Tag: Chamrajanagar

  • ವರುಣ ದೇವನ ಕೃಪೆಗೆ ಚಾಮರಾಜನಗರ ಮಂದಿ ಫುಲ್ ಖುಷ್ – ಚುರುಕುಗೊಂಡ ಕೃಷಿ ಚಟುವಟಿಕೆ

    ವರುಣ ದೇವನ ಕೃಪೆಗೆ ಚಾಮರಾಜನಗರ ಮಂದಿ ಫುಲ್ ಖುಷ್ – ಚುರುಕುಗೊಂಡ ಕೃಷಿ ಚಟುವಟಿಕೆ

    ಚಾಮರಾಜನಗರ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರ ಬೆಳೆ, ಬದುಕು, ಆಸ್ತಿಪಾಸ್ತಿ ನಾಶವಾಗಿದ್ದರೆ, ಇತ್ತ ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಜನರು ಬರದ ಛಾಯೆಯಿಂದ ಹೊರ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ.

    ಉತ್ತರ ಕರ್ನಾಟಕದ ಜನರು ಪ್ರವಾಹದಿಂದ ನಲುಗಿ ಹೋಗಿದ್ದು ಅವರು ಬೆಳೆದಂತಹ ಬೆಳೆ ಸೇರಿದಂತೆ ಆಸ್ತಿಪಾಸ್ತಿ ನಷ್ಟದಿಂದ ದಿಕ್ಕು ತೋಚದಂತಾಗಿದ್ದಾರೆ. ಇತ್ತ ದಕ್ಷಿಣ ಕರ್ನಾಟಕದ ಬರದನಾಡು ಚಾಮರಾಜನಗರದ ಜನರು ಸಖತ್ ಖುಷಿಯಲ್ಲಿದ್ದು, ಕೃಷಿ ಚಟುವಟಿಕೆ ಆರಂಭಿಸಲು ಮುಂದಾಗಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಮುಂಗಾರು ಮಳೆಯಿಲ್ಲದೆ ಈ ಬಾರಿಯೂ ವ್ಯವಸಾಯ ಮಾಡಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತಿದ್ದ ರೈತಾಪಿ ವರ್ಗ ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದೆ.

    ಎರಡು ವರ್ಷದ ಸತತ ಬರಯಿದ್ದ ಕಾರಣ ಜೀವನಕ್ಕೆ ಮುಂದೆ ಏನು ಎಂಬ ಯೋಚನೆಯಲ್ಲಿ ತೊಡಗಿದ್ದ ಚಾಮರಾಜನಗರ, ಕೊಳ್ಳೆಗಾಲ, ಯಳಂದೂರು ತಾಲೂಕಿನ ಜನರು ಇದೀಗ ತಮ್ಮ ಬದುಕು ಕಟ್ಟಿಕೊಳ್ಳಲು ವ್ಯವಸಾಯಕ್ಕೆ ಮುಂದಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೊಡಗು ಭಾಗದಲ್ಲಿ ಸುರಿದ ಮಳೆಗೆ ಕಬಿನಿ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಗಡಿ ಜಿಲ್ಲೆಯ ರೈತರು ಈಗಾಗಲೇ ಗದ್ದೆಯನ್ನು ಹದಗೊಳಿಸುವ ಕಾಯಕಕ್ಕೆ ಮುಂದಾಗಿದ್ದು, ಈ ಬಾರಿ ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿ ಇದ್ದಾರೆ.

    ಕಳೆದ ಎರಡು ವರ್ಷಗಳಿಂದ ಉಳುಮೆ ಕಾಣದ ಗದ್ದೆಗಳು ಇದೀಗ ಉಳುಮೆಗೆ ಸಿದ್ಧವಾಗಿದ್ದು, ನಾಲೆಗಳಲ್ಲಿ ನೀರು ಹರಿಯುತ್ತಿದೆ. ಈ ಬಾರಿ ಭತ್ತ, ಕಬ್ಬು, ರಾಗಿ, ಜೋಳ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಳ್ಳಲು ರೈತರು ತಮ್ಮ ಎಂದಿನ ಕಾಯಕಕ್ಕೆ ಮುಂದಾಗಿದ್ದಾರೆ. ಈ ಬಾರಿ ಪೂರ್ಣ ಪ್ರಮಾಣದಲ್ಲಿ ನೀರು ಸಿಗುವ ಭರವಸೆ ಹೊಂದಿರುವ ರೈತರು ತಮ್ಮ ಎರಡು ವರ್ಷದ ಬರವನ್ನು ಬೆಳೆ ಬೆಳೆಯುವ ಮೂಲಕ ನೀಗಿಸುವ ಕನಸು ಕಂಡಿದ್ದಾರೆ. ಈಗಾಗಲೇ ಗದ್ದೆಗಳನ್ನು ಹದಗೊಳಿಸುವ ಮೂಲಕ ವ್ಯವಸಾಯಕ್ಕೆ ಮುಂದಾಗುತ್ತಿದ್ದು, ಈ ಬಾರಿ ಉತ್ತಮ ಮಳೆಯಾಗುವುದರಿಂದ ನಮಗೆ ಸಂತಸ ಆಗುತ್ತಿದೆ. ಆದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರವಾಹದಿಂದಾಗಿರುವ ತೊಂದರೆ ನಮಗೂ ನೋವು ತಂದಿದೆ ಎಂದು ರೈತರು ಹೇಳಿದ್ದಾರೆ.

  • ಭಕ್ತರ ಮನೆಗೆ ಪೂಜೆಗೆಂದು ಬಂದು ಪಾದುಕೆ ಬಿಟ್ಟು ಹೋಗಿದ್ರು!

    ಭಕ್ತರ ಮನೆಗೆ ಪೂಜೆಗೆಂದು ಬಂದು ಪಾದುಕೆ ಬಿಟ್ಟು ಹೋಗಿದ್ರು!

    ಚಾಮರಾಜನಗರ: ನಡೆದಾಡುವ ದೇವರು ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಹತ್ತು ವರ್ಷಗಳ ಹಿಂದೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.

    ಇಲ್ಲಿನ ನಿಜಗುಣ ರಾಜು ಮನೆಗೆ ಪೂಜೆಗೆಂದು ಬಂದಿದ್ದ ಶ್ರೀಗಳು ಪೂಜೆಯ ನಂತರ ತಮ್ಮ ಪಾದುಕೆಗಳನ್ನು ಬಿಟ್ಟು ಹೋಗಿದ್ದಾರೆ. ಅಂದಿನಿಂದಲೂ ಈ ಭಕ್ತರ ಮನೆಯಲ್ಲಿ ಶ್ರೀಗಳ ಪಾದುಕೆಗೂ ನಿತ್ಯ ಪೂಜೆ ನಡೆಯುತ್ತಿದೆ. ಅಂದು 101 ವರ್ಷಗಳಾಗಿದ್ದರೂ ದೂರದ ತುಮಕೂರಿನಿಂದ ಚಾಮರಾಜನಗರದವರೆಗೂ ಕಾರಿನಲ್ಲಿ ಬಂದಿದ್ದರು.

    ಬೆಳಗ್ಗೆಯಿಂದ ಸಂಜೆಯವರೆಗೂ ಇಲ್ಲಿಯೇ ಇದ್ದು ಭಕ್ತರಿಗೆ ದರ್ಶನ ಭಾಗ್ಯ ನೀಡಿದ್ದ ಡಾ. ಶಿವಕುಮಾರ ಸ್ವಾಮಿಗಳು ಎಲ್ಲರನ್ನು ಲವಲವಿಕೆಯಿಂದಲೇ ಮಾತನಾಡಿಸಿದ್ದರು. ಈ ಪಾದುಕೆಗಳನ್ನು ತಮ್ಮ ಮನೆಯಲ್ಲಿ ಬಿಟ್ಟು ಹೋದ ನಂತರ ತಮಗೆ ಎಲ್ಲಾ ರೀತಿಯ ಅನುಕೂಲಗಳು ಉಂಟಾಗಿವೆ. ಶ್ರೀಗಳ ಪಾದುಕೆಗಳೇ ತಮಗೆ ಶ್ರೀರಕ್ಷೆಯಾಗಿವೆ ಎನ್ನುವ ಅವರು ಪ್ರತಿನಿತ್ಯ ಈ ಪಾದುಕೆಗಳನ್ನು ಪೂಜಿಸಿದ ನಂತರವಷ್ಟೇ ತಮ್ಮ ಇತರ ಕೆಲಸಗಳನ್ನು ಆರಂಭಿಸುತ್ತೇವೆ ಎನ್ನುತ್ತಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(111) ಇಂದು ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರು ಕಾಯುತ್ತಿದ್ದಾರೆ. ಸಿದ್ದಗಂಗಾ ಮಠದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಶಾಂತಿಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ವಿಷಪ್ರಸಾದ ದುರಂತಕ್ಕೆ ಇಂದಿಗೆ ಒಂದು ತಿಂಗಳು- ಇನ್ನೂ ಡಿಸ್ಚಾರ್ಜ್ ಆಗಿಲ್ಲ ಅಸ್ವಸ್ಥರು

    ಸುಳ್ವಾಡಿ ವಿಷಪ್ರಸಾದ ದುರಂತಕ್ಕೆ ಇಂದಿಗೆ ಒಂದು ತಿಂಗಳು- ಇನ್ನೂ ಡಿಸ್ಚಾರ್ಜ್ ಆಗಿಲ್ಲ ಅಸ್ವಸ್ಥರು

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವೆನೆ ಘಟನೆ ನಡೆದು ಇಂದಿಗೆ ಒಂದು ತಿಂಗಳಾಗಿದ್ದು, ಪ್ರಸಾದ ಸೇವಿಸಿದ ಭಕ್ತರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಡಿಸೆಂಬರ್ 14ರಂದು ಚಾಮರಾಜನಗರದ ಸುಳ್ವಾಡಿಯಲ್ಲಿ ಭಕ್ತರು ವಿಷ ಪ್ರಸಾದವನ್ನು ಸೇವಿಸಿದ್ದರು. ಈಗ ಈ ಘಟನೆ ನಡೆದು ಒಂದು ತಿಂಗಳಾದರೂ ಪ್ರಸಾದ ತಿಂದ ಅಸ್ವಸ್ಥರು ಆಸ್ಪತ್ರೆಯಿಂದ ಇನ್ನೂ ಡಿಸ್ಚಾರ್ಜ್ ಆಗಿಲ್ಲ. ನಾಲ್ವರು ಅಸ್ವಸ್ಥರು ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಾದ ಸೇವಿಸಿದ ನಾಲ್ಕು ಜನ ಅಸ್ವಸ್ಥರು ಮೈಸೂರಿನ ನಾಲ್ಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರಲ್ಲಿ ಓರ್ವ ಅಸ್ವಸ್ಥರಿಗೆ ವೆಂಟಿಲೇಟರ್ ನಲ್ಲೇ ಚಿಕಿತ್ಸೆ ನೀಡಿದರೆ, ಉಳಿದ ಮೂವರು ಜನರಿಗೆ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ವಿಷ ಪ್ರಸಾದದ ಘಟನೆಯಲ್ಲಿ ಒಟ್ಟು 140ಕ್ಕೂ ಹೆಚ್ಚು ಮಂದಿ ವಿಷ ಪ್ರಸಾದ ಸೇವನೆ ಮಾಡಿದ್ದರು. 140 ಮಂದಿಯಲ್ಲಿ 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಅಲ್ಲದೇ ಈ ವಿಷ ಪ್ರಸಾದ ಸೇವಿಸಿ 17 ಮಂದಿ ಘಟನೆಯಲ್ಲಿ ಮೃತರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನರ್ಸ್, ವೈದ್ಯರು ಇಲ್ಲದ ವೇಳೆ ರೋಗಿ ಪ್ರಾಣ ಉಳಿಸಿದ ಸೆಕ್ಯುರಿಟಿ ಗಾರ್ಡ್

    ನರ್ಸ್, ವೈದ್ಯರು ಇಲ್ಲದ ವೇಳೆ ರೋಗಿ ಪ್ರಾಣ ಉಳಿಸಿದ ಸೆಕ್ಯುರಿಟಿ ಗಾರ್ಡ್

    ಚಾಮರಾಜನಗರ: ವೈದ್ಯರು ಹಾಗೂ ನರ್ಸ್ ಇಲ್ಲದ ವೇಳೆ ರೋಗಿಯೊಬ್ಬರ ಗ್ಲುಕೋಸ್ ಬಾಟಲಿಯನ್ನು ಬದಲಾಯಿಸುವ ಮೂಲಕ ಸೆಕ್ಯುರಿಟಿ ಗಾರ್ಡ್ ಸತೀಶ್ ಮಾನವೀಯತೆ ಮೆರೆದಿರುವ ಘಟನೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರಿಗೆ ಗ್ಲುಕೋಸ್ ಬಾಟಲ್ ಅಳವಡಿಸಲಾಗಿತ್ತು. ಗ್ಲುಕೋಸ್ ಮುಗಿಯುವ ಹಂತಕ್ಕೆ ಬಂದಿತ್ತು. ಆದರೆ ಆ ಸಂದರ್ಭದಲ್ಲಿ ವೈದ್ಯರಾಗಲಿ, ದಾದಿಯರಾಗಲಿ ಅಲ್ಲಿ ಇರಲಿಲ್ಲ. ರೋಗಿಯ ಸಂಬಂಧಿಕರು ನರ್ಸ್ ಗಾಗಿ ಹುಡುಕಾಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ಅವರು ಹೊರಹೋಗಿದ್ದರು ಎನ್ನಲಾಗಿದೆ.

    ಇದನ್ನು ಗಮನಿಸಿದ ಅಲ್ಲಿಯೇ ಇದ್ದ ಸೆಕ್ಯುರಿಟಿ ಗಾರ್ಡ್ ತಕ್ಷಣ ಧಾವಿಸಿ ಗ್ಲುಕೋಸ್ ಬಾಟಲಿ ಬದಲಿಸಿ ನರ್ಸ್ ಮಾಡಬೇಕಾದ ಕೆಲಸವನ್ನು ತಾನೇ ಮಾಡಿದ್ದಾರೆ. ಒಂದು ವೇಳೆ ಖಾಲಿಯಾಗಿದ್ದ ಗ್ಲುಕೋಸ್ ಬಾಟಲಿಯನ್ನು ತಕ್ಷಣ ಬದಲಿಸದೆ ಇದ್ದಿದ್ದರೆ ಅದು ರೋಗಿಯ ರಕ್ತವನ್ನೇ ವಾಪಸ್ ಎಳೆದು ರೋಗಿಗೆ ಅಪಾಯ ಉಂಟಾಗುವ ಸಾಧ್ಯತೆಗಳಿದ್ದವು.

    ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದಲ್ಲಿ ವೈದ್ಯರು ಹಾಗು ನರ್ಸ್ ಗಳಿದ್ದರು ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಈ ಬಗ್ಗೆ ಅಧಿಕಾರಿಗಳಿಗೆ ಅನೇಕ ಬಾರಿ ದೂರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ರೋಗಿಗಳ ಪ್ರಾಣದೊಂದಿಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=aJGIl36QcOI&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv