Tag: Chandrachud

  • ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಬೆಂಬಲಿಸಿದ ನಿವೃತ್ತ ಸಿಜೆಐ ಚಂದ್ರಚೂಡ್‌

    ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಬೆಂಬಲಿಸಿದ ನಿವೃತ್ತ ಸಿಜೆಐ ಚಂದ್ರಚೂಡ್‌

    ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ (Ex-CJI Chandrachud) ಅವರು ಒಂದು ರಾಷ್ಟ್ರ, ಒಂದು ಚುನಾವಣೆಯ (One Nation, One Election) ಪರವಾಗಿ ಅಭಿಪ್ರಾಯ ಮಂಡಿಸಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    ಈ ವರ್ಷದ ಏಪ್ರಿಲ್‌ನಲ್ಲಿ ವಿವರವಾದ ಟಿಪ್ಪಣಿಯನ್ನು ಸಂಸದೀಯ ಸಮಿತಿಗೆ ಡಿ.ವೈ. ಚಂದ್ರಚೂಡ್ ಸಲ್ಲಿಸಿದ್ದಾರೆ. ಇದರಲ್ಲಿ ಅವರು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಿದರೆ ಸಂವಿಧಾನ ಮೂಲ ರಚನೆಯ ಸಿದ್ಧಾಂತವನ್ನು ಉಲ್ಲಂಘಿಸುತ್ತದೆ ಎಂಬ ವಾದಗಳನ್ನು ತಳ್ಳಿಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಒಂದು ರಾಷ್ಟ್ರ, ಒಂದು ಚುನಾವಣೆಯ ಪರವಾಗಿ ಮಾತನಾಡಿದರೂ ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆಗಳಲ್ಲಿ ಚುನಾವಣಾ ಆಯೋಗಕ್ಕೆ ನೀಡಲಾದ ಅನಿರ್ದಿಷ್ಟ ಮತ್ತು ವ್ಯಾಪಕ ಅಧಿಕಾರಗಳನ್ನು ಅವರು ವಿರೋಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಜೀವನ ತುಂಬಾ ಆಕರ್ಷಕ: ವರ್ಗಾವಣೆ ವಿರೋಧಿಸಿ ವೈದ್ಯರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

    ನಿವೃತ್ತ ನ್ಯಾ. ಚಂದ್ರಚೂಡ್, ಮಾಜಿ ಮುಖ್ಯ ನ್ಯಾ.ಜೆ ಕೆಹರ್ ಮತ್ತು ಮಾಜಿ ಸಚಿವರಾದ ಎಂ ವೀರಪ್ಪ ಮೊಯ್ಲಿ ಮತ್ತು ಇ ಎಂ ಸುದರ್ಶನ ನಾಚಿಯಪ್ಪನ್ ಅವರನ್ನು ಒಂದು ದೇಶ ಒಂದು ಚುನಾವಣೆ ಸಂಬಂಧ ರಚನೆಯಾಗಿರುವ ಜಂಟಿ ಸಂಸದೀಯ ಸಮಿತಿ ಜುಲೈ 11 ರಂದು ಸಂವಾದಕ್ಕೆ ಆಹ್ವಾನಿಸಿದೆ.

    ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಸಂವಿಧಾನದ ಮೂಲ ಲಕ್ಷಣವಾಗಿದೆ. ಹಾಗೆಂದ ಮಾತ್ರಕ್ಕೆ ಏಕಕಾಲದಲ್ಲಿ ಚುನಾವಣೆ ನಡೆಸದಿದ್ದರೆ ಮಾತ್ರ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುತ್ತದೆ ಎಂದು ಹೇಳಲು ಬರುವುದಿಲ್ಲ ಎಂಬ ಅಭಿಪ್ರಾಯವನ್ನು ನಿವೃತ್ತ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿದ್ದ ಮಾತ್ರಕ್ಕೆ ವಿನಾಯ್ತಿ ಇಲ್ಲ: ಪತ್ನಿ ಕೊಂದಿದ್ದ ಕಮಾಂಡೋಗೆ ಸುಪ್ರೀಂ ತರಾಟೆ

    ಭಾರತೀಯ ಮತದಾರರು ಮುಗ್ಧರು. ಅವರನ್ನು ಸುಲಭವಾಗಿ ಹೇಗೆ ಬೇಕಾದರೂ ಪ್ರಭಾವಿಸಬಹುದು ಎಂಬ ವಾದವನ್ನು ಒಂದು ರಾಷ್ಟ್ರ, ಒಂದು ಚುನಾವಣೆಯನ್ನು ವಿರೋಧಿಸುವವರು ಮುಂದಿಡುತ್ತಾರೆ. ಆದರೆ ಸಾರ್ವತ್ರಿಕ ವಯಸ್ಕ ಮತದಾನವು ಸಾಂವಿಧಾನಿಕ ಬದ್ಧತೆಯಾಗಿದೆ. ಪರಿಶೀಲಿಸದ ಊಹೆಯ ಆಧಾರದಲ್ಲಿ ಸಾಂವಿಧಾನಿಕ ಚೌಕಟ್ಟನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳಲ್ಲಿ ಜನರು ವಿಭಿನ್ನವಾಗಿ ಮತ ಚಲಾಯಿಸುತ್ತಾರೆ ಎಂಬ ಸಲಹೆಗಳನ್ನು ತಳ್ಳಿಹಾಕಿದ ಅವರು, ಜನರು ತಮ್ಮ ಸ್ಥಳೀಯ ಮತ್ತು ರಾಜ್ಯ ಹಿತಾಸಕ್ತಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಬೇಕೆಂದಿದ್ದರೆ ಸ್ಥಳೀಯ ವಿಷಯಗಳ ಮೇಲೆ ರಾಷ್ಟ್ರೀಯ ಚುನಾವಣೆಗೆ ಮತ ಚಲಾಯಿಸಬಹುದಲ್ಲವೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

     

  • ಸಾಧುಕೋಕಿಲರಿಂದ ಸುದೀಪ್, ಯಶ್, ಧ್ರುವ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ: ಚಂದ್ರಚೂಡ್

    ಸಾಧುಕೋಕಿಲರಿಂದ ಸುದೀಪ್, ಯಶ್, ಧ್ರುವ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ: ಚಂದ್ರಚೂಡ್

    ಫಿಲ್ಮ್ ಫೆಸ್ಟಿವಲ್‌ಗೆ ಸುದೀಪ್ ಅನುಪಸ್ಥಿತಿ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದ ಶಾಸಕ ರವಿ ಗಣಿಗಗೆ ಕಿಚ್ಚನ ಆಪ್ತ ಚಂದ್ರಚೂಡ್ ತಿರುಗೇಟು ಕೊಟ್ಟ ಬೆನ್ನಲ್ಲೇ ಹೊಸ ಆರೋಪ ಮಾಡಿದ್ದಾರೆ. ಫಿಲ್ಮ್ ಫೆಸ್ಟಿವಲ್ ಕಿಚ್ಚನಿಗೆ ಆಹ್ವಾನ ಇರಲಿಲ್ಲ, ಸಾಧುಕೋಕಿಲ ಅವರಿಂದ ಯಶ್ (Yash), ಸುದೀಪ್ (Sudeep), ಧ್ರುವ ಸರ್ಜಾ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ ಎಂದು ಚಂದ್ರಚೂಡ್ (Chandrachud) ಪಬ್ಲಿಕ್‌ ಟಿವಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಸಾಧುಕೋಕಿಲ ಅವರು ಸಿನಿಮಾ, ಅಕಾಡೆಮಿಯಲ್ಲಿ ಕೆಲಸ ಮಾಡ್ತಿದ್ದಾರೆ. ಈಗ ಅವರು ಅರ್ಧ ರಾಜಕಾರಣಿ ಬೇರೇ ಆಗಿದ್ದಾರೆ. ಯಾಕೆ ಸಾಧುಕೋಕಿಲ ಅವರು ತಪ್ಪು ಮಾಹಿತಿ ನೀಡ್ತಿದ್ದಾರೆ. ಅವರಿಗೆ ಸಂಘಟನೆಯ ಚತುರತೆ ಬರದೇ ಇರೋದ್ರಿಂದ, ಇಡೀ ಚಿತ್ರರಂಗಕ್ಕೆ ತಪ್ಪು ಮಾಹಿತಿ ಆಗೋ ಹಾಗೆ ಆಗಿದೆ. ಸುದೀಪ್ ಬಗ್ಗೆ ಮಾತ್ರವಲ್ಲ. ಸಾಧುಕೋಕಿಲರಿಂದ ಯಶ್, ಉಪೇಂದ್ರ, ಧ್ರುವ ಸರ್ಜಾ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ ಎಂದು ಫಿಲ್ಮ್‌ ಫೆಸ್ಟಿವಲ್‌ಗೆ ಆಹ್ವಾನ ಇಲ್ಲದೇ ಇರೋ ಬಗ್ಗೆ ಸ್ಪಷ್ಟಪಡಿಸಿದರು.

    ನಾನು ಕೂಡ ಒಬ್ಬ ಡೈರೆಕ್ಟರ್ ಕೂಡ ಚಲನಚಿತ್ರೋತ್ಸವಕ್ಕೆ ನನಗೆ ಕರೆದಿದ್ದೀರಾ? ನಾನು ನಿರ್ದೇಶಕರ ಸಂಘದಲ್ಲಿದ್ದೇನೆ ಪಾಸ್ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಈ ವರ್ಷ ಅಂತ ಅಲ್ಲ ಪ್ರತಿ ವರ್ಷ ಫಿಲ್ಮ್ ಫೆಸ್ಟಿವಲ್ ನಡೆಯುವಾಗ ಹೀಗೆ ಅದ್ವಾನ ನಡೆಯುತ್ತಲೇ ಇರುತ್ತದೆ ಎಂದರು. ಇದನ್ನೂ ಓದಿ:ಚಲನಚಿತ್ರೋತ್ಸವಕ್ಕೆ ಸುದೀಪ್‌ಗೆ ಆಹ್ವಾನ ಕೊಟ್ಟಿರಲಿಲ್ವಾ?- ಶಾಸಕನ ಆರೋಪಕ್ಕೆ ಕಿಚ್ಚನ ಆಪ್ತ ಸ್ಪಷ್ಟನೆ

    ಇನ್ನೂ ನನಗೆ ಶಾಸಕ ರವಿ ಗಾಣಿಗ ಅವರು ಕಾಲ್ ಮಾಡಿದ್ರು. ನನಗೆ ಸುದೀಪ್ ಸರ್ 2004ರಿಂದ ಅವಾರ್ಡ್‌ಗಳನ್ನೇ ತೆಗೆದುಕೊಳ್ತಿರಲಿಲ್ಲ ಅನ್ನೋ ಮಾಹಿತಿ ಗೊತ್ತಿರಲಿಲ್ಲ. ‘ರಂಗ ಎಸ್‌ಎಸ್‌ಎಲ್‌ಸಿ’ ಸಮಯದಲ್ಲಿ ಅವರಿಗೆ ಸ್ಟೇಟ್ ಅವಾರ್ಡ್ ಬರೋದು ಇರುತ್ತದೆ. ಅದರ ಹಿಂದಿನ ಸರ್ಕಾರದಿಂದ ಅವರಿಗೆ ಪತ್ರ ಬಂದಿರುತ್ತದೆ. ನಿಮಗೆ ರಾಜ್ಯೋತ್ಸವ ಬಂದಿದೆ ಅಂತ, ಮರುದಿನ ಆ ಅವಾರ್ಡ್ ಬೇರೆ ಅವರಿಗೆ ಕೊಡ್ತಾರೆ. ‘ಜಸ್ಟ್ ಮಾತ್ ಮಾತಲ್ಲಿ’ ಸಿನಿಮಾ ಪ್ರಶಸ್ತಿ ಅನೌನ್ಸ್ ಮಾಡೋ ಟೈಮ್‌ನಲ್ಲೂ ಹೀಗೆ ಆಯ್ತು ಎಂಬ ವಿಷ್ಯ ನನಗೆ ಸರ್ಕಾರದಿಂದ ಎಂದು ತಿಳಿದಿರಲಿಲ್ಲ. ಇಷ್ಟು ವರ್ಷ ಆದ್ರೂ ಸುದೀಪ್ ಅವರು ತಮಗೆ ಆಗಿರೋ ಅವಮಾನ ಎಲ್ಲೂ ಹೇಳಿಕೊಂಡಿಲ್ಲವಲ್ಲ ಎಂದು ರವಿ ಗಣಿಗ ಅವರು ತಮಗೆ ಹೇಳಿದರು ಎಂದು ಚಂದ್ರಚೂಡ್‌ ಈ ಬಗ್ಗೆ ಮಾತನಾಡಿದರು.

    ಇಷ್ಟೇಲ್ಲ ವಿಚಾರ ಆಗಿದೆ ಎಂಬುದು ರವಿ ಗಾಣಿಗ ಅವರಿಗೆ ತಿಳಿದಿರಲಿಲ್ಲ. ಅದರಂತೆ ಡಿಸಿಎಂ ಅವರಿಗೂ ಇದರ ಬಗ್ಗೆ ತಿಳಿದಿಲ್ಲ. ಚಲನಚಿತ್ರೋತ್ಸವಕ್ಕೆ ಸುದೀಪ್ ಆಹ್ವಾನ ನೀಡಿಲ್ಲ. ಗೊತ್ತಿದ್ರೆ ಅವರು ಸ್ಯಾಂಡಲ್‌ವುಡ್ ನಟರಿಗೆ ನೆಟ್ಟು ಬೋಲ್ಟು ಟೈಟ್ ಮಾಡ್ತೀನಿ ಅಂತ ಹೇಳ್ತಿರಲಿಲ್ಲ. ನಟ್ಟು ಬೋಲ್ಟು ಸರಿ ಮಾಡೋದಾದ್ರೆ 2024ರ ಸಬ್ಸಿಡಿ ಕೊಟ್ಟು ಸರಿ ಮಾಡಿ ಎಂದಿದ್ದಾರೆ.

    ಇನ್ನೂ ಚಿತ್ರರಂಗದ ನಟರ ಬಗ್ಗೆ ಡಿಸಿಎಂ ಡಿಕೆಶಿ ಅವರು ಜನರಲ್ ಆಗಿ ಹೇಳಿದ್ದಾರೆ. ಸುದೀಪ್ ಅವರನ್ನೇ ಟಾರ್ಗೆಟ್ ಮಾಡಿ ಮಾತನಾಡಿಲ್ಲ. ಕರ್ನಾಟಕ ರಾಜ್ಯದಲ್ಲೇ ಸುದೀಪ್ ಆಗಿರೋ ಅವಮಾನದಿಂದ ಅವರು ಯಾವುದೇ ಅವಾರ್ಡ್‌ ತೆಗೆದುಕೊಳ್ತಿಲ್ಲ ಕ್ಲ್ಯಾರಿಟಿ ನೀಡಿದ್ದಾರೆ.

    ಸುದೀಪ್ ಸರ್ ಅವರು ಡಿಕೆಶಿ ಅವರ ಹತ್ತಿರ ತುಂಬಾ ಚೆನ್ನಾಗಿದ್ದಾರೆ. ಒಂದು ಸಿಸಿಎಲ್‌ಗೆ ಆಹ್ವಾನ ಕೊಡೋದಕ್ಕೆ ಹೋದಾಗ ಒಟ್ಟಿಗೆ ಟಿಫನ್ ಮಾಡಿದ್ವಿ ಎಂದಿದ್ದಾರೆ. ಈ ವೇಳೆ, ‘ಬಿಲ್ಲ ರಂಗಾ ಭಾಷಾ’ ಚಿತ್ರಕ್ಕೆ ಪರ್ಮೀಷನ್ ಕೇಳೋಕೆ ಹೋಗಿರಲಿಲ್ಲ. ಚಿತ್ರಕ್ಕೆ ಒಂದು ಸೆಟ್ ಹಾಕಬೇಕಿತ್ತು. ನಮಗೆ 12ರಿಂದ 15 ಏಕರೆ ಜಾಗ ಬೇಕಿತ್ತು. ಅದಕ್ಕೆ ಉಪಕರಣಗಳು ಬೇಕಿತ್ತು ಹಾಗಾಗಿ ಡಿಕೆಶಿ ಅವರ ಬಳಿ ಚರ್ಚಿಸಿದ್ವಿ ಎಂದರು.

  • ಎಲ್ಲಾ ಖಾಸಗಿ ಆಸ್ತಿ ಮೇಲೆ ಸರ್ಕಾರಕ್ಕೆ ಹಕ್ಕಿಲ್ಲ – ಸುಪ್ರೀಂ ಐತಿಹಾಸಿಕ ತೀರ್ಪು

    ನವದೆಹಲಿ: ಖಾಸಗಿ ಆಸ್ತಿಗಳ (Private Property) ಮೇಲೆ ಸರ್ಕಾರಿ ಹಕ್ಕಿನ ವ್ಯಾಪ್ತಿ ಎಲ್ಲಿಯವರೆಗೆ ಇದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. ಎಲ್ಲಾ ಖಾಸಗಿ ಹಕ್ಕುಗಳ ಮೇಲೆ ರಾಜ್ಯ ಸರ್ಕಾರಗಳ ಮೇಲೆ ಹಕ್ಕುಗಳು ಇರುವುದಿಲ್ಲ ಎಂದು ಕೋರ್ಟ್‌ ಸ್ಪಷ್ಟವಾಗಿ ತಿಳಿಸಿದೆ.

    ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ, ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ನ್ಯಾ. ಕೃಷ್ಣಯ್ಯರ್ ನೀಡಿದ್ದ ತೀರ್ಪನ್ನು 8:1 ಬಹುಮತದೊಂದಿಗೆ ವಜಾ ಮಾಡಿದೆ. ಸಂವಿಧಾನದ ಆರ್ಟಿಕಲ್ 39(ಬಿ)ಪ್ರಕಾರ ಖಾಸಗಿಯವರ ಮಾಲೀಕತ್ವದ ಎಲ್ಲಾ ಸಂಪನ್ಮೂಲಗಳನ್ನು ವಶಕ್ಕೆ ಪಡೆಯುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇರಲ್ಲ ಎಂದು ಸಿಜೆಐ ಚಂದ್ರಚೂಡ್‌ ನೇತೃತ್ವದ 9 ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನಿಕ ಪೀಠ ಸ್ಪಷ್ಟವಾಗಿ ತಿಳಿಸಿದೆ. ಇದನ್ನೂ ಓದಿ: ಉದ್ಯೋಗದಲ್ಲಿ ಮಹಿಳೆಯರಿಗೆ 35% ಮೀಸಲಾತಿ: ಮಧ್ಯಪ್ರದೇಶ ಸರ್ಕಾರದ ಮಹತ್ವದ ನಿರ್ಧಾರ

     

    ಕೆಲವೇ ಪ್ರಕರಣಗಳಲ್ಲಿ ಇದಕ್ಕೆ ವಿನಾಯ್ತಿ ಇರಲಿದೆ ಎಂದು ಸಾಂವಿಧಾನಿಕ ಪೀಠ ತಿಳಿಸಿದೆ. ಈ ವಿಚಾರವನ್ನು 1950ರ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಲಾಗದು. ಅಂದು ರಾಷ್ಟ್ರೀಕರಣ ನಡೆದಿತ್ತು. ಆದರೆ ಇಂದು ಹೂಡಿಕೆ ವಾಪಸಾತಿ ನಡೆಯುತ್ತಿದೆ. ಖಾಸಗಿ ಹೂಡಿಕೆ ಇದೆ. ಇದು ಪರಿವರ್ತನೆ. ಹೀಗಾಗಿ ಇಂದಿನ ಸ್ಥಿತಿಗೆ ಅನುಗುಣವಾಗಿ ಮತ್ತು ಭವಿಷ್ಯವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಈ ತೀರ್ಪು ನೀಡಿದ್ದೇವೆ ಎಂದು ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.

    ಈ ತೀರ್ಪಿನೊಂದಿಗೆ, ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಹೇಳಿದ್ದ ನ್ಯಾ. ಕೃಷ್ಣ ಅಯ್ಯರ್ ಅವರ 1978 ರ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ತೀರ್ಪು ಖಾಸಗಿ ವ್ಯಕ್ತಿಗಳ ಎಲ್ಲಾ ಆಸ್ತಿಗಳನ್ನು ಸಮುದಾಯದ ಆಸ್ತಿ ಎಂದು ಕರೆಯಬಹುದು ಎಂದು ಹೇಳಿತ್ತು.

  • ಸಲಿಂಗ ವಿವಾಹಗಳು ಶ್ರೀಮಂತರ ಪರಿಕಲ್ಪನೆಗಳಲ್ಲ – ಸುಪ್ರೀಂ ಕೋರ್ಟ್

    ಸಲಿಂಗ ವಿವಾಹಗಳು ಶ್ರೀಮಂತರ ಪರಿಕಲ್ಪನೆಗಳಲ್ಲ – ಸುಪ್ರೀಂ ಕೋರ್ಟ್

    ನವದೆಹಲಿ: ಸಲಿಂಗ ವಿವಾಹಗಳು (Same-Sex Marriage) ನಗರ ಗಣ್ಯರ ಅಥವಾ ಶ್ರೀಮಂತರ ಪರಿಕಲ್ಪನೆಗಳಲ್ಲ (Elitist Concept) ಎಂದು ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ ಚಂದ್ರಚೂಡ್ (D.Y Chandrachud) ಬುಧವಾರ ಅಭಿಪ್ರಾಯಪಟ್ಟಿದ್ದಾರೆ. ಸಲಿಂಗ ವಿವಾಹಗಳಿಗೆ ಕಾನೂನಿನ ಮಾನ್ಯತೆ ನೀಡುವ ಬಗ್ಗೆ ಸಾಂವಿಧಾನಿಕ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಅವರು ಇಂತಹದ್ದೊಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಲಿಂಗ ವಿವಾಹಗಳನ್ನು ಅಂಗೀಕರಿಸುವ ಅರ್ಜಿದಾರರು ನಗರ ಗಣ್ಯರ ಅಭಿಪ್ರಾಯಗಳನ್ನು ಪ್ರತಿನಿಧಿಸುತ್ತಾರೆ ಎಂದು ಕೇಂದ್ರ ಸರ್ಕಾರ (Central Government) ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಜೆಐ ಚಂದ್ರಚೂಡ್, ನಗರ ಪ್ರದೇಶಗಳಲ್ಲಿ ವಾಸಿಸುವ ಹೆಚ್ಚಿನ ಜನರು ತಮ್ಮ ಲೈಂಗಿಕ ಗುರುತಿನ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಹಾಗೆಂದು ಇದು ಸಲಿಂಗ ವಿವಾಹ ಪರಿಕಲ್ಪನೆಗಳು ಅಥವಾ ಬೇಡಿಕೆಗಳು ಎಂದು ತೋರಿಸಲು ಸರ್ಕಾರದ ಬಳಿ ಸೂಕ್ತ ಅಂಕಿ ಅಂಶಗಳ ದಾಖಲೆ ಇದೆ ಎಂಬ ಅರ್ಥವಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಲಿಂಗ ವಿವಾಹ ವಿಚಾರದಲ್ಲಿ ಸುಪ್ರೀಂ ಮಧ್ಯಪ್ರವೇಶ ಮಾಡಬಾರದು – ಕೇಂದ್ರದ ಪರ ವಾದ

    ಸರ್ಕಾರವು ವ್ಯಕ್ತಿಯ ನಿಯಂತ್ರಣ ಹೊಂದಿರದ ಗುಣಲಕ್ಷಣದ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ತಾರತಮ್ಯ ಮಾಡುವಂತಿಲ್ಲ. ನೀವು ಅದನ್ನು ಸಹಜ ಗುಣಲಕ್ಷಣಗಳೆಂದು ನೋಡಿದಾಗ, ಅದು ನಗರ ಗಣ್ಯರ ಪರಿಕಲ್ಪನೆಯನ್ನು ವಿರೋಧಿಸುತ್ತದೆ. ಸಲಿಂಗ ವಿವಾಹವು ನಗರ ಗಣ್ಯರ ಪರಿಕಲ್ಪನೆಯಾಗಿದೆ ಎಂದು ತೋರಿಸಲು ಸರ್ಕಾರವು ಯಾವುದೇ ದತ್ತಾಂಶ ಹೊಂದಿಲ್ಲ ಎಂದಿದ್ದಾರೆ.

    ಸಲಿಂಗ ವಿವಾಹ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ಗೆ ಕೇಂದ್ರ ಸರ್ಕಾರವು ಹೆಚ್ಚುವರಿ ಅಫಿಡವಿಟ್ (Affidavit) ಸಲ್ಲಿಸಿತ್ತು. ಸಾಮಾಜಿಕ ಸ್ವೀಕಾರದ ಉದ್ದೇಶಕ್ಕಾಗಿ ಕೇವಲ ನಗರ ಗಣ್ಯರು ಅಥವಾ ಶ್ರೀಮಂತರ ದೃಷ್ಟಿಕೋನಗಳನ್ನು ಅರ್ಜಿದಾರರು ಪ್ರತಿನಿಧಿಸುತ್ತಿದ್ದಾರೆ. ಶಾಸಕಾಂಗವು ಸಮಾಜದ ಎಲ್ಲಾ ವರ್ಗಗಳ ವಿಶಾಲ ದೃಷ್ಟಿಕೋನಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಹೇಳಿಕೊಂಡಿತ್ತು. ಅಲ್ಲದೇ ಪ್ರಕರಣದಲ್ಲಿ ಎಲ್ಲಾ ರಾಜ್ಯ ಸರ್ಕಾರ (State Government) ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿಸಿಕೊಳ್ಳಬೇಕು. ಇದು ಅವುಗಳ ವ್ಯಾಪ್ತಿಯಲ್ಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನೂ ಓದಿ: ಸಲಿಂಗ ವಿವಾಹ ಭಾರತದ ಸಾಮಾಜಿಕ ನೀತಿಗೆ ವಿರುದ್ಧ, ಎಲ್ಲಾ ಅರ್ಜಿ ವಜಾಗೊಳಿಸಿ – ಕೇಂದ್ರ ಸರ್ಕಾರ

  • ಕೊಲಿಜಿಯಂನಲ್ಲಿ ಸರ್ಕಾರಿ ಪ್ರತಿನಿಧಿಗೂ ಅವಕಾಶ ನೀಡಿ: ಸಿಜೆಐಗೆ ಕಿರಣ್‌ ರಿಜಿಜು ಪತ್ರ

    ಕೊಲಿಜಿಯಂನಲ್ಲಿ ಸರ್ಕಾರಿ ಪ್ರತಿನಿಧಿಗೂ ಅವಕಾಶ ನೀಡಿ: ಸಿಜೆಐಗೆ ಕಿರಣ್‌ ರಿಜಿಜು ಪತ್ರ

    ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ಮತ್ತು ಕೇಂದ್ರ ಸರ್ಕಾರದ ನಡುವಿನ ಹಗ್ಗಜಗ್ಗಾಟ ಮತ್ತಷ್ಟು ಮುಂದುವರಿದಿದೆ. ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ (Collegium) ವ್ಯವಸ್ಥೆಯಲ್ಲಿ ಸರ್ಕಾರದ ಪ್ರತಿನಿಧಿಗೂ ಅವಕಾಶ ಕಲ್ಪಿಸಬೇಕೆಂದು ಕೋರಿ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು (Kiren Rijiju)  ಪತ್ರ ಬರೆದಿದ್ದಾರೆ.

    ನ್ಯಾಯಮೂರ್ತಿಗಳ ನೇಮಕದಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವವನ್ನು ಕಾಪಾಡಲು ಕೇಂದ್ರ ಸರ್ಕಾರದ ಪ್ರತಿನಿಧಿಗೂ ಕೊಲಿಜಿಯಂನಲ್ಲಿ ಅವಕಾಶ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾ. ಡಿ.ವೈ. ಚಂದ್ರಚೂಡ್‌ (CJI D.Y. Chandrachud)  ಅವರಿಗೆ ಪತ್ರ ಬರೆದಿದ್ದಾರೆ.

    ತಮ್ಮ ಪತ್ರದಲ್ಲಿ ರಿಜಿಜು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು(NJAC) 2015ರಲ್ಲಿ ರದ್ದು ಮಾಡುವಾಗ ನ್ಯಾಯಾಧೀಶರ ನೇಮಕ ಸಂಬಂಧದ ಪುನರ್‌ ರಚನೆಯ ಬಗ್ಗೆ ಸುಪ್ರೀಂ ಸಂವಿಧಾನಿಕ ಪೀಠ ಉಲ್ಲೇಖಿಸಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗುತ್ತಿದ್ದಂತೆ, ಇದು ಅತ್ಯಂತ ಅಪಾಯಕಾರಿ. ನ್ಯಾಯಾಂಗ ನೇಮಕಾತಿಗಳಲ್ಲಿ ಸಂಪೂರ್ಣವಾಗಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಟೀಕಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ, ಮಹಿಳೆಗೆ ಪ್ರತಿ ತಿಂಗಳು 2,000 ರೂ.: ಪ್ರಿಯಾಂಕಾ ಗಾಂಧಿ 

    ಈ ಟೀಕೆಗೆ ಪ್ರತಿಕ್ರಿಯಿಸಿದ ಕಿರಣ್‌ ರಿಜಿಜು, ನ್ಯಾಯಾಲಯದ ನಿರ್ದೇಶನವನ್ನು ನೀವು ಗೌರವಿಸುತ್ತೀರಿ ಎಂದು ಭಾವಿಸುತ್ತೇವೆ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಕಾಯ್ದೆಯನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ನಿರ್ದೇಶನದಂತೆ ಪತ್ರ ಬರೆಯಲಾಗಿದೆ. ಸಾಂವಿಧಾನಿಕ ಪೀಠವು ಕೊಲಿಜಿಯಂ ವ್ಯವಸ್ಥೆಯ ಕಾರ್ಯವಿಧಾನವನ್ನು ಪುನರ್‌ ಚಿಸುವಂತೆ ಸೂಚಿಸಿತ್ತು ಎಂದು ತಿರುಗೇಟು ನೀಡಿದ್ದಾರೆ.

     

    ಕೊಲಿಜಿಯಂ ವ್ಯವಸ್ಥೆಯ ಮೂಲಕ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಾಧೀಶರನ್ನು ನೇಮಿಸಲಾಗುತ್ತದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರ ಜೊತೆ ಐವರು ನ್ಯಾಯಾಧೀಶರು ಕೊಲಿಜಿಯಂ ಸದಸ್ಯರಾಗಿರುತ್ತಾರೆ. ಪ್ರಸ್ತುತ ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್, ಕೆಎಂ ಜೋಸೆಫ್, ಎಂಆರ್ ಶಾ, ಅಜಯ್ ರಸ್ತೋಗಿ ಮತ್ತು ಸಂಜೀವ್ ಖನ್ನಾ ಅವರನ್ನು ಕೊಲಿಜಿಯಂ ಒಳಗೊಂಡಿದೆ. ಇದನ್ನೂ ಓದಿ: ನೋಟು ನಿಷೇಧ – ಸಂಸತ್ತು ಇಲ್ಲದೇ ಪ್ರಜಾಪ್ರಭುತ್ವ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ: ನ್ಯಾ,ನಾಗರತ್ನ

    ಧನಕರ್‌ ಟೀಕೆ:
    83ನೇ ಅಖಿಲ ಭಾರತ ಸ್ಪೀಕರ್‌ಗಳ ಸಮ್ಮೇಳನ ಉದ್ದೇಶಿಸಿ ಮಾತನಾಡಿದ್ದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌, ಪ್ರಜಾಪ್ರಭುತ್ವ ವ್ಯವ್ಯವಸ್ಥೆಯಲ್ಲಿ ಶಾಸನಗಳನ್ನು ರೂಪಿಸುವ ಸಂಸತ್ತೇ ಸಾರ್ವಭೌಮ. ಶಾಸನ ರಚನೆಯಲ್ಲಿ ನ್ಯಾಯಾಂಗವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದರು.

     

    ಸಂಸತ್ತು ಸಂವಿಧಾನದ ‘ಮೂಲ ರಚನೆ’ಯನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ವಿಧಿಸಿರುವ ನಿರ್ಬಂಧವನ್ನು ನಾನು ಒಪ್ಪುವುದಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಈ ಹಿಂದೆ ಸಿಜೆಐ ಡಿ.ವೈ.ಚಂದ್ರಚೂಡ್‌ ಅವರ ಸಮ್ಮುಖದಲ್ಲೇ ಕೊಲಿಜಿಯಂ ರದ್ದುಗೊಳಿಸಿದ ನಿರ್ಧಾರದ ವಿರುದ್ಧ ಧನಕರ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಸಂಸತ್‌ ಅಂಗೀಕರಿಸಿದ ಕಾನೂನನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡುತ್ತದೆ. ಈ ರೀತಿ ಘಟನೆ ಪ್ರಪಂಚದಲ್ಲಿ ಎಲ್ಲೂ ಈವರೆಗೆ ನಡೆದಿಲ್ಲ ಎಂದು ನೇರವಾಗಿಯೇ ಹೇಳಿದ್ದರು.

    ಸಾಂವಿಧಾನಿಕ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚಿಸುವಾಗ ಇಡೀ ಸಂಸತ್ತು ಅವಿರೋಧವಾಗಿ ಎನ್‌ಜೆಎಸಿ ಕಾಯ್ದೆಯ ಪರ ಮತ ಹಾಕಿತ್ತು. ರಾಜ್ಯಸಭೆಯಲ್ಲೂ ಅವಿರೋಧವಾಗಿ ಅಂಗೀಕಾರವಾಗಿತ್ತು. ಒಬ್ಬರು ಮಾತ್ರ ಗೈರಾಗಿದ್ದರು ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k