Tag: Champions Trophy 2025

  • Champions Trophy: ಟಿವಿಯಲ್ಲಿ ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ ವೀಕ್ಷಿಸಿದ ಹೆಚ್‌ಡಿಕೆ

    Champions Trophy: ಟಿವಿಯಲ್ಲಿ ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ ವೀಕ್ಷಿಸಿದ ಹೆಚ್‌ಡಿಕೆ

    ಬೆಂಗಳೂರು: ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯವನ್ನು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವೀಕ್ಷಿಸಿದರು.

    ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌ಡಿಕೆ ಪಂದ್ಯ ವೀಕ್ಷಣೆ ಮಾಡಿದರು.

    ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್‌ ಪಂದ್ಯ ನಡೆಯುತ್ತಿದೆ. ಟಾಸ್‌ ಗೆದ್ದಿರುವ ಪಾಕಿಸ್ತಾನ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

    ಸದ್ಯ 32 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ ಪಾಕಿಸ್ತಾನ 142 ರನ್‌ ಗಳಿಸಿದೆ. ಇಮಾಮ್-ಉಲ್-ಹಕ್ 10, ಬಾಬರ್ ಅಜಮ್ 23 ರನ್‌ ಗಳಿಸಿ ಔಟಾಗಿದ್ದಾರೆ. ಸೌದ್ ಶಕೀಲ್ ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇವರಿಗೆ ಮೊಹಮ್ಮದ್‌ ರಿಜ್ವಾನ್‌ (42) ಸಾಥ್‌ ನೀಡಿದ್ದಾರೆ.

  • Champions Trophy 2025 | ಭಾರತದ ಗೆಲುವಿಗೆ ಕ್ರೀಡಾಭಿಮಾನಿಗಳಿಂದ `ಬೆಸ್ಟ್ ಆಫ್ ಲಕ್’

    Champions Trophy 2025 | ಭಾರತದ ಗೆಲುವಿಗೆ ಕ್ರೀಡಾಭಿಮಾನಿಗಳಿಂದ `ಬೆಸ್ಟ್ ಆಫ್ ಲಕ್’

    ರಾಯಚೂರು/ವಿಜಯಪುರ/ಬೀದರ್: ಚಾಂಪಿಯನ್ಸ್ ಟ್ರೋಫಿಯಲ್ಲಿಂದು (Champions Trophy) ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಹೈವೊಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೇರೆ ಬೇರೆ ಜಿಲ್ಲೆಯ ಕ್ರೀಡಾಭಿಮಾನಿಗಳು ಭಾರತ ತಂಡಕ್ಕೆ ಗೆಲುವಾಗಬೇಕೆಂದು ಶುಭ ಹಾರೈಸಿದ್ದಾರೆ.

    ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ಕುತೂಹಲದ ಪಂದ್ಯವೆಂದರೆ ಅದು ಭಾರತ ಮತ್ತು ಪಾಕಿಸ್ತಾನ. ಭಾರತ ಯಾವ ತಂಡದ ವಿರುದ್ಧ ಸೋತರೂ ಕ್ರಿಕೆಟ್ ಅಭಿಮಾನಿಗಳು ಸಹಿಸಿಕೊಳ್ಳುತ್ತಾರೆ. ಆದರೆ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಮಾತ್ರ ಭಾರತ ಗೆಲವು ಸಾಧಿಸಲೆಬೇಕು ಎನ್ನುವುದು ಭಾರತದ ಕ್ರೀಡಾಭಿಮಾನಿಗಳ ಪಟ್ಟು ಹಿಡಿದಿವೆ. ಇಂದು ದುಬೈನ ಅಂತಾರಾಷ್ಟ್ರೀಯ ಕೀಡಾಂಗಣದಲ್ಲಿ 5ನೇ ಪಂದ್ಯ ನಡೆಯುತ್ತಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.ಇದನ್ನೂ ಓದಿ: Champions Trophy 2025 | ಆಲ್ ದಿ ಬೆಸ್ಟ್ ಟೀಂ ಇಂಡಿಯಾ – ನಾಡಿನಾದ್ಯಂತ ಅಭಿಮಾನಿಗಳಿಂದ ಶುಭ ಹಾರೈಕೆ

    ವಿಜಯಪುರದಲ್ಲಿ ಕ್ರಿಕೆಟ್ ಅಭಿಮಾನಿಗಳು ಗೆದ್ದು ಬಾ ಭಾರತ, ಜೈಹೋ ಭಾರತ ಎಂದು ಘೋಷಣೆ ಕೂಗಿ ಶುಭಹಾರೈಸಿದ್ದಾರೆ. ಇನ್ನೂ ಬೀದರ್‌ನಲ್ಲಿ ಜೀತೇಗಾ ಇಂಡಿಯಾ ಜೀತೇಗಾ ಎಂದು ಇಂಡಿಯಾಗೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ. ಇಂದಿನ ಪಂದ್ಯ ಒನ್ ಸೈಡ್ ಇದ್ದು, ಶುಭಮನ್ ಗಿಲ್, ರೋಹಿತ್ ಶರ್ಮಾ, ಕೊಹ್ಲಿ ಸೆಂಚುರಿ ಬಾರಿಸುತ್ತಾರೆ. ನಾವು ಪಂದ್ಯಕ್ಕಾಗಿ ಕಾಯುತ್ತಿದ್ದು, ಪಂದ್ಯ ಮುಗಿಯುವರೆಗೂ ಟಿವಿ ಮುಂದೆ ಕುಳಿತು ಇಂಡಿಯಾಗೆ ಪುಲ್ ಸಪೋರ್ಟ್ ಮಾಡುತ್ತೇವೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ

    ರಾಯಚೂರಿನ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಭಾರತದ ಗೆಲುವಿಗಾಗಿ ಪುಟಾಣಿಗಳು ಸ್ವಯಂ ಪ್ರೇರಿತರಾಗಿ ವಿಶೇಷ ಪೂಜೆ ಸಲ್ಲಿಸಿದರು.

    ಮಕ್ಕಳು ಹಾಲಿನ ಅಭಿಷೇಕ, ಜಲಾಭಿಷೇಕ ಮಾಡಿದ್ದಾರೆ. ಸ್ತೋತ್ರ, ಶ್ಲೋಕ ಪಠಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿವಿಧ ಸ್ಟಾರ್ ಆಟಗಾರರ ಭಾವಚಿತ್ರಗಳನ್ನು ಹಿಡಿದು ಜಯ ಘೋಷ ಕೂಗಿದ್ದಾರೆ. ಟೀಂ ಇಂಡಿಯಾ ಆಟಗಾರರಿಗೆ ಶುಭ ಹಾರೈಸಿದ ಪುಟಾಣಿ ಮಕ್ಕಳು ಭಾರತ ತಂಡ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿತ – ಕಾರ್ಮಿಕರ ರಕ್ಷಣೆಗೆ ಹರಸಾಹಸ

     

  • Champions Trophy | ಇಂಡೋ-ಪಾಕ್ ಕಾದಾಟದ ರೋಚಕ ಇತಿಹಾಸ – ಹೈವೋಲ್ಟೇಜ್ ಕದನದಲ್ಲಿ ಯಾರ ಕೈ ಮೇಲು?

    Champions Trophy | ಇಂಡೋ-ಪಾಕ್ ಕಾದಾಟದ ರೋಚಕ ಇತಿಹಾಸ – ಹೈವೋಲ್ಟೇಜ್ ಕದನದಲ್ಲಿ ಯಾರ ಕೈ ಮೇಲು?

    ಭಾರತ ಮತ್ತು ಪಾಕಿಸ್ತಾನ (Pakistan) ಪಂದ್ಯವೆಂದರೆ ಅದು ಯಾವತ್ತೂ ವಿಶೇಷವೇ. ಇಲ್ಲಿ ಯಾವುದು ಬಲಿಷ್ಠ, ಯಾವುದು ಕನಿಷ್ಠ ಎಂಬಿತ್ಯಾದಿ ಪ್ರಶ್ನಗಳು ಉದ್ಭವಿಸುವುದೇ ಇಲ್ಲ. ಎರಡೂ ತಂಡಗಳ ಆಟಗಾರರು ಉತ್ಸಾಹದಲ್ಲಿರುತ್ತಾರೆ. ಅದೇ ರೀತಿ ಎರಡೂ ತಂಡಗಳ ಮೇಲೆ ಅತೀವ ಒತ್ತಡವೂ ಇರುತ್ತದೆ. ಈ ಒತ್ತಡವನ್ನು ಮೀರಿ ನಿಂತು ಉತ್ತಮ ಪ್ರದರ್ಶನ ತೋರಿದವರೇ ಇಲ್ಲಿ ವಿಜಯ ಶಾಲಿಗಳಾಗುತ್ತಾರೆ.

    ಐಸಿಸಿ ಏಕದಿನ ವಿಶ್ವಕಪ್ ನ ವಿಚಾರಕ್ಕೆ ಬಂದಾಗ ಇತ್ತಂಡಗಳಲ್ಲಿ ಭಾರತದ್ದೇ ಪಾರಮ್ಯ, ಭಾರತವೇ ಸಾರ್ವಭೌಮ. ಈವರೆಗೆ ನಡೆದಿರುವ 8 ಪಂದ್ಯಗಳಲ್ಲಿ ಏಂಟರಲ್ಲೂ ಭಾರತವೇ ಗೆದ್ದಿದೆ. ಒಂದು ಬಾರಿಯೂ ಪಾಕ್ ಗೆ ಗೆಲುವಿನ ನಗು ಬೀರಲು ಸಾಧ್ಯವಾಗಿಲ್ಲ. ಆದ್ರೆ ಮಿನಿ ವಿಶ್ವಕಪ್‌ ಖ್ಯಾತಿಯ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಬಂದ್ರೆ ಇಲ್ಲಿ ಫಲಿತಾಂಶ 40:60 ಇದೆ. ಇದನ್ನೂ ಓದಿ: ಕೊನೆ ಓವರ್‌ನಲ್ಲಿ ಹ್ಯಾರಿಸ್ ಹ್ಯಾಟ್ರಿಕ್‌ ವಿಕೆಟ್‌; ಡೆಲ್ಲಿ ಆಲೌಟ್‌ – ಯುಪಿಗೆ 33 ರನ್‌ಗಳ ಜಯ

    ಈವರೆಗೆ ಭಾರತ ಮತ್ತು ಪಾಕಿಸ್ತಾನ (Ind vs Pak) ತಂಡಗಳು ಪರಸ್ಪರ 5 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ ತಂಡ 2 ಬಾರಿ ಗೆದ್ದಿದ್ದರೆ, 3 ಬಾರಿ ಪಾಕಿಸ್ತಾನದ್ದೇ ಮೇಲುಗೈ. ಅದರಲ್ಲೂ ಒಂದು ಬಾರಿ ಅಂತೂ ಫೈನಲ್ ನಲ್ಲೇ ಭಾರತ ತಂಡವನ್ನು ಸೋಲಿಸಿರುವ ಹೆಗ್ಗಳಿಕೆ ಪಾಕಿಸ್ತಾನದ್ದು. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಫೆಬ್ರವರಿ 19ರಂದು ಚಾಲನೆ ಸಿಕ್ಕಿದ್ದು ಇಂದು ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಸಂದರ್ಭದಲ್ಲಿ 1998 ರಿಂದ 2017ರ ವರೆಗೆ ಇತ್ತಂಡಗಳ ನಡುವೆ ನಡೆದಿರುವ ಐದು ಮುಖಾಮುಖಿಗಳ ವಿವರ ಇಲ್ಲಿದೆ. ಇದನ್ನೂ ಓದಿ: ಆಂಗ್ಲರನ್ನು ಸದೆಬಡಿದ ಇಂಗ್ಲಿಸ್ – ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ!

    2004ರಲ್ಲಿ ಪಾಕ್‌ಗೆ ಮೊದಲ ಗೆಲುವಿನ ಕೇಕೆ
    ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಇನ್ಝಮಾಮುಲ್ ಹಕ್ ಅವರು ಫೀಲ್ಡಿಂಗ್ ಆಯ್ದುಕೊಂಡರು. ವೇಗಿಗಳಾದ ಶೊಯೇಬ್ ಅಖ್ತರ್ ಮತ್ತು ನವೀದ್ ಉಲ್ ಹಸನ್ ದಾಳಿಗೆ ತತ್ತರಿಸಿದ ಭಾರತ ತಂಡ 200 ರನ್ ಗಳಿಗೆ ಆಲೌಟ್ ಆಯಿತು. ನಾಯಕ ಸೌರವ್ ಗಂಗೂಲಿ (0), ವೀರೇಂದ್ರ ಸೆಹ್ವಾಗ್ (10), ವಿವಿಎಸ್ ಲಕ್ಷ್ಮಣ್(3) ಪಾಕ್ ಬೌಲಿಂಗ್ ಅನ್ನು ಎದುರಿಸಲಾಗದೆ ಬೇಗನೇ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್ (67) ಮತ್ತು ಮೊಹಮ್ಮದ್ ಕೈಫ್ (27) ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡವನ್ನು ಕುಸಿತದಿಂದ ತಪ್ಪಿಸಿದರೂ ರನ್ ರೇಟ್ ಮೇಲೆ ಹೊಡೆತ ಬಿತ್ತು.

    ಕೈಫ್ ವಿಕೆಟ್ ಪತನದ ಬಳಿಕ ಕ್ರೀಸಿಗೆ ಬಂದ ಯುವರಾಜ್ ಸಿಂಗ್ (0) ಬಂದ ವೇಗದಲ್ಲಿ ಪೆವಿಲಿಯನ್ ಗೆ ಮರಳಿದರೆ, ರೋಹನ್ ಗವಸ್ಕರ್ ಕ್ರೀಸಿನಲ್ಲಿ ಸುಮ್ಮನೇ ಸಮಯ ದೂಡಿದರು. ಅಪರೂಪಕ್ಕೆ ಬ್ಯಾಟ್ ಬೀಸುತ್ತಿದ್ದ ಅಜಿತ್ ಅಗರ್ಕರ್ ಅವರು 50 ಎಸೆತಗಳಿಂದ 47 ರನ್ ಗಳಿಸಿ ತಂಡದ ಮೊತ್ತ 200ರ ಗಡಿಗೆ ತಲುಪಲು ಕಾರಣವಾದರು. ಸಾಧಾರಣ ಮೊತ್ತವನ್ನು ಬೆಂಬತ್ತಿ ಹೊರಟ ಪಾಕಿಸ್ತಾನ ತಂಡ 27 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಾಗ ಭಾರತ ತಂಡ ಗೆಲುವಿನ ಕನಸು ಕಂಡಿತ್ತು. ಆದರೆ ಮೊಹಮ್ಮದ್ ಯೂಸುಫ್ ಅವರು ಅಜೇಯ 81 ರನ್‌ಗಳ ನೆರವಿನಿಂದ ಪಾಕಿಸ್ತಾನ ತಂಡ 49.2 ಓವರ್ ಗಳಲ್ಲಿ ಗುರಿ ತಲುಪಿತು. ಅಂತಿಮವಾಗಿ 3 ವಿಕೆಟ್‌ಗಳಿಂದ ಗೆದ್ದು ಬೀಗಿತು. ಇದು ಐಸಿಸಿ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಪ್ರಥಮ ವಿಜಯವಾಗಿದೆ.

    2009ರಲ್ಲೂ ಭಾರತ ವಿಫಲ
    ದಕ್ಷಿಣ ಆಫ್ರಿಕಾದಲ್ಲಿ ನಡೆದ ಭಾರತ vs ಪಾಕಿಸ್ತಾನ ಮುಖಾಮುಖಿಯಲ್ಲಿ ಭಾರತ ತಂಡ 54 ರನ್ ಗಳಿಂದ ಪರಾಭವ ಅನುಭವಿಸಿತು. ಟಾಸ್ ಗೆದ್ದ ಪಾಕ್ ನಾಯಕ ಯೂನಸ್ ಖಾನ್ ಬ್ಯಾಟಿಂಗ್ ಆಯ್ದುಕೊಂಡರು. ಶೊಯೇಬ್ ಮಲಿಕ್ ಅವರು ಅಮೋಘ ಶತಕ(128)ದ ಮತ್ತು ಮೊಹಮ್ಮದ್ ಯೂನುಸ್ ಅವರ ಅರ್ಧಶತಕ (87) ಗಳ ನೆರವಿನಿಂದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು. ಆಶೀಶ್ ನೆಹ್ರಾ 4 ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಡಕೆಟ್‌, ರೂಟ್‌ ಶತಕದ ಜೊತೆಯಾಟ – ಗರಿಷ್ಠ ರನ್‌ ದಾಖಲೆ, ಆಸೀಸ್‌ ಗೆಲುವಿಗೆ 352 ರನ್‌ ಗುರಿ

    ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಸಚಿನ್ ವಿಕೆಟ್ ಬೇಗನೇ ಕಳೆದುಕೊಂಡರೂ ಗೌತಮ್ ಗಂಭೀರ್ (57) ಮತ್ತು ರಾಹುಲ್ ದ್ರಾವಿಡ್ (76) ಅವರು ತಂಡವನ್ನು ಆಧರಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ (46) ಅವರಿಗೆ ಸರಿಯಾದ ಬೆಂಬಲ ಸಿಗದ್ದರಿಂದ ಭಾರತ ತಂಡ ಅಂತಿಮವಾಗಿ 44.5 ಓವರ್ ಗಳಲ್ಲಿ 248 ರನ್ ಗೆ ಸರ್ವಪತನ ಕಂಡಿತು.

    2013ರಲ್ಲಿ ಭಾರತಕ್ಕೆ ಮೊದಲ ಗೆಲುವು
    ಎಡ್ಜ್‌ಬಾಸ್ಟನ್ ಮಳೆಯಿಂದ ತೊಂದರೆಗೀಡಾದ ಪಂದ್ಯದಲ್ಲಿ ಭಾರತ ತಂಡ ಡಕ್‌ವರ್ತ್ ಲೂಯಿಸ್ ನಿಯಮದಡಿ 8 ವಿಕೆಟ್ ಗಳ ಭರ್ಜರಿ ವಿಜಯ ಸಾಧಿಸಿತು. ಮಳೆಯಿಂದಾಗಿ 40 ಓವರ್ ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ 39.4 ಓವರ್ ಗಳಲ್ಲಿ 165 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಭಾರತ ತಂಡ 19.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತ್ತು. ಆಗ ಮಳೆ ಮುಂದುವರಿದ ಹಿನ್ನಲೆಯಲ್ಲಿ ಭಾರತವನ್ನು ವಿಜಯಿ ಎಂದು ಘೋಷಿಸಲಾಯಿತು.

    2017ರಲ್ಲಿ ಇತ್ತಂಡಗಳಿಗೂ ಬೇವು ಬೆಲ್ಲ
    ಈ ವರ್ಷ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದ ಪಂದ್ಯದಲ್ಲಿ ಭಾರತ ಭರ್ಜರಿ ವಿಜಯ ಸಾಧಿಸಿದರೆ ಫೈನಲ್ ನಲ್ಲಿ ಪಾಕಿಸ್ತಾನ ಗೆದ್ದು ಟ್ರೋಫಿ ಮೇಲೆ ಹಕ್ಕು ಸಾಧಿಸಿತು. ಎಡ್ಜ್‌ಬಾಸ್ಟನ್ ನಲ್ಲಿ ನಡೆದ ಬಿ-ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ತಂಡ ಡೆಕ್ ವರ್ತ್ ಲೂಯಿಸ್ ವಿಧಾನದಿಂದ 124 ರನ್‌ಗಳಿಂದ ಗೆದ್ದಿತು. ಮಳೆಯಿಂದಾಗಿ 48 ಓವರ್ ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಭಾರತ ತಂಡ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟಿತ್ತು. ರೋಹಿತ್ ಶರ್ಮಾ (91), ಶಿಖರ್ ಧವನ್ (68), ವಿರಾಟ್ ಕೊಹ್ಲಿ (81) ಮತ್ತು ಯುವರಾಜ್ ಸಿಂಗ್ (53) ಅವರ ಅರ್ಧಶತಕಗಳ ಸಹಾಯದಿಂದ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 319 ರನ್ ಗಳನ್ನು ಕಲೆ ಹಾಕಿತು. ಇದಕ್ಕುತ್ತರವಾಗಿ ಪಾಕಿಸ್ತಾನ ಕೇವಲ 33.4 ಓವರ್ ಗಳಲ್ಲೇ 164 ರನ್ ಗಳಿಸುವಲ್ಲಿ ಸರ್ವಪತನ ಕಂಡಿತು.

    ದಿ ಓವಲ್ ನಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ 180 ರನ್‌ಗಳಿಂದ ಗೆದ್ದಿತು . ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಫಖರ್ ಜಮಾನ್ ಅವರ ಸ್ಫೋಟಕ 114 ರನ್ ನಿಂದಾಗಿ 4 ವಿಕೆಟ್ ನಷ್ಟಕ್ಕೆ 338 ರನ್ ಪೇರಿಸಿತು. ಅಜರ್ ಅಲಿ (59), ಮೊಹಮ್ಮದ್ ಹಫೀಝ್ (57) ರನ್ ಗಳಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಕೇವಲ 30.3 ಓವರ್ ಗಳಲ್ಲಿ 158 ರನ್ ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಇತಿಹಾಸ ನಿರ್ಮಿಸಿದ ಬೆನ್‌ ಡಕೆಟ್‌ – ಸಚಿನ್‌, ಗಂಗೂಲಿ ದಾಖಲೆಗಳು ನುಚ್ಚುನೂರು

  • ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ – ಸೋತರೆ ಬಹುತೇಕ ಮನೆಗೆ

    ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ – ಸೋತರೆ ಬಹುತೇಕ ಮನೆಗೆ

    ದುಬೈ: ರೋಹಿತ್‌ ಶರ್ಮ (Rohit Sharma) ಸಾರಥ್ಯದ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿಯ (Champions Trophy) ʻಎʼ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಭಾನುವಾರ (ಇಂದು) ಬದ್ಧ ವೈರಿ ಪಾಕಿಸ್ತಾನ ತಂಡದ ಸವಾಲು ಎದುರಿಸಲಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್‌ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಗುರಿಯಲ್ಲಿದೆ. ಹಾಗೆಯೇ ಮೊಹಮದ್‌ ರಿಜ್ವಾನ್‌ ನೇತೃತ್ವದ ಪಾಕಿಸ್ತಾನ, ಟೂರ್ನಿಯಿಂದ ಹೊರಗುಳಿಯುವುದನ್ನು ತಪ್ಪಿಸಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿದೆ.

    ಬಾಂಗ್ಲಾದೇಶ ಎದುರು ಆರು ವಿಕೆಟ್‌ಗಳ ಜಯ ಸಾಧಿಸಿರುವ ಟೀಮ್‌ ಇಂಡಿಯಾ ಉತ್ತಮ ಸ್ಥಿತಿಯಲ್ಲಿದ್ದರೆ, ನ್ಯೂಜಿಲೆಂಡ್‌ ವಿರುದ್ಧ 60 ರನ್‌ಗಳಿಂದ ಸೋತಿರುವ ಪಾಕಿಸ್ತಾನ, ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿ ಎದುರಿಸುತ್ತಿದೆ. ಹೀಗಾಗಿ ಪಂದ್ಯ ತೀವ್ರ ಹೈವೋಲ್ಟೇಜ್‌ ಪಡೆಯುವ ನಿರೀಕ್ಷೆಯಿದ್ದು, ಅಭಿಮಾನಿಗಳಿಗೆ ರಸದೌತಣ ಉಣಬಡಿಸುವ ಸಾಧ್ಯತೆ ಇದೆ. ಉಪಖಂಡದ ಎದುರಾಳಿಗಳಾದ ಭಾರತ-ಪಾಕ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕೊನೆಯದಾಗಿ 2017ರ ಫೈನಲ್‌ನಲ್ಲಿ ಎದುರಾಗಿದ್ದವು. ಆ ಪಂದ್ಯದಲ್ಲಿ ಪಾಕಿಸ್ತಾನ 180 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿ ಮೊದಲ ಸಲ ಚಾಂಪಿಯನ್‌ ಆಗಿತ್ತು. ಈಗ ರಿಜ್ವಾನ್‌ ಮತ್ತು ತಂಡ ಆ ಜಯದ ಸ್ಫೂರ್ತಿ ಪಡೆಯಲು ಹಾತೊರೆಯುತ್ತಿದೆ. ಆದರೆ ಎಲ್ಲಾ ವಿಭಾಗಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ.

    ಸದಾ ತೀವ್ರತೆಯನ್ನುಂಟು ಮಾಡುವ ಉಭಯ ರಾಷ್ಟ್ರಗಳ ನಡುವಿನ ಪಂದ್ಯವು ದುಬೈನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳಲ್ಲಿ ಶಾಂತತೆ ನೆಲೆಯೂರಿದೆ. ಕರಾಚಿಯಲ್ಲಿ ಕಿವೀಸ್‌ ವಿರುದ್ಧ ಸೋತ ನಂತರ ದುಬೈಗೆ ಆಗಮಿಸಿರುವ ಪಾಕ್‌, ಸ್ಥಳೀಯ ವಾತಾವರಣಕ್ಕೆ ಈಗಾಗಲೇ ಹೊಂದಿಕೊಂಡಿದೆ.

    ಬಾಂಗ್ಲಾದೇಶ ವಿರುದ್ಧ 41 ರನ್‌ ಗಳಿಸಿದ ಟೀಮ್‌ ಇಂಡಿಯಾದ ನಾಯಕ ರೋಹಿತ್‌ ಶರ್ಮ, ಫಾರ್ಮ್‌ ಕಂಡುಕೊಂಡಿರುವುದನ್ನು ಬಿಂಬಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 8ನೇ ಶತಕ ಗಳಿಸಿ ಭಾರತ ತಂಡದ ಗೆಲುವನ್ನು ಸುಲಭಗೊಳಿಸಿದ ಶುಭಮನ್‌ ಗಿಲ್‌, ಮತ್ತೊಂದು ಸೊಬಗಿನ ಆಟಕ್ಕೆ ಸಜ್ಜುಗೊಂಡಿದ್ದಾರೆ.

    ಬಾಬರ್‌ ಅಜಂ ಮೇಲೆ ಭಾರೀ ಒತ್ತಡ
    ಅತ್ತ ಪಾಕಿಸ್ತಾನ ಪ್ರಮುಖ ಬ್ಯಾಟರ್‌ಗಳ ಪೇಲವ ಪ್ರದರ್ಶನದಿಂದ ಚಿಂತಕ್ರಾಂತವಾಗಿದೆ. ತಂಡದ ಸ್ಟಾರ್‌ ಎನಿಸಿರುವ ಬಾಬರ್‌ ಅಜಂ, ಕಿವೀಸ್‌ ವಿರುದ್ಧ 90 ಎಸೆತಗಳಲ್ಲಿ 64 ರನ್‌ ಗಳಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಗಾಯದಿಂದಾಗಿ ಫಖರ್‌ ಜಮಾನ್‌ ಹೊರಗುಳಿದಿರುವುದು ಕೂಡ ಪಾಕ್‌ನ ಒತ್ತಡವನ್ನು ತೀವ್ರಗೊಳಿಸಿದೆ. ಇವರ ಬದಲಿಗೆ ಇಮಾಮ್‌ ಉಲ್‌ ಹಕ್‌ ತಂಡವನ್ನು ಸೇರ್ಪಡೆಗೊಂಡಿದ್ದು, ಅವರ ಸ್ಥಾನವನ್ನು ಎಷ್ಟರ ಮಟ್ಟಿಗೆ ತುಂಬಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

    ನಿವೃತ್ತಿ ಅಂಚಿನಲ್ಲಿರುವ ರನ್‌ ಮಷಿನ್‌ ವಿರಾಟ್‌ ಕೊಹ್ಲಿ, ಇತ್ತೀಚಿಗೆ ಉತ್ತಮ ಆಟವಾಡುವಲ್ಲಿ ಎಡವಿದ್ದಾರೆ. ಆದರೆ ಪಾಕಿಸ್ತಾನ ವಿರುದ್ಧದ ತಮ್ಮ ಅಮೋಘ ಫಾರ್ಮ್ ಮರುಕಳಿಸುವ ಜಾಣ್ಮೆಯನ್ನು ಹೊಂದಿದ್ದಾರೆ.

    ಬೌಲಿಂಗ್‌ ವಿಭಾಗದಲ್ಲಿ ಲಯ ಕಂಡುಕೊಂಡಿರುವ ವೇಗಿ ಮೊಹಮ್ಮದ್‌ ಶಮಿಗೆ ಹರ್ಷಿತ್‌ ರಾಣಾ ಉತ್ತಮ ಸಾಥ್‌ ನೀಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ 5 ವಿಕೆಟ್‌ ಕಬಳಿಸಿದ ಶಮಿ, ಗಾಯಾಳು ಜಸ್‌ಪ್ರೀತ್‌ ಬುಮ್ರಾ ಅವರ ಅಲಭ್ಯತೆಯನ್ನು ಕಾಡದಂತೆ ನೋಡಿಕೊಂಡಿದ್ದರು. 2017ರ ಫೈನಲ್‌ನಲ್ಲಿ ಅರ್ಧ ಶತಕ ಗಳಿಸಿಯೂ ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲಗೊಂಡ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ, ಈ ಬಾರಿ ನಿರಾಸೆಯನ್ನು ಸರಿದೂಗಿಸುವ ವಿಶ್ವಾಸದಲ್ಲಿದ್ದಾರೆ. ಸದ್ಯ ಬದ್ಧವೈರಿಗಳ ನಡುವಿನ ಕಾದಾಟಕ್ಕೆ ದುಬೈ ಕ್ರೀಡಾಂಗಣ ಸಾಕ್ಷಿಯಾಗಲಿದ್ದು, ಕುತೂಹಲ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ಪಾಕ್‌ ನೆಲದಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆ – ಟ್ರೋಲ್‌ ಆಯ್ತು PCB

    ಪಾಕ್‌ ನೆಲದಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆ – ಟ್ರೋಲ್‌ ಆಯ್ತು PCB

    ಲಾಹೋರ್: ಚಾಂಪಿಯನ್ಸ್‌ ಟ್ರೋಫಿಯ ಆಸ್ಟ್ರೇಲಿಯಾ ವರ್ಸಸ್‌ ಇಂಗ್ಲೆಂಡ್‌ ಪಂದ್ಯಕ್ಕೂ ಮುನ್ನ ಲಾಹೋರ್‌ನಲ್ಲಿ ಭಾರತದ ರಾಷ್ಟ್ರಗೀತೆ (Indian national anthem) ಮೊಳಗಿತು.

    2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೆಗಾ ಪಂದ್ಯಕ್ಕೆ ಇನ್ನೂ ಒಂದು ದಿನ ಬಾಕಿ ಇದೆ. ಆದರೆ, ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ಈಗಾಗಲೇ ಪಾಕ್‌ ನೆಲದಲ್ಲಿ ಮೊಳಗಿದೆ.

    ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಗ್ರೂಪ್ ಬಿ ಪಂದ್ಯ ನಡೆಯುತ್ತಿದೆ. ಮೊದಲು ಇಂಗ್ಲೆಂಡ್‌ನ ರಾಷ್ಟ್ರಗೀತೆ ನುಡಿಸಲಾಯಿತು. ನಂತರ ಆಸ್ಟ್ರೇಲಿಯಾದ ರಾಷ್ಟ್ರಗೀತೆ ಬದಲಿಗೆ ಭಾರತದ ರಾಷ್ಟ್ರಗೀತೆ ‘ಭಾರತ್ ಭಾಗ್ಯ ವಿಧಾತ’ ನುಡಿಸಲಾಯಿತು.

    ತಕ್ಷಣ ಆದನ್ನು ಶೀಘ್ರದಲ್ಲೇ ಸರಿಪಡಿಸಲಾಯಿತು. ಆದರೆ, ಈ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಟ್ರೋಲ್‌ಗೆ ಒಳಗಾಗಿದೆ.

  • ಶಮಿಗೆ 5 ವಿಕೆಟ್‌; ಬಾಂಗ್ಲಾ ಆಲೌಟ್‌ – ಟೀಂ ಇಂಡಿಯಾಗೆ 229 ರನ್‌ಗಳ ಗುರಿ

    ಶಮಿಗೆ 5 ವಿಕೆಟ್‌; ಬಾಂಗ್ಲಾ ಆಲೌಟ್‌ – ಟೀಂ ಇಂಡಿಯಾಗೆ 229 ರನ್‌ಗಳ ಗುರಿ

    – ಶತಕ ಸಿಡಿಸಿ ಬಾಂಗ್ಲಾಗೆ ನೆರವಾದ ತೋಹಿದ್ ಹೃದಯ್

    ದುಬೈ: ಇಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಎರಡನೇ ಪಂದ್ಯದಲ್ಲಿ 228 ರನ್‌ಗಳಿಗೆ ಆಲೌಟ್‌ ಆದ ಬಾಂಗ್ಲಾದೇಶ ಟೀಂ ಇಂಡಿಯಾಗೆ 229 ರನ್‌ಗಳ ಗುರಿ ನೀಡಿದೆ. ಭಾರತ ಪರ ಮಹಮ್ಮದ್‌ ಶಮಿ 5 ವಿಕೆಟ್‌ ಕಿತ್ತು ಮಿಂಚಿದರು.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾ 49.4 ಬಾಲ್‌ಗಳಿಗೆ ಆಲೌಟ್‌ ಆಗಿ 228 ರನ್‌ ಗಳಿಸಿತು. ತೋಹಿದ್ ಹೃದಯ್ ಶತಕ ಸಿಡಿಸಿ ಗಮನ ಸೆಳೆದರು.

    ಜಾಕರ್ ಅಲಿ ಅರ್ಧಶತಕ (68), ತಾಂಜಿದ್ ಹಸನ್ 25, ರಿಷದ್ ಹೊಸೇನ್ 18 ರನ್‌ ಗಳಿಸಿದರು. ತಂಡದ ಕ್ಯಾಪ್ಟನ್‌ ನಜ್ಮುಲ್ ಹೊಸೇನ್ ಶಾಂತೊ ಸೇರಿದಂತೆ ಪ್ರಮುಖ ಆಟಗಾರರೇ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು.

    ಭಾರತದ ಬೌಲರ್‌ಗಳು ಬಾಂಗ್ಲಾ ಬ್ಯಾಟರ್‌ಗಳ ಬೆವರಿಳಿಸಿದರು. ಟೀಂ ಇಂಡಿಯಾ ಪರ ಮೊಹಮ್ಮದ್‌ ಶಮಿ 5 ವಿಕೆಟ್‌ ಕಿತ್ತು ಮಿಂಚಿದರು. ಹರ್ಷಿತ್‌ ರಾಣಾ 3 ವಿಕೆಟ್‌ ಕಬಳಿಸಿ ಗಮನ ಸೆಳೆದರು. ಅಕ್ಷರ್‌ ಪಟೇಲ್‌ 2 ವಿಕೆಟ್‌ ಕಿತ್ತರು.

  • Champions Trophy 2025 | ಇಂದು ಭಾರತ-ಬಾಂಗ್ಲಾ ಮುಖಾಮುಖಿ – ಹಿಟ್‌ಮ್ಯಾನ್‌ ಪಡೆಗೆ ಗೆಲುವಿನ ತವಕ

    Champions Trophy 2025 | ಇಂದು ಭಾರತ-ಬಾಂಗ್ಲಾ ಮುಖಾಮುಖಿ – ಹಿಟ್‌ಮ್ಯಾನ್‌ ಪಡೆಗೆ ಗೆಲುವಿನ ತವಕ

    ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಕ್ರಿಕೆಟ್ ಟೂರ್ನಿಯಲ್ಲಿಂದು ಟೀಂ ಇಂಡಿಯಾ (Team India) ತನ್ನ ಮೊದಲ ಪಂದ್ಯ ಆಡಲಿದೆ. ಬಾಂಗ್ಲಾದೇಶ ತಂಡದ ವಿರುದ್ಧ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಮೆನ್ ಇನ್ ಬ್ಲ್ಯೂ, ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ.

    ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಇಂದು ತ‌ನ್ನ ಮೊದಲ ಪಂದ್ಯದೊಂದಿಗೆ ಚಾಂಪಿಯನ್ಸ್‌ ಟ್ರೋಫಿ ಅಭಿಯಾನ ಆರಂಭಿಸಲಿದೆ. ಬಾಂಗ್ಲಾದೇಶ (Bangladesh)ವಿರುದ್ಧ ಮೊದಲ ಪಂದ್ಯವಾಡಲಿರುವ ರೋಹಿತ್ ಪಡೆ, 2025ರ ಐಸಿಸಿ ಟೂರ್ನಿಯಲ್ಲಿ ಶುಭಾರಂಭದ ಕಾತುರತೆಯಲ್ಲಿದೆ. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸರಣಿ ಗೆದ್ದು ಅದೇ ಜೋಶ್‌ನಲ್ಲಿ, ಚಾಂಪಿಯನ್ಸ್ ಟ್ರೋಫಿಗೆ ತೆರಳಿರೋ ಭಾರತ ತಂಡ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದುವರೆಗೂ ಭಾರತ ಮತ್ತು ಬಾಂಗ್ಲಾ ನಡುವೆ 41 ಪಂದ್ಯಗಳು ನಡೆದಿದ್ದು 32 ಪಂದ್ಯಗಳಲ್ಲಿ ಭಾರತ, 8ರಲ್ಲಿ ಬಾಂಗ್ಲಾ ಗೆಲುವು ಸಾಧಿಸಿದ್ದರೆ, 1 ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ.

    ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ. ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀ ಇಂಡಿಯಾ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸುವ ಮೂಲಕ ಫಾರ್ಮ್‌ ಸಾಬೀತುಪಡಿಸಿದ್ದರು. ಅದೇ ರೀತಿ ಸರಣಿಯ 3ನೇ ಪಂದ್ಯದಲ್ಲಿ ರನ್ ಮಿಷಿನ್ ಕೊಹ್ಲಿ ಕೂಡ ಅರ್ಧ ಶತಕದೊಂದಿಗೆ ಫಾರ್ಮ್ ಕಂಡುಕೊಂಡಿದ್ರು. ಇದನ್ನೂ ಓದಿ: Champions Trophy | ಯಾವ ವರ್ಷ – ಯಾರು ಚಾಂಪಿಯನ್ಸ್‌? – ಭಾರತ ಕೊನೇ ಬಾರಿ ಟ್ರೋಫಿ ಗೆದ್ದಿದ್ದು ಯಾವಾಗ?

    ಇನ್ನೂ ಭಾರತ ತಂಡದ ಬ್ಯಾಟಿಂಗ್ ನಲ್ಲಿ ಶುಭಮನ್ ಗಿಲ್ ಅಗ್ರ ಕ್ರಮಾಂಕದಲ್ಲಿ, ಕೆ.ಎಲ್ ರಾಹುಲ್, ಶ್ರೇಯಸ್ ಐಯರ್ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದ್ದಾರೆ. ಇತ್ತ ಬೌಲಿಂಗ್‌ನಲ್ಲಿ ಬುಮ್ರಾ ಅನುಪಸ್ಥಿತಿ ಕೊಂಚ ಕಾಡುವ ಸಾಧ್ಯತೆ ಇದೆ. ಈಗಷ್ಟೇ ಗಾಯದ ಸಮಸ್ಯೆಯಿಂದ ವಾಪಸ್ ಆಗಿರೋ ಮೊಹಮ್ಮದ್ ಶಮಿ ಬೌಲಿಂಗ್ ಪಡೆ ಮುನ್ನಡಸಲಿದ್ದಾರೆ. ಶಮಿ ಜೊತೆ ಅರ್ಷ್‌ದೀಪ್‌ ಸಿಂಗ್‌ ಜೊತೆಯಾದ್ರೆ ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ, ರವೀಂದ್ರ ಜಡೇಜಾ ಕಮಾಲ್ ಮಾಡುವ ಸಾಧ್ಯತೆ ಇದೆ. ಜೊತೆಗೆ ಅಲ್ರೌಂಡರ್ ವಿಭಾಗದಲ್ಲಿ ಜಡ್ಡು, ಪಾಂಡ್ಯ ಹಾಗೂ ವಾಷಿಂಗ್ಟನ್‌ ಸುಂದರ್‌ ನೆರವಾಗಲಿದ್ದಾರೆ.

    ಇತ್ತ ಬಾಂಗ್ಲಾದೇಶ ತಂಡ ಕೂಡ ಬಲಿಷ್ಠವಾಗಿಯೇ ಇದೆ. ಐಸಿಸಿ ಟೂರ್ನಿಯಲ್ಲಿ ಭಾರತದ ವಿರುದ್ಧ ಉತ್ತಮ ಸಾಧನೆ ಇಲ್ಲದಿದ್ದರೂ, ತಂಡವನ್ನ ಕಡೆಗಣಿಸುವಂತಿಲ್ಲ. ಹಿರಿಯ ಮತ್ತು ಯುವ ಆಟಗಾರರ ಪಡೆಯೊಂದಿಗೆ ಟೂರ್ನಿ ಶುಭಾರಂಭಕ್ಕೆ ಬಾಂಗ್ಲಾ ಪಡೆ ಕೂಡ ಕಾತರೆಯಿಂದ ಎದುರು ನೋಡುತ್ತಿದೆ. ಇದನ್ನೂ ಓದಿ: Ind vs Pak ಬ್ಲಾಕ್‌ಬಸ್ಟರ್ ಪಂದ್ಯದ VIP ಟಿಕೆಟ್‌ 3.50 ಕೋಟಿಗೆ ಮಾರಿಕೊಂಡ ಪಿಸಿಬಿ ಅಧ್ಯಕ್ಷ

    ದಾಖಲೆಗಳ ಸನಿಹದಲ್ಲಿ ಕೊಹ್ಲಿ, ರೋಹಿತ್:‌
    ಏಕದಿನ ಪಂದ್ಯದಲ್ಲಿ ಕೊಹ್ಲಿ 14,000 ರನ್‌ಗಳ ಗಡಿ ಮುಟ್ಟಲು, 37 ರನ್‌ಗಳಷ್ಟೇ ಬಾಕಿ ಇದೆ. ಈ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ 3ನೇ, ಭಾರತದ 2ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ‌. ಅಲ್ಲದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಂಡೀಸ್‌ನ ಕ್ರಿಸ್‌ ಗೇಲ್ ದಾಖಲೆ ಮುರಿದು ಅತಿ ಹೆಚ್ಚು ರನ್ ಹಾಗೂ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧ ಶತಕ ದಾಖಲು ಮಾಡಿರೋ ರಾಹುಲ್ ದ್ರಾವಿಡ್ ದಾಖಲೆ ಮುರಿಯುವ ಅವಕಾಶ ಕೂಡ ಇದೆ. ಇದೇ ಕಾರಣಕ್ಕೆ ಟ್ರೋಫಿ ಜೊತೆಗೆ ದಾಖಲೆ ನಿರ್ಮಾಣಕ್ಕೆ ಕೊಹ್ಲಿಗೆ ಟೂರ್ನಿ ಮಹತ್ವದ್ದಾಗಲಿದೆ. ಇದನ್ನೂ ಓದಿ: ಲಾಥಮ್ – ಯಂಗ್ ಶತಕಗಳ ಅಬ್ಬರಕ್ಕೆ ಪಾಕ್ ಪಂಚರ್; ನ್ಯೂಜಿಲೆಂಡ್‌ಗೆ 60 ರನ್‌ಗಳ ಭರ್ಜರಿ ಜಯ

  • Ind vs Pak ಬ್ಲಾಕ್‌ಬಸ್ಟರ್ ಪಂದ್ಯದ VIP ಟಿಕೆಟ್‌ 3.50 ಕೋಟಿಗೆ ಮಾರಿಕೊಂಡ ಪಿಸಿಬಿ ಅಧ್ಯಕ್ಷ

    Ind vs Pak ಬ್ಲಾಕ್‌ಬಸ್ಟರ್ ಪಂದ್ಯದ VIP ಟಿಕೆಟ್‌ 3.50 ಕೋಟಿಗೆ ಮಾರಿಕೊಂಡ ಪಿಸಿಬಿ ಅಧ್ಯಕ್ಷ

    ಇಸ್ಲಾಮಾಬಾದ್‌/ಅಬುಧಾಬಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy 2025) ಫೆಬ್ರವರಿ 23ರ ಸೂಪರ್‌ ಸಂಡೇ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಬ್ಲಾಕ್‌ಬಸ್ಟರ್ ಪಂದ್ಯಕ್ಕಾಗಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 30 ಆಸನಗಳ ವಿಐಪಿ ಬಾಕ್ಸ್ ಟಿಕೆಟ್‌ಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್‌ ನಖ್ವಿ (PCB Chairman Mohsin Naqvi) ಮಾರಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಹೌದು.. ಭದ್ರತಾ ಕಾರಣಗಳಿಂದ ಈ ಬಾರಿಯ ಟೂರ್ನಿ ಹೈಬ್ರಿಡ್‌ ಮಾದರಿಯಲ್ಲಿ ನಡೆಯುತ್ತಿದ್ದು, ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಹಾಗಾಗಿ ದುಬೈನಲ್ಲಿ ನಡೆಯುವ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಉತ್ತಮ ಆಸನ, ವಿಶೇಷ ಸೌಕರ್ಯವುಳ್ಳ ಬಾಕ್ಸ್‌ನಲ್ಲಿ ತಮ್ಮ ಕುಟುಂಬ, ಆಪ್ತರೊಂದಿಗೆ ಕುಳಿತು ವೀಕ್ಷಿಸಲು ನಖ್ವಿ ಅವರಿಗೆ ಸುಮಾರು 95 ಲಕ್ಷ ರೂ. (4 ಲಕ್ಷ ದುಬೈ ಕರೆನ್ಸಿ) ಬೆಲೆಯ 30 ವಿಐಪಿ ಆಸನದ ಟಿಕೆಟ್‌ಗಳನ್ನು (VIP box Tickets) ನೀಡಲಾಗಿತ್ತು. ಆದ್ರೆ ಈ ಟಿಕೆಟ್‌ಗಳನ್ನ ಪಿಸಿಬಿ ಅಧ್ಯಕ್ಷ ಬರೋಬ್ಬರಿ 3.5 ಕೋಟಿ ರೂ. (ಸುಮಾರು 4 ಲಕ್ಷ ಡಾಲರ್‌)ಗೆ ಮಾರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಇಂದಿನಿಂದ ಚಾಂಪಿಯನ್ಸ್ ಟ್ರೋಫಿ – ಭಾರತದ ಮೂವರು ʻಚಾಂಪಿಯನ್ಸ್‌ʼಗೆ ಕೊನೇ ಟೂರ್ನಿ!

    ವಿಐಪಿ ಟಿಕೆಟ್‌ಗಳನ್ನು ಮಾರಾಟ ಮಾಡಿಕೊಂಡಿರುವ ನಖ್ವಿ ಅಭಿಮಾನಿಗಳೊಂದಿಗೆ ಕುಳಿತು ಸಾಮಾನ್ಯರಂತೆ ಕ್ರಿಕೆಟ್‌ ಪಂದ್ಯ ವೀಕ್ಷಣೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಟಿಕೆಟ್‌ ಮಾರಾಟ ಮಾಡಿದ ಹಣವನ್ನ ಕರಾಚಿ, ಲಾಹೋರ್ ಮತ್ತು ಪಾಕಿಸ್ತಾನದ ಇತರೇ ಕ್ರೀಡಾಂಗಣಗಳ ನವೀಕರಣಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Champions Trophy 2025 – ಚಾಂಪಿಯನ್ಸ್‌ ಟ್ರೋಫಿ ದಾಲ್ಮೀಯಾರ ಕನಸಿನ ಕೂಸು

    ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುತ್ತಿದೆ. ಇದರೊಂದಿಗೆ, ಸುಮಾರು 30 ವರ್ಷಗಳ ಬಳಿಕ ಪ್ರಮುಖ ಟೂರ್ನಿಯೊಂದಕ್ಕೆ ಪಾಕ್ ಆತಿಥ್ಯ ವಹಿಸಿದೆ. ಟೂರ್ನಿಯು ಫೆಬ್ರುವರಿ 19ರಂದು (ಇಂದಿನಿಂದ) ಆರಂಭವಾಗಲಿದೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಕಿವೀಸ್‌ ಪಡೆಯು ಅತಿಥೇಯ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಇದನ್ನೂ ಓದಿ: Champions Trophy | ಯಾವ ವರ್ಷ – ಯಾರು ಚಾಂಪಿಯನ್ಸ್‌? – ಭಾರತ ಕೊನೇ ಬಾರಿ ಟ್ರೋಫಿ ಗೆದ್ದಿದ್ದು ಯಾವಾಗ?

    ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್‌ ಕ್ರೀಡಾಂಗಣಗಳು ಟೂರ್ನಿಯ ಆತಿಥ್ಯ ವಹಿಸಿವೆ. ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವ ಭಾರತ ತನ್ನ ಪಾಲಿನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

  • Champions Trophy | ಯಾವ ವರ್ಷ – ಯಾರು ಚಾಂಪಿಯನ್ಸ್‌? – ಭಾರತ ಕೊನೇ ಬಾರಿ ಟ್ರೋಫಿ ಗೆದ್ದಿದ್ದು ಯಾವಾಗ?

    Champions Trophy | ಯಾವ ವರ್ಷ – ಯಾರು ಚಾಂಪಿಯನ್ಸ್‌? – ಭಾರತ ಕೊನೇ ಬಾರಿ ಟ್ರೋಫಿ ಗೆದ್ದಿದ್ದು ಯಾವಾಗ?

    ಬಾರಿ ಹೈಬ್ರಿಡ್‌ ಮಾದರಿಯಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ಕಿವೀಸ್‌ ತಂಡಗಳು ಸೆಣಸಲಿವೆ. ಟೂರ್ನಿಯ ಹೈವೋಲ್ಟೇಜ್‌ ಪಂದ್ಯವಾಗಿರುವ ಇಂಡೋ ಪಾಕ್‌ ಕದನ ಫೆ.23 ರಂದು ನಡೆಯಲಿದ್ದು, ಈ ಬಾರಿ ಚಾಂಪಿಯನ್ಸ್‌ ಕಿರೀಟ ಯಾರ ಮುಡಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ. ಇನ್ನೂ ವರೆಗಿನ ಟ್ರೋಫಿ ವಿನ್ನರ್‌ಗಳ ಪಟ್ಟಿ ನೋಡೋದಾದ್ರೆ…

    ಯಾವ ವರ್ಷ – ಯಾರು ಚಾಂಪಿಯನ್‌?
    1998
    ಆಯೋಜಕ ದೇಶ: ಬಾಂಗ್ಲಾದೇಶ
    ವಿನ್ನರ್: ದಕ್ಷಿಣ ಆಫ್ರಿಕಾ
    ರನ್ನರ್ ಅಪ್: ವೆಸ್ಟ್ ಇಂಡೀಸ್

    2000
    ಆಯೋಜಕ ದೇಶ : ನೈರೋಬಿ (ಕೀನ್ಯಾ)
    ವಿನ್ನರ್ : ನ್ಯೂಜಿಲ್ಯಾಂಡ್
    ರನ್ನರ್ ಅಪ್ : ಭಾರತ

    2002
    ಆಯೋಜಕ ದೇಶ : ಶ್ರೀಲಂಕಾ
    ಜಂಟಿ ವಿನ್ನರ್ : ಭಾರತ ಮತ್ತು ಶ್ರೀಲಂಕಾ

    2004
    ಆಯೋಜಕ ದೇಶ : ಇಂಗ್ಲೆಂಡ್
    ವಿನ್ನರ್ : ವೆಸ್ಟ್ ಇಂಡೀಸ್
    ರನ್ನರ್ ಅಪ್ : ಇಂಗ್ಲೆಂಡ್

    2006
    ಆಯೋಜಕ ದೇಶ : ಭಾರತ
    ವಿನ್ನರ್ : ಆಸ್ಟ್ರೇಲಿಯಾ
    ರನ್ನರ್ ಅಪ್ : ವೆಸ್ಟ್ ಇಂಡೀಸ್

    2009
    ಆಯೋಜಕ ದೇಶ : ದಕ್ಷಿಣ ಆಫ್ರಿಕಾ
    ವಿನ್ನರ್ : ಆಸ್ಟ್ರೇಲಿಯಾ
    ರನ್ನರ್ ಅಪ್ : ನ್ಯೂಜಿಲ್ಯಾಂಡ್

    2013
    ಆಯೋಜಕ ದೇಶ : ಇಂಗ್ಲೆಂಡ್
    ವಿನ್ನರ್ : ಭಾರತ
    ರನ್ನರ್ ಅಪ್ : ಇಂಗ್ಲೆಂಡ್

    2017
    ಆಯೋಜಕ ದೇಶ : ಇಂಗ್ಲೆಂಡ್
    ವಿನ್ನರ್ : ಪಾಕಿಸ್ತಾನ
    ರನ್ನರ್ ಅಪ್ : ಭಾರತ

    ಮೊದಲ ಆವೃತ್ತಿ ಗೆದ್ದಿದ್ದು ಚೋಕರ್ಸ್ ದ.ಆಫ್ರಿಕಾ
    ದಕ್ಷಿಣ ಆಫ್ರಿಕಾ ಚೋಕರ್ಸ್ ಎಂದೇ ಹೆಸರುವಾಸಿ. ಅದೃಷ್ಟ ಕೈಕೊಟ್ಟು ಹಲವು ಮಹತ್ವದ ಪಂದ್ಯಗಳಲ್ಲಿ ಸೋತು, ಟ್ರೋಫಿ ತಪ್ಪಿಸಿಕೊಂಡ ಇತಿಹಾಸ ತಂಡಕ್ಕಿದೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಕಪ್ ಗೆದ್ದಿದ್ದೇ ದಕ್ಷಿಣ ಆಫ್ರಿಕಾ ಎಂಬುದು ಗಮನಾರ್ಹ. 1998ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್‌ನ ಸೋಲಿಸಿ ಪ್ರಶಸ್ತಿ ಜಯಿಸಿತ್ತು. ಆಫ್ರಿಕಾ ಆ ಟೂರ್ನಿಯಲ್ಲಿ ಕೇವಲ 3 ಪಂದ್ಯಗಳನ್ನಾಡಿತ್ತು.

    2 ದಿನ ನಡೆದಿದ್ದ ಫೈನಲ್‌ ಪಂದ್ಯ:
    2002ರ ಫೈನಲ್ 2 ದಿನದಲ್ಲಿ 2 ಬಾರಿ ನಡೆದಿತ್ತು. ಆದರೆ 2 ಬಾರಿಯೂ ಫಲಿತಾಂಶ ಸಿಗಲಿಲ್ಲ. ಕೊಲಂಬೊದಲ್ಲಿ ಸೆ.29ಕ್ಕೆ ಫೈನಲ್ ನಿಗದಿ ಯಾಗಿತ್ತು. ಲಂಕಾ ಬ್ಯಾಟ್ ಮಾಡಿ 244 ರನ್ ಗಳಿಸಿತ್ತು. ಚೇಸಿಂಗ್‌ ವೇಳೆ ಭಾರತ 2 ಓವರ್‌ಗೆ 14 ರನ್ ಗಳಿಸಿದ್ದಾಗ ಮಳೆ ಸುರಿಯಲಾರಂಭಿಸಿತು. ಆ ದಿನ ಪಂದ್ಯ ನಡೆಸಲಾಗಲಿಲ್ಲ. ಮರುದಿನ ಪಂದ್ಯ ಹೊಸದಾಗಿ ಆರಂಭಿಸಲಾಯಿತು. ಲಂಕಾ 222 ರನ್ ಗಳಿಸಿದರೆ, ಭಾರತ 8.4 ಓವರಲ್ಲಿ 1 ವಿಕೆಟ್‌ ಕಳೆದುಕೊಂಡು 38 ರನ್‌ ಗಳಿಸಿತ್ತು. ವೀರೇಂದ್ರ ಸೆವ್ಹಾಗ್‌ ಉತ್ತಮ ಫಾರ್ಮ್‌ನಲ್ಲಿದ್ದರು. ಇದರಿಂದ ಭಾರತ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದ್ರೆ ಮಳೆ ಅಡ್ಡಿಪಡಿಸಿತು. ಬಳಿಕ ಪಂದ್ಯ ನಡೆಯಲಿಲ್ಲ. ಭಾರತ-ಶ್ರೀಲಂಕಾ ಜಂಟಿ ಚಾಂಪಿಯನ್ ಎಂದು ಘೋಷಿಸಲಾಯಿತು.

  • Champions Trophy 2025 – ಚಾಂಪಿಯನ್ಸ್‌ ಟ್ರೋಫಿ ದಾಲ್ಮೀಯಾರ ಕನಸಿನ ಕೂಸು

    Champions Trophy 2025 – ಚಾಂಪಿಯನ್ಸ್‌ ಟ್ರೋಫಿ ದಾಲ್ಮೀಯಾರ ಕನಸಿನ ಕೂಸು

    • ಚಾಂಪಿಯನ್ಸ್‌ ಟ್ರೋಫಿ ಜನ್ಮತಾಳಿದ್ದು ಹೇಗೆ?

    • ಟಿ20 ಅಬ್ಬರದಿಂದ ಕುಸಿದ ಟೂರ್ನಿ ಮೌಲ್ಯ

    ಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿರುವ ಈ ಬಾರಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಇಂದಿನಿಂದ ಆರಂಭವಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯು ಭಾರತದ ಮಟ್ಟಿಗೆ ತಾರಾಮಣಿಗಳಿಗೆ ತಮ್ಮ ನೈಜ ಸಾಮರ್ಥ್ಯಕ್ಕೆ ಮರಳುವ ಒತ್ತಡ ತಂದೊಡ್ಡಿದ್ದರೆ, ನವಪ್ರತಿಭೆಗಳಿಗೆ ಹೆಜ್ಜೆಗುರುತು ಮೂಡಿಸುವ ತವಕ ಹೆಚ್ಚಾಗಿದೆ. ಈ ಹೊತ್ತಿನಲ್ಲಿ ಚಾಂಪಿಯನ್ಸ್‌ ಟ್ರೋಫಿ ಜನ್ಮ ತಾಳಿದ್ದು ಹೇಗೆ? ಚೊಚ್ಚ ಟ್ರೋಫಿ ಗೆದ್ದವರು ಯಾರು? ಇದೆಲ್ಲ ಇತಿಹಾಸ ತಿಳಿಯುವುದು ಮುಖ್ಯವಾಗಿದೆ.

    ದಾಲ್ಮೀಯಾರ ಕನಸಿನ ಕೂಸು:
    ಚಾಂಪಿಯನ್ಸ್ ಟ್ರೋಫಿ 1990ರ ದಶಕದ ಅಂತ್ಯದಲ್ಲಿ ಐಸಿಸಿ ಅಧ್ಯಕ್ಷರಾಗಿದ್ದ, ಭಾರತದ ಖ್ಯಾತ ಉದ್ಯಮಿ ಜಗಮೋಹನ್ ದಾಲ್ಮೀಯಾರ (Jagmohan Dalmiya) ಕನಸಿನ ಕೂಸು. ಉದಯೋನ್ಮುಖ ರಾಷ್ಟ್ರಗಳಲ್ಲಿ ಕ್ರಿಕೆಟ್ ಬೆಳೆಸಲು, ಐಸಿಸಿಗೆ ಹಣ ಸಂಗ್ರಹಿಸಲು ವಿಶ್ವಕಪ್‌ನ ಹೊರತಾಗಿ ಮತ್ತೊಂದು ಐಸಿಸಿ ಟೂರ್ನಿಗೆ ಯೋಜನೆ ರೂಪಿಸಿದ್ದೇ ದಾಲ್ಮೀಯಾ. ಅವರು 1997 ರಿಂದ 2000 ಇಸವಿ ವರೆಗೆ ಐಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲೇ 1998ರಲ್ಲಿ ಟೂರ್ನಿಗೆ ಚಾಲನೆ ಲಭಿಸಿತು. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾಗಲೇ, ಕ್ರಿಕೆಟ್ ಜನಪ್ರಿಯತೆ ಹೆಚ್ಚಿಸಲು ಸಲುವಾಗಿ ದಾಲ್ಮಿಯಾ ಹಾಕಿದ್ದ ಐಡಿಯಾ ಇದಾಗಿತ್ತು. ಜೊತೆಗೆ, ಟೆಸ್ಟ್ ಮಾನ್ಯತೆಯನ್ನು ಪಡೆಯದ ದೇಶಗಳಲ್ಲಿ ಕ್ರಿಕೆಟ್ ಜನಪ್ರಿಯತೆಯನ್ನು ಹೆಚ್ಚಿಸುವ ಉದ್ದೇಶವೂ ಇದರಲ್ಲಿತ್ತು.

    ಚೊಚ್ಚಲ ಆವೃತ್ತಿಯಲ್ಲಿ 9 ತಂಡ, ಕೇವಲ 8 ಪಂದ್ಯ
    ಮೊದಲ ಆವೃತ್ತಿಯ ನಾಕೌಟ್ ಟ್ರೋಫಿ ಹೆಸರೇ ಸೂಚಿಸುವಂತೆ ಕಿರು ಟೂರ್ನಿಯಾಗಿತ್ತು. ಭಾರತ ಸೇರಿ 9 ತಂಡಗಳು ಪಾಲ್ಗೊಂಡಿದ್ದವು. 1 ಪ್ರಿ ಕ್ವಾರ್ಟರ್, 4 ಕ್ವಾರ್ಟರ್‌ ಫೈನಲ್‌, 2 ಸೆಮಿಫೈನಲ್, 1 ಫೈನಲ್ ಸೇರಿ ಒಟ್ಟು 8 ಪಂದ್ಯಗಳು ಮಾತ್ರ ನಡೆದಿದ್ದವು. 2ನೇ ಆವೃತ್ತಿಯಲ್ಲೂ ಹೆಚ್ಚೇನೂ ಬದಲಾವಣೆಗಳಿರಲಿಲ್ಲ. 11 ತಂಡಗಳು ಪಾಲ್ಗೊಂಡರೂ ಕೇವಲ 10 ಪಂದ್ಯಗಳನ್ನು ಆಡಿಸಲಾಗಿತ್ತು. ಟೂರ್ನಿ ನಾಕೌಟ್ ಮಾದರಿಯಲ್ಲೇ ನಡೆದಿತ್ತು.

    ಟಿ20 ಅಬ್ಬರದಿಂದ ಕುಸಿದ ಟೂರ್ನಿ ಮೌಲ್ಯ
    1998, 2000ರ ಟೂರ್ನಿ ಐಸಿಸಿಗೆ ದುಡ್ಡು ಗಳಿಸಿಕೊಟ್ಟರೂ, ಪ್ರೇಕ್ಷಕರನ್ನು ನಿರೀಕ್ಷಿತ ಮಟ್ಟದಲ್ಲಿ ಸೆಳೆಯಲು ಯಶಸ್ವಿಯಾಗಿರಲಿಲ್ಲ. ಬಳಿಕ 2002ರ (ಶ್ರೀಲಂಕಾ ಆತಿಥ್ಯ) ಟೂರ್ನಿಯು 2003ರ ಏಕದಿನ ವಿಶ್ವಕಪ್‌ಗೆ 5 ತಿಂಗಳು ಮೊದಲು ಆಯೋಜನೆಗೊಂಡ ಕಾರಣ, ಪ್ರೇಕ್ಷಕರಿಂದ ನಿರಾಸಕ್ತಿ ಜೊತೆಗೆ ಆದಾಯದ ಕೊರತೆಯನ್ನೂ ಎದುರಿಸುವಂತಾಯಿತು. 2004ರಲ್ಲಿ ಇಂಗ್ಲೆಂಡ್‌ನಲ್ಲಿ ಟೂರ್ನಿ ಆಡಿಸಲಾಯಿತು. ಅಲ್ಲೂ ಪ್ರೇಕ್ಷಕರ ಬೆಂಬಲದ ಕೊರತೆ ಎದುರಾಯಿತು. 2006ರಲ್ಲಿ ಭಾರತದಲ್ಲಿ ಟೂರ್ನಿ ನಡೆದರೂ, ಚಾಂಪಿಯನ್ಸ್ ಟ್ರೋಫಿ ಬಗ್ಗೆಯೇ ಟೀಕೆಗಳು ವ್ಯಕ್ತ ವಾಗತೊಡಗಿದವು. ಈ ನಡುವೆ ಟಿ20 ಮಾದರಿ ಕ್ರಿಕೆಟ್‌ನ ಕ್ಷಿಪ್ರ ಬೆಳವಣಿಗೆಯೂ, ಚಾಂಪಿ ಯನ್ಸ್ ಟ್ರೋಫಿಗೆ ಮತ್ತಷ್ಟು ಹೊಡೆತ ನೀಡಿತು. 2007ರಲ್ಲಿ ಟಿ20 ವಿಶ್ವಕಪ್ ಆಯೋಜನೆ ಕೈಗೆತ್ತಿಗೊಂಡ ಐಸಿಸಿ, ಬಳಿಕ ಕೆಲ ವರ್ಷಗಳಲ್ಲೇ ಚಾಂಪಿಯನ್ಸ್ ಟ್ರೋಫಿಯನ್ನು ಕೈ ಬಿಟ್ಟಿತ್ತು.

    ಹಣ ಸಂಗ್ರಹಕ್ಕಾಗಿ ಐಸಿಸಿ ಆರಂಭಿಸಿದ್ದ ಪಂದ್ಯಾವಳಿ!
    ಕ್ರಿಕೆಟ್ ಈಗ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಯಾವುದೇ ಟೂರ್ನಿ ಇದ್ದರೂ ಅಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಆದರೆ 90ರ ದಶಕದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ದುಡ್ಡು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿರಲಿಲ್ಲ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹೊರತಾಗಿ ಇತರ ಕ್ರಿಕೆಟಿಂಗ್ ರಾಷ್ಟ್ರಗಳು ಆದಾಯದ ಕೊರತೆ ಎದುರಿಸುತ್ತಿದ್ದವು. ಐಸಿಸಿಗೆ ಕೂಡಾ ನಿರೀಕ್ಷಿಸಿದಷ್ಟು ದುಡ್ಡು ಸಿಗುತ್ತಿರಲಿಲ್ಲ. ಹೆಚ್ಚುವರಿ ಹಣ ಸಂಪಾದಿಸಲು ಐಸಿಸಿ ಕಂಡುಕೊಂಡ ದಾರಿಯೇ ‘ಚಾಂಪಿಯನ್ಸ್ ಟ್ರೋಫಿ’. ಕ್ರಿಕೆಟ್‌ ಪ್ರಿಯ ದೇಶಗಳಲ್ಲಿ ಕ್ರೀಡೆಗೆ ಉತ್ತೇಜನ ಹಾಗೂ ಐಸಿಸಿಗೆ ಹಣ ಸಂಗ್ರಹಕ್ಕಾಗಿ 1998ರಲ್ಲಿ ಮೊದಲ ಬಾರಿ ಟೂರ್ನಿ ಪರಿಚಯಿಸಲಾಯಿತು. ಇದಕ್ಕಾಗಿ ಮೊದಲೆರಡು ಆವೃತ್ತಿಗಳನ್ನು ಆಗ ಐಸಿಸಿ ಸಹಾಯಕ ರಾಷ್ಟ್ರಗಳಾಗಿದ್ದ ಬಾಂಗ್ಲಾದೇಶ, ಕೀನ್ಯಾದಲ್ಲಿ ನಡೆಸಲಾಯಿತು.