Tag: chamundi hills

  • ಆಣೆ ಮಾಡಿ ಕಣ್ಣೀರು ಹಾಕಿದ ಮಹೇಶ್ – ಸಾರಾ ವಿರುದ್ಧ ವಿಶ್ವನಾಥ್ ಮತ್ತೆ ಕಿಡಿ

    ಆಣೆ ಮಾಡಿ ಕಣ್ಣೀರು ಹಾಕಿದ ಮಹೇಶ್ – ಸಾರಾ ವಿರುದ್ಧ ವಿಶ್ವನಾಥ್ ಮತ್ತೆ ಕಿಡಿ

    ಮೈಸೂರು: ಹುಣಸೂರಿನ ಅನರ್ಹ ಶಾಸಕ ಎಚ್ ವಿಶ್ವನಾಥ್ ಮತ್ತು ಮಾಜಿ ಸಚಿವ ಸಾರಾ ಮಹೇಶ್ ಇಬ್ಬರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರೂ ಇಂದು ಮಹೇಶ್ ಕಣ್ಣೀರು ಹಾಕಿ ಆಣೆ ಮಾಡಿ ತೆರಳಿದ್ದಾರೆ.

    ಗುರುವಾರ ಬೆಳಗ್ಗೆ 9 ಗಂಟೆಗೆ ಇಬ್ಬರು ಚಾಮುಂಡೇಶ್ವರಿ ಮುಂದೆ ಆಣೆ ಪ್ರಮಾಣ ಮಾಡುವುದಾಗಿ ಹೇಳಿದ್ದರಿಂದ ಇಂದು ಏನಾಗುತ್ತದೆ ಎನ್ನುವ ಕುತೂಹಲ ಮೂಡಿತ್ತು. 8 ನಿಮಿಷ ಮೊದಲು ಅಂದರೆ 8:52ಕ್ಕೆ ವಿಶ್ವನಾಥ್ ಮೊದಲಿಗರಾಗಿ ಬೆಟ್ಟಕ್ಕೆ ಆಗಮಿಸಿ ದೇವಾಲಯ ಪ್ರವೇಶಿಸಿದರು.

    ದೇವಾಲಯದ ಮುಂಭಾಗ ನಿಂತ ವಿಶ್ವನಾಥ್ ಅವರು ಪೂಜೆ ಮಾಡಿ ಹೊರ ಬಂದರು. ವಿಶ್ವನಾಥ್ ಹೊರ ಬಂದ ಬೆನ್ನಲ್ಲೇ ಸಾರಾ ಮಹೇಶ್ ದೇವಾಲಯ ಪ್ರವೇಶಿಸಿದರು. ಸಾರಾ ಮಹೇಶ್ ದೇವಾಲಯ ಪ್ರವೇಶಿಸಿದ ವಿಚಾರ ತಿಳಿದ ವಿಶ್ವನಾಥ್ ಹೊರಗಡೆ ಅವರಿಗಾಗಿ ಕಾಯುತ್ತಾ ಕುಳಿತಿದ್ದರು. ಸುಮಾರು ಒಂದು ಗಂಟೆಗಳ ಕಾಲ ಮಹೇಶ್ ಅವರಿಗಾಗಿ ವಿಶ್ವನಾಥ್ ಹೊರಗಡೆ ಕುಳಿತಿದ್ದರು. ಒಂದು ಗಂಟೆ ಕಾದರೂ ಮಹೇಶ್ ಮಾತ್ರ ದೇವಾಲಯದ ಒಳಗಡೆಯಿಂದ ಬರಲೇ ಇಲ್ಲ. ಮಹೇಶ್ ಅವರು ಬಾರದ ಕಾರಣ ವಿಶ್ವನಾಥ್ ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿ ತೆರಳಿದರು. ವಿಶ್ವನಾಥ್ ಹೋದ ನಂತರ ಸಾರಾ ಮಹೇಶ್ ದೇವಾಲಯದಿಂದ ಹೊರ ಬಂದರು. ಇದನ್ನೂ ಓದಿ: ನನ್ನ ಮಾತನ್ನು ತಿರುಚಬೇಡಿ, ಯಾವುದೇ ಆಣೆ ಪ್ರಮಾಣ ಮಾಡಲು ನಾನು ಬಂದಿಲ್ಲ: ವಿಶ್ವನಾಥ್

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬದಲಾದಂತಹ ರಾಜಕೀಯ ಪರಿಸ್ಥಿತಿಯಲ್ಲಿ ನಮ್ಮ ಪಕ್ಷದ ಮೂರು ಜನ ಶಾಸಕರು ಹೋಗಿದ್ದಾರೆ. ನಾನು ಯಾರ ಬಗ್ಗಯೂ ಚರ್ಚೆ ಮಾಡಿಲ್ಲ. ಆದರೆ ಇವರು ಹೋದ ನಂತರ ಹಾಗೂ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ನನ್ನನ್ನು ಟೀಕಿಸಿದ್ದರು. ಆದಾದ ನಂತರ ಮುಂಬೈಯಿಂದ ಕೂಡ ಎರಡು ಬಾರಿ ನನ್ನ ಬಗ್ಗೆ ಮಾತನಾಡಿದ್ದರು. ನಂತರ ವಿಧಾನಸಭೆಯಲ್ಲಿ ನನ್ನ ಜೊತೆ ಮಾತನಾಡಿದ್ದನ್ನು ಉಲ್ಲೇಖ ಮಾಡಿದ್ದರು. ಆದಾದ ಬಳಿಕವೂ ಅವರು ನನ್ನ ಬಗ್ಗೆ ಟೀಕೆ ಮಾಡಿದ್ದರು ಎಂದು ದೂರಿದ್ದರು.

    ನೀವು ನನ್ನ ಜೊತೆ ಚರ್ಚೆ ಮಾಡಿದ್ದೀರಿ. ಮಂತ್ರಿ ಬೇಡ ಎಂದು ಹೇಳಿದ್ದೀರಿ. ನನಗೆ ಒತ್ತಡ ಇದೆ. ಈ ವಯಸ್ಸಿನಲ್ಲಿ ಅಂತಹ ಕೆಲಸ ಮಾಡಲ್ಲ ಎಂದು ಹೇಳಿದ್ದೀರಿ. ಹಾಗಿದ್ದರೆ ಈಗ ಯಾವ ಅಂಶಕ್ಕೆ ಬಲಿ ಆಗಿದ್ದೀರಿ. ಅದನ್ನು ಬಂದು ಪ್ರಮಾಣ ಮಾಡಿ ಎಂದು ಕೇಳಿದ್ದೆ. ಮೊದಲು ಅವರು ಸಂವಿಧಾನ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ. ನಾವು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಕರ್ತವ್ಯ ನಿಷ್ಠೆ ಮತ್ತು ನಂಬಿಕೆ ಮೇಲೆ ಗೌರವ ಇದ್ದಿದ್ದರೆ ಅವರು ರಾಜೀನಾಮೆ ನೀಡುತ್ತಿರಲಿಲ್ಲ. ಆದರೆ ಈಗ ಕೊಟ್ಟಿದ್ದಾರೆ. ಹಾಗಾಗಿ ನಾನು ಅವರನ್ನು ದೇವಸ್ಥಾನಕ್ಕೆ ಕರೆದಿದ್ದೇನೆ ಎಂದು ಹೇಳಿದ್ದಾರೆ.

    ಮೊದಲು ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ನಮ್ಮ ಸಾರ್ವಜನಿಕ ಬದುಕು ಹಾಗೂ ವೈಯಕ್ತಿಕ ಬದುಕು ಎರಡು ಚೆನ್ನಾಗಿರಬೇಕು. ನಾನು ನಿಮ್ಮ ಮೇಲೆ ಮಾಡಿದ ಆರೋಪ ಸುಳ್ಳು ಎಂದರೆ ಪ್ರಮಾಣ ಮಾಡಿ. ಇಲ್ಲವೆಂದರೆ ವೈಯಕ್ತಿಕವಾಗಿ ಮಾಡಿದ ಆರೋಪ ನಿಜವೆಂದು ಸಾಬೀತು ಮಾಡಲಿ. ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದೇನೆ. ನಾನು ಏನೂ ಎಂಬುದು ವಿಶ್ವನಾಥ್‍ಗೆ ಸಾರ್ವಜನಿಕವಾಗಿ ಹೇಳಿದ್ದೆ. ಮೊದಲು ಅವರು ಪ್ರಮಾಣ ಮಾಡಲಿ. ನಂತರ ಅವರನ್ನು ಖರೀದಿಸುವವರನ್ನು ಕರೆದುಕೊಂಡು ಬರೋಣ ಎಂದರು.

    ಇದೇ ವೇಳೆ ನಾನು ಕುರುಬ ಸಮುದಾಯದವನೂ ಎಂದು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬ ವಿಶ್ವನಾಥ್ ಹೇಳಿಕೆಗೂ ಸಾರಾ ತಿರುಗೇಟು ನೀಡಿದ್ದಾರೆ. ಇಷ್ಟು ದಿನ ಇಲ್ಲದ ಈ ಮಾತು ಈಗ ಯಾಕೆ ಬಂತು? ಎಂಬುದು ನನಗೆ ಗೊತ್ತಿಲ್ಲ. ನಮ್ಮ ಸಮಾಜದವರು ಇದ್ದರೂ ನಾವು ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿ ರಾಜ್ಯಾಧ್ಯಕ್ಷ ಮಾಡಿರಲಿಲ್ವಾ? ಆಗ ನಮಗೆ ಅವರ ಜಾತಿ ಗೊತ್ತಿರಲಿಲ್ವಾ? ಅವರು ಮೊದಲು ಪ್ರಮಾಣ ಮಾಡಲಿ. ಈಗ ಈ ಬಗ್ಗೆ ಅವರು ಯಾಕೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದು ವಿಶ್ವನಾಥ್ ಆರೋಪಕ್ಕೆ ಸಾರಾ ಮಹೇಶ್ ಪ್ರತಿಕ್ರಿಯಿಸಿದರು.

    ಈ ಬೆಳವಣಿಗೆ ಆದ ನಂತರ ನಾನು ಸ್ಪೀಕರ್‍ರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದೇನೆ. ಮೊದಲಿನಿಂದಲೂ ನನ್ನ ಹಾಗೂ ಸ್ಪೀಕರ್ ಸಂಬಂಧ ಚೆನ್ನಾಗಿರುವ ಕಾರಣ ಅವರು ಎರಡು ಬಾರಿ ನನ್ನನ್ನು ಕರೆದು ಸಮಾಧಾನ ಮಾಡಿ ವಾಪಸ್ ಕಳುಹಿಸಿದ್ದರು. ನಾನು ರಾಜಕೀಯ ವಿಷಯದಲ್ಲಿ ವೈಯಕ್ತಿವಾಗಿ ಯಾವತ್ತೂ ಯಾರಿಗೂ ಟೀಕೆ ಮಾಡಿಲ್ಲ. ಅವರು ನನ್ನಿಂದ ರಾಜೀನಾಮೆ ನೀಡಿಲ್ಲ. ಬದಲಿಗೆ ಅವರು ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಮಹೇಶ್ ತಿಳಿಸಿದರು.

    ನನ್ನ ರಾಜೀನಾಮೆ ಬಗ್ಗೆ ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ನನಗೆ ತಿಳಿ ಹೇಳಿದ್ದಾರೆ. ರಾಜಕೀಯದಲ್ಲಿ ಇದೆಲ್ಲ ಸಹಜ ಎಂದು ಹೇಳಿದ್ದಾರೆ. ಮಂಗಳವಾರ ನಾನು ಸ್ಪೀಕರ್ ಜೊತೆ ಮಾತನಾಡಿದ್ದೇನೆ. ಎರಡ್ಮೂರು ದಿನದಲ್ಲಿ ಹೇಳುತ್ತೇನೆ ಎಂದು ಸಾರಾ ಮಹೇಶ್ ಹೇಳಿದರು.

  • ಮೈಸೂರಿನಲ್ಲಿ ನಾಳೆಯಿಂದ ದಸರಾ ಮಹೋತ್ಸವ ಆರಂಭ

    ಮೈಸೂರಿನಲ್ಲಿ ನಾಳೆಯಿಂದ ದಸರಾ ಮಹೋತ್ಸವ ಆರಂಭ

    ಮೈಸೂರು: ಭಾನುವಾರದಿಂದ ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ಷರಶಃ ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಹಾಗೂ ಮನರಂಜನೆ ಪೂರಿತ ವಾತಾವರಣ ನಿರ್ಮಾಣವಾಗಲಿದೆ. ಏಕೆಂದರೆ ನಾಳೆಯಿಂದ ದಸರಾ ಮಹೋತ್ಸವ ಆರಂಭವಾಗಲಿದೆ.

    ಮೈಸೂರು ದಸರಾ ಮಹೋತ್ಸವ ವಿಶ್ವವನ್ನೇ ತನ್ನತ್ತ ಸೆಳೆದುಕೊಂಡು ತನ್ನ ವೈವಿಧ್ಯಮಯವಾದ ಆಚರಣೆಗಳನ್ನು ಜಗತ್ತಿಗೆ ತೋರ್ಪಡಿಸುತ್ತದೆ. ಭಾನುವಾರದಿಂದ ಮೈಸೂರಿನಲ್ಲಿ ದಸರಾ ಮೆರಗು ತುಂಬಲಿದೆ. ಈ ಮೆರುಗಿಗೆ ಸಾಹಿತಿ ಎಸ್.ಎಲ್ ಭೈರಪ್ಪ ಅವರು ಭಾನುವಾರ ಬೆಳಗ್ಗೆ 9.39ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿ ಬೆಟ್ಟದಲ್ಲಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಚರಣೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

    ದಸರಾ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಜರುಗಲಿದ್ದು, ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಸಂಪುಟದ ಸಚಿವರು, ಸಂಸದರು, ಶಾಸಕರು ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.

    ಒಂದು ಕಡೆ ಭಾನುವಾರ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತರೆ, ಇತ್ತ ಮೈಸೂರು ಅಂಬ ವಿಲಾಸ ಅರಮನೆಯಲ್ಲಿ ಯದುವಂಶದ ಅರಸ ಯದುವೀರ ಕೃಷ್ಣದತ್ತ ಒಡೆಯರ್ ಅವರು ಖಾಸಗಿ ದರ್ಬಾರನ್ನು ಆರಂಭಿಸಲಿದ್ದಾರೆ. ಇದಲ್ಲದೇ ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಸಹ ಜರುಗುಲಿವೆ. ಇನ್ನೊಂದೆಡೆ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ನಗರಾದ್ಯಂತ 10 ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಿಗೂ ಸಹ ಚಾಲನೆ ನೀಡಲಾಗುತ್ತದೆ.

    ಭಾನುವಾರದಿಂದ ಹತ್ತು ದಿನಗಳ ಸಾಂಸ್ಕೃತಿಕ ನಗರಿ ಮೈಸೂರು ಮಧುವಣಗಿತ್ತಿಯಂತೆ ಅಲಂಕಾರಗೊಂಡು, ತನ್ನ ಸಂಸ್ಕೃತಿಯನ್ನು ಬಿತ್ತರಿಸುವ ಮೂಲಕ ಜನರಿಗೆ ಧಾರ್ಮಿಕ, ಪಾರಂಪರೆಯ ಜೊತೆಗೆ ಮನರಂಜನೆಯ ಬೆಳಕನ್ನೂ ಸಹ ಚೆಲ್ಲಲಿದೆ.

  • ಮಿಮ್ಸ್ ನೋಡಿ ಯುವ ಬ್ರಿಗೇಡ್‍ನಿಂದ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ

    ಮಿಮ್ಸ್ ನೋಡಿ ಯುವ ಬ್ರಿಗೇಡ್‍ನಿಂದ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ

    ಬೆಂಗಳೂರು: ಚಾಮುಂಡಿ ಬೆಟ್ಟ ಹತ್ತಿ ಮೈಸೂರಿನ ಯುವ ಬ್ರಿಗೇಡಿನ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

    ಈ ಬಗ್ಗೆ ಟೀಂ ಮೋದಿ ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ತಮ್ಮ ಟ್ಟಿಟ್ಟರಿನಲ್ಲಿ ಸ್ವಯಂಸೇವಕರು ಸ್ವಚ್ಛತಾ ಕೆಲಸ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಮೈಸೂರು ಮಿಮ್ಸ್ ಹೆಸರಿನಲ್ಲಿರುವ ಟ್ವಿಟ್ಟರ್ ಖಾತೆ ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್‍ನಲ್ಲಿರುವ ಜಾಗದಲ್ಲಿ ಬರೆದಿದ್ದ ಫೋಟೋಗಳನ್ನು ಅಪ್ಲೋಡ್ ಮಾಡಿತ್ತು. ಈ ರೀತಿಯಾಗಿ ಸಾರ್ವಜನಿಕ ಸ್ಥಳಗಳನ್ನು ಮಲೀನ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂಸದ ಪ್ರತಾಪ್ ಸಿಂಹ, ಸಚಿವ ಜಿಟಿ ದೇವೇಗೌಡ, ತನ್ವೀರ್ ಸೇಠ್ ಮತ್ತು ಮೈಸೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಟ್ಯಾಗ್ ಮಾಡಿ ಜನವರಿ 9ರ ಬೆಳಗ್ಗೆ 9.10ಕ್ಕೆ ಟ್ವೀಟ್ ಮಾಡಿತ್ತು.

    ಈ ಟ್ವೀಟ್ ಗಮನಿಸಿದ ಮೈಸೂರಿನ ಯುವ ಬ್ರಿಗೇಡ್ ಕಾರ್ಯಕರ್ತರು 2 ಗಂಟೆಯ ಒಳಗಡೆ ಸ್ಥಳಕ್ಕೆ ತೆರಳಿ ಬಣ್ಣ ಬಳಿದು ಎಲ್ಲ ಗೋಡೆ ಬರಹಗಳನ್ನು ಅಳಿಸಿ ಜಾಗವನ್ನು ಸುಂದರಗೊಳಿಸಿದ್ದಾರೆ.

    ಮಿಮ್ಸ್ ಗಳನ್ನು ನೋಡಿ ಸಾಕಷ್ಟು ಜನ ಇದಕ್ಕೆ ಲೈಕ್ಸ್ ಕೊಡುತ್ತಾರೆ ಹಾಗೂ ಶೇರ್ ಮಾಡುತ್ತಾರೆ. ಆದರೆ ಯುವ ಬ್ರಿಗೇಡ್ ಮೈಸೂರು ಸ್ವಯಂಸೇವಕರು ವಿಚಾರ ತಿಳಿದು 2 ಗಂಟೆಯಲ್ಲಿ ಚಾಮುಂಡಿ ಬೆಟ್ಟವನ್ನು ಹತ್ತಿದ್ದಾರೆ. ಬಳಿಕ ಅಲ್ಲಿನ ಬಂಡೆಕಲ್ಲು ಮೇಲೆ ಜನರು ಹೆಸರು ಬರೆದಿರುವುದನ್ನು ನೋಡಿ ಅದಕ್ಕೆ ಪೇಂಟ್ ಮಾಡಿದ್ದಾರೆ. ಸಮಸ್ಯೆಯನ್ನು ದೂರುವುದು ಸಹಜ. ಆದರೆ ಭಾಗವಾಗಿದ್ದುಕೊಂಡು ಸಮಸ್ಯೆ ಪರಿಹಾರ ಮಾಡುವುದು ಗ್ರೇಟ್ ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ.

    ಸ್ವಯಂ ಸೇವಕರ ಈ ಕಾರ್ಯ ನೋಡಿ ಸ್ಥಳೀಯರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಚಾಮುಂಡಿಬೆಟ್ಟ ಏರಿ ದೇವಿಯ ದರ್ಶನ ಪಡೆದ ಪವರ್‌ಸ್ಟಾರ್

    ಚಾಮುಂಡಿಬೆಟ್ಟ ಏರಿ ದೇವಿಯ ದರ್ಶನ ಪಡೆದ ಪವರ್‌ಸ್ಟಾರ್

    ಮೈಸೂರು: ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಚಾಮುಂಡಿ ಬೆಟ್ಟದ 1,000 ಮೆಟ್ಟಿಲು ಏರಿ ಚಾಮುಂಡಿ ದರ್ಶನ ಪಡೆದಿದ್ದಾರೆ.

    ಇಂದು ಪುನೀತ್ ರಾಜ್‍ಕುಮಾರ್ ಮೈಸೂರಿಗೆ ಆಗಮಿಸಿದರು. ಮೈಸೂರಿಗೆ ಭೇಟಿ ನೀಡಿದಾಗಲೆಲ್ಲ ಪುನೀತ್ ರಾಜ್‍ಕುಮಾರ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿರುತ್ತಾರೆ. ಹಾಗೆಯೇ ಇಂದು ಕೂಡ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿದರು.

    ಪ್ರತಿ ಬಾರಿ ಪುನೀತ್ ರಾಜ್‍ಕುಮಾರ್ ಬೆಟ್ಟ ಏರಿ ದೇವಿಯ ದರ್ಶನ ಪಡೆಯುತ್ತಿದ್ದರು. ಹಾಗೆಯೇ ಇಂದು ಕೂಡ ಪುನೀತ್ ತಮ್ಮ ಆಪ್ತರೊಂದಿಗೆ ಬೆಟ್ಟದ 1000 ಮೆಟ್ಟಿಲು ಏರಿ ಚಾಮುಂಡಿ ದರ್ಶನ ಪಡೆದಿದ್ದಾರೆ. ಈ ವೇಳೆ ಪುನೀತ್ ಟಿ-ಶರ್ಟ್ ಕ್ಯಾಪ್ ಧರಿಸಿ ಸಾಮಾನ್ಯರಂತೆ ಬೆಟ್ಟ ಏರಿದ್ದಾರೆ.

    ಈ ಹಿಂದೆ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಮಹಿಳಾ ಪುನರ್ವಸತಿ ಶಕ್ತಿಧಾಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಪುನೀತ್ ಭೇಟಿ ನೀಡಿದ್ದರು. ಈ ವೇಳೆ ಅವರು ಕಾರ್ಯಕ್ರಮ ಮುಗಿಸಿ ಬರಿಗಾಲಲ್ಲಿ ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲು ಹತ್ತಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದರು.

  • ಚಾಮುಂಡಿ ಬೆಟ್ಟಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ಚಾಮುಂಡಿ ಬೆಟ್ಟಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ಮೈಸೂರು: ಜಿಲ್ಲೆಯ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬೆಂಕಿ ಇಂದ ಸುಟ್ಟು ಕರಕಲಾಗಿದ್ದ ಮರಗಳ ಬೂದಿಯ ನಡುವೆ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

    ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗು ಸ್ವಯಂ ಸೇವಕರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಆದರೆ ಬೆಂಕಿಯಿಂದ ಸುಟ್ಟು ಹೋಗಿದ್ದ ಮರಗಳ ಬೂದಿಯ ನಡುವೆ ಅರೆ ಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

    ಬೆಂಕಿ ನಂದಿಸಲು ಸ್ವಯಂ ಸೇವಕರು ಬೆಟ್ಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಗಾಬರಿಗೊಂಡು ಓಡಿ ಬಂದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಕೆಆರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬೆಟ್ಟದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಕಾರಣ ಅಗ್ನಿಶಾಮಕ ದಳದ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಈ ನಡುವೆಯೇ ಮಹಿಳೆ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಹಿಳೆ ಕೊಲೆಗೈದು ಸುಟ್ಟು ಹಾಕುವ ಉದ್ದೇಶದಿಂದ ಬೆಟ್ಟಕ್ಕೆ ಬೆಂಕಿ ಇಟ್ಟರೋ? ಅಥವಾ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ? ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕೆಆರ್ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೈಯಕ್ತಿಕ ಟೀಕೆಯಿಂದ ನನ್ನ ಇಲ್ಲಿಂದ ಓಡಿಸಲು ಸಾಧ್ಯವಿಲ್ಲ: ಸುಮಲತಾ

    ವೈಯಕ್ತಿಕ ಟೀಕೆಯಿಂದ ನನ್ನ ಇಲ್ಲಿಂದ ಓಡಿಸಲು ಸಾಧ್ಯವಿಲ್ಲ: ಸುಮಲತಾ

    ಮೈಸೂರು: ಮಂಡ್ಯ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಚುನಾವಣಾ ಸ್ಪರ್ಧೆಗಾಗಿ ಚಾಮುಂಡಿ ಮೊರೆ ಹೋಗಿದ್ದಾರೆ.

    ಸುಮಲತಾ ಅಂಬರೀಶ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, “ವೈಯಕ್ತಿಕ ಟೀಕೆಯಿಂದ ನನ್ನ ಇಲ್ಲಿಂದ ಓಡಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

    ಅಂಬರೀಶ್ ಅವರು ತನ್ನ ಕುಟುಂಬದವರನ್ನು ರಾಜಕಾರಣಕ್ಕೆ ತರಬೇಕೆಂದು ಬಯಸಿರಲಿಲ್ಲ. ಅವರು ಇದ್ದಿದ್ದರೆ ನಾನು ರಾಜಕಾರಣಕ್ಕೆ ಬರುವ ಪ್ರಶ್ನೆಯೇ ಇರುತ್ತಿರಲಿಲ್ಲ. ವೈಯಕ್ತಿಕ ಟೀಕೆಯಿಂದ ನನ್ನ ಇಲ್ಲಿಂದ ಓಡಿಸಲು ಸಾಧ್ಯವಿಲ್ಲ. ಕೆಲವರ ವೈಯಕ್ತಿಕ ಟೀಕೆಯಿಂದ ನಾನು ಗಟ್ಟಿಯಾಗುತ್ತಿದ್ದೇನೆ. ಅಲ್ಲದೇ ವೈಯಕ್ತಿಕ ಟೀಕೆಗಳು ನೋವು ತಂದಿವೆ ಎಂದು ಹೇಳಿದ್ದಾರೆ.

    ಟೀಕೆ ಮಾಡುವುದನ್ನು ನಾನು ನಿರೀಕ್ಷಿಸಿದ್ದೆ. ಆದರೆ ತೀರಾ ಹತ್ತಿರದವರು ವೈಯಕ್ತಿಯವಾಗಿ ಟೀಕಿಸಿದ್ದಾಗ ಸಹಜವಾಗಿ ನೋವಾಗುತ್ತದೆ. ಕಾಂಗ್ರೆಸ್ ಟಿಕೆಟ್ ಕೊಡುವ ಲಕ್ಷಣಗಳು ಕ್ಷೀಣಿಸಿರುವುದು ಸತ್ಯ. ಆದರೆ ಜನ ಟಿಕೆಟ್ ಕೊಟ್ಟಾಗಿದೆ. ಸ್ಪರ್ಧೆ ಮಾಡುವುದು ಖಚಿತವಾಗಿದೆ ಎಂದು ಸುಮಲತಾ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಡೀಪುರ ಆಯ್ತು, ಈಗ ಮೈಸೂರಿನ ಚಾಮುಂಡಿಬೆಟ್ಟದಲ್ಲೂ ಕಾಡ್ಗಿಚ್ಚು!

    ಬಂಡೀಪುರ ಆಯ್ತು, ಈಗ ಮೈಸೂರಿನ ಚಾಮುಂಡಿಬೆಟ್ಟದಲ್ಲೂ ಕಾಡ್ಗಿಚ್ಚು!

    ಮೈಸೂರು: ಕಳೆದ ಆರು ದಿನಗಳಿಂದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು ತನ್ನ ರೌದ್ರಾವತಾರ ಮೆರೆಯುತ್ತಿರುವ ಬೆನ್ನಲ್ಲೇ ಈಗ ಮೈಸೂರಿನ ಚಾಮುಂಡಿ ಬೆಟ್ಟದಲ್ಲೂ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

    ಜಿಲ್ಲೆಯ ರಿಂಗ್ ರಸ್ತೆಯ ಸಮೀಪವಿರುವ ಬಂಡಿಪಾಳ್ಯ ಗ್ರಾಮದ ಹತ್ತಿರದಲ್ಲಿರುವ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಆಕಸ್ಮಿಕ ಬೆಂಕಿಯಿಂದ ಅಪಾರ ಪ್ರಮಾಣದಲ್ಲಿ ಕಾಡು ನಾಶವಾಗಿದ್ದು, ಬೆಂಕಿಯನ್ನು ಆರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇದರಿಂದ ಬಂಡಿಪಾಳ್ಯ ಗ್ರಾಮಕ್ಕೆ ಹೊಂದಿಕೊಂಡಿರುವ ಚಾಮುಂಡಿಬೆಟ್ಟದಲ್ಲೂ ಕೂಡ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಸುಮಾರು 1 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.

    ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಆರಿಸಲು ಪ್ರಯತ್ನ ಪಡುತ್ತಿದ್ದರೂ ಕೂಡ ಬೆಂಕಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಗಾಳಿಯ ರಭಸಕ್ಕೆ ಬೆಂಕಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    https://www.youtube.com/watch?v=YyCqkT3m5EM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಡದೇವತೆ ಚಾಮುಂಡಿ ತಾಯಿ ಇರುವ ಬೆಟ್ಟದಲ್ಲಿ ನೀರಿಗೆ ಹಾಹಾಕಾರ!

    ನಾಡದೇವತೆ ಚಾಮುಂಡಿ ತಾಯಿ ಇರುವ ಬೆಟ್ಟದಲ್ಲಿ ನೀರಿಗೆ ಹಾಹಾಕಾರ!

    ಮೈಸೂರು: ನಾಡದೇವತೆ ಚಾಮುಂಡಿ ತಾಯಿ ಇರುವ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ.

    10 ದಿನಕ್ಕೆ ಒಮ್ಮೆ ಒಂದು ಗಂಟೆ ನೀರು ಬರುತ್ತೆ, ನಾವು ಹೇಗೆ ಇಲ್ಲಿ ಜೀವನ ಮಾಡಬೇಕು ಹೇಳಿ ಎಂದು ಚಾಮುಂಡಿ ಬೆಟ್ಟದ ಮಹಿಳೆಯೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡಗೆ ಪ್ರಶ್ನಿಸಿದಾಗ ಸಚಿವರು ತಬ್ಬಿಬ್ಬಾಗಿದ್ದಾರೆ.

    ಬೆಟ್ಟದ ಸಮಸ್ಯೆ ಪರಿಶೀಲನೆಗೆ ಸಚಿವರು ತೆರಳಿದ್ದಾಗ ಮಹಿಳೆ ಬೆಟ್ಟದಲ್ಲಿನ ನೀರಿನ ಸಮಸ್ಯೆಯನ್ನು ವಿವರಿಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಅತೀ ಶೀಘ್ರವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸಚಿವ ಜಿಟಿಡಿ ಸೂಚಿಸಿದ್ದಾರೆ.

    ಇದೇ ವೇಳೆ ಚಾಮುಂಡಿ ಬೆಟ್ಟದಲ್ಲಿ ಶುಚಿತ್ವ ಕಾಪಾಡುವಂತೆ ಅಧಿಕಾರಿಗಳಿಗೆ ಸಚಿವ ಜಿ.ಟಿ ದೇವೇಗೌಡರು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಕ್ರಾಂತಿ ಹಬ್ಬದಂದು ಚಾಮುಂಡಿ ಬೆಟ್ಟದಲ್ಲಿ ಶ್ರೀಮುರಳಿ ವಿಶೇಷ ಪೂಜೆ

    ಸಂಕ್ರಾಂತಿ ಹಬ್ಬದಂದು ಚಾಮುಂಡಿ ಬೆಟ್ಟದಲ್ಲಿ ಶ್ರೀಮುರಳಿ ವಿಶೇಷ ಪೂಜೆ

    ಮೈಸೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ‘ಮದಗಜ’ ಚಿತ್ರತಂಡ ಮೈಸೂರಿನಲ್ಲಿ ವಿಶೇಷ ಪೂಜೆಯನ್ನು ಮಾಡಿಸಿದೆ.

    ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮದಗಜ ಚಿತ್ರದ ಸ್ಕ್ರಿಪ್ಟ್ ಹಾಗೂ ಲಿರಿಕ್ಸ್ ಪ್ರತಿಗಳಿಗೆ ವಿಶೇಷ ಪೂಜೆ ಮಾಡಿಸಲಾಗಿದೆ. ಪೂಜೆ ಮಾಡಿಸಿದ ಬಳಿಕ ಚಿತ್ರತಂಡ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಿತ್ರದ ಕೆಲಸವನ್ನು ಆರಂಭಿಸಿದೆ. ರೋರಿಂಗ್ ಸ್ಟಾರ್ ಶ್ರೀಮುರುಳಿ ಮದಗಜ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.

    ಭರಾಟೆ ಚಿತ್ರದ ನಂತರ ಶ್ರೀಮುರುಳಿ ಮದಗಜ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ದಿನ ಶ್ರೀಮುರಳಿ ಅವರು ನಿರ್ದೇಶಕ, ನಿರ್ಮಾಪಕರ ಜೊತೆ ಸೇರಿ ಚಿತ್ರದ ಸ್ಕ್ರಿಪ್ಟ್ ಹಾಗೂ ಲಿರಿಕ್ಸ್ ಪೂಜೆ ಮಾಡಿಸಿದ್ದಾರೆ. ಶ್ರೀಮುರಳಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.

    ಇದೇ ವೇಳೆ ಶ್ರೀಮುರಳಿ ಮಾಧ್ಯಮದ ಜೊತೆ ಮಾತನಾಡಿ, “ಭರಾಟೆ ಚಿತ್ರದ ಚಿತ್ರೀಕರಣ ಶೇ.40 ರಷ್ಟು ನಡೆದಿದೆ. ಈಗ ಮದಗಜ ಚಿತ್ರದ ಶೂಟಿಂಗ್ ಶುರುವಾಗುತ್ತಿದೆ. ಇಂದು ಸ್ಕ್ರಿಪ್ಟ್ ಹಾಗೂ ಲಿರಿಕ್ಸ್ ಪೂಜೆ ಅಮ್ಮನ ಸನ್ನಿಧಾನದಲ್ಲಿ ನೆರೆವೇರಿಸಿದ್ದೇವೆ. ಸಂಕ್ರಾಂತಿ ಹಬ್ಬದ ದಿನ ಅಮ್ಮನ ಸನ್ನಿಧಾನದಲ್ಲಿ ಪೂಜೆ ನಡೆಯುತ್ತಿರುವುದು ಖುಷಿ ಆಗುತ್ತಿದೆ. ಚಿತ್ರದ ಔಟ್‍ಪುಟ್ ತಯಾರಿ ಆಗುವುದ್ದಕ್ಕೆ ಇನ್ನೂ ಮೂರು ತಿಂಗಳು ಬೇಕು. ಭರಾಟೆ ಸಿನಿಮಾ ಮುಗಿದ ಮೇಲೆ ಮದಗಜ ಚಿತ್ರ ಶುರುವಾಗಲಿದೆ” ಎಂದು ಹೇಳುತ್ತಾ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದರು”.

    ಮದಗಜ ಚಿತ್ರವನ್ನು ‘ಅಯೋಗ್ಯ’ ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್ ನಿರ್ದೇಶನ ಮಾಡುತ್ತಿದ್ದಾರೆ. ‘ಹೆಬ್ಬುಲಿ’ ಚಿತ್ರದ ನಿರ್ಮಾಪಕ ಉಮಾಪತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷ ಸ್ವಾಗತಿಸಲು ಸಜ್ಜಾಗಿದೆ ಸಾಂಸ್ಕೃತಿಕ ನಗರಿ- ಚಾಮುಂಡಿ ಬೆಟ್ಟಕ್ಕೆ ರಾತ್ರಿ ಸಂಚಾರ ನಿಷೇಧ

    ಹೊಸ ವರ್ಷ ಸ್ವಾಗತಿಸಲು ಸಜ್ಜಾಗಿದೆ ಸಾಂಸ್ಕೃತಿಕ ನಗರಿ- ಚಾಮುಂಡಿ ಬೆಟ್ಟಕ್ಕೆ ರಾತ್ರಿ ಸಂಚಾರ ನಿಷೇಧ

    ಮೈಸೂರು: ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಇಂದು ಸಂಜೆಯಿಂದಲೇ ಅರಮನೆಯಲ್ಲಿ ಸಾಂಸ್ಕೃತಿಕ ವೈಭವ ಆರಂಭವಾಗಲಿದೆ.

    ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸಲು ಮೈಸೂರು ಸಿಂಗಾರಗೊಂಡಿದೆ. ಇಂದು ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 12 ರವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆ ಆವರಣದಲ್ಲಿ ನಡೆಯಲಿವೆ. 12 ಗಂಟೆಗೆ ಸರಿಯಾಗಿ ಪಟಾಕಿ, ಬಾಣಬಿರುಸುಗಳನ್ನು ಸಿಡಿಸಲು ಎಲ್ಲಾ ತಯಾರಿಯನ್ನು ಕೂಡ ಮಾಡಿಕೊಳ್ಳಲಾಗಿದೆ. ಈ ಸಂತೋಷದ ಮಧ್ಯೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಇಂದು ರಾತ್ರಿ ಚಾಮುಂಡಿ ಬೆಟ್ಟಕ್ಕೆ ಸಂಚಾರ ನಿಷೇಧಿಸಲಾಗಿದೆ.

    ಚಾಮುಂಡಿ ಬೆಟ್ಟಕ್ಕೆ ರಾತ್ರಿ 10ರಿಂದ ಬೆಳಗಿನ ಜಾವ 6ರವರೆಗೆ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಹಾಗೆಯೇ ಹಿನಕಲ್ ಫ್ಲೈಓವರ್‌ನಲ್ಲೂ ಕೂಡ ಹೊಸ ವರ್ಷ ಆಚರಣೆ ಹಿನ್ನೆಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗವಾಗಿ ಇಂದು ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಅಷ್ಟೇ ಅಲ್ಲದೆ ನಗರದ ಹೋಟೆಲ್, ಕ್ಲಬ್, ರೆಸ್ಟೋರೆಂಟ್, ರೆಸಾರ್ಟ್, ಬಾರ್ ಗಳಲ್ಲಿ ಮಧ್ಯರಾತ್ರಿ 1ರವರೆಗೆ ಮದ್ಯ ಸರಬರಾಜು ಮಾಡಬೇಕಾದರೆ ಅಬಕಾರಿ ಇಲಾಖೆ ಅನುಮತಿ ಕಡ್ಡಾಯವಾಗಿ ಪಡೆದಿರಬೇಕು. ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv