ಹಾಸನ: ಕಾರಿನ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿಯಾದ (Car Accident) ಪರಿಣಾಮ ತಂದೆ ಹಾಗೂ ಮಗ ಸಾವಿಗೀಡಾದ ಘಟನೆ ಚನ್ನರಾಯಪಟ್ಟಣದ (Channarayapatna) ಅಮಾನಿಕೆರೆ ಬಳಿ ನಡೆದಿದೆ.
ಮೃತರನ್ನು ರಾಕೇಶ್ (28), ಮೋಕ್ಷಿತ್‍ಗೌಡ (8) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ರಾಕೇಶ್‍ನ ಪತ್ನಿ ಆಶಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಮರಕ್ಕೆ ಡಿಕ್ಕಿಯಾಗುವ ಮುನ್ನ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಬಳಿಕ ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕಾರಿನಲ್ಲಿ ಚನ್ನರಾಯಪಟ್ಟಣದಿಂದ ಶ್ರವಣೇರಿ ಗ್ರಾಮಕ್ಕೆ ದಂಪತಿ ತೆರಳುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿರುವ ಶ್ರೀಮದ್ ರಾಮಾನುಜಾ ಗೋಶಾಲೆಯಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನ ಮಹೋತ್ಸವವು `ಪಬ್ಲಿಕ್ ಟಿವಿ’ಯಲ್ಲಿ ಪ್ರಸಾರವಾಗುವ ರಾಶಿ ಭವಿಷ್ಯ ಖ್ಯಾತಿಯ ಡಾ. ಶ್ರೀಧರ ಭಟ್ಟಚಾರ್ಯ ಗುರೂಜಿ (Sridhara Bhattacharya Guruji) ಅವರ ನೇತೃತ್ವದಲ್ಲಿ ನೆರವೇರಿತು.
ಶ್ರೀ ಅಭಯ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನ ಮಹೋತ್ಸವವು ಎರಡು ದಿನಗಳ ಕಾಲ ನೆರವೇರಿದ್ದು, ಗೋಶಾಲಾ ಸಂಸ್ಥಾಪಕರು ಹಾಗೂ `ಪಬ್ಲಿಕ್ ಟಿವಿ’ಯಲ್ಲಿ ಪ್ರಸಾರವಾಗುವ ರಾಶಿ ಭವಿಷ್ಯ ಖ್ಯಾತಿಯ ಡಾ. ಶ್ರೀಧರ ಭಟ್ಟಚಾರ್ಯ ಗುರೂಜಿ ಅವರ ನೇತೃತ್ವದಲ್ಲಿ ಅತ್ಯಂತ ಭಕ್ತಿಭಾವದಿಂದ ನೆರವೇರಿದೆ.
ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಿರುವ ಹದಿನೆಂಟು ಅಡಿ ಉದ್ದದ ಅಭಯ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಿತು. ಖ್ಯಾತ ಜ್ಯೋತಿಷಿ ಡಾ. ಶ್ರೀಧರ ಭಟ್ಟಚಾರ್ಯ ಗುರೂಜಿ ಪ್ರತಿಷ್ಟಾಪನಾ ಕಾರ್ಯವನ್ನು ನೆರವೇರಿಸಿದರು. ಕಳೆದ 2 ದಿನಗಳಿಂದ ಅದ್ದೂರಿಯಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಇನ್ನು ಭಾನುವಾರದಂದು (ನ.17) ಸಂಜೆ 6 ಗಂಟೆಗೆ ಗೋಧೂಳಿ ಲಗ್ನದಲ್ಲಿ ದೀಪ ಬೆಳಗಿಸುವ ಮೂಲಕ ಧ್ವಜಾರೋಹಣ, ಯಾಗಶಾಲಾ ಪ್ರವೇಶ, ಸಪ್ತವಾಸದಿ ಹೋಮಗಳು, ಪೂರ್ಣಾಹುತಿ ನಂತರ ಮಂಗಳಾರತಿ ನಡೆಯಿತು. ಜೊತೆಗೆ ಸುಪ್ರಭಾತ, ಪುಣ್ಯಾಹ ಸೇರಿದಂತೆ ಮಹಾ ಕುಂಭಾಭಿಷೇಕ ನಂತರ ಮಹಾಮಂಗಳಾರತಿಯೂ ಜರುಗಿತು.
ಮಹೋತ್ಸವದಲ್ಲಿ ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜಾ ನಾರಾಯಣ, ರಾಮಾನುಜಾ ಜೀಯರ್ ಸ್ವಾಮಿಗಳು, ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಸೇರಿ ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಯತಿರಾಜಾ ನಾರಾಯಣ ಸ್ವಾಮೀಜಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದು, ಲಕ್ಷಾಂತರ ಮಂದಿ ಅಲ್ಲಿಗೆ ಹೋಗಿ ರಾಮಲಲ್ಲಾನನ್ನು ದರ್ಶನ ಮಾಡಿಕೊಂಡು ಬರುತ್ತಿದ್ದಾರೆ. ಈಗ ರಾಮಮಂದಿರ ಅನುಭವದಿಂದ ಕರ್ನಾಟಕದಲ್ಲಿ ಎಲ್ಲಾ ಕಡೆ ರಾಮಮಂದಿರಗಳು ನಿರ್ಮಾಣವಾಗಿ ಆಂಜನೇಯಸ್ವಾಮಿಯಾಗಿ ನಿಂತು ನಮ್ಮೆಲ್ಲರಿಗೂ ಅನುಗ್ರಹ ನೀಡುತ್ತಿದ್ದಾರೆ. ಅಭಯ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನೆ ಮಾಡಿರುವುದರಿಂದ ಎಲ್ಲರಿಗೂ ಒಳಿತಾಗಲಿ ಎಂದರು.
ಎರಡು ದಿನಗಳ ಕಾಲ ಜರುಗಿದ ಶ್ರೀ ಅಭಯ ಆಂಜನೇಯ ಸ್ವಾಮಿ ಪ್ರತಿಷ್ಠಾಪನ ಮಹೋತ್ಸವದಲ್ಲಿ ನೂರಾರು ಮಂದಿ ಭಾಗಿಯಾಗಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಎಲ್ಲಾ ಭಕ್ತರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ವೈ.ಶ್ರೀಧರಭಟ್ಟಾಚಾರ್ಯ ಗುರೂಜಿಯವರ ಧಾರ್ಮಿಕ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ದಾವಣಗೆರೆ: ತವರು ಮನೆಯಿಂದ ವರದಕ್ಷಿಣೆ (Dowry Case) ತರುವಂತೆ ಚಿತ್ರಹಿಂಸೆ ನೀಡಿ ಮೂರು ತಿಂಗಳ ಗರ್ಭಿಣಿಯನ್ನು ಪತಿಯೇ ಕೊಲೆಗೈದ ಘಟನೆ ಚನ್ನರಾಯಪಟ್ಟಣ (Channarayapatna) ನೊರನಕ್ಕಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ನಯನ (24) ಎಂದು ಗುರುತಿಸಲಾಗಿದೆ. ಆಕೆಯ ಪತಿ ಅಯ್ಯಪ್ಪ ಕೊಲೆಗೈದ ಆರೋಪಿಯಾಗಿದ್ದಾನೆ. ಕೊಲೆಯ ಬಳಿಕ ಆರೋಪಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೂರು ವರ್ಷಗಳ ಹಿಂದೆ ನೊರನಕ್ಕಿ ಗ್ರಾಮದ ಅಯ್ಯಪ್ಪ ಹಾಗೂ ನಯನ ಮದುವೆಯಾಗಿದ್ದರು. ಮದುವೆಯಾದ ಒಂದು ವರ್ಷದವರೆಗೆ ಗಂಡ-ಹೆಂಡತಿ ಚೆನ್ನಾಗಿಯೇ ಇದ್ದರು. ನಂತರದಲ್ಲಿ ತವರು ಮನೆಯಿಂದ ವರದಕ್ಷಿಣೆ ರೂಪದಲ್ಲಿ ಜಮೀನು, ಹಣ, ಒಡವೆ ತರುವಂತೆ ಅಯ್ಯಪ್ಪ ಹಿಂಸೆ ನೀಡಲು ಆರಂಭಿಸಿದ್ದ. ಈ ಹಿನ್ನೆಲೆಯಲ್ಲಿ ಹಲವಾರು ಬಾರಿ ರಾಜಿ ಪಂಚಾಯ್ತಿ ನಡೆಸಲಾಗಿತ್ತು.
ಈ ನಡುವೆ ನಯನ ಗರ್ಭಿಣಿಯಾಗಿದ್ದರಿಂದ ಒಂದು ತಿಂಗಳಿನಿಂದ ತವರು ಮನೆಯಲ್ಲೇ ಉಳಿದುಕೊಂಡಿದ್ದಳು. ನ.17 ರ ರಾತ್ರಿ ಅಯ್ಯಪ್ಪ, ಮಾವನ ಮನೆಗೆ ಬಂದು ಅಲ್ಲಿಯೇ ಉಳಿದುಕೊಂಡಿದ್ದ. ಮರುದಿನ ಬೆಳಿಗ್ಗೆ ನಯನಾಳನ್ನು ಮಲ್ಲಪ್ಪನ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದ. ಅಂದಿನಿಂದ ನಯನ ತವರು ಮನೆಯವರ ಫೋನ್ ರಿಸೀವ್ ಮಾಡಿರಲಿಲ್ಲ. ಸೋಮವಾರ ರಾತ್ರಿ ಅಯ್ಯಪ್ಪ ಸಂಬಂಧಿ ಶೃತಿ ಎಂಬುವವರು ನಯನಾಳ ತಾಯಿಗೆ ಕರೆ ಮಾಡಿ, ನಿಮ್ಮ ಮಗಳಿಗೆ ಆರೋಗ್ಯ ಸರಿ ಇಲ್ಲ ಎಂದು ತಿಳಿಸಿದ್ದಾರೆ.
ವಿಚಾರ ತಿಳಿದ ನಯನ ತಾಯಿ ಕರೆ ಮಾಡಿದಾಗ, ಅಯ್ಯಪ್ಪ ಕರೆ ಸ್ವೀಕರಿಸಿ, ನಿಮ್ಮ ಮಗಳನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಕರೆ ಕಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ವರದಕ್ಷಿಣೆಗಾಗಿ ನಿತ್ಯ ಕಿರುಕುಳದಿಂದ ರೋಸಿ ಹೋಗಿದ್ದ ನಯನ ಎರಡು ಬಾರಿ ಪೊಲೀಸ್ ಠಾಣೆಗೂ ದೂರು ನೀಡಿದ್ದಳು. ಆದರೂ ಯಾವುದೇ ಕ್ರಮ ಆಗಿರಲಿಲ್ಲ. ಇದೀಗ ಪತ್ನಿಯನ್ನೇ ಆತ ಕೊಂದು ಹಾಕಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ನಯನ ಪೋಷಕರು ಒತ್ತಾಯಿಸಿದ್ದಾರೆ.
ಚನ್ನರಾಯಪಟ್ಟಣ ತಹಸೀಲ್ದಾರ್ ವಿ.ಎಸ್.ನವೀನ್‍ಕುಮಾರ್ ಶವಾಗಾರಕ್ಕೆ ಭೇಟಿ ನೀಡಿ ಮೃತಳ ಪೋಷಕರಿಂದ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾಸನ: ರಾಜ್ಯದ ಸ್ವಚ್ಛ ಹಾಗೂ ಉತ್ತಮ ಗಾಳಿ ಇರುವ ಟಾಪ್ 10 ಸಿಟಿಗಳಲ್ಲಿ ಹಾಸನದ (Hassan) ಎರಡು ನಗರಗಳು ಸೇರಿವೆ. ನಂ.1 ಸ್ಥಾನದಲ್ಲಿ ಚನ್ನರಾಯಪಟ್ಟಣ (Channarayapatna) ಹಾಗೂ 3ನೇ ಸ್ಥಾನದಲ್ಲಿ ಬೇಲೂರು (Belur) ಸ್ಥಾನ ಪಡೆದಿದೆ ಎಂದು Air Quality Index ವರದಿ ಬಹಿರಂಗಪಡಿಸಿದೆ.
ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸಿದ್ದರಿಂದ ದೇಶಾದ್ಯಂತ ವಾಯುಮಾಲಿನ್ಯ ತೀವ್ರವಾಗಿ ಹೆಚ್ಚಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (Air Quality Index) 400 ದಾಟಿದೆ. ಇದು ಅತ್ಯಂತ ಅಪಾಯಕಾರಿ ಮಟ್ಟವಾಗಿದೆ. ಇದರ ನಡುವೆ ದೇಶದಲ್ಲಿ ಸ್ವಚ್ಛ ಹಾಗೂ ಉತ್ತಮ ಗಾಳಿ ಇರುವ ಟಾಪ್ 10 ನಗರಗಳ ಹೆಸರು ಬಹಿರಂಗಗೊಂಡಿದೆ.
ಚನ್ನರಾಯಪಟ್ಟಣದಲ್ಲಿ ಇಂದು (ಸೋಮವಾರ) ಬೆಳಗ್ಗೆ 8 ಗಂಟೆಗೆ AQI ಅಂಕ 8 ಇತ್ತು. ಮತ್ತೊಂದು ಸಂತಸದ ವಿಷಯ ಎಂದರೆ ಕರ್ನಾಟಕದ ಶಿಲ್ಪಕಲೆಯ ತವರೂರು ಬೇಲೂರು ಪಟ್ಟಣ 3 ಸ್ಥಾನದಲ್ಲಿದೆ. ಹಾಸನ ನಗರ ಮತ್ತು ಮಣಿಪುರದ ರಾಜಧಾನಿ ಇಂಫಾಲ್ ಕೂಡ ದೇಶದ ಶುದ್ಧ ಗಾಳಿ ಹೊಂದಿರುವ ನಗರಗಳಲ್ಲಿ ಟಾಪ್ 1೦ ಪಟ್ಟಿಯಲ್ಲಿವೆ. ನೆರೆಯ ಆಂಧ್ರಪ್ರದೇಶದ ಮದನಪಲ್ಲಿ ಸ್ವಚ್ಛ ಗಾಳಿ ಹೊಂದಿರುವ ಟಾಪ್ 10 ನಗರಗಳಲ್ಲಿ 10 ನೇ ಸ್ಥಾನದಲ್ಲಿದೆ.
ಹಾಸನ: ಜಿಲ್ಲೆಯ ಬಹುತೇಕ ಕಡೆ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ನಂತರ ಹಾಸನ (Hasan) ನಗರ ಸೇರಿದಂತೆ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಬೇಕಾಯಿತು.
ಹಾಸನ: ಅತಿಥಿ ಉಪನ್ಯಾಸಕಿಯೊಬ್ಬರು (Guest Lecturer) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚನ್ನರಾಯಪಟ್ಟಣದ (Channarayapatna) ಗಾಯಿತ್ರಿ ಬಡಾವಣೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿಯನ್ನು ದೀಪಾ (34) ಎಂದು ಗುರುತಿಸಲಾಗಿದೆ. ಮೃತ ದೀಪಾ ಅವರು ಅವಿವಾಹಿತರಾಗಿದ್ದು, ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – 8 ಮಂದಿ ದುರ್ಮರಣ
ಹಾಸನ: ಮದುವೆ ಮುಗಿಸಿ ಬೈಕ್‌ನಲ್ಲಿ (Bike) ಮನೆಗೆ ವಾಪಸ್ಸಾಗುತ್ತಿದ್ದ ದಂಪತಿಗೆ ಹಿಂಬದಿಯಿಂದ ಕಾರು (Car) ಡಿಕ್ಕಿ ಹೊಡೆದ ಪರಿಣಾಮ ಗಂಡ-ಹೆಂಡತಿ (Husaband -Wife) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ಬರಗೂರು ಹ್ಯಾಂಡ್‌ಪೋಸ್ಟ್ ಬಳಿ ನಡೆದಿದೆ.
ಚಂದ್ರೇಗೌಡ (52), ಹೇಮಲತಾ (45) ಮೃತ ದುರ್ದೈವಿಗಳು. ಇಂದು (ಫೆ.19) ಬೆಳಗ್ಗೆ ಉದಯಪುರದಲ್ಲಿ ಸಂಬಂಧಿಕರ ಮದುವೆಗೆ ಬೈಕ್‌ನಲ್ಲಿ ದಂಪತಿ ತೆರಳಿದ್ದರು. ಮಧ್ಯಾಹ್ನದ ವೇಳೆಗೆ ಮದುವೆ ಮುಗಿಸಿ ಅದೇ ಬೈಕ್‌ನಲ್ಲಿ ಚನ್ನರಾಯಪಟ್ಟಣಕ್ಕೆ ವಾಪಾಸ್ ಆಗುತ್ತಿದ್ದರು. ಬರಗೂರು ಹ್ಯಾಂಡ್‌ಪೋಸ್ಟ್ ಬಳಿಯ ತಿರುವಿನಲ್ಲಿ ತಮಿಳುನಾಡು ನೋಂದಣಿ ಇರುವ ಕಾರು ವೇಗವಾಗಿ ಬಂದು ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಮದುವೆ ಮೆರವಣಿಗೆಯಲ್ಲಿ ಭೂಗತ ಪಾತಕಿಯ ಗುಂಡಿಕ್ಕಿ ಹತ್ಯೆ
ಡಿಕ್ಕಿ ರಭಸಕ್ಕೆ ಬೈಕ್ ಒಂದು ಕಡೆ, ದಂಪತಿ ಒಂದು ಕಡೆ ರಸ್ತೆಗೆ ಬಿದ್ದಿದ್ದಾರೆ. ಇಬ್ಬರ ತಲೆಗೂ ತೀವ್ರ ಪೆಟ್ಟಾಗಿ, ರಕ್ತಸ್ರಾವ ಆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ನಗರ ಠಾಣೆ ಇನ್ಸ್ಪೆಕ್ಟರ್ ರಘುಪತಿ ಹಾಗೂ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಕಾರನ್ನು ವಶಕ್ಕೆ ಪಡೆದಿರುವ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಪತ್ನಿಯ ಶೀಲ ಶಂಕಿಸಿ ಬರ್ಬರ ಹತ್ಯೆ
ಹಾಸನ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ (Bus) ಶಾಲೆಯ (School) ಕಾಂಪೌಂಡ್ ಹಾಗೂ ಮನೆಗೆ ಡಿಕ್ಕಿ ಹೊಡೆದು ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ನಡೆದಿದೆ.
ಚನ್ನರಾಯಪಟ್ಟಣ (Channarayapatna) ತಾಲೂಕಿನ ಉದಯಪುರ ಗ್ರಾಮದ ಅಮೃತ್‌ರಾಜ್ (34) ಸಾವನ್ನಪ್ಪಿದ ವ್ಯಕ್ತಿ. ಬೆಂಗಳೂರಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. (KSRTC) ಬಸ್‌ನ ಆಕ್ಸಲ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ ಜಮೀನಿಗೆ ನುಗ್ಗಿದೆ. ಬಳಿಕ ಮನೆಗೆ ಡಿಕ್ಕಿ ಹೊಡೆದು ಶಾಲೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ಏಕರೂಪದ ದರ ನಿಗದಿ – ಪ್ರತಿ ಕಿಮೀಗೆ 24 ರಿಂದ 28 ರೂ.ವರೆಗೆ ಏರಿಕೆಗೆ ಅವಕಾಶ
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ವ್ತಕ್ತಿ ಸಾವನ್ನಪ್ಪಿದ್ದಾನೆ. 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 1 ಕಿ.ಮಿಗೆ 1.59 ಲಕ್ಷ, ದಿನಕ್ಕೆ 50 ಲಕ್ಷ – ಭಾರತ್ ಜೋಡೋ ಯಾತ್ರೆಗೆ ಬರೋಬ್ಬರಿ 71 ಕೋಟಿ ಖರ್ಚು
ಜಮೀನಿನಲ್ಲಿದ್ದ ವಾಸದ ಮನೆಗೂ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮನೆಯ ಅರ್ಧ ಭಾಗ ಕುಸಿದು ಬಿದ್ದಿದೆ. ಶಾಲೆಯ ಕಾಂಪೌಂಡ್ ಜಖಂಗೊಂಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ – ಕಾಂಗ್ರೆಸ್ ಮಾಜಿ ಶಾಸಕನ ಪುತ್ರ ಅರೆಸ್ಟ್
ಹಾಸನ: ಯೂನಿಯನ್ ಬ್ಯಾಂಕ್ (Union Bank) ನೌಕರನೊಬ್ಬ ಗ್ರಾಹಕರ 40 ಲಕ್ಷ ರೂ. ಹಣವನ್ನು ವಂಚನೆ ಮಾಡಿರುವ ಪ್ರಕರಣ ಚನ್ನರಾಯಪಟ್ಟಣದ (Channarayapatna) ಆನೆಕೆರೆ ಗ್ರಾಮದಲ್ಲಿ ನಡೆದಿದೆ.
ದಂಡಿಗನಹಳ್ಳಿಯ ಎಂ.ಟಿ.ಜಯರಾಂ ಎಂಬ ಬ್ಯಾಂಕ್‍ನ ಹೊರಗುತ್ತಿಗೆ ನೌಕರ ವಂಚನೆ ಮಾಡಿದ ಆರೋಪಿಯಾಗಿದ್ದಾನೆ. 40 ಗ್ರಾಹಕರಿಗೆ ಸೇರಿದ ಒಟ್ಟು 40 ಲಕ್ಷ ರೂ. ಹಣವನ್ನು ವಂಚಿಸಿದ್ದಾನೆ. ಈತ 2019 ರಿಂದ ಬಿಸಿನೆಸ್ ಕರೆಸ್ಪಾಂಡೆನ್ಸ್ (BC) ಕೆಲಸ ಮಾಡುತ್ತಿದ್ದ. ಇದನ್ನೂ ಓದಿ: ಚಂದ್ರಯಾನ-3ರ ಯಶಸ್ಸಿಗೆ ಕೈಜೋಡಿಸಿದ ಬೀದರ್‌ನ ಕುರಿಗಾಯಿ ಸಹೋದರರು
ಗ್ರಾಮದ ಕಾಳಪ್ಪ ಎಂಬವರು ತಮ್ಮ ಪಾಸ್‍ಬುಕ್ ಎಂಟ್ರಿ ಮಾಡಿಸಿದಾಗ 50 ಸಾವಿರ ರೂ. ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅಕೌಂಟ್‍ನ ಸ್ಟೇಟ್‍ಮೆಂಟ್ ರೆಫೆರೆನ್ಸ್ ನಂಬರ್ ಪರಿಶೀಲಿಸಿದಾಗ ಬ್ಯುಸಿನೆಸ್ ಕರೆಸ್ಪಾಂಡೆನ್ಸ್ ಡಿವೈಸ್‍ನಿಂದ ಡ್ರಾ ಆಗಿರುವುದು ಬಯಲಾಗಿದೆ. ಬಳಿಕ ಎಲ್ಲರ ಖಾತೆಗಳನ್ನು ಪರಿಶೀಲಿಸಿದಾಗ 40 ಜನರ ಅಕೌಂಟ್‍ನಿಂದ ಹಣ ತೆಗೆದಿರುವುದು ಬೆಳಕಿಗೆ ಬಂದಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಹಕರು ಬ್ಯಾಂಕಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ಭರಣಿಕುಮಾರ್ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ತಮಿಳುನಾಡು ಮನವಿಗೆ ಆದೇಶ ನೀಡಲು ಸುಪ್ರೀಂ ನಕಾರ
ಹಾಸನ: ಪತ್ನಿ ಹಾಗೂ ಆಕೆಯ ಪೋಷಕರ ಕಿರುಕುಳದಿಂದ ಮನನೊಂದು ನವವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪ್ರಕರಣ ಚನ್ನರಾಯಪಟ್ಟಣದ (Channarayapatna) ಕರಿಯಪ್ಪನಗುಡಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಕಿರಣ್ ಬಿ.ಬಿ (26) ಎಂದು ಗುರುತಿಸಲಾಗಿದೆ. ಆತ ಉದಯಪುರದಲ್ಲಿ ಬೇಕರಿ ನಡೆಸುತ್ತಿದ್ದ. ಕಳೆದ ಫೆ.19 ರಂದು ವಗರಹಳ್ಳಿ ಗ್ರಾಮದ ಸ್ಪಂದನಾ (24) ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ನಂತರ ಸ್ಪಂದನಾ ಕಿರಣ್‍ನೊಂದಿಗೆ ಸಂಸಾರ ನಡೆಸದೇ ತವರು ಮನೆ ಸೇರಿದ್ದಳು. ಬಳಿಕ ಆಕೆಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಕಿರಣ್ ಬಳಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಅಲ್ಲದೇ ಮೂವರು ಸೇರಿ ಕಿರಣ್‍ಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೆಯಲ್ಲಿ ಬೈಕ್, ಆಟೋ ನಿಷೇಧ – ಮೊದಲ ದಿನವೇ 137 ಕೇಸ್
ಕಿರಣ್ ಹಣ ನೀಡದೇ ಇದ್ದಾಗ ಜು.2 ರಂದು ಸ್ಪಂದನಾ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಆತನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿ ಜೈಲಿಗೆ ಕಳುಹಿಸಿದ್ದಳು. ಬಳಿಕ ಕಿರಣ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಕಳೆದ ಎರಡು ದಿನಗಳ ಹಿಂದೆ ಸ್ಪಂದನಾಳ ಪೋಷಕರು ಬೇಕರಿ ಬಳಿ ಬಂದು ಆತನೊಂದಿಗೆ ಜಗಳ ಮಾಡಿ ಹಲ್ಲೆ ಮಾಡಿದ್ದರು. ಇದರಿಂದ ಮನನೊಂದು ಕಿರಣ್ ಜು.31 ರಂದು ಮನೆಯಿಂದ ಹೊರ ಹೋದವನು ವಾಪಸ್ ಬಂದಿರಲಿಲ್ಲ ಎಂದು ಪೋಷಕರು ಹೇಳಿದ್ದಾರೆ.
ನಾಪತ್ತೆಯಾಗಿದ್ದ ಆತನನ್ನು ಪೋಷಕರು ಹುಡುಕಾಡಿದಾಗ ಗ್ರಾಮದ ದೂಳಪ್ಪ ಎಂಬುವವರ ತೋಟದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಸಂಬಂಧ ಹೊಳೇನರಸೀಪುರ (Holenarasipura) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗ್ರಾಹಕರೇ ಎಚ್ಚರ – ಮನೆ ಮನೆಗೆ ವಿತರಣೆಯಾಗುವ ಗ್ಯಾಸ್ ಸಿಲಿಂಡರ್‌ನಲ್ಲಿ ಭಾರೀ ವಂಚನೆ