Tag: Champions Trophy 2025

  • ಟೀಂ ಇಂಡಿಯಾಗೆ 58 ಕೋಟಿ ನಗದು ಬಹುಮಾನ ಘೋಷಿಸಿದ ಬಿಸಿಸಿಐ

    ಟೀಂ ಇಂಡಿಯಾಗೆ 58 ಕೋಟಿ ನಗದು ಬಹುಮಾನ ಘೋಷಿಸಿದ ಬಿಸಿಸಿಐ

    ಮುಂಬೈ: ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡಕ್ಕೆ ಬಿಸಿಸಿಐ 58 ಕೋಟಿ ರೂ. ನಗದು ಬಹುಮಾನ ಘೋಷಣೆ ಮಾಡಿದೆ.

    ಮಾ.9 ರಂದು ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ಸ್ನಲ್ಲಿ ಭಾರತ ಗೆಲುವು ಸಾಧಿಸಿದ ಬಳಿಕ ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 58 ಕೋಟಿ ರೂ.ಗಳ ನಗದು ಬಹುಮಾನವನ್ನು ಪ್ರಕಟಿಸಿದೆ.

    ಕಳೆದ ವರ್ಷ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ.ಗಳ ನಗದು ಬಹುಮಾನ ನೀಡಿ ಗೌರವಿಸಿತ್ತು.ಇದನ್ನೂ ಓದಿ: ಬಿಕಿನಿ ಧರಿಸಿ ಹಾಟ್ ಅವತಾರ ತಾಳಿದ ‘ಬಿಗ್‌ ಬಾಸ್‌’ ಖ್ಯಾತಿಯ ಇಶಾನಿ

    ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಮೊದಲ ಪಂದ್ಯದಲ್ಲೇ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿದ್ದ ಭಾರತ ಬಳಿಕ ಪಾಕಿಸ್ತಾನ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿತ್ತು. ನ್ಯೂಜಿಲೆಂಡ್ ವಿರುದ್ಧ 44 ರನ್‌ಗಳ ಜಯ ಪಡೆದಿತ್ತು.

    ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಮಾರ್ಚ್ 9 ರಂದು ನಡೆದ ಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.

    ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತಕ್ಕೆ ಐಸಿಸಿ 20 ಕೋಟಿ ರೂ. ನೀಡಿದರೆ, ರನ್ನರ್ ಅಪ್ ನ್ಯೂಜಿಲೆಂಡ್‌ಗೆ 1.12 ಮಿಲಿಯನ್ ಡಾಲರ್ (9.72 ಕೋಟಿ ರೂ.) ನಗದು ಬಹುಮಾನ ನೀಡಿದೆ.ಇದನ್ನೂ ಓದಿ: ಮತ್ತೆ ದರ ಏರಿಕೆ ಶಾಕ್‌ – ಎಸ್ಕಾಂ ಪಿಂಚಣಿ ಹಣ ಹೊಂದಿಸಲು ಜನರ ಜೇಬಿಗೆ ಕತ್ತರಿ

  • ‘ರೋಹಿತ್‌ ಶರ್ಮಾ ದಪ್ಪಗಿದ್ದಾರೆ’ ಅಂತ ಟೀಕಿಸಿದ್ದ ಕಾಂಗ್ರೆಸ್‌ ನಾಯಕಿಯಿಂದಲೇ ಈಗ ಟೀಂ ಇಂಡಿಯಾಗೆ ಅಭಿನಂದನೆ

    ‘ರೋಹಿತ್‌ ಶರ್ಮಾ ದಪ್ಪಗಿದ್ದಾರೆ’ ಅಂತ ಟೀಕಿಸಿದ್ದ ಕಾಂಗ್ರೆಸ್‌ ನಾಯಕಿಯಿಂದಲೇ ಈಗ ಟೀಂ ಇಂಡಿಯಾಗೆ ಅಭಿನಂದನೆ

    – ಕ್ಯಾಪ್ಟನ್‌ ರೋಹಿತ್‌ಗೆ ಹ್ಯಾಟ್ಸ್‌ಆಫ್‌ ಎಂದ ಶಮಾ ಮೊಹಮ್ಮದ್‌

    ಮುಂಬೈ: ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ (Rohit Sharma) ದಪ್ಪಗಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಕಾಂಗ್ರೆಸ್‌ ನಾಯಕಿ ಶಮಾ ಮೊಹಮ್ಮದ್‌ (Shama Mohamed) ಟೀಕೆಗೆ ಗುರಿಯಾಗಿದ್ದರು. ಇಂದು ಅದೇ ರೋಹಿತ್‌ ಪಡೆಯನ್ನು ಕಾಂಗ್ರೆಸ್‌ ನಾಯಕಿ ಹಾಡಿಹೊಗಳಿದ್ದಾರೆ.

    ದುಬೈನಲ್ಲಿ 2025 ರ ಚಾಂಪಿಯನ್ಸ್ ಟ್ರೋಫಿ (Champions Trophy 2025) ಗೆದ್ದ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ತಂಡವನ್ನು ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ಮೊಹಮ್ಮದ್‌ ಶಮಿ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆದ ಕೊಹ್ಲಿ

    ಟೀಂ ಇಂಡಿಯಾ ಗೆದ್ದ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಶಮಾ ಅವರು, ಚಾಂಪಿಯನ್ಸ್‌ ಟ್ರೋಫಿ ಗೆಲ್ಲುವಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡಕ್ಕೆ ಅಭಿನಂದನೆಗಳು. 76 ರನ್‌ ಬಾರಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಅವರಿಗೆ ಹ್ಯಾಟ್ಸಾಫ್‌. ಶ್ರೇಯಸ್‌ ಐಯ್ಯರ್‌, ಕೆಎಲ್‌ ರಾಹುಲ್‌ ಉತ್ತಮ ಪ್ರದರ್ಶನ ನೀಡಿ, ಟೀಂ ಇಂಡಿಯಾವನ್ನು ಜಯದತ್ತ ಕೊಂಡೊಯ್ದರು ಎಂದು ಶ್ಲಾಘಿಸಿದ್ದಾರೆ.

    2025 ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಹಂತದಲ್ಲಿ ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಶಮಾ ಮೊಹಮ್ಮದ್ ಕಾಮೆಂಟ್ ಮಾಡಿ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದ್ದರು. ‘ರೋಹಿತ್ ಶರ್ಮಾ ದಪ್ಪಗಿದ್ದಾರೆ. ಅವರು ಪ್ರಭಾವಶಾಲಿ ಕ್ಯಾಪ್ಟನ್‌ ಅಲ್ಲ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ರೋಹಿತ್‌ ಪಂದ್ಯಶ್ರೇಷ್ಠ – ಧೋನಿ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಕ್ಯಾಪ್ಟನ್‌

    ಶಮಾ ಅವರ ಹೇಳಿಕೆಗೆ ಕ್ರಿಕೆಟ್‌ ಅಭಿಮಾನಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್‌ ನಾಯಕಿಯನ್ನು ತರಾಟೆಗೆ ತೆಗೆದುಕೊಂಡರು. ಸ್ವತಃ ಕಾಂಗ್ರೆಸ್‌ ಪಕ್ಷವೇ ನಾಯಕಿಗೆ ಕಿವಿ ಹಿಂಡುವ ಕೆಲಸ ಮಾಡಿತ್ತು.

    ಭಾನುವಾರ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಭಾರತ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ (Champions Trophy) ಕಿರೀಟ ಮುಡಿಗೇರಿಸಿಕೊಂಡಿದೆ. 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತಕ್ಕಿದು ಸತತ 2ನೇ ಐಸಿಸಿ ಟ್ರೋಫಿ ಆಗಿರುವುದು ವಿಶೇಷ.

    ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಭಾರತ (Team India) 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ಗೆಲುವು ಸಾಧಿಸಿತು. ಸಂಘಟಿತ ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನದೊಂದಿಗೆ 2000 ಇಸವಿಯಲ್ಲಿ ಕಿವೀಸ್ ವಿರುದ್ಧ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು. ಇದನ್ನೂ ಓದಿ: ಟೀಂ ಇಂಡಿಯಾ ಚಾಂಪಿಯನ್‌ – ಭಾರತದ ಪರ ವಿಶಿಷ್ಠ ದಾಖಲೆ ಬರೆದ ಕೊಹ್ಲಿ

    ಕ್ಯಾಪ್ಟನ್‌ ಆಗಿ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಪರ ರೋಹಿತ್‌ ಶರ್ಮಾ ಜವಾಬ್ದಾರಿಯುತ ಆಟವಾಡಿದರು. 76 ರನ್‌ಗಳನ್ನು ಹೊಡೆದು ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

  • Champions Trophy 2025: ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ

    Champions Trophy 2025: ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ

    ದುಬೈ: ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತಾಗಿದೆ. ಅವರ ಅಬ್ಬರ ಬ್ಯಾಟಿಂಗ್‌ನಿಂದ ಬರುತ್ತಿರುವ ರನ್ ದಾಖಲೆಗಳ ಪುಟ ಸೇರುತ್ತಿದೆ. ಇಂದು ನಡೆಯುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲೂ ಕೂಡ ಇತರರ ದಾಖಲೆಗಳ ಅಳಿಸಿ ಹಾಕುವತ್ತ ಕಿಂಗ್ ಕೊಹ್ಲಿ ಚಿತ್ತ ನೆಟ್ಟಿದೆ. ಇದರ ಜೊತೆಗೆ, ಫಾರ್ಮ್ನಲ್ಲಿರುವ ಕೊಹ್ಲಿ ಕಿವೀಸ್‌ಗೆ ತಲೆನೋವಾಗಿ ಪರಿಣಮಿಸಿದ್ದಾರೆ.

    2008 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಮತ್ತೆ ಹಿಂದೆ ತಿರುಗು ನೋಡಿದ್ದೆ ಇಲ್ಲ. ಆನೆ ನಡೆದಿದ್ದೇ ದಾರಿ ಎಂಬಂತೆ ಕ್ರಿಕೆಟ್ ಅಖಾಡದಲ್ಲಿ ಅಬ್ಬರಿಸಿದ್ದಾರೆ.

    ಹಲವು ದಾಖಲೆಗಳಲ್ಲಿ ವಿರಾಜಮಾನವಾಗಿರುವ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅದು ಚಾಂಪಿಯನ್ಸ್ ಟ್ರೋಪಿಯ ಫೈನಲ್ ಅಖಾಡವೇ ವೇದಿಕೆಯಾಗಿದೆ. ಇಂದಿನ ಫೈನಲ್‌ನಲ್ಲಿ ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನ ಅಳಿಸಿ ಹಾಕುವತ್ತ ಕಣ್ಣಿಟ್ಟಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ 54 ರನ್ ಗಳಿಸಿದರೆ ಇಬ್ಬರು ದಿಗ್ಗಜರ ದಾಖಲೆಗಳು ಉಡೀಸ್ ಆಗಲಿದೆ.

    ಕುಮಾರ್ ಸಂಗಕ್ಕಾರ ಹಿಂದಿಕ್ಕಲು ಬೇಕು 55 ರನ್
    ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಪೂರೈಸಿದ ಆಟಗಾರರ ಪೈಕಿ 55 ಗಳಿಸಿದರೆ, ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಕ್ಕಾರಗಿಂತ ವೇಗವಾಗಿ ಮತ್ತು ಹೆಚ್ಚು ರನ್ ಗಳಿಸಿದ ಆಟಗಾರರಾಗಲಿದ್ದಾರೆ. ಸದ್ಯ ಸಂಗಕ್ಕಾರ 404 ಪಂದ್ಯದಲ್ಲಿ 14,234 ರನ್ ಗಳಿಸಿ ಸಚಿನ್ ತೆಂಡೂಲ್ಕರ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯ ಕೊಹ್ಲಿ 301 ಪಂದ್ಯಗಳಲ್ಲೇ 14,180 ರನ್ ಗಳಿಸಿದ್ದು, ಸಂಗಕ್ಕಾರ ದಾಖಲೆ ಮುರಿಯಲು 55 ರನ್‌ಗಳಷ್ಟೇ ಬೇಕಾಗಿದೆ.

    ಗೇಲ್ ದಾಖಲೆ ಉಡೀಸ್‌ಗೆ ಬೇಕು 46 ರನ್‌
    ಚಾಂಪಿಯನ್ ಟ್ರೋಫಿಯಲ್ಲಿ ಕ್ರಿಸ್ ಗೇಲ್ 17 ಪಂದ್ಯಗಳಲ್ಲಿ 791 ರನ್ ಗಳಿಸುವ ಮೂಲಕ ಅತೀ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕೊಹ್ಲಿ ಪ್ರಸ್ತುತ 17 ಪಂದ್ಯಗಳಲ್ಲಿ 746 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ 46 ರನ್ ಗಳಿಸಿದರೆ ಗೇಲ್ ದಾಖಲೆ ಹಿಂದಿಕ್ಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಲಿದ್ದಾರೆ.

    ಭಾರತದ ವಿರುದ್ಧ ಯಾವುದೇ ತಂಡ ಕಣಕ್ಕಿಳಿದರೂ, ಆ ತಂಡಕ್ಕೆ ವಿರಾಟ್ ಕೊಹ್ಲಿಯೇ ದೊಡ್ಡ ವಿಲನ್. ಇಂದಿನ ಪಂದ್ಯದಲ್ಲೂ ನ್ಯೂಜಿಲೆಂಡ್‌ಗೆ ಕೊಹ್ಲಿಯದ್ದೇ ಚಿಂತೆಯಾಗಿದೆ. ಕಿವೀಸ್‌ನ ಈ ತಲೆಬಿಸಿಗೆ ಕಾರಣ ಕೊಹ್ಲಿಯ ಇತ್ತೀಚಿನ ಫಾರ್ಮ್. ಇಡೀ ಟೂರ್ನಿಯಲ್ಲಿ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಕೊಹ್ಲಿ ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 72ರ ಸರಾಸರಿಯಲ್ಲಿ 217 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಸೆಂಚುರಿ ಮತ್ತೊಂದು ಆಫ್ ಸೆಂಚುರಿ. ಅದರಲ್ಲೂ ಕಳೆದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಶತಕ, ಅರ್ಧ ಶತಕ ಪೂರೈಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಕೊಹ್ಲಿಯ ಅಂಕಿಅಂಶ
    ಪಂದ್ಯ: 32
    ಒಟ್ಟು ರನ್: 1656
    ಹೆಚ್ಚು ರನ್: 154
    ಸ್ಟೈಕ್ ರೇಟ್: 95.55
    ಶತಕ: 6
    ಅರ್ಧಶತಕ: 9

    ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಕಿವೀಸ್ ವಿರುದ್ಧ 32 ಪಂದ್ಯವನ್ನಾಡಿರುವ ಕೊಹ್ಲಿ, 1656 ರನ್ ಚಚ್ಚಿದ್ದಾರೆ. ಇದರಲ್ಲಿ 6 ಶತಕ, 9 ಅರ್ಧಶತಕ ದಾಖಲಾಗಿದೆ. 154 ಕಿವೀಸ್ ವಿರುದ್ದ ಕೊಹ್ಲಿ ಸಿಡಿಸಿದ ಅತ್ಯಧಿಕ ರನ್ ಆಗಿದೆ.

  • ಚಾಂಪಿಯನ್ಸ್ ಪಟ್ಟಕ್ಕಾಗಿ ದುಬೈನಲ್ಲಿ ಗುದ್ದಾಟ – ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲು ಟೀಂ ಇಂಡಿಯಾ ಸನ್ನದ್ಧ

    ಚಾಂಪಿಯನ್ಸ್ ಪಟ್ಟಕ್ಕಾಗಿ ದುಬೈನಲ್ಲಿ ಗುದ್ದಾಟ – ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲು ಟೀಂ ಇಂಡಿಯಾ ಸನ್ನದ್ಧ

    – ಇಂದು ಭಾರತ ವರ್ಸಸ್ ನ್ಯೂಜಿಲೆಂಡ್ ಫೈನಲ್ ಹಣಾಹಣಿ
    – 25 ವರ್ಷಗಳ ಹಿಂದಿನ ಸೋಲಿಗೆ ಇಂದೇ ಪ್ರತೀಕಾರ?

    ದುಬೈ: ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿಂದು ಭಾರತ ಪಡೆ ನ್ಯೂಜಿಲೆಂಡ್ ತಂಡವನ್ನ ಇಂದು ಎದುರಿಸಲಿದೆ. 25 ವರ್ಷಗಳ ಬಳಿಕ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದು, ವಿಶ್ವ ಕ್ರಿಕೆಟ್ ಚಾಂಪಿಯನ್‌ಶಿಪ್‌ಗಾಗಿ ಎರಡು ತಂಡಗಳು ಸೆಣಸಾಡಲಿವೆ.

    ಇಡೀ ವಿಶ್ವದ ಚಿತ್ತವೇ ಇವತ್ತು ದುಬೈನತ್ತ ನೆಟ್ಟಿದೆ. ಚಾಂಪಿಯನ್ಸ್ ಪಟ್ಟಕ್ಕಾಗಿ ಇಂದು ದುಬೈ ರಣಾಂಗಣದಲ್ಲಿ ಮಹಾಕದನವೇ ನಡೆಯಲಿದೆ. ಒಂದೆಡೆ ಸೋಲಿಗೆ ಪ್ರತೀಕಾರವಾದರೆ, ಮತ್ತೊಂದೆಡೆ 12 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಲು ಟೀ ಇಂಡಿಯಾ ಸನ್ನದ್ಧವಾಗಿದೆ.

    ಬರೋಬ್ಬರಿ 25 ವರ್ಷಗಳ ಬಳಿಕ ಸೀಮಿತ ಓವರ್‌ಗಳ ಐಸಿಸಿ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮಖಾಮುಖಿಯಾಗ್ತಿವೆ. ಎರಡು ಬಲಿಷ್ಠ ಪಡೆಗಳ ಗುರಿ ಒಂದೇ ಅದು ಚಾಂಪಿಯನ್ಸ್ ಪಟ್ಟ. ಗೆದ್ದು ಇತಿಹಾಸ ನಿರ್ಮಾಣಕ್ಕೆ ಎರಡು ತಂಡಗಳು ತುದಿಗಾಲಲ್ಲಿ ನಿಂತಿವೆ.

    ಸೆಮಿಫೈನಲ್‌ನಲ್ಲಿ ಒಂದು ಕಡೆ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಅಧಿಕಾರಯುತ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟರೆ, ಮತ್ತೊಂದು ಕಡೆ ಟೀಂ ಇಂಡಿಯಾ ದುಬೈನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 4 ವಿಕೆಟ್ ರೋಚಕ ಗೆಲುವು ಸಾಧಿಸಿದೆ. ಈ ಗೆಲುವು ಎರಡು ತಂಡಗಳ ಮನೋಬಲ ಹೆಚ್ಚಿಸಿರೋದು ಸುಳ್ಳಲ್ಲ. ಇಂದಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್. ಇಡೀ ಟೂರ್ನಿಯನ್ನ ಒಂದೇ ಮೈದಾನದಲ್ಲಿ ಆಡಿರುವ ಭಾರತ ತಂಡಕ್ಕೆ ಪಿಚ್ ಹೆಚ್ಚು ಅನೂಕೂಲವಾಗುವ ಸಾಧ್ಯತೆ ಇದೆ. ಜೊತೆಗೆ ಲೀಗ್ ಹಂತದಲ್ಲಿ ಇದೇ ಮೈದಾನದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನ 44 ರನ್‌ಗಳಿಂದ ಮಣಿಸಿತ್ತು. ಸದ್ಯ ಭಾರತ ತಂಡದ ಎಲ್ಲಾ ವಿಭಾಗವು ಅದ್ಭುತ ಪ್ರದರ್ಶನ ತೋರುತ್ತಿದೆ.

    ಬ್ಯಾಟಿಂಗ್ ವಿಭಾಗದಲ್ಲಿ ಕಳೆದ ಪಂದ್ಯದಲ್ಲಿ ಮಿಂಚಿದ್ದ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು. ಕಳೆದ ಪಂದ್ಯದಲ್ಲಿ ಲಯ ಕಳೆದುಕೊಂಡಿದ್ದ ರೋಹಿತ್ ಶರ್ಮಾ ಮತ್ತು ಗಿಲ್ ಕ್ಲಿಕ್ ಆದರೆ, ಕಿವೀಸ್ ಪಡೆ ಬೌಲರ್‌ಗಳ ಬೆಂಡೆತ್ತಬಹುದು. ಇನ್ನೂ ಬೌಲಿಂಗ್ ವಿಭಾಗಕ್ಕೆ ಬರುವುದಾದರೆ, ಪಿಚ್ ಕೊಂಚ ಸ್ಪಿನ್ನರ್ ಸ್ನೇಹಿ. ಅದೇ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ಸ್ನಲ್ಲಿ ಇಬ್ಬರು ಫಾಸ್ಟ್ ಬೌಲರ್ ಜೊತೆ ನಾಲ್ವರು ಸ್ಪಿನ್ನರ್‌ಗಳು ಕಣಕಿಳಿದಿದ್ದರು. ಇಂದು ಕೂಡ ಅದೇ ಬೌಲಿಂಗ್ ಪಡೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಸದ್ಯ ಶಮಿ, ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಭರ್ಜರಿ ಫಾರ್ಮ್ನಲ್ಲಿದ್ದು, ಕಿವೀಸ್‌ಗೆ ತಲೆನೋವಾಗಬಹುದು. ನ್ಯೂಜಿಲೆಂಡ್ ಕೂಡ ಕಡಿಮೆ ಇಲ್ಲ. ಸೆಮಿಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಬ್ಯಾಟಿಂಗ್‌ನಲ್ಲಿ ರಚಿನ್ ರವೀಂದ್ರ, ಕಾನ್ವೆ, ಕೇನ್ ವಿಲಿಯಮ್ಸ್, ಮಿಚೆಲ್ ಕೊಂಚ ಕಾಡಬಹುದು.

    ಉಭಯ ತಂಡಗಳ ಸಮಬಲ
    ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ನ್ಯೂಜಿಲೆಂಡ್ 2 ಪಂದ್ಯಗಳಾಡಿದ್ದು, ಸಮಬಲ ಸಾಧಿಸಿವೆ. ಇಂದಿನ ಪಂದ್ಯ ಗೆದ್ದವರು ಮುನ್ನಡೆ ಸಾಧಿಸಲಿದ್ದಾರೆ.
    ಒಟ್ಟು ಪಂದ್ಯ – 2
    ಭಾರತ ಗೆಲುವು – 1
    ನ್ಯೂಜಿಲೆಂಡ್ ಗೆಲುವು – 1

    ಏಕದಿನ ಪಂದ್ಯಗಳಲ್ಲಿ ಭಾರತ-ಕಿವಿಸ್ ಫೈಟ್
    ಒಟ್ಟು ಪಂದ್ಯ – 119
    ಭಾರತ ಗೆಲುವು – 61
    ನ್ಯೂಜಿಲೆಂಡ್ ಜಯ – 50
    ಯಾವುದೇ ರಿಸಲ್ಟ್ ಇಲ್ಲ – 7

    ಕೊನೆಯ ಪಂದ್ಯ ಗೆದ್ದು ಭಾರತ ತಂಡ ದಾಖಲೆ ಬರೆಯುವ ತವಕದಲ್ಲಿದೆ. ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದ್ದು, ಟಾಸ್ ಕೂಡ ಪ್ರಮುಖ ಪಾತ್ರ ವಹಿಸಲಿದೆ. ಭಾರತ 3ನೇ ಬಾರಿ ಕಪ್ ಗೆಲ್ಲಲಿ ಅಂತ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • Champions Trophy: ಸೋತ ಇಂಗ್ಲೆಂಡ್‌ ಟೂರ್ನಿಯಿಂದ ಔಟ್‌ – ಗೆದ್ದ ದ. ಆಫ್ರಿಕಾ ಸೆಮಿಗೆ ಎಂಟ್ರಿ

    Champions Trophy: ಸೋತ ಇಂಗ್ಲೆಂಡ್‌ ಟೂರ್ನಿಯಿಂದ ಔಟ್‌ – ಗೆದ್ದ ದ. ಆಫ್ರಿಕಾ ಸೆಮಿಗೆ ಎಂಟ್ರಿ

    ಕರಾಚಿ: ದಕ್ಷಿಣ ಆಫ್ರಿಕಾದ ಜವಾಬ್ದಾರಿಯುತ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಮುಂದೆ ಇಂಗ್ಲೆಂಡ್‌ ಸೋತು ಶರಣಾಯಿತು. ಆ ಮೂಲಕ ಚಾಂಪಿಯನ್ಸ್‌ ಟ್ರೋಫಿಯಲ್ಲಿ (Champions Trophy 2025) ಒಂದೇ ಒಂದು ಪಂದ್ಯವನ್ನು ಗೆಲ್ಲದೇ ಟೂರ್ನಿಯಿಂದಲೇ ಆಂಗ್ಲ ಪಡೆ ನಿರ್ಗಮಿಸಿದೆ. ಭರ್ಜರಿ ಗೆಲುವಿನೊಂದಿಗೆ ಸೌತ್‌ ಆಫ್ರಿಕಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಕಳಪೆ ಪ್ರದರ್ಶನದೊಂದಿಗೆ ಕೇವಲ 179 ರನ್‌ಗಳಿಗೆ ಆಲೌಟ್‌ ಆಯಿತು. ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ಆಫ್ರಿಕಾ ರಸಿ ವ್ಯಾನ್‌ ಡರ್‌ ಡುಸೆನ್‌ (72) ಮತ್ತು ಹೆನ್ರಿಚ್‌ ಕ್ಲಾಸೆನ್‌ (64) ಫಿಫ್ಟಿ ಆಟದ ನೆರವಿನಿಂದ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಇದನ್ನೂ ಓದಿ: 50 ರನ್‌ ಅಂತರದಲ್ಲಿ 7 ವಿಕೆಟ್‌ ಪತನ – ಮುಂಬೈ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ

    180 ರನ್‌ಗಳ ಟಾರ್ಗೆಟ್ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 29.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ‌ ಗುರಿ ತಲುಪಿತು. ಇಂಗ್ಲೆಂಡ್‌ ಪರ ಜೋಫ್ರಾ ಆರ್ಚರ್‌ 2 ಹಾಗೂ ಆದಿಲ್‌ ರಶೀದ್‌ 1 ವಿಕೆಟ್‌ ಪಡೆದರು.

    ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ಗೆ ಆರಂಭದಲ್ಲೇ ಶಾಕ್‌ ಎದುರಾಯಿತು. ಮೊದಲ ಓವರ್‌ನಲ್ಲೇ ಫಿಲ್‌ ಸಾಲ್ಟ್‌ ವಿಕೆಟ್‌ ಒಪ್ಪಿಸಿ ಹೊರ ನಡೆದರು. ನಂತರ ಬಂದ ಜೇಮಿ ಸ್ಮಿತ್‌ ಕೂಡ ಶೂನ್ಯ ಸುತ್ತಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು.

    ಜೋ ರೂಟ್ 37, ಜೋಫ್ರಾ ಆರ್ಚರ್ 25, ಬೆನ್ ಡಕೆಟ್ 24, ಕ್ಯಾಪ್ಟನ್‌ ಜೋಸ್ ಬಟ್ಲರ್ 21, ಹ್ಯಾರಿ ಬ್ರೂಕ್‌ 19 ರನ್‌ ಗಳಿಸಿದರು. ಇಂಗ್ಲೆಂಡ್‌ ತಂಡವು 38.2 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 179 ರನ್‌ಗಳಿಸಿತು. ಇದನ್ನೂ ಓದಿ: ಪಂದ್ಯಕ್ಕೆ ಮಳೆ ಅಡ್ಡಿ| ಆಸ್ಟ್ರೇಲಿಯಾ ಸೆಮಿಗೆ ಹೋದ್ರೂ ಅಫ್ಘಾನ್‌ಗೆ ಇನ್ನೂ ಇದೆ ಚಾನ್ಸ್‌!

    ಆಫ್ರಿಕಾ ಪರ ಮಾರ್ಕೊ ಜಾನ್ಸೆನ್ ಮತ್ತು ವಿಯಾನ್ ಮುಲ್ಡರ್ ತಲಾ 3 ವಿಕೆಟ್‌ ಕಿತ್ತು ಮಿಂಚಿದರು. ಕೇಶವ ಮಹಾರಾಜ್ 2, ಲುಂಗಿ ಎನ್‌ಗಿಡಿ ಮತ್ತು ಕಗಿಸೊ ರಬಾಡ ತಲಾ 1 ವಿಕೆಟ್‌ ಪಡೆದರು.

  • ಚಾಂಪಿಯನ್ಸ್‌ ಟ್ರೋಫಿ ಭದ್ರತಾ ಕಾರ್ಯ ನಿರ್ವಹಿಸಲು ನಿರಾಕರಣೆ – ಪಾಕ್‌ನ 100ಕ್ಕೂ ಹೆಚ್ಚು ಪೊಲೀಸರು ವಜಾ

    ಚಾಂಪಿಯನ್ಸ್‌ ಟ್ರೋಫಿ ಭದ್ರತಾ ಕಾರ್ಯ ನಿರ್ವಹಿಸಲು ನಿರಾಕರಣೆ – ಪಾಕ್‌ನ 100ಕ್ಕೂ ಹೆಚ್ಚು ಪೊಲೀಸರು ವಜಾ

    ಇಸ್ಲಾಮಾಬಾದ್‌: ತನ್ನ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಯ ಭದ್ರತಾ ಕಾರ್ಯ ನಿರ್ವಹಿಸಲು ನಿರಾಕರಿಸಿದ ಹಿನ್ನೆಲೆ ಪಾಕಿಸ್ತಾನ ಪಂಬಾಬ್‌ನ 100ಕ್ಕೂ ಹೆಚ್ಚು ಪೊಲೀಸರನ್ನು (Punjab Police) ಸೇವೆಯಿಂದಲೇ ವಜಾಗೊಳಿಸಿರುವುದಾಗಿ ವರದಿಯಾಗಿದೆ.

    ಪಂಜಾಬ್‌ ಪೊಲೀಸರ ಮಾಹಿತಿ ಪ್ರಕಾರ, ಸೇವಯಿಂದ ವಜಾಗೊಳಿಸಲಾದ ಅಧಿಕಾರಿಗಳು ಹಲವು ಸಂದರ್ಭದಲ್ಲಿ ಗೈರಾಗಿದ್ದರು. ಅಲ್ಲದೇ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ವೇಳೆ ಭದ್ರತಾ ಕಾರ್ಯ ನಿರ್ವಹಿಸಲು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: 300 ಮಕ್ಕಳ ಮೇಲೆ ವೈದ್ಯನಿಂದ ರೇಪ್ – ನಾನು `ಶಿಶುಕಾಮಿ’ ಎಂದು ತಪ್ಪೊಪ್ಪಿಕೊಂಡ ಆರೋಪಿ

    ಈ ಬಾರಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಲಾಹೋರ್‌ನ ಗಡಾಫಿ, ಕರಾಚಿ ಹಾಗೂ ರಾವಲ್ಪಿಂಡಿ ಮೈದಾನಗಳು ಆತಿಥ್ಯ ವಹಿಸಿವೆ. ಹಾಗಾಗಿ ಗೊತ್ತುಪಡಿಸಿದ ಹೋಟೆಲ್‌ಗಳಿಗೆ ಪ್ರವಾಣಿಸುವ ತಂಡಗಳಿಗೆ ಭದ್ರತೆ ಒದಗಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಆದ್ರೆ ಅವರೆಲ್ಲರೂ ಜವಾಬ್ದಾರಿ ತೆಗೆದುಕೊಳ್ಳಲು ಸಂಪೂರ್ಣವಾಗಿ ನಿರಾಕರಿಸಿದ್ದರು. ಈ ಹಿನ್ನೆಲೆ ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಡ್ರೈವಿಂಗ್ ಬಗ್ಗೆ ಚಾಲಕರಿಗೆ ಸರಿಯಾಗಿ ತರಬೇತಿ ಕೊಡಿ – ಸಾರ್ವಜನಿಕರಿಂದ ಬಿಎಂಟಿಸಿಗೆ ದೂರು

    ಇತ್ತೀಚೆಗಷ್ಟೇ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 (Champions Trophy 2025) ವೀಕ್ಷಣೆಗೆ ಆಗಮಿಸಿರುವ ವಿದೇಶಿಯರನ್ನು ಅಪಹರಿಸಿ ಸುಲಿಗೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿತ್ತು. ಇಸ್ಲಾಮಿಕ್ ಸ್ಟೇಟ್ (Islamic State) ಖೊರಾಸನ್ ಪ್ರಾಂತ್ಯದಿಂದ ಸಂಭಾವ್ಯ ಬೆದರಿಕೆಯ ಬಗ್ಗೆ ಪಾಕ್ ಇಂಟಲಿಜೆನ್ಸ್ ವರದಿ ನೀಡಿತ್ತು.

  • ರಚಿನ್‌ ಶತಕ, ನ್ಯೂಜಿಲೆಂಡ್‌ಗೆ ಗೆಲುವು – ಟೂರ್ನಿಯಿಂದಲೇ ಪಾಕ್‌, ಬಾಂಗ್ಲಾ ಔಟ್‌

    ರಚಿನ್‌ ಶತಕ, ನ್ಯೂಜಿಲೆಂಡ್‌ಗೆ ಗೆಲುವು – ಟೂರ್ನಿಯಿಂದಲೇ ಪಾಕ್‌, ಬಾಂಗ್ಲಾ ಔಟ್‌

    ರಾವಲ್ಪಿಂಡಿ: ರಚಿನ್‌ ರವೀಂದ್ರ ಅವರ ಆಕರ್ಷಕ ಶತಕದ ನೆರವಿನಿಂದ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ (ICC Champions Trophy) ಬಾಂಗ್ಲಾದೇಶದ ವಿರುದ್ಧ ನ್ಯೂಜಿಲೆಂಡ್‌ 5 ವಿಕೆಟ್‌ಗಳ ಜಯ ಸಾಧಿಸಿದೆ. ನ್ಯೂಜಿಲೆಂಡ್‌ (New Zealand) ಜಯದೊಂದಿಗೆ ಟೂರ್ನಿಯಿಂದಲೇ ಬಾಂಗ್ಲಾದೇಶ (Bangladesh) ಮತ್ತು ಅತಿಥೇಯ ಪಾಕಿಸ್ತಾನ (Pakistan ) ನಿರ್ಗಮಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 236 ರನ್‌ ಗಳಿಸಿತು. ಸುಲಭ ಸವಾಲನ್ನು ಪಡೆದ ನ್ಯೂಜಿಲೆಂಡ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಅಂತಿಮವಾಗಿ 46.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 240 ರನ್‌ ಹೊಡೆದು ಸೆಮಿಫೈನಲ್‌ ಪ್ರವೇಶಿಸಿತು.

    ಇಂದಿನ ಪಂದ್ಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ನಿರ್ಣಾಯಕವಾಗಿತ್ತು. ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದು, ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ ಜಯಗಳಿಸಿ ಬಾಂಗ್ಲಾ ವಿರುದ್ಧ ಪಾಕ್‌ ಗೆದ್ದಿದ್ದರೆ ರನ್‌ ರೇಟ್‌ ಆಧಾರದಲ್ಲಿ ತಂಡಗಳು ಸೆಮಿಫೈನಲ್‌ ಪ್ರವೇಶಿಸಬೇಕಿತ್ತು. ಆದರೆ ಈಗ ಬಾಂಗ್ಲಾ ಸೋಲುವ ಮೂಲಕ ನ್ಯೂಜಿಲೆಂಡ್‌ ಮತ್ತು ಭಾರತ ಅಧಿಕೃತವಾಗಿ ಸೆಮಿಫೈನಲ್‌ ಪ್ರವೇಶಿಸಿವೆ.

    ನ್ಯೂಜಿಲೆಂಡ್‌ ಪರ ಡಿವೋನ್ ಕಾನ್ವೇ 45 ಎಸೆತಗಳಲ್ಲಿ 6 ಬೌಂಡರಿ ನೆರವಿಂದ 30 ರನ್‌, ರಚಿನ್ ರವೀಂದ್ರ 105 ಎಸೆತಗಳಲ್ಲಿ 1 ಸಿಕ್ಸರ್‌, 12 ಬೌಂಡರಿ ನೆರವಿನಿಂದ 112 ರನ್‌ ಹೊಡೆದರು. ಟಾಮ್ ಲ್ಯಾಥಮ್ 76 ಎಸೆತಗಳಲ್ಲಿ 55 ರನ್‌ ಹೊಡೆದರು. ಬಾಂಗ್ಲಾ ಪರ ತಸ್ಕಿನ್ ಅಹ್ಮದ್, ನಹಿದ್ ರಾಣಾ, ಮುಸ್ತಾಫಿಜುರ್ ರೆಹಮಾನ್, ರಿಷದ್‌ ಹೊಸೈನ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

    ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ ಪರ ತಾಂಜಿದ್ ಹಸನ್ 24 ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿ ನೆರವಿನಿಂದ 24 ರನ್‌, ನಜ್ಮುಲ್ ಹೊಸೇನ್ 110 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 77 ರನ್‌, ಜಾಕರ್ ಅಲಿ 55 ಎಸೆತಗಳಲ್ಲಿ 1 ಸಿಕ್ಸರ್‌ 3 ಬೌಂಡರಿ ನೆರವಿನಿಂದ 45 ರನ್‌, ರಿಷದ್ ಹುಸೇನ್ 25 ಎಸೆತಗಳಲ್ಲಿ 1 ಸಿಕ್ಸರ್‌ ಹಾಗೂ 2 ಬೌಂಡರಿ ನೆರವಿನಿಂದ 26 ರನ್‌ ಕಲೆ ಹಾಕಿ ಹಾಕಿದರು.

    ನ್ಯೂಜಿಲೆಂಡ್‌ ಪರ ಮೈಕೆಲ್ ಬ್ರೇಸ್‌ವೆಲ್ 4 ವಿಕೆಟ್‌, ವಿಲ್ ಒ’ರೂರ್ಕ್ 2 ವಿಕೆಟ್‌, ಮ್ಯಾಟ್ ಹೆನ್ರಿ ಮತ್ತು ಕೈಲ್ ಜೇಮಿಸನ್ ತಲಾ ಒಂದೊಂದು ವಿಕೆಟ್‌ ಪಡೆದರು.

  • ಚಾಂಪಿಯನ್ಸ್ ಟ್ರೋಫಿ ವೇಳೆ ವಿದೇಶಿಯರ ಅಪಹರಣಕ್ಕೆ ಇಸ್ಲಾಮಿಕ್ ಸ್ಟೇಟ್ ಸಂಚು – ಪಾಕ್ ಗುಪ್ತಚರ ಸಂಸ್ಥೆ ಎಚ್ಚರಿಕೆ

    ಚಾಂಪಿಯನ್ಸ್ ಟ್ರೋಫಿ ವೇಳೆ ವಿದೇಶಿಯರ ಅಪಹರಣಕ್ಕೆ ಇಸ್ಲಾಮಿಕ್ ಸ್ಟೇಟ್ ಸಂಚು – ಪಾಕ್ ಗುಪ್ತಚರ ಸಂಸ್ಥೆ ಎಚ್ಚರಿಕೆ

    ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 (Champions Trophy 2025) ವೀಕ್ಷಣೆಗೆ ಆಗಮಿಸಿರುವ ವಿದೇಶಿಯರನ್ನು ಅಪಹರಿಸಿ ಸುಲಿಗೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ. ಇಸ್ಲಾಮಿಕ್ ಸ್ಟೇಟ್ (Islamic State) ಖೊರಾಸನ್ ಪ್ರಾಂತ್ಯದಿಂದ ಸಂಭಾವ್ಯ ಬೆದರಿಕೆಯ ಬಗ್ಗೆ ಪಾಕ್ ಇಂಟಲಿಜೆನ್ಸ್ ವರದಿ ನೀಡಿದೆ.

    ಭಯೋತ್ಪಾದಕ ಸಂಘಟನೆಯು ನಿರ್ದಿಷ್ಟವಾಗಿ ಚೀನೀ ಮತ್ತು ಅರಬ್ ಪ್ರಜೆಗಳನ್ನು ಗುರಿಯಾಗಿಸಿಕೊಂಡಿದ್ದು ಬಂದರುಗಳು (Port), ವಿಮಾನ ನಿಲ್ದಾಣಗಳು, ಕಚೇರಿಗಳು ಮತ್ತು ಈ ದೇಶಗಳ ಸಂದರ್ಶಕರು ಹೆಚ್ಚಾಗಿ ಬಳಸುವ ವಸತಿ ಪ್ರದೇಶಗಳಲ್ಲಿ ಕಣ್ಗಾವಲು ನಡೆಸುತ್ತಿದೆ ಎಂದು ಮಾಹಿತಿ ನೀಡಿದೆ.

    ಗುಪ್ತಚರ ವರದಿಗಳ ಪ್ರಕಾರ, ISKP ಕಾರ್ಯಕರ್ತರು ನಗರಗಳ ಹೊರವಲಯದಲ್ಲಿರುವ ಆಸ್ತಿಗಳನ್ನು ಸುರಕ್ಷಿತ ಮನೆಗಳಾಗಿ ಬಾಡಿಗೆಗೆ ಪಡೆಯಲು ಯೋಜಿಸಿದ್ದಾರೆ, ಕ್ಯಾಮೆರಾ ಕಣ್ಗಾವಲು ಇಲ್ಲದ ಮತ್ತು ರಿಕ್ಷಾ ಅಥವಾ ಮೋಟಾರ್ ಸೈಕಲ್ ಮೂಲಕ ಮಾತ್ರ ಪ್ರವೇಶಿಸಬಹುದಾದ ಸ್ಥಳಗಳನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿದ್ದಾರೆ. ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಈ ಸಂಚು ರೂಪಿಸಿದ್ದಾರೆ. ಇದನ್ನೂ ಓದಿ: HALನಲ್ಲಿ ಲಘು ಯುದ್ಧ ವಿಮಾನಗಳ ಉತ್ಪಾದನೆಯಲ್ಲಿ ವಿಳಂಬ – ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ ರಚನೆ

    ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಪಾಕಿಸ್ತಾನ ನಡೆಸುವ ಸಾಮರ್ಥ್ಯದ ಬಗ್ಗೆ ಕಳವಳಗಳ ಹೆಚ್ಚುತ್ತಿರುವ ಹೊತ್ತಲ್ಲೇ ಈ ಎಚ್ಚರಿಕೆ ಬಂದಿದೆ. 2024ರಲ್ಲಿ ಶಾಂಗ್ಲಾದಲ್ಲಿ ಚೀನಾದ ಎಂಜಿನಿಯರ್‌ಗಳ ಮೇಲಿನ ದಾಳಿ ಮತ್ತು 2009 ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲಿನ ದಾಳಿಯಂತಹ ಘಟನೆಗಳು ಪಾಕಿಸ್ತಾನ ಭದ್ರತಾ ವ್ಯವಸ್ಥೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿಸಿತ್ತು. ಇದನ್ನೂ ಓದಿ: ಯುಎಸ್‌ಏಡ್‌ ಉದ್ಯೋಗಿಗಳಿಗೆ ಟ್ರಂಪ್‌ ಶಾಕ್‌ – 1,600ಕ್ಕೂ ಹೆಚ್ಚು ಮಂದಿ ವಜಾ

    ಗುಪ್ತಚರ ವರದಿ ಬೆನ್ನಲ್ಲೇ ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆ (ಜಿಡಿಐ) ಪ್ರಮುಖ ಸ್ಥಳಗಳ ಮೇಲೆ ಸಂಭಾವ್ಯ ಐಎಸ್‌ಕೆಪಿ ದಾಳಿಗಳ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ ಮತ್ತು ಈ ಗುಂಪಿನೊಂದಿಗೆ ಸಂಪರ್ಕ ಹೊಂದಿರುವ ಕಾಣೆಯಾದ ಕಾರ್ಯಕರ್ತರನ್ನು ಪತ್ತೆಹಚ್ಚುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಇದನ್ನೂ ಓದಿ: ಕನ್ನಡಿಗರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆ ಹಾಕ್ಬೇಕು: ರಾಮಲಿಂಗಾ ರೆಡ್ಡಿ

    https://youtu.be/9aRZwimkiN0?si=j0uugOSaUeFUAq3x

  • ಪಾಕ್‌ ತಂಡದ ನಸೀಮ್‌ ಷಾ ಶೂ ಲೇಸ್‌ ಕಟ್ಟಿದ ಕಿಂಗ್‌ ಕೊಹ್ಲಿ – ವಿರಾಟ್‌ ಸರಳತೆಗೆ ಸಲಾಂ ಹೊಡೆದ ಫ್ಯಾನ್ಸ್‌

    ಪಾಕ್‌ ತಂಡದ ನಸೀಮ್‌ ಷಾ ಶೂ ಲೇಸ್‌ ಕಟ್ಟಿದ ಕಿಂಗ್‌ ಕೊಹ್ಲಿ – ವಿರಾಟ್‌ ಸರಳತೆಗೆ ಸಲಾಂ ಹೊಡೆದ ಫ್ಯಾನ್ಸ್‌

    ದುಬೈ: ವಿರಾಟ್‌ ಕೊಹ್ಲಿಗೆ ಜಾಗತಿಕ ಕ್ರಿಕೆಟ್‌ ವಲಯದಲ್ಲಿ ವಿಶೇಷ ಸ್ಥಾನಮಾನವಿದೆ. ಆದರೂ ಮೈದಾನದಲ್ಲಿ ಕೆಲವೊಮ್ಮೆ ಅವರು ಸರಳ ವ್ಯಕ್ತಿಯಂತೆ ನಡೆದುಕೊಳ್ಳುವ ರೀತಿ ಅಭಿಮಾನಿಗಳಿಗೆ ಮೆಚ್ಚು. ಅದಕ್ಕೆ ನಿದರ್ಶನವೆಂಬಂತೆ ಘಟನೆಯೊಂದು ನಡೆದಿದೆ. ವಿರಾಟ್‌ ಕೊಹ್ಲಿ ಆಟದ ಮಧ್ಯೆ ಪಾಕ್‌ ತಂಡದ ಬೌಲರ್‌ ನಸೀಮ್‌ ಷಾ ಅವರ ಶೂ ಲೇಸ್‌ ಕಟ್ಟಿ ಸರಳತೆ ಮೆರೆದಿದ್ದಾರೆ.

    ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್. 2025 ರ ಭಾರತ-ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕ್‌ ಬ್ಯಾಟಿಂಗ್‌ ವೇಳೆ ನಾನ್-ಸ್ಟ್ರೈಕರ್‌ನಲ್ಲಿದ್ದ ನಸೀಮ್ ಷಾ, ಕೊಹ್ಲಿಯನ್ನು ತನ್ನ ಶೂಲೇಸ್‌ಗಳನ್ನು ಕಟ್ಟಲು ಕೇಳಿಕೊಂಡರು. ಇದಕ್ಕೆ ಭಾರತದ ಮಾಜಿ ನಾಯಕ ಒಪ್ಪಿಗೆ ಸೂಚಿಸಿ ಶೂಲೇಸ್‌ ಕಟ್ಟಿದ್ದಾರೆ. ಈ ಅಪರೂಪದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

    ಸಾಮಾನ್ಯ ವ್ಯಕ್ತಿಯಂತೆ ಎದುರಾಳಿ ತಂಡದ ಆಟಗಾರನ ಶೂಲೇಸ್‌ ಕಟ್ಟಿದ ಕೊಹ್ಲಿ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಳತೆ ಅಂದ್ರೆ ಇದು ಎಂದು ಬಣ್ಣಿಸಿದ್ದಾರೆ. ವೈರಲ್‌ ಆಗಿರುವ ದೃಶ್ಯಗಳು ಹೃದಯಸ್ಪರ್ಶಿಯಾಗಿವೆ.

    ಕಿಂಗ್‌ ಕೊಹ್ಲಿ ಆಕರ್ಷಕ ಶತಕ, ಶ್ರೇಯಸ್‌ ಫಿಫ್ಟಿ ಆಟದಿಂದ ಹೈವೋಲ್ಟೇಜ್‌ ಪಂದ್ಯದಲ್ಲಿ ಪಾಕ್‌ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಭಾರತದ ಶಿಸ್ತುಬದ್ಧ ಬೌಲಿಂಗ್‌ಗೆ ಪಾಕಿಸ್ತಾನ ಸಾಧಾರಣ ಮೊತ್ತ ಕಲೆ ಹಾಕಿತ್ತು. 49.4 ಓವರ್‌ಗೆ ಪಾಕ್‌ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿತ್ತು. 242 ರನ್‌ ಗುರಿ ಬೆನ್ನತ್ತಿದ ಭಾರತ 3 ವಿಕೆಟ್‌ ಕಳೆದುಕೊಂಡು 42.3 ಓವರ್‌ಗಳಲ್ಲಿ ಗುರಿ ತಲುಪಿತು.

  • Champions Trophy: ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್, 14,000 ರನ್ ಮೈಲುಗಲ್ಲು – ಎರಡು ದಾಖಲೆ ಬರೆದ ಕೊಹ್ಲಿ

    Champions Trophy: ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್, 14,000 ರನ್ ಮೈಲುಗಲ್ಲು – ಎರಡು ದಾಖಲೆ ಬರೆದ ಕೊಹ್ಲಿ

    ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2025 ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 158 ಕ್ಯಾಚ್‌ಗಳನ್ನು ಪಡೆಯುವ ಮೂಲಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್ ದಾಖಲೆ ಬರೆದರು. ಈ ಮೂಲಕ ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಹಿಂದಿಕ್ಕಿದರು.

    47ನೇ ಓವರ್‌ನಲ್ಲಿ ಕುಲದೀಪ್ ಯಾದವ್ ಅವರ ಬೌಲಿಂಗ್ ನಲ್ಲಿ ನಸೀಮ್ ಶಾ ಅವರ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಕೊನೆಯ ಓವರ್‌ನಲ್ಲಿ ಖುಶ್ದಿಲ್ ಷಾ ಅವರ ಕ್ಯಾಚ್ ಪಡೆದು ಕ್ಯಾಚ್ ಗಳ ಸಂಖ್ಯೆಯನ್ನು ಮತ್ತೆ ಹೆಚ್ಚಿಸಿಕೊಂಡರು.

    ಮೊಹಮ್ಮದ್ ಅಜರುದ್ದೀನ್ (156) ಸಚಿನ್ ತೆಂಡೂಲ್ಕರ್ (140), ರಾಹುಲ್ ದ್ರಾವಿಡ್ (124) ಮತ್ತು ಸುರೇಶ್ ರೈನಾ (102) ಕ್ಯಾಚ್ ಪಡೆದಿರುವ ಭಾರತದ ಇತರ ಆಟಗಾರರಾಗಿದ್ದಾರೆ.

    ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ 241 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 242 ರನ್ ಗಳ ಗುರಿ ನೀಡಿದೆ. ಗುರಿ ಬೆನ್ನಟ್ಟರುವ ಟೀಂ ಇಂಡಿಯಾ 17 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 99 ರನ್‌ ಗಳಿಸಿದೆ.

    ಈ ಪಂದ್ಯದಲ್ಲಿ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 14,000 ರನ್ ಮೈಲುಗಲ್ಲು ತಲುಪಿದ ಮೂರನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

    ಏಕದಿನ ಕ್ರಿಕೆಟ್ ನಲ್ಲಿ 14,000 ರನ್ ದಾಖಲಿಸಿದ ಭಾರತದ ಆಟಗಾರರು
    ಸಚಿನ್ ತೆಂಡೂಲ್ಕರ್ – 452 ಇನ್ನಿಂಗ್ಸ್‌ಗಳಲ್ಲಿ 18,426 ರನ್‌ಗಳು.
    ಕುಮಾರ್ ಸಂಗಕ್ಕಾರ – 380 ಇನ್ನಿಂಗ್ಸ್‌ಗಳಲ್ಲಿ 14234 ರನ್‌ಗಳು.
    ವಿರಾಟ್ ಕೊಹ್ಲಿ – 287 ಇನ್ನಿಂಗ್ಸ್‌ಗಳಲ್ಲಿ 14000** ರನ್‌ಗಳು.