Tag: challenge

  • ಸಿನಿಮಾ ಬಿಟ್ಟು ಮನೆಕೆಲಸದಲ್ಲಿ ಬ್ಯುಸಿಯಾದ್ರು ರಾಜಮೌಳಿ

    ಸಿನಿಮಾ ಬಿಟ್ಟು ಮನೆಕೆಲಸದಲ್ಲಿ ಬ್ಯುಸಿಯಾದ್ರು ರಾಜಮೌಳಿ

    ಹೈದರಾಬಾದ್: ಸದ್ಯ ಲಾಕ್‍ಡೌನ್‍ನಿಂದ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿರುವ ಬಾಹುಬಲಿ ನಿರ್ದೇಶಕ ಎಸ್. ಎಸ್ ರಾಜಮೌಳಿ ಅವರು ಮನೆಯಲ್ಲಿ ಏನು ಮಾಡುತ್ತಿದ್ದಾರೆ ಎನ್ನುವ ಸ್ಪೆಷಲ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ‘ಬಾಹುಬಲಿ’ಯಂತಹ ಸರಣಿ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ರಾಜಮೌಳಿ ಸದ್ಯ ಮನೆಯಲ್ಲಿ ಕೆಲಸ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಮನೆಯಲ್ಲಿ ಕಸ ಗುಡಿಸುತ್ತಾ, ಕಿಟಕಿ ಕ್ಲೀನ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ರಾಜಮೌಳಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಸಿನಿಮಾ ಮಾತ್ರವಲ್ಲ ಮನೆ ಕೆಲಸವನ್ನೂ ಚೆನ್ನಾಗೆ ಮಾಡ್ತೀರಾ ಸಾರ್ ಎಂದು ನೆಟ್ಟಿಗರು ರಾಜಮೌಳಿ ಟ್ವೀಟ್‍ಗೆ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ.

    ನಿರ್ದೇಶಕ ಹಾಗೂ ನಿರ್ಮಾಪಕ ಸಂದೀಪ್ ವಂಗಾ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಕೆಲಸ ಮಾಡುವ ವಿಡಿಯೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಕೇಲವ ವಿಡಿಯೋ ಪೊಲೀಸ್ ಮಾಡೋದಲ್ಲದೇ #BetheREALMAN ಅಂತ ಸೆಲೆಬ್ರಿಟಿಗಳಿಗೆ ಚಾಲೆಂಜ್ ಕೂಡ ಮಾಡಿದ್ದಾರೆ. ಮನೆ ಕೆಲಸದವರು ಇಲ್ಲದಿದ್ದಾಗ ಮಹಿಳೆಯರಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಿ ರಿಯಲ್ ಮ್ಯಾನ್ ಆಗಿ ಎಂದು ಸಂದೀಪ್ ರಾಜಮೌಳಿ ಅವರನ್ನು ಟ್ಯಾಗ್ ಮಾಡಿ, ಚಾಲೆಂಜ್ ಹಾಕಿದ್ದರು.

    ಈ ಸವಾಲನ್ನು ಸ್ವೀಕರಿಸಿದ ರಾಜಮೌಳಿ ತಮ್ಮ ಮನೆ ಕೆಲಸ ಮಾಡಿ ರಿಯಲ್ ಮ್ಯಾನ್ ಆಗಿದ್ದಾರೆ. ಅಷ್ಟೇ ಅಲ್ಲದೇ ಮನೆ ಕೆಲಸ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿ, ಜೂನಿಯರ್ ಎನ್‍ಟಿಆರ್, ರಾಮ್ ಚರಣ್ ಹಾಗೂ ಎಂಎಂ ಕೀರವಾಣಿ ಅವರಿಗೂ ಚಾಲೆಂಜ್ ಪಾಸ್ ಮಾಡಿದ್ದಾರೆ.

    ಲಾಕ್‍ಡೌನ್‍ಗೂ ಮುನ್ನ ಟಾಲಿವುಡ್‍ನ ಬಹುನಿರೀಕ್ಷಿತ ಸಿನಿಮಾ ‘ಆರ್‌ಆರ್‌ಆರ್’ ಚಿತ್ರೀಕರಣದಲ್ಲಿ ರಾಜಮೌಳಿ ಅವರು ಬ್ಯುಸಿಯಾಗಿದ್ದರು. ರಾಮ್ ಚರಣ್ ಹಾಗೂ ಜೂನಿಯರ್ ಎನ್‍ಟಿಆರ್ ಜೊತೆಗೆ ಬಾಲಿವುಡ್ ತಾರೆಯರು ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದು, ಲಾಕ್‍ಡೌನ್‍ನಿಂದಾಗಿ ಶೂಟಿಂಗ್ ಕೆಲಸ ಸ್ಥಗಿತಗೊಂಡಿದೆ.

  • ಪಬ್ಲಿಕ್ ಟಿವಿಯ ಚಾಲೆಂಜ್ ಸ್ವೀಕರಿಸಿದ ಯಾದಗಿರಿ ವೈದ್ಯ, ಯುವಕ

    ಪಬ್ಲಿಕ್ ಟಿವಿಯ ಚಾಲೆಂಜ್ ಸ್ವೀಕರಿಸಿದ ಯಾದಗಿರಿ ವೈದ್ಯ, ಯುವಕ

    – ಒಂದು ತಿಂಗಳು 200 ನಿರ್ಗತಿಕರಿಗೆ ಉಚಿತ ಊಟ

    ಯಾದಗಿರಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ದೇಶಾದ್ಯಂತ ಕರ್ಫ್ಯೂ ಹೇರಲಾಗಿದೆ. ಈ ಸಮಯದಲ್ಲಿ ನಿರ್ಗತಿಕರಿಗೆ ಮತ್ತು ಬಡ ಕೂಲಿ ಕಾರ್ಮಿಕರಿಗೆ ಒಂದು ಹೊತ್ತು ಊಟ ಸಹ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸ್ಥಿತಿವಂತರು ತಮ್ಮ ಕೈಲಾದ ಸಹಾಯವನ್ನು ಮಾಡುವಂತೆ ಮತ್ತು ಈ ಕೆಲಸವನ್ನು ಚಾಲೆಂಜ್ ಆಗಿ ಸ್ವೀಕರಿಸುವಂತೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ರಾಜ್ಯದ ಜನತೆಯಲ್ಲಿ ಮನವಿಯನ್ನು ಮಾಡಿದ್ದರು.

    ಪಬ್ಲಿಕ್ ಟಿವಿಯ ಮನವಿಗೆ ಸ್ಪಂದಿಸಿದ ಯಾದಗಿರಿ ವೈದ್ಯ ಮತ್ತು ಯುವಕನೋರ್ವ ಚಾಲೆಂಜ್ ಸ್ವೀಕರಿಸಿ, ಭಾರತ್ ಲಾಕ್ ಡೌನ್ ಇರುವಷ್ಟು ದಿನ 200 ಮಂದಿಗೆ ಒಂದು ಹೊತ್ತು ಊಟ ನೀಡಲು ಮುಂದಾಗಿದ್ದಾರೆ. ಯಾದಗಿರಿ ಖಾಸಗಿ ವೈದ್ಯ ವಿರೇಶ್ ಜಾಕಾ ಮತ್ತು ಸ್ನೇಹಿತ ಅನಿಲ್ ಜೊತೆಗೂಡಿ ನಗರದ ಕುಷ್ಠರೋಗಳ ಕಾಲೋನಿಯ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟ- ಹೆಚ್.ಆರ್ ರಂಗನಾಥ್ ಚಾಲೆಂಜ್ ಸ್ವೀಕರಿಸಿದ ಶಾಸಕ ರಘುಪತಿ ಭಟ್

    ಒಂದು ತಿಂಗಳು 200 ಜನಕ್ಕೆ ಒಂದು ಹೊತ್ತು ಆಹಾರ ಪೂರೈಕೆ ಮಾಡಲು ಈ ಇಬ್ಬರು ನಿರ್ಧರಿಸಿದ್ದಾರೆ. ದಿನಕ್ಕೆ 50 ಕೆ.ಜಿ ಊಟ ತಯಾರಿಸಿ ಗುಡಿಸಲುಗಳಿಗೆ ಪ್ಯಾಕೆಟ್ ಮೂಲಕ ಆಹಾರ ಹಂಚಿಕೆ ಕಾರ್ಯ ನಡೆಯುತ್ತಿದೆ. ಮುಂಜಾಗ್ರತೆಯಾಗಿ ಅಧಿಕಾರಿಗಳ ನೇತೃತ್ವದಲ್ಲಿ ಈ ಆಹಾರ ತಯಾರಿಸಲಾಗುತ್ತದೆ. ಬಳಿಕ ಅಧಿಕಾರಿಗಳ ನೇತೃತ್ವದಲ್ಲಿ ನಿರ್ಗತಿಕರ ಬಳಿಗೆ ತೆರಳಿ ಆಹಾರ ಪೂರೈಕೆ ಮಾಡಲಾಗುತ್ತಿದೆ. ವೈದ್ಯ ವಿರೇಶ್ ಮತ್ತು ಅನಿಲ್ ರ ಕಾರ್ಯಕ್ಕೆ ಪಬ್ಲಿಕ್ ಟಿವಿ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

    ನಿನ್ನೆಯಷ್ಟೇ ಉಡುಪಿ ಶಾಸಕ ರಘುಪತಿ ಭಟ್, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರು ಚಾಲೆಂಜ್ ಸ್ವೀಕರಿಸಿ ನಿರ್ಗತಿಕರಿಗೆ ಅನ್ನದಾನ ಮಾಡುತ್ತಿದ್ದಾರೆ.

  • ಹಾಟ್ ಬಟ್ಟೆತೊಟ್ಟಾಗ ಟ್ರೋಲ್ ಮಾಡುವವರಿಗೆ ಸವಾಲ್ ಹಾಕಿದ ಸಮಂತಾ

    ಹಾಟ್ ಬಟ್ಟೆತೊಟ್ಟಾಗ ಟ್ರೋಲ್ ಮಾಡುವವರಿಗೆ ಸವಾಲ್ ಹಾಕಿದ ಸಮಂತಾ

    ಬೆಂಗಳೂರು: ನಟಿಯರು ಹಾಟ್ ಬಟ್ಟೆ ಧರಿಸಿದಾಗ ಟ್ರೋಲ್ ಮಾಡುವವರಿಗೆ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸವಾಲ್ ಹಾಕಿದ್ದಾರೆ.

    ತಾವು ತೊಡುವ ಬಟ್ಟೆಯಿಂದಾಗಿ ಸಮಂತಾ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ವಿದೇಶಕ್ಕೆ ತೆರಳಿದ್ದ ಅವರು ಬಿಕಿನಿ ಧರಿಸಿ ಸುದ್ದಿಯಾಗಿದ್ದರು. ಜೊತೆಗೆ ಕೆಲ ಟ್ರೋಲ್ ಪೇಜ್‍ಗಳು ಹಾಗೂ ಅಭಿಮಾನಿಗಳು ಕೂಡ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ನೀವು ರೀತಿ ಬಟ್ಟೆ ಧರಿಸಬಾರದು ಎಂದು ಟ್ರೋಲ್ ಮಾಡಿದ್ದರು.

    ಅಂದು ಬಿಕಿನಿ ಹಾಕಿಕೊಂಡಿದ್ದಕ್ಕೆ ಟ್ರೋಲ್ ಮಾಡಿದವರ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದ ಸಮಂತಾ, ಮಧ್ಯದ ಬೆರಳಿನ ಫೋಟೋ ಹಾಕಿ ಟ್ರೋಲ್‍ಗಳಿಗೆ ಚಮಕ್ ನೀಡಿದ್ದರು. ಈಗ ಮತ್ತೆ ಹಾಟ್ ಆಗಿ ಕಾಣಿಸಿಕೊಂಡಿರುವ ಸಮಂತಾ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ನಾನು ಟ್ರೋಲ್‍ಗಳಿಗೆ ಭಯಪಡುವುದಿಲ್ಲ ಎಂದು ಸವಾಲ್ ಹಾಕಿದ್ದಾರೆ.

    https://www.instagram.com/p/Be7eVsgnUl-/

    ಈಗ ಸಂದರ್ಶನವೊಂದರಲ್ಲಿ ಟ್ರೋಲ್ ವಿಚಾರವಾಗಿ ಮಾತನಾಡಿರುವ ಸಮಂತಾ, ನನಗೆ ಇನ್ನೂ ನೆನಪಿದೆ ನಾನು ಮದುವೆಯಾದ ಮೇಲೆ ಧರಿಸಿದ್ದ ಒಂದು ಡ್ರೆಸ್ ಸಖತ್ ಟ್ರೋಲ್ ಆಗಿತ್ತು. ಈ ಡ್ರೆಸ್‍ನ ಫೋಟೋ ಇಟ್ಟುಕೊಂಡು ಭಯಾಂಕರವಾಗಿ ಟ್ರೋಲ್ ಮಾಡಿದ್ದರು. ಆಗ ನನಗೆ ಬಹಳ ಬೇಜಾರಾಗಿತ್ತು. ಆದರೆ ನಾನು ಮತ್ತೆ ಎರಡನೇ ಬಾರಿ ಅದೇ ಉಡುಪಿನಲ್ಲಿ ಕಾಣಿಸಿಕೊಂಡಾಗ ಅವರು ನನ್ನನ್ನು ಟ್ರೋಲ್ ಮಾಡಲಿಲ್ಲ ಎಂದು ಹೇಳಿದ್ದಾರೆ.

    https://www.instagram.com/p/B7OGZc_BHvd/

    ಮೊದಲು ನನಗೆ ಟ್ರೋಲ್‍ಗಳು ಎಂದರೆ ಭಯವಾಗುತ್ತಿತ್ತು. ಆ ಭಯ ನಾವು ಒಂದು ಹೆಜ್ಜೆ ಇಡುವವರಿಗೆ ಅಮೇಲೆ ಅದು ನಮಗೆ ಅಭ್ಯಾಸವಾಗಿ ಹೋಗುತ್ತದೆ. ಹೀಗೆ ಹೇಳುತ್ತಿದ್ದೇನೆ ಎಂದ ಮಾತ್ರಕ್ಕೆ ನಾನು ಅಷ್ಟೊಂದು ಧೈರ್ಯಶಾಲಿಯಲ್ಲ. ಕೆಲವು ಬದಲಾಗಬೇಕು. ಆ ಬದಲಾವಣೆ ಸಮಾಜದಲ್ಲಿ ಬರಲು ಏನೂ ಮಾಡಬೇಕು ಅದನ್ನು ನಾನು ಮಾಡುತ್ತೇನೆ ಎಂದು ಸಮಂತಾ ಟ್ರೋಲ್‍ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    https://www.instagram.com/p/B7OHwP3hh1i/

    ಇತ್ತೀಚಿಗೆ ಫ್ಲಾಪ್ ನಟಿ ಎಂದು ಕರೆದವರ ವಿರುದ್ಧ ಕಿಡಿಕಾರಿದ್ದ ಸಮಂತಾ, ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲು ಫ್ಲಾಪ್ ಆದರೂ ಅವರನ್ನು ಒಪ್ಪುತ್ತಾರೆ. ಆದರೆ ನಟಿಯರು ಕಷ್ಟಪಟ್ಟು ಸಿನಿಮಾ ಮಾಡಿದರೂ ಯಾರೂ ಅವರನ್ನು ಹೊಗಳುವುದಿಲ್ಲ. ಸಿನಿಮಾ ಫ್ಲಾಪ್ ಆದರೆ ಆ ಚಿತ್ರದ ನಟಿಯರೇ ಕಾರಣ ಎಂದು ಹೇಳುತ್ತಾರೆ. ನಟಿಯರ ಒಂದು ಸಿನಿಮಾ ಸೋತರು ಫ್ಲಾಪ್ ಎಂದು ಕರೆಯುತ್ತಾರೆ ಎಂದು ಗರಂ ಆಗಿದ್ದರು.

  • ಮೊದಲು ವಿಪಕ್ಷ ನಾಯಕರೆಂದು ಘೋಷಣೆ ಮಾಡಿಕೊಳ್ಳಲಿ – ಸಿದ್ದುಗೆ ಶೆಟ್ಟರ್ ಸವಾಲು

    ಮೊದಲು ವಿಪಕ್ಷ ನಾಯಕರೆಂದು ಘೋಷಣೆ ಮಾಡಿಕೊಳ್ಳಲಿ – ಸಿದ್ದುಗೆ ಶೆಟ್ಟರ್ ಸವಾಲು

    ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೊದಲು ಅವರ ಪಕ್ಷದಿಂದ ವಿರೋಧ ಪಕ್ಷದ ನಾಯಕರೆಂದು ಘೋಷಣೆ ಮಾಡಿಸಿಕೊಳ್ಳಲಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಿದ್ದುಗೆ ಸವಾಲು ಎಸೆದಿದ್ದಾರೆ.

    ನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಜಗದೀಶ್ ಶೆಟ್ಟರ್, ಎಸಿಬಿ, ಲೋಕಾಯುಕ್ತದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲದಾಗಿದೆ. ನೈತಿಕತೆಯನ್ನ ಮರೆತು ಸಿದ್ದರಾಮಯ್ಯ ಎಸಿಬಿ ಸ್ಥಾಪನೆ ಮಾಡಿದರು. ಅವರಿಗೆ ನೈತಿಕತೆ ಇದ್ದಿದ್ದರೆ ಅವರು ಸಿಎಂ ಆಗಿದ್ದ ವೇಳೆಯೇ ಎಸಿಬಿ ರದ್ದುಗೊಳಿಸಿ. ಲೋಕಾಯುಕ್ತಕ್ಕೆ ಬಲ ತುಂಬಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಲ್ಲದೇ ಎಸಿಬಿ, ಲೋಕಾಯುಕ್ತದ ಬಗ್ಗೆ ಸಿದ್ದರಾಮಯ್ಯ ಅವರು ಸದನದಲ್ಲಿ ಮಾತನಾಡಲಿ. ಆಗ ಉತ್ತರ ನೀಡುತ್ತೇವೆ. ಮೊದಲು ಸಿದ್ದರಾಮಯ್ಯ ವಿಪಕ್ಷ ನಾಯಕರು ಎಂದು ಘೋಷಣೆ ಮಾಡಿಸಿಕೊಳ್ಳಲಿ ಎಂದು ಲೇವಡಿ ಮಾಡಿದರು. ಅಲ್ಲದೇ ವಿಪಕ್ಷ ನಾಯಕರೆಂದು ಘೋಷಣೆ ಮಾಡಿಸಿಕೊಂಡ ನಂತರ ಅವರು ಬಿಜೆಪಿ, ಸಿಎಂ ಯಡಿಯೂರಪ್ಪ ಮತ್ತು ಪ್ರಧಾನ ಮಂತ್ರಿ ಮೋದಿ ಬಗ್ಗೆ ಮಾತನಾಡಲಿ ಎಂದು ಸವಾಲು ಎಸೆದರು.

  • 2 ಸಾವಿರ ರೂ.ಗಾಗಿ 41 ಮೊಟ್ಟೆ ತಿಂದ ವ್ಯಕ್ತಿ ಸಾವು

    2 ಸಾವಿರ ರೂ.ಗಾಗಿ 41 ಮೊಟ್ಟೆ ತಿಂದ ವ್ಯಕ್ತಿ ಸಾವು

    ಲಕ್ನೋ: ವ್ಯಕ್ತಿಯೊಬ್ಬ 2 ಸಾವಿರ ರೂ. ಹಣಕ್ಕಾಗಿ 41 ಮೊಟ್ಟೆ ತಿಂದು ಮೃತಪಟ್ಟ ಘಟನೆ ಸೋಮವಾರ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ.

    ಸುಭಾಷ್ ಯಾದವ್(42) ಮೃತಪಟ್ಟ ವ್ಯಕ್ತಿ. ಸುಭಾಷ್ ಮೊಟ್ಟೆ ತಿನ್ನಲು ತನ್ನ ಸ್ನೇಹಿತನ ಜೊತೆ ಜೌನ್‌ಪುರದ ಬಿಬಿಗಂಜ್ ಮಾರ್ಕೆಟ್‌ಗೆ ಹೋಗಿದ್ದನು. ಈ ವೇಳೆ ಸುಭಾಷ್ ಹಾಗೂ ಆತನ ಸ್ನೇಹಿತನ ನಡುವೆ ಹಣಕ್ಕಾಗಿ ಜಗಳ ನಡೆದಿದೆ.

    ಸುಭಾಷ್ ಸ್ನೇಹಿತ 50 ಮೊಟ್ಟೆ ತಿಂದರೆ 2 ಸಾವಿರ ರೂ. ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಸುಭಾಷ್ ಕೂಡ ಒಪ್ಪಿಕೊಳ್ಳುತ್ತಾನೆ. ಬಳಿಕ 2 ಸಾವಿರ ರೂ. ಹಣಕ್ಕಾಗಿ 50 ಮೊಟ್ಟೆ ತಿನ್ನುವ ಚಾಲೆಂಜ್ ಸ್ವೀಕರಿಸುತ್ತಾನೆ.

    ಚಾಲೆಂಜ್ ಸ್ವೀಕರಿಸಿ ಸುಭಾಷ್ ಮೊಟ್ಟೆ ತಿನ್ನಲು ಶುರು ಮಾಡುತ್ತಾನೆ. ಮೊದಲು 41 ಮೊಟ್ಟೆ ತಿಂದ ಸುಭಾಷ್ ನಂತರ 42ನೇ ಮೊಟ್ಟೆ ತಿನ್ನಲು ಮುಂದಾದಾಗ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಬಳಿಕ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.

    ಸ್ಥಳೀಯರು ಮೊದಲು ಸುಭಾಷ್‌ನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಬಳಿಕ ಅಲ್ಲಿನ ವೈದ್ಯರು ಆತನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸುವಂತೆ ಹೇಳುತ್ತಾರೆ. ಆಸ್ಪತ್ರೆಗೆ ದಾಖಲಾದ ಒಂದು ಗಂಟೆಯಲ್ಲಿ ಸುಭಾಷ್ ಮೃತಪಟ್ಟಿದ್ದಾನೆ.

    ಸುಭಾಸ್ ಅತಿಯಾಗಿ ಮೊಟ್ಟೆ ಸೇವಿಸಿದ್ದಕ್ಕೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಸುಭಾಷ್ ಕುಟುಂಬದವರು ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಡಿಕೆಶಿ ಚಾಲೆಂಜ್ ಸ್ವೀಕರಿಸಿ ಎಂಟಿಬಿಯಿಂದ ಪ್ರತಿ ಸವಾಲ್

    ಡಿಕೆಶಿ ಚಾಲೆಂಜ್ ಸ್ವೀಕರಿಸಿ ಎಂಟಿಬಿಯಿಂದ ಪ್ರತಿ ಸವಾಲ್

    ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಚಾಲೆಂಜನ್ನು ಸ್ವೀಕರಿಸಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಪ್ರತಿ ಸವಾಲು ಒಡ್ಡಿದ್ದಾರೆ.

    ನಿನ್ನೆ ತಡರಾತ್ರಿ ಪುಣೆಯಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಎಂಟಿಬಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಇನ್ನೂ ಏನೂ ಮಾತಾಡಿಲ್ಲ. ನಾಳೆಯಿಂದ(ಸೋಮವಾರ) ಆ ವಿಚಾರದ ಬಗ್ಗೆ ಚರ್ಚೆ ಮಾಡಬೇಕು. ನಾವು ಕೂಡ ಹೋರಾಟದ ಮೂಲಕವೇ ರಾಜಕೀಯ ಪ್ರವೇಶ ಮಾಡಿದವರಾಗಿದ್ದೇವೆ. ರಣರಂಗಕ್ಕೆ ಬರುವವರು ಬರಲಿ, ಅವರನ್ನು ಸಂತೋಷವಾಗಿ ಅವರನ್ನು ಸ್ವೀಕಾರ ಮಾಡುವುದಾಗಿ ಪ್ರತಿ ಸವಾಲು ಹಾಕಿದ್ದಾರೆ.

    ಡಿಕೆಶಿ ಸವಾಲೇನು..?
    ದೋಸ್ತಿ ಸರ್ಕಾರ ಪತನಕ್ಕೂ ಮುನ್ನ ವಿಧಾನಸಭೆಯಲ್ಲಿ ನಡೆದಿದ್ದ ವಿಶ್ವಾಸಮತ ಚರ್ಚೆಯ ವೇಳೆ ಡಿಕೆಶಿ ಅವರು ಎಂಟಿಬಿ ಹೇಳಿಕೆಯನ್ನು ಪ್ರಸ್ತಾಪಿಸಿದ್ದರು. ನನ್ನ ನಿನ್ನ ಭೇಟಿ ಹೊಸಕೋಟೆಯ ರಾಜಕೀಯ ರಣರಂಗದಲ್ಲಿ ಎಂದು ಎಂಬಿಟಿಬಿ ಹೇಳಿದ್ದಾರೆ. ಇರಲಿ ನಾನು ಅವರನ್ನು ಅಲ್ಲೇ ಭೇಟಿ ಮಾಡುತ್ತೇನೆ ಎಂದು ಹೇಳಿದ್ದರು.

    ಸ್ಪೀಕರ್ ಭಾನುವಾರ ಬೆಳಗ್ಗೆ 11.30ಕ್ಕೆ ತುರ್ತು ಸುದ್ದಿಗೋಷ್ಠಿ ಕರೆಸು 14 ಮಂದಿ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಬೆನ್ನಲ್ಲೇ ಮಧ್ಯರಾತ್ರಿ 12.50ರ ಸುಮಾರಿಗೆ ಕೆಂಪೇಗೌಡ ಏರ್‍ಪೋರ್ಟಿಗೆ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಆಗಮಿಸಿದ್ದಾರೆ. ಮೊದಲು ಬಂದ ನಾಲ್ವರು ಅನರ್ಹರು ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೇ ಹೊರಟಿದ್ದಾರೆ.

    ಸುಮಾರು 15 ನಿಮಿಷಗಳ ಬಳಿಕ ಒಬ್ಬಂಟಿಯಾಗಿ ಬಂದ ಎಂಟಿಬಿ ನಾಗರಾಜ್ ಅವರು, ನಾನು ಪುಣೆಯಿಂದ ಒಬ್ಬನೇ ಬಂದೆ. ನನಗಿಂತ ಮುಂದೆ ನಾಲ್ಕು ಜನ ಹೋದರು. ಇನ್ನುಳಿದವರು ಮುಂಬೈನಲ್ಲಿದ್ದಾರೆ. ಅವರು ಸೋಮವಾರ ದೆಹಲಿಗೆ ಹೋಗಿ ಸುಪ್ರಿಂಕೋರ್ಟಿಗೆ ಅರ್ಜಿ ಹಾಕುತ್ತಾರೆ. ಸ್ಪೀಕರ್ ಅನರ್ಹ ಆದೇಶ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಪ್ರತಿಭಟನೆ ನಡೆಸುತ್ತಿರೋ ಬಿಜೆಪಿಗೆ ಸಿಎಂ ಸವಾಲು

    ಪ್ರತಿಭಟನೆ ನಡೆಸುತ್ತಿರೋ ಬಿಜೆಪಿಗೆ ಸಿಎಂ ಸವಾಲು

    ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿರುವ ಅಹೋರಾತ್ರಿ ಧರಣಿ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇಂದು ಸಿಎಂ ಗೃಹ ಕಚೇರಿ ಕೃಷ್ಣಾ ಮೇಲೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

    ಸಿಎಂ ಟ್ವೀಟ್ ಮಾಡುವ ಮೂಲಕ ಪ್ರತಿಭಟನೆಗೆ ಉತ್ತರಿಸಿದ್ದಾರೆ. “ಬಿಜೆಪಿ ನಾಯಕರ ‘ಅಹೋರಾತ್ರಿ’ ಪ್ರತಿಭಟನೆಯನ್ನು ಗಮನಿಸಿದ್ದೇನೆ. ಸಿಎಂ ಕಚೇರಿಗೆ ಮುತ್ತಿಗೆಯ ಅವಶ್ಯಕತೆಯಿಲ್ಲ. ಜಿಂದಾಲ್, ಬರ, ರೈತರ ಸಾಲಮನ್ನಾ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಪ್ರಧಾನಿ ಸೇರಿದಂತೆ ಕೇಂದ್ರದ ಸಚಿವರೊಂದಿಗೆ ಹಲವು ಸಮಸ್ಯೆ ಕುರಿತು ಚರ್ಚಿಸಿದ್ದೇನೆ. ನಿಮ್ಮ ಸಮಯ ತಿಳಿಸಿ ಚರ್ಚೆಗೆ ನಾನು ಸಿದ್ಧ” ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

    ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿರುವ ಅಹೋರಾತ್ರಿ ಧರಣಿ ಇವತ್ತು ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಹೋರಾತ್ರಿ ಧರಣಿಯ ಕೊನೆಯ ದಿನವಾದ ಇಂದು ಬಿಜೆಪಿ ನಾಯಕರು ಸಿಎಂ ಗೃಹ ಕಚೇರಿ ಕೃಷ್ಣಾ ಮೇಲೆ ಮುತ್ತಿಗೆ ಹಾಕುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ. ಜಿಂದಾಲ್ ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ಜಮೀನು ಹಸ್ತಾಂತರಿಸುವ ನಿರ್ಧಾರ ವಾಪಸ್ ಪಡೆಯದ ಕಾರಣ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

    ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೃಷ್ಣಾ ಮುತ್ತಿಗೆ ಕಾರ್ಯಕ್ರಮ ನಡೆಯಲಿದೆ. ಕೃಷ್ಣಾ ಮುತ್ತಿಗೆ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು, ಭಾಗವಹಿಸಲಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದಾರೆ.

  • Any Time, Any Where..I am Ready: ನಿಖಿಲ್ ಸವಾಲು ಸ್ವೀಕರಿಸಿದ ಸುಮಲತಾ

    Any Time, Any Where..I am Ready: ನಿಖಿಲ್ ಸವಾಲು ಸ್ವೀಕರಿಸಿದ ಸುಮಲತಾ

    ಮಂಡ್ಯ: ಬಹಿರಂಗ ಸಭೆಗೆ ಬನ್ನಿ ಮಾತನಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಹಾಕಿದ್ದ ಸವಾಲನ್ನು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸ್ವೀಕರಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಮಲತಾ ಅವರು, ಅಂಬರೀಶ್ ಮತ್ತು ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ. ಎಲ್ಲಿಬೇಕಾದರೂ, ಯಾವ ವೇದಿಕೆಯಲ್ಲಾದರೂ ಚರ್ಚೆ ಮಾಡಿ. ಜನರ ಸಮಸ್ಯೆಯನ್ನು ಕೇಳಿ ಅದರ ಬಗ್ಗೆ ಮತನಾಡಿ ಎಂದು ನಾನೇ ಹೇಳಿದ್ದೆ ಎಂದರು. ಇದೇ ವೇಳೆ ಅಭಿವೃದ್ಧಿ ಬಗ್ಗೆ ನಿಖಿಲ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲನ್ನು ಸುಮಲತಾ ಸ್ವೀಕರಿಸಿದ್ದಾರೆ.

    ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು, ಸುಮ್ಮನೆ ಒಬ್ಬೊಬ್ಬರ ಕಾಲೆಳೆದುಕೊಂಡು ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡೋಣ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದರು. ಇದಕ್ಕೆ Any time, any where..I am ready ಎನ್ನುವ ಮೂಲಕ ನಿಖಿಲ್ ಸವಾಲು ಸ್ವೀಕರಿಸಿದ್ದಾರೆ.

    ನ್ಯಾಯಯುತ ಚುನವಾಣೆ ನಡೆಯಬೇಕು ಎಂದರೆ ಡಿಸಿ ವರ್ಗಾವಣೆ ಆಗಬೇಕು ಎಂದು ಮಂಡ್ಯ ಡಿಸಿ ಬಗ್ಗೆ ಮೊದಲೇ ದೂರು ನೀಡಿದ್ದೇವು. ಇದೀಗ ನ್ಯಾಯ ಸಿಕ್ಕಿದೆ. ಈಗ ಸಮಾಧಾನವಾಗಿದೆ ಎಂದು ಡಿಸಿ ವರ್ಗಾವಣೆ ಬಗ್ಗೆ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳು 90% ಕನ್ಫರ್ಮ್ ಇಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಎನ್ನುವುದಕ್ಕಿಂತ ಕಾಂಗ್ರೆಸ್, ರಾಜ್ಯ ರೈತ ಸಂಘದ ಜನರು ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ನನ್ನ ಬೆಂಬಲಕ್ಕೆ ಇದ್ದಾರೆ. ಅಂಬರೀಶ್ ಅವರು ಪಕ್ಷತೀತವಾಗಿ ಇದ್ದರು. ಹೀಗಾಗಿ ನಾನು ಬಿಜೆಪಿ ಅಭ್ಯರ್ಥಿಯಲ್ಲ. ಬಿಜೆಪಿಗೆ ಸೇರೋದು ಇಲ್ಲ ಎಂದು ಸುಮಲತಾ ಅವರು ಸ್ಪಷ್ಟಪಡಿಸಿದರು.

  • ತಾಕತ್ತಿದ್ದರೆ ನನ್ನ ಜೊತೆ ಸಂಸ್ಕೃತ ಶ್ಲೋಕ ಪಠಣೆ ಮಾಡಿ: ಮೋದಿ, ಶಾಗೆ ದೀದಿ ಸವಾಲ್

    ತಾಕತ್ತಿದ್ದರೆ ನನ್ನ ಜೊತೆ ಸಂಸ್ಕೃತ ಶ್ಲೋಕ ಪಠಣೆ ಮಾಡಿ: ಮೋದಿ, ಶಾಗೆ ದೀದಿ ಸವಾಲ್

    ಕೋಲ್ಕತ್ತಾ: ತಾಕತ್ತಿದ್ದರೆ ನನ್ನ ಜತೆಗೆ ಸಂಸ್ಕೃತ ಶ್ಲೋಕಗಳನ್ನು ಪಠಣ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಡಕ್ ಸವಾಲು ಹಾಕಿದ್ದಾರೆ.

    ಅಂತಾರಾಷ್ಟ್ರೀಯ ಮಾರ್ವಾಡಿ ಫೆಡರೇಶನ್ ಆಯೋಜಿಸಿದ್ದ ಹೋಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ, ನಾವು ಹಲವಾರು ವರ್ಷಗಳಿಂದ ದುರ್ಗಾಪೂಜೆ ಮಾಡುತ್ತಿದ್ದೇವೆ. ನವರಾತ್ರಿ, ಛತ್ ಪೂಜಾ ಮತ್ತು ಗಣಪತಿ ವಂದನಾದಂತಹ ಧಾರ್ಮಿಕ ಆಚರಣೆಗಳನ್ನು ನಾವು ಎತ್ತಿ ಹಿಡಿದಿದ್ದೇವೆ. ಆದ್ರೆ ದಿಲ್ಲಿಯಲ್ಲಿ ಕುಳಿತ ಕೆಲವರು ನಮ್ಮತ್ತ ಕೈ ತೋರಿಸುತ್ತಿದ್ದಾರೆ. ರಾಜ್ಯದಲ್ಲಿ ಪೂಜೆ ಮಾಡುವುದು ಅಪರಾಧವೆನ್ನುವ ಪರಿಸ್ಥಿತಿ ಬಂದಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ದುರ್ಗಾ ಮೂರ್ತಿಗಳ ವಿಸರ್ಜನೆ ಹಾಗೂ ಶಾಲೆಗಳಲ್ಲಿ ಸರಸ್ವತಿ ಪೂಜೆಗೆ ತೃಣಮೂಲ ಕಾಂಗ್ರೆಸ್ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಬಿಜೆಪಿ ಆರೋಪಿಸಿತ್ತು. ಆದರಿಂದ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕರಿಗೆ ಈ ಸವಾಲು ಹಾಕಿದ್ದಾರೆ. ಬರೀ ಹಣೆಯ ಮೇಲೆ ತಿಲಕ ಇಡುವುದೇ ಧಾರ್ಮಿಕ ಶೃದ್ಧೆಯ ಸಂಕೇತವಲ್ಲ. ನನ್ನ ಜೊತೆ ಸಂಸ್ಕೃತ ಶ್ಲೋಕಗಳ ಪಠಣದ ಸ್ಪರ್ಧೆಗೆ ಬನ್ನಿ ಎಂದು ನಾನು ಅಮಿತ್‍ಬಾಬು ಮತ್ತು ನರೇಂದ್ರಬಾಬು ಅವರಿಗೆ ಆಹ್ವಾನ ನೀಡುತ್ತಿದ್ದೇನೆ. ಸಂಸ್ಕೃತ ಶ್ಲೋಕಗಳ ಬಗ್ಗೆ ಯಾರಿಗೆ ಆಳವಾದ ಜ್ಞಾನವಿದೆ ಅಂತ ನೋಡೇ ಬಿಡೋಣ ಎಂದು ದೀದಿ ಸವಾಲು ಎಸೆದಿದ್ದಾರೆ.

    ನಮ್ಮ ಆಡಳಿತದಲ್ಲಿ ಸರ್ಕಾರಿ ದೇವಾಲಯಗಳು ನವೀಕರಣವಾಗಿದೆ. ದಕ್ಷೀಣೇಶ್ವರದಲ್ಲಿ ಸ್ಕೈವಾಕ್ ನಿರ್ಮಾಣವಾಗಿದೆ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಎಷ್ಟು ದೇವಾಲಯಗಳು ನಿರ್ಮಾಣವಾಗಿದೆ? ಅವರಿಗೆ ಇಂದು ರಾಮ ಮಂದಿರವನ್ನು ಕಟ್ಟಿಸಲು ಆಗಲಿಲ್ಲ. ಕೇವಲ ಚುನಾವಣಾ ಭರವಸೆಗಳನ್ನು ಮಾತ್ರ ನೀಡುತ್ತಾರೆ ಎಂದರು.

    ಇತ್ತಿಚಿಗೆ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಅವರು ತಮ್ಮ ನಾಯಕರನ್ನು ಪ್ರೀತಿಸುವ ಬದಲು, ಅವರನ್ನು ನೋಡಿ ಹೆದರುತ್ತಿದ್ದಾರೆ. ಕೇಂದ್ರೀಯ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿ ಅಧಿಕಾರಿಗಳು ರೇಡ್ ಮಾಡುತ್ತಿದ್ದಾರೆ. ಇದರಿಂದ ಉದ್ಯಮಿಗಳು ಹೆದರುತ್ತಿದ್ದಾರೆ. ಕೆಲವು ನಾಯಕರು ತಾವು ಕೊಟ್ಟ ಭರವಸೆಯನ್ನು ಉಳಿಕೊಳ್ಳಲಿಲ್ಲ. ಆದರೇ ನಾವು ನಮ್ಮ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.

  • ಮುತ್ತು ಕೊಡುವ ಚಾಲೆಂಜ್ ಮಾಡಿ ಪೊಲೀಸರ ಅತಿಥಿಯಾದ ಯುವಕರು

    ಮುತ್ತು ಕೊಡುವ ಚಾಲೆಂಜ್ ಮಾಡಿ ಪೊಲೀಸರ ಅತಿಥಿಯಾದ ಯುವಕರು

    ಮಂಡ್ಯ: ಮುತ್ತು ಕೊಡುವ ಚಾಲೆಂಜ್ ಮಾಡಿ ಯುವಕರು ಪೊಲೀಸರ ಅತಿಥಿಯಾಗಿರುವ ಘಟನೆ ಬುಧವಾರ ಸಂಜೆ ಮಂಡ್ಯದ ಗ್ರಾಮವೊಂದರಲ್ಲಿ ನಡೆದಿದೆ.

    ಪ್ರಮೋದ್(22) ಮತ್ತು ವೆಂಕಟೇಶ್(24) ಮುತ್ತು ನೀಡಲು ಮುಂದಾದ ಯುವಕರು. ಪ್ರಮೋದ್ ಹಾಗೂ ವೆಂಕಟೇಶ್ ನಡುವೆ ಗ್ರಾಮದ 10 ವರ್ಷದ ಬಾಲಕಿಗೆ ಮುತ್ತು ಕೊಡುವ ಚಾಲೆಂಜ್ ನಡೆದಿತ್ತು. ಅಲ್ಲದೇ ಬಾಲಕಿ ಶಾಲೆ ಮುಗಿಸಿಕೊಂಡು ಬರುತ್ತಿದ್ದ ವೇಳೆ ಯುವಕರು ಆಕೆಗೆ ಮುತ್ತು ನೀಡಲು ಮುಂದಾಗಿದ್ದಾರೆ.

    ಯುವಕರು ಮುತ್ತು ನೀಡಲು ಬಂದಾಗ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಬಾಲಕಿಯ ಚೀರಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪ್ರಮೋದ್ ಸ್ಥಳದಿಂದ ಪರಾರಿ ಆಗಿದ್ದು, ವೆಂಕಟೇಶ್‍ನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

    ಈ ಬಗ್ಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv