Tag: Champat Rai

  • ಅಯೋಧ್ಯೆಯಲ್ಲಿ ನಾಳೆಯಿಂದ್ಲೇ ಪೂರ್ವಭಾವಿ ಪೂಜೆಗಳು ಆರಂಭ: ಚಂಪತ್‌ ರೈ

    ಅಯೋಧ್ಯೆಯಲ್ಲಿ ನಾಳೆಯಿಂದ್ಲೇ ಪೂರ್ವಭಾವಿ ಪೂಜೆಗಳು ಆರಂಭ: ಚಂಪತ್‌ ರೈ

    ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ (Pran Prathistha Ceremony)ಭರದ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಪ್ರಾಣ ಪ್ರತಿಷ್ಠಾಕ್ಕೆ ಸಂಬಂಧಿಸಿದ ಪೂಜಾ ವಿಧಿ-ವಿಧಾನಗಳು ಮಂಗಳವಾರದಿಂದಲೇ ಪ್ರಾರಂಭವಾಗಲಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ (Champat Rai) ತಿಳಿಸಿದ್ದಾರೆ.

    ಇಂದು ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ರಾಮನ ವಿಗ್ರಹವು 150 ರಿಂದ 200 ಕೆಜಿ ತೂಕವಿರುತ್ತದೆ. ರಾಮಲಲ್ಲಾ ವಿಗ್ರಹವು 150 ರಿಂದ 200 ಕೆ.ಜಿ ತೂಗುತ್ತದೆ. ಇದರೊಂದಿಗೆ ವಿಗ್ರಹಕ್ಕೆ 5 ವರ್ಷದ ಬಾಲಕನ ರೂಪ ನೀಡಲಾಗಿದೆ. ಮಂಗಳವಾರದಿಂದ ಆರಂಭವಾಗಿ ಜನವರಿ 21ರವರೆಗೆ ಈ ಪೂಜಾ ಕಾರ್ಯಕ್ರಮಗಳು ಮುಂದುವರಿಯಲಿದೆ. ಇನ್ನು ಜನವರಿ 22ರಂದು ಮಧ್ಯಾಹ್ನ 12.20ಕ್ಕೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಪೂರ್ಣಗೊಳ್ಳಲಿದೆ ಎಂದರು.

    ರಾಮಲಲ್ಲಾ ಪ್ರಣಪ್ರತಿಷ್ಠಾ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಿದ್ದಾರೆ. ಈ ಕಾರ್ಯಕ್ರಮವು ಸುಮಾರು 65 ರಿಂದ 75 ನಿಮಿಷಗಳವರೆಗೆ ಇರುತ್ತದೆ ಎಂದು ಚಂಪತ್ ರೈ ಹೇಳಿದರು.‌ ಇದನ್ನೂ ಓದಿ: ಜ.22ರಂದು ಶ್ರೀರಾಮ ದರ್ಶನ ನೀಡ್ತಿದ್ದು, ಆಹ್ವಾನಿಸಿರೋದು ನನ್ನ ಅದೃಷ್ಟ: ಮೋದಿ

    ಸಂಪ್ರದಾಯದಂತೆ 1000 ಬುಟ್ಟಿಗಳಲ್ಲಿ ಉಡುಗೊರೆಗಳು ನೇಪಾಳದ ಜನಕ್‌ಪುರ ಮತ್ತು ಮಿಥಿಲಾ ಪ್ರದೇಶಗಳಿಂದ ಬಂದಿದೆ. ನಾಡಿನ ಎಲ್ಲ ಕಲೆಗಳಲ್ಲಿ ಪಾರಂಗತರಾದವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದರಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಜಡ್ಜ್‌ಗಳು, ವಿಜ್ಞಾನಿಗಳು, ಆಟಗಾರರು, ಸಂಗೀತಗಾರರು, ಸಂತರು, ಪ್ರಾಣ ತ್ಯಾಗ ಮಾಡಿದ ಸೈನಿಕರ ಕುಟುಂಬಸ್ಥರು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

  • Ayodhya Ram Mandir – ಶ್ರೀರಾಮಲಲ್ಲಾ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರು

    Ayodhya Ram Mandir – ಶ್ರೀರಾಮಲಲ್ಲಾ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರು

    ಅಯೋಧ್ಯೆ: 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ (Sri Ram Mandir) ಉದ್ಘಾಟನೆ ನೆರವೇರಲಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ರಾಮಲಲ್ಲಾನ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರನ್ನು ತರಿಸಲಾಗಿದೆ.

    ಹೌದು. ಜನವರಿ 22 ರಂದು ಅಯೋಧ್ಯೆಯ (Ayodhya) ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಪ್ರಾಣ ಪ್ರತಿಷ್ಠಾಪನೆಗಾಗಿ ನೇಪಾಳ ವಿವಿಧ ರೀತಿಯ ಆಭರಣಗಳು, ವಸ್ತುಗಳು, ವಸ್ತ್ರ ಹಾಗೂ ಸಿಹಿ ತಿನಿಸುಗಳು ಸೇರಿ ಹಲವು ಸ್ಮರಣಿಕೆಗಳನ್ನು ಕಳುಹಿಸಲು ಸಜ್ಜಾಗಿದೆ. ಇದರೊಂದಿಗೆ ರಾಮಲಲ್ಲಾನ ಜಲಾಭಿಷೇಕಕ್ಕೆ ನೇಪಾಳದ ಪವಿತ್ರ ನದಿಗಳಿಂದಲೇ (Nepal Rivers Water) ನೀರನ್ನು ತರಿಸಿರುವುದು ವಿಶೇಷ, ಇದಕ್ಕೆ ಕಾರಣವೂ ಇದೆ.

    ನೇಪಾಳ ನದಿಗಳ ನೀರು ಏಕೆ?
    ಅಯೋಧ್ಯೆಗೂ, ನೆರೆಯ ರಾಷ್ಟ್ರ ನೇಪಾಳಕ್ಕೂ ವಿಶೇಷ ಸಂಬಂಧವಿದೆ. ನೇಪಾಳದಲ್ಲಿ ಜನಿಸಿದ ಸೀತಾಮಾತೆಯನ್ನು ಭಗವಾನ್ ಶ್ರೀರಾಮನು ವರಿಸಿದ್ದ. ಅಂದಿನಿಂದ ಭಾರತ-ನೇಪಾಳದ ಸಂಬಂಧವಿದೆ, ಇದನ್ನು ರೋಟಿ-ಭೇಟಿ ಸಂಬಂಧ ಅಂತಲೂ ಕರೆಯುತ್ತಾರೆ. ಈಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಗರ್ಭಗುಡಿ ಉದ್ಘಾಟನೆಯಾಗುತ್ತಿದ್ದು ಬಾಲರಾಮನ (Ram Lalla) ಅಭಿಷೇಕಕ್ಕೆ ಸೀತಾಮಾತೆಯ ತವರು ನೇಪಾಳದಿಂದ ಪವಿತ್ರ ನದಿಗಳ ನೀರನ್ನು ತರಿಸಲಾಗಿದೆ ಎಂದು ಸದಸ್ಯರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ 84 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ- ಯೋಗಿ ಸರ್ಕಾರದ ಮಹತ್ವದ ನಿರ್ಧಾರ

    ಸಪ್ತಕೋಶಿ, ನಾರಾಯಿಣಿ, ಮಹಾಕಾಳಿ, ಕಾಳಿ ಗಂಡಕಿ, ಗಂಗಾ ಸಾಗರ್, ಬಾಗ್ಮತಿ, ಕಮಲಾ ನದಿಗಳು ಸೇರಿದಂತೆ 16 ಪವಿತ್ರ ನದಿಗಳ ನೀರನ್ನು ಶ್ರೀರಾಮನ ಅಭಿಷೇಕಕ್ಕಾಗಿ ತರಿಸಲಾಗಿದೆ. ನೇಪಾಳದಲ್ಲಿರುವ ರಾಮಭಕ್ತರ ಸಮಿತಿ ಮೂಲಕ ನೀರನ್ನು ಸಂಗ್ರಹಿಸಿ ಭಾರತಕ್ಕೆ ತರಿಸಲಾಗಿದೆ. ಈ ಜಲವನ್ನು ಅಯೋಧ್ಯಾ ಶ್ರೀರಾಮಜನ್ಮಭೂಮಿ ಟ್ರಸ್ಟ್ ಮುಖ್ಯ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸುತ್ತೇವೆ. ರಾಮಮಂದಿರ ಗರ್ಭಗುಡಿ ಉದ್ಘಾಟನೆಯ ದಿನ ವಿವಿಧ ಅಭಿಷೇಕಗಳು ನೇರವೇರುವ ಹೊತ್ತಿನಲ್ಲಿ, ಈ ಪವಿತ್ರ ಜಲದಿಂದ ಅಭಿಷೇಕ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಎಂದು ಮರುನಾಮಕರಣ- ವಿಶೇಷತೆ ಏನು?

    ಎಲ್ಲಿಂದ ಏನೇನು ಬರುತ್ತೆ?
    * ಜನವರಿ 22 ರಂದು ರಾಮಲಲ್ಲಾ ಪಟ್ಟಾಭಿಷೇಕ ನಡೆಯಲಿದೆ. ಇದಾದ ನಂತರ ದೇವರಿಗೆ ವಿಶೇಷ ನೈವೇದ್ಯ ಸಮರ್ಪಿಸಲಾಗುತ್ತದೆ. ಭಗವಾನ್ ಶ್ರೀರಾಮನ ತಾಯಿಯ (ಕೌಸಲ್ಯೆ) ಮನೆ ಛತ್ತೀಸ್‌ಗಢದಿಂದ 3,000 ಕ್ವಿಂಟಾಲ್ ಅಕ್ಕಿ ಬರುತ್ತಿದೆ. ಇದು ಇಲ್ಲಿಯವರೆಗಿನ ಅತಿ ಹೆಚ್ಚಿನ ಪ್ರಮಾಣದ ಅಕ್ಕಿ ರವಾನೆಯಾಗಿದ್ದು, ಇದು ಅಯೋಧ್ಯೆಗೆ ತಲುಪಲಿದೆ. ಇದನ್ನು ಛತ್ತೀಸ್‌ಗಢದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಲಾಗಿದೆ. ಇದನ್ನೂ ಓದಿ: Ayodhya Ram Mandir: ಅಹಮದಾಬಾದ್‌ ಗ್ರೂಪ್‌ನಿಂದ ಅಯೋಧ್ಯೆಗೆ 450 ಕೆ.ಜಿ ತೂಕದ ಮೆಗಾ ಡ್ರಮ್ ಗಿಫ್ಟ್‌

    * ಜನವರಿ 5 ರಂದು ಭಗವಾನ್ ರಾಮನ ಅತ್ತೆ ಮನೆಯಾದ ನೇಪಾಳದ ಜನಕ್‌ಪುರದಿಂದ ಬಟ್ಟೆ, ಹಣ್ಣುಗಳು ಮತ್ತು ಒಣ ಹಣ್ಣುಗಳು ಅಯೋಧ್ಯೆಗೆ ತಲುಪುತ್ತವೆ. ಇದಲ್ಲದೆ, ಉಡುಗೊರೆಗಳಿಂದ ಅಲಂಕರಿಸಲ್ಪಟ್ಟ 1,100 ಪ್ಲೇಟ್‌ಗಳು ಸಹ ಇರುತ್ತವೆ.

    * ನೇಪಾಳದಿಂದ ಆಭರಣಗಳು, ಪಾತ್ರೆಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳು ಸಹ ಬರಲಿವೆ. ಇದರಲ್ಲಿ 51 ಬಗೆಯ ಸಿಹಿತಿಂಡಿಗಳು ಇರಲಿವೆ. ಜೊತೆಗೆ ಮೊಸರು, ಬೆಣ್ಣೆ ಮತ್ತು ಬೆಳ್ಳಿಯ ಪಾತ್ರೆಗಳು ಸೇರಿವೆ.

  • Ayodhya Ram Mandir: ಆಧಾರ್ ಕಡ್ಡಾಯ – ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ

    Ayodhya Ram Mandir: ಆಧಾರ್ ಕಡ್ಡಾಯ – ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ

    – ಅಯೋಧ್ಯೆ ಮಂದಿರ ಉದ್ಘಾಟನೆಗೆ ನಿಯಮ ಪಾಲಿಸಲು ಮನವಿ

    ಅಯೋಧ್ಯೆ: ಜನವರಿ 22ರಂದು ನಡೆಯುವ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ (Inivitation Card) ಹಂಚಿಕೆ ಕಾರ್ಯ ಮುಂದುವರಿದಿದ್ದು, ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಕಾರ್ಯಕ್ರಮಕ್ಕೆ ಆಗಮಿಸುವ ಸಾಧು ಸಂತರಿಗೆ, ಗಣ್ಯರಿಗೆ ವಿಶೇಷ ಮನವಿ ಮಾಡಿದ್ದಾರೆ. ಇದರಲ್ಲಿ ಅಯೋಧ್ಯೆಯಲ್ಲಿ (Ayodhya) ಕಾರ್ಯಕ್ರಮಕ್ಕೆ ಬರುವುದಾದರೆ, ಸೂಚನೆಗಳನ್ನು ಪಾಲಿಸುವಂತೆ ಟ್ರಸ್ಟ್ ಕೋರಿಕೊಂಡಿದೆ.

    Ram Mandir Invitation

    ಸಾಧು ಸಂತರ ಬಳಿ ವಿನಮ್ರ ನಿವೇದನೆ:

    • ನಿಮ್ಮ ಆಧಾರ್ ಕಾರ್ಡ್ (Aadhar Card) ನಿಮ್ಮ ಜೊತೆ ಇರಲಿ.
    • ಭದ್ರತಾ ಕಾರಣಗಳಿಗಾಗಿ ಮೊಬೈಲ್, ಪರ್ಸ್, ಬ್ಯಾಗ್, ಛತ್ರಿ, ಸಿಂಹಾಸನ, ವೈಯಕ್ತಿಕ ಪೂಜೆ ಸಾಮಗ್ರಿ ಅಥವಾ ಗುರಪಾದುಕೆಯನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕೊಂಡೊಯ್ಯುವುದು ಸಾಧ್ಯವಿಲ್ಲ.
    • ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬೆಳಗ್ಗೆ 11.00 ಗಂಟೆ ಮೊದಲು ಪ್ರವೇಶಿಸಿ.
    • ಕಾರ್ಯಕ್ರಮ 3 ಗಂಟೆಗೂ ಅಧಿಕ ಕಾಲ ನಡೆಯಬಹುದು. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಲು ಮತ್ತು ವಾಪಸ್ ಬರಲು ಸುಮಾರು 1 ಕಿಲೋಮೀಟರ್ ನಡೆಯಬೇಕು.
    • ಇದು ವೈಯಕ್ತಿಕ ಆಮಂತ್ರಣ. ಒಂದು ಆಮಂತ್ರಣ ಪತ್ರಿಕೆ ಮೂಲಕ ಒಬ್ಬರಿಗೆ ಮಾತ್ರ ಪ್ರವೇಶ.
    • ನಿಮ್ಮ ಸಹಾಯಿಗಳು, ಶಿಷ್ಯಂದಿರು ನಿಮ್ಮ ಜೊತೆ ಬಂದರೂ ಅವರು ಕಾರ್ಯಕ್ರಮ ನಡೆಯುವ ಸ್ಥಳದಿಂದ ಹೊರಗೆ ಉಳಿಯಬೇಕು. ಶಿಷ್ಯಂದಿರು ಅಥವಾ ಸೇವಕರಿಗೆ ಪ್ರತ್ಯೇಕ ಆಮಂತ್ರಣ ಪತ್ರ ನೀಡುವುದಿಲ್ಲ.
    • ಯಾವುದೇ ಸಂತರು, ಸ್ವಾಮಿಗಳ ಜೊತೆ ಭದ್ರತಾ ಸಿಬ್ಬಂದಿ ಇದ್ದರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಅವರಿಗೆ ಪ್ರವೇಶವಿಲ್ಲ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಪಾಲ್ಗೊಳ್ಳುವುದರಿಂದ ಈ ಸ್ಥಳ ಮೊದಲೇ ಸುರಕ್ಷಿತವಾಗಿರುತ್ತದೆ.
    • ಪ್ರಧಾನ ಮಂತ್ರಿ ಮಂದಿರದಿಂದ ವಾಪಸ್ ಹೋದ ಬಳಿಕವಷ್ಟೇ, ಮಂದಿರದಲ್ಲಿ ವಿರಾಜಮಾನವಾಗಿರುವ ಸಂತ ಮಹಾಪುರುಷ ರಾಮಲಲ್ಲಾನ ದರ್ಶನ ಪಡೆಯಬಹುದು.

  • ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

    ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

    ಅಯೋಧ್ಯೆ: ಕೋಟ್ಯಂತರ ರಾಮಭಕ್ತರ ಕನಸು ನನಸಾಗಲು ಇನ್ನು ಒಂದು ತಿಂಗಳಷ್ಟೇ ಬಾಕಿ. ಅಯೋಧ್ಯೆ ಶ್ರೀರಾಮ ಮಂದಿರ (Sri Ram Mandir) ಉದ್ಘಾಟನೆಯ ಆಮಂತ್ರಣ ಪತ್ರಿಕೆ (Personal Invitation) ಹಂಚಿಕೆ ಈಗಾಗಲೇ ಶುರುವಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಿಜಿಸ್ಟರ್ ಪೋಸ್ಟ್ ಮೂಲಕ ಸಾಧು ಸಂತರಿಗೆ ಹಾಗೂ ಗಣ್ಯರಿಗೆ ಆಮಂತ್ರಣ ಪತ್ರಿಕೆ ಕಳಿಸುತ್ತಿದೆ.

    ಇದರಲ್ಲಿ ಕೆಲವು ಆಮಂತ್ರಣ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಲೆಟರ್ ಹೆಡ್‍ನಲ್ಲಿ ವೈಯಕ್ತಿಕವಾಗಿ ಆಹ್ವಾನಿತರ ಹೆಸರು ಉಲ್ಲೇಖಿಸಿ ಆಮಂತ್ರಣ ಪತ್ರಿಕೆ ಕಳಿಸಲಾಗುತ್ತಿದೆ. ಇದನ್ನೂ ಓದಿ: ಆಗಸ್ಟ್‌ 15 ರಷ್ಟೇ ಜನವರಿ 22 ಮಹತ್ವದ ದಿನ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಕಾರ್ಯದರ್ಶಿ

    ಆಮಂತ್ರಣ ಪತ್ರದಲ್ಲೇನಿದೆ..?

    ಶ್ರೀಚರಣಗಳಿಗೆ ವಂದನೆ.
    ಪ್ರಭು ಶ್ರೀರಾಮನ (Lord Rama) ಕೃಪೆಯಿಂದ ದೇವರ ಆರಾಧನೆ ಚೆನ್ನಾಗಿ ನಡೆದು, ಎಲ್ಲ ಆಶ್ರಮವಾಸಿಗಳು ಸಂತೋಷದಿಂದಿರಬಹುದು.

    ಸುದೀರ್ಘ ಹೋರಾಟದ ನಂತರ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವುದು ನಿಮಗೆ ತಿಳಿದಿರಬಹುದು. ಇದನ್ನೂ ಓದಿ: Ayodhya Shri Ram Airport: ಜ.6 ರಿಂದ ಬೆಂಗ್ಳೂರು ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಶುರು

    ಪೌಷ, ಶುಕ್ಲ ದ್ವಾದಶಿ ವಿಕ್ರಮ ಸಂವತ್ಸರ 2080, ಸೋಮವಾರ, 22 ಜನವರಿ 2024, ಗರ್ಭಗುಡಿಯಲ್ಲಿ ರಾಮ ಲಲ್ಲಾನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಪುಣ್ಯ ಸಂದರ್ಭದಲ್ಲಿ ನೀವು ಅಯೋಧ್ಯೆಯಲ್ಲಿ ಉಪಸ್ಥಿತರಿದ್ದು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು ಹಾಗೂ ಈ ದಿನದ ಘನತೆಯನ್ನು ಹೆಚ್ಚಿಸಬೇಕು ಎನ್ನುವುದು ನಮ್ಮ ಅಪೇಕ್ಷೆ.

    ನೀವು ಜನವರಿ 21ರೊಳಗೆ ಅಯೋಧ್ಯೆ ತಲುಪಲು ವ್ಯವಸ್ಥೆ ಮಾಡಿಕೊಳ್ಳಿ. ಎಷ್ಟು ಬೇಗ ನೀವು ಅಯೋಧ್ಯೆ ತಲುಪುತ್ತೀರೋ, ಅದರಿಂದ ನಿಮಗೆ ಅನುಕೂಲವಾಗಲಿದೆ. ಬರುವುದು ತಡವಾದರೆ ಸಮಸ್ಯೆಗಳನ್ನು ಎದುರಿಸಬೇಕಾದೀತು. 23 ಜನವರಿ 2024ರ ನಂತರವೇ ಅಯೋಧ್ಯೆಯಿಂದ ವಾಪಸ್ ಹೊರಡಲು ಪ್ಲ್ಯಾನ್ ಮಾಡಿ.

    ಈ ಶುಭ ಸಂದರ್ಭದಲ್ಲಿ ಅಯೋಧ್ಯಾ ಧಾಮದಲ್ಲಿ ನೀವು ಉಪಸ್ಥಿತರಿರಬೇಕು ಎಂದು ಮತ್ತೊಮ್ಮೆ ನಿಮ್ಮಲ್ಲಿ ವಿನಂತಿ.

    ನಿಮ್ಮ ಶ್ರೀಚರಣಗಳಿಗೆ ಪ್ರಣಾಮ.
    ಚಂಪತ್ ರಾಯ್,
    ಮುಖ್ಯ ಕಾರ್ಯದರ್ಶಿ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ

  • ರಾಮಮಂದಿರ ಉದ್ಘಾಟನೆಗೆ ಬರಬೇಡಿ – ಅಡ್ವಾಣಿ, ಜೋಶಿಯಲ್ಲಿ ಮನವಿ – ಬರಲಿರುವ VIP ಗಣ್ಯರು ಯಾರು?

    ರಾಮಮಂದಿರ ಉದ್ಘಾಟನೆಗೆ ಬರಬೇಡಿ – ಅಡ್ವಾಣಿ, ಜೋಶಿಯಲ್ಲಿ ಮನವಿ – ಬರಲಿರುವ VIP ಗಣ್ಯರು ಯಾರು?

    – 4,000 ಸಂತರು, 2,200 ಅತಿಥಿಗಳಿಗೆ ಆಹ್ವಾನ
    – ಮುಕೇಶ್ ಅಂಬಾನಿ, ಅಮಿತಾಬ್ ಬಚ್ಚನ್, ರಜನಿಕಾಂತ್‌ಗೂ ಆಹ್ವಾನ
    – ಅತಿಥಿಗಳ ವಾಸ್ತವ್ಯಕ್ಕೆ 600 ಕೊಠಡಿಗಳ ವ್ಯವಸ್ಥೆ

    ಲಕ್ನೋ (ಅಯೋಧ್ಯೆ): ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಈ ಮಧ್ಯೆ ಉದ್ಘಾಟನಾ ಸಮಾರಂಭಕ್ಕೆ ಬರಬೇಡಿ ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಬಿಜೆಪಿಯ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ (LK Advani) ಹಾಗೂ ಮುರಳಿ ಮನೋಹರ್ ಜೋಶಿ (Murli Manohar Joshi) ಅವರಿಗೆ ಮನವಿ ಮಾಡಿದ್ದಾರೆ.

    ಈ ಕುರಿತು ಸ್ಪಷ್ಟನೆ ನೀಡಿರುವ ಚಂಪತ್ ರೈ, ಆರೋಗ್ಯ ಮತ್ತು ವಯೋಸಹಜ ಕಾರಣಗಳಿಂದಾಗಿ ಮುರಳಿ ಮನೋಹರ್ ಜೋಶಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇಬ್ಬರೂ ಹಿರಿಯರು, ಅವರ ವಯಸ್ಸನ್ನು ಪರಿಗಣಿಸಿ ಉದ್ಘಾಟನಾ ಸಮಾರಂಭಕ್ಕೆ ಬಾರದಂತೆ ಮನವಿ ಮಾಡಿದ್ದೇವೆ. ಅದಕ್ಕೆ ಅವರೂ ಸಮ್ಮತಿ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮ ಮಂದಿರ ಉದ್ಘಾಟನೆಗೆ 2,500 ಸಂತರಿಗೆ ಆಹ್ವಾನ – ದಂಡ, ಚನ್ವಾರ್, ಛತ್ರ, ಪಾದುಕೆ ತರದಂತೆ ಮನವಿ

    ಮುಂದುವರಿದು ಮಾತನಾಡಿ, 2024ರ ಜನವರಿ 15ರ ಒಳಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಿದ್ಧತೆಗಳು ಪೂರ್ಣಗೊಳ್ಳಲಿವೆ. `ಪ್ರಾಣ ಪ್ರತಿಷ್ಠೆ’ (Pran Pratishtha) ಪೂಜೆಯು ಜನವರಿ 16 ರಂದು ಪ್ರಾರಂಭವಾಗಿ ಜ.22ರ ವರೆಗೆ ನಡೆಯಲಿದೆ. ಸುಮಾರು 150 ಸಂತರು ಮತ್ತು ಋಷಿಮುನಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂತಶ್ರೇಷ್ಠ ಶಂಕರಾಚಾರ್ಯ ತತ್ವಶಾಸ್ತ್ರ ಪರಂಪರೆಯ 6 ಸಂತರು ಭಾಗವಹಿಸಲಿದ್ದಾರೆ. ಅಷ್ಟುಮಾತ್ರವಲ್ಲದೇ ಸಮಾರಂಭಕ್ಕೆ ಸುಮಾರು 4,000 ಸಂತರು, 2,200 ಅತಿಥಿಗಳನ್ನು ಆಹ್ವಾನಿಸಲಾಗಿದೆ. ಕಾಶಿ ವಿಶ್ವನಾಥ, ವೈಷ್ಣೋದೇವಿಯಂತಹ (Vaishnodevi) ಪ್ರಮುಖ ದೇವಾಲಯಗಳ ಮುಖ್ಯಸ್ಥರು ಮತ್ತು ಧಾರ್ಮಿಕ ಮತ್ತು ಸಾಂವಿಧಾನಿಕ ಸಂಸ್ಥೆಗಳ ಪ್ರತಿನಿಧಿಗಳನ್ನೂ ಆಹ್ವಾನಿಸಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ

    ಅಲ್ಲದೇ, ಆಧ್ಯಾತ್ಮಿಕ ಗುರು ದಲೈಲಾಮಾ, ಕೇರಳದ ಮಾತಾ ಅಮೃತಾನಂದಮಯಿ, ಯೋಗ ಗುರು ಬಾಬಾ ರಾಮ್‌ದೇವ್, ನಟರಾದ ರಜನಿಕಾಂತ್, ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ಅರುಣ್ ಗೋವಿಲ್, ಚಲನಚಿತ್ರ ನಿರ್ದೇಶಕ ಮಧುರ್ ಭಂಡಾರ್‌ಕರ್, ಪ್ರಮುಖ ಉದ್ಯಮಿಗಳಾದ ಮುಕೇಶ್ ಅಂಬಾನಿ, ಅನಿಲ್ ಅಂಬಾನಿ, ಖ್ಯಾತ ಚಿತ್ರಕಲಾವಿದ ವಾಸುದೇವ್ ಕಾಮತ್, ಇಸ್ರೋದ ನಿರ್ದೇಶಕ ನೀಲೇಶ್ ದೇಸಾಯಿ ಸೇರಿದಂತೆ ಹಲವು ಖ್ಯಾತ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅತಿಥಿಗಳ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ವಿವಿಧ ಮಠಗಳು, ದೇವಸ್ಥಾನಗಳು ಮತ್ತು ಮನೆಗಳು ಸೇರಿದಂತೆ 600 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಪಟ್ಟಾಭಿಷೇಕದ ನಂತರ ಜನವರಿ 24 ರಿಂದ ಉತ್ತರ ಭಾರತದ ಸಂಪ್ರದಾಯದಂತೆ 48 ದಿನಗಳ ಕಾಲ ಮಹಾಮಂಡಲ ಪೂಜೆ ನಡೆಯಲಿದೆ. ಇದೇ ವೇಳೆ ಜನವರಿ 23 ರಿಂದ ಶ್ರೀಸಾಮಾನ್ಯರು ಶ್ರೀರಾಮನ ದರ್ಶನ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ತಲೆ ಎತ್ತಲಿದೆ ಶ್ರೀರಾಮನ ಮೂರ್ತಿ

  • ರಾಮ ಮಂದಿರ ಭೂಮಿ ಖರೀದಿಯಲ್ಲಿ ಅಕ್ರಮ ಆರೋಪ – ಪತ್ರಕರ್ತನ ಮೇಲೆ ಕೇಸ್

    ರಾಮ ಮಂದಿರ ಭೂಮಿ ಖರೀದಿಯಲ್ಲಿ ಅಕ್ರಮ ಆರೋಪ – ಪತ್ರಕರ್ತನ ಮೇಲೆ ಕೇಸ್

    ಲಕ್ನೋ: ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರಾಗಿರುವ ಚಂಪತ್ ರಾಯ್ ವಿರುದ್ಧ ಭೂ ಅಕ್ರಮ ಆರೋಪ ಹೊರಿಸಿದ ಪತ್ರಕರ್ತ ಮತ್ತು ಇಬ್ಬರ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಪತ್ರಕರ್ತ ವಿನೀತ್ ನರೈನ್, ಅಲ್ಕಾ ಲಾಹೋತಿ, ರಜನೀಶ್ ಅವರ ವಿರುದ್ಧ ಚಂಪತ್ ರಾಯ್ ಅವರ ಸಹೋದರ ಸಂಜಯ್ ಬನ್ಸಲ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಜ್ನೋರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ವಿಶ್ವ ಹಿಂದೂ ಪರಿಷತ್ ಮುಖಂಡರಾಗಿರುವ ಚಂಪತ್ ರಾಯ್ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ನಲ್ಲಿ ಕಾರ್ಯದರ್ಶಿಯಾಗಿದ್ದು ಇವರು ಭೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವಿನೀತ್ ನರೈನ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಇದನ್ನೂ ಓದಿ: ರಾಮ ಮಂದಿರ ಜಮೀನು ಖರೀದಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ- ಎಸ್‍ಪಿ, ಆಪ್ ಆರೋಪ

    ಈ ಮೂವರೂ ವಿಎಚ್‍ಪಿ ನಾಯಕನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಸಂಚು ರೂಪಿಸಿ ದೇಶಾದ್ಯಂತ ಇರುವ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಮೂರು ದಿನಗಳ ಹಿಂದೆ ಫೇಸ್‍ಬುಕ್ ನಲ್ಲಿ ವಿನೀತ್ ನರೈನ್, ಚಂಪತ್ ರಾಯ್ ಅವರ ಸಹೋದರರು ಬಿಜ್ನೋರ್ ನಲ್ಲಿ ಭೂ ಕಬಳಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಪೋಸ್ಟ್ ಪ್ರಕಟಿಸಿದ್ದರು.

    ನರೈನ್ ಮತ್ತು ಇತರರು ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ, ಉದ್ದೇಶಪೂರ್ವಕ ಸುಳ್ಳು ವರದಿ ಇತ್ಯಾದಿ ಆರೋಪಗಳನ್ನು ಎಫ್‍ಐಆರ್ ನಲ್ಲಿ ಹೊರಿಸಲಾಗಿದೆ.

    ಬಿಜ್ನೋರ್ ಪೊಲೀಸ್ ಮುಖ್ಯಸ್ಥರು ಈಗಾಗಲೇ ಚಂಪತ್ ರಾಯ್ ಮತ್ತು ಅವರ ಸಹೋದರರಿಗೆ ಈ ಆರೋಪಕ್ಕೆ ಸಂಬಂಧಿಸಿದಂತೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕ್ಲೀನ್ ಚಿಟ್ ನೀಡಿದ್ದು ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.