Tag: Chandrakant

  • ಬಡ ರೈತನ ಮಗ ಚಂದ್ರಯಾನ-2 ಯೋಜನೆ ಪ್ರಮುಖ ರೂವಾರಿ

    ಬಡ ರೈತನ ಮಗ ಚಂದ್ರಯಾನ-2 ಯೋಜನೆ ಪ್ರಮುಖ ರೂವಾರಿ

    ಕೋಲ್ಕತ್ತಾ: ಭಾರತದ ಹೆಮ್ಮೆಯ ಚಂದ್ರಯಾನ 2 ಅಧಿಕೃತವಾಗಿ ಆರಂಭವಾಗಿದ್ದು, ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ ಸೋಮವಾರ ಮಧ್ಯಾಹ್ನ 2.41ಕ್ಕೆ ನಭಕ್ಕೆ ಚಿಮ್ಮಿದೆ. ಈ ಯೋಜನೆಯಲ್ಲಿ ರೈತನ ಮಗ ಪ್ರಮುಖ ಪಾತ್ರ ವಹಿಸಿದ್ದಾರೆ.

    ಹೌದು. ಪಶ್ಚಿಮ ಬಂಗಾಳದ ಹೂಗ್ಲಿಯ ಶಿಬ್‍ಪುರ್ ಗ್ರಾಮದ ಬಡ ರೈತನ ಮಗ ಚಂದ್ರಕಾಂತ್ ಈಗ ಚಂದ್ರಯಾನ-2 ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ರೈತ ಮಧುಸೂದನ್ ಕುಮಾರ್ ಅವರು ತಮ್ಮ ಮಗನಿಗೆ ಸೂರ್ಯಕಾಂತ್ ಎಂದು ಹೆಸರು ಇಡಲು ಇಚ್ಛಿಸಿದ್ದರು. ಆದರೆ, ಶಿಕ್ಷಕರೊಬ್ಬರ ಸೂಚನೆ ಮೇರೆಗೆ ಅವರು ಮಗನಿಗೆ ಚಂದ್ರಕಾಂತ್ ಎಂದು ನಾಮಕರಣ ಮಾಡಿದರು. ಈಗ `ಚಂದ್ರಯಾನ-2’ನಲ್ಲಿ ಚಂದ್ರಕಾಂತ್ ಪ್ರಮುಖ ಪಾತ್ರ ವಹಿಸಿರುವುದು ಅವರ ಕುಟುಂಬದ ಖುಷಿಯನ್ನು ಮತ್ತು ಹೆಚ್ಚಿಸಿದೆ.

    ಚಂದ್ರಕಾಂತ್ ಅವರು ಭಾರತೀಯ ಉಪಗ್ರಹಗಳು ಹಾಗೂ ಉಪಗ್ರಹ ಕೆಂದ್ರಗಳಿಗೆ ಆಂಟೇನಾ ಸಿಸ್ಟಮ್ ವಿನ್ಯಾಸ ಮಾಡಿದ್ದಾರೆ. ಇವರು ಚಂದ್ರಯಾನ-1ರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಜಿಸ್ಯಾಟ್-12 ಸೇರಿ ಮೊದಲಾದ ಯೋಜನೆಗಳಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಅದರಂತೆ ಚಂದ್ರಯಾನ-2 ಯೋಜನೆಯಲ್ಲೂ ಚಂದ್ರಕಾಂತ್ ಪ್ರಮುಖ ಪಾತ್ರ ವಹಿಸಿದ್ದಾರೆ.

    ಪ್ರಸ್ತುತವಾಗಿ ಚಂದ್ರಕಾಂತ್ ಅವರು ಚಂದ್ರಯಾನ-2ರ ಉಪ ಯೋಜನೆ ನಿರ್ದೇಶಕ ಹಾಗೂ ಯು.ಆರ್ ಉಪಗ್ರಹ ಕೇಂದ್ರದ `ಎಲೆಕ್ಟ್ರೋಮ್ಯಾಗ್ನೆಟಿಕ್’ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅಷ್ಟೇ ಅಲ್ಲದೆ ಚಂದ್ರಕಾಂತ್ ಅವರ ಸಹೋದರ ಶಶಿಕಾಂತ್ ಅವರು ಕೂಡ ವಿಜ್ಞಾನಿಯಾಗಿದ್ದಾರೆ.

    ಮಗನ ಈ ಸಾಧನೆ ಬಗ್ಗೆ ಹೆತ್ತವರು ಹೆಮ್ಮೆಯಿಂದ ಮಾತನಾಡಿದ್ದಾರೆ. ಮೊದಲು ಚಂದ್ರಕಾಂತ್ ಅವರ ತಂದೆ ಪ್ರತಿಕ್ರಿಯಿಸಿ, ನಾನು ಕೃಷಿಯಲ್ಲಿ ತೊಡಗಿದ್ದ ಕಾರಣಕ್ಕೆ ಆತನ ಓದಿನ ವಿಚಾರದಲ್ಲಿ ನಾನು ಏನೂ ಕಲಿಸಲು ಸಾಧ್ಯವಾಗಿಲ್ಲ. ಆದರೆ ಅವನ ಶಿಕ್ಷಕರು ಅವನಿಗೆ ಬಹಳಷ್ಟು ವಿಚಾರವನ್ನು ಕಲಿಸಿಕೊಟ್ಟು, ಪ್ರೋತ್ಸಾಹಿಸಿದ್ದಾರೆ. ಚಂದ್ರಕಾಂತ್ ಸಾಕಷ್ಟು ಪರಿಶ್ರಮ ಪಟ್ಟು ಇಂದು ಈ ಸಾಧನೆ ಮಾಡಿದ್ದಾನೆ. 2001ರಲ್ಲಿ ಇಸ್ರೋ ಸೇರಿ, ಇಂದು ಅತ್ಯುತ್ತಮ ಯೋಜನೆಯ ಪ್ರಮುಖ ರೂವಾರಿಯಾಗಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

    ಚಂದ್ರಕಾಂತ್ ಅವರ ತಾಯಿ ಮಾತನಾಡಿ, ನನ್ನ ಮಗ ಮಾಡಿರುವ ಸಾಧನೆ ನನಗೆ ಬಹಳ ಖುಷಿಯಾಗಿದೆ. ನನ್ನ ಸಂತೋಷವನ್ನು ಹೇಳಿಕೊಳ್ಳಲು ನನಗೆ ಪದಗಳೇ ಸಿಗುತ್ತಿಲ್ಲ. ಚಂದ್ರಯಾನ-2 ರಾಕೆಟ್ ನಭಕ್ಕೆ ಹಾರುವುದನ್ನ ಟಿವಿಯಲ್ಲಿ ನೋಡಿ ಎಂದು ನನ್ನ ಮಗ ಕರೆಮಾಡಿ ಹೇಳಿದ. ನನ್ನ ಮಗನ ಬಗ್ಗೆ ನನಗೆ ಹೆಮ್ಮೆಯಿದೆ ಎಂದಿದ್ದಾರೆ.

    ಜುಲೈ 15ರ ಮಧ್ಯರಾತ್ರಿಯಂದು ನಡೆದ ಮೊದಲ ಪ್ರಯತ್ನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಸ್ಥಗಿತಗೊಳಿಸಲಾಗಿತ್ತು. ಉಡಾವಣೆಗೆ 56 ನಿಮಿಷ ಇದ್ದಾಗ ರಾಕೆಟ್‍ಗೆ ಇಂಧನ ತುಂಬಿಸುವ ವೇಳೆ ಈ ದೋಷ ಪತ್ತೆಯಾಗಿತ್ತು. ವಿಜ್ಞಾನಿಗಳು ಕೂಡಲೇ ಉಡಾವಣೆ ಸ್ಥಗಿತಗೊಳಿಸಲು ನಿರ್ಧರಿಸಿದ್ದರು. ಇಸ್ರೋ ವಿಜ್ಞಾನಿಗಳು ಈಗ ಬಹಳ ಎಚ್ಚರಿಕೆಯಿಂದ ತಾಂತ್ರಿಕ ದೋಷಗಳನ್ನು ನಿವಾರಿಸಿದ್ದಾರೆ. ಹಲವು ಬಾರಿ ಪರೀಕ್ಷೆಗಳನ್ನು ನಡೆಸಿ ಮತ್ತೆ ತಾಂತ್ರಿಕ ದೋಷ ಕಾಣಿಸಿಕೊಳ್ಳದಂತೆ ನಿಗಾ ವಹಿಸಿದ್ದರು.

    ತಾಂತ್ರಿಕ ದೋಷವನ್ನು ಸರಿಪಡಿಸಿ ಸೋಮವಾರದಿಂದ ಚಂದ್ರಯಾನ-2 ಆರಂಭವಾಗಿದೆ. ಈ ಸಾಧನೆ ಮಾಡುತ್ತಿರುವ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ, ಚೀನಾ ಮಾತ್ರ ಈ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ಈ ಸಾಲಿಗೆ ಈಗ ಭಾರತ ಸೇರಲಿದೆ.

    ಚಂದ್ರಯಾನ 2 ಯೋಜನೆಗೆ ಸುಮಾರು 978 ಕೋಟಿ ವೆಚ್ಚವಾಗಿದೆ. ಇದರಲ್ಲಿ ಉಪಗ್ರಹ ನಿರ್ಮಾಣಕ್ಕೆ 603 ಕೋಟಿ ರೂ. ವೆಚ್ಚವಾಗಿದ್ದರೆ, ರಾಕೆಟ್‍ಗೆ 375 ಕೋಟಿ ರೂ. ಖರ್ಚಾಗಿದೆ. ಚಂದ್ರಯಾನ 2 ಉಪಗ್ರಹದ ಒಟ್ಟು ತೂಕ 3,850 ಕೆಜಿ ಇದ್ದು, 3 ಲಕ್ಷದ 82 ಸಾವಿರ ಕಿ.ಮೀ. ಸಾಗಲಿದೆ. 54 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 13 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಲಿದೆ.