Tag: Chandrayana-2

  • ಮುಂದಿನ ವರ್ಷ ಇಸ್ರೋದಿಂದ ಚಂದ್ರಯಾನ-3

    ಮುಂದಿನ ವರ್ಷ ಇಸ್ರೋದಿಂದ ಚಂದ್ರಯಾನ-3

    ನವದೆಹಲಿ: 2021ರಲ್ಲಿ ಮೊದಲ ಆರು ತಿಂಗಳಲ್ಲಿಯೇ ಇಸ್ರೋ ಚಂದ್ರಯಾನ-3 ಉಡಾವಣೆ ಆಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸುಳಿವು ನೀಡಿದ್ದಾರೆ. ಚಂದ್ರಯಾನ-2 ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದ್ದರಿಂದ ಚಂದ್ರಯಾನ-3ಕ್ಕೆ ಇಸ್ರೋ ಸಿದ್ಧತೆ ನಡೆಸಿಕೊಂಡಿದೆ.

    ಚಂದ್ರಯಾನ-2ರಿಂದ ಕಲಿತ ಪಾಠದಿಂದ ಚಂದ್ರಯಾನ-3ನ್ನು ಸಿದ್ಧಗೊಳಿಸಲಾಗುತ್ತಿದೆ. 2021ರ ಮೊದಲ ಆರು ತಿಂಗಳಲ್ಲಿ ಚಂದ್ರಯಾನ-3 ನಭಕ್ಕೆ ಚಿಮ್ಮುವ ಸಾಧ್ಯತೆಗಳಿವೆ. ಚಂದ್ರಯಾನ-2 ಅಸಫಲತೆಯಲ್ಲಿ ಕಲಿತ ಹಲವು ಪಾಠಗಳಿಂದ ಚಂದ್ರಯಾನ-3 ಡಿಸೈನ್ ಮಾಡಲಾಗ್ತಿದೆ. ಕ್ಷಮತೆ, ತಂತ್ರಜ್ಞಾನ, ಸಂಪರ್ಕ ಸಾಧಕ ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಚಂದ್ರಯಾನ-3 ಹೊಂದಲಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

    ಇದೇ ವೇಳೆ ಗಗನಯಾನದ ಬಗ್ಗೆಯೂ ಮಾಹಿತಿ ನೀಡಿರುವ ಜಿತೇಂದ್ರ ಸಿಂಗ್, ಮಾನವ ಸಹಿತ ಗಗನಯಾನ ಯೋಜನೆಗಾಗಿ ಕೆಲಸ ಆರಂಭಗೊಂಡಿದೆ. ಮೈಕ್ರೋಗ್ರೆವಿಟಿ ಹೊಂದಿದ 4 ಬಯೋಲಾಜಿಕಲ್ ಮತ್ತು 2 ಫಿಜಿಕಲ್ ಸೈನ್ಸ್ ಪ್ರಯೋಗ ಮಾಡಲಾಗುತ್ತಿದೆ. ನಾಲ್ವರು ಅಂತರಿಕ್ಷ ಯಾತ್ರಿಗಳಿಗೆ ಸ್ಪೇಸ್ ಫೈಲಟ್ ತರಬೇತಿ ಸಹ ಆರಂಭಗೊಂಡಿರುವ ಕುರಿತು ಮಾಹಿತಿ ನೀಡಿದರು.

  • ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

    ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

    ವಾಷಿಂಗ್ಟನ್: ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾದ ಪತ್ತೆ ಹಚ್ಚಿದೆ. ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳದ ಫೋಟೋವನ್ನು ನಾಸಾ ಹಂಚಿಕೊಂಡಿದೆ.

    ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್‌ಆರ್‌ಒ) ಮೂಲಕ ತೆಗೆದ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದು ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳವನ್ನು ಮತ್ತು ಅದಕ್ಕೆ ಸಂಬಂಧಿತ ಶಿಲಾಖಂಡರಾಶಿಗಳ ಕ್ಷೇತ್ರವನ್ನು ಪತ್ತೆಮಾಡಿದೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ನ ಭಾಗಗಳು ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ಎರಡು ಡಜನ್ ಸ್ಥಳಗಳಲ್ಲಿ ಹರಡಿಕೊಂಡಿವೆ ಎಂದು ತಿಳಿಸಿದೆ.

    ಸೆ. 26ರಂದು ನಾಸಾ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಮೊಸಾಕ್ ಚಿತ್ರವನ್ನು ಬಿಡುಗಡೆ ಮಾಡಿತ್ತು. ಮೆಕ್ಯಾನಿಕಲ್ ಇಂಜಿನಿಯರ್ ಷಣ್ಮುಗ ಸುಬ್ರಮಣ್ಯಂ ಎಲ್‌ಆರ್‌ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದರು. ಆಗ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು 750 ಮೀ. ದೂರದಲ್ಲಿ ಅದರ ಕೆಲ ಭಾಗಗಳು ಪತ್ತೆಯಾಗಿತ್ತು ಎಂದು ನಾಸಾ ಹೇಳಿದೆ.

    3.84 ಲಕ್ಷ ಕಿ.ಮೀ ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗುತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಸಂತೋಷದಲ್ಲಿದ್ದರು. ಸೆಪ್ಟೆಂಬರ್ 7ರ ಬೆಳಗಿನ ಜಾವ 1.50ರ ವೇಳಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿ.ಮೀ ಎತ್ತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿತ್ತು.

  • ಮಕ್ಕಳಿಂದ ಮೂಡಿ ಬಂದ ಚಂದ್ರಯಾನ-2 ಯಶಸ್ವಿ ಉಡಾವಣೆ

    ಮಕ್ಕಳಿಂದ ಮೂಡಿ ಬಂದ ಚಂದ್ರಯಾನ-2 ಯಶಸ್ವಿ ಉಡಾವಣೆ

    ಕೊಪ್ಪಳ: ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಬಗ್ಗೆ ಯಾರಿಗೆ ಗೊತಿಲ್ಲ ಹೇಳಿ. ಇಡಿ ದೇಶವೇ ವಿಜ್ಞಾನಿಗಳ ಈ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿತ್ತು. ಇದೀಗ ಅಂತಹದ್ದೆ ಒಂದು ಪ್ರಯತ್ನ ನಮ್ಮ ಕೊಪ್ಪಳದ ವಿದ್ಯಾರ್ಥಿಗಳು ಮಾಡಿದ್ದಾರೆ.

    ಎಂಜಿನಿಯರ್ಸ್ ಡೇ ಅಂಗವಾಗಿ ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಪ್ರಯೋಗಾರ್ಥವಾಗಿ ವಿಜ್ಞಾನಿಗಳ ರೀತಿಯಲ್ಲಿ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಉಡಾವಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಎಲ್‍ಕೆಜಿಯಿಂದ ಹಿಡಿದು ಆರನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳು ಈ ಪ್ರಯೋಗದಲ್ಲಿ ತಮ್ಮ ಚಾಣಕ್ಯತನವನ್ನು ತೋರಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಸಹಾಯ ಪಡೆದು ತಾವೇ ಮಾದರಿಗಳನ್ನು ತಯಾರಿಸಿದ್ದಾರೆ.

    ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಒಂದು ತಿಂಗಳ ಕಾಲಾವಕಾಶ ತಗೆದುಕೊಂಡು ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ. ಶಾಲಾ ಆವರಣದಲ್ಲೇ ಚಂದ್ರ ಮತ್ತು ಭೂಮಿಯನ್ನು ತಯಾರು ಮಾಡಿ ಡ್ರೋಣ್ ಬಳಸಿ ವಿಕ್ರಮ್ ಲ್ಯಾಂಡರ್ ಯಾವ ರೀತಿ ಚಂದ್ರನ ಮೇಲೆ ಕಾರ್ಯಚರಣೆ ನಡೆಸಿದೆ ಅನ್ನುವ ಒಂದು ಚಿಕ್ಕ ಪ್ರಯೋಗವನ್ನು ಮಾಡಿ ಮಕ್ಕಳಲ್ಲಿ ಉಪಗ್ರಹದ ಬಗ್ಗೆ ಜ್ಞಾನ ಮೂಡಿಸುವ ಪ್ರಯತ್ನ ಮಾಡಲಾಯಿತು.

    ಚಂದ್ರಯಾನದ ಪ್ರಯೋಗ ಅಷ್ಟೇ ವಿವಿಧ ರೀತಿಯ ವೈಜ್ಞಾನಿಕ ಪ್ರಯೋಗವನ್ನು ಸಹ ವಿದ್ಯಾರ್ಥಿಗಳು ಮಾಡಿದ್ದು ಪಾಲಕರು ತಮ್ಮ ಮಕ್ಕಳು ಮಾಡಿದ ವೈಜ್ಞಾನಿಕ ಪ್ರಯೋಗ ನೋಡಿ ಖುಷಿಪಟ್ಟರು. ಇನ್ನೂ ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಶಿಕ್ಷಕರು ಸಹ ಸಾಥ್ ನೀಡಿದರು.

  • ವಿಕ್ರಮ್ ನಿನಗೆ ದಂಡ ಹಾಕಲ್ಲ ಸಂಪರ್ಕಕ್ಕೆ ಸಿಗು: ನಾಗ್ಪುರ್ ಪೊಲೀಸ್

    ವಿಕ್ರಮ್ ನಿನಗೆ ದಂಡ ಹಾಕಲ್ಲ ಸಂಪರ್ಕಕ್ಕೆ ಸಿಗು: ನಾಗ್ಪುರ್ ಪೊಲೀಸ್

    ಮುಂಬೈ: ಇಸ್ರೋನ ಬಹುನಿರೀಕ್ಷೆಯ ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲು 2.1 ಕಿ.ಮೀ ಅಂತರದಲ್ಲಿ ಸಂಪರ್ಕವನ್ನು ಕಳೆದುಕೊಂಡಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿರುವ ನಾಗ್ಪುರ್ ಪೊಲೀಸ್ ವಿಕ್ರಮ್ ನಿನಗೆ ದಂಡ ಹಾಕಲ್ಲ ಸಂಪರ್ಕಕ್ಕೆ ಸಿಗು ಎಂದು ಟ್ವೀಟ್ ಮಾಡಿದ್ದಾರೆ,

    ಶನಿವಾರ ಚಂದ್ರನ ದಕ್ಷಿಣ ಕಕ್ಷೆಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಬೇಕಿದ್ದ ವಿಕ್ರಮ್ ಲ್ಯಾಂಡರ್, ಲ್ಯಾಂಡಿಂಗ್‍ಗೆ ಕೆಲವು ನಿಮಿಷ ಬಾಕಿಯಿದ್ದಾಗ ತನ್ನ ಕಕ್ಷೆಯನ್ನು ಬದಲಿಸಿ ಇಸ್ರೋದಿಂದ ಸಂಪರ್ಕವನ್ನು ಕಳೆದುಕೊಂಡಿತ್ತು. ಇದಕ್ಕೆ ಸಂಬಧಿಸಿದಂತೆ ನಾಗ್ಪುರ ಪೊಲೀಸ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಇಸ್ರೋಗೆ ಸಂಪರ್ಕಕ್ಕೆ ಸಿಗದ ವಿಕ್ರಮ್ ಲ್ಯಾಂಡರ್ ಕುರಿತು ಟ್ವೀಟ್ ಮಾಡಿರುವ ನಾಗ್ಪುರ್ ಪೊಲೀಸರು, ನಮ್ಮ ಪ್ರೀತಿಯ ವಿಕ್ರಮ್. ನೀನು ಸಿಗ್ನಲ್ ಜಂಪ್ ಮಾಡಿದ್ದೀಯಾ ಎಂದು ನಾವು ನಿನಗೆ ದಂಡ ಹಾಕಲ್ಲ. ದಯವಿಟ್ಟು ನೀನು ನಮ್ಮ ಸಂಪರ್ಕಕ್ಕೆ ಸಿಗು ಎಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.

    ಈಗ ಈ ಟ್ವಿಟ್ಟರ್ ನೋಡಿದ ನೆಟ್ಟಿಗರು ಪೊಲೀಸರ ಈ ಟ್ವೀಟ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಟ್ವೀಟ್ ಅದ್ಭುತವಾಗಿದೆ. ನಿಮ್ಮ ಹಾಗೇ 130 ಕೋಟಿ ಭಾರತೀಯರು ವಿಕ್ರಮನ ಸಂಪರ್ಕಕ್ಕೆ ಕಾಯುತ್ತಿದ್ದಾರೆ ಎಂದು ಕೆಲವರು ರೀಟ್ವೀಟ್ ಮಾಡಿದ್ದಾರೆ. ಒಳ್ಳೆಯ ಮಾತುಗಳು ಸೋ ಕ್ಯೂಟ್ ಎಂದು ಕಮೆಂಟ್ ಮಾಡಿದ್ದಾರೆ.

    ಸಾಫ್ಟ್ ಲ್ಯಾಂಡಿಂಗ್ ಆಗದೆ ಹಾರ್ಡ್ ಲ್ಯಾಂಡಿಂಗ್ ಆದ ಕಾರಣ ವಿಕ್ರಮ್ ಲ್ಯಾಂಡರ್ ಮತ್ತೆ ಸಂಪರ್ಕ ಸಿಗುವುದು ಕಷ್ಟ ಎಂದು ಹೇಳಲಾಗಿತ್ತು. ಆದರೆ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಬಿದ್ದಿರುವ ಥರ್ಮಲ್‍ನ ಫೋಟೋವನ್ನು ಕಳುಹಿಸಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಭಾನುವಾರ ಹೇಳಿದ್ದರು. ಮುಂದಿನ ಮೂರು ದಿನಗಳಲ್ಲಿ ವಿಕ್ರಮ್ ಲ್ಯಾಂಡರ್ ಎಲ್ಲಿದೆ ಮತ್ತು ಹೇಗಿದೆ ಎಂಬಿತ್ಯಾದಿಗಳ ವಿಷಯಗಳ ಮಾಹಿತಿ ಸಿಗಲಿದೆ ಎಂದು ಹಲವು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು.

    ಹಿರಿಯ ವಿಜ್ಞಾನಿಯೊಬ್ಬರು, ಮುಂದಿನ ಮೂರು ದಿನಗಳಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಿಗುವ ಸಾಧ್ಯತೆಗಳಿವೆ. ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡು ಸ್ಥಳ ತಲುಪಲು ಆರ್ಬಿಟರ್ ಗೆ ಮೂರು ದಿನ ಸಮಯ ಬೇಕಾಗುತ್ತದೆ. ಕೊನೆಯ ಕ್ಷಣದಲ್ಲಿ ವಿಕ್ರಮ್ ತನ್ನ ಪಥ ಬದಲಿಸಿದ್ದರಿಂದ ಸಂಪರ್ಕ ಕಡಿತಗೊಂಡಿತು ಎಂದು ವಿವರಿಸಿದ್ದರು.

  • ಮೋಸ್ಟ್ ಇನ್‍ಸ್ಪೈರಿಂಗ್ ವುಮೆನ್ ಆಗಿ ಆಲಿಯಾ ಆಯ್ಕೆ- ನೆಟ್ಟಿಗರಿಂದ ತರಾಟೆ

    ಮೋಸ್ಟ್ ಇನ್‍ಸ್ಪೈರಿಂಗ್ ವುಮೆನ್ ಆಗಿ ಆಲಿಯಾ ಆಯ್ಕೆ- ನೆಟ್ಟಿಗರಿಂದ ತರಾಟೆ

    ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರು ದಿ ಮೋಸ್ಟ್ ಇನ್‍ಸ್ಪೈರಿಂಗ್ ವುಮೆನ್ ಎಂದು ನಾಮಿನೇಟ್ ಆಗಿದ್ದು, ಇದಕ್ಕೆ ನೆಟ್ಟಿಗರು ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇತ್ತೀಚೆಗೆ 2019ರ ಅತ್ಯಂತ ಸ್ಫೂರ್ತಿದಾಯಿಕ ಮಹಿಳೆ ವಿಭಾಗದಲ್ಲಿ ಆಲಿಯಾ ಅವರು ಪೀಪಲ್ಸ್ ಚಾಯ್ಸ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಈ ನಾಮಿನೇಟ್ ನಿಜಕ್ಕೂ ದೊಡ್ಡ ಸಾಧನೆಯಾಗಿದೆ. ಆಲಿಯಾ ಅವರ ಈ ಸಾಧನೆಯನ್ನು ಜನರು ಇಷ್ಟಪಡಲಿಲ್ಲ. ಹಾಗಾಗಿ ಅವರು ಆಲಿಯಾ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ದೇಶದಲ್ಲಿ ಚಂದ್ರಯಾನ -2 ಮಿಷನ್ ಡೈರೆಕ್ಟರ್ ರಿತು ಕರಿಧಾಲ್ ಅಂತಹ ಮಹಿಳೆಯರು ಇದ್ದಾರೆ. ಅಲ್ಲದೆ ದೇಶವನ್ನು ಚಂದ್ರನತ್ತ ತಲುಪಿಸುವಲ್ಲಿ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಅಂತಹವರಿಗೆ ದಿ ಮೋಸ್ಟ್ ಇನ್‍ಸ್ಪೈರಿಂಗ್ ವುಮೆನ್ ಎಂದು ನಾಮಿನೇಟ್ ಮಾಡುವ ಬದಲು ಆಲಿಯಾ ಅವರಿಗೆ ಯಾಕೆ ನೀಡುತ್ತಿದ್ದೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.

    ಅಲ್ಲದೆ ಮತ್ತೆ ಕೆಲವರು ಆಲಿಯಾ ಭಟ್ ಮೋಸ್ಟ್ ಇನ್‍ಸ್ಪೈರಿಂಗ್ ವುಮೆನ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನಮ್ಮ ದೇಶದಲ್ಲಿ ಹಲವು ಮಹಿಳೆಯರು ಇದ್ದಾರೆ. ಅವರನ್ನು ಎಣಿಸುತ್ತಾ ಹೋದರೆ ನೀವು ಸುಸ್ತಾಗುತ್ತೀರಿ ಎಂದು ಕಮೆಂಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

    ಹಿಮಾ ದಾಸ್ ಅವರು ಒಂದೇ ತಿಂಗಳಿನಲ್ಲಿ 5 ಚಿನ್ನದ ಪದಕ ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಗೆಲುವು ಸಾಧಿಸಿದ ಮೊದಲ ಮಹಿಳೆ. ಅವರಿಗೆ ಈ ಪ್ರಶಸ್ತಿ ಯಾಕೆ ನೀಡಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

    ಟ್ರೋಲ್ ಆಗುತ್ತಿದ್ದಂತೆ ಆಲಿಯಾ ಭಟ್ ಅವರ ಅಭಿಮಾನಿಗಳು ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ಕೆಲವರು ಆಲಿಯಾ ಅವರಿಗೆ ಎಂಟರ್ ಟೈನ್‍ಮೆಂಟ್ ಕ್ಯಾಟಗೇರಿಯಲ್ಲಿ ದಿ ಮೋಸ್ಟ್ ಇನ್‍ಸ್ಪೈರಿಂಗ್ ವುಮೆನ್ ಎಂದು ನಾಮಿನೇಟ್ ಆಗಿದ್ದಾರೆ ಎಂದು ಹೇಳುತ್ತಿದ್ದಾರೆ.

  • ಯಾವ ದೇಶವೂ ಮಾಡದ ಪ್ರಯತ್ನ ನಾವು ಮಾಡಿದ್ದೇವೆ- ವಿಜ್ಞಾನಿಗಳಿಗೆ ವಿದ್ಯಾರ್ಥಿಗಳು ಸೆಲ್ಯೂಟ್

    ಯಾವ ದೇಶವೂ ಮಾಡದ ಪ್ರಯತ್ನ ನಾವು ಮಾಡಿದ್ದೇವೆ- ವಿಜ್ಞಾನಿಗಳಿಗೆ ವಿದ್ಯಾರ್ಥಿಗಳು ಸೆಲ್ಯೂಟ್

    ಕೊಪ್ಪಳ: ಚಂದಿರನ ಅಂಗಳದಲ್ಲಿ ವಿಕ್ರಮ ಲ್ಯಾಂಡರ್ ಸಂಪರ್ಕ ಕಡಿತ ಹಿನ್ನೆಲೆ ಕೊಪ್ಪಳದ ವಿದ್ಯಾರ್ಥಿಗಳು ವಿಜ್ಞಾನಿಗಳ ಪ್ರಯತ್ನಕ್ಕೆ ಸೆಲ್ಯೂಟ್ ಹೊಡೆದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಗಂಗಾವತಿಯ ರಾಘವೇಂದ್ರ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಇಂದು ಶಾಲೆ ಆರಂಭಕ್ಕೂ ಮುನ್ನ ವಿಜ್ಞಾನಿಗಳ ಪ್ರಯತ್ನಕ್ಕೆ ಜಯಘೊಷಣೆ ಮೊಳಗಿಸಿದ್ದಾರೆ. ಇದು ನಮ್ಮ ವಿಫಲವಲ್ಲ. ಚಂದಿರನ ದಕ್ಷಿಣ ಧ್ರುವಕ್ಕೆ ಉಪಗ್ರಹ ಉಡಾವಣೆ ಮಾಡುವ ಸಾಹಸಕ್ಕೆ ಜಗತ್ತಿನ ಮುಂದುವರಿದ ಯಾವ ದೇಶ ಕೈ ಹಾಕಿರಲಿಲ್ಲ. ಇವತ್ತು ನಮ್ಮ ದೇಶ ಆ ಒಂದು ಸಾಹಸಕ್ಕೆ ಕೈ ಹಾಕಿದೆ. ಯಶಸ್ಸು ಸಿಗದೆ ಇರಬಹುದು ಆದರೆ ನಮ್ಮ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ ಎಂದು ವಿದ್ಯಾರ್ಥಿಗಳು, ಶಿಕ್ಷಕರು ಸ್ವಾಭಿಮಾನದಿಂದ ಹೇಳಿದ್ದಾರೆ.

    ಅಷ್ಟೇ ಅಲ್ಲದೆ ನಮ್ಮ ದೇಶದ ವಿಜ್ಞಾನಿಗಳ ಜೊತೆ ವಿದ್ಯಾರ್ಥಿಗಳಾದ ನಾವು ಇದ್ದೇವೆ. ಮತ್ತೆ ಪ್ರಯತ್ನಿಸೋಣ ಆ ದೇವರಲ್ಲಿ ನಾವು ಪ್ರಾರ್ಥಿಸುತ್ತೇವೆ. ಮುಂದಿನ ಉಡಾವಣೆಯ ಜಯ ನಮ್ಮದಾಗಲಿ ಎಂದು ದೇವರಲ್ಲಿ ಬೇಡಿಕೊಂಡರು. ನಿಮ್ಮ ಪ್ರಯತ್ನಕ್ಕೆ ನಮ್ಮದೊಂದು ಸಲಾಂ ಎಂದು ಹೇಳುವ ಮೂಲಕ ವಿಜ್ಞಾನಿಗಳಿಗೆ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದರು.

  • ಚಂದ್ರಯಾನ-2 ವೀಕ್ಷಿಸಲು ಬೆಂಗ್ಳೂರಿಗೆ ಆಗಮಿಸಿದ ಪ್ರಧಾನಿ ಮೋದಿ

    ಚಂದ್ರಯಾನ-2 ವೀಕ್ಷಿಸಲು ಬೆಂಗ್ಳೂರಿಗೆ ಆಗಮಿಸಿದ ಪ್ರಧಾನಿ ಮೋದಿ

    – ಸಿಎಂ ಬಿಎಸ್‍ವೈ, ರಾಜ್ಯಪಾಲ ವಾಲಾರಿಂದ ಸ್ವಾಗತ

    ಬೆಂಗಳೂರು: ಚಂದ್ರಯಾನ-2 ಚಂದ್ರನ ಅಂಗಳದಲ್ಲಿ ಇಳಿಯಲಿರುವ ರೋಚಕ ಕ್ಷಣಗಳನ್ನು ವೀಕ್ಷಣೆ ಮಾಡಲು ಇಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದು, ಯಲಹಂಕ ವಾಯುನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯಪಾಲ ವಾಜುಭಾಯ್‌ ವಾಲಾ ಅವರು ಪ್ರಧಾನಿಗಳಿಗೆ ಸ್ವಾಗತ ಕೋರಿದರು.

    ಚಂದ್ರಯಾನ-2ನ ಮಹತ್ವದ ಕ್ಷಣಗಳನ್ನು ವೀಕ್ಷಿಸಲು ನಗರದ ಇಸ್ರೋ ಕೇಂದ್ರ ಸಂಸ್ಥೆಯಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಯಲಹಂಕ ವಾಯುನೆಲೆಯಿಂದ ನೇರ ಪ್ರಧಾನಿಗಳು ಇಸ್ರೋದ ಗೆಸ್ಟ್ ಹೌಸ್ ತೆರಳಿದ್ದು. ಅಲ್ಲಿಯೇ ಕೆಲ ಸಮಯ ವಿಶ್ರಾಂತಿ ಪಡೆಯಲಿದ್ದಾರೆ. ತಡರಾತ್ರಿ 1.30ರ ವೇಳೆಗೆ ಇಸ್ರೋ ಕೇಂದ್ರಕ್ಕೆ ಆಗಮಿಸಲಿರುವ ಪ್ರಧಾನಿಗಳು ನಾಳೆ ಮುಂಜಾನೆ 7 ಗಂಟೆವರೆಗೂ ಇಸ್ರೋ ಕೇಂದ್ರದಲ್ಲಿಯೇ ಇರಲಿದ್ದಾರೆ.

    ಅಂದಹಾಗೇ ತಡರಾತ್ರಿ 1 ಗಂಟೆ 30 ರಿಂದ 2.30ರ ವೇಳೆಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದ್ದು, ಇದರ ನೇರ ಪ್ರಸಾರವನ್ನು ಪ್ರಧಾನಿ ಮೋದಿ ಅವರು ಮಕ್ಕಳೊಂದಿಗೆ ವೀಕ್ಷಿಸಲಿದ್ದಾರೆ. ಮೋದಿರೊಂದಿಗೆ 70 ವಿದ್ಯಾರ್ಥಿಗಳು ಸಹ ಈ ವಿಸ್ಮಯವನ್ನು ಆನಂದಿಸಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ನಾಳೆ ಬೆಳಗ್ಗೆ 7ಕ್ಕೆ ಇಸ್ರೋದ ಗೆಸ್ಟ್ ಹೌಸ್ ಗೆ ವಾಪಸ್ ತೆರಳಿ ಅಲ್ಲಿಂದ ಮುಂಬೈಗೆ ತೆರಳಲಿದ್ದಾರೆ.

    ಚಂದ್ರಯಾನ -2 ಚಂದ್ರನಂಗಳದಲ್ಲಿ ಇಳಿಯಲಿರುವ ಕ್ಷಣಗಳ ವೀಕ್ಷಣೆಗೆ ಆಗಮಿಸಿದ ಪ್ರಧಾನಿಗಳಿಗೆ ಸ್ವಾಗತ ಕೋರಲು ಸಿಎಂ ಬಿಎಸ್‍ವೈ ಅವರೊಂದಿಗೆ ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಮಿಸಿದ್ದರು.

  • ಉಗುರಿನ ಮೇಲೆ ಚಂದ್ರಯಾನ-2 ಲ್ಯಾಂಡ್ ಮಾಡಿಸಿದ ಮೈಕ್ರೋ ಆರ್ಟಿಸ್ಟ್

    ಉಗುರಿನ ಮೇಲೆ ಚಂದ್ರಯಾನ-2 ಲ್ಯಾಂಡ್ ಮಾಡಿಸಿದ ಮೈಕ್ರೋ ಆರ್ಟಿಸ್ಟ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಿಲಿಗುರಿಯ ಮೈಕ್ರೋ ಆರ್ಟಿಸ್ಟ್ ರಮೇಶ್ ಶಾ, ಚಂದ್ರಯಾನ-2 ರ ಚಂದ್ರನ ಮೇಲೆ ಇಳಿಯುವ ಕಿರುಚಿತ್ರವನ್ನು ತಮ್ಮ ಉಗುರಿನ ಮೇಲೆ ಬರೆಯುವ ಮೂಲಕ ಪರಿಶ್ರಮ ಮತ್ತು ತಾಳ್ಮೆ ತೋರಿಸಿದ್ದಾರೆ.

    ರಮೇಶ್ ಶಾ ಅವರು ಈ ರೀತಿಯ ಚಿತ್ರ ಬಿಡಿಸುವವರ ಪೈಕಿ ವಿಶ್ವದದ್ಯಾಂತ ಮುಂಚೂಣಿಯಲ್ಲಿದ್ದಾರೆ. ಅವರು ಈ ರೀತಿಯ ತಮ್ಮ ಸಣ್ಣ ಪ್ರಮಾಣದ ಕಲಾತ್ಮಕ ಚಿತ್ರಗಳಿಂದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನ ಅತ್ಯಂತ ಮಹತ್ವದ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಮೈಕ್ರೋ ಆರ್ಟಿಸ್ಟ್ ಆಗಿರುವ ರಮೇಶ್ ಶಾ, 15 ರಿಂದ 20 ಎಂಎಂ ಉಗುರಿನ ಜಾಗವನ್ನು ಬಳಸಿಕೊಂಡು ಚಂದ್ರಯಾನ್ -2 ರ ಲ್ಯಾಂಡಿಂಗ್ ಪೇಂಟಿಂಗ್ ಅನ್ನು ತಮ್ಮ ಬಲಗೈನ ಉಗುರಿನ ಮೇಲೆ ಚಿತ್ರಿಸಿದ್ದಾರೆ. ಈ ವರ್ಣಚಿತ್ರವನ್ನು ಪೂರ್ಣಗೊಳಿಸಲು ಅವರು ಮೂರು ದಿನಗಳ ಕಲವಾಕಾಶವನ್ನು ತೆಗೆದುಕೊಂಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿದ ಅವರು, ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಸೇಫ್ ಲ್ಯಾಂಡ್ ಆದರೆ ಅದು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣವಾಗಲಿದೆ. ಶನಿವಾರ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದ ಬಳಿ ಚಂದ್ರಯಾನ್-2ನ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಲಿದೆ. ಈ ಮೂಲಕ ಈ ಸಾಧನೆ ಮಾಡಿದ ಭಾರತವು ಚಂದ್ರನ ಮೇಲೆ ರಾಕೆಟ್ ಇಳಿಸಿದ ವಿಶ್ವದ ನಾಲ್ಕನೇ ಶಕ್ತಿಶಾಲಿ ದೇಶವಾಗಲಿದೆ ಎಂದು ಹೇಳಿದರು.

    ನಾನು ಸೂಕ್ಷ್ಮ ಕಲೆಗಳನ್ನು ಚಿತ್ರಿಸುವ ಮೂಲಕ ಐದು ವಿಶ್ವ ದಾಖಲೆಗಳನ್ನು ಮಾಡಿದ್ದೇನೆ. ಚಾಲ್ತಿಯಲ್ಲಿರುವ ವಿಶ್ವ ಸಮಸ್ಯೆಗಳಿಗೆ ಸಂಬಂಧಿಸಿದ ವರ್ಣಚಿತ್ರಗಳನ್ನು ನಾನು ಬರೆಯುತ್ತೇನೆ. ಈ ರೀತಿಯ ಚಿತ್ರಗಳನ್ನು ಬರೆಯುವಾಗ ನನಗೆ ಒಳ್ಳೆಯ ಕೆಲಸ ಮಾಡಿದ ಅನುಭವವಾಗುತ್ತದೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಬಾಹ್ಯಾಕಾಶ ವಿಜ್ಞಾನಿಗಳನ್ನು ಚಂದ್ರಯಾನ-2 ಇಳಿಯುವ ಮುನ್ನ ಅಭಿನಂದನೆಗಳು ಎಂದು ಹೇಳಿದ್ದಾರೆ.

  • ಬೆಂಗ್ಳೂರಿನ ಕಲಾವಿದನ ಕೈಯಲ್ಲಿ ಮೂಡಿತು ಚಿನ್ನದ ಚಂದ್ರಯಾನ-2

    ಬೆಂಗ್ಳೂರಿನ ಕಲಾವಿದನ ಕೈಯಲ್ಲಿ ಮೂಡಿತು ಚಿನ್ನದ ಚಂದ್ರಯಾನ-2

    ಬೆಂಗಳೂರು: ಚಂದ್ರಯಾನ-2 ಉಪಗ್ರಹ ಚಂದ್ರನ ಮುತ್ತಿಕ್ಕುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ಭಾರತ ಕಾತುರದಿಂದ ಕಾಯುತ್ತಿದೆ. ಆದರೆ ಸಿಲಿಕಾನ್ ಸಿಟಿಯ ಕಲಾವಿದರೊಬ್ಬರು ತಮ್ಮ ಕಲೆಯ ಮೂಲಕ ವಿಭಿನ್ನವಾಗಿ ಚಂದ್ರಯಾನ-2ಕ್ಕೆ ಶುಭಹಾರೈಸಿದ್ದಾರೆ.

    ಬೆಂಗಳೂರಿನ ಶ್ರೀರಾಮ್‍ಪುರದ ನಿವಾಸಿ ಅಕ್ಕಸಾಲಿಗರಾದ ನಾಗರಾಜ್ ರೇವಣಕರ್ ಚಿನ್ನದಲ್ಲಿ ಮಿನಿ ಚಂದ್ರಯಾನ-2 ಆಕೃತಿ ತಯಾರಿಸಿದ್ದಾರೆ. ನಾಗರಾಜ್ ಅವರು ಕಲಾವಿದರಾಗಿದ್ದು, 2 ಗ್ರಾಂ 700 ಮಿಲಿಗ್ರಾಂ ಚಿನ್ನದಲ್ಲಿ ಬಾಹುಬಲಿ ರಾಕೆಟ್ ತಯಾರಿಸಿದ್ದು, ಈ ಆಕೃತಿ ಸ್ಟಾಂಡ್ ಸೇರಿ 4.5 ಸೆಂಟಿಮೀಟರ್ ಎತ್ತರವಿದೆ. ಜೊತೆಗೆ ತ್ರಿವರ್ಣ ಧ್ವಜ, ಇಂಡಿಯಾ ಹಾಗೂ ಇಸ್ರೋ ಹೆಸರನ್ನು ಕೂಡ ಇದರ ಮೇಲೆ ಬರೆಯಲಾಗಿದೆ.

    ಈ ಚಿನ್ನದ ಚಂದ್ರಯಾನ ತಯಾರಿಸಲು ನಾಗರಾಜ್ ಅವರು ಬರೋಬ್ಬರಿ 30 ಗಂಟೆಗಳ ಕಾಲ ಶ್ರಮಪಟ್ಟಿದ್ದಾರೆ. ಈ ಗೋಲ್ಡ್ ರಾಕೆಟ್ ಅನ್ನು ಭಾರತೀಯ ವಿಜ್ಞಾನಿಗಳಿಗೆ ಅರ್ಪಿಸುವುದಾಗಿ ನಾಗರಾಜ್ ತಿಳಿಸಿದ್ದಾರೆ. ಈ ಮಿನಿ ಚಂದ್ರಯಾನ-2ರ ಚಿನ್ನದ ಆಕೃತಿ ಸದ್ಯ ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ:ಇಸ್ರೋ ಐತಿಹಾಸಿಕ ಸಾಧನೆಗೆ ಕೆಲವೇ ಗಂಟೆ ಬಾಕಿ – ಚಂದ್ರನ ಅಂಗಳಕ್ಕೆ ಇಳಿಯಲಿವೆ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್

    ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿನ ರಹಸ್ಯಗಳನ್ನು ಅರಿಯಲು `ಚಂದ್ರಯಾನ-2’ನ ವಿಕ್ರಮ್ ನೌಕೆ ಚಂದ್ರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆ(ಶನಿವಾರ ನಸುಕಿನಲ್ಲಿ) ಲ್ಯಾಂಡ್ ಆಗಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದು, ಇಲ್ಲಿಯ ವರೆಗೆ ಯಾವುದೇ ಬಾಹ್ಯಾಕಾಶ ಸಂಸ್ಥೆಯು ತೆರಳದ ದಕ್ಷಿಣ ಧ್ರುವದ ಮೇಲೆ ಐತಿಹಾಸಿಕ ಲ್ಯಾಂಡಿಂಗ್‍ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.

    ಮೋದಿ ಅವರೊಂದಿಗೆ ಪ್ರೌಢಶಾಲೆಗಳ 70 ವಿದ್ಯಾರ್ಥಿಗಳು ಸಹ ಈ ವಿಸ್ಮಯವನ್ನು ಆನಂದಿಸಲಿದ್ದಾರೆ. ಮೋದಿ ಹಾಗೂ ಮಕ್ಕಳಿಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಟಿವಿ ವಾಹಿನಿಗಳಲ್ಲೂ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ.

    ಈ ವೆರೆಗೆ ವಿಶ್ವದ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇಂದು ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನಂಗಳಕ್ಕೆ ಇಳಿದರೆ ರಷ್ಯಾ, ಅಮೇರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಯಾವ ದೇಶವೂ ಕಾಲಿಡದ ಹಾಗೂ ಬಿಸಿಲು ಕಾಣದ ಚಂದ್ರನ ದಕ್ಷಿಣ ಧ್ರುವಕ್ಕೆ ಚಂದ್ರಯಾನ-2 ನೌಕೆ ಕಾಲಿಡಲಿದೆ.

  • ಪ್ರಧಾನಿ ಜೊತೆ ಚಂದ್ರಯಾನ-2 ಲ್ಯಾಂಡಿಂಗ್ ವೀಕ್ಷಿಸಲು ರಾಯಚೂರು ವಿದ್ಯಾರ್ಥಿನಿ ಆಯ್ಕೆ

    ಪ್ರಧಾನಿ ಜೊತೆ ಚಂದ್ರಯಾನ-2 ಲ್ಯಾಂಡಿಂಗ್ ವೀಕ್ಷಿಸಲು ರಾಯಚೂರು ವಿದ್ಯಾರ್ಥಿನಿ ಆಯ್ಕೆ

    ರಾಯಚೂರು: ಚಂದ್ರಯಾನ-2 ನೌಕೆ ಚಂದ್ರನ ಅಂಗಳದಲ್ಲಿ ಇಳಿಯುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವೀಕ್ಷಿಸಲು ರಾಯಚೂರಿನ ಸಿಂಧನೂರಿನ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ.

    ಸೆಪ್ಟೆಂಬರ್ 7ರಂದು ಬೆಂಗಳೂರಿನ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಕಚೇರಿಯಲ್ಲಿ ವೀಕ್ಷಿಸಲು ಸಿಂಧನೂರಿನ ಡಾಫಡಿಲ್ಸ್ ಕಾನ್ಸೆಪ್ಟ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜಿ. ವೈಷ್ಣವಿ ಆಯ್ಕೆಯಾಗಿದ್ದಾಳೆ. ಆನ್‍ಲೈನ್ ಮುಖಾಂತರ ಆಗಸ್ಟ್ 25ರಂದು ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈಷ್ಣವಿ 20 ಪ್ರಶ್ನೆಗಳಿಗೆ 5 ನಿಮಿಷದಲ್ಲಿ ಉತ್ತರಿಸಿ ಪ್ರಧಾನಿ ಜೊತೆ ಚಂದ್ರಯಾನ 2 ಇಳಿಯುವುದನ್ನ ವೀಕ್ಷಿಸಲು ಆಯ್ಕೆಯಾಗಿದ್ದಾಳೆ. ಇದನ್ನೂ ಓದಿ: ಚಂದ್ರಯಾನಕ್ಕೆ ನಾಲ್ಕು ಹೆಜ್ಜೆ ಮಾತ್ರ ದೂರ: ಇಸ್ರೋ

    20 ಪ್ರಶ್ನೆಗಳಿಗೆ 10 ನಿಮಿಷಗಳಲ್ಲಿ ಉತ್ತರಿಸಲು ಅವಕಾಶ ನೀಡಲಾಗಿತ್ತು. ಆದರೆ ವೈಷ್ಣವಿ 5 ನಿಮಿಷದಲ್ಲಿ ಉತ್ತರಿಸಿದ್ದಳು. ಪ್ರತಿ ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳನ್ನ ಆಯ್ಕೆ ಮಾಡಲಾಗಿದ್ದು. ರಾಜ್ಯದ ಇಬ್ಬರು ವಿದ್ಯಾರ್ಥಿಗಳಲ್ಲಿ ಸಿಂಧನೂರಿನ ವೈಷ್ಣವಿ ಆಯ್ಕೆಯಾಗಿದ್ದಾಳೆ.

    ಆಗಸ್ಟ್ 21ರಂದು ಚಂದಿರನ ಯಾತ್ರೆಗೆ ತೆರಳಿರುವ ಚಂದ್ರಯಾನ-2 ಶಶಿಯ ಮೊದಲ ಚಿತ್ರವನ್ನು ರವಾನಿಸಿತ್ತು. ಚಂದ್ರಯಾನದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ 2,650 ಕಿ.ಮೀ. ಅಂತರದಿಂದ ತೆಗೆದ ಫೋಟೋವನ್ನು ಕಳುಹಿಸಿತ್ತು. ಇಸ್ರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿಕೊಂಡು, “ಆಗಸ್ಟ್ 21ರಂದು ಚಂದ್ರಯಾನ-2 ಈ ಚಿತ್ರವನ್ನು ಸೆರೆಹಿಡಿದಿದೆ. ಈ ಚಿತ್ರದಲ್ಲಿ ನೀವು Mare Orientale basin ಮತ್ತು ಅಪೊಲೋ ಕ್ರೆಟರ್ಸ್ ನೋಡಬಹುದಾಗಿದೆ” ಎಂದು ಟ್ವೀಟ್ ಮಾಡಿತ್ತು.

    ಇದಕ್ಕೂ ಮೊದಲು ಆಗಸ್ಟ್ 4ರಂದು ಚಂದ್ರಯಾನ-2 ಪೃಥ್ವಿಗೆ ರವಾನಿಸಿದ್ದ ಚಂದಿರನ ಚಿತ್ರಗಳನ್ನು ಇಸ್ರೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿತ್ತು. ಸೆಪ್ಟೆಂಬರ್ 7ರ ರಾತ್ರಿ ಪವರ್ ಮಿಶನ್ ಆರಂಭಗೊಳ್ಳಲಿದೆ. ರಾತ್ರಿ 1.55 ನಿಮಿಷಕ್ಕೆ ಚಂದ್ರನ 27 ಡಿಗ್ರಿ ದಕ್ಷಿಣ, 22 ಡಿಗ್ರಿ ಪೂರ್ವಕ್ಕೆ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಲ್ಯಾಂಡ್ ಮಾಡಲಾಗುಗುವುದು. 3 ಗಂಟೆ 10 ನಿಮಿಷಕ್ಕೆ ರೋವರಿನನ ಸೋಲಾರ್ ಪ್ಯಾನಲ್ ತನ್ನ ಕಾರ್ಯವನ್ನು ಆರಂಭಿಸುತ್ತದೆ. 3 ಗಂಟೆಯ ನಂತರ ರೋವರ್ ಪ್ರಜ್ಞಾನನ್ನು ಲ್ಯಾಂಡರ್ ನಿಂದ ಪ್ರತ್ಯೇಕಗೊಳಿಸಲಾಗುವುದು. 4 ಗಂಟೆಯ ನಂತರ ರೋವರ್ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ.