Tag: chamundi betta

  • ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾಗೆ ಎಸ್.ಎಲ್ ಭೈರಪ್ಪ ಚಾಲನೆ

    ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾಗೆ ಎಸ್.ಎಲ್ ಭೈರಪ್ಪ ಚಾಲನೆ

    ಮೈಸೂರು: ಇಂದು ಸಾಹಿತಿ ಎಸ್.ಎಲ್. ಭೈರಪ್ಪ ಅವರು ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ಅಧಿಕೃತ ಚಾಲನೆ ಕೊಟ್ಟಿದ್ದಾರೆ.

    ಚಾಮುಂಡಿ ಬೆಟ್ಟದಲ್ಲಿ 2019ರ ದಸರಾ ಉತ್ಸವಕ್ಕೆ ಭೈರಪ್ಪ ಅವರು ಚಾಲನೆ ನೀಡಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದ ಗೌಡ, ಜೆಡಿಎಸ್ ನಾಯಕ ಜಿ.ಟಿ ದೇವೇಗೌಡ, ಸಚಿವ ವಿ. ಸೋಮಣ್ಣ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಭಾಗಿಯಾಗಿದ್ದು, ಸಾಂಸ್ಕೃತಿಕ ನಾಡಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ.

    ಇಂದಿನಿಂದ ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ಷರಶಃ ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಹಾಗೂ ಮನರಂಜನೆ ಪೂರಿತ ವಾತಾವರಣ ನಿರ್ಮಾಣವಾಗಲಿದೆ. ವಿಶ್ವವನ್ನೇ ತನ್ನತ್ತ ಸೆಳೆದುಕೊಂಡು ತನ್ನ ವೈವಿಧ್ಯಮಯವಾದ ಆಚರಣೆಗಳನ್ನು ಜಗತ್ತಿಗೆ ತೋರ್ಪಡಿಸುವ ಆಚರಣೆ ಅಂದರೆ ಅದೇ ಮೈಸೂರು ದಸರಾ ಮಹೋತ್ಸವ.

    ಅರಮನೆಯಲ್ಲಿ ರಾಜಪರಂಪರೆಯ ನವರಾತ್ರಿ ಉತ್ಸವಕ್ಕೂ ಇವತ್ತು ಚಾಲನೆ ಸಿಗಲಿದೆ. ಬೆಳಗ್ಗೆ 5:10 ರಿಂದ 5:30ರ ನಡುವೆ ರತ್ನಖಚಿತ ಆಸನಕ್ಕೆ ಸಿಂಹ ಜೋಡಣೆ ಮಾಡಲಾತ್ತದೆ. ಬೆಳಗ್ಗೆ 8:05 ರಿಂದ 8:55ರ ನಡುವೆ ಅರಮನೆ ಒಳ ಆವರಣದ ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‍ಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 9:30ಕ್ಕೆ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿದ್ದು, ಬೆಳಗ್ಗೆ 9:50 ರಿಂದ 10:35 ಕಳಸ ಪೂಜೆ ನೆರವೆರಿಸಲಾಗುತ್ತದೆ. ನಂತರ ಸಿಂಹಾಸನರೋಹಣ ಮಾಡುವ ಮೂಲಕ ಖಾಸಗಿ ದರ್ಬಾರ್ ನಡೆಯಲಿದೆ. ಬಳಿಕ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಚಾಮುಂಡೇಶ್ವರಿ ತರಲಾಗುವುದು. ಈ ಮೂಲಕ ಮೊದಲ ದಿನದ ಅರಮನೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

    ಇಂದಿನಿಂದ 10 ದಿನಗಳ ಕಾಲ ಮೈಸೂರು ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿರುತ್ತದೆ. ಅರಮನೆ ಸೇರಿದಂತೆ ಐತಿಹಾಸಿಕ ಕಟ್ಟಡಗಳು, ಸರ್ಕಾರಿ ಕಟ್ಟಡಗಳು ಹಾಗೂ ಮೈಸೂರಿನ ಬಹುಪಾಲು ರಸ್ತೆಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿರುತ್ತವೆ. ಜೊತೆಗೆ ಕುಸ್ತಿ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಸಾಹಸ ಕ್ರೀಡೆಗಳು, ಚಲನಚಿತ್ರೋತ್ಸವ, ವಸ್ತು ಪ್ರದರ್ಶನ, ಪುಸ್ತಕ ಮೇಳ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ದಸರಾಗೆ ಮತ್ತಷ್ಟು ರಂಗು ತುಂಬಲಿವೆ.

  • ‘ನೀನು ಇಲ್ಲಿಂದ ಬೇಗ ಹೋಗ್ತೀಯಾ’- ಡಿಸಿಪಿಗೆ ಸಿಎಂ ಸೋದರಳಿಯ ಧಮ್ಕಿ

    ‘ನೀನು ಇಲ್ಲಿಂದ ಬೇಗ ಹೋಗ್ತೀಯಾ’- ಡಿಸಿಪಿಗೆ ಸಿಎಂ ಸೋದರಳಿಯ ಧಮ್ಕಿ

    – ನಾನೇನು ಧಮ್ಕಿ ಹಾಕಿಲ್ಲ ಎಂದು ಆರೋಪ ತಳ್ಳಿಹಾಕಿದ ರಾಜೇಶ್

    ಮೈಸೂರು: ಭದ್ರತೆ ದೃಷ್ಟಿಯಿಂದ ಚಾಮುಂಡಿ ದೇಗುಲದ ಒಳಗೆ ಬಿಡಲು ನಿರಾಕರಿಸಿ ಪೊಲೀಸರಿಗೆ ಸಿಎಂ ಯಡಿಯೂರಪ್ಪ ಅವರ ತಂಗಿ ಮಗ ರಾಜೇಶ್ ಧಮ್ಕಿ ಹಾಕಿದ್ದಾರೆ. ನೀನು ಇಲ್ಲಿಂದ ಬೇಗ ಹೋಗ್ತೀಯಾ. ನಿನ್ನ ಮೇಲೆ ದೂರು ಕೊಡುತ್ತೇನೆ ಎಂದು ಹೇಳಿ ದರ್ಪ ಮೆರೆದಿದ್ದಾರೆ.

    ಕೆಆರ್‍ಎಸ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಸಲ್ಲಿಸುವ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಮೈಸೂರು ಪ್ರವಾಸದಲ್ಲಿರುವ ಸಿಎಂ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಭದ್ರತೆಯ ಉದ್ದೇಶದಿಂದ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು.

    ದೇವಾಲಯದ ಒಳಗೆ ಬಿಡದಿದ್ದಕ್ಕೆ ರಾಜೇಶ್ ಹಾಗೂ ಬಿಜೆಪಿ ಕಾರ್ಯಕರ್ತ ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ದೇವಸ್ಥಾನದಲ್ಲಿ ಸಿಎಂ ಆಗೂ ಇತರೆ ಸಚಿವರು ಪೂಜೆ ಸಲ್ಲಿಸುತ್ತಿದ್ದ ಕಾರಣಕ್ಕೆ ಭದ್ರತಾ ದೃಷ್ಟಿಯಿಂದ ರಾಜೇಶ್ ಹಾಗೂ ಅವರೊಟ್ಟಿಗೆ ಇದ್ದ ಕಾರ್ಯಕರ್ತರನ್ನು ಪೊಲೀಸರು ಒಳಗೆ ಬಿಟ್ಟಿರಲಿಲ್ಲ. ಇಷ್ಟಕ್ಕೆ ಸಿಟ್ಟಿಗೆದ್ದ ರಾಜೇಶ್ ಅವರು ಕರ್ತವ್ಯ ನಿರತ ಡಿಸಿಪಿಗೆ ಏಕವಚನದಲ್ಲೇ ಅವಾಜ್ ಹಾಕಿ ದರ್ಪ ಪ್ರದರ್ಶಿಸಿದ್ದಾರೆ. ನೀನು ಇಲ್ಲಿಂದ ಬೇಗ ಹೋಗ್ತೀಯಾ ಎಂದು ಕೂಗಾಡಿ ಅಧಿಕಾರಿಯನ್ನು ವರ್ಗಾವಣೆ ಮಾಡುವುದಾಗಿ ಸಿಎಂ ಸೋದರಳಿಯ ಅವಾಜ್ ಹಾಕಿದ್ದಾರೆ.

    ನಂತರ ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ. ಸಿಎಂ ನಮ್ಮ ಮನೆಗೆ ಬರುತ್ತಾರೆ. ಆಗ ವೈಯಕ್ತಿಕವಾಗಿ ನಿನ್ನ ವಿರುದ್ಧ ದೂರು ಕೊಡುತ್ತೇನೆ ಎಂದು ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಸಿಎಂ ಸೋದರಳಿಯ ಹಾಗೂ ಕಾರ್ಯಕರ್ತ ಪೊಲೀಸರ ಮೇಲೆ ದರ್ಪ ತೋರಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ರಾಜೇಶ್ ಅವರು ಮಾತನಾಡಿ, ನಾನು ಯಾರಿಗೂ ಅವಾಜ್ ಹಾಕಿಲ್ಲ. ನನಗೆ ಅಲ್ಲಿದ್ದ ಪೊಲೀಸ್ ಅಧಿಕಾರಿಗಳ ಪರಿಚಯವಿದೆ. ನಾನು ಅಲ್ಲಿ ಒಳಗೆ ಬಿಡಿ ಎಂದು ಮನವಿ ಮಾಡಿದ್ದೆ ಅಷ್ಟೇ. ಆಗ ನಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೂಗಿದ್ದಾರೆ. ನಾನು ಯಾರಿಗೂ ಧಮ್ಕಿ ಹಾಕಿಲ್ಲ. ನೀವು ಹೇಗಾದರೂ ಬಿಂಬಿಸಿ ನಾನು ಅವಾಜ್ ಹಾಕಿಲ್ಲ. ನಮ್ಮ ಜನಪರ ಕೆಲಸಗಳನ್ನು ನೀವು ತೋರಿಸಲ್ಲ. ಇಂತಹ ಚಿಕ್ಕಪುಟ್ಟ ವಿಚಾರವನ್ನು ಎತ್ತಿ ತೋರಿಸುತ್ತೀರ. ಒಳಗೆ ಬಿಡಲ್ಲ ಎಂದಿದಕ್ಕೆ ಕಾರ್ಯಕರ್ತರು, ಬೆಂಬಲಿಗರು ಆಕ್ರೋಶಗೊಂಡು ಕೂಗಾಡಿದ್ದಾರೆ. ನಾನು ಪೊಲೀಸರಿಗೆ ಬೆದರಿಕೆ ಹಾಕಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

  • ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ವಿಶೇಷ ಪೂಜೆ- ಭಕ್ತ ಸಾಗರದಿಂದ ದೇವಿ ದರ್ಶನ

    ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ವಿಶೇಷ ಪೂಜೆ- ಭಕ್ತ ಸಾಗರದಿಂದ ದೇವಿ ದರ್ಶನ

    ಮೈಸೂರು: ಆಷಾಡ ಮಾಸದ ಮೊದಲ ಶುಕ್ರವಾರ ಇಂದು. ಈ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಶುರುವಾಗಿವೆ.

    ಈಗಾಗಲೇ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಮಾಡಲಾಗಿದೆ. ಖಾಸಗಿ ವಾಹನಗಳಲ್ಲಿ ಬರುವವರು ಲಲಿತ ಮಹಲ್ ಹೆಲಿಪ್ಯಾಡ್ ಬಳಿ ವಾಹನಗಳ ನಿಲುಗಡೆ ಮಾಡಲು ವ್ಯವಸ್ಥೆ ಮಾಡಿ, ಅಲ್ಲಿಂದ ಉಚಿತವಾಗಿ ನಗರಸಾರಿಗೆ ಬಸ್‍ಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರಲು ವ್ಯವಸ್ಥೆ ಮಾಡಲಾಗಿದೆ.

    ಇಂದು ಬೆಳಗಿನ ಜಾವ 3 ಗಂಟೆಯಿಂದ ಸಂಚಾರ ಆರಂಭಿಸಿರುವ ಬಸ್‍ಗಳು ರಾತ್ರಿ 11ರ ವರೆಗೂ ಕಾರ್ಯನಿರ್ವಹಿಸಲಿವೆ. ಇನ್ನು ಬೆಟ್ಟದಲ್ಲಿ ದೇವರ ದರ್ಶನಕ್ಕೆ ಎರಡು ದ್ವಾರಗಳಿಂದ ಪ್ರವೇಶ ಕಲ್ಪಿಸಿದ್ದು, ಎಲ್ಲೆಡೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಅನ್ನದಾನಕ್ಕಾಗಿ ವಿಶೇಷ ವೇದಿಕೆ ಸಿದ್ಧಪಡಿಸಲಾಗಿದ್ದು, ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗಿದೆ.

    ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ತಾಯಿಯ ದರ್ಶನಕ್ಕಾಗಿ ರಾಜ್ಯದ ವಿವಿಧೆಡೆಗಳಿಂದ ಅಲ್ಲದೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದಾರೆ.