Tag: Chakli

  • ಸುಲಭವಾಗಿ ಮಾಡಬಹುದು ಗರಿಗರಿಯಾದ ಚಕ್ಕುಲಿ

    ಸುಲಭವಾಗಿ ಮಾಡಬಹುದು ಗರಿಗರಿಯಾದ ಚಕ್ಕುಲಿ

    ಣೇಶ ಚತುರ್ಥಿಗೆ ವಿವಿಧ ರೀತಿಯ ತಿಂಡಿಗಳನ್ನು ಮನೆಯಲ್ಲಿ ಮಾಡಬೇಕಾಗುತ್ತದೆ. ಈ ಸಂದರ್ಭ ಸುಲಭವಾಗಿ ಹಾಗೂ ಆದಷ್ಟು ಬೇಗನೆ ಮಾಡುವಂತಹ ತಿಂಡಿಗಳ ಆಯ್ಕೆ ಹೊಳೆಯುದೇ ವಿರಳ. ಎಲ್ಲವನ್ನೂ ಬೇಕರಿಯಿಂದಲೇ ತಂದರೆ ಅದು ಹಬ್ಬ ಹೇಗೆ? ಕೇವಲ ಅರ್ಧ ಗಂಟೆಯಲ್ಲಿ ಮಾಡಬಹುದಾದ ಗರಿಗರಿಯಾದ ಚಕ್ಕುಲಿಯನ್ನು ನೀವು ಕೂಡಾ ಮನೆಯಲ್ಲಿಯೇ ತಯಾರಿಸಿ. ಹಬ್ಬವನ್ನು ಹೋಮ್ ಮೇಡ್ ಅಡುಗೆಯಿಂದಲೇ ಆಚರಿಸಿ.

    ಬೇಕಾಗುವ ಪದಾರ್ಥಗಳು:
    ಅಕ್ಕಿ ಹಿಟ್ಟು – 2 ಕಪ್
    ಮೈದಾ – 1 ಕಪ್
    ಉಪ್ಪು – 1 ಟೀಸ್ಪೂನ್
    ಬೆಣ್ಣೆ – 2 ಟೀಸ್ಪೂನ್
    ಅರಿಶಿನ – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಎಳ್ಳು – 2 ಟೀಸ್ಪೂನ್
    ಇಂಗು – 1 ಚಿಟಕೆ
    ಉಪ್ಪು – 1 ಟೀಸ್ಪೂನ್
    ನೀರು – ಬೆರೆಸಲು
    ಎಣ್ಣೆ – ಹುರಿಯಲು ಇದನ್ನೂ ಓದಿ: ಎಷ್ಟೊಂದು ರುಚಿಕರ ಕಡಲೆ ಹಿಟ್ಟಿನ ಲಡ್ಡು – ನೀವೂ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಹಿಟ್ಟು, ಮೈದಾ ಮತ್ತು ಉಪ್ಪು ಹಾಕಿ ಕಲಸಿ.
    * ಬಳಿಕ ಅರಿಶಿನ, ಕೆಂಪು ಮೆಣಸಿನ ಪುಡಿ, ಎಳ್ಳು ಹಾಗೂ ಚಿಟಿಕೆ ಇಂಗನ್ನು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಬೆಣ್ಣೆಯನ್ನು ಸೇರಿಸಿ, ಹಿಟ್ಟು ಬೆಣ್ಣೆಯೊಂದಿಗೆ ಚೆನ್ನಾಗಿ ಸಂಯೋಜಿಸುವವರೆಗೆ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಮೃದು ಹಾಗೂ ನಯವಾದ ಹಿಟ್ಟನ್ನಾಗಿ ಮಾಡಿಕೊಳ್ಳಿ.
    * ಈಗ ಚಕ್ಕುಲಿ ತಯಾರಿಸಲು ಸ್ಟಾರ್ ಮೌಲ್ಡ್ ತೆಗೆದುಕೊಳ್ಳಿ. ಚಕ್ಕುಲಿ ಮೇಕರ್ ಒಳ ಭಾಗದಲ್ಲಿ ಸ್ವಲ್ಪ ಎಣ್ಣೆ ಸವರಿ.
    * ಈಗ ಹಿಟ್ಟನ್ನು ಸಿಲಿಂಡರ್ ಆಕಾರದಲ್ಲಿ ಕಟ್ಟಿ, ಚಕ್ಕುಲಿ ಮೇಕರ್ ಒಳಗೆ ಹಾಕಿ. ಒದ್ದೆ ಬಟ್ಟೆ ಅಥವಾ ಬಟರ್ ಶೀಟ್ ಮೇಲೆ ಸುರುಳಿಯಾಕಾರದಲ್ಲಿ ಹಿಟ್ಟನ್ನು ಒತ್ತಿ, ಚಕ್ಕುಲಿ ತಯಾರಿಸಿ.
    * ಈಗ ಒಂದೊಂದೇ ಚಕ್ಕುಲಿಯನ್ನು ಕಾದ ಎಣ್ಣೆಯಲ್ಲಿ ಹಾಕಿ, ಎರಡೂ ಬದಿಯಲ್ಲಿ ಗರಿಗರಿಯಾಗಿ ಹುರಿಯಿರಿ.
    * ಚಕ್ಕುಲಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುತ್ತಿದ್ದಂತೆ ಅವುಗಳನ್ನು ಎಣ್ಣೆಯಿಂದ ತೆಗೆದು, ಟಿಶ್ಯು ಪೇಪರ್‌ಮೇಲೆ ಹಾಕಿ.
    * ಗರಿಗರಿಯಾದ ಚಕ್ಕುಲಿ ಈಗ ತಯಾರಾಗಿದ್ದು, ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿಡಿ. 2 ವಾರಗಳ ವರೆಗೆ ಚಕ್ಕುಲಿಯನ್ನು ಬೇಕೆಂದಾಗ ಸವಿಯಬಹುದು. ಇದನ್ನೂ ಓದಿ: ಈರುಳ್ಳಿ ಚಟ್ನಿ ಮಾಡೋದು ಹೇಗೆ ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ಶಿರಸಿಯಲ್ಲಿ ಸಹಬಾಳ್ವೆ ಸಾರುವ ಕೈ ಚಕ್ಕುಲಿ ಕಂಬಳ

    ಶಿರಸಿಯಲ್ಲಿ ಸಹಬಾಳ್ವೆ ಸಾರುವ ಕೈ ಚಕ್ಕುಲಿ ಕಂಬಳ

    ಕಾರವಾರ: ಗಣೇಶ ಚತುರ್ಥಿ ಬಂತು ಎಂದರೇ ಬಹುತೇಕ ಹಳ್ಳಿಗಳಲ್ಲಿ ಹಬ್ಬಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತವೆ. ಶಿರಸಿಯಲ್ಲಿ ಸಹಬಾಳ್ವೆ ಸಾರುವ ಕೈ ಚಕ್ಕುಲಿ ಕಂಬಳವನ್ನು ಮಾಡಲಾಗುತ್ತಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹಲವು ಗ್ರಾಮದಲ್ಲಿ ಊರಿನವರೆಲ್ಲಾ ಒಟ್ಟಿಗೆ ಸೇರಿ ಕೈ ನಿಂದ ಹೊಸೆದು ಮಾಡುವ ಚಕ್ಕುಲಿ ಕಂಬಳ ನಡೆಸುವ ಮೂಲಕ ಗ್ರಾಮದಲ್ಲಿ ತಮ್ಮ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತಾರೆ. ಇದನ್ನೂ ಓದಿ: ಆರ್ಚರಿ ಕಂಚಿನ ಪದಕ ಗೆದ್ದ ಹರ್ವಿಂದರ್ ಸಿಂಗ್

    ಕೈ ಚಕ್ಕುಲಿ ಕಂಬಳ ವಿಶೇಷ ಏನು?
    ಶಿರಸಿ ತಾಲೂಕಿನ ಕಲ್ಮನೆ, ಹೆಗಡೆಕಟ್ಟಾ, ಹೆಗ್ಗಾರ ಭಾಗದಲ್ಲಿ ಪ್ರತಿ ವರ್ಷ ಬರಿಗೈ ನಿಂದ ಹೊಸೆದು ಮಾಡುವ ಚಕ್ಕುಲಿ ಸಿದ್ದಪಡಿಸಲಾಗುತ್ತದೆ. ಶನಿವಾರದಿಂದ ಚಕ್ಕುಲಿ ಕಂಬಳಕ್ಕೆ ಚಾಲನೆ ನೀಡಲಾಗಿದೆ. ವಾರವಿಡಿ ದಿನದಲ್ಲಿ ಒಂದು ಬಾರಿಯಂತೆ ಒಂದಲ್ಲಾ ಒಂದು ಮನೆಯಲ್ಲಿ ಈ ಕೈ ಚಕ್ಕಲಿ ಕಂಬಳ ಮಾಡಲಾಗುತ್ತದೆ. ಇದಾಕ್ಕಾಗಿ ನಿಗದಿ ಮಾಡಿದ ಮನೆಗೆ ಗ್ರಾಮದ ಜನರು ಹೋಗಿ ಬರಿಗೈನಲ್ಲಿ ಚಕ್ಕುಲಿ ಹೊಸೆದು ಮಾಡಲಾಗುತ್ತದೆ.

    ಮಹಿಳೆಯರು, ಪುರುಷರೆನ್ನದೇ ಎಲ್ಲರೂ ಒಗ್ಗಟ್ಟಾಗಿ ಸೇರಿ ಚಕ್ಕುಲಿ ತೆಯಾರಿಸುತ್ತಾರೆ. ಈ ಸಂದರ್ಭದಲ್ಲಿ ಒಟ್ಟಿಗೆ ಸೇರಿ ಹಾಡುಗಳು, ಕೃಷಿ ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಈ ಮೂಲಕ ಒಬ್ಬರಿಗೊಬ್ಬರು ತಮ್ಮಲ್ಲಿರುವ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಗಮ-ಗಮ ಚಕ್ಕುಲಿ ಸಿದ್ಧವಾದ ನಂತರ ಎಲ್ಲರೂ ಸವಿದು ಚಹ, ಕಾಫಿಗಳನ್ನು ಕುಡಿದು ವೀಳ್ಯದೆಲೆ ಅಡಿಕೆ ಅಗೆದು ನಾಲಿಗೆ, ತುಟಿ ಕೆಂಪಾಗಿಸಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ. ಈ ಮೂಲಕ ಊರಿನಲ್ಲಿ ತಮ್ಮ ತಮ್ಮ ಬಾಂದವ್ಯವನ್ನು ಪ್ರತಿ ವರ್ಷ ಗಣೇಶ ಚತುರ್ಥಿಗೂ ಮೊದಲು ವೃದ್ಧಿಸಿಕೊಳ್ಳುವ ಈ ಗ್ರಾಮದವರು ತಲೆ ತಲಾಂತರದಿಂದ ಈ ಕಂಬಳವನ್ನು ಜೀವಂತವಾಗಿಸಿಕೊಂಡು ಬಂದಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಮತ್ತೊಂದು ಪ್ರಕರಣ – ಕಾಲೇಜು ವಿದ್ಯಾರ್ಥಿನಿ ಮೇಲೆ ಹಲ್ಲೆ, ಅತ್ಯಾಚಾರ ಯತ್ನ

    ಕೈ ಚಕ್ಕುಲಿ ಮಹತ್ವ ಏನು?
    ಚಕ್ಕುಲಿಯನ್ನು ಬರಿಗೈ ನಿಂದ ಹೊಸೆದು ಸುತ್ತಿ ತೆಯಾರಿಸುವ ಚಕ್ಕುಲಿಯೇ ಕೈಚಕ್ಕುಲಿ. ಆದರೆ ಇಂದಿನ ದಿನಗಳಲ್ಲಿ ಹಿಟ್ಟನ್ನು ಚಕ್ಕುಲಿ ಹುಟ್ಟಿನಲ್ಲಿ ಹಾಕಿ ಒತ್ತಿ ಚಕ್ಕುಲಿ ಮಾಡುತ್ತಾರೆ. ಈ ಚಕ್ಕುಲಿ ಕೈನಿಂದ ಹೊಸೆದು ಮಾಡುತ್ತಾರೆ. ಹೀಗಾಗಿ ಬಾಳಿಕೆ ರುಚಿಯಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ.

    ಗಣೇಶ ಚತುರ್ಥಿ ಮುಗಿಯುವವರೆಗೂ ಈ ಚಕ್ಕುಲಿ ಕಂಬಳ ಈ ಭಾಗದಲ್ಲಿ ನಡೆಯುವುದು ವಿಶೇಷವಾಗಿದೆ. ಕೆಜಿಗಟ್ಟಲೇ ಗ್ರಾಮದವರೆಲ್ಲಾ ಸೇರಿ ಮಾಡುವ ಚಕ್ಕುಲಿಯನ್ನು ನೆಂಟರಿಷ್ಟರು ಹಾಗೂ ಪರಿಚಿತ ಸೇಹಿತರಿಗೂ ನೀಡಿ ಸಹಬಾಳ್ಳೆಯ ಮಹತ್ವವನ್ನು ಈ ಗ್ರಾಮದ ಜನ ಕೈ ಚಕ್ಕುಲಿ ಕಂಬಳದ ಮೂಲಕ ಸಾರುವ ಮೂಲಕ ಮಾದರಿ ಯಾಗಿದ್ದಾರೆ.

  • ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ 1.20ಲಕ್ಷ ಉಂಡೆ, ಚಕ್ಕುಲಿ ಸಿದ್ಧ

    ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ 1.20ಲಕ್ಷ ಉಂಡೆ, ಚಕ್ಕುಲಿ ಸಿದ್ಧ

    ಉಡುಪಿ: ಕಡೆಗೋಲು ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಆಚರಣೆಗೆ 1.20ಲಕ್ಷ ಉಂಡೆ, ಚಕ್ಕುಲಿ ಸಿದ್ಧಮಾಡಲಾಗಿದೆ. 2ದಿನ ಸರಳವಾಗಿ ಆಚರಣೆ ನಡೆಯಲಿದೆ.

    ಉಡುಪಿಯಲ್ಲಿ ಅಷ್ಟಮಿ ಆಚರಣೆಗೆ ಕೊರೊನಾ ಈ ಬಾರಿ ಅಡ್ಡಗಾಲು ಹಾಕಿದೆ. ಅಗಸ್ಟ್ 30 ಮತ್ತು 31 ಕ್ಕೆ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮಗಳು ನಡೆಯಲಿದೆ. ಅಗಸ್ಟ್ 30 ಬೆಳಗ್ಗೆಯಿಂದಲೇ ಶ್ರೀಕೃಷ್ಣ ಭಕ್ತರು ಉಪವಾಸ ಇರುತ್ತಾರೆ. ಅಂದು ರಾತ್ರಿ 12. 17ಕ್ಕೆ ಸರಿಯಾಗಿ ಶ್ರೀಕೃಷ್ಣನಿಗೆ ಅಘ್ರ್ಯ ಪ್ರದಾನವಾಗಲಿದೆ. ಆ ನಂತರ ಲೀಲೋತ್ಸವ ಚಟುವಟಿಕರ ಆರಂಭ ಆಗುತ್ತವೆ. ಇದನ್ನೂ ಓದಿ:  ಪಿ.ವಿ. ಸಿಂಧುಗೆ ಮೆಗಾ ಸ್ಟಾರ್ ಸನ್ಮಾನ

    ಅಗಸ್ಟ್ 31 ರಥಬೀದಿಯಲ್ಲಿ ಶ್ರೀ ಕೃಷ್ಣನ ಲೀಲೋತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದರು, ಆದರೆ ಕೊರೊನಾ ಸಾಂಕ್ರಾಮಿಕ ಇರುವ ಕಾರಣ ಈ ಬಾರಿ ನಿಗದಿತ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಧಾರ್ಮಿಕ ವಿಧಿ-ವಿಧಾನಗಳು ಪ್ರತಿವರ್ಷದಂತೆ ನಡೆಯುತ್ತದೆ ಎಂದು ಪರ್ಯಾಯ ಅದಮಾರು ಮಠ ತಿಳಿಸಿದೆ. ಇದನ್ನೂ ಓದಿ:  ಟಿವಿ, ರೇಡಿಯೋಗಳಲ್ಲಿ ಮಹಿಳೆಯ ಧ್ವನಿ ಬ್ಯಾನ್- ತಾಲಿಬಾನ್ ಆದೇಶ

    ಈ ಬಾರಿ ಕೃಷ್ಣ ಭಕ್ತರಿಗೆ ವಿತರಣೆ ಮಾಡಲು 40 ಸಾವಿರ ಅಕ್ಕಿಯ ಚಕ್ಕುಲಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. 80 ಸಾವಿರ ವಿವಿಧ ಬಗೆಯ ಉಂಡೆಗಳನ್ನು ಮಠದ ಸಿಬ್ಬಂದಿ ರೆಡಿ ಮಾಡಿದ್ದಾರೆ. ರಥಬೀದಿಯಲ್ಲಿ ಗುರ್ಜಿಗಳನ್ನು ಹಾಕಲಾಗಿದೆ. ಗೊಲ್ಲ ವೇಷದಾರಿಗಳು ಮಡಕೆ ಒಡೆಯುವ ಸಂಪ್ರದಾಯವನ್ನು ಮಾಡಲಿದ್ದಾರೆ. ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ರಥಬೀದಿಯಲ್ಲಿ ಉತ್ಸವ ಮಾಡಲಾಗುತ್ತದೆ.

    ಕೃಷ್ಣ ಮಠ ಪರ್ಯಾಯ ಅದಮಾರು ಮಠ ಮತ್ತು ಅಷ್ಟ ಮಠಗಳಿಗೆ ಸಂಬಂಧಪಟ್ಟಂತ ಸ್ವಾಮೀಜಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಭಕ್ತರಿಗೆ ಕೃಷ್ಣ ಲೀಲೋತ್ಸವ ಕಾರ್ಯಕ್ರಮಕ್ಕೆ ರಥಬೀದಿಗೆ ಪ್ರವೇಶ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಸೂಚನೆ ಹೊರಡಿಸಿದೆ. ಜನಜಂಗುಳಿ ಸೇರುವ ಅವಕಾಶ ಇಲ್ಲ ಎಂದು ಪೊಲೀಸ್ ಇಲಾಖೆ ಸೂಚಿಸಿದೆ.

  • ಗಣೇಶ ಚತುರ್ಥಿಯಿಂದ 15 ದಿನಗಳ ಕಾಲ ಚಕ್ಕುಲಿ ತಯಾರಿಸಿ ಕಂಬಳ ಮೂಲಕ ಊರಿಗೆ ಹಂಚಿಕೆ

    ಗಣೇಶ ಚತುರ್ಥಿಯಿಂದ 15 ದಿನಗಳ ಕಾಲ ಚಕ್ಕುಲಿ ತಯಾರಿಸಿ ಕಂಬಳ ಮೂಲಕ ಊರಿಗೆ ಹಂಚಿಕೆ

    ಕಾರವಾರ: ಗಣೇಶ ಚತುರ್ಥಿ ಬಂದರೆ ಹಬ್ಬದ ಊಟದ ಸವಿ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ವಿಶೇಷವಾಗಿರುತ್ತದೆ. ವರ್ಷಕ್ಕೆ ಒಂದು ಬಾರಿ ಮನೆಗೆ ಬರುವ ಗಣೇಶನಿಗಾಗಿ ಪಂಚಗಜ್ಜಾಯ, ಮೋದಕ, ಹೋಳಿಗೆ, ಚಕ್ಕುಲಿ ಮಾಡುವುದು ಸಾಮಾನ್ಯ. ಆದರೆ ಈ ಊರಿನಲ್ಲಿ ಗಣೇಶ ಚತುರ್ಥಿಯಿಂದ 15 ದಿನಗಳ ಕಾಲ ಚಕ್ಕುಲಿಗಳನ್ನು ತಯಾರು ಮಾಡಿ ಕಂಬಳ ಮಾಡುವ ಮೂಲಕ ಇಡೀ ಊರಿಗೆ ಚಕ್ಕುಲಿ ಹಂಚಿ ವಿಶೇಷವಾಗಿ ಆಚರಿಸುತ್ತಾರೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟ ಕಲ್ಮನೆ ಗ್ರಾಮಗಳಲ್ಲಿ ಗಣೇಶ ಚುತುರ್ಥಿಯ ಅಂಗವಾಗಿ ಚಕ್ಕುಲಿ ಕಂಬಳ ಹಬ್ಬವನ್ನು ಆಚರಿಸುತ್ತಾರೆ. ಹಬ್ಬಕ್ಕೆ 15 ದಿನ ಇರುವಾಗ ಊರಿನ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ 50 ಕೆ.ಜಿಯಷ್ಟು ಅಕ್ಕಿಯನ್ನು ಹದಗೊಳಿಸಿ ಹಿಟ್ಟನ್ನು ತಯಾರಿಸಿಕೊಂಡು ಹಬ್ಬದ ದಿನದಿಂದ 20 ದಿನಗಳವರೆಗೆ ಪ್ರತಿ ಮನೆಗೆ ತೆರಳಿ ಚಕ್ಕುಲಿ ತಯಾರಿಸುತ್ತಾರೆ. ಇದಕ್ಕಾಗಿ 15 ಜನರ ತಂಡವೊಂದು ಊರಿನ ಪ್ರತಿಯೊಬ್ಬರ ಮನೆಗೂ ತೆರಳಿ ಅವರ ಮನೆಯಲ್ಲಿ ಚಕ್ಕುಲಿ ತಯಾರಿಸುತ್ತಾರೆ.

    ವಿಶೇಷವಾಗಿ ಗ್ರಾಮದ ಜನರು ಸಾಮೂಹಿಕವಾಗಿ ಕೈಯಿಂದ ಹಿಟ್ಟನ್ನು ಹೊಸೆದು ಚಕ್ಕುಲಿ ತಯಾರಿಸಿ ಸಂಜೆ ವೇಳೆಯಲ್ಲಿ ಇಡೀ ಊರಿನ ಜನರು ಸೇರಿ ಚಕ್ಕುಲಿಯನ್ನು ಸವಿಯುತ್ತಾರೆ. ಇದಲ್ಲದೇ ಪ್ರತಿ ಮನೆಯಲ್ಲಿ 20 ರಿಂದ 50 ಕೆಜಿಗೂ ಹೆಚ್ಚು ಚಕ್ಕುಲಿಯನ್ನು ತಯಾರಿಸಿ ಊರಿನ ಜನರಿಗೆ ಹಾಗೂ ಬಂದ ಅತಿಥಿಗಳಿಗೆ ಹಂಚಿ ಸಂಭ್ರಮಪಡುತ್ತಾರೆ. ಕಾಲ ಬದಲಾದಂತೆ ಮನುಷ್ಯನು ವೈಜ್ಞಾನಿಕತೆಗೆಯ ಉಪಕರಣಗಳಿಗೆ ಅಂಟಿಕೊಂಡರೂ, ಈ ಭಾಗದ ಜನರು ಮಾತ್ರ ಸಂಪ್ರದಾಯಿಕವಾಗಿ ಕೈಯಿಂದಲೆ ಹಿಟ್ಟನ್ನು ಹೊಸೆದು ಚಕ್ಕುಲಿ ತಯಾರಿಸುತ್ತಾರೆ.

    50ಕ್ಕೂ ಹೆಚ್ಚು ಮನೆಯಿರುವ ಈ ಊರಿನಲ್ಲಿ ಗಣೇಶ ಚತುರ್ಥಿ ದಿನದಿಂದ 20 ದಿನಗಳವರೆಗೆ ಪ್ರತಿ ಮನೆಯಲ್ಲಿ ಚಕ್ಕುಲಿ ಕಂಬಳ ನಡಸಲಾಗುತ್ತದೆ. ಎಷ್ಟೇ ವೈರತ್ವವಿದ್ದರೂ ಈ ಊರಿನಲ್ಲಿ ಪ್ರತಿ ಮನೆಗೆ ತೆರಳಿ ಚಕ್ಕುಲಿ ತಯಾರಿಸಿ ತಿಂದು ರುಚಿ ಸವಿಯಲೇ ಬೇಕು. ಇದರಿಂದಾಗಿ ತಮ್ಮ ತಮ್ಮ ನಡುವಿನ ವೈರತ್ವ ಕಮ್ಮಿಯಾಗಿ ಒಗ್ಗಟ್ಟು ಮೂಡುತ್ತದೆ ಎಂಬ ಭಾವನೆ ಈ ಊರಿನವರದ್ದು. ಹೀಗಾಗಿ 50 ವರ್ಷಗಳಿಂದ ಈ ಚಕ್ಕುಲಿ ಕಂಬಳ ಆಚರಿಸಿಕೊಂಡು ಬರುತಿದ್ದು ತಮ್ಮ ಊರಿನವರಲ್ಲದೇ ಹೊರೂರಿನವರನ್ನೂ ಈ ಕಂಬಳಕ್ಕೆ ಆಹ್ವಾನಿಸುತ್ತಾರೆ.

    ಹೊರ ಊರಿನವರಿಗೆ ಹೊಟ್ಟೆ ತುಂಬ ಚಕ್ಕುಲಿ ನೀಡುವ ಜೊತೆಗೆ ಚೀಲದ ತುಂಬಾ ಚಕ್ಕುಲಿ ನೀಡಿ ಅಥಿತ್ಯ ಮಾಡುತ್ತಾರೆ. ನಾವು ನಮ್ಮ ಊರಿನಲ್ಲಿ ಚತುರ್ಥಿಯನ್ನು ಚಕ್ಕುಲಿ ಕಂಬಳ ಮಾಡುವ ಮೂಲಕ ವಿಶೇಷವಾಗಿ ಆಚರಿಸುತ್ತೇವೆ. ಹಿಂದಿನಿಂದಲೂ ಬಂದ ಸಂಪ್ರದಾಯವನ್ನು ಈವರೆಗೂ ರೂಡಿಸಿಕೊಂಡು ಬಂದಿದ್ದೇವೆ ಕೈಯಿಂದ ಹೊಸೆದು ಮಾಡುವುದರಿಂದ ಚಕ್ಕುಲಿ ನಾಲ್ಕು ತಿಂಗಳಿಗೂ ಹೆಚ್ಚುಕಾಲ ಬಾಳಿಕೆ ಬರುತ್ತದೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv