Tag: Chanakya

  • ಧಾರ್ಮಿಕ ಮತಾಂತರಕ್ಕೆ ಬಾಲಿವುಡ್ ಕಾರಣ: ಐಎಎಸ್ ಅಧಿಕಾರಿ ನಿಯಾಜ್ ಖಾನ್

    ಧಾರ್ಮಿಕ ಮತಾಂತರಕ್ಕೆ ಬಾಲಿವುಡ್ ಕಾರಣ: ಐಎಎಸ್ ಅಧಿಕಾರಿ ನಿಯಾಜ್ ಖಾನ್

    – ಸಿನಿಮಾ ತಾರೆಯರು ಹಿಂದೂಗಳನ್ನ ಮುಸ್ಲಿಮರನ್ನಾಗಿಸಿದ್ದಾರೆ; ಮತಾಂತರ ಮಾಡೋದು ತಪ್ಪು
    – ಮುಸ್ಲಿಂ ಯುವಕರು ಗೋರಕ್ಷಕರಾಗಬೇಕು

    ಭೋಪಾಲ್: ಮತಾಂತರಗಳಿಗೆ (Religious Conversion) ಬಾಲಿವುಡ್ (Bollywood) ಚಿತ್ರರಂಗ ಕಾರಣ. ಅಲ್ಲದೇ ಅದರ ಆರಂಭ ಅಲ್ಲಿಂದಲೇ ಆಗಿದೆ ಎಂದು ಮಧ್ಯಪ್ರದೇಶದ (Madhya Pradesh) ಕೇಡರ್‌ನ ಐಎಎಸ್ (IAS) ಅಧಿಕಾರಿ ನಿಯಾಜ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

    ದೊಡ್ಡ ದೊಡ್ಡ ಸಿನಿಮಾ ತಾರೆಯರು ಹಿಂದೂಗಳನ್ನು (Hindu) ಮದುವೆಯಾಗುವ (Marriage) ಮೂಲಕ ಮುಸಲ್ಮಾನರನ್ನಾಗಿಸಿದ್ದಾರೆ. ಇಂದಿಗೂ ಇದು ನಡೆಯುತ್ತಿದೆ. ಮತಾಂತರ ನಿಜವಾಗಿಯೂ ತಪ್ಪು. ಏಕೆಂದರೆ ಒಂದು ಧರ್ಮವನ್ನು ಇತರ ಎಲ್ಲಾ ಧರ್ಮಗಳಿಗಿಂತ ಮಿಗಿಲು ಎಂದು ಪರಿಗಣಿಸುತ್ತೇವೆ. ಆದರೆ ಒಂದು ಧರ್ಮಕ್ಕೆ ಸೇರಲು ಬೇರೆ ಧರ್ಮವನ್ನು ಸಣ್ಣದು ಎಂದು ಭಾವಿಸುತ್ತೇವೆ. ಇದು ಸರಿಯಾದ ಕ್ರಮ ಅಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವಿರಾಜಪೇಟೆಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

    ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲಾ ಧರ್ಮಗಳಿಗೂ ಸಮಾನವಾದ ಸ್ಥಾನ ನೀಡಲಾಗಿದೆ. ಮದುವೆಯ ನಂತರ ಬೇರೆ ಧರ್ಮಕ್ಕೆ ಮತಾಂತರವಾಗಬೇಕು ಎಂಬ ವಿಚಾರವನ್ನು ಹೇಗೆ ಒಪ್ಪಲು ಸಾಧ್ಯ? ನಿಜವಾಗಿ ಇಬ್ಬರ ನಡುವೆ ಪ್ರೀತಿ ಇದ್ದರೆ, ಇಬ್ಬರೂ ತಮ್ಮ ತಮ್ಮ ಧರ್ಮವನ್ನು ಅನುಸರಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    MARRAGE (1)

    ಜನರು ಕಲಾವಿದರನ್ನು ದೇವರಂತೆ ಪರಿಗಣಿಸುತ್ತಾರೆ. ಅಲ್ಲದೆ ನಟರನ್ನು ಅನುಸರಿಸುತ್ತಾರೆ. ಇದರ ಪರಿಣಾಮವಾಗಿ ಇಂದು ಜನರು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಸಾಗುತ್ತಿದ್ದಾರೆ. ಅಲ್ಲದೇ ಚಲನಚಿತ್ರದಲ್ಲಿನ ನಗ್ನ ದೃಶ್ಯಗಳು ನಮ್ಮ ಯುವ ಪೀಳಿಗೆಯನ್ನು ಹಾಳುಮಾಡುತ್ತಿವೆ ಎಂದಿದ್ದಾರೆ.

    ಬಾಲಿವುಡ್, ಹಾಲಿವುಡ್‍ನ್ನು ಜನ ಅನುಕರಣೆ ಮಾಡುವುದನ್ನು ಬಿಟ್ಟು, ದೇಶಪ್ರೇಮದ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ಚಲನಚಿತ್ರಗಳು ಮಕ್ಕಳ ಮೇಲೆ ಪ್ರಭಾವ ಬೀರುವುದರಿಂದ ದೇಶಪ್ರೇಮ, ಸಾಧು ಸಂತರ ವಿಚಾರಗಳನ್ನು ಚಿತ್ರದಲ್ಲಿ ತರಬೇಕು ಎಂದಿದ್ದಾರೆ.

    ಖಾನ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದ ಟ್ವೀಟ್ ಬಗ್ಗೆ ಮಾತನಾಡಿ, ನಾನು ಮೂರು ವಿಷಯಗಳನ್ನು ಟ್ವೀಟ್ ಮಾಡಿದ್ದೇನೆ. ಮುಸ್ಲಿಂ ಯುವಕರು ಗೋರಕ್ಷಕರಾಗಬೇಕು. ಅವರು ಸಸ್ಯಾಹಾರಿಯಾಗಲು ಪ್ರಯತ್ನಿಸಬೇಕು. ಅಲ್ಲದೇ ಬ್ರಾಹ್ಮಣರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು ಎಂದು ಪ್ರಕಟಿಸಿದ್ದೇನೆ ಎಂದಿದ್ದಾರೆ.

    ಮುಸ್ಲಿಮರು (Muslim) ಗೋರಕ್ಷಕರಾದರೆ (Cow Protector), ಗೋವುಗಳು ಉಳಿಯುತ್ತವೆ. ಅಲ್ಲದೇ ಕೆಲವು ಮುಸ್ಲಿಮರು ಗೋವುಗಳನ್ನು ಗೌರವದಿಂದ ಕಾಣುತ್ತಾರೆ. ಅವುಗಳಿಗೆ ಆಹಾರ ನೀಡುತ್ತಾರೆ. ಇದರೊಂದಿಗೆ ಸಸ್ಯಾಹಾರದ ಅಭ್ಯಾಸವೂ ಪ್ರಪಂಚದಾದ್ಯಂತ ನಡೆಯುತ್ತಿದೆ. ಭೂಮಿಯನ್ನು ಉಳಿಸಲು ಇದನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆದರೆ ಯಾವುದನ್ನು ತಿನ್ನಬೇಕು ಎಂದು ನಿರ್ಧರಿಸಲು ಯಾರನ್ನೂ ನಾನು ಒತ್ತಾಯಿಸಲಾಗುವುದಿಲ್ಲ. ಬ್ರಾಹ್ಮಣ, ಸದಾ ಸತ್ಯದ ಮಾರ್ಗದಲ್ಲಿ ನಡೆಯುತ್ತಾ, ದೇಶವನ್ನು ಮುನ್ನಡೆಸುತ್ತಾನೆ. 3,000 ವರ್ಷಗಳಿಂದ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಇಂದಿಗೂ ಸಂತರ ಕಾರ್ಯಕ್ರಮ ಇದ್ದಾಗ ಲಕ್ಷಗಟ್ಟಲೆ ಜನ ಸೇರುತ್ತಾರೆ. ಬ್ರಾಹ್ಮಣರು ಇಂದಿಗೂ ಮಾರ್ಗದರ್ಶಕರು. ಬ್ರಾಹ್ಮಣರ ಆಶೀರ್ವಾದದಿಂದ ಇಲ್ಲಿಯವರೆಗೆ ನಮ್ಮ ಸ್ಥಳದಲ್ಲಿ ಶಾಂತಿ ಕಾಪಾಡಲಾಗಿದೆ. ಕೌಟಿಲ್ಯನಂತಹ ಬ್ರಾಹ್ಮಣ ಭಾರತಕ್ಕೆ ಉತ್ತಮ ಉದಾಹರಣೆ. ನನ್ನ ಟ್ವೀಟ್ ರಾಜಕೀಯ ಪ್ರೇರಿತ ಅಲ್ಲ. ಇದು ಸಂಪೂರ್ಣವಾಗಿ ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದಿದ್ದಾರೆ.

    ಹಿಂದೂ ಧರ್ಮವನ್ನು ಅಳವಡಿಸಿಕೊಳ್ಳುತ್ತೀರಾ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಬಳಿ ವಿಗ್ರಹಗಳಿಲ್ಲ. ನಾನು ಮೊಹಮ್ಮದ್ ಸಾಬ್ ಹಾಗೂ ಮಹಾನ್ ಚಾಣಕ್ಯನ (Chanakya) ಆರಾಧಕ. ನಾನು ಇಸ್ಲಾಮಿನಲ್ಲಿದ್ದೇನೆ ಮತ್ತು ಹಾಗೆಯೇ ಇರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ವರ್ಗೀಕೃತ ದಾಖಲೆಗಳ ಕೇಸ್ – ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

  • ಟ್ರಂಪ್ ತಂಗಲಿರುವ ‘ಚಾಣಕ್ಯ’ ಸೂಟ್ ವಿಶೇಷತೆ ಏನು? ಒಂದು ದಿನದ ಬಾಡಿಗೆ ಎಷ್ಟು?

    ಟ್ರಂಪ್ ತಂಗಲಿರುವ ‘ಚಾಣಕ್ಯ’ ಸೂಟ್ ವಿಶೇಷತೆ ಏನು? ಒಂದು ದಿನದ ಬಾಡಿಗೆ ಎಷ್ಟು?

    ನವದೆಹಲಿ: ಅಹಮದಾಬಾದ್, ಆಗ್ರಾ ಪ್ರವಾಸದ ಬಳಿಕ ದೆಹಲಿ ತೆರಳಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ದಾರ್ ಪಟೇಲ್ ರಸ್ತೆಯಲ್ಲಿರುವ ಐಟಿಸಿ ಮೌರ್ಯ ಹೋಟೆಲ್‍ನಲ್ಲಿ ಟ್ರಂಪ್ ವಾಸ್ತವ್ಯ ಹೂಡಲಿದ್ದಾರೆ. ‘ಚಾಣಕ್ಯ’ ಹೆಸರಿನ ಎರಡು ಬೆಡ್‍ರೂಂಗಳ ಐಷಾರಾಮಿ ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್‍ನಲ್ಲಿ ಟ್ರಂಪ್ ತಂಗಲಿದ್ದು ಮಂಗಳವಾರ ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

    ‘ಚಾಣಕ್ಯ’ ಹೆಸರಿನ ಪ್ರೆಸಿಡೆನ್ಶಿಯಲ್ ಸೂಟ್ ಒಂದು ಖಾಸಗಿ ಡ್ರಾಯಿಂಗ್ ರೂಮ್, ಒಂದು ಖಾಸಗಿ ಟೆರೇಸ್, ಜಿಮ್, ಖಾಸಗಿ ಪ್ರವೇಶ ಭಾಗವಿರುವ 12 ಆಸನಗಳ ಭೋಜನ ಸ್ಥಳ, ಅತಿ ವೇಗದ ಎಲಿವೆಟರ್, ಬೃಹತ್ ಸ್ನಾನದ ಕೊಠಡಿ, ಮಿನಿ ಸ್ಪಾ ಮತ್ತು ವಿಶೇಷ ಪರಿಣತ ಬಾಣಸಿಗ ಹಾಗೂ ಅತ್ಯುನ್ನತ ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.

    ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಡೊನಾಲ್ಡ್ ಟ್ರಂಪ್, ಈ ಐಷಾರಾಮಿ ಹೋಟೆಲ್‍ನಲ್ಲಿ ಉಳಿದುಕೊಳ್ಳಲಿರುವ ಅಮೆರಿಕದ ನಾಲ್ಕನೇ ಅಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ ಬುಷ್, ಬರಾಕ್ ಒಬಾಮ ಈ ಹೋಟೆಲ್‍ನಲ್ಲಿ ಆತಿಥ್ಯ ಸ್ವೀಕರಿಸಿದ್ದರು. ಸುಮಾರು 4,600 ಚದರ ಅಡಿ ವಿಸ್ತೀರ್ಣ ಇರುವ ಈ ಚಾಣಕ್ಯ ಸೂಟ್‍ನಲ್ಲಿ ಒಂದು ರಾತ್ರಿ ಕಳೆಯಲು 8 ಲಕ್ಷ ರೂಪಾಯಿ ವೆಚ್ಚವಾಗಲಿದೆ.

    ಟ್ರಂಪ್ ವಾಸ್ತವ್ಯದ ಹಿನ್ನಲೆ ಎರಡು ವಾರಕ್ಕೂ ಮುಂಚಿನಿಂದಲೇ ಹೋಟೆಲ್ ನಲ್ಲಿ ಎನ್‍ಎಸ್‍ಜಿ ಕಮಾಂಡೋಗಳು ಭದ್ರತಾ ವ್ಯವಸ್ಥೆ ಮೇಲೆ ನಿಗಾ ವಹಿಸಿದ್ದಾರೆ. ಡೊನಾಲ್ಡ್ ಟ್ರಂಪ್ ವಾಸ್ತವ್ಯದ ಸಂದರ್ಭದಲ್ಲಿ ಇಲ್ಲಿ ಇತರೆ ಅತಿಥಿಗಳ ವಾಸ್ತವ್ಯಕ್ಕೆ ಅವಕಾಶ ನೀಡದೇ ಹೋಟೆಲ್‍ನಲ್ಲಿರುವ ಎಲ್ಲ 438 ಕೊಠಡಿಗಳನ್ನು ಕೂಡ ಟ್ರಂಪ್ ಅವರಿಗಾಗಿಯೇ ಕಾಯ್ದಿರಿಸಲಾಗಿದೆ.

    ಬಿಲ್ ಕ್ಲಿಂಟನ್ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಶೇಷವಾಗಿ ಕ್ಲಿಂಟನ್ ಪ್ಲಾಟರ್ ಮತ್ತು ಚೆಲ್ಸಾ ಪ್ಲಾಟರ್ ಹೆಸರಿನ ವಿಶೇಷ ಆಹಾರವನ್ನು ಈ ಹೋಟೆಲ್ ಸಿದ್ದಪಡಿಸಿತ್ತು. ಬರಾಕ್ ಒಬಾಮ ಭಾರತಕ್ಕೆ ಎರಡು ಬಾರಿ ಭೇಟಿ ವೇಳೆ ಕೂಡ ಹೋಟೆಲ್ ‘ಒಬಾಮ ಪ್ಲಾಟರ್’ ಸಿದ್ಧಪಡಿಸಿತ್ತು. ಸದ್ಯ ಟ್ರಂಪ್ ಗಾಗಿ ‘ಟ್ರಂಪ್ ಪ್ಲಾಟರ್’ ಹೆಸರಿನ ವಿಶೇಷ ಸಸ್ಯಾಹಾರ ತಯಾರಿ ಮಾಡಲಾಗಿದೆ.

    ಮೌರ್ಯ ಹೋಟೆಲಿನ 14ನೇ ಅಂತಸ್ತಿನಲ್ಲಿ ಟ್ರಂಪ್ ಉಳಿದುಕೊಳ್ಳಲಿದ್ದಾರೆ. ಸದ್ಯಕ್ಕೆ ವಿಶ್ವಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿ ಗುಣಮಟ್ಟದ ಶುದ್ಧಗಾಳಿ ಒದಗಿಸುವ ಏಕೈಕ ಹೋಟೆಲ್ ಐಟಿಸಿ ಮೌರ್ಯ ಆಗಿದ್ದು, ಈ ಹಿಂದೆ ಟಿಬೆಟ್ ಧರ್ಮ ಗುರು ದಲೈ ಲಾಮಾ, ಮಾಜಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ಲಾ ಸಹ ಈ ಹೋಟೆಲಿನಲ್ಲೇ ತಂಗಿದ್ದರು.

  • ಚಾಣಕ್ಯ ಚಿತ್ರಣ ಬಿದ್ದು ಹೋಗಿದ್ದಕ್ಕೆ ನನಗೆ ಸಂತೋಷವಿದೆ: ಅಮಿತ್ ಶಾ

    ಚಾಣಕ್ಯ ಚಿತ್ರಣ ಬಿದ್ದು ಹೋಗಿದ್ದಕ್ಕೆ ನನಗೆ ಸಂತೋಷವಿದೆ: ಅಮಿತ್ ಶಾ

    ನವದೆಹಲಿ: ಭಾರತದ ಆಧುನಿಕ ಚಾಣಕ್ಯ, ರಾಜಕೀಯ ತಂತ್ರಗಾರ ಎಂದು ಹೆಸರನ್ನು ಪಡೆದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಹಾರಾಷ್ಟ್ರ ಚುನಾವಣೆಯ ನಂತರ ನನ್ನನ್ನು ಚಾಣಕ್ಯನಿಗೆ ಹೋಲಿಸುವುದು ನಿಂತಿದ್ದು ಬಹಳ ಸಂತೋಷ ತಂದಿದೆ ಎಂದು ಹೇಳಿದ್ದಾರೆ.

    ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಷಯದ ಕುರಿತು ಕೇಳಲಾದ ಪ್ರಶ್ನೆಗೆ, ಮಹಾರಾಷ್ಟ್ರದಲ್ಲಿ ನಾವು ಸೋತಿಲ್ಲ. ನಾವು ಏಕಾಂಗಿಯಾಗಿ 105 ಸ್ಥಾನವನ್ನು ಗೆದ್ದುಕೊಂಡಿದ್ದು ಮೈತ್ರಿಗೆ ಜನ ಸಂಪೂರ್ಣ ಬೆಂಬಲ ನೀಡಿದ್ದಾರೆ. ಬಹುಮತಕ್ಕಿಂತಲೂ 20ಕ್ಕೂ ಹೆಚ್ಚು ಸ್ಥಾನವನ್ನು ಗೆದ್ದುಕೊಂಡಿದ್ದೇವೆ ಎಂದು ಉತ್ತರಿಸಿದರು.

    ಈ ವೇಳೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ವಿಫಲವಾದ ನಂತರ ಆಧುನಿಕ ಚಾಣಕ್ಯ ಎಂಬ ನಿಮ್ಮ ವ್ಯಕ್ತಿತ್ವಕ್ಕೆ ಹಿನ್ನಡೆ ಆಗಿದೆ ಅಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ಈ ಪ್ರಕರಣದಿಂದ ಚಾಣಕ್ಯನಿಗೆ ಹೋಲಿಕೆ ಮಾಡುವುದು ನಿಂತಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಅಮಿತ್ ಶಾ Vs ಶರದ್ ಪವಾರ್ – ‘ಮಹಾ’ ಚಾಣಕ್ಯ ಯಾರು?

    ಚಾಣಕ್ಯ ಚಿತ್ರಣ ಬಿದ್ದು ಹೋಗಿದ್ದಕ್ಕೆ ನನಗೆ ಸಂತೋಷವಿದೆ. ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದ ನಂತರ ಸಮಸ್ಯೆ ಆರಂಭವಾಯಿತು. ನಾವು 105, ಶಿವಸೇನೆ 56 ಸ್ಥಾನ ಪಡೆದ ಹಿನ್ನೆಲೆಯಲ್ಲಿ ನಾವು ಸರ್ಕಾರ ರಚಿಸಲು ಅನುಮತಿ ನೀಡುವಂತೆ ರಾಜ್ಯಪಾಲರ ಬಳಿ ಹೋಗಬೇಕಿತ್ತು. ಆದರೆ ಯಾವಾಗ ಶರದ್ ಪವಾರ್ ಕಾಳುಗಳನ್ನು ಎಸೆದರೋ ಶಿವಸೇನೆ ಆ ಕಾಳುಗಳನ್ನು ತಿನ್ನಲು ಮುಗಿಬಿತ್ತು ಎಂದು ವ್ಯಂಗ್ಯ ರೂಪದಲ್ಲಿ ತಿವಿದರು.

    ಚುನಾವಣಾ ಪ್ರಚಾರ ಆಗಿರಬಹುದು ಅಥವಾ ಸುದ್ದಿಗೋಷ್ಠಿ ಆಗಿರಬಹುದು ಎಲ್ಲ ಕಡೆ ನಾವು ಮುಖ್ಯಮಂತ್ರಿ ಬಿಜೆಪಿಯವರೇ ಆಗುತ್ತೇವೆ ಎಂದು ಹಲವು ಬಾರಿ ಹೇಳಿದ್ದೇವೆ. ಆದರೆ ಏನು ಮಾಡುವುದು? ನಮ್ಮ ಮೈತ್ರಿ ಪಕ್ಷ ಓಡಿ ಹೋಯಿತು. ಹೀಗಾಗಿ ನಾವು ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

    ಒಂದು ವೇಳೆ ಶಿವಸೇನೆ ಚುನಾವಣೆಗೂ ಮೊದಲೇ ಈ ಬೇಡಿಕೆ ಇಟ್ಟಿದ್ದರೆ ನಾವು ಬೇರೆ ತೀರ್ಮಾನ ತೆಗೆದುಕೊಳ್ಳುತ್ತಿದ್ದೆವು. ಗೆದ್ದ ಪ್ರತಿ ಶಿವಸೇನಾ ಶಾಸಕ ನರೇಂದ್ರ ಮೋದಿಯವರ ಪ್ರಸಿದ್ಧಿಯನ್ನು ಪಡೆಯದೇ ನಾವು ಗೆದ್ದಿದ್ದೇವೆ ಎಂದು ಹೇಳಲಿ ನೋಡೋಣ? ಈ ಪ್ರಕರಣವನ್ನು ನಾವು ಪಾಠವಾಗಿ ಸ್ವೀಕರಿಸಿದ್ದೇವೆ. ವಿರೋಧ ಪಕ್ಷದಲ್ಲಿ ನಾವು ಕುಳಿತುಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.

  • ಅಮಿತ್ ಶಾ Vs ಶರದ್ ಪವಾರ್ – ‘ಮಹಾ’ ಚಾಣಕ್ಯ ಯಾರು?

    ಅಮಿತ್ ಶಾ Vs ಶರದ್ ಪವಾರ್ – ‘ಮಹಾ’ ಚಾಣಕ್ಯ ಯಾರು?

    – ಮೈತ್ರಿಯನ್ನು ಆರಂಭದಲ್ಲೇ ಒಡೆದಿದ್ದು ಅಮಿತ್ ಶಾ
    – ಸಿದ್ಧಾಂತ ಬದಿಗೊತ್ತಿ ಮೈತ್ರಿಯಾಗಿದ್ದು ಚಾಣಕ್ಯ ನಡೆ

    ಮುಂಬೈ: ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ಮಹಾ ಹೈಡ್ರಾಮಾ ಕೊನೆಗೂ ಮುಕ್ತಾಯಗೊಂಡಿದೆ. ಹೈಡ್ರಾಮಾ ಮುಕ್ತಾಯಗೊಂಡರೂ ಈಗ ಚಾಣಕ್ಯ ಯಾರು ಎನ್ನುವ ಪ್ರಶ್ನೆಯನ್ನು ಮುಂದಿಟ್ಟು ಜನ ಸಾಮಾಜಿಕ ಜಾಲತಾಣದಲ್ಲಿ ಅವರದ್ದೇ ಆದ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

    ಬಿಜೆಪಿ ಅಭಿಮಾನಿಗಳು ಅಮಿತ್ ಶಾ ಅವರೇ ಚಾಣಕ್ಯ. ಈಗ ಬಿಜೆಪಿ ಸರ್ಕಾರ ರಚಿಸುವಲ್ಲಿ ವಿಫಲರಾದರೂ ಮುಂದೆ ಸರ್ಕಾರ ಖಂಡಿತವಾಗಿಯೂ ರಚನೆ ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಈ ಬಾರಿ ಚಾಣಕ್ಯ ಪಟ್ಟ ಶರದ್ ಪವಾರ್ ಅವರಿಗೆ ಸಿಗಬೇಕು. ಬಹುಮತ ಇಲ್ಲದೇ ಇದ್ದರೂ ಶಿವಸೇನೆ ಜೊತೆ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರನ್ನು ಮನವೊಲಿಸಿ ಅಧಿಕಾರಕ್ಕೆ ಏರುತ್ತಿರುವುದೇ ದೊಡ್ಡ ಸಾಧನೆ ಎಂದು ಬಿಜೆಪಿ ವಿರೋಧಿಗಳು ತಿರುಗೇಟು ನೀಡುತ್ತಿದ್ದಾರೆ.

    ಅಮಿತ್ ಶಾ ಚಾಣಕ್ಯ ಯಾಕೆ?
    ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚುನಾವಣಾ ಚತುರ ಎಂದೇ ಹೆಸರು ಪಡೆದವರು. ಪಕ್ಷ ಸಂಘಟನೆ ವಿಚಾರದಲ್ಲಿ ಯಶಸ್ವಿಯಾಗಿ ಪಳಗಿರುವ ಅಮಿತ್ ಶಾ 2014ರ ಲೋಕಸಭಾ ಚುನಾವಣೆಗೂ ಮುನ್ನವೇ ಹೆಸರು ಪಡೆದಿದ್ದಾರೆ. 2014ರಲ್ಲಿ ಉತ್ತರ ಪ್ರದೇಶದಲ್ಲಿ ಒಟ್ಟು 80 ಕ್ಷೇತ್ರಗಳ ಪೈಕಿ ಸ್ಪರ್ಧೆ ಮಾಡಿದ್ದ 78 ರಲ್ಲಿ ಬಿಜೆಪಿ 71 ಸ್ಥಾನವನ್ನು ಗೆಲ್ಲುವ ಮೂಲಕ ರಾಷ್ಟ್ರಮಟ್ಟದಲ್ಲಿ ಮುನ್ನೆಲೆಗೆ ಬಂದ ಬಳಿಕ ಚುನಾವಣಾ ‘ಶಾ’ಣಕ್ಯ ಎಂದೇ ಹೆಸರುವಾಸಿಯಾಗಿದ್ದಾರೆ. ಲೋಕಸಭೆ ಚುನಾವಣೆಯ ನಂತರ ಬಹುಮತ ಇಲ್ಲದೇ ಇದ್ದರೂ ಮಿತ್ರ ಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿ ಸರ್ಕಾರ ರಚಿಸಿದ ಖ್ಯಾತಿ ಇದ್ದ ಕಾರಣ ಮಹಾರಾಷ್ಟ್ರದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ಲೇಷಣೆ ಚುನಾವಣಾ ಫಲಿತಾಂಶ ಬಂದ ಬಳಿಕ ಕೇಳಿ ಬಂದಿತ್ತು.

    ಶಿವಸೇನೆಯ ಸಿಎಂ ಪಟ್ಟದ ಬೇಡಿಕೆಗೆ ಜಗ್ಗದ ಪರಿಣಾಮ ಬಿಜೆಪಿ ಹೇಗೆ ಅಧಿಕಾರಕ್ಕೆ ಏರುತ್ತದೆ ಎನ್ನುವ ಪ್ರಶ್ನೆ ಎದ್ದಿತ್ತು. ಈ ಮಧ್ಯೆ ರಾಷ್ಟ್ರಪತಿ ಆಡಳಿತವೂ ಜಾರಿ ಆಯ್ತು. ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ಮಾತುಕತೆ ಅಂತಿಮಗೊಂಡು ಶುಕ್ರವಾರ ಸಂಜೆ ಉದ್ಧವ್ ಠಾಕ್ರೆ ಸಿಎಂ ಎಂಬ ನಿರ್ಧಾರ ಪ್ರಕಟಗೊಂಡ ಬಳಿಕ ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ ರಾತ್ರೋರಾತ್ರಿ ದಿಢೀರ್ ಬೆಳವಣಿಗೆ ನಡೆದು ರಾಷ್ಟ್ರಪತಿ ಆಡಳಿತ ರದ್ದಾಗಿ ದೇವೇಂದ್ರ ಫಡ್ನವೀಸ್ ಮುಖ್ಯಮತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೆ ಎನ್‍ಸಿಪಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

    ಈ ಬೆಳವಣಿಗೆಯನ್ನು ನೋಡಿ ಬಿಜೆಪಿ ಅಭಿಮಾನಿಗಳು, ಮಹಾರಾಷ್ಟ್ರದಲ್ಲಿ ಅಮಿತ್ ಶಾರಿಂದ ರಾಜಕೀಯ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಬಿಜೆಪಿ ಈಗ ಕಮಲ ಮಾತ್ರ ಅಲ್ಲ, ರಾತ್ರಿ ಅರಳುವ ಬ್ರಹ್ಮಕಮಲ. ಎಲ್ಲ ಘಟನೆಗಳನ್ನು ನೋಡಿಕೊಂಡು ಯಾರಿಗೂ ಯಾವುದೇ ಮಾಧ್ಯಮಕ್ಕೆ ಸುಳಿವು ನೀಡದೇ ಸರ್ಕಾರ ರಚಿಸುವುದು ಅಂದರೆ ಇದು ಎಂದು ಅಭಿಪ್ರಾಯ ವ್ಯಕ್ತಪಡಿಸಲು ಆರಂಭಿಸಿದರು. ಶೀವಸೇನೆ ಹೋದರೆ ಏನಂತೆ ಎನ್‍ಸಿಪಿ ನಾಯಕನನ್ನೇ ಡಿಸಿಎಂ ಮಾಡಿ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರಿಗೆ ಶಾಕ್ ನೀಡಿದ್ದು ಗ್ರೇಟ್ ಎಂದು ಬಣ್ಣಿಸಲು ಆರಂಭಿಸಿದರು.

    ಮಂಗಳವಾರದವರೆಗೆ ಬಹುಮತ ಇಲ್ಲದೇ ಇದ್ದರೂ ಬಿಜೆಪಿ ಸರ್ಕಾರ ಹೇಗೆ ಪರೀಕ್ಷೆಯಲ್ಲಿ ಪಾಸ್ ಆಗುತ್ತದೆ ಎನ್ನುವ ಕುತೂಹಲ ಎದ್ದಿತ್ತು. ಆದರೆ ಬೆಳಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಸಂಜೆ 5 ಗಂಟೆಯ ಒಳಗಡೆ ಬಹುಮತ ಸಾಬೀತು ಪಡಿಸಬೇಕೆಂಬ ಆದೇಶ ಪ್ರಕಟವಾಗಿ ಅಜಿತ್ ಪವಾರ್ ರಾಜೀನಾಮೆ ನೀಡಿ ಫಡ್ನವೀಸ್ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಗೊಂಡ ಬಳಿಕ ಬಿಜೆಪಿಯ ಅಧಿಕಾರದ ಕನಸು ಕನಸಾಗಿಯೇ ಉಳಿಯಿತು.

    ವಿದ್ಯಮಾನಗಳು ನಡೆದರೂ ಶಾ ಅಭಿಮಾನಿಗಳು ಶಾಣಕ್ಯನನ್ನು ಬಿಟ್ಟುಕೊಡಲು ತಯಾರಿಲ್ಲ. ಈಗ ಅಧಿಕಾರಕ್ಕೆ ಏರದೇ ಇದ್ದರೂ ಕರ್ನಾಟಕದಲ್ಲಿ ಯಡಿಯೂರಪ್ಪ ಸಿಎಂ ಆದಂತೆ ಮುಂದೆ ಫಡ್ನವೀಸ್ ಮುಖ್ಯಮತ್ರಿ ಆಗುತ್ತಾರೆ. ಒಗ್ಗಟ್ಟಾಗಿದ್ದ ಪಕ್ಷವನ್ನು ಬ್ರೇಕ್ ಮಾಡುವುದೇ ಮೊದಲ ಕೆಲಸ. ಈ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಇನ್ನು ಶಿವಸೇನೆ ಶಾಸಕರನ್ನು ಮತ್ತು ಎನ್‍ಸಿಪಿ ಶಾಸಕರನ್ನು ಸೆಳೆದು ಪಕ್ಷೇತರರರನ್ನು ಸೆಳೆದರೆ ಕೆಲಸ ಪೂರ್ಣಗೊಳ್ಳುತ್ತದೆ. ಎನ್‍ಸಿಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಇಡಿ ರಾಷ್ಟ್ರಕ್ಕೆ ಗೊತ್ತಾಗಿದೆ. ಅಧಿಕಾರ ಮತ್ತು ನೆರವು ವಿಚಾರದಲ್ಲಿ ಬ್ಲಾಕ್‍ಮೇಲ್ ಮಾಡುವ ಪಕ್ಷಕ್ಕೆ ಯಾವತ್ತೂ ಬಗ್ಗಬಾರದು. ಅಂದು ಆಂಧ್ರಪ್ರದೇಶದಕ್ಕೆ ವಿಶೇಷ ಪ್ಯಾಕೇಜ್ ಪ್ರಕಟಿಸದ್ದಕ್ಕೆ ಎನ್‍ಡಿಎ ಒಕ್ಕೂಟವನ್ನು ಬಿಟ್ಟು ಚಂದ್ರಬಾಬು ನಾಯ್ಡು ತೆರಳಿದಾಗಲೂ ಬಿಜೆಪಿ ಬಗ್ಗಲಿಲ್ಲ. ನಂತರ ನಡೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಸೋತಿತ್ತು. ಆಗುವುದೆಲ್ಲ ಒಳ್ಳೆಯದು ಮುಂದೆ ಶಿವಸೇನೆಗೂ ಇದೇ ಗತಿ ಆಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.

    ಶರದ್ ಪವಾರ್ ಚಾಣಕ್ಯ ಯಾಕೆ?
    ಬಹುಮತ ಇಲ್ಲದೇ ಇದ್ದ ರಾಜ್ಯಗಳಲ್ಲಿ ಅಮಿತ್ ಶಾ ತಂತ್ರಗಾರಿಕೆ ಉಪಯೋಗಿಸಿ ಬಿಜೆಪಿ ಸರ್ಕಾರ ಬರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಏರಲು ಬಿಡುವುದಿಲ್ಲ. ಮಹಾರಾಷ್ಟ್ರದಲ್ಲಿ ಅವರು ಏನು ಮ್ಯಾಜಿಕ್ ಮಾಡುತ್ತಾರೋ ನೋಡೇ ಬಿಡೋಣ ಎಂದು ಸವಾಲ್ ಹಾಕಿದ್ದರು. ಈ ಸವಾಲಿನಲ್ಲಿ ಈಗ ಶರದ್ ಪವಾರ್ ಗೆದ್ದಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶಿವಸೇನೆ ಮೈತ್ರಿಕೂಟ ಯಶಸ್ವಿಯಾಗಿ ಒಟ್ಟು 48 ಸ್ಥಾನಗಳ ಪೈಕಿ 41(23+18) ಕ್ಷೇತ್ರಗಳನ್ನು ಗೆದ್ದಾಗ ವಿಧಾನಸಭಾ ಚುನಾವಣೆಯಲ್ಲಿ ಎನ್‍ಸಿಪಿ, ಕಾಂಗ್ರೆಸ್ಸಿಗೆ ಹೀನಾಯ ಸೋಲು ಎಂದು ಮೊದಲೇ ವಿಶ್ಲೇಷಿಸಲಾಗಿತ್ತು. ಆದರೆ ಚುನಾವಣೆಯಲ್ಲಿ ಪವಾರ್ ಏಕಾಂಗಿಯಾಗಿ ಪಕ್ಷವನ್ನು ಮುನ್ನಡೆಸಿ ಮಳೆ ಬಂದರೂ ಭಾಷಣ ಮಾಡಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಎನ್‍ಸಿಪಿ 54 ಸ್ಥಾನವನ್ನು ಗೆದ್ದುಕೊಂಡಿತ್ತು. ಶಿವಸೇನೆ ಬಿಜೆಪಿ ಜೊತೆಗಿನ ಸಂಬಂಧ ಹಳಸಿದ ವಿಚಾರ ತಿಳಿಯುತ್ತಿದ್ದಂತೆ ಶರದ್ ಪವಾರ್ ಕಾಂಗ್ರೆಸ್ ಜೊತೆ ಸೇತುವೆಯಾಗಿ ನಿಂತು ಸರ್ಕಾರ ರಚಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

    ಸಾಧಾರಣವಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಪಕ್ಷಗಳು ನಾಯಕರ ವಿರುದ್ಧ ಕ್ರಮಕೈಗೊಳ್ಳುತ್ತಾರೆ. ಆದರೆ ಶಿಷ್ಯ ಅಜಿತ್ ಪವಾರ್ ತನ್ನ ತನ್ನ ವಿರುದ್ಧವೇ ಬಂಡಾಯ ಎದ್ದು ಹೋದರೂ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೇ ಭಾವನಾತ್ಮಕವಾಗಿ ಮರಳಿ ಪಕ್ಷಕ್ಕೆ ಬರುವಂತೆ ನೋಡಿಕೊಂಡರು. ಈ ಮೂಲಕ ಎಲ್ಲ ಶಾಸಕರನ್ನು ಹಿಡಿದಿಟ್ಟುಕೊಂಡು ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರ ಅಧಿಕಾರಕ್ಕೆ ಬರುವಂತೆ ನೋಡಿಕೊಂಡರು.

    ಲೋಕಸಭೆ ಚುನಾವಣೆಯ ನಂತರ 2017ರಲ್ಲಿ ಬಿಜೆಪಿ ದೇಶದ ಶೇ.71ರಷ್ಟು ಭಾಗಗಳಲ್ಲಿ ವಿಸ್ತರಿಸಿತ್ತು. ಆದರೆ ಈಗ ಶೇ.40 ರಷ್ಟು ಭಾಗದಲ್ಲಿ ಮಾತ್ರ ಇದೆ. ಮಿತ್ರರ ಮಧ್ಯೆ ಇರುವ ವಿರಸವನ್ನು ಲಾಭ ಮಾಡುವ ಮೂಲಕ ಶರದ್ ಪವಾರ್ ತಮ್ಮ ಚಾಣಕ್ಯ ಬುದ್ಧಿಯನ್ನು ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ವಿರೋಧಿ ಅಭಿಮಾನಿಗಳು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡುತ್ತಿರುವ ಬಿಜೆಪಿ ಅಭಿಮಾನಿಗಳು ಶಿವಸೇನೆಯ ಈಗ ಅಧಿಕಾರಕ್ಕೆ ಏರಿರಬಹುದು. ಆದರೆ ಮುಂದೆ ಖಂಡಿತ ಸರ್ವನಾಶವಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ 2014ರಲ್ಲಿ ಬಿಜೆಪಿ 282 ಸ್ಥಾನಗಳನ್ನು ಏಕಾಂಗಿಯಾಗಿ ಗೆದ್ದಿದ್ದರೆ 2019ರಲ್ಲಿ 303 ಸ್ಥಾನಗಳನ್ನು ಗೆದ್ದುಕೊಂಡಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಸ್ಪಷ್ಟವಾದ ಬಹುಮತ ಸಿಗುತಿತ್ತು. ಮೈತ್ರಿ ಧರ್ಮ ಪಾಲನೆ ಮಾಡಿದ ಶಿವಸೇನೆ ಈಗ ಕೈಕೊಟ್ಟಿದೆ ಎಂದು ತಿರುಗೇಟು ನೀಡುತ್ತಿದ್ದಾರೆ.

    ಬಿಹಾರದಲ್ಲಿ ಮಹಾಘಟಬಂಧನ್ ಒಡೆದು ಜೆಡಿಯು ಜೊತೆ ಮೈತ್ರಿ, ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜೊತೆ ಸರ್ಕಾರ, ಗೋವಾದಲ್ಲಿ ಬಹುಮತ ಇಲ್ಲದೇ ಇದ್ದರೂ ಸರ್ಕಾರ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಲೆ ಕೊನೆಗೆ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ನೀಡಿ ಸರ್ಕಾರ ರಚಿಸಿದ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಈಗ ಅಧಿಕಾರ ಸಿಗದೇ ಇದ್ದರೂ ಮುಂದಿನ ವರ್ಷಗಳಲ್ಲಿ ಅಧಿಕಾರಕ್ಕೆ ಖಂಡಿತವಾಗಿಯೂ ಏರುತ್ತದೆ ಎಂದು ಬಿಜೆಪಿ ಅಭಿಮಾನಿಗಳು ಹೇಳುತ್ತಿದ್ದಾರೆ. ಬಿಜೆಪಿ ವಿರೋಧಿಗಳು ಕೆಲವೊಮ್ಮೆ ವೈರಿಗಳನ್ನು ಮಣಿಸಬೇಕಾದರೆ ಸಿದ್ಧಾಂತದಲ್ಲಿ ರಾಜಿಯಾಗಬೇಕು. ರಾಜಿಯಾದ ತಕ್ಷಣ ಸಿದ್ಧಾಂತವನ್ನು ಪೂರ್ಣವಾಗಿ ಮರೆಯುವುದಲ್ಲ. ಸಿಕ್ಕಿದ ಅಧಿಕಾರವನ್ನು ಬಳಸಿಕೊಂಡು ವೈರಿಯನ್ನು ಮಟ್ಟ ಹಾಕುವುದೇ ಚಾಣಕ್ಯ ನೀತಿ. ಈ ತಂತ್ರಗಾರಿಕೆಯನ್ನು ಶರದ್ ಪವಾರ್ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡು ಬಿಜೆಪಿಯ ದಕ್ಷಿಣ ಭಾರತದ ಓಟಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ತಿರುಗೇಟು ನೀಡುತ್ತಿದ್ದಾರೆ.

    ಒಟ್ಟಿನಲ್ಲಿ ಈಗ ಮಹಾರಾಷ್ಟ್ರ ಸರ್ಕಾರ ರಚನೆಯಾದ ಬಳಿಕ ನಿಜವಾದ ಚಾಣಕ್ಯ ಯಾರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದ್ದು ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ.