Tag: Champions

  • ಟೀಂ ಇಂಡಿಯಾ ಆಟಗಾರರು ಆಗಮಿಸಿದ ವಿಮಾನಕ್ಕೆ ವಾಟರ್ ಸೆಲ್ಯೂಟ್

    ಟೀಂ ಇಂಡಿಯಾ ಆಟಗಾರರು ಆಗಮಿಸಿದ ವಿಮಾನಕ್ಕೆ ವಾಟರ್ ಸೆಲ್ಯೂಟ್

    ಮುಂಬೈ: ಟಿ20 ವಿಶ್ವಕಪ್ ( T20 World Cup) ವಿಜೇತ ಟೀಂ ಇಂಡಿಯಾ (Team India) ಆಟಗಾರರು ಮುಂಬೈಗೆ ಆಗಮಿಸಿದ ವಿಮಾನಕ್ಕೆ ವಾಟರ್ ಸೆಲ್ಯೂಟ್ ( Water Salute) ಮಾಡಲಾಯಿತು.

    ನವದೆಹಲಿಯಿಂದ ಮುಂಬೈಗೆ ಆಟಗಾರರನ್ನು ಕರೆತಂದ ವಿಶೇಷ ವಿಮಾನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮಾಡಲಾಯಿತು. ವಿಶ್ವಕಪ್ ಗೆದ್ದ ಟೀಂ ಇಂಡಿಯಾಕ್ಕೆ ಗೌರವ ಸೂಚಕವಾಗಿ ವಿಮಾನ ನಿಲ್ದಾಣದ ಸಿಬ್ಬಂದಿ ಈ ವಿಶೇಷ ಗೌರವವನ್ನು ಏರ್ಪಡಿಸಿದ್ದರು. ಇದನ್ನೂ ಓದಿ: ವಿಶ್ವಕಪ್ ಸಂಭ್ರಮ – ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ

    ಇದಕ್ಕೂ ಮುನ್ನ ದೆಹಲಿಯಿಂದ ಮುಂಬೈಗೆ ಹೊರಡುವ ಮುನ್ನ ಟೀಂ ಇಂಡಿಯಾ ಆಟಗಾರರರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಈ ವೇಳೆ ಮೋದಿ ಟೀಂ ಇಂಡಿಯಾ ನಾಯಕರಿಗೆ ಅಭಿನಂದಿಸಿ, ಬಳಿಕ ಆಟಗಾರರ ಜೊತೆ ಮಾತುಕತೆ ನಡೆಸಿದ್ದರು.

    ಆಟಗಾರರೊಂದಿಗೆ ಮೋದಿ ಮಾತುಕತೆ ನಡೆಸುತ್ತಿರುವ ವೀಡಿಯೋವನ್ನು ಪ್ರಧಾನಿ ಕಾರ್ಯಾಲಯ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಇದರಲ್ಲಿ ಆಟಗಾರರು ಮೋದಿ ಸುತ್ತ ಕುಳಿತು ಚರ್ಚೆಯಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ.

    ಜೂ.29 ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ರೋಚಕ 7 ರನ್‍ಗಳ ಜಯ ಸಾಧಿಸಿತ್ತು. ಈ ಮೂಲಕ ಭಾರತ 17 ವರ್ಷಗಳ ನಂತರ ಟಿ 20 ವಿಶ್ವಕಪ್‍ನ್ನು ಗೆದ್ದುಕೊಂಡಿತ್ತು. ಇದನ್ನೂ ಓದಿ: ʻವಿಶ್ವʼ ವಿಜಯಯಾತ್ರೆಗೆ ಕ್ಷಣಗಣನೆ – ಕ್ರಿಕೆಟ್‌ ಅಭಿಮಾನಿಗಳಿಂದ ʻಮೋದಿ ಮೋದಿʼ ಘೋಷಣೆ!

  • ಚಾಂಪಿಯನ್ ತಂಡವನ್ನು ಗೌರವಿಸಿದ ಗುಜರಾತ್ ಸರ್ಕಾರ – ಹಾರ್ದಿಕ್ ಪಾಂಡ್ಯಗೆ ವಿಶೇಷ ಉಡುಗೊರೆ

    ಚಾಂಪಿಯನ್ ತಂಡವನ್ನು ಗೌರವಿಸಿದ ಗುಜರಾತ್ ಸರ್ಕಾರ – ಹಾರ್ದಿಕ್ ಪಾಂಡ್ಯಗೆ ವಿಶೇಷ ಉಡುಗೊರೆ

    ಅಹಮದಾಬಾದ್: ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಋತುವಿನಲ್ಲಿಯೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಳಗ ರಾಜಸ್ಥಾನ ವಿರುದ್ಧ ಏಳು ವಿಕೆಟ್‍ಗಳ ಜಯ ಸಾಧಿಸಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು.

    ಈ ಅದ್ಭುತ ಗೆಲುವಿನ ನಂತರ ಗುಜರಾತ್ ಸಿಎಂ ಭೂಪೇಂದ್ರ್ ಪಟೇಲ್ ಗುಜರಾತ್ ಟೈಟಾನ್ಸ್ ಆಟಗಾರರನ್ನು ಭೇಟಿ ಮಾಡಿದರು. ಈ ವೇಳೆ ಸಿಎಂ ಪಟೇಲ್ ಇಡೀ ತಂಡವನ್ನು ಸನ್ಮಾನಿಸಿದರು. ಇದರೊಂದಿಗೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ನೆನಪಿನ ಸ್ಮರಣಿಕೆ ನೀಡಿ ಗೌರವಿಸಿದರು. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ಗುಜರಾತ್ ಟೈಟಾನ್ಸ್ ತಂಡ ವಿಶೇಷ ರೀತಿಯಲ್ಲಿ ಟ್ರೋಫಿ ಗೆದ್ದು ಸಂಭ್ರಮಿಸಿದೆ. ತಂಡದ ಆಟಗಾರರು ಅಹಮದಾಬಾದ್‍ನಲ್ಲಿ ರೋಡ್ ಶೋ ನಡೆಸುವ ಮೂಲಕ ತಮ್ಮ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. ಈ ರೋಡ್ ಶೋ ಓಸ್ಮಾನ್‍ಪುರ ರಿವರ್‌ಫ್ರಂಟ್‌ನಿಂದ ಪ್ರಾರಂಭವಾಗಿ ವಿಶ್ವಕುಂಜ್ ರಿವರ್‌ಫ್ರಂಟ್‌ಗೆ ಕೊನೆಗೊಂಡಿತು. ಇದನ್ನೂ ಓದಿ: ಪಾಂಡ್ಯ ಪರಾಕ್ರಮ – ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಗುಜರಾತ್

    ಬಿಸಿಸಿಐ, ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕೆಲಸ ಮಾಡಿದ ಪಿಚ್ ಕ್ಯುರೇಟರ್‌ಗಳು ಮತ್ತು ಗ್ರೌಂಡ್ ಸ್ಟಾಂಪ್‍ಗಳಿಗೆ 1.25 ಕೋಟಿ ರೂ. ಬಹುಮಾನ ಮೊತ್ತವನ್ನು ನೀಡುವುದಾಗಿ ಸೋಮವಾರ ಘೋಷಿಸಿದೆ.

    ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಕೇವಲ ಒಂಬತ್ತು ವಿಕೆಟ್‍ಗೆ 130 ರನ್ ಗಳಿಸಿತು. ರಾಜಸ್ಥಾನ ಪರ ಜೋಸ್ ಬಟ್ಲರ್ ಗರಿಷ್ಠ 39 ಮತ್ತು ಯಶಸ್ವಿ ಜೈಸ್ವಾಲ್ 22 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ಪರ ಹಾರ್ದಿಕ್ ಪಾಂಡ್ಯ 17 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು.

    ರಾಜಸ್ಥಾನ ನೀಡಿದ 131 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ 11 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 133 ರನ್ ಹೊಡೆದು 7 ವಿಕೆಟ್‍ಗಳ ಜಯವನ್ನು ಸಾಧಿಸಿತು.

    ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಜೋಸ್ ಬಟ್ಲರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಐಪಿಎಲ್ ಫೈನಲ್‍ನಲ್ಲಿ ನಾಯಕರೊಬ್ಬರು ಈ ಪ್ರಶಸ್ತಿ ಗೆದ್ದಿರುವುದು ಇದು ಮೂರನೇ ಬಾರಿ. ಈ ಹಿಂದೆ ಅನಿಲ್ ಕುಂಬ್ಳೆ (2009) ಮತ್ತು ರೋಹಿತ್ ಶರ್ಮಾ (2015) ಮಾತ್ರ ಈ ಸಾಧನೆಗೈದಿದ್ದರು.

  • ಐಸಿಸಿ ನಿಯಮಗಳ ಪ್ರಕಾರ ನ್ಯೂಜಿಲೆಂಡ್ ಚಾಂಪಿಯನ್!

    ಐಸಿಸಿ ನಿಯಮಗಳ ಪ್ರಕಾರ ನ್ಯೂಜಿಲೆಂಡ್ ಚಾಂಪಿಯನ್!

    ಬೆಂಗಳೂರು: ವಿಶ್ವಕಪ್ ಟ್ರೋಫಿಯನ್ನು ಇಂಗ್ಲೆಂಡ್ ಮೊದಲ ಬಾರಿಗೆ ಗೆದ್ದರೂ ಐಸಿಸಿ ನಿಯಮಗಳ ಪ್ರಕಾರ ನ್ಯೂಜಿಲೆಂಡ್ ಚಾಂಪಿಯನ್ ಎನ್ನುವ ವಾದ ಈಗ ಆರಂಭವಾಗಿದೆ.

    ಫೈನಲ್ ಪಂದ್ಯ ಟೈ ಆಗಿ ನಂತರ ಸೂಪರ್ ಓವರ್ ಟೈ ಆಗಿದ್ದರಿಂದ ಅತಿ ಹೆಚ್ಚು ಬೌಂಡರಿ ಸಿಡಿಸಿದ ಪರಿಣಾಮ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಇಂಗ್ಲೆಂಡ್ ಕಪ್ ಜಯಿಸಲು ಕಾರಣವಾದ ಓವರ್ ಥ್ರೋ ಬಗ್ಗೆ ಈಗ ಗಂಭೀರ ಚರ್ಚೆ ಎದ್ದಿದೆ.

    ಇಂಗ್ಲೆಂಡಿಗೆ 50ನೇ ಓವರಿನಲ್ಲಿ 15 ರನ್ ಬೇಕಿತ್ತು. ಬೌಲ್ಟ್ ಎಸೆದ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ಬಾರದೇ ಇದ್ದರೆ ಮೂರನೇ ಎಸೆತವನ್ನು ಬೆನ್ ಸ್ಟೋಕ್ಸ್ ಸಿಕ್ಸರಿಗೆ ಅಟ್ಟಿದ್ದರು. ನಾಲ್ಕನೇ ಎಸೆತದಲ್ಲಿ ಒಂದು ರನ್ ಓಡಿ ಎರಡನೇ ರನ್ ಕದಿಯುವ ವೇಳೆ ಗುಪ್ಟಿಲ್ ಎಸೆದ ಚೆಂಡು ಬೆನ್ ಸ್ಟೋಕ್ಸ್ ಬ್ಯಾಟಿಗೆ ತಗಲಿ, ಕೀಪರ್ ಹಿಂದುಗಡೆ ಸಾಗಿ ಬೌಂಡರಿ ಗೆರೆಯನ್ನು ತಲುಪಿತು. ಎರಡು ರನ್ ಜೊತೆಗೆ ಇತರೇ ರೂಪದಲ್ಲಿ 4 ರನ್ ಬಂತು. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ ಗಳಿಸಬೇಕಿತ್ತು. ಸ್ಟ್ರೈಕ್ ನಲ್ಲಿದ್ದ ಬೆನ್ ಸ್ಟೋಕ್ಸ್ ಎರಡು ರನ್ ಕದಿಯಲು ಯತ್ನಿಸಿದಾಗ ನಾನ್ ಸ್ಟ್ರೈಕ್ ನಲ್ಲಿದ್ದ ಅದಿಲ್ ರಶೀದ್ ರನೌಟ್ ಆದರು. ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ಎಸೆತದಲ್ಲಿ ಒಂದು ರನ್ ಕಸಿದು ಎರಡನೇ ರನ್ ಓಡಲು ಯತ್ನಿಸಿದಾಗ ಮಾಕ್ ವುಡ್ ರನೌಟ್ ಆದರು. ಈ ಮೂಲಕ ಪಂದ್ಯ ಟೈ ಆಗಿ ಫಲಿತಾಂಶಕ್ಕೆ ಮೊದಲ ಬಾರಿಗೆ ಸೂಪರ್ ಓವರ್ ಮೊರೆ ಹೋಗಲಾಯಿತು.

    ಕಾನೂನು ಏನು ಹೇಳುತ್ತೆ?
    ಓವರ್ ಥ್ರೋಗೆ ಸಂಬಂಧಿಸಿದ ಐಸಿಸಿಯ 19.8 ಕಾನೂನು ಪ್ರಕಾರ ಫೀಲ್ಡರ್ ಎಸೆದ ಬಾಲ್ ಓವರ್ ಥ್ರೋ ಆದರೆ ಅಥವಾ ಉದ್ದೇಶಪೂರ್ವಕವಾಗಿ ಎಸೆದ ಬಾಲ್ ಬೌಂಡರಿ ಗೆರೆಗೆ ಹೋದರೆ ಎದುರಾಳಿ ತಂಡಕ್ಕೆ 4 ರನ್ ನೀಡುವುದರ ಜೊತೆಗೆ, ಇಬ್ಬರು ಬ್ಯಾಟ್ಸ್ ಮನ್ ಗಳು ಎಷ್ಟು ರನ್ ಓಡಿ ಪೂರ್ಣಗೊಳಿಸುತ್ತಾರೋ ಅಷ್ಟು ರನ್‍ಗಳನ್ನು ಸೇರಿಸಿ ರನ್ ನೀಡಬೇಕು.

    ಅಭಿಮಾನಿಗಳ ವಾದ ಏನು?
    ಗುಪ್ಟಿಲ್ ಎಸೆದ ಬಾಲ್ ಬೆನ್ ಸ್ಟೋಕ್ಸ್ ಬ್ಯಾಟಿಗೆ ತಗಲಿ ಬೌಂಡರಿಗೆ ಹೋಗಿದೆ. ಇದರ ಜೊತೆಯಲ್ಲಿ ಎರಡನೇ ರನ್ ಕದಿಯುತ್ತಿದ್ದಾಗ ಕ್ರೀಸ್ ತಲುಪವ ಮೊದಲೇ ಬ್ಯಾಟಿಗೆ ಸಿಕ್ಕಿ ಬಾಲ್ ಬೌಂಡರಿಗೆ ತಲುಪಿದೆ. ಹೀಗಾಗಿ ಎರಡನೇಯ ರನ್ ಕೌಂಟ್ ಮಾಡಬಾರದು. ಆದರೆ ಬೌಂಡರಿ ಜೊತೆಗೆ 2 ರನ್ ನೀಡಿದ ಪರಿಣಾಮ ಪಂದ್ಯ ಟೈ ಆಗಿದೆ. 5 ರನ್ ನೀಡಿದ್ದರೆ ನ್ಯೂಜಿಲೆಂಡ್ ಜಯಗಳಿಸುತಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

    ಅಭಿಮಾನಿಗಳ ವಾದ ಏನು?
    ಗುಪ್ಟಿಲ್ ಎಸೆದ ಬಾಲ್ ಬೆನ್ ಸ್ಟೋಕ್ಸ್ ಬ್ಯಾಟಿಗೆ ತಗಲಿ ಬೌಂಡರಿಗೆ ಹೋಗಿದೆ. ಗುಪ್ಟಿಲ್ ಚೆಂಡನ್ನು ಎಸೆಯುವ ವೇಳೆ ಸ್ಟೋಕ್ಸ್ ಹಾಗೂ ಆದಿಲ್ ರಶೀದ್ ಒಬ್ಬರನ್ನೊಬ್ಬರನ್ನು ದಾಟಿರಲಿಲ್ಲ. ಎರಡನೇ ರನ್ ಕದಿಯುತ್ತಿದ್ದಾಗ ಕ್ರೀಸ್ ತಲುಪವ ಮೊದಲೇ ಸ್ಟೋಕ್ಸ್ ಬ್ಯಾಟಿಗೆ ಸಿಕ್ಕಿ ಬಾಲ್ ಬೌಂಡರಿಗೆ ತಲುಪಿದೆ. ಹೀಗಾಗಿ ಎರಡನೇಯ ರನ್ ಪರಿಗಣಿಸಬಾರದು. ಆದರೆ ಬೌಂಡರಿ ಜೊತೆಗೆ 2 ರನ್ ನೀಡಿದ ಪರಿಣಾಮ ಪಂದ್ಯ ಟೈ ಆಗಿದೆ. 5 ರನ್ ಮಾತ್ರ ನೀಡಿದ್ದರೆ ನ್ಯೂಜಿಲೆಂಡ್ ಜಯಗಳಿಸುತಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ವಾದಿಸುತ್ತಿದ್ದಾರೆ.

     

     

    ಸೂಪರ್ ಓವರಿನ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 15 ರನ್ ಹೊಡೆಯಿತು. ನ್ಯೂಜಿಲೆಂಡ್ ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಎರಡು ರನ್ ಕದಿಯಲು ಮುಂದಾಗಿದ್ದ ಗುಪ್ಟಿಲ್ ರನ್ ಔಟ್ ಆದರು. ಟ್ರೆಂಟ್ ಬೌಲ್ಟ್ ಎಸೆದ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಮತ್ತು ಬಟ್ಲರ್ ಒಂದೊಂದು ಬೌಂಡರಿ ಹೊಡೆದಿದ್ದರು. ಜೋಫ್ರಾ ಅರ್ಚರ್ ಎಸೆದ ಓವರ್ ನಲ್ಲಿ ನಿಶಮ್ ಒಂದು ಸಿಕ್ಸರ್ ಹೊಡೆದರೆ ಯಾವುದೇ ಬೌಂಡರಿ ಬಂದಿರಲಿಲ್ಲ. ಎರಡು ತಂಡಗಳ ರನ್ ಸಮವಾಗಿದ್ದರೂ ಒಟ್ಟು 24 ಬೌಂಡರಿ ಸಿಡಿದ ಪರಿಣಾಮ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತು. ನ್ಯೂಜಿಲೆಂಡ್ 17 ಬೌಂಡರಿ ಹೊಡೆದಿತ್ತು.

  • ಈ ಸಲ ಕಪ್ ನಮ್ದೇ..! IPL ನಲ್ಲಲ್ಲ, ಕಬಡ್ಡಿಯಲ್ಲಿ ಬೆಂಗಳೂರು ಚಾಂಪಿಯನ್!

    ಈ ಸಲ ಕಪ್ ನಮ್ದೇ..! IPL ನಲ್ಲಲ್ಲ, ಕಬಡ್ಡಿಯಲ್ಲಿ ಬೆಂಗಳೂರು ಚಾಂಪಿಯನ್!

    ಮುಂಬೈ: ಐಪಿಎಲ್ ಪಂದ್ಯಾವಳಿ ವೇಳೆ ಹೇಳುತ್ತಿದ್ದ ಘೋಷವಾಕ್ಯ ‘ಈ ಸಲ ಕಪ್ ನಮ್ದೇ’ ಅನ್ನೋದನ್ನು ನೀವೀಗ ಅಭಿಮಾನದಿಂದ ಹೇಳಬಹುದು. ಯಾಕೆಂದರೆ ಈ ಸಲ ಕಪ್ ನಮ್ದೇ.. ಆದರೆ ಇದು ಐಪಿಎಲ್‍ನಲ್ಲ. ಬದಲಿಗೆ ಕಬಡ್ಡಿ ಪಂದ್ಯವಾಳಿಯಲ್ಲಿ. ವಿವೊ ಪ್ರೊಕಬಡ್ಡಿ ಲೀಗ್ 6ನೇ ಆವೃತ್ತಿಯ ಫೈನಲ್ ನಲ್ಲಿ ಬೆಂಗಳೂರು ಬುಲ್ಸ್ ತಂಡ ಗುಜರಾತ್ ವಿರುದ್ಧ ಗೆಲುವು ಸಾಧಿಸಿದೆ.

    ಶನಿವಾರ ಎನ್‍ಎಸ್‍ಸಿಐ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ಧ 38-33 ಅಂಕಗಳ ಮೂಲಕ 5 ಪಾಯಿಂಟ್ ಗಳ ಗೆಲುವು ಸಾಧಿಸಿತು. ಬೆಂಗಳೂರು ಬುಲ್ಸ್ ತಂಡದ ಪವನ್ ಸೆಹ್ರಾವತ್ 33 ಅಂಕಗಳಲ್ಲಿ 22 ಅಂಕಗಳನ್ನು ತಾವೇ ಗಳಿಸಿದ್ದರು. ಈ ಬಾರಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ ಉತ್ತಮ ಆಟವಾಡಿದ್ದ ಬೆಂಗಳೂರು ಬುಲ್ಸ್ ತಂಡವು 22ರಲ್ಲಿ 13 ಗೆಲುವು ಸಾಧಿಸಿತ್ತು. ಬೆಂಗಳೂರು ತಂಡ ಗೆಲುವು ಸಾಧಿಸುತ್ತಿದ್ದಂತೆ ಕೋಚ್ ರಮೇಶ್ ಸೇರಿದಂತೆ ಎಲ್ಲಾ ಆಟಗಾರರು ಕ್ರೀಡಾಂಗಣದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

    ಕೊಚ್ಚಿಯ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ಧ 41-29 ಅಂತರದಿಂದ ಗೆಲುವು ಸಾಧಿಸಿತ್ತು ಫೈನಲ್‍ಗೆ ಪ್ರವೇಶಿಸಿ ಪ್ರಶಸ್ತಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಧನೆಗಿಲ್ಲ ಅಂಗವಿಕಲತೆ- ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಕರ್ನಾಟಕ ಚಾಂಪಿಯನ್

    ಸಾಧನೆಗಿಲ್ಲ ಅಂಗವಿಕಲತೆ- ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಕರ್ನಾಟಕ ಚಾಂಪಿಯನ್

    ಮಂಗಳೂರು: ಬಲಿಷ್ಠರ ಆಟವೆಂದೇ ಹೆಸರು ಗಳಿಸಿರುವ ಕಬಡ್ಡಿಯನ್ನು ಈಗ ವಿಕಲ ಚೇತನರೂ ಆಡಲಾರಂಭಿಸಿದ್ದು, ರಾಷ್ಟ್ರಮಟ್ಟದ ವಿಕಲ ಚೇತನರ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡ ಪ್ರಶಸ್ತಿಯನ್ನು ಗೆದ್ದಿದೆ.

    ಒಂದು ಕೈ ಊನ ಇದ್ದವರು, ಕೈ ಅರ್ಧಕ್ಕೆ ಕಳಕೊಂಡವರು, ಒಂದು ಕಾಲು ಸಪೂರ ಇದ್ದವರು, ಒಂದು ಕಾಲೇ ಇಲ್ಲದವರು ಹೀಗೆ ನಾನಾ ತೆರನಾದ ದೈಹಿಕ ಊನವುಳ್ಳವರು ನಿರಾಯಾಸವಾಗಿ ಕಬಡ್ಡಿ ರೈಡ್ ಮಾಡ್ತಿರೋದನ್ನು ನೋಡಿದರೆ ಅಚ್ಚರಿಯಾಗುತ್ತೆ. ಆದ್ರೆ ದೈಹಿಕ ಬಲ ಮತ್ತು ಯುಕ್ತಿಯಿಂದಲೇ ಆಡೋ ಕಬಡ್ಡಿ ಆಟವನ್ನು ವಿಕಲಚೇತನರು, ತಾವು ಇತರೇ ಆಟಗಾರರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಅನ್ನುವಂತೆ ಆಡಿ ತೋರಿಸಿದ್ದಾರೆ.

    ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ವಿಕಲ ಚೇತನರ ಕಬಡ್ಡಿ ಕೂಟದಲ್ಲಿ 12 ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ವಿಪರ್ಯಾಸ ಅಂದರೆ, ಸರ್ಕಾರದ ಪ್ರೋತ್ಸಾಹದ ಕೊರತೆಯಿಂದ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ ನಡೆಯಿತು. ರಾಷ್ಟ್ರ ಮಟ್ಟದಲ್ಲಿ ಕೂಟ ನಡೆಯುತ್ತಿದ್ದರೂ ಪ್ರಚಾರ ಇಲ್ಲದ ಕಾರಣ ಸೀಮಿತ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದರು.

    ವಿಕಲಚೇತನರು ಎಂದರೆ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವವರೇ ಹೆಚ್ಚು. ಆದರೆ ಸಾಧಿಸಬೇಕೆಂಬ ಛಲವೊಂದಿದ್ದರೆ ಎಂತವರೂ ಏನನ್ನಾದರೂ ಸಾಧಿಸಬಹುದು ಅನ್ನೋದನ್ನ ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಿದ್ದ ವಿಕಲಚೇತನರು ತೋರಿಸಿಕೊಟ್ಟಿದ್ದಾರೆ. ದೈಹಿಕವಾಗಿ ಬಲಿಷ್ಠರಾಗಿರುವರು ಆಡುವ ಪ್ರೋ ಕಬಡ್ಡಿಯನ್ನು ನೋಡೋರು, ಅಂಗವೈಕಲ್ಯತೆ ಇರುವವರು ತಾವೇನೂ ಕಮ್ಮಿಯಿಲ್ಲ ಎಂದು ಕಬಡ್ಡಿ ಆಡಿ ದೇಶಕ್ಕೆ ಚಾಂಪಿಯನ್ ಆಗಿದ್ದಾರೆ.

    ಸಾಮಾನ್ಯವಾಗಿ ಅಂಗ ವಿಕಲಚೇತರೆಂದರೆ ವೀಲ್ ಚೇರ್ ಕೊಟ್ಟು ಬದಿಗಿರಿಸುತ್ತಾರೆ. ಆದರೆ, ಅವರಲ್ಲೂ ಆಡೋ ಹುಮ್ಮಸ್ಸು ಇರುತ್ತೆ ಅನ್ನುವುದನ್ನು ಯಾರೂ ಮನಗಾಣುವುದಿಲ್ಲ. ಪ್ಯಾರಾ ಒಲಿಂಪಿಕ್ಸ್ ಅನ್ನುವ ಪ್ರತ್ಯೇಕ ವಿಭಾಗ ಇದ್ದರೂ, ಕಬಡ್ಡಿ ಆಡಿಸಿ ನೋಡಿದ್ದಿಲ್ಲ. ಆದರೆ ಬಾಗಲಕೋಟೆ, ವಿಜಾಪುರ, ಕೊಪ್ಪಳದಂತಹ ಹಳ್ಳಿ ಹುಡುಗರೇ ಕರ್ನಾಟಕ ತಂಡದಲ್ಲಿದ್ದು ಇದೇ ಮೊದಲ ಬಾರಿಗೆ ನಡೆದ ರಾಷ್ಟ್ರೀಯ ವಿಕಲ ಚೇತನರ ಕಬಡ್ಡಿ ಪಂದ್ಯಾವಳಿಯ ಫೈನಲಿನಲ್ಲಿ ರಾಜಸ್ಥಾನ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದ್ದಾರೆ.

    ಇಷ್ಟಕ್ಕೂ ಕರ್ನಾಟಕ ತಂಡವನ್ನು ಕಟ್ಟಿ ಬೆಳೆಸಿದ ಕೀರ್ತಿ ಕೋಚ್  ಶೇಖರ್ ಗೆ ಸಲ್ಲುತ್ತದೆ. ದೈಹಿಕ ಊನ ಇದ್ದವರನ್ನು ಸ್ಫೂರ್ತಿ ಕೊಟ್ಟು 18 ವರ್ಷಗಳ ಹಿಂದೆ ತಂಡ ಕಟ್ಟಿದ ಶೇಖರ್ ಸದ್ಯ ತಂಡದ ಕೋಚ್ ಆಗಿದ್ದಾರೆ. ಬಲಿಷ್ಠರ ಕ್ರೀಡೆಗೆ ವಿಕಲ ಚೇತನರ ಎಂಟ್ರಿಯಾಗಿದ್ದಾರೆ. ಸಮಾಜ ಹಾಗೂ ಸರ್ಕಾರದ ಕಡೆಯಿಂದ ಸಹಕಾರ ಸಿಕ್ಕರೆ ಇಂಥವರೂ ರಾಷ್ಟ್ರ ಮಟ್ಟದಲ್ಲಿ ಮಿಂಚಬಲ್ಲರು ಅನ್ನುವುದನ್ನು ತೋರಿಸಿದ್ದಾರೆ. ಒಟ್ಟಿನಲ್ಲಿ ಸಾಧಿಸಬೇಕೆಂಬ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಅನ್ನೋದನ್ನು ಈ ಸಾಹಸಿಗರು ನಾಡಿಗೆ ತೋರಿಸಿಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv