುವ ಚೋಣುರಯ್ಯ ದೇವಾಲಯದ ಗರ್ಭಗುಡಿಯ ಬಾಗಿಲು ಒಡೆದು ಆಭರಣ ದೋಚಿ ಪರಾರಿಯಾಗಿದ್ದಾರೆ. ಬೆಳಗ್ಗೆ ದೇವಸ್ಥಾನದ ಪೂಜಾರಿಯಾದ ಮಹದೇವ್ ಅವರು ದೇವಾಲಯಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

    ದೇವಸ್ಥಾನದ ಬೀಗವನ್ನು ಬ್ಲೇಡ್ ಉಪಯೋಗಿಸಿ ಕಟ್ ಮಾಡಿರುವ ಕಳ್ಳರು ನಂತರ ಗರ್ಭಗುಡಿಯ ಬಾಗಿಲನ್ನು ಮುರಿದು ಸುಮಾರು ಒಂದು ಲಕ್ಷ ಬೆಲೆ ಬಾಳುವ ದೇವರ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಇತ್ತೀಚಿಗೆ ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.