Tag: chamundibetta

  • ನಂದಿಬೆಟ್ಟ, ಚಾಮುಂಡಿಬೆಟ್ಟ, ಬೇಲೂರು, ಹಳೇಬೀಡಿಗೆ ಕೆಎಸ್‍ಟಿಡಿಸಿಯಿಂದ ಪ್ರವಾಸ ಆಯೋಜನೆ

    ನಂದಿಬೆಟ್ಟ, ಚಾಮುಂಡಿಬೆಟ್ಟ, ಬೇಲೂರು, ಹಳೇಬೀಡಿಗೆ ಕೆಎಸ್‍ಟಿಡಿಸಿಯಿಂದ ಪ್ರವಾಸ ಆಯೋಜನೆ

    ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎರಡು ವಿಶೇಷ ಪ್ರವಾಸವನ್ನು ಆಯೋಜಿಸಿದೆ.

    ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಕೈಗೆಟಕುವ ದರದಲ್ಲಿ ನಂದಿಬೆಟ್ಟ ಮತ್ತು ಮೈಸೂರು, ಹಾಸನ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸವನ್ನು ಆಯೋಜಿಸಿದೆ. ಏಪ್ರಿಲ್ 1ರಿಂದ ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.

    1.ಬೆಂಗಳೂರು-ದೇವನಹಳ್ಳಿ-ನಂದಿಬೆಟ್ಟ ಪ್ರವಾಸ: ಒಂದು ದಿನದ ಪ್ರವಾಸವಾಗಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ಈ ಪ್ರವಾಸವನ್ನು ಆಯೋಜಿಸಲಾಗುತ್ತಿದೆ. ಈ ಪ್ರವಾಸವು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ನಿರ್ಗಮಿಸಿ ದೇವನಹಳ್ಳಿ ಕೋಟೆ-ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ಜನ್ಮಸ್ಥಳ-ನಂದಿಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ಸಾಯಂಕಾಲ 5 ಗಂಟೆವರೆಗೆ ನಂದಿಬೆಟ್ಟದ ವೀಕ್ಷಣೆ ಮಾಡುವ ವ್ಯವಸ್ಥೆ ಇರುತ್ತದೆ. ಈ ಪ್ರವಾಸದ ದರವು ಪ್ರತಿಯೊಬ್ಬರಿಗೆ ಊಟದ ವ್ಯವಸ್ಥೆ ಸೇರಿ 700 ರೂ. ಆಗಿರುತ್ತದೆ.

    2.ಬೆಂಗಳೂರು-ಮೈಸೂರು-ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ-ಪ್ರವಾಸ: ಇದು 2 ದಿನಗಳ ಪ್ರವಾಸವಾಗಿದ್ದು, ಮೊದಲನೆ ದಿನ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಶ್ರೀರಂಗಪಟ್ಟಣ-ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆ.ಆರ್ ಸಾಗರ ವೀಕ್ಷಣೆ ಮತ್ತು ಕೆ.ಆರ್ ಸಾಗರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡನೇ ದಿನ ಬೆಳಿಗ್ಗೆ ಕೆ.ಆರ್ ಸಾಗರದಿಂದ ಹೊರಟು ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ ವೀರನಾರಾಯಣಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡುವ ವ್ಯವಸ್ಥೆ ಇದೆ. ಈ ಪ್ರವಾಸದ ದರವು ಊಟದ ವ್ಯವಸ್ಥೆ ಸೇರಿ ಪ್ರತಿಯೊಬ್ಬರಿಗೆ 1,900 ರೂ. ಆಗಿದೆ.

    ಪ್ರವಾಸಿಗರು ಇದೇ ರೀತಿ ಮುಂಬರುವ ಬೇಸಿಗೆ ರಜೆ ಹಿನ್ನೆಲೆಯಲ್ಲಿ ನಿಗಮದಿಂದ ಮೈಸೂರು-ಊಟಿ-ಕೊಡೆಕೆನಾಲ್-ಕೊಡಗಿನ ಪ್ರವಾಸಿ ಸ್ಥಳಗಳಿಗೆ ಬೇಡಿಕೆಗೆ ಅನುಗುಣವಾಗಿ ಪ್ರವಾಸಗಳನ್ನು ಆಯೋಜಿಸಲಾಗಿದೆ. ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಲು, ಬುಕ್ಕಿಂಗ್ ಗಾಗಿ
    www.kstdc.co  ವೆಬ್ ಸೈಟ್ ಹಾಗೂ ದೂರವಾಣಿ ಸಂಖ್ಯೆ – 89706 50070, 080-43344334 ಸಂಪರ್ಕಿಸಬಹುದಾಗಿದೆ.

  • ಚಾಮುಂಡಿ ಬೆಟ್ಟದಲ್ಲಿ ಮಹಾರಥೋತ್ಸವ- ರಥ ಎಳೆದ ಮಹಾರಾಜ ಯದುವೀರ್

    ಚಾಮುಂಡಿ ಬೆಟ್ಟದಲ್ಲಿ ಮಹಾರಥೋತ್ಸವ- ರಥ ಎಳೆದ ಮಹಾರಾಜ ಯದುವೀರ್

    ಮೈಸೂರು: ಚಾಮುಂಡಿಬೆಟ್ಟದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಿಯ ಮಹಾರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಇಂದು ಮುಂಜಾನೆಯೇ ಬೆಟ್ಟಕ್ಕೆ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿ ಯದುವಂಶದ ರಾಜ ಯದುವೀರ್ ದೇವಿಯ ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.

    ರಥೋತ್ಸವ ಬಳಿಕ ಮಾತನಾಡಿದ ರಾಜಮಾತೆ ಪ್ರಮೋದಾ ದೇವಿ, ಸುಸೂತ್ರವಾಗಿ ದಸರಾ ಆಚರಣೆ ನಂತರ ಚಾಮುಂಡಿಗೆ ಪೂಜೆ ಸಲ್ಲಿಸುವ ಸಲುವಾಗಿ ನಡೆಯುವ ರಥೋತ್ಸವ ಇದಾಗಿದೆ. ಈ ಬಾರಿ ದಸರಾ ಉತ್ಸವ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನೆರವೇರಿದೆ. ಸಂಪ್ರದಾಯದಂತೆ ಇಂದು ಮಹಾರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ. ಬೆಟ್ಟದಲ್ಲಿ ದೀಪೋತ್ಸವ ನಡೆದ ಮೇಲೆ ನಮ್ಮ ದಸರಾ ಸಮಾಪ್ತಿಯಾಗಲಿದೆ ಎಂದು ಹೇಳಿದರು.

    ಇನ್ನು ಈ ಬಾರಿ ದಸರಾಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ. ಹೀಗಾಗಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದೇವೆ. ತಾಯಿ ಚಾಮುಂಡಿ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗುತ್ತಾರೆ. ಈ ಪೂಜೆಯ ಮೂಲಕ ರಾಜ್ಯದಲ್ಲಿ ಮಳೆ ಬೆಳೆಯಾಗಿ ರಾಜ್ಯದ ಜನರು ಉತ್ತಮವಾದ ಜೀವನ ನಡೆಸಲಿ ಎಂದರು.

    ಇನ್ನು ರಾಣಿ ತ್ರಿಷಿಕಾ ಸೀಮಂತ ಕಾರ್ಯದ ಬಗ್ಗೆ ಮಾತನಾಡಿದ ಪ್ರಮೋದಾ ದೇವಿ, ಸೀಮಂತ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ರಾಜಮನೆತದ ಸೀಮಂತ ಕಾರ್ಯದ ಬಗ್ಗೆ ಒಂದಷ್ಟು ಜನರು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ. ಸಂಪ್ರದಾಯಗಳ ಪ್ರಕಾರ ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಸೀಮಂತ ಕಾರ್ಯಕ್ರಮ ನಡೆಯುವುದಿಲ್ಲ. ಅದು ತೀರಾ ಖಾಸಗಿಯಾಗಿರುವುದರಿಂದ ಇಲ್ಲಿ ಆ ಬಗ್ಗೆ ಚರ್ಚೆ ಬೇಡ ಎಂದರು.

    ಬಳಿಕ ಮಾತನಾಡಿದ ರಾಜ ಯದುವೀರ್, ಈ ಬಾರಿ ದಸರಾ ಯಶಸ್ವಿಯಾಗಿ ಆಚರಣೆ ಮಾಡಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಕೂಡ ಸಮಯಕ್ಕೆ ಸರಿಯಾಗಿ ನೇರವೇರಿವೆ. ಯಾವುದೇ ಅಡಚಣೆಗಳಿಲ್ಲದೇ ನೆರವೇರಿದೆ. ವಿಶ್ವವಿಖ್ಯಾತ ದಸರಾ ಸುಸೂತ್ರವಾಗಿ ನೆರವೇರಿದ್ದು ನಮಗೆ ಸಂತೋಷ ತಂದಿದೆ. ದಸರಾ ಬಳಿಕ ಚಾಮುಂಡಿ ಬೆಟ್ಟದಲ್ಲಿರುವ ದೇವಿಗೆ ರಥೋತ್ಸವದ ಮೂಲಕ ಗೌರವ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ ಎಂದರು.

    ಇನ್ನು ರಥೋತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಭಕ್ತರು ರಥ ಚಲಿಸುತ್ತಿದ್ದಂತೆ ಹರ್ಷೋದ್ಗಾರದಿಂದ ಜೈಕಾರ ಹಾಕಿ ಸಂಭ್ರಮಿಸಿದರು. ಜೊತೆಗೆ ರಥ ದೇವಾಲಯದ ಸುತ್ತಾ ಒಂದು ಸುತ್ತು ಹಾಕಿತು. ಇದೇ ವೇಳೆ ರಥೋತ್ಸವ ಆರಂಭವಾಗುತ್ತಿದ್ದಂತೆ ಪೊಲೀಸರು 21 ಸುತ್ತು ಕುಶಾಲತೋಪು ಸಿಡಿಸಿ ಚಾಮುಂಡೇಶ್ವರಿಗೆ ಗೌರವ ಸಲ್ಲಿಸಿದರು.

  • ಬೆಂಗ್ಳೂರಾಯ್ತು ಇದೀಗ ಮೈಸೂರು ಸರದಿ- ವಿದೇಶಿ ಮಹಿಳೆಯ ತುಟಿ ಕಚ್ಚಿದ ಕಾಮುಕ

    ಬೆಂಗ್ಳೂರಾಯ್ತು ಇದೀಗ ಮೈಸೂರು ಸರದಿ- ವಿದೇಶಿ ಮಹಿಳೆಯ ತುಟಿ ಕಚ್ಚಿದ ಕಾಮುಕ

    ಮೈಸೂರು: ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಸುದ್ದಿಯಾದ ಬೆನ್ನಲ್ಲೇ ಇದೀಗ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕಾಮುಕನೊಬ್ಬ ವಿದೇಶಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಜಿಲ್ಲೆಯ ಚಾಮುಂಡಿ ಬೆಟ್ಟದ ನಂದಿ ಬಳಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಜರ್ಮನಿ ದೇಶದ ಮಹಿಳೆ ಪ್ರವಾಸಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಬಂದಿದ್ದು, ಬೆಟ್ಟದಿಂದ ಮೆಟ್ಟಿಲುಗಳನ್ನು ಇಳಿದುಕೊಂಡು ಬರುತ್ತಿದ್ದ ವೇಳೆ ಕಾಮುಕ ಮಹಿಳೆಯ ತುಟಿ ಹಾಗೂ ಮೈ ಕಚ್ಚಿದ್ದಾನೆ. ಮಾತ್ರವಲ್ಲದೇ ಅವರ ಬಳಿಯಿದ್ದ 2,500 ರೂ. ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

    ಈ ಬಗ್ಗೆ ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸ್ರು ಬಲೆ ಬೀಸಿದ್ದಾರೆ.