Tag: Chandrayaan 2

  • ಇಸ್ರೋ ಐತಿಹಾಸಿಕ ಸಾಧನೆಗೆ ಕೆಲವೇ ಗಂಟೆ ಬಾಕಿ – ಚಂದ್ರನ ಅಂಗಳಕ್ಕೆ ಇಳಿಯಲಿವೆ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್

    ಇಸ್ರೋ ಐತಿಹಾಸಿಕ ಸಾಧನೆಗೆ ಕೆಲವೇ ಗಂಟೆ ಬಾಕಿ – ಚಂದ್ರನ ಅಂಗಳಕ್ಕೆ ಇಳಿಯಲಿವೆ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್

    – ಮಕ್ಕಳೊಂದಿಗೆ ಪ್ರಧಾನಿ ಮೋದಿ ವೀಕ್ಷಣೆ
    – 4ನೇ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಭಾರತ

    ಬೆಂಗಳೂರು: ಬಹು ನಿರೀಕ್ಷಿತ ಚಂದ್ರಯಾನ-2ನ ‘ವಿಕ್ರಮ್’ ರಾತ್ರಿ ಸುಮಾರು 1.30ರ ಹೊತ್ತಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿದೆ. ಈ ಕುತೂಹಲ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಶಾಲಾ ಮಕ್ಕಳೊಂದಿಗೆ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಲಿದ್ದಾರೆ.

    ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿನ ರಹಸ್ಯಗಳನ್ನು ಅರಿಯಲು ‘ಚಂದ್ರಯಾನ-2’ನ ವಿಕ್ರಮ್ ನೌಕೆ ಚಂದ್ರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆ(ಶನಿವಾರ ನಸುಕಿನಲ್ಲಿ) ಲ್ಯಾಂಡ್ ಆಗಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದು, ಇಲ್ಲಿಯ ವರೆಗೆ ಯಾವುದೇ ಬಾಹ್ಯಾಕಾಶ ಸಂಸ್ಥೆಯು ತೆರಳದ ದಕ್ಷಿಣ ಧ್ರುವದ ಮೇಲೆ ಐತಿಹಾಸಿಕ ಲ್ಯಾಂಡಿಂಗ್‍ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.

    ಪ್ರಧಾನಿ ನರೇಂದ್ರ ಮೋದಿ ಸಹ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಿ ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಮೋದಿ ಅವರೊಂದಿಗೆ ಪ್ರೌಢಶಾಲೆಗಳ 70 ವಿದ್ಯಾರ್ಥಿಗಳು ಸಹ ಈ ವಿಸ್ಮಯವನ್ನು ಆನಂದಿಸಲಿದ್ದಾರೆ. ಮೋದಿ ಹಾಗೂ ಮಕ್ಕಳಿಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಟಿವಿ ವಾಹಿನಿಗಳಲ್ಲೂ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ.

    ಈ ವೆರೆಗೆ ವಿಶ್ವದ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇಂದು ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನಂಗಳಕ್ಕೆ ಇಳಿದರೆ ರಷ್ಯಾ, ಅಮೇರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಯಾವ ದೇಶವೂ ಕಾಲಿಡದ ಹಾಗೂ ಬಿಸಿಲು ಕಾಣದ ಚಂದ್ರನ ದಕ್ಷಿಣ ದ್ರುವಕ್ಕೆ ಚಂದ್ರಯಾನ-2 ನೌಕೆ ಕಾಲಿಡಲಿದೆ.

    ರಾತ್ರಿಯ ಸಾಹಸ: ಇಂದು ತಡರಾತ್ರಿ 1.30 ರಿಂದ ಚಂದ್ರನ ಅಂಗಳದ ಕಡೆಗೆ ಇಳಿಯುವ ಪ್ರಕ್ರಿಯೆ ಆರಂಭವಾಗುತ್ತದೆ. ಸುಮಾರು 15 ನಿಮಿಷಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ನಂತರ 1.30ರಿಂದ 2.30ರ ನಡುವೆ ಅತ್ಯಂತ ಭೀತಿಯ ಟಚ್‍ಡೌನ್ ಪ್ರಕ್ರಿಯೆ ನಡೆಸಲಾಗುತ್ತದೆ. ಟಚ್‍ಡೌನ್ ಬಳಿಕ ಬೆಳಗ್ಗೆ 5.30ರಿಂದ 6.30ರ ನಡುವೆ ‘ವಿಕ್ರಮ್’ ಲ್ಯಾಂಡರ್ ಒಳಗಿಂದ ರೋವರ್ ‘ಪ್ರಜ್ಞಾನ್’ ಹೊರ ಬಂದು ಚಂದ್ರನ ಅಂಗಳದ ಮೇಲೆ ಇಳಿಯಲಿದೆ. ಸುಮಾರು 14 ದಿನಗಳ ಕಾಲ 500 ಮೀ. ಸಂಚರಿಸಿ ಚಂದ್ರನ ಮೇಲೆ ಅಧ್ಯಯನ ಮಾಡಲಿದೆ. ಉಳಿದಂತೆ ಆರ್ಬಿಟರ್, ಒಂದು ವರ್ಷ ಕಾಲ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತದೆ.

    ಸೆಪ್ಟೆಂಬರ್ 2ರಂದು ಮಾಡ್ಯುಲ್ ನಿಂದ ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಬೇರ್ಪಟ್ಟಿತ್ತು. ಇದನ್ನು ವಿಜ್ಞಾನಿಗಳು ಮಗಳು ತವರು ಮನೆಯಿಂದ ಗಂಡನ ಮನೆಗೆ ಹೋದಂತೆ ಎಂದು ಉದಾಹರಣೆಯೊಂದಿಗೆ ವಿವರಿಸಿದ್ದರು.

    ಆರ್ಬಿಟರ್ ನಿಂದ ಲ್ಯಾಂಡರ್ ವಿಕ್ರಮ್ ಬೇರ್ಪಡಿಸಲು ವಿಜ್ಞಾನಿಗಳು ಸಮಯ ನಿಗದಿ ಮಾಡಿದ್ದರು. ನಿಗದಿ ಸಮಯದಲ್ಲಿಯೇ ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಬೇರ್ಪಟ್ಟಿತ್ತು. ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಬೇರ್ಪಟ್ಟಿದ್ದರಿಂದ ವಿದೇಶಗಳಿಂದ ಇಸ್ರೋಗೆ ಶುಭಾಶಯಗಳು ಹರಿದು ಬಂದಿದ್ದವು.

  • ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ

    ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ

    ಬೆಂಗಳೂರು: ಸೆಪ್ಟೆಂಬರ್ 7ರಂದು ಚಂದ್ರನಂಗಳದಲ್ಲಿ ಚಂದ್ರಯಾನ-2 ಲ್ಯಾಂಡ್ ಆಗಲಿದೆ. ಈ ಕುತೂಹಲದ ಕ್ಷಣವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರಿನ ಇಸ್ರೋ ಕೇಂದ್ರ ಸಂಸ್ಥೆಯಲ್ಲಿ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ.

    ಈಗಾಗಲೇ ಪ್ರಧಾನಿ ಕಾರ್ಯಾಲಯ ಮೋದಿಯವರ ಕಾರ್ಯಕ್ರಮಗಳ ವೇಳಾಪಟ್ಟಿ ಸಿದ್ಧಪಡಿಸಿದ್ದು, ಶುಕ್ರವಾರ ರಾತ್ರಿ 9.30ಕ್ಕೆ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಮೋದಿ ಆಗಮಿಸಲಿದ್ದಾರೆ. ನಂತರ ರಾತ್ರಿ 10ಗಂಟೆಗೆ ಇಸ್ರೋದ ಅತಿಥಿ ಗೃಹಕ್ಕೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಸೆಪ್ಟೆಂಬರ್ 7ರ ಬೆಳಗ್ಗಿನ ಜಾವ 1.15ಕ್ಕೆ ಇಸ್ರೋಗೆ ತೆರಳಿ, 1.30 ರಿಂದ ಬೆಳಗ್ಗೆ 7 ಗಂಟೆಯವರೆಗೂ ಇಸ್ರೋದಲ್ಲಿ ಪ್ರಧಾನಿ ಇರಲಿದ್ದಾರೆ.

    ಸೆಪ್ಟೆಂಬರ್ 7 ರಂದು ಬೆಳಗ್ಗೆ 1 ಗಂಟೆ 55 ನಿಮಿಷಕ್ಕೆ ಚಂದ್ರಯಾನ-2ನ ‘ಪ್ರಗ್ಯಾನ್’ ರೋವರ್ ಮತ್ತು ‘ವಿಕ್ರಮ್’ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿವೆ. ಇದರ ನೇರ ಪ್ರಸಾರವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಣೆ ಮಾಡಲಿದ್ದಾರೆ. ನೇರ ಪ್ರಸಾರ ವೀಕ್ಷಣೆ ನಂತರ ಪ್ರಧಾನಿ ಮೋದಿ ಸೆಪ್ಟೆಂಬರ್ 7ರ ಬೆಳಗ್ಗೆ 7 ಗಂಟೆಗೆ ಇಸ್ರೋದ ಅತಿಥಿ ಗೃಹಕ್ಕೆ ವಾಪಸ್ ತೆರಳಿ, ನಂತರ ದೆಹಲಿಗೆ ಮರಳಲಿದ್ದಾರೆ. ಸೆಪ್ಟೆಂಬರ್ 6 ರಂದು ರಾತ್ರಿ ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

  • ಚಂದ್ರಯಾನ-2: ಆರ್ಬಿಟರ್​ನಿಂದ ಯಶಸ್ವಿಯಾಗಿ ಬೇರ್ಪಟ್ಟ ಲ್ಯಾಂಡರ್ ವಿಕ್ರಮ್

    ಚಂದ್ರಯಾನ-2: ಆರ್ಬಿಟರ್​ನಿಂದ ಯಶಸ್ವಿಯಾಗಿ ಬೇರ್ಪಟ್ಟ ಲ್ಯಾಂಡರ್ ವಿಕ್ರಮ್

    ಶ್ರೀಹರಿಕೋಟ: ಭಾರತೀಯ ಅಂತರಿಕ್ಷ ವಿಜ್ಞಾನದಲ್ಲಿ ಇಂದು ಅತ್ಯಂತ ಮಹತ್ವಪೂರ್ಣವಾದ ದಿನವಾಗಿದ್ದು, ಮಾಡ್ಯುಲ್ ನಿಂದ ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಬೇರ್ಪಟ್ಟಿದೆ. ಇಸ್ರೋ ಪ್ರಕಾರ ಇಂದು ಮಧ್ಯಾಹ್ನ 1 ಗಂಟೆ 35 ನಿಮಿಷಕ್ಕೆ ಲ್ಯಾಂಡರ್ ವಿಕ್ರಮ್ ಬೇರ್ಪಟ್ಟಿದೆ. ವಿಜ್ಞಾನಿಗಳು ಮಗಳು ತವರು ಮನೆಯಿಂದ ಗಂಡನ ಮನೆಗೆ ಹೋದಂತೆ ಎಂದು ಉದಾಹರಣೆಯೊಂದಿಗೆ ವಿವರಿಸಿದ್ದಾರೆ.

    ಆರ್ಬಿಟರ್ ನಿಂದ ಲ್ಯಾಂಡರ್ ವಿಕ್ರಮ್ ಬೇರ್ಪಡಿಸಲು ವಿಜ್ಞಾನಿಗಳು ಸಮಯ ನಿಗದಿ ಮಾಡಿದ್ದರು. ನಿಗದಿ ಸಮಯದಲ್ಲಿಯೇ ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಬೇರ್ಪಟ್ಟಿದೆ. ಚಂದ್ರಯಾನ ಸದ್ಯ ಚಂದ್ರನ 5ನೇ ಕಕ್ಷವನ್ನು ತಲುಪಿದೆ. ಇಂದು ಮಧ್ಯಾಹ್ನ ಯಶಸ್ವಿಯಾಗಿ ಲ್ಯಾಂಡರ್ ವಿಕ್ರಮ್ ಬೇರ್ಪಟ್ಟ ಕೂಡಲೇ ವಿದೇಶಗಳಿಂದಲೂ ಶುಭಾಶಯಗಳು ಹರಿದು ಬರುತ್ತಿವೆ ಎಂದು ಇಸ್ರೋ ತಿಳಿಸಿದೆ.

    ಸೆಪ್ಟೆಂಬರ್ 7ರ ರಾತ್ರಿ ಪವರ್ ಮಿಶನ್ ಆರಂಭಗೊಳ್ಳಲಿದೆ. ರಾತ್ರಿ 1.55 ನಿಮಿಷಕ್ಕೆ ಚಂದ್ರನ 27 ಡಿಗ್ರಿ ದಕ್ಷಿಣ, 22 ಡಿಗ್ರಿ ಪೂರ್ವಕ್ಕೆ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಲ್ಯಾಂಡ್ ಮಾಡಲಾಗುಗುವುದು. 3 ಗಂಟೆ 10 ನಿಮಿಷಕ್ಕೆ ರೋವರಿನನ ಸೋಲಾರ್ ಪ್ಯಾನಲ್ ತನ್ನ ಕಾರ್ಯವನ್ನು ಆರಂಭಿಸುತ್ತದೆ. 3 ಗಂಟೆಯ ನಂತರ ರೋವರ್ ಪ್ರಜ್ಞಾನನ್ನು ಲ್ಯಾಂಡರ್ ನಿಂದ ಪ್ರತ್ಯೇಕಗೊಳಿಸಲಾಗುವುದು. 4 ಗಂಟೆಯ ನಂತರ ರೋವರ್ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ.

  • ಚಂದಿರನ ಮೊದಲ ಚಿತ್ರ ಕಳುಹಿಸಿದ ಚಂದ್ರಯಾನ-2

    ಚಂದಿರನ ಮೊದಲ ಚಿತ್ರ ಕಳುಹಿಸಿದ ಚಂದ್ರಯಾನ-2

    ಶ್ರೀಹರಿಕೋಟ: ಚಂದಿರನ ಯಾತ್ರೆಗೆ ತೆರಳಿರುವ ಚಂದ್ರಯಾನ-2 ಶಶಿಯ ಮೊದಲ ಚಿತ್ರವನ್ನು ರವಾನಿಸಿದೆ. ಚಂದ್ರಯಾನದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ 2,650 ಕಿ.ಮೀ. ಅಂತರದಿಂದ ತೆಗೆದ ಫೋಟೋವನ್ನು ಕಳುಹಿಸಿದೆ.

    ಇಸ್ರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿಕೊಂಡಿದೆ. ಆಗಸ್ಟ್ 21ರಂದು ಚಂದ್ರಯಾನ-2 ಈ ಚಿತ್ರವನ್ನು ಸೆರೆಹಿಡಿದಿದೆ. ಈ ಚಿತ್ರದಲ್ಲಿ ನೀವು Mare Orientale basin ಮತ್ತು ಅಪೊಲೋ ಕ್ರೆಟರ್ಸ್ ನೋಡಬಹುದಾಗಿದೆ. ಇದನ್ನೂ ಓದಿ: ಚಂದ್ರಯಾನಕ್ಕೆ ನಾಲ್ಕು ಹೆಜ್ಜೆ ಮಾತ್ರ ದೂರ: ಇಸ್ರೋ

    ಇದಕ್ಕೂ ಮೊದಲು ಆಗಸ್ಟ್ 4ರಂದು ಚಂದ್ರಯಾನ-2 ಪೃಥ್ವಿಗೆ ರವಾನಿಸಿದ್ದ ಚಂದಿರನ ಚಿತ್ರಗಳನ್ನು ಇಸ್ರೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿತ್ತು. ಸೆಪ್ಟೆಂಬರ್ 7ರ ರಾತ್ರಿ ಪವರ್ ಮಿಶನ್ ಆರಂಭಗೊಳ್ಳಲಿದೆ. ರಾತ್ರಿ 1.55 ನಿಮಿಷಕ್ಕೆ ಚಂದ್ರನ 27 ಡಿಗ್ರಿ ದಕ್ಷಿಣ, 22 ಡಿಗ್ರಿ ಪೂರ್ವಕ್ಕೆ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಲ್ಯಾಂಡ್ ಮಾಡಲಾಗುಗುವುದು. 3 ಗಂಟೆ 10 ನಿಮಿಷಕ್ಕೆ ರೋವರಿನನ ಸೋಲಾರ್ ಪ್ಯಾನಲ್ ತನ್ನ ಕಾರ್ಯವನ್ನು ಆರಂಭಿಸುತ್ತದೆ. 3 ಗಂಟೆಯ ನಂತರ ರೋವರ್ ಪ್ರಜ್ಞಾನನ್ನು ಲ್ಯಾಂಡರ್ ನಿಂದ ಪ್ರತ್ಯೇಕಗೊಳಿಸಲಾಗುವುದು. 4 ಗಂಟೆಯ ನಂತರ ರೋವರ್ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ.

     

  • ಚಂದ್ರಯಾನಕ್ಕೆ ನಾಲ್ಕು ಹೆಜ್ಜೆ ಮಾತ್ರ ದೂರ: ಇಸ್ರೋ

    ಚಂದ್ರಯಾನಕ್ಕೆ ನಾಲ್ಕು ಹೆಜ್ಜೆ ಮಾತ್ರ ದೂರ: ಇಸ್ರೋ

    ಶ್ರೀಹರಿಕೋಟಾ: ಚಂದ್ರಯಾನ-2ಕ್ಕೆ ನಾಲ್ಕು ಹೆಜ್ಜೆ ಮಾತ್ರ ದೂರ ಇದ್ದೇವೆ. ಜುಲೈ 22ಕ್ಕೆ ಭೂ ಕಕ್ಷೆಯಿಂದ ದೂರವಾಗಿ ಚಂದ್ರನ ಕಕ್ಷೆಯನ್ನು ತಲುಪಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ನಾಲ್ಕು ಕಕ್ಷೆಗಳನ್ನು ಪೂರ್ಣಗೊಳಿಸಿ ಸೆಪ್ಟೆಂಬರ್ 7ರ ರಾತ್ರಿ 1 ಗಂಟೆಗೆ 55 ನಿಮಿಷಕ್ಕೆ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಇಂದು ಬೆಳಗ್ಗೆ 9 ಗಂಟೆಗೆ ಚಂದ್ರಯಾನ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದೆ. ಈ ವೇಳೆ 30 ನಿಮಿಷ ನನ್ನ ಹೃದಯ ಬಡಿತವೇ ನಿಂತ ಅನುಭವ ನನಗೆ ಆಯ್ತು. ಇದೀಗ ಚಂದ್ರಯಾನ ಚಂದ್ರನ ಪರಿಭ್ರಮಣೆ ನಡೆಸುತ್ತಿದೆ ಎಂದು ಶಿವನ್ ಹೇಳಿದರು.

    ನಮ್ಮ ತಂಡ ಅತ್ಯಂತ ನಿಖರತೆಯಿಂದ ಕೆಲಸ ಮಾಡುತ್ತಿದ್ದು, ಮಿಶನ್ ಚಂದ್ರಯಾನ-2ನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡುವತ್ತ ಕಾರ್ಯ ನಿರ್ವಹಿಸುತ್ತಿದೆ. ಆಗಸ್ಟ್ 28, 30 ಮತ್ತು ಸೆಪ್ಟೆಂಬರ್ 1ರಂದು ಚಂದ್ರಯಾನ-2ನ್ನು 18 ಸಾವಿರ ಕಿಲೋಮೀಟರ್ ಅಂತರದಿಂದ 100/100 ಕಿಲೋಮೀಟರ್ ಎತ್ತರದವರೆಗೆ ತರಲಾಗುವುದು ಎಂದರು.

    ಸೆಪ್ಟೆಂಬರ್ 1ರಂದು ಆರ್ಬಿಟರ್ ಲ್ಯಾಂಡರ್ ನಿಂದ ಪ್ರತ್ಯೇಕಗೊಳ್ಳಲಿದೆ. ಈ ಸಮಯದಲ್ಲಿ ಲ್ಯಾಂಡರ್ ಮೇಲೆ ಎಲ್ಲರ ಗಮನ ಕೇಂದ್ರಕೃತವಾಗಿರುತ್ತದೆ. ಸೆಪ್ಟೆಂಬರ್ 3ರಂದು ಲ್ಯಾಂಡರ್ ನ್ನು ಪೂರ್ಣವಾಗಿ ಪರಿಶೀಲನೆ ನಡೆಸಲಾಗುವುದು. ಮದುವೆಯ ಸಂದರ್ಭದಲ್ಲಿ ವಧುವನ್ನು ಹೇಗೆ ತಾಯಿ-ತಂದೆಯಿಂದ ದೂರ ಮಾಡಿ ವರನ ಮನೆಗೆ ಕರೆದುಕೊಂಡು ಹೋಗಲಾಗುತ್ತದೋ ಅದೇ ರೀತಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ ಎಂದು ಉದಾಹರಣೆಯೊಂದಿಗೆ ಶಿವನ್ ವಿವರಿಸಿದರು.

    ಸೆಪ್ಟೆಂಬರ್ 7ಕ್ಕೆ ಪವರ್ ಮಿಶನ್: ಸೆಪ್ಟೆಂಬರ್ 7ರ ರಾತ್ರಿ ಪವರ್ ಮಿಶನ್ ಆರಂಭಗೊಳ್ಳಲಿದೆ. ರಾತ್ರಿ 1.55 ನಿಮಿಷಕ್ಕೆ ಚಂದ್ರನ 27 ಡಿಗ್ರಿ ದಕ್ಷಿಣ, 22 ಡಿಗ್ರಿ ಪೂರ್ವಕ್ಕೆ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಲ್ಯಾಂಡ್ ಮಾಡಲಾಗುಗುವುದು. 3 ಗಂಟೆ 10 ನಿಮಿಷಕ್ಕೆ ರೋವರಿನನ ಸೋಲಾರ್ ಪ್ಯಾನಲ್ ತನ್ನ ಕಾರ್ಯವನ್ನು ಆರಂಭಿಸುತ್ತದೆ. 3 ಗಂಟೆಯ ನಂತರ ರೋವರ್ ಪ್ರಜ್ಞಾನನ್ನು ಲ್ಯಾಂಡರ್ ನಿಂದ ಪ್ರತ್ಯೇಕಗೊಳಿಸಲಾಗುವುದು. 4 ಗಂಟೆಯ ನಂತರ ರೋವರ್ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ.

    ಪ್ರಧಾನಿಗಳಿಗೆ ಆಹ್ವಾನ: ಸೆಪ್ಟೆಂಬರ್ 7ರ ರಾತ್ರಿ 1.55ಕ್ಕೆ ಚಂದ್ರನ ಮೇಲ್ಮೈ ಯಶಸ್ವಿಯಾಗಿ ಪ್ರವೇಶಿಸಲಿದ್ದೇವೆ. ತದನಂತರ ಎರಡನೇ ಹಂತದ ಕೆಲಸಗಳು ನಡೆಯಲಿವೆ. ಚಂದ್ರಯಾನ-2ರ ಟಚ್-ಡೌನ್ ವೀಕ್ಷಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಆಹ್ವಾನಿಸಲಾಗಿದೆ. ಈ ಸಂಬಂಧ ಪ್ರಧಾನಿಗಳ ಕಾರ್ಯಾಲಯದಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಶಿವನ್ ಮಾಹಿತಿ ನೀಡಿದರು.

    ಸೇಫ್ ಲ್ಯಾಡಿಂಗ್ ಕಷ್ಟ: ಚಂದ್ರನ ಮೇಲೆ ಲ್ಯಾಡಿಂಗ್ ಮಾಡುವ ಕೆಲಸ ಅತ್ಯಂತ ಕ್ಲಿಷ್ಟ ಮತ್ತು ಕಷ್ಟಕರವಾಗಿದೆ. ಕಾರಣ ಮೊದಲ ಬಾರಿಗೆ ಈ ಸಾಹಸ ಕಾರ್ಯಕ್ಕೆ ಇಸ್ರೋ ಮುಂದಾಗಿದ್ದು, ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ನಂಬಿಕೆಯನ್ನು ಹೊಂದಿದ್ದೆವೆ. ಸಾಫ್ಟ್ ಲ್ಯಾಂಡಿಂಗ್ ನಲ್ಲಿ ಸಕ್ಸಸ್ ರೇಟ್ ಶೇ.37ರಷ್ಟು ಮಾತ್ರ ಇದೆ. ಆದರೂ ನಾವು ಮಿಶನ್ ನಲ್ಲಿ ಯಶಸ್ವಿಯಾಗಲಿದ್ದೇವೆ. ಈ ಸಂಬಂಧ ಎಲ್ಲ ಆಯಾಮಗಳಿಂದಲೂ ನಾವು ಸಿದ್ಧಗೊಂಡಿದ್ದೇವೆ ಎಂದು ಶಿವನ್ ಸ್ಪಷ್ಟಪಡಿಸಿದರು.

    ಲ್ಯಾಂಡಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತೆ?
    ಚಂದ್ರಯಾನವನ್ನು ಲ್ಯಾಂಡರ್ ನಿಂದ ಇಳಿಸುವ ಮುನ್ನ ಪೃಥ್ವಿಯಿಂದ ಎರಡು ಸಂದೇಶಗಳನ್ನು ಕಳುಹಿಸಲಾಗುವುದು. ಲ್ಯಾಂಡರ್ ವೇಗ ಮತ್ತು ದಿಕ್ಕು ಸುಧಾರಣೆಯಾಗಿ ನಿಧಾನವಾಗಿ ಚಂದ್ರನ ಮೇಲ್ಮೈ ಪ್ರವೇಶಿಸುವ ಸಂದೇಶವನ್ನು ಕಮಾಂಡ್ ಒಳಗೊಂಡಿರುತ್ತದೆ. ಅರ್ಬಿಟರ್ ಮತ್ತು ಲ್ಯಾಂಡರ್ ನಲ್ಲಿಯ ಕ್ಯಾಮೆರಾದಲ್ಲಿ ನಿಖರ ಸಮಯ ದಾಖಲಾಗಲಿದೆ. ಲ್ಯಾಂಡರ್ ಕೆಳಭಾಗದಲ್ಲಿ ಅಳವಡಿಸಲಾಗಿರುವ ಚಂದ್ರನ ಮೇಲ್ಮೈ ಸ್ಪರ್ಶಿಸುವ ಸಮಯ ಮತ್ತು ದೃಶ್ಯಗಳನ್ನು ದಾಖಲಿಸಿಕೊಳ್ಳಲಿದೆ. ಒಂದು ವೇಳೆ ಚಂದ್ರನ ಮೇಲ್ಮೈ ಸ್ಪರ್ಶಿಸುವಾಗ ತಾಂತ್ರಿಕ ಸಮಸ್ಯೆ ಕಂಡು ಬಂದಲ್ಲಿ ಎಲ್ಲವೂ ಸ್ಪಷ್ಟವಾಗಿ ತಿಳಿಯಲಿದೆ.

    ಭೂಮಿ ಮತ್ತು ಚಂದ್ರನ ನಡುವೆ ಅಂದಾಜು 3 ಲಕ್ಷ 84 ಸಾವಿರ ಕಿಲೋಮೀಟರ್ ಅಂತರವಿದೆ. ಚಂದ್ರಯಾನ-2ರಲ್ಲಿ ಲ್ಯಾಂಡರ್-ವಿಕ್ರಂ ಮತ್ತು ರೋವರ್-ಪ್ರಜ್ಞಾನ ಚಂದ್ರನ ಸನಿಹದವರೆಗೂ ಹೋಗಲಿವೆ. ಚಂದ್ರನ ಮೇಲ್ಮೈ ಪ್ರವೇಶಿಸುವ ನಾಲ್ಕು ದಿನ ಮುನ್ನವೇ ರೋವರ್ ‘ವಿಕ್ರಂ’ ಲ್ಯಾಂಡಿಂಗ್ ಸ್ಥಳದ ಪರಿಶೀಲನೆ ನಡೆಸಿ ಸ್ಕ್ಯಾನ್ ಮಾಡಲಿದೆ. ಸ್ಥಳ ಅಂತಿಮಗೊಂಡ ಬಳಿಕ ಸೆಪ್ಟೆಂಬರ್ 6-8ರ ನಡುವೆ ಈ ಲ್ಯಾಂಡಿಂಗ್ ಚಟುವಟಿಕೆ ನಡೆಯಲಿದೆ.

    ಲ್ಯಾಡಿಂಗ್ ಬಳಿಕ ಆರು ಚಕ್ರಗಳುಳ್ಳ ರೋವರ್-ಪ್ರಜ್ಞಾನ ಲ್ಯಾಂಡರ್ ನಿಂದ ಪ್ರತ್ಯೇಕಗೊಳ್ಳುತ್ತದೆ. ಪ್ರತ್ಯೇಕಗೊಳ್ಳುವ ಪ್ರಕ್ರಿಯೆ 4 ಗಂಟೆ ಸಮಯ ವ್ಯಯವಾಗುತ್ತದೆ. ಅಂದರೆ 1 ಸೆಂಟಿಮೀಟರ್ ಪ್ರತಿ ಸೆಕೆಂಡ್ ಗೆ 500 ಮೀಟರ್ ವರೆಗೆ ದೂರವಾಗುತ್ತಾ ಹೋಗುತ್ತದೆ. ಬೇರ್ಪಟ್ಟ ರೋವರ್ ಚಂದ್ರನ ಮೇಲ್ಮೈ ಚಿತ್ರಗಳು, ಲಭ್ಯವಿರುವ ಖನಿಜ ಸಂಪನ್ಮೂಲಗಳ ಬಗ್ಗೆ ಪರಿಶೀಲನೆ ನಡೆಸುವ ಕಾರ್ಯ ನಡೆಸಲಿದೆ.

  • ಭಾರತದ ‘ಬಾಹುಬಲಿ’ಯಲ್ಲಿ ಬೆಂಗಳೂರಿನಲ್ಲಿ ಓದಿದ ‘ರಾಕೆಟ್ ಮಹಿಳೆ’ಯ ಸಾಧನೆ ಓದಿ

    ಭಾರತದ ‘ಬಾಹುಬಲಿ’ಯಲ್ಲಿ ಬೆಂಗಳೂರಿನಲ್ಲಿ ಓದಿದ ‘ರಾಕೆಟ್ ಮಹಿಳೆ’ಯ ಸಾಧನೆ ಓದಿ

    ನವದೆಹಲಿ: ಚಂದ್ರಯಾನ-2 ಉಡಾವಣೆಯನ್ನು ಯಶಸ್ವಿಗೊಳಿಸುವಲ್ಲಿ ವರ್ಷಗಳಿಂದ ಹಲವಾರು ಪುರುಷರು ಹಾಗೂ ಮಹಿಳೆಯರ ತಂಡ ಕೆಲಸ ಮಾಡಿದೆ. ಆದರೆ, ಈ ಬಾರಿಯ ಚಂದ್ರಯಾನದಲ್ಲಿ ಶೇ.30ರಷ್ಟು ಮಹಿಳೆಯರು ಕಾರ್ಯನಿರ್ವನಿರ್ವಹಿಸಿದ್ದು ಅದರಲ್ಲೂ ಇಬ್ಬರು ಪ್ರಮುಖ ಪಾತ್ರವಹಿಸಿದ್ದಾರೆ.

    ಯೋಜನಾ ನಿರ್ದೇಶಕಿ ಮುತ್ತಯ್ಯ ವನಿತಾ ಕೆಲಸ ಮಾಡಿದ್ದರೆ ಚಂದ್ರನಲ್ಲಿ ಉಪಗ್ರಹ ಇಳಿಯಬೇಕಾದ ಸ್ಥಳವನ್ನು ಗುರುತಿಸುವಲ್ಲಿ ಮಿಷನ್ ನಿರ್ದೇಶಕಿ ರಿತು ಕರಿಧಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ.

    ವಿಶೇಷವೆಂದರೆ ಉಪಗ್ರಹದ ಬಾಹ್ಯ ವ್ಯವಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಚಂದ್ರಯಾನ-2ರ ಮಿಷನ್ ಡೈರೆಕ್ಟರ್ ರಿತು ಕರಿಧಾಲ್ ಅವರು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್(ಐಐಎಸ್‍ಸಿ)ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    ಮಂಗಳಯಾನದ ಉಪ ಕಾರ್ಯಾಚಣೆ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದ ಅನುಭವ ಕರಿಧಾಲ್ ಅವರಿಗಿದ್ದು ಭಾರತದ ‘ರಾಕೆಟ್ ಮಹಿಳೆ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

    ಚಂದ್ರಯಾನ-2ರ ಯೋಜನಾ ನಿರ್ದೇಶಕಿ ಮುತ್ತಯ್ಯ ವನಿತಾ ಅವರು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಇಂಜಿನಿಯರ್ ಆಗಿದ್ದು, ಉಪಗ್ರಹಗಳಿಗೆ ಡೇಟಾ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಹೀಗಾಗಿ ಇವರನ್ನು ಯೋಜನಾ ನಿರ್ದೇಶಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆರಂಭದಲ್ಲಿ ವನಿತಾ ಅವರು ಜವಾಬ್ದಾರಿಯನ್ನು ಹೊರಲು ಮುಂದಾಗಿರಲಿಲ್ಲ. ಆದರೆ, ಚಂದ್ರಯಾನ-1ರ ಯೋಜನಾ ನಿರ್ದೇಶಕ ಎಂ.ಅಣ್ಣಾದುರೈ ಅವರ ಒತ್ತಾಯದ ಮೇರೆಗೆ ಈ ಹೊಣೆಯನ್ನು ವಹಿಸಿಕೊಂಡಿದ್ದರು.

    ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ, ನಿರ್ವಹಣಾ ಸಾಮಥ್ರ್ಯ ಹಾಗೂ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಚಾಕಚಕ್ಯತೆ ಮುತ್ತಯ್ಯ ವನಿತಾ ಅವರಿಗಿದೆ. ಹೀಗಾಗಿ ಅವರಿಗೆ ಈ ಜವಾಬ್ದಾರಿ ವಹಿಸಿದರೆ ಒಳ್ಳೆಯದು ಎಂದು ಅಣ್ಣಾದುರೈ ಇಸ್ರೋ ತಂಡಕ್ಕೆ ಸಲಹೆ ನೀಡಿದ್ದರು.

    ಕರಿಧಾಲ್ ಅವರು ಇಸ್ರೋ ಕೊಡಮಾಡುವ ಎಂಓಎಂ, ಉಮೆನ್ ಅಚೀವರ್ಸ್ ಇನ್ ಏರೋಸ್ಪೇಸ್ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ಏರೋಸ್ಪೇಸ್ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವವಿದೆ.

    ಕರಿಧಾಲ್ ಮತ್ತು ವನಿತಾ ಅವರಲ್ಲಿ ಇರುವ ಮತ್ತೊಂದು ಸಾಮ್ಯತೆ ಎಂದರೆ ಇಬ್ಬರೂ ಸಹ ಸಮಯವನ್ನು ಲೆಕ್ಕಿಸದೇ ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಇವರಿಬ್ಬರು ಮಾತ್ರವಲ್ಲ ಶೇ.30ರಷ್ಟು ಮಹಿಳೆಯರು ಚಂದ್ರಯಾನ-2 ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದು, ಚಂದ್ರಯಾನ-2ಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

  • ಚಂದ್ರಯಾನ-2: ನೆಹರು ವಿಷನ್ ನೆನಪಿಸಿಕೊಳ್ಳಲು ಇದು ಸಕಾಲ ಎಂದ ಕಾಂಗ್ರೆಸ್

    ಚಂದ್ರಯಾನ-2: ನೆಹರು ವಿಷನ್ ನೆನಪಿಸಿಕೊಳ್ಳಲು ಇದು ಸಕಾಲ ಎಂದ ಕಾಂಗ್ರೆಸ್

    ನವದೆಹಲಿ: ಚಂದ್ರಯಾನ 2 ಯಶಸ್ಸಿಗೆ ಇಡೀ ದೇಶವೇ ಇಸ್ರೋಗೆ ಶುಭಹಾರೈಸಿದೆ. ಆದರೆ, ರಾಜಕೀಯದ ದುರ್ಗಂಧ ಇಲ್ಲೂ ಬಡಿದಿದೆ. ಇಸ್ರೋ ಸಾಧನೆಯ ಕುರಿತು ಶುಭಕೋರಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಬಗ್ಗೆ ತೆಗೆದಿದ್ದಂತೆ ಚಂದ್ರಯಾನ 2 ಬಗ್ಗೆಯೂ ಕಾಂಗ್ರೆಸ್ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

    ‘ನೆಹರು ವಿಷನ್ ನೆನಪಿಸಿಕೊಳ್ಳಲು ಇದು ಸಕಾಲ. ಬಾಹ್ಯಾಕಾಶ ಸಂಶೋಧನೆಗೆ ನೆಹರು ಅವರು 1962ರಲ್ಲಿ, ಇನ್‍ಕಾಸ್‍ಪರ್ (IಓಅಔSPಂಖ) ಸ್ಥಾಪಿಸಿದರು. ನಂತರ ಇದೇ ಇಸ್ರೋ ಅಂತ ಮರುನಾಮಕರಣವಾಯಿತು. ಜೊತೆಗೆ, ಮನಮೋಹನ್ ಸಿಂಗ್ ಅವರು 2008ರಲ್ಲಿ ಚಂದ್ರಯಾನಕ್ಕೆ ಹಣಕಾಸು ಬಿಡುಗಡೆ ಮಾಡಿದ್ದರು’ ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದೆ.

    ಇತ್ತ ಪ್ರಧಾನಿ ಮೋದಿ ಅವರು ತಮ್ಮ ಕಚೇರಿಯಲ್ಲೇ ಚಂದ್ರಯಾನ 2 ಉಡಾವಣೆಯ ನೇರ ಪ್ರಸಾರ ವೀಕ್ಷಿಸಿದ್ರು. ಮಿಷನ್ ಮೂನ್‍ನಿಂದ ಚಂದ್ರನ ಮೇಲಿನ ಹೊಸ ಜ್ಞಾನ ಸಂಪಾದನೆಗೆ ಜಗತ್ತಿಗೇ ಅನುಕೂಲವಾಗಲಿದೆ ಎಂದು ವರ್ಣಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಟ್ವೀಟಿಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಪಕ್ಷ ಕೀಳುಮಟ್ಟದ ಹೇಳಿಕೆ ನೀಡಿ ಬಾಹ್ಯಾಕಾಶ ಯೋಜನೆಗಳಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ.

  • ಪ್ರತಿಯೊಬ್ಬ ಭಾರತೀಯರು ಇಂದು ಹೆಮ್ಮೆ ಪಡುವ ದಿನ – ಮೋದಿ

    ಪ್ರತಿಯೊಬ್ಬ ಭಾರತೀಯರು ಇಂದು ಹೆಮ್ಮೆ ಪಡುವ ದಿನ – ಮೋದಿ

    ನವೆದೆಹಲಿ: ಇಂದು ಭಾರತದ ಬಹು ನಿರೀಕ್ಷಿತ ಚಂದ್ರಯಾನ-2 ಯಶಸ್ವಿ ಉಡಾವಣೆಯಾಗಿದ್ದು, ಈ ವಿಚಾರಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಇಂದು ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ದಿನ ಎಂದು ಟ್ವೀಟ್ ಮಾಡಿದ್ದಾರೆ.

    ಇಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ ಮಧ್ಯಾಹ್ನ 2.41ಕ್ಕೆ ನಭಕ್ಕೆ ಚಿಮ್ಮಿದೆ. ಈ ಮೂಲಕ ಈ ಸಾಧನೆ ಮಾಡುತ್ತಿರುವ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

    ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನು ಮೆಚ್ಚಿ ಮೋದಿ ಅವರು ಟ್ವೀಟ್ ಮಾಡಿದ್ದು, ಇದು ನಮ್ಮ ದೇಶದ ವಿಶೇಷ ಕ್ಷಣ. ಇದು ಇತಿಹಾಸ ವಾರ್ಷಿಕೋತ್ಸವಗಳಲ್ಲಿ ಕೆತ್ತಲ್ಪಡುತ್ತದೆ! ಚಂದ್ರಯಾನ-2 ರ ಉಡಾವಣೆಯು ನಮ್ಮ ವಿಜ್ಞಾನಿಗಳ ಪರಾಕ್ರಮ ಮತ್ತು ವಿಜ್ಞಾನದ ಹೊಸ ಆವಿಷ್ಕಾರವನ್ನು ವಿವರಿಸುತ್ತದೆ ಮತ್ತು 130 ಕೋಟಿ ಭಾರತೀಯರ ವಿಜ್ಞಾನದ ಹೊಸ ಗಡಿನಾಡುಗಳನ್ನು ಅಳೆಯಲು ಸಹಾಯವಾಗುತ್ತದೆ. ಪ್ರತಿಯೊಬ್ಬ ಭಾರತೀಯನೂ ಇಂದು ಅಪಾರ ಹೆಮ್ಮೆ ಪಡುತ್ತಾನೆ!”ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಚಂದ್ರಯಾನ-2 ನಂತಹ ಪ್ರಯತ್ನಗಳು ನಮ್ಮ ಯುವ ಪೀಳಿಗೆಯನ್ನು ವಿಜ್ಞಾನದ ಕಡೆಗೆ ಮತ್ತಷ್ಟು ಪ್ರೋತ್ಸಾಹಿಸುತ್ತದೆ. ಇದು ಭಾರತದ ಉನ್ನತ ಗುಣಮಟ್ಟದ ಸಂಶೋಧನೆ ಮತ್ತು ಆವಿಷ್ಕಾರ. ಚಂದ್ರಯಾನದ ತಂಡಕ್ಕೆ ಧನ್ಯವಾದಗಳು, ಈ ಕಾರ್ಯಕ್ರಮ ಇನ್ನಷ್ಟು ಉತ್ತೇಜನ ಪಡೆಯಲಿ. ಚಂದ್ರಯಾನ-2 ಏಕೆ ವಿಶಿಷ್ಟ ಎಂದರೆ ಅದು ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗುತ್ತದೆ. ಈ ಹಿಂದೆ ಯಾವ ದೇಶದ ಉಪಗ್ರಹವು ಕೂಡ ದಕ್ಷಿಣ ಧ್ರುವಕ್ಕೆ ಹೋಗಿಲ್ಲ ಎಂದು ಮೋದಿ ಹೇಳಿದ್ದಾರೆ.

    ಚಂದ್ರನ ದಕ್ಷಿಣ ಧ್ರುವ ಆಯ್ಕೆ ಏಕೆ..?
    ಚಂದ್ರನ ದಕ್ಷಿಣ ಧ್ರುವ ವಿಶಿಷ್ಟವಷ್ಟೇ ಅಲ್ಲದೆ ಕುತೂಹಲಕಾರಿ. ಈ ಭಾಗ ಕತ್ತಲಿನಿಂದ ಕೂಡಿದ್ದು ಉತ್ತರ ಭಾಗಕ್ಕೆ ಹೋಲಿಸಿದರೆ ಇಲ್ಲಿನ ಮೇಲ್ಮೈ ಪ್ರದೇಶದ ವ್ಯಾಪ್ತಿ ದೊಡ್ಡದು. ಶಾಶ್ವತವಾಗಿ ಕತ್ತಲಿನಿಂದ ಕೂಡಿರುವ ಈ ಪ್ರದೇಶದಲ್ಲಿ ನೀರಿನ ಅಸ್ತಿತ್ವ ಇರುವ ಸಾಧ್ಯತೆಯಿದೆ. ದಕ್ಷಿಣ ಧ್ರುವದಲ್ಲಿರುವ ಕುಳಿಗಳು ಬಹಳ ತಂಪಾಗಿವೆ. ಸೌರಮಂಡಲ ವ್ಯವಸ್ಥೆ ಸೃಷ್ಟಿಯ ಹಂತದ ದಾಖಲೆಗಳನ್ನೂ ಹೊಂದಿರುವ ಸಾಧ್ಯತೆ.

    ಚಂದ್ರನ ಆಯ್ಕೆ ಏಕೆ?
    ಚಂದ್ರ ನಮಗೆ ಅತಿ ಹತ್ತಿರದ ಆಕಾಶಕಾಯವಾಗಿದ್ದು ಸಂಶೋಧನೆ ಮತ್ತು ದಾಖಲೀಕರಣ ಸುಲಭ. ಬಾಹ್ಯಾಕಾಶ ತಂತ್ರಜ್ಞಾನ ಪರೀಕ್ಷೆಯ ಭರವಸೆಯ ಪ್ರಯೋಗಾಲಯ. ಹಲವು ಪ್ರಯೋಗಗಳಿಗೆ ಚಂದ್ರಯಾನ ವೇದಿಕೆಯಾಗಲಿದೆ.

    ಚಂದ್ರಯಾನ-2ಗೆ ಮಹಿಳಾ ವಿಜ್ಞಾನಿಗಳ ಮುಂದಾಳತ್ವ
    ಯೋಜನಾ ತಂಡದಲ್ಲಿ ಶೇ.30ರಷ್ಟು ಮಹಿಳೆಯರು ಕಾರ್ಯನಿರ್ವಹಿಸಿದ್ದು, ಇಬ್ಬರು ಮಹಿಳೆಯರು ನೇತೃತ್ವ ವಹಿಸಿಕೊಂಡಿದ್ದಾರೆ. ಯೋಜನಾ ನಿರ್ದೇಶಕಿ ಎಂ. ವನಿತಾ, ಅಭಿಯಾನ ನಿರ್ದೇಶಕಿ ರಿತು ಕರಿಧಾಲ್ ಅವರಿಗೆ ಇಸ್ರೋದಲ್ಲಿ 20 ವರ್ಷ ಸೇವೆಗಳ ಅನುಭವವಿದೆ. ಮಂಗಳಯಾನ ಸೇರಿ ಪ್ರಮುಖ ಯೋಜನೆಗಳಲ್ಲಿ ಇಬ್ಬರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಚಂದ್ರಯಾನ-2 ಗೆ 620 ಸರ್ಕಾರಿ, ಖಾಸಗಿ ಕಂಪನಿಗಳು, ಐಐಎಸ್ಸಿ, ಐಐಟಿ ಸೇರಿದಂತೆ ದೇಶದ ಪ್ರಮುಖ 15 ಶಿಕ್ಷಣಗಳ ಕೇಂದ್ರಗಳು ನಾನಾ ರೀತಿಯಲ್ಲಿ ಕೆಲಸ ಮಾಡಿವೆ.

  • ಜುಲೈ 22ಕ್ಕೆ ಚಂದ್ರಯಾನ 2 ಉಡಾವಣೆ – ಇಸ್ರೋ ಪ್ರಕಟಣೆ

    ಜುಲೈ 22ಕ್ಕೆ ಚಂದ್ರಯಾನ 2 ಉಡಾವಣೆ – ಇಸ್ರೋ ಪ್ರಕಟಣೆ

    ನವದೆಹಲಿ: ತಾಂತ್ರಿಕ ದೋಷದಿಂದ ಜುಲೈ 15 ರಂದು ಉಡಾವಣೆ ಆಗಬೇಕಿದ್ದ ಚಂದ್ರಯಾನ-2 ಕೊನೆ ಕ್ಷಣದಲ್ಲಿ ಮುಂದೂಡಲಾಗಿತ್ತು. ಈಗ ಇಸ್ರೋ ಜುಲೈ 22 ರಂದು ಉಡಾವಣೆ ಮಾಡುವುದಾಗಿ ತಿಳಿಸಿದೆ.

    ಜುಲೈ 15 ಬೆಳಗ್ಗೆ 2.51 ಕ್ಕೆ ಚಂದ್ರಯಾನ-2 ಉಡಾವಣೆಗೆ ಆಗಬೇಕಿತ್ತು. ಆದರೆ ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಬಾಕಿ ಇರುವಾಗ ಉಡಾವಣಾ ವಾಹನದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿತ್ತು. ತಕ್ಷಣ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಇಸ್ರೋ ಸುದ್ದಿಗೋಷ್ಠಿ ಕರೆದು ಚಂದ್ರಯಾನ-2 ರದ್ದು ಮಾಡಲಾಗಿದ್ದು, ಶೀಘ್ರದಲ್ಲಿಯೇ ಮುಂದಿನ ಉಡಾವಣಾ ಸಮಯ ಘೋಷಿಸುವುದಾಗಿ ಹೇಳಿತ್ತು.

    ಈಗ ಈ ವಿಚಾರವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಇಸ್ರೋ, “ಜುಲೈ 15 ರಂದು ತಾಂತ್ರಿಕ ದೋಷದ ಕಾರಣದಿಂದ ಮುಂದೂಡಿದ್ದ, ಚಂದ್ರಯಾನ-2 ಉಡಾವಣೆಯನ್ನು ಮುಂದಿನ ಸೋಮವಾರ ಅಂದರೆ ಜುಲೈ 22 ಮಧ್ಯಾಹ್ನ 2.43ಕ್ಕೆ ಮತ್ತೆ ದಿನ ನಿಗದಿಮಾಡಲಾಗಿದೆ” ಎಂದು ಟ್ವೀಟ್ ಮಾಡಿದೆ.

    ರದ್ದಾಗಿದ್ದು ಯಾಕೆ?
    ಜಿಎಸ್‍ಎಲ್‍ವಿ-ಎಂಕೆ-3 ರಾಕೆಟ್‍ನಲ್ಲಿದ್ದ ಕ್ರಯೋಜೆನಿಕ್ ಎಂಜಿನ್‍ನ ಹೀಲಿಯಂ ಬಾಟಲ್‍ನಲ್ಲಿ ಸೋರಿಕೆ ಉಂಟಾಗಿದ್ದರಿಂದ ಉಡ್ಡಾಯನವನ್ನು ಮುಂದೂಡಲಾಗಿತ್ತು. ರಾಕೆಟ್ ನಿಗದಿತ ವೇಗ ಹಾಗೂ ಒತ್ತಡದಲ್ಲಿ ಆಕಾಶಕ್ಕೆ ನೆಗೆಯಲು ದ್ರವ ರೂಪದ ಆಕ್ಸಿಜನ್ ಹಾಗೂ ಹೈಡ್ರೋಜನ್ ಇಂಧನಗಳನ್ನು ರಾಕೆಟ್‍ಗೆ ತುಂಬಲಾಗುತ್ತದೆ. ಇದಾದ ನಂತರ ಹೀಲಿಯಂ ತುಂಬಿಸಲಾಗುತ್ತದೆ. ಹೀಲಿಯಂ ತುಂಬಿದ ಬಳಿಕ ಮಾನಿಟರ್‍ ನಲ್ಲಿ ಪ್ರೆಶರ್ ಕಡಿಮೆಯಾಗುವುದು ಕಂಡು ಬಂದಿದೆ. ಹೀಲಿಯಂ ಸೋರಿಕೆ ಆಗುತ್ತಿರುವುದನ್ನು ಗಮನಿಸಿದ ವಿಜ್ಞಾನಿಗಳು ಉಡಾವಣೆಯನ್ನು ರದ್ದುಗೊಳಿಸಿದ್ದರು.

    ಈ ಯೋಜನೆ ಭಾರತದ ಮಹತ್ತರ ಯೋಜನೆಯಾಗಿದ್ದು, ಇದಕ್ಕೆ ಸುಮಾರು 978 ಕೋಟಿ ವೆಚ್ಚವಾಗಿದೆ. ಇದರಲ್ಲಿ ಉಪಗ್ರಹದ ವೆಚ್ಚ 603 ಕೋಟಿ, ರಾಕೆಟ್‍ಗೆ 375 ಕೋಟಿ ಖರ್ಚು, ಚಂದ್ರಯಾನ-2 ಉಪಗ್ರಹದ ಒಟ್ಟು ತೂಕ 3,850 ಕೆಜಿ. ಇದೆ. 3 ಲಕ್ಷದ 82 ಸಾವಿರ ಕಿ.ಮೀ. ಸಾಗಲಿದೆ. ಈ ಉಪಗ್ರಹ ಚಂದ್ರನ ದಕ್ಷಿಣ ಧ್ರುವ ತಲುಪಲಿದೆ.

    ಎಲ್ಲವು ಅದ್ದುಕೊಂಡತೆ ಆದರೆ ಈ ಸಾಧನೆ ಮಾಡಿದ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಈ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ಈ ಸಾಲಿಗೆ ಈಗ ಭಾರತ ಸೇರಲು ತುದಿಗಾಲಿನಲ್ಲಿ ನಿಂತಿದೆ. ಭಾರತದ ಈ ಸಾಧನೆ ಹೊತ್ತಲ್ಲೇ 2024ಕ್ಕೆ ಚಂದ್ರನ ದಕ್ಷಿಣ ಧ್ರುವಕ್ಕೇ ಹೋಗಬೇಕು ಎಂದು ನಾಸಾದ ಗಗನಯಾತ್ರಿಗಳಿಗೆ ಟ್ರಂಪ್ ಹೇಳಿದ್ದಾರೆ.

  • ಚಂದ್ರಯಾನ 2 ರದ್ದು- ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಮುಂದೂಡಿಕೆ

    ಚಂದ್ರಯಾನ 2 ರದ್ದು- ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಮುಂದೂಡಿಕೆ

    – ಶೀಘ್ರದಲ್ಲೇ ಹೊಸ ಸಮಯ ನಿಗದಿ

    ನವದೆಹಲಿ: ಕೋಟ್ಯಂತರ ಕಂಗಳು ಕಾಯುತ್ತಿದ್ದು ಚಂದ್ರಯಾನ-2 ಕೊನೆ ಕ್ಷಣದಲ್ಲಿ ಮುಂದೂಡಿಕೆ ಮಾಡಲಾಗಿದೆ. ರಾಕೆಟ್‍ನ ಉಡಾವಣಾ ವಾಹನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ರದ್ದುಗೊಳಿಸಲಾಗಿದೆ.

    ಚಂದ್ರಯಾನ- 2 ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಬಾಕಿ ಇರುವಾಗ ತಾಂತ್ರಿಕ ದೋಷ ಪತ್ತೆಯಾಗಿತ್ತು. ತಕ್ಷಣ ಅಧಿಕಾರಿಗಳ ಸಮಾಲೋಚನೆ ನಡೆಸಿದ ಇಸ್ರೋ ಸುದ್ದಿಗೋಷ್ಠಿ ಕರೆದು ಚಂದ್ರಯಾನ-2 ರದ್ದು ಮಾಡಲಾಗಿದ್ದು, ಶೀಘ್ರದಲ್ಲಿಯೇ ಮುಂದಿನ ಉಡಾವಣಾ ಸಮಯ ಘೋಷಿಸುವುದಾಗಿ ಹೇಳಿದೆ.

    ಏನೇನಾಯ್ತು…?
    * ರಾತ್ರಿ 1 ಗಂಟೆ 55 ನಿಮಿಷ 24 ಸೆಕೆಂಡ್- ಚಂದ್ರಯಾನ-2ರಲ್ಲಿ ತಾಂತ್ರಿಕ ದೋಷ ಪತ್ತೆ
    * ಚಂದ್ರಯಾನ- 2 ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಬಾಕಿ ಇರುವಾಗ ತಾಂತ್ರಿಕ ದೋಷ ಪತ್ತೆ
    * ತಕ್ಷಣ ಅಧಿಕಾರಿಗಳಿಂದ ಸಮಾಲೋಚನೆ
    * 2 ಗಂಟೆ 9 ನಿಮಿಷಕ್ಕೆ ಚಂದ್ರಯಾನ- 2 ತಾತ್ಕಾಲಿಕ ತಡೆ
    * 2 ಗಂಟೆ 16 ನಿಮಿಷಕ್ಕೆ ಚಂದ್ರಯಾನ- 2 ರದ್ದು
    * ಬಳಿಕ ಟ್ವಿಟ್ಟರ್ ನಲ್ಲಿ ಚಂದ್ರಯಾನ- 2 ರದ್ದುಗೊಂಡ ಬಗ್ಗೆ ಸ್ಪಷ್ಟನೆ
    * 2.40ಕ್ಕೆ ಇಸ್ರೋ ಅಧಿಕಾರಿಯಿಂದ ಸುದ್ದಿಗೋಷ್ಠಿ- ಚಂದ್ರಯಾನ-2 ರದ್ದು ಬಗ್ಗೆ ಸ್ಪಷ್ಟನೆ

    ಚಂದ್ರಯಾನ 2ರದ್ದುಗೊಂಡ ಬಗ್ಗೆ ಇಸ್ರೋ ಅಧಿಕಾರಿ ಮಾಹಿತಿ ನೀಡಿದರು. ರಾಕೆಟ್ ಉಡಾವಣಾ ವಾಹನದಲ್ಲಿ ತಾಂತ್ರಿಕ ಸಮಸ್ಯೆಯನ್ನು ಗಮನಿಸಿದ್ದೇವೆ. ಉಡಾವಣೆಗೆ ನಿಗದಿಪಡಿಸಿದ ಸಮಯದಲ್ಲಿ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಚಂದ್ರಯಾನ 2 ರದ್ದುಗೊಳಿಸಿದ್ದು ಮುಂದಿನ ದಿನಾಂಕ ಶೀಘ್ರದಲ್ಲೇ ಪ್ರಕಟ ಮಾಡುತ್ತೇವೆ ಎಂದು ಇಸ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದರೆ.