Tag: Chandrayana-2

  • ಭೂಮಿಯ ಮೊದಲ ಫೋಟೋ ಕಳುಹಿಸಿದ ಚಂದ್ರಯಾನ-2

    ಭೂಮಿಯ ಮೊದಲ ಫೋಟೋ ಕಳುಹಿಸಿದ ಚಂದ್ರಯಾನ-2

    ನವದೆಹಲಿ: ಜುಲೈ 22ರಂದು ಚಂದ್ರಯಾನ-2 ಉಪಗ್ರಹವನ್ನು ಹೊತ್ತ ರಾಕೆಟ್ ಯಶಸ್ವಿಯಾಗಿ ನಭಕ್ಕೆ ಹಾರಿತ್ತು. ಚಂದ್ರನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಚಂದ್ರಯಾನ-2 ಉಪಗ್ರಹವನ್ನು ಚಂದ್ರನ ಅಂಗಳವನ್ನು ತಲುಪುವುದನ್ನೇ ಇಸ್ರೋ ವಿಜ್ಞಾನಿಗಳು ಕಾದುಕುಳಿತ್ತಿದ್ದಾರೆ. ಈ ನಡುವೆ ಬಾಹ್ಯಾಕಾಶದಿಂದ ಚಂದ್ರಯಾನ-2 ಭೂಮಿಯ ಮೊದಲ ಫೋಟೋ ಕ್ಲಿಕ್ಕಿಸಿ ಕಳುಹಿಸಿದೆ.

    ಕಳೆದ ವಾರ ಚಂದ್ರಯಾನ-2 ಭೂಮಿಯ ಮೊದಲ ಫೋಟೋ ಕಳುಹಿಸಿದೆ ಎಂದು ಭೂಮಿಯ ಹೈ ರೆಸೆಲ್ಯೂಶನ್ ಫೋಟೋವನ್ನು ಕಿಡಿಗೇಡಿಗಳು ಗೂಗಲ್ ಮಾಡಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಇಸ್ರೋ ಈ ಫೋಟೋ ಬಿಡುಗಡೆ ಮಾಡಲಾಗಿದೆ ಎನ್ನುವ ಸುಳ್ಳು ಸುದ್ದಿ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು. ಇದೇ ಬೆನ್ನಲ್ಲಿ ಶನಿವಾರದಂದು 17:28 ಯುನಿವರ್ಸಲ್ ಟೈಮ್‍ಗೆ ಬಾಹ್ಯಾಕಾಶದಲ್ಲಿ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಎಲ್‍ಐ4 ಕ್ಯಾಮೆರಾ ಮೂಲಕ ಭೂಮಿಯ ಮೊದಲ ಚಿತ್ರವನ್ನು ಕ್ಲಿಕ್ಕಿಸಿದೆ. ಇದನ್ನೂ ಓದಿ:ಚಂದ್ರನ ದಕ್ಷಿಣ ಧ್ರುವವೇ ಆಯ್ಕೆ ಏಕೆ? ಯಾವ ಸಾಧನದ ಕೆಲಸ ಏನು?- ಇಲ್ಲಿದೆ ಚಂದ್ರಯಾನ 2 ಪೂರ್ಣ ಮಾಹಿತಿ

    ಈ ಫೋಟೋವನ್ನು ಸ್ವತಃ ಇಸ್ರೋ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಮೂಲಕ ಎಲ್‍ಐ4 ಕ್ಯಾಮೆರಾದಲ್ಲಿ ಸೆರೆಯಾಗಿರುವ ಭೂಮಿಯ ಸುಂದರ ಚಿತ್ರಗಳು ಎಂದು ಬರೆದು ಫೋಟೋದೊಂದಿಗೆ ಇಸ್ರೋ ಟ್ವೀಟ್ ಮಾಡಿದೆ.

    ಇಸ್ರೋದ ಪ್ರಕಾರ, ಚಂದ್ರಯಾನ್ -2 ಕಾರ್ಯಾಚರಣೆಯಲ್ಲಿ ಚಂದ್ರನ ಕಕ್ಷೀಯ ಭಾಗಗಳನ್ನು ಸೆರೆಹಿಡಿಯಲು ಆರ್ಬಿಟರ್ ಹೈ-ರೆಸಲ್ಯೂಶನ್ ಕ್ಯಾಮೆರಾ (ಒಹೆಚ್‍ಆರ್ ಸಿ) ಮತ್ತು ಟೆರೈನ್ ಮ್ಯಾಪಿಂಗ್ ಕ್ಯಾಮೆರಾ 2 (ಟಿಎಂಸಿ 2) ಎಂಬ ಎರಡು ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಇಸ್ರೋ ಸೈಟ್‍ನಲ್ಲಿನ ಈ ಎರಡು ಆರ್ಬಿಟರ್ ಪೇಲೋಡ್‍ಗಳ ವಿವರಗಳು, ಚಂದ್ರನ ಮೇಲ್ಮೈಯನ್ನು ಮ್ಯಾಪಿಂಗ್ ಮಾಡಲು ಅವುಗಳ ಪ್ರಾಥಮಿಕ ಬಳಕೆ ಬಗ್ಗೆ ವಿವರಿಸಲಾಗಿದೆ. ಒಹೆಚ್‍ಆರ್ ಸಿ ಲ್ಯಾಂಡಿಂಗ್ ಸೈಟ್ಟಿನಲ್ಲಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಒದಗಿಸುತ್ತದೆ. ಇದರಿಂದ ಚಂದ್ರನ ಮೇಲೆ ತಲುಪುವ ಲಾಂಡರ್ ಗಳು ಕುಳಿಗಳು ಮತ್ತು ಬಂಡೆಗಳು ಎಲ್ಲಿವೆ ಎನ್ನುವುದನ್ನ ಸುಲಭವಾಗಿ ತಿಳಿಯಲು ಸಹಾಕಾರಿಯಾಗುತ್ತದೆ.

    ಜುಲೈ 15ರ ಮಧ್ಯರಾತ್ರಿಯಂದು ನಡೆದ ಮೊದಲ ಪ್ರಯತ್ನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಚಂದ್ರಯಾನ-2 ಸ್ಥಗಿತಗೊಳಿಸಲಾಗಿತ್ತು. ಉಡಾವಣೆಗೆ 56 ನಿಮಿಷ ಇದ್ದಾಗ ರಾಕೆಟ್‍ಗೆ ಇಂಧನ ತುಂಬಿಸುವ ವೇಳೆ ಈ ದೋಷ ಪತ್ತೆಯಾಗಿತ್ತು. ವಿಜ್ಞಾನಿಗಳು ಕೂಡಲೇ ಉಡಾವಣೆ ಸ್ಥಗಿತಗೊಳಿಸಲು ನಿರ್ಧರಿಸಿದ್ದರು. ಇಸ್ರೋ ವಿಜ್ಞಾನಿಗಳು ಈಗ ಬಹಳ ಎಚ್ಚರಿಕೆಯಿಂದ ತಾಂತ್ರಿಕ ದೋಷಗಳನ್ನು ನಿವಾರಿಸಿದ್ದರು. ಹಲವು ಬಾರಿ ಪರೀಕ್ಷೆಗಳನ್ನು ನಡೆಸಿ ಮತ್ತೆ ತಾಂತ್ರಿಕ ದೋಷ ಕಾಣಿಸಿಕೊಳ್ಳದಂತೆ ನಿಗಾ ವಹಿಸಿದ್ದರು.

    ತಾಂತ್ರಿಕ ದೋಷವನ್ನು ಸರಿಪಡಿಸಿ ಜುಲೈ 22ರಂದು ಚಂದ್ರಯಾನ-2 ಆರಂಭವಾಗಿದೆ. ಈ ಸಾಧನೆ ಮಾಡುತ್ತಿರುವ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ, ಚೀನಾ ಮಾತ್ರ ಈ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ಈ ಸಾಲಿಗೆ ಈಗ ಭಾರತ ಸೇರಿದೆ.

    ಚಂದ್ರಯಾನ 2 ಯೋಜನೆಗೆ ಸುಮಾರು 978 ಕೋಟಿ ವೆಚ್ಚವಾಗಿದೆ. ಇದರಲ್ಲಿ ಉಪಗ್ರಹ ನಿರ್ಮಾಣಕ್ಕೆ 603 ಕೋಟಿ ರೂ. ವೆಚ್ಚವಾಗಿದ್ದರೆ, ರಾಕೆಟ್‍ಗೆ 375 ಕೋಟಿ ರೂ. ಖರ್ಚಾಗಿದೆ. ಚಂದ್ರಯಾನ 2 ಉಪಗ್ರಹದ ಒಟ್ಟು ತೂಕ 3,850 ಕೆಜಿ ಇದ್ದು, 3 ಲಕ್ಷದ 82 ಸಾವಿರ ಕಿ.ಮೀ. ಸಾಗಲಿದೆ. 54 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 13 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಲಿದೆ.

  • ಬಡ ರೈತನ ಮಗ ಚಂದ್ರಯಾನ-2 ಯೋಜನೆ ಪ್ರಮುಖ ರೂವಾರಿ

    ಬಡ ರೈತನ ಮಗ ಚಂದ್ರಯಾನ-2 ಯೋಜನೆ ಪ್ರಮುಖ ರೂವಾರಿ

    ಕೋಲ್ಕತ್ತಾ: ಭಾರತದ ಹೆಮ್ಮೆಯ ಚಂದ್ರಯಾನ 2 ಅಧಿಕೃತವಾಗಿ ಆರಂಭವಾಗಿದ್ದು, ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ ಸೋಮವಾರ ಮಧ್ಯಾಹ್ನ 2.41ಕ್ಕೆ ನಭಕ್ಕೆ ಚಿಮ್ಮಿದೆ. ಈ ಯೋಜನೆಯಲ್ಲಿ ರೈತನ ಮಗ ಪ್ರಮುಖ ಪಾತ್ರ ವಹಿಸಿದ್ದಾರೆ.

    ಹೌದು. ಪಶ್ಚಿಮ ಬಂಗಾಳದ ಹೂಗ್ಲಿಯ ಶಿಬ್‍ಪುರ್ ಗ್ರಾಮದ ಬಡ ರೈತನ ಮಗ ಚಂದ್ರಕಾಂತ್ ಈಗ ಚಂದ್ರಯಾನ-2 ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ರೈತ ಮಧುಸೂದನ್ ಕುಮಾರ್ ಅವರು ತಮ್ಮ ಮಗನಿಗೆ ಸೂರ್ಯಕಾಂತ್ ಎಂದು ಹೆಸರು ಇಡಲು ಇಚ್ಛಿಸಿದ್ದರು. ಆದರೆ, ಶಿಕ್ಷಕರೊಬ್ಬರ ಸೂಚನೆ ಮೇರೆಗೆ ಅವರು ಮಗನಿಗೆ ಚಂದ್ರಕಾಂತ್ ಎಂದು ನಾಮಕರಣ ಮಾಡಿದರು. ಈಗ `ಚಂದ್ರಯಾನ-2’ನಲ್ಲಿ ಚಂದ್ರಕಾಂತ್ ಪ್ರಮುಖ ಪಾತ್ರ ವಹಿಸಿರುವುದು ಅವರ ಕುಟುಂಬದ ಖುಷಿಯನ್ನು ಮತ್ತು ಹೆಚ್ಚಿಸಿದೆ.

    ಚಂದ್ರಕಾಂತ್ ಅವರು ಭಾರತೀಯ ಉಪಗ್ರಹಗಳು ಹಾಗೂ ಉಪಗ್ರಹ ಕೆಂದ್ರಗಳಿಗೆ ಆಂಟೇನಾ ಸಿಸ್ಟಮ್ ವಿನ್ಯಾಸ ಮಾಡಿದ್ದಾರೆ. ಇವರು ಚಂದ್ರಯಾನ-1ರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಜಿಸ್ಯಾಟ್-12 ಸೇರಿ ಮೊದಲಾದ ಯೋಜನೆಗಳಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಅದರಂತೆ ಚಂದ್ರಯಾನ-2 ಯೋಜನೆಯಲ್ಲೂ ಚಂದ್ರಕಾಂತ್ ಪ್ರಮುಖ ಪಾತ್ರ ವಹಿಸಿದ್ದಾರೆ.

    ಪ್ರಸ್ತುತವಾಗಿ ಚಂದ್ರಕಾಂತ್ ಅವರು ಚಂದ್ರಯಾನ-2ರ ಉಪ ಯೋಜನೆ ನಿರ್ದೇಶಕ ಹಾಗೂ ಯು.ಆರ್ ಉಪಗ್ರಹ ಕೇಂದ್ರದ `ಎಲೆಕ್ಟ್ರೋಮ್ಯಾಗ್ನೆಟಿಕ್’ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅಷ್ಟೇ ಅಲ್ಲದೆ ಚಂದ್ರಕಾಂತ್ ಅವರ ಸಹೋದರ ಶಶಿಕಾಂತ್ ಅವರು ಕೂಡ ವಿಜ್ಞಾನಿಯಾಗಿದ್ದಾರೆ.

    ಮಗನ ಈ ಸಾಧನೆ ಬಗ್ಗೆ ಹೆತ್ತವರು ಹೆಮ್ಮೆಯಿಂದ ಮಾತನಾಡಿದ್ದಾರೆ. ಮೊದಲು ಚಂದ್ರಕಾಂತ್ ಅವರ ತಂದೆ ಪ್ರತಿಕ್ರಿಯಿಸಿ, ನಾನು ಕೃಷಿಯಲ್ಲಿ ತೊಡಗಿದ್ದ ಕಾರಣಕ್ಕೆ ಆತನ ಓದಿನ ವಿಚಾರದಲ್ಲಿ ನಾನು ಏನೂ ಕಲಿಸಲು ಸಾಧ್ಯವಾಗಿಲ್ಲ. ಆದರೆ ಅವನ ಶಿಕ್ಷಕರು ಅವನಿಗೆ ಬಹಳಷ್ಟು ವಿಚಾರವನ್ನು ಕಲಿಸಿಕೊಟ್ಟು, ಪ್ರೋತ್ಸಾಹಿಸಿದ್ದಾರೆ. ಚಂದ್ರಕಾಂತ್ ಸಾಕಷ್ಟು ಪರಿಶ್ರಮ ಪಟ್ಟು ಇಂದು ಈ ಸಾಧನೆ ಮಾಡಿದ್ದಾನೆ. 2001ರಲ್ಲಿ ಇಸ್ರೋ ಸೇರಿ, ಇಂದು ಅತ್ಯುತ್ತಮ ಯೋಜನೆಯ ಪ್ರಮುಖ ರೂವಾರಿಯಾಗಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

    ಚಂದ್ರಕಾಂತ್ ಅವರ ತಾಯಿ ಮಾತನಾಡಿ, ನನ್ನ ಮಗ ಮಾಡಿರುವ ಸಾಧನೆ ನನಗೆ ಬಹಳ ಖುಷಿಯಾಗಿದೆ. ನನ್ನ ಸಂತೋಷವನ್ನು ಹೇಳಿಕೊಳ್ಳಲು ನನಗೆ ಪದಗಳೇ ಸಿಗುತ್ತಿಲ್ಲ. ಚಂದ್ರಯಾನ-2 ರಾಕೆಟ್ ನಭಕ್ಕೆ ಹಾರುವುದನ್ನ ಟಿವಿಯಲ್ಲಿ ನೋಡಿ ಎಂದು ನನ್ನ ಮಗ ಕರೆಮಾಡಿ ಹೇಳಿದ. ನನ್ನ ಮಗನ ಬಗ್ಗೆ ನನಗೆ ಹೆಮ್ಮೆಯಿದೆ ಎಂದಿದ್ದಾರೆ.

    ಜುಲೈ 15ರ ಮಧ್ಯರಾತ್ರಿಯಂದು ನಡೆದ ಮೊದಲ ಪ್ರಯತ್ನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಸ್ಥಗಿತಗೊಳಿಸಲಾಗಿತ್ತು. ಉಡಾವಣೆಗೆ 56 ನಿಮಿಷ ಇದ್ದಾಗ ರಾಕೆಟ್‍ಗೆ ಇಂಧನ ತುಂಬಿಸುವ ವೇಳೆ ಈ ದೋಷ ಪತ್ತೆಯಾಗಿತ್ತು. ವಿಜ್ಞಾನಿಗಳು ಕೂಡಲೇ ಉಡಾವಣೆ ಸ್ಥಗಿತಗೊಳಿಸಲು ನಿರ್ಧರಿಸಿದ್ದರು. ಇಸ್ರೋ ವಿಜ್ಞಾನಿಗಳು ಈಗ ಬಹಳ ಎಚ್ಚರಿಕೆಯಿಂದ ತಾಂತ್ರಿಕ ದೋಷಗಳನ್ನು ನಿವಾರಿಸಿದ್ದಾರೆ. ಹಲವು ಬಾರಿ ಪರೀಕ್ಷೆಗಳನ್ನು ನಡೆಸಿ ಮತ್ತೆ ತಾಂತ್ರಿಕ ದೋಷ ಕಾಣಿಸಿಕೊಳ್ಳದಂತೆ ನಿಗಾ ವಹಿಸಿದ್ದರು.

    ತಾಂತ್ರಿಕ ದೋಷವನ್ನು ಸರಿಪಡಿಸಿ ಸೋಮವಾರದಿಂದ ಚಂದ್ರಯಾನ-2 ಆರಂಭವಾಗಿದೆ. ಈ ಸಾಧನೆ ಮಾಡುತ್ತಿರುವ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ, ಚೀನಾ ಮಾತ್ರ ಈ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ಈ ಸಾಲಿಗೆ ಈಗ ಭಾರತ ಸೇರಲಿದೆ.

    ಚಂದ್ರಯಾನ 2 ಯೋಜನೆಗೆ ಸುಮಾರು 978 ಕೋಟಿ ವೆಚ್ಚವಾಗಿದೆ. ಇದರಲ್ಲಿ ಉಪಗ್ರಹ ನಿರ್ಮಾಣಕ್ಕೆ 603 ಕೋಟಿ ರೂ. ವೆಚ್ಚವಾಗಿದ್ದರೆ, ರಾಕೆಟ್‍ಗೆ 375 ಕೋಟಿ ರೂ. ಖರ್ಚಾಗಿದೆ. ಚಂದ್ರಯಾನ 2 ಉಪಗ್ರಹದ ಒಟ್ಟು ತೂಕ 3,850 ಕೆಜಿ ಇದ್ದು, 3 ಲಕ್ಷದ 82 ಸಾವಿರ ಕಿ.ಮೀ. ಸಾಗಲಿದೆ. 54 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 13 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಲಿದೆ.

  • ಕೆಲವು ದೇಶದ ಧ್ವಜದ ಮೇಲೆ ಚಂದ್ರ ಇದ್ದರೆ, ಚಂದ್ರನ ಮೇಲೆ ನಮ್ಮ ಧ್ವಜ ಇದೆ: ಭಜ್ಜಿಯಿಂದ ಪಾಕ್ ಟ್ರೋಲ್

    ಕೆಲವು ದೇಶದ ಧ್ವಜದ ಮೇಲೆ ಚಂದ್ರ ಇದ್ದರೆ, ಚಂದ್ರನ ಮೇಲೆ ನಮ್ಮ ಧ್ವಜ ಇದೆ: ಭಜ್ಜಿಯಿಂದ ಪಾಕ್ ಟ್ರೋಲ್

    ಮುಂಬೈ: ಕೆಲವು ದೇಶದ ಧ್ವಜದ ಮೇಲೆ ಚಂದ್ರ ಇದ್ದರೆ, ಚಂದ್ರನ ಮೇಲೆ ನಮ್ಮ ಧ್ವಜ ಇದೆ ಎಂದು ಭಾರತೀಯ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನ ಹಾಗೂ ಇತರ ದೇಶವನ್ನು ಟ್ರೋಲ್ ಮಾಡಿದ್ದಾರೆ.

    ಹರ್ಭಜನ್ ಸಿಂಗ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಪಾಕಿಸ್ತಾನ ಸೇರಿದಂತೆ ಕೆಲವು ದೇಶದ ಧ್ವಜದ ಮೇಲೆ ಚಂದ್ರನ ಚಿತ್ರ ಇದೆ ಎಂದು ಬರೆದು ಟರ್ಕಿ, ಲುಬಿಯಾ, ಟುನೀಶಿಯಾ, ಅಜೆರ್ಬೈಜಾನ್, ಅಲ್ಜೀರಿಯಾ, ಮಲೇಷ್ಯಾ, ಮಾಲ್ಡೀವ್ಸ್ ಧ್ವಜದ ಎಮೋಜಿ ಹಾಕಿದ್ದಾರೆ. ಬಳಿಕ ಚಂದ್ರನ ಮೇಲೆ ನಮ್ಮ ಧ್ವಜ ಇದೆ ಎಂದು ಭಾರತ, ಅಮೆರಿಕ, ಚೀನಾ ಹಾಗೂ ರಷ್ಯಾ ಧ್ವಜವನ್ನು ಹಾಕಿ ಟ್ವೀಟ್ ಮಾಡಿದ್ದಾರೆ. 1.50 ಲಕ್ಷ ಮಂದಿ ಈ ಟ್ವೀಟ್ ಅನ್ನು ಲೈಕ್ ಮಾಡಿದ್ದರೆ 30 ಸಾವಿರಕ್ಕೂ ಅಧಿಕ ಮಂದಿ ರೀ-ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವವೇ ಆಯ್ಕೆ ಏಕೆ? ಯಾವ ಸಾಧನದ ಕೆಲಸ ಏನು?- ಇಲ್ಲಿದೆ ಚಂದ್ರಯಾನ 2 ಪೂರ್ಣ ಮಾಹಿತಿ

    ಚಂದ್ರಯಾನ- 2 ಲಾಂಚ್ ಆದ ನಂತರ ದೇಶದ ಜನತೆ ಇಸ್ರೋಗೆ ಅಭಿನಂದನೆ ಸಲ್ಲಿಸಿದೆ. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಪ್ರಧಾನಿ ಮೋದಿ ಶುಭಾಶಯ ಕೋರಿದಲ್ಲದೆ, ಹಲವು ಕ್ರಿಕೆಟ್ ಆಟಗಾರರು ಹಾಗೂ ಸಿನಿಮಾ ಕಲಾವಿದರು ಕೂಡ ಟ್ವೀಟ್ ಮಾಡುವ ಮೂಲಕ ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಚಂದಿರನ ಅಂಗಳಕ್ಕೆ ಜಿಗಿದ ‘ಬಾಹುಬಲಿ’ – ಜಿಎಸ್‍ಎಲ್‍ವಿ ಮಾರ್ಕ್-3 ಉಡಾವಣೆ ಯಶಸ್ವಿ

    ಭಾರತದ ಹೆಮ್ಮೆಯ ಚಂದ್ರಯಾನ- 2 ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ ಸೋಮವಾರ ಮಧ್ಯಾಹ್ನ 2.41ಕ್ಕೆ ನಭಕ್ಕೆ ಚಿಮ್ಮಿದೆ. ಈ ಮೂಲಕ ಈ ಸಾಧನೆ ಮಾಡುತ್ತಿರುವ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ, ಚೀನಾ ಮಾತ್ರ ಈ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ಈ ಸಾಲಿಗೆ ಈಗ ಭಾರತ ಸೇರಲಿದೆ. ಪ್ರತಿಯೊಂದು ಹಂತಗಳು ಯಶಸ್ವಿಯಾಗುತ್ತಿದ್ದಂತೆ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು.

    ಚಂದ್ರಯಾನ – 2 ಯೋಜನೆಗೆ ಸುಮಾರು 978 ಕೋಟಿ ವೆಚ್ಚವಾಗಿದೆ. ಇದರಲ್ಲಿ ಉಪಗ್ರಹ ನಿರ್ಮಾಣಕ್ಕೆ 603 ಕೋಟಿ ರೂ. ವೆಚ್ಚವಾಗಿದ್ದರೆ, ರಾಕೆಟ್‍ಗೆ 375 ಕೋಟಿ ರೂ. ಖರ್ಚಾಗಿದೆ. ಚಂದ್ರಯಾನ -2 ಉಪಗ್ರಹದ ಒಟ್ಟು ತೂಕ 3,850 ಕೆಜಿ. ಇದ್ದು 3 ಲಕ್ಷದ 82 ಸಾವಿರ ಕಿ.ಮೀ. ಸಾಗಲಿದೆ. 54 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 13 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಲಿದೆ.

  • ಇದೊಂದು ಐತಿಹಾಸಿಕ ಕ್ಷಣ – ನಮ್ಮ ಕೆಲಸ ಮುಗಿದಿಲ್ಲ: ಇಸ್ರೋ ಅಧ್ಯಕ್ಷ

    ಇದೊಂದು ಐತಿಹಾಸಿಕ ಕ್ಷಣ – ನಮ್ಮ ಕೆಲಸ ಮುಗಿದಿಲ್ಲ: ಇಸ್ರೋ ಅಧ್ಯಕ್ಷ

    ಶ್ರೀಹರಿಕೋಟಾ: ವಿಶ್ವವೇ ಭಾರತದಂತಹ ತಿರುಗಿ ನೋಡುವಂತೆ ಮಾಡಲು ಇಸ್ರೋ ಮತ್ತೊಮ್ಮೆ ಯಶಸ್ವಿಯಾಗಿದ್ದು, ಭಾರತದ ಬಹು ನಿರೀಕ್ಷಿತ ಚಂದ್ರಯಾನ 2 ಯೋಜನೆ ಯಶಸ್ವಿಯಾಗಿ ನಭಕ್ಕೆ ಚಿಮ್ಮುವ ಮೂಲಕ ಆರಂಭಗೊಂಡಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ. ಶಿವನ್ ಯೋಜನೆಯಲ್ಲಿ ಪಾಲ್ಗೊಂಡ ತಂಡವನ್ನು ಅಭಿನಂದಿಸಿದ್ದಾರೆ.

    ತಮ್ಮ ಕುಟುಂಬಗಳನ್ನು ಮರೆತು ಕಾರ್ಯ ನಿರ್ವಹಿಸಿದ್ದ ಪರಿಣಾಮ ಯೋಜನೆ ಯಶಸ್ವಿಯಾಗಿದೆ. ಯೋಜನೆ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಸೆಲ್ಯೂಟ್ ಮಾಡುವ ಕರ್ತವ್ಯ ನನ್ನದು ಎಂದರು.

    ನಮ್ಮ ಕೆಲಸ ಇಲ್ಲಿಗೆ ಮುಗಿದಿಲ್ಲ ಇದು ಕೇವಲ ಆರಂಭಿಕ ಬಹುದೊಡ್ಡ ಯಶಸ್ವಿಯಾಗಿದ್ದು, ಮುಂದಿನ 24 ಗಂಟೆಗಳ ಕಾಲ ನಮಗೆ ಬಹುಮುಖ್ಯವಾಗಿದೆ. ಭೂ ಕಕ್ಷೆಗೆ ಸೇರಲು ಮಿಷನ್ ಯಶಸ್ವಿಯಾಗಿದ್ದು, ಐತಿಹಾಸ ಪಯಣದ ಆರಂಭವಾಗಿದ್ದು, ಯೋಜನೆ ಹೊಸ ಸಂಗತಿಗಳ ಮೇಲೆ ಬೆಳಕು ಚೆಲ್ಲಲಿದೆ. ಈ ಯೋಜನೆಗೆ ಇಸ್ರೋ, ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಎದುರು ನೋಡುತಿತ್ತು ಎಂದು ಹೇಳಿದರು.

    ಸದ್ಯ ಪಡೆದಿರುವ ಮಾಹಿತಿಯ ಅನ್ವಯ ಎಲ್ಲವೂ ನಿಗದಿಯಂತೆ ನಡೆದಿದೆ. ಮುಂದಿನ ಯೋಜನೆಗೆ ನಮ್ಮ ಕೆಲಸ ಇಂದಿನಿಂದಲೇ ಆರಂಭವಾಗಲಿದೆ. ಈ ಹಿಂದೆ ನಮಗೇ ಸ್ವಲ್ಪ ಹಿನ್ನಡೆ ಆಗಿದ್ದರೂ ಕೂಡ ಮತ್ತೆ ಸ್ಪಿಡ್ ನಲ್ಲಿ ಬೌನ್ಸ್ ಬ್ಯಾಕ್ ಮಾಡಿದ್ದೇವೆ. ಇದು ನಮಗೆ ಬೋನಸ್ ರೀತಿ ಆಗಿದೆ. ಮುಂದಿನ ಒಂದೂವರೆ ತಿಂಗಳಿನಲ್ಲಿ 15 ಪ್ರಮುಖ ಹಂತಗಳನ್ನು ದಾಟಬೇಕಾಗುತ್ತದೆ. ಈ ಯಶಸ್ಸು ಎಲ್ಲರಿಗೂ ಸಲ್ಲುತ್ತದೆ ಎಂದರು.

  • ಚಂದ್ರಯಾನ-2 ಉಡಾವಣೆಗೆ ಸಾಕ್ಷಿಯಾಗಬೇಕೆ? ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಿ

    ಚಂದ್ರಯಾನ-2 ಉಡಾವಣೆಗೆ ಸಾಕ್ಷಿಯಾಗಬೇಕೆ? ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಿ

    ಶ್ರೀಹರಿಕೋಟಾ: ತಾಂತ್ರಿಕ ಕಾರಣದಿಂದ ಜು.15ರಂದು ರದ್ದಾಗಿದ್ದ ಭಾರತ ಮಹತ್ವಾಕಾಂಕ್ಷಿಯ ಬಾಹ್ಯಾಕಾಶ ಯೋಜನೆ ಚಂದ್ರಯಾನ-2 ಉಡಾವಣೆಯ ದಿನಾಂಕವನ್ನು ಜು.22(ಸೋಮವಾರ)ಕ್ಕೆ ನಿಗದಿಪಡಿಸಲಾಗಿದ್ದು, ಉಡಾವಣೆಯ ವೀಕ್ಷಣೆಗಾಗಿ ಆನ್‍ಲೈನ್ ಟಿಕೆಟ್ ಬುಕಿಂಗ್‍ನ್ನು ಇಸ್ರೋ ಪ್ರಾರಂಭಿಸಿದೆ.

    ಈ ತಿಂಗಳ ಕೊನೆಯಲ್ಲಿ ಉಡಾವಣೆಗೆ ಚಂದ್ರಯಾನ-2ನ್ನು ನಿಗದಿ ಪಡಿಸಿದ್ದು, ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಚಂದ್ರಯಾನ-2 ಉಡಾವಣೆಯನ್ನು ನೋಡಲು ಬರುವವರಿಗೆ ಜು.19ರಿಂದ ಆನ್‍ಲೈನ್‍ನಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.

    ಟ್ವಿಟ್ಟರ್ ಮೂಲಕ ಈ ಮಾಹಿತಿ ಖಚಿತಪಡಿಸಿರುವ ಇಸ್ರೋ, ಸತೀಶ್ ಧವನ್ ಸ್ಪೇಸ್ ಸೆಂಟರ್‍ನಿಂದ ಉಡಾವಣೆಗೊಳ್ಳುತ್ತಿರುವ #GSLVMkIII-M1/#Chandrayaan2 ಉಡಾವಣೆಗೆ ನೀವು ಸಾಕ್ಷಿಯಾಗಬೇಕಾದಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಜು.19 ರಂದು ಸಂಜೆ 6ಕ್ಕೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ಈ ಹಿಂದೆ ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಜುಲೈ 15ರಂದು ನಸುಕಿನ ಜಾವ 2.51 ಗಂಟೆಗೆ ಚಂದ್ರಯಾನ-2 ಉಡಾವಣೆಯಾಗಬೇಕಿತ್ತು. ಆದರೆ ರಾಕೆಟ್‍ನಲ್ಲಿ ಉಡಾವಣೆಗೆ ನಿಗದಿಪಡಿಸಿದ ಕಾಲಮಾನಕ್ಕಿಂತ 1 ಗಂಟೆ ಮುನ್ನ ತಾಂತ್ರಿಕ ದೋಷ ಕಂಡು ಬಂದು ಉಡಾವಣೆ ರದ್ದುಪಡಿಸಲಾಗಿತ್ತು.

  • ಇದೇ ತಿಂಗಳಲ್ಲೇ ಉಡಾವಣೆಯಾಗಲಿದೆ ಚಂದ್ರಯಾನ-2

    ಇದೇ ತಿಂಗಳಲ್ಲೇ ಉಡಾವಣೆಯಾಗಲಿದೆ ಚಂದ್ರಯಾನ-2

    ಶ್ರೀಹರಿಕೋಟಾ: ಇದೇ ತಿಂಗಳಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆಯಾಗುವ ಸಾಧ್ಯತೆಯಿದೆ ಎಂದು ಇಸ್ರೋ ಮೂಲವನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಬಹುನಿರೀಕ್ಷಿತ ಚಂದ್ರಯಾನ-2ನ ಉಪಗ್ರಹವನ್ನು ಸೋಮವಾರ ಬೆಳಗಿನ ಜಾವ 2.51ಕ್ಕೆ ಉಡಾವಣೆ ಮಾಡಬೇಕಿತ್ತು. ಆದರೆ, ಉಡಾವಣೆಗೆ ಕೇವಲ ಒಂದು ಗಂಟೆ ಬಾಕಿ ಇರುವಾಗಲೇ ರಾಕೆಟ್‍ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಪರಿಣಾಮ ಉಡಾವಣೆಯನ್ನು ರದ್ದುಪಡಿಸಲಾಯಿತು ಎಂದು ಇಸ್ರೋ ತಿಳಿಸಿದೆ.

    ರಾಕೆಟ್ ಹಾಗೂ ಉಪಗ್ರಹ ಸುರಕ್ಷಿತವಾಗಿವೆ. ತುಂಬಾ ಅಪಾಯಕಾರಿ ಇಂಧನ ಲಿಕ್ವಿಡ್ ಹೈಡ್ರೋಜನ್, ಲಿಕ್ವಿಡ್ ಆಕ್ಸಿಜನ್‍ಗಳನ್ನು ರಾಕೆಟ್‍ನಿಂದ ಹೊರ ತೆಗೆಯಲಾಗಿದೆ. ಉಡಾವಣೆಯ ಸಂದರ್ಭದಲ್ಲಾದ ತೊಂದರೆಯನ್ನು ವಿಜ್ಞಾನಿಗಳು ರಾಕೆಟ್ ಪರಿಶೀಲಿಸಿದ ನಂತರ ತಿಳಿಯಲಿದೆ. ವಿಜ್ಞಾನಿಗಳು ಸಮಸ್ಯೆ ಪತ್ತೆ ಹಚ್ಚಿದ ನಂತರ ವಿಮರ್ಶೆ ಮಾಡಲಾಗುವುದು ಎಂದು ಇಸ್ರೋ ಮೂಲಗಳು ತಿಳಿಸಿವೆ.

    ಚಂದ್ರಯಾನ ಉಡಾವಣೆಯನ್ನು ಸ್ಥಗಿತಗೊಳಿಸಿರುವುದು ಸರಿಯಾದ ನಿರ್ಧಾರ, ಇಂತಹ ದೊಡ್ಡ ಕಾರ್ಯಾಚರಣೆಯ ಅವಕಾಶವನ್ನು ಮತ್ತೊಮ್ಮೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇಸ್ರೋ ನಿರ್ಧಾರ ಸಮಂಜಸವಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‍ಡಿಓ)ಯ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ರವಿ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

    ಏನೇನಾಯ್ತು?
    ರಾತ್ರಿ 1 ಗಂಟೆ 55 ನಿಮಿಷ 24 ಸೆಕೆಂಡ್‍ಗೆ ಚಂದ್ರಯಾನ-2 ರಾಕೆಟಿನಲ್ಲಿ ತಾಂತ್ರಿಕ ದೋಷ ಇರುವುದು ಪತ್ತೆಯಾಗಿದೆ. ತಕ್ಷಣ ಅಧಿಕಾರಿಗಳು ಸಮಾಲೋಚನೆ ನಡೆಸಿ 2 ಗಂಟೆ 9 ನಿಮಿಷಕ್ಕೆ ಚಂದ್ರಯಾನ- 2 ತಾತ್ಕಾಲಿಕ ತಡೆ ನೀಡಿ ಬಳಿಕ 2 ಗಂಟೆ 16 ನಿಮಿಷಕ್ಕೆ ಚಂದ್ರಯಾನ- 2 ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡರು. ಬಳಿಕ ಟ್ವೀಟ್ ಮಾಡಿ ಅಧಿಕೃತವಾಗಿ ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು.

    ಈ ಯೋಜನೆಗೆ ಸುಮಾರು 978 ಕೋಟಿ ವೆಚ್ಚವಾಗಿದೆ. ಇದರಲ್ಲಿ ಉಪಗ್ರಹದ ವೆಚ್ಚ 603 ಕೋಟಿ, ರಾಕೆಟ್‍ಗೆ 375 ಕೋಟಿ ಖರ್ಚು. ಚಂದ್ರಯಾನ 2 ಉಪಗ್ರಹದ ಒಟ್ಟು ತೂಕ 3,850 ಕೆಜಿ. ಇದೆ. 3 ಲಕ್ಷದ 82 ಸಾವಿರ ಕಿ.ಮೀ. ಸಾಗಲಿದೆ. 54 ದಿನಗಳ ಬಳಿಕ ಈ ಉಪಗ್ರಹ ಚಂದ್ರನ ದಕ್ಷಿಣ ದ್ರುವ ತಲುಪಲಿದೆ.