Tag: chandigarh

  • ಫೋನ್ ಮಾರಾಟ ಮಾಡಿ ಮನೆಗೆ ದಿನಸಿ ತಂದು ಕೊಟ್ಟು ವ್ಯಕ್ತಿ ಆತ್ಮಹತ್ಯೆ

    ಫೋನ್ ಮಾರಾಟ ಮಾಡಿ ಮನೆಗೆ ದಿನಸಿ ತಂದು ಕೊಟ್ಟು ವ್ಯಕ್ತಿ ಆತ್ಮಹತ್ಯೆ

    – ಬೇಸಿಗೆಯಲ್ಲಿ ಮಕ್ಕಳು ಆರಾಮಾಗಿರಲು ಫ್ಯಾನ್ ಖರೀದಿ
    – ಉಳಿದ ಹಣವನ್ನ ಪತ್ನಿಗೆ ಕೊಟ್ಟು ನೇಣಿಗೆ ಶರಣು

    ಚಂಡೀಗಢ: ಲಾಕ್‍ಡೌನ್‍ನಿಂದ ಅನೇಕ ಬಡ ಕುಟುಂಬಗಳು ಆಹಾರವಿಲ್ಲದೆ ಪರದಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಊಟ ಕೊಡಿಸಲು ಸಾಧ್ಯವಾಗದೆ ನೊಂದ 30 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.

    ಸರಸ್ವತಿ ಕುಂಜ್ ಪ್ರದೇಶದ ಕೊಳೆಗೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮುಖೇಶ್ ಆತ್ಮಹತ್ಯೆ ಮಾಡಿಕೊಂಡು ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಮೊಬೈಲ್ ಫೋನ್ ಅನ್ನು 2,500 ರೂ.ಗೆ ಮಾರಾಟ ಮಾಡಿದ್ದಾನೆ. ಅದರಲ್ಲಿ ಅಕ್ಕಿ, ಹಿಟ್ಟು ಮತ್ತು ಸಕ್ಕರೆ ಮತ್ತು ಟೇಬಲ್ ಫ್ಯಾನ್ ಖರೀದಿಸಿ ಪತ್ನಿಗೆ ಕೊಟ್ಟಿದ್ದಾನೆ. ಬೇಸಿಗೆಯಲ್ಲಿ ತನ್ನ ಮಕ್ಕಳು ಆರಾಮಾಗಿರಲಿ ಎಂದು ಫ್ಯಾನ್ ಖರೀದಿಸಿದ್ದಾನೆ.

    ಈತನಿಗೆ ಮದ್ವೆಯಾಗಿ ನಾಲ್ವರು ಮಕ್ಕಳಿದ್ದು, ತನ್ನ ಪತ್ನಿ ಪೂನಂ ಜೊತೆ ಗುಡಿಸಲಲ್ಲಿ ವಾಸಿಸುತ್ತಿದ್ದನು. ಫೋನ್ ಮಾರಾಟ ಮಾಡಿ ಉಳಿದ ಹಣವನ್ನು ಪತ್ನಿಗೆ ನೀಡಿದ್ದಾನೆ. ನಂತರ ತಾನು ವಾಸ ಮಾಡುತ್ತಿದ್ದ ಗುಡಿಸಲಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸ್ವಲ್ಪ ಸಮಯದ ನಂತರ ಪತ್ನಿ ಪೂನಂ ಗುಡಿಸಿಲಿನೊಳಗೆ ಹೋಗಿ ನೋಡಿದ್ದಾಳೆ. ಅಷ್ಟರಲ್ಲಿ ಮುಖೇಶ್ ನೇಣು ಬಿಗಿದುಕೊಂಡು ಮೃತಪಟ್ಟಿದ್ದನು. ಮೊಬೈಲ್ ಫೋನ್ ಮಾರಾಟ ಮಾಡಿ ಮುಖೇಶ್ ನೀಡಿದ್ದ ಹಣವನ್ನು ಹೊರತುಪಡಿಸಿ ಕುಟುಂಬಕ್ಕೆ ಯಾವುದೇ ಆದಾಯ ಇಲ್ಲ. ಹೀಗಾಗಿ ನೆರೆಹೊರೆಯವರು ಹಣ ಸಂಗ್ರಹ ಮಾಡಿ ಅಂತಿಮ ವಿಧಿಗಳನ್ನು ಮುಗಿಸಿದ್ದಾರೆ.

    ಮೃತ ಮಾವ ಉಮೇಶ್ ಮುಖಿಯಾ ಮಾತನಾಡಿ, ಮುಖೇಶ್ ಪೇಂಟಿಂಗ್ ಕೆಲಸ ಮಾಡುತ್ತಿದ್ದನು. ಆದರೆ ಕಳೆದ ಎರಡು ತಿಂಗಳಿಂದ ಯಾವುದೇ ಪೇಂಟಿಂಗ್ ಕೆಲಸವಿರಲಿಲ್ಲ. ಹೀಗಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದನು. ಕೊನೆಗೆ ಕೂಲಿ ಮಾಡುತ್ತಿದ್ದನು. ಆದರೆ ಲಾಕ್‍ಡೌನ್‍ನಿಂದ ಕೂಲಿ ಕೆಲಸವು ಸಿಗಲಿಲ್ಲ. ಆಗ ಸಾಲ ಕೂಡ ಮಾಡಿಕೊಂಡಿದ್ದ. ಇದರಿಂದ ಮುಖೇಶ್ ಖಿನ್ನತೆಗೆ ಒಳಗಾಗಿದ್ದನು ಎಂದು ಹೇಳಿದರು.

    ಆತನ ಕುಟುಂಬ ಭಿಕ್ಷೆ ಬೇಡುತ್ತಿತ್ತು. ಅವರು ಯಾವುದೇ ಆದಾಯದ ಮೂಲವನ್ನು ಹೊಂದಿಲ್ಲ. ಅಲ್ಲದೇ ಆತ ಖಿನ್ನತೆಗೆ ಒಳಗಾಗಿದ್ದನು ಎಂದು ಮುಖೇಶ್ ಸಂಬಂಧಿಕರೊಬ್ಬರು ತಿಳಿಸಿರುವುದಾಗಿ ಪೊಲೀಸ್ ಕಮಿಷನರ್ ಮೊಹಮ್ಮದ್ ಅಕಿಲ್ ಹೇಳಿದ್ದಾರೆ.

  • ಪ್ರಜ್ಞೆ ತಪ್ಪಿದ ವ್ಯಕ್ತಿಗೆ ಕೊರೊನಾ ಎಂದು ಶಂಕಿಸಿ ದೂರವಿದ್ದ ಮನೆಮಂದಿ – ವ್ಯಕ್ತಿ ಸಾವು

    ಪ್ರಜ್ಞೆ ತಪ್ಪಿದ ವ್ಯಕ್ತಿಗೆ ಕೊರೊನಾ ಎಂದು ಶಂಕಿಸಿ ದೂರವಿದ್ದ ಮನೆಮಂದಿ – ವ್ಯಕ್ತಿ ಸಾವು

    ಚಂಡೀಗಡ: ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ ಎಂದು ಭಾವಿಸಿ ಮನೆಮಂದಿ ದೂರ ಉಳಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಘಟನೆ ಚಂಡೀಗಢದ ಮಲೋಯಾದಲ್ಲಿ ನಡೆದಿದೆ.

    ಧರಮ್ ಕುಮಾರ್(30) ಮೃತ ದುರ್ದೈವಿ. ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲೋಯಾದಲ್ಲಿ ಧರಮ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದನು. ಆದರೆ ಕೆಲ ದಿನಗಳಿಂದ ಆತ ಹುಚ್ಚನಂತೆ ವರ್ತಿಸುತ್ತಿದ್ದನು. ಭಾನುವಾರ ಮನೆಯ ಮೇಲ್ಚಾವಣಿಗೆ ಹೋಗಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದನು. ಆದರೆ ಆತನಿಗೆ ಕೊರೊನಾ ಸೊಂಕು ತಟ್ಟಿದೆ ಎಂದು ಭಯಗೊಂಡು ಮನೆಮಂದಿ ಆತನನ್ನು ಮೊದಲು ಮುಟ್ಟಲು ಹೋಗಲಿಲ್ಲ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಧರಮ್ ಸಾವನ್ನಪ್ಪಿದ್ದನು.

    ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ, ಧರಮ್‍ಗೆ ಕಳೆದ ಆರೇಳು ತಿಂಗಳ ಹಿಂದೆ ಬೀದಿ ನಾಯಿಯೊಂದು ಕಚ್ಚಿತ್ತು. ಆಗಿನಿಂದ ಆತ ವಿಚಿತ್ರವಾಗಿ ಹುಚ್ಚನಂತೆ ವರ್ತಿಸುತ್ತಿದ್ದನು ಎಂದು ಕುಟುಂಬಸ್ಥರು, ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಆದರೆ ಧರಮ್ ದೇಹದ ಮೇಲೆ ನಾಯಿ ಕಚ್ಚಿದ ಯಾವುದೇ ಗಾಯದ ಕಲೆ ಇಲ್ಲ. ಜೊತೆಗೆ ಆತನಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳೂ ಕಾಣಿಸಿಕೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ.

    ಭಾನುವಾರ ಧರಮ್ ಪ್ರಜ್ಞೆ ತಪ್ಪಿ ಬಿದ್ದಾಗ ಆತನಿಗೆ ಕೊರೊನಾ ಇದೆ ಎಂದು ಯಾರೂ ಹತ್ತಿರ ಹೋಗಲಿಲ್ಲ. ಬಳಿಕ ಕುಮಾರ್ ತಂದೆ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಧರಮ್ ಸಾವಿಗೆ ನಿಖರ ಕಾರಣ ಏನೆಂದು ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಲಿದೆ ಎಂದು ಮಲೋಯಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಆಹಾರ ಸಿಗದೆ ಕಂಗೆಟ್ಟು ಆತ್ಮಹತ್ಯೆ ಬೆದರಿಕೆ- ಮಹಿಳೆ ಮನೆಗೆ ದೌಡಾಯಿಸಿದ ಪೊಲೀಸರು

    ಆಹಾರ ಸಿಗದೆ ಕಂಗೆಟ್ಟು ಆತ್ಮಹತ್ಯೆ ಬೆದರಿಕೆ- ಮಹಿಳೆ ಮನೆಗೆ ದೌಡಾಯಿಸಿದ ಪೊಲೀಸರು

    ಚಂಡೀಗಢ: ಆಹಾರ ಸಿಗದೆ ಕಂಗೆಟ್ಟು ಮಹಿಳೆಯೊಬ್ಬರು ಪತಿ ಹಾಗೂ ಮಗುವಿನೊಂದಿಗೆ ಆತ್ಮಹತ್ಯೆ ಬೆದರಿಕೆ ಹಾಕಿದ್ದರಿಂದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆಹಾರ ನೀಡಿದ ಪ್ರಸಂಗ ಚಂಡೀಗಢದಲ್ಲಿ ನಡೆಸಿದೆ.

    ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಮಾರ್ಚ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಇದರಿಂದಾಗಿ ದಿನಗೂಲಿ ಕಾರ್ಮಿಕ ಪರಿಸ್ಥಿರಿ ಚಿಂತಾಜನಕವಾಗಿದೆ. ಕೆಲಸವಿಲ್ಲದೆ ಕಂಗೆಟ್ಟು ಹೋಗಿದ್ದಾರೆ.

    ಚಂಡೀಗಢದ ನಿವಾಸಿ ದಿನಗೂಲಿ ಕಾರ್ಮಿಕ ಮಹಿಳೆಯೊಬ್ಬರು ಆಹಾರ ಮತ್ತು ಔಷಧಿ ಖರೀದಿಸಲು ಯಾವುದೇ ಮಾರ್ಗವಿಲ್ಲದೆ ಶನಿವಾರ ಕಂಗೆಟ್ಟಿದ್ದರು. ಇದರಿಂದಾಗಿ ಪೊಲೀಸರಿಗೆ ಫೋನ್ ಮಾಡಿ, ನಮಗೆ ತಿನ್ನಲು ಆಹಾರವಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಮಗುವಿಗೆ ಔಷಧಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ನೀವು ಸಹಾಯಕ್ಕೆ ಬರದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಣ್ಣೀರಿಟ್ಟಿದ್ದರು.

    ಮಹಿಳೆ ಕರೆಯ ಬಳಿಕ ಚಂಡೀಗಢದ ಡೆಪ್ಯೂಟಿ ಪೊಲೀಸ್ ವರಿಷ್ಠಾಧಿಕಾರಿ ದಿಲ್ಶರ್ ಸಿಂಗ್, ಮಹಿಳೆ ವಾಸವಿರುವ ಪ್ರದೇಶದ ವ್ಯಾಪ್ತಿಯ ಪೊಲೀಸ್ ಠಾಣೆ ಅಧಿಕಾರಿಯೊಂದಿಗೆ ಮಾತನಾಡಿದ್ದರು. ಜೊತೆಗೆ ಮಹಿಳೆಯ ನಿವಾಸಕ್ಕೆ ಧಾವಿಸಿ ಅವರಿಗೆ ಆಹಾರ ಮತ್ತು ಸ್ವಲ್ಪ ಹಣವನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

  • ಮೊದಲ ರಾತ್ರಿ ವಧುವಿನ ಪಾಲಿಗೆ ಆಯ್ತು ಕರಾಳ ರಾತ್ರಿ

    ಮೊದಲ ರಾತ್ರಿ ವಧುವಿನ ಪಾಲಿಗೆ ಆಯ್ತು ಕರಾಳ ರಾತ್ರಿ

    – ಪತಿಯ ವಿಷಯ ತಿಳಿದು ಪ್ರಜ್ಞೆ ತಪ್ಪಿದ ಪತ್ನಿ
    – ಪ್ರಜ್ಞೆ ಬರುತ್ತಿದ್ದಂತೆ ಆಸ್ಪತ್ರೆಗೆ ಓಡಿದ ವಧು

    ಚಂಢೀಗಡ್: ಮದುವೆ ದಿನದಂದು ವರ ಸಂಬಂಧಿಕರೊಂದಿಗೆ ಮೋಜು-ಮಸ್ತಿ ಮಾಡಲು ಹೋಗಿ ಮೊದಲ ರಾತ್ರಿಗೂ ಮುನ್ನವೇ ಮೃತಪಟ್ಟ ಘಟನೆ ಪಂಜಾಬ್‍ನ ಲುದಿಯಾನಾದಲ್ಲಿ ನಡೆದಿದೆ.

    ರಾಹುಲ್ ಮೃತಪಟ್ಟ ವರ. ಬುಧವಾರ ಬೆಳಗ್ಗೆ ರಾಹುಲ್ ಮದುವೆಯಾಗಿದ್ದು, ಸಂಜೆ ತನ್ನ ಸಂಬಂಧಿಕರ ಜೊತೆ ಮೋಜುಮಸ್ತಿ ಮಾಡಲು ಕಾರಿನಲ್ಲಿ ಲುದಿಯಾನಾಗೆ ತೆರಳಿದ್ದರು. ಅಲ್ಲಿಂದ ಭಾಟೀಯಾ ಗ್ರಾಮಕ್ಕೆ ತೆರಳುವಾಗ ಕಾರು ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಾಹುಲ್ ಹಾಗೂ ಆತನ ಬಾವ ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಚಾಲಕ ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದನು. 5 ಸೀಟ್ ಇರುವ ಕಾರಿನಲ್ಲಿ 7 ಮಂದಿ ಕುಳಿತು ಪ್ರಯಾಣಿಸುತ್ತಿದ್ದರು. ಎಲ್ಲರೂ ಮೋಜುಮಸ್ತಿ ಮಾಡಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರು ಹಿಂಬದಿಯಿಂದ ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವರ ಹಾಗೂ ಆತನ ಬಾವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪ್ರಾಥಮಿಕ ತನಿಖೆಯಲ್ಲಿ, ಕಾರಿನಲ್ಲಿದ್ದ ಏಳು ಮಂದಿ ಮದ್ಯ ಸೇವಿಸಿದ್ದರು. ಅಪಘಾತದ ಮಾಹಿತಿ ಬರುತ್ತಿದ್ದಂತೆ ಎಸಿಪಿ ನರ್ಕೋಟಿಕ್ಸ್ ಸೆಲ್ ರಾಜಕುಮಾರ್ ಚೌಧರಿ ಹಾಗೂ ಉಳಿದ ಪೊಲೀಸರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಕ್ರೇನ್ ಸಹಾಯದಿಂದ ಕಾರನ್ನು ಟ್ಯಾಂಕರ್ ನಿಂದ ಬೇರ್ಪಡಿಸಲಾಯಿತು.

    ಈ ಘಟನೆ ಬಗ್ಗೆ ಟ್ಯಾಂಕರ್ ಚಾಲಕ ಶಮ್‍ಶೇರ್ ಕೊಹ್ಲಿ ಮಾತನಾಡಿ, ಸರಾಬಾದಿಂದ ಮೊಟ್ಟೆ ಲೋಡ್ ಮಾಡಿಕೊಂಡು ಜಮ್ಮುಗೆ ಹೋಗುತ್ತಿದೆ. ಈ ವೇಳೆ ಟ್ಯಾಂಕರ್ ಹಿಂಬದಿ ಡಿಕ್ಕಿ ಹೊಡಯಲಾಯಿತು. ತಕ್ಷಣ ನಾನು ಟ್ಯಾಂಕರ್ ನ ಬ್ರೇಕ್ ಹಾಕಿ ಕೆಳಗೆ ಇಳಿದು ನೋಡಿದೆ. ಆಗ ಟ್ಯಾಂಕರಿಗೆ ಕಾರು ಡಿಕ್ಕಿ ಹೊಡೆದಿತ್ತು. ಕೂಡಲೇ ನಾನು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ.

    ವಧು ಮೊದಲ ರಾತ್ರಿಯಂದು ತನ್ನ ಪತಿ ರಾಹುಲ್‍ಗಾಗಿ ಕಾಯುತ್ತಿದ್ದಳು. ಈ ವೇಳೆ ಕುಟುಂಬಸ್ಥರು ರಾಹುಲ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಿದ ತಕ್ಷಣ ವಧು ಪ್ರಜ್ಞೆ ತಪ್ಪಿದ್ದಾಳೆ. ಎಚ್ಚರಗೊಂಡಾಗ ವಧು ಅಳುತ್ತಾ ಆಸ್ಪತ್ರೆಗೆ ಓಡಿ ಹೋಗಿದ್ದಾಳೆ. ಈ ವೇಳೆ ಕೊನೆಯ ಬಾರಿಗೆ ನನ್ನ ಪತಿಯ ಮುಖವನ್ನು ನೋಡಲು ಬಿಡಿ ಎಂದು ಕಣ್ಣೀರು ಹಾಕಿದ್ದಾಳೆ.

  • ಲಿವರ್ ದಾನ ಮಾಡಿ ಅಪ್ಪನ ಜೀವ ಉಳಿಸಿದ ಮಗಳು

    ಲಿವರ್ ದಾನ ಮಾಡಿ ಅಪ್ಪನ ಜೀವ ಉಳಿಸಿದ ಮಗಳು

    – ಮಗಳ ಕಾರ್ಯಕ್ಕೆ ಶಾಲೆಯ ವತಿಯಿಂದ ಸನ್ಮಾನ
    – ಲಿವರ್ ಟ್ಯೂಮರ್‍ನಿಂದ ಬಳಲುತ್ತಿದ್ದ ತಂದೆ

    ಚಂಢೀಗಡ್: ಹರಿಯಾಣದ ಸಿರಸಾ ಜಿಲ್ಲೆಯಲ್ಲಿ ಮಗಳೊಬ್ಬಳು ಲಿವರ್(ಯಕೃತ್ತು) ದಾನ ಮಾಡುವ ಮೂಲಕ ತನ್ನ ತಂದೆಗೆ ಹೊಸ ಜೀವನ ನೀಡಿದ್ದಾಳೆ.

    ನೇಹಾ ರಾಣಿ ದೆಹಲಿಯ ಗ್ರೇಟರ್ ಕೈಲಾಶ್ ನಿವಾಸಿಯಾಗಿದ್ದು, ಸಿರಸಾದಲ್ಲಿ ಶಾ ಸತ್ನಾಮ್ ಗರ್ಲ್ಸ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ನೇಹಾ ತನ್ನ ಲಿವರ್ ದಾನ ಮಾಡಿ ತನ್ನ ತಂದೆಯ ಜೀವ ಉಳಿಸಿದ್ದಕ್ಕೆ ಹೆಮ್ಮೆ ಪಡುತ್ತಿದ್ದಾಳೆ. ನೇಹಾಳ ಕಾರ್ಯಕ್ಕೆ ಶಾಲಾ ಆಡಳಿತ ಮಂಡಳಿ ಆಕೆಗೆ ಸನ್ಮಾನ ಮಾಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ನೇಹಾ, “ನನ್ನ ತಂದೆ ಲಿವರ್ ಟ್ಯೂಮರ್ ನಿಂದ ಬಳಲುತ್ತಿದ್ದರು. ಅಲ್ಲದೆ ವೈದ್ಯರು ಶೀಘ್ರದಲ್ಲೇ ಲಿವರ್ ಬದಲಾಯಿಸಬೇಕು ಎಂದು ಹೇಳಿದ್ದರು. ನಮ್ಮ ಮನೆಯಲ್ಲಿ ಅಮ್ಮ, ಅಣ್ಣ ಹಾಗೂ ಅತ್ತಿಗೆ ಇದ್ದಾರೆ. ಎಲ್ಲರ ಮೊದಲು ನಾನು ನನ್ನ ಲಿವರ್ ದಾನ ಮಾಡುತ್ತೇನೆ ಎಂದು ಹೇಳಿದ್ದೆ. ವೈದ್ಯರು ಪರಿಶೀಲನೆ ನಡೆಸಿದ ನಂತರ ನಾನು ನನ್ನ ಲಿವರ್ ದಾನ ಮಾಡಿದೆ” ಎಂದು ಹೇಳಿದ್ದಾಳೆ.

    ಮಕ್ಕಳಿಗಾಗಿ ತಂದೆ-ತಾಯಿ ತಮ್ಮ ಜೀವನವನ್ನು ತ್ಯಾಗ ಮಾಡುತ್ತಾರೆ. ಹಾಗೆಯೇ ಮಕ್ಕಳು ಕೂಡ ತಂದೆ-ತಾಯಿಯ ಸೇವೆಯಲ್ಲಿ ತಮ್ಮ ಜೀವನವನ್ನು ತ್ಯಾಗ ಮಾಡಬೇಕು. ನನ್ನ ಈ ಕಾರ್ಯಕ್ಕೆ ಶಾಲೆಯ ಪ್ರಿನ್ಸಿಪಲ್ ಡಾ. ಶೀಲಾ ಪುಣಿಯಾ ಅವರು ಪ್ರಶಂಸೆ ನೀಡಿದರು. ಅಲ್ಲದೆ ನನಗೆ ಸನ್ಮಾನ ಕೂಡ ಮಾಡಿದರು. ನನ್ನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದರ ಜೊತೆಗೆ ಮಾನವೀಯತೆಯ ಪಾಠ ಕೂಡ ಹೇಳಿ ಕೊಡುತ್ತಾರೆ ಎಂದು ನೇಹಾ ತಿಳಿಸಿದ್ದಾಳೆ.

  • 29 ಎಸೆತಗಳಲ್ಲಿ ಹ್ಯಾಟ್ರಿಕ್ ಸೇರಿ 10 ವಿಕೆಟ್ ಕಿತ್ತ ಕಾಶ್ವಿ ಗೌತಮ್ – ವಿಡಿಯೋ

    29 ಎಸೆತಗಳಲ್ಲಿ ಹ್ಯಾಟ್ರಿಕ್ ಸೇರಿ 10 ವಿಕೆಟ್ ಕಿತ್ತ ಕಾಶ್ವಿ ಗೌತಮ್ – ವಿಡಿಯೋ

    – ಇತಿಹಾಸ ಬರೆದ ಚಂಡೀಗಢದ ವೇಗದ ಬೌಲರ್

    ಹೈದರಾಬಾದ್: ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ನಲ್ಲಿ ಎಲ್ಲಾ 10 ವಿಕೆಟ್‍ಗಳನ್ನು ದಾಖಲೆ ನಿರ್ಮಿಸಿದ್ದರು. ಈಗ ಚಂಡೀಗಢದ 16 ವರ್ಷದ ವೇಗದ ಬೌಲರ್ ಕಾಶ್ವಿ ಗೌತಮ್ ಸೀಮಿತ ಓವರಿನಲ್ಲಿ 10 ವಿಕೆಟ್ ಕಿತ್ತು ಕಿರಿಯರ ವಿಭಾಗದಲ್ಲಿ ದಾಖಲೆ ನಿರ್ಮಿಸಿದ್ದಾರೆ.

    ಆಂಧ್ರ ಪ್ರದೇಶದ ಕೆಎಸ್‌ಆರ್‌ಎಂ ಕಾಲೇಜು ಮೈದಾನದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಮಂಗಳವಾರ ನಡೆದ ದೇಶಿಯ ಕ್ರಿಕೆಟ್‍ನ ಅಂಡರ್-19 ಏಕದಿನ ಟ್ರೋಫಿಯಲ್ಲಿ 10 ವಿಕೆಟ್ ಗಳಿಸಿ ಕಾಶ್ವಿ ಗೌತಮ್ ಮಿಂಚಿದ್ದಾರೆ. ಜೊತೆಗೆ ಇದೇ ಪಂದ್ಯದಲ್ಲಿ ಕಾಶ್ವಿ ಗೌತಮ್ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದಾರೆ.

    ಕಾಶ್ವಿ 4.5 ಓವರ್ ಬೌಲಿಂಗ್ ಮಾಡಿ ಕೇವಲ 12 ರನ್‍ಗಳನ್ನು ಬಿಟ್ಟುಕೊಟ್ಟರು. ಈ ಪಂದ್ಯದಲ್ಲಿ ಚಂಡೀಗಢ ತಂಡವು ಅರುಣಾಚಲ ಪ್ರದೇಶವನ್ನು ಕೇವಲ 25 ರನ್‍ಗಳಿಗೆ ಆಲೌಟ್ ಮಾಡಿತು. ಸೀಮಿತ ಓವರ್‍ಗಳ ಕ್ರಿಕೆಟ್‍ನಲ್ಲಿ 10 ವಿಕೆಟ್ ಪಡೆದ ಮೊದಲ ಮಹಿಳಾ ಬೌಲರ್ ಎಂಬ ಹೆಗ್ಗಳಿಕೆಗೆ ಕಾಶ್ವಿ ಗೌತಮ್ ಪಾತ್ರರಾಗಿದ್ದಾರೆ.

    ಬಿಸಿಸಿಐ ಅಂಡರ್ -19 ಏಕದಿನ ಟೂರ್ನಿಯಲ್ಲಿ ಚಂಡೀಗಢ ಮೊದಲು ಬ್ಯಾಟಿಂಗ್ ಮಾಡಿ 4 ವಿಕೆಟ್‍ಗಳಿಗೆ 186 ರನ್ ಗಳಿಸಿತ್ತು. ಈ ಸಮಯದಲ್ಲಿ ಚಂಡೀಗಢ ಕ್ಯಾಪ್ಟನ್ ಕಾಶ್ವಿ 68 ಎಸೆತಗಳಲ್ಲಿ 49 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. 187 ರನ್ ಗುರಿ ಬೆನ್ನಟ್ಟಿದ ಅರುಣಾಚಲ ಪ್ರದೇಶ ತಂಡವು 8.5 ಓವರ್‍ಗಳಲ್ಲಿ 25 ರನ್ ಗಳಿಸಿ ಸರ್ವಪತನ ಕಂಡಿತು.

    ಬಿಸಿಸಿಐ ಮಹಿಳಾ ಟ್ವಿಟ್ಟರ್ ಖಾತೆ ಹಾಗೂ ಐಸಿಸಿ, ಕಾಶ್ವಿ ಗೌತಮ್ 10 ವಿಕೆಟ್ ಪಡೆದ ವಿಡಿಯೋವನ್ನು ಟ್ವೀಟ್ ಮಾಡಿ ಅಭಿನಂದಿಸಿದೆ. ಭಾರತವು ತನ್ನ ರಾಷ್ಟ್ರೀಯ ತಂಡಕ್ಕೆ 16 ವರ್ಷದ ಕಾಶ್ವಿ ಅವರನ್ನು ಸೇರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಕೇಳಿದೆ.

    ಬಿಸಿಸಿಐ ಅಂಡರ್ -19 ಏಕದಿನ ಟೂರ್ನಿಯಲ್ಲಿ ಕಾಶ್ವಿ ಇದುವರೆಗೆ ಮೂರು ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮೊದಲು ಅವರು ಜಮ್ಮು ಮತ್ತು ಕಾಶ್ಮೀರ ವಿರುದ್ಧ 7 ವಿಕೆಟ್ ಪಡೆದಿದ್ದರು.

    ಅಂತರರಾಷ್ಟ್ರೀಯ ಪಂದ್ಯವೊಂದರ ಇನ್ನಿಂಗ್ಸ್‍ನಲ್ಲಿ 10 ವಿಕೆಟ್:
    ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಸಂಬಂಧಿಸಿದಂತೆ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್‍ಗಳನ್ನು ಪಡೆದ ಬೌಲರ್‍ಗಳ ಪಟ್ಟಿಯಲ್ಲಿ ಭಾರತದ ಅನಿಲ್ ಕುಂಬ್ಳೆ ಹಾಗೂ ಇಂಗ್ಲೆಂಡ್‍ನ ಜಿಮ್ ಲೇಕರ್ ಮಾತ್ರ ಇದ್ದಾರೆ. 1956ರಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ವಿರುದ್ಧ ಲೇಕರ್ 10 ವಿಕೆಟ್ ಕಿತ್ತಿದ್ದರು. ಈ ಸಮಯದಲ್ಲಿ ಅವರು 51.2 ಓವರ್ ಬೌಲಿಂಗ್ ಮಾಡಿದ್ದರು. 1999ರಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ 26.3 ಓವರ್ ಬೌಲಿಂಗ್ ಮಾಡಿ 10 ವಿಕೆಟ್ ಪಡೆದು ದಾಖಲೆ ಬರೆದಿದ್ದರು.

    ಟೆಸ್ಟ್ ಸ್ವರೂಪದಲ್ಲಿ ಅನಿಲ್ ಕುಂಬ್ಳೆ ಹಾಗೂ ಜಿಮ್ ಲೇಕರ್ ದಾಖಲೆ ಬರೆದಿದ್ದಾರೆ. ಆದರೆ ಇದುವರೆಗೂ ಅಂತರರಾಷ್ಟ್ರೀಯ ಏಕದಿನ ಅಥವಾ ಟಿ20ಗಳಲ್ಲಿ ಯಾವುದೇ ಬೌಲರ್ ಇದುವರೆಗೆ ಎಲ್ಲಾ 10 ವಿಕೆಟ್‍ಗಳನ್ನು ಪಡೆದಿಲ್ಲ. ಏಕದಿನ ಪಂದ್ಯವೊಂದರಲ್ಲಿ ಅತ್ಯುತ್ತಮ ವ್ಯಕ್ತಿಗಳ ದಾಖಲೆಯನ್ನು ಶ್ರೀಲಂಕಾದ ಚಮಿಂಡ ವಾಸ್ ಅವರು ಜಿಂಬಾಬ್ವೆ ವಿರುದ್ಧ ಮಾಡಿದ್ದರು. ಅವರು ಕೇವಲ 19 ರನ್ ನೀಡಿ 8 ವಿಕೆಟ್ ಪಡೆಸಿದ್ದರು. ಮತ್ತೊಂದೆಡೆ ಟಿ20ಯಲ್ಲಿ ಬಾಂಗ್ಲಾದೇಶ ವಿರುದ್ಧ ನಾಗ್ಪುರದಲ್ಲಿ ಟೀಂ ಇಂಡಿಯಾ ಬೌಲರ್ ದೀಪಕ್ ಚಹರ್ 7 ರನ್ ನೀಡಿ 6 ವಿಕೆಟ್ ಕಿತ್ತಿದ್ದರು.

  • ನೈಟ್ ಡ್ಯೂಟಿ ಮಾಡ್ತಿದ್ದ ನರ್ಸ್ ಆತ್ಮಹತ್ಯೆ

    ನೈಟ್ ಡ್ಯೂಟಿ ಮಾಡ್ತಿದ್ದ ನರ್ಸ್ ಆತ್ಮಹತ್ಯೆ

    ಚಂಡೀಗಢ: ನರ್ಸ್‍ಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

    ಮೀನಾಕ್ಷಿ ಸೈನಿ(31) ಆತ್ಮಹತ್ಯೆ ಮಾಡಿಕೊಂಡ ನರ್ಸ್. ಭಾನುವಾರ ಸಾಹಾ ಪ್ರೈಮರಿ ಹೆಲ್ತ್ ಸೆಂಟರಿನಲ್ಲಿ(ಪಿಎಚ್‍ಸಿ) ಮೀನಾಕ್ಷಿ ನೈಟ್ ಡ್ಯೂಟಿ ಮಾಡುತ್ತಿದ್ದಳು. ಈ ವೇಳೆ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮೀನಾಕ್ಷಿ 22 ನಿಮಿಷಗಳ ಕಾಲ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್ ಅಜಯ್ ಜೊತೆ ಮಾತನಾಡಿದ್ದಳು. ಬಳಿಕ ಅಜಯ್ ಪಿಎಚ್‍ಸಿ ಬಾಗಿಲು ಒಡೆದು ಮೀನಾಕ್ಷಿಯನ್ನು ಎಂಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದನು. ಆದರೆ ಅಷ್ಟರಲ್ಲಿ ಮೀನಾಕ್ಷಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು. ಸದ್ಯ ಪೊಲೀಸರು ಅಜಯ್‍ನನ್ನು ವಿಚಾರಣೆ ನಡೆಸತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಾಹಾ ಪೊಲೀಸ್ ಠಾಣೆ ಉಸ್ತುವಾರಿ ಚಂದ್ರಭನ್, “ಮೀನಾಕ್ಷಿ ತಂದೆ ಹರ್ಕಿತ್ ಸಿಂಗ್ ಅವರ ದೂರಿನ ಮೇರೆಗೆ ಅಜಯ್, ಮೀನಾಕ್ಷಿ ಪತಿ ಕುಲ್‍ದೀಪ್ ಶರ್ಮಾ, ಅತ್ತೆ ಜ್ಞಾನ ಚಂದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮೀನಾಕ್ಷಿ ಹಾಗೂ ಅಜಯ್ ಆತ್ಮೀಯ ಸ್ನೇಹಿತರಾಗಿದ್ದರು. ಮೀನಾಕ್ಷಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಅಜಯ್ ಪಿಎಚ್‍ಸಿ ಒಳಗೆ ಅಥವಾ ಸುತ್ತಮುತ್ತ ಇದ್ದನು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಶನಿವಾರ ಮೀನಾಕ್ಷಿ ನೈಟ್ ಡ್ಯೂಟಿ ಮಾಡುತ್ತಿದ್ದಳು ಎಂದು ಪಿಎಚ್‍ಸಿ ಉಸ್ತುವಾರಿ ಡಾ. ವಿಕಾಸ್ ತಿಳಿಸಿದ್ದರು” ಎಂದು ಹೇಳಿದ್ದಾರೆ.

    ಮೀನಾಕ್ಷಿ ಹೊರತಾಗಿ ಸೆಕ್ಯೂರಿಟಿ ಗಾರ್ಡ್ ಪಿಎಚ್‍ಸಿಯಲ್ಲಿ ಇದ್ದರು. ಸೆಕ್ಯೂರಿಟಿ ಬೆಳಗ್ಗೆ 7.10ಕ್ಕೆ ಕೆಲಸ ಮುಗಿಸಿಕೊಂಡು ಹೋಗಿದ್ದರು. ಫೆಬ್ರವರಿ 27 ಹಾಗೂ 28ರಂದು ಅಜಯ್‍ಗೆ ಬೇರೆ ಯುವತಿಯ ಜೊತೆ ಮದುವೆ ನಿಗದಿಯಾಗಿತ್ತು. ಈ ಮೊದಲು ಕೂಡ ಅಜಯ್‍ಗೆ ಬೇರೆ ಕಡೆ ಮದುವೆ ಫಿಕ್ಸ್ ಆಗಿತ್ತು. ಆದರೆ ಮೀನಾಕ್ಷಿ ಆ ಮದುವೆಯನ್ನು ಮುರಿಯುವಂತೆ ಮಾಡಿದ್ದಳು. ಹೀಗಾಗಿ ಈ ಬಾರಿ ಅಜಯ್, ಮೀನಾಕ್ಷಿಗೆ ತಿಳಿಯದಂತೆ ಕದ್ದುಮುಚ್ಚಿ ಮದುವೆ ಆಗಲು ನಿರ್ಧರಿಸಿದ್ದನು. ಈ ವಿಷಯ ತಿಳಿದ ಮೀನಾಕ್ಷಿ ಮೂರು ದಿನಗಳ ಹಿಂದೆ ದೊಡ್ಡ ರಂಪಾಟವನ್ನೇ ಮಾಡಿದ್ದಳು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

    ಮೀನಾಕ್ಷಿ 12 ವರ್ಷಗಳ ಹಿಂದೆ ಕುಲ್‍ದೀಪ್ ಶರ್ಮಾ ಜೊತೆ ಅಂರ್ತಜಾತಿ ಲವ್ ಮ್ಯಾರೇಜ್ ಆಗಿದ್ದಳು. ಈ ಮದುವೆಗೆ ಇಬ್ಬರ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮದುವೆ ನಂತರ ಮೀನಾಕ್ಷಿ ಮಾವ ಆಕೆಗೆ ಸಾಥ್ ನೀಡಿದ್ದರು. ಆದರೆ ಮೀನಾಕ್ಷಿ ಅತ್ತೆ ಆಕೆಯನ್ನು ತನ್ನ ಸೊಸೆ ಎಂದು ಒಪ್ಪಿಕೊಳ್ಳಲಿಲ್ಲ. ಮದುವೆಯಾದ ಕೆಲವು ದಿನಗಳ ನಂತರ ಕುಲ್‍ದೀಪ್ ಆಸ್ಟ್ರೇಲಿಯಾಗೆ ಹೋಗಿದ್ದರು. ಕಳೆದ 12 ವರ್ಷದಲ್ಲಿ ಕುಲ್‍ದೀಪ್ ಹಾಗೂ ಮೀನಾಕ್ಷಿ ಕೇವಲ ಎರಡು ಅಥವಾ ಮೂರು ಬಾರಿ ಭೇಟಿ ಆಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

  • ಹಣ ಕೊಡಲ್ಲ ಎಂದ ತಂದೆಯ ತಲೆಯನ್ನೇ ಇಟ್ಟಿಗೆಯಿಂದ ಜಜ್ಜಿ ಪುಡಿಗೈದ ಮಗ

    ಹಣ ಕೊಡಲ್ಲ ಎಂದ ತಂದೆಯ ತಲೆಯನ್ನೇ ಇಟ್ಟಿಗೆಯಿಂದ ಜಜ್ಜಿ ಪುಡಿಗೈದ ಮಗ

    – ಡ್ರಗ್ಸ್ ನಶೆಗೆ ದಾಸನಾಗಿದ್ದ ಮಗನಿಂದ ಕೃತ್ಯ
    – ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದ ತಂದೆ ಜೀವ ತೆಗೆದ

    ಚಂಡೀಗಢ: ಡ್ರಗ್ಸ್ ಖರೀದಿಸಲು ಹಣ ನೀಡದ್ದಕ್ಕೆ ತಂದೆಯ ತಲೆಯನ್ನೇ ಮಗ ಇಟ್ಟಿಗೆಯಿಂದ ಜಜ್ಜಿ, ತಲೆಬುರುಡೆ ಪುಡಿ ಮಾಡಿದ ಭಯಾಕನ ಘಟನೆ ಪಂಜಾಬ್ ರಾಜ್ಯದ ಮಂಡಿ ಖರಾರ್ ಗ್ರಾಮದಲ್ಲಿ ನಡೆದಿದೆ.

    ಆರೋಪಿ ಮಗನನ್ನು ರಿಂಕು ಎಂದು ಗುರುತಿಸಲಾಗಿದ್ದು, ಹಂಸ್ ರಾಜ್(50) ಮಗನಿಂದಲೇ ಭೀಕರವಾಗಿ ಕೊಲೆಯಾದ ದುರ್ದೈವಿ. ಹಂಸ್ ರಾಜ್‍ಗೆ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಬ್ಬರ ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳಾದ ರಿಂಕು, ಸೋನು ಜೊತೆ ಹಂಸ್ ರಾಜ್ ವಾಸವಾಗಿದ್ದರು. ಕೆಲ ವರ್ಷಗಳ ಹಿಂದೆ ರಿಂಕು ತಾಯಿ ಮೃತಪಟ್ಟಿದ್ದು, ತಂದೆಯೇ ಕೂಲಿ ಕೆಲಸ ಮಾಡಿ ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.

    ಅತ್ತ ತಂದೆ ಕಷ್ಟಪಟ್ಟು ದುಡಿದು ಕುಟುಂಬವನ್ನು ಸಾಕುತ್ತಿದ್ದರೆ, ಇತ್ತ ಮಗ ರಿಂಕು ಡ್ರಗ್ಸ್ ಹಾಗೂ ಕೆಟ್ಟ ಚಟಗಳಿಗೆ ದಾಸನಾಗಿ ಹಣ ಕೊಡು ಎಂದು ಸದಾ ತಂದೆಯನ್ನು ಪೀಡಿಸುತ್ತಿದ್ದನು. ಗುರುವಾರ ಕೂಡ ಡ್ರಗ್ಸ್ ನಶೆಯಲ್ಲಿದ್ದ ರಿಂಕು ಮತ್ತಷ್ಟು ಡ್ರಗ್ಸ್ ಖರೀದಿಸಲು ತಂದೆ ಬಳಿ ಹಣ ಕೇಳಿದ್ದಾನೆ. ಆದರೆ ತಂದೆ ಹಣ ನೀಡಲು ನಿರಾಕರಿಸಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ತಂದೆ, ಮಗನ ಮಧ್ಯೆ ಜಗಳ ನಡೆದಿದೆ. ಇದರಿಂದ ಸಿಟ್ಟಿಗೆದ್ದ ರಿಂಕು ತಂದೆ ಮೇಲೆ ಹಲ್ಲೆ ಮಾಡಿದನು. ಇಟ್ಟಿಗೆ ತಂದು ತಂದೆ ತಲೆಗೆ ಬಲವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲಿಯೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.

    ಇಷ್ಟಾದ ಮೇಲೂ ಸುಮ್ಮನಿರದ ರಿಂಕು ಮತ್ತೆ ಮತ್ತೆ ತಂದೆ ತಲೆಗೆ ಇಟ್ಟಿಗೆಯಿಂದ ಜಜ್ಜಿ, ತಲೆಬುರುಡೆ ಪುಡಿ-ಪುಡಿ ಮಾಡಿ ವಿಕೃತಿ ಮೆರೆದಿದ್ದಾನೆ. ಇದನ್ನು ಕಣ್ಣಾರೆ ಕಂಡ ಸೋನು ಪೊಲೀಸರಿಗೆ ನಡೆದ ಘಟನೆ ಬಗ್ಗೆ ವಿವರಿಸಿ ಸಹೋದರ ರಿಂಕು ವಿರುದ್ಧ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ರಿಂಕು ಡ್ರಗ್ಸ್‌ಗೆ ದಾಸನಾಗಿದ್ದನು. ಡ್ರಗ್ಸ್ ನಶೆಯಲ್ಲಿಯೇ ತಂದೆಯನ್ನು ಕೊಲೆ ಮಾಡಿದ್ದಾನೆ. ಹಂಸ್ ರಾಜ್ ಅವರ ಗುರುತು ಸಿಗದಿರುವ ಹಾಗೆ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಜಜ್ಜಿ, ತಲೆಬುರುಡೆಯನ್ನು ಪುಡಿ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

  • ಮನೆಯಲ್ಲಿ ಮಲಗಿದ್ದ ಹುಡ್ಗಿ ಕಿಡ್ನಾಪ್- ಅಂಗನವಾಡಿಯಲ್ಲಿ ಐವರಿಂದ ಗ್ಯಾಂಗ್‍ರೇಪ್

    ಮನೆಯಲ್ಲಿ ಮಲಗಿದ್ದ ಹುಡ್ಗಿ ಕಿಡ್ನಾಪ್- ಅಂಗನವಾಡಿಯಲ್ಲಿ ಐವರಿಂದ ಗ್ಯಾಂಗ್‍ರೇಪ್

    – ಕೃತ್ಯದಲ್ಲಿ ಅಪ್ರಾಪ್ತನೂ ಭಾಗಿ
    – ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕೆ ಸಂತ್ರಸ್ತೆ ಮೇಲೆ ಹಲ್ಲೆ

    ಚಂಡೀಗಢ: ಮನೆಯಲ್ಲಿ ಮಲಗಿದ್ದ ಹುಡುಗಿಯನ್ನು ಅಪಹರಿಸಿಕೊಂಡು ಅಂಗನವಾಡಿಯಲ್ಲಿ ಐವರು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಹರಿಯಾಣದಲ್ಲಿ ನಡೆದಿದೆ.

    ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸಂತ್ರಸ್ತೆಯನ್ನು ಆಕೆಯ ಮನೆಯಿಂದಲೇ ಎತ್ತಿಕೊಂಡು ಹೋಗಿ ಸಮೀಪದಲ್ಲಿದ್ದ ಅಂಗನವಾಡಿಯಲ್ಲಿ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಏನಿದು ಪ್ರಕರಣ?
    ಹರಿಯಾಣದ ಯಮುನಾ ನಗರದಲ್ಲಿರುವ ತನ್ನ ಮನೆಯಲ್ಲಿ ಸಂತ್ರಸ್ತೆ ಮಲಗಿದ್ದಳು. ಆಗ ಐವರು ಆರೋಪಿಗಳು ಆಕೆಯನ್ನು ಮನೆಯಿಂದಲೇ ಎತ್ತಿಕೊಂಡು ಲಾಕ್ ಆಗಿದ್ದ ಅಂಗನವಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯ ಮೇಲೆ ಐವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಸಂತ್ರಸ್ತೆ ಆರೋಪಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಮಾಡಿದ್ದಾಳೆ. ಆಗ ಆರೋಪಿಗಳು ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂತ್ರಸ್ತೆ ತುಂಬಾ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಹೀನಾ ಕೃತ್ಯದಲ್ಲಿ ಅಪ್ರಾಪ್ತನೂ ಸಹ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಕೊನೆಗೆ ಸಂತ್ರಸ್ತೆ ಹೇಗೋ ಆರೋಪಿಗಳಿಂದ ತಪ್ಪಿಸಿಕೊಂಡು ಮನೆಗೆ ಹೋಗಿದ್ದಾಳೆ. ಅಲ್ಲಿ ತನ್ನ ಕುಟುಂಬದವರಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ತಕ್ಷಣ ಕುಟುಂಬದವರು ಸಂತ್ರಸ್ತೆಯೊಂದಿಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

    ಪೊಲೀಸರು ತಕ್ಷಣ ಕ್ರಮಕೈಗೊಂಡು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆ ಮತ್ತು ಕುಟುಂಬವರ ಹೇಳಿಕೆಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಲಾಗಿದೆ. ಸದ್ಯಕ್ಕೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಸಂತ್ರಸ್ತೆ ಐವರು ಆರೋಪಿಗಳ ಗುರುತನ್ನು ಸಹ ತಿಳಿಸಿದ್ದು, ಆ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತನಿಖಾಧಿಕಾರಿ ನಿರ್ಮಲ್ ಸಿಂಗ್ ತಿಳಿಸಿದ್ದಾರೆ.

  • ಪತಿಯಿಂದ್ಲೇ ಬಿಜೆಪಿ ನಾಯಕಿಯ ಬರ್ಬರ ಕೊಲೆ!

    ಪತಿಯಿಂದ್ಲೇ ಬಿಜೆಪಿ ನಾಯಕಿಯ ಬರ್ಬರ ಕೊಲೆ!

    – ಫೋನ್‍ನಲ್ಲಿ ಮಾತಾಡ್ತಿದ್ದಾಗಲೇ ಹತ್ಯೆ
    – ಸಾಯೋಕು ಮುನ್ನ ಕುಟುಂಬಕ್ಕೆ ತಿಳಿಸಿದ್ಳು

    ಚಂಢೀಗಡ: ಪತಿಯಿಂದಲೇ ಬಿಜೆಪಿ ನಾಯಕಿಯೊಬ್ಬಳು ಬರ್ಬರವಾಗಿ ಹತ್ಯೆಗೀಡಾದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

    ಮೃತ ದುರ್ದೈವಿಯಲ್ಲಿ ಮುನೇಶ್ ಗೋದಾರ(34) ಎಂದು ಗುರುತಿಸಲಾಗಿದೆ. ಈಕೆ ಭಾರತೀಯ ಜನತಾ ಪಾರ್ಟಿಯ ಕಿಸಾನ್ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಈ ಘಟನೆ ಗುರುಗ್ರಾಮದ 93 ಸೆಕ್ಟರ್ ನಲ್ಲಿ ನಡೆದಿದ್ದು, ಇಲ್ಲಿ ದಂಪತಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮುನೇಶ್ ನನ್ನು ಪತಿ ಸುನಿಲ್ ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ಕೊಲೆ ಯಾಕೆ?
    ಆರೋಪಿ ಸುನಿಲ್ ತನ್ನ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದನು. ಇದೇ ಅನುಮಾನದಿಂದಾಗಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಒಂದು ದಿನ ಅಕ್ರಮ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸಿ ಇಬ್ಬರ ಮಧ್ಯೆ ಜಗಳವಾಗಿದೆ. ಆ ಬಳಿಕ ನಾಯಕಿ ತನ್ನ ಕುಟುಂಬದವರ ಜೊತೆ ಫೋನಿನಲ್ಲಿ ಮತನಾಡುತ್ತಿದ್ದಳು. ಇದೇ ವೇಳೆ ಆಕೆಯನ್ನು ಗುಂಡಿಟ್ಟು ಕೊಲೆ ಮಾಡಿದ್ದಾನೆ.

    ನಾಯಕಿ ಸಹೋದರ ಎಸ್.ಕೆ ಜಖಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಮುನೇಶ್ ತನ್ನ ಸಹೋದರಿ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಇದೇ ವೇಳೆ ಆಕೆಯ ಪತಿ ಗುಂಡಿಟ್ಟು ಕೊಲೆ ಮಾಡಿದ್ದಾನೆ. ಅಲ್ಲದೆ ಆಕೆ ಫೋನಿನಲ್ಲೇ ಪತಿ ತನಗೆ ಗುಂಡಿಕ್ಕಿದ ವಿಚಾರ ತಿಳಿಸಿರುವುದಾಗಿ ಹೇಳಿದ್ದಾನೆ.

    ಆರೋಪಿ ಸುನಿಲ್, ಕಂಪನಿಯೊಂದರ ಸೆಕ್ಯುರಿಟಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದನು. ಈತ ಬಿಜೆಪಿ ನಾಯಕನೊಬ್ಬನ ಜೊತೆ ತನ್ನ ಪತ್ನಿ ಸಂಬಂಧ ಹೊಂದಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾನೆ.

    ಘಟನೆ ನಡೆದ ಕೂಡಲೇ ಸುನಿಲ್ ತಂದೆ ಗುರುಗ್ರಾಮ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಸುನಿಲ್ ಶನಿವಾರ ರಾತ್ರಿ ವಿಪರೀತವಾಗಿ ಕುಡಿದು ಬಂದಿದ್ದನು. ಪತಿ ಮನೆಗೆ ಬಂದ ಬಳಿಕ ಪತ್ನಿ, ಅಡುಗೆ ಮನೆಗೆ ತೆರಳಿ ಫೋನಿನಲ್ಲಿ ಮಾತನಾಡುತ್ತಿದ್ದಳು. ಮೊದಲೇ ಪತ್ನಿ ಮೇಲೆ ಅನುಮಾನವಿದ್ದ ಸುನಿಲ್, ಈಕೆ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಕಂಡು ಸಿಟ್ಟುಗೊಂಡು ಅಲ್ಲೇ ಇದ್ದ ರಿವಾಲ್ವರ್ ತೆಗೆದು ಪತ್ನಿಯ ಎದೆ ಹಾಗೂ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಪರಿಣಾಮ ಬಿಜೆಪಿ ನಾಯಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಇತ್ತ ಪತ್ನಿ ಮೃತಪಟ್ಟಿದ್ದಾಳೆಂದು ತಿಳಿದ ಕೂಡಲೇ ಆರೋಪಿ ಸುನಿಲ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಮುನೇಶ್, ಜಜ್ಜರ್ ಜಿಲೆಲಯ ನೌಗಾಂವ್ ಗ್ರಾಮದವಳಾಗಿದ್ದು, ಭಾನುವಾರ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ನಾಮ ನಿರ್ದೇಶಿತರಾಗಿ ಕೆಲಸ ಮಾಡಿದ್ದಳು.