Tag: ChaddyGang

  • ರಾಯಚೂರಿನಲ್ಲಿ ಸರಣಿ ಕಳ್ಳತನ: 21.46 ಲಕ್ಷ ರೂ. ಎಗರಿಸಿದ ಕಳ್ಳರು

    ರಾಯಚೂರಿನಲ್ಲಿ ಸರಣಿ ಕಳ್ಳತನ: 21.46 ಲಕ್ಷ ರೂ. ಎಗರಿಸಿದ ಕಳ್ಳರು

    ರಾಯಚೂರು: ಜಿಲ್ಲೆಯಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಚಡ್ಡಿ ಗ್ಯಾಂಗ್ ಬೆನ್ನಲ್ಲೇ, ಕಳ್ಳರ ತಂಡವೊಂದು ನಗರದಲ್ಲಿ ಸರಣಿ ಕಳ್ಳತನ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ. ಈ ಬಾರಿ ಫ್ಯಾಕ್ಟರಿ, ಮಾರ್ಬಲ್ಸ್ ಅಂಗಡಿ ಸೇರಿದಂತೆ ಶೋ ರೂಮ್‍ಗೆ ನುಗ್ಗಿ 21.46 ಲಕ್ಷ ರೂ. ನಗದು ಎಗರಿಸಿ ಪರಾರಿಯಾಗಿದ್ದಾರೆ.

    ನಗರದ ಹೈದ್ರಾಬಾದ್ ರಸ್ತೆ ಬದಿಯ ಅಂಗಡಿಯಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ. ಕಳ್ಳರ ಕೃತ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳರ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನು ಓದಿ:  ರಾಯಚೂರಿನಲ್ಲಿ ಚಡ್ಡಿ ಗ್ಯಾಂಗ್ ಹಾವಳಿ

    ಎಲ್ಲೆಲ್ಲಿ ಎಷ್ಟು ಹಣ?:
    ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ಜಿನ್ನಿಂಗ್ ಫ್ಯಾಕ್ಟರಿ ಬೀಗ ಒಡೆದು 20 ಲಕ್ಷ ರೂ. ದೋಚಿದ್ದಾರೆ. ಬಳಿಕ ರಂಗನಾಥ್ ಮಾರ್ಬಲ್ಸ್ ಅಂಗಡಿಯಲ್ಲಿ 1.46 ಲಕ್ಷ ರೂ. ಕಳ್ಳತನ ಮಾಡಿದ್ದಾರೆ. ಹೊಂಡಾ ಕಾರ್ ಶೋ ರೂಮ್‍ಗೆ ನುಗ್ಗಿದ್ದ ಕಳ್ಳರಿಗೆ ಹಣ ಸಿಗದೆ ಕಾಲ್ಕಿತ್ತಿದ್ದಾರೆ.

    ಹೊಂಡಾ ಕಾರ್ ರೂಮ್ ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳ ಸೆರೆಯಾಗಿದೆ. ಕಳ್ಳರ ಕೃತ್ಯವು ಬೆಳಗ್ಗೆ ಶೋ ರೂಮ್ ಸಿಬ್ಬಂದಿ ಗಮನಕ್ಕೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಮಾರ್ಕೆಟ್ ಯಾರ್ಡ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಸರಣಿ ಕಳ್ಳತನ ಇನ್ನೂ ಮುಂದುವರಿದಿದೆ. ಈ ಬಾರಿ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಕಡೆಗಳಲ್ಲಿ ಕಳ್ಳರು ಕೈಚಳಕ ತೊರಿಸಿದ್ದಾರೆ. ಕಳ್ಳರ ಹಾವಳಿಯಿಂದಾಗಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/q36iDx35aeY

  • ರಾಯಚೂರಿನಲ್ಲಿ ಚಡ್ಡಿ ಗ್ಯಾಂಗ್ ಹಾವಳಿ

    ರಾಯಚೂರಿನಲ್ಲಿ ಚಡ್ಡಿ ಗ್ಯಾಂಗ್ ಹಾವಳಿ

    ರಾಯಚೂರು: ಜಿಲ್ಲೆಯಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ರಾತ್ರಿಯಾದ್ರೆ ಸಾಕು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಕಳ್ಳರ ಗ್ಯಾಂಗೊಂದು ನಗರದಲ್ಲಿ ಬೀಡು ಬಿಟ್ಟಿದ್ದು, ಪ್ರತಿನಿತ್ಯ ಒಂದಿಲ್ಲೊಂದು ಕಡೆ ಕಳ್ಳತನ ನಡೆಯುತ್ತಿವೆ.

    ಚಡ್ಡಿ ಹಾಕಿಕೊಂಡು ಕೈಯಲ್ಲಿ ಆಯುಧ ಹಿಡಿದು ಓಡಾಡುವ ಈ ಗ್ಯಾಂಗ್ ತುಂಬಾನೇ ಡೆಂಜರಸ್ ಅಂತೆ. ನಗರದ ಒಂಬತ್ತು ರೈಸ್‍ಮಿಲ್, ಅಪಾರ್ಟ್ ಮೆಂಟ್, ಮನೆಗಳು ಸೇರಿದಂತೆ ನಿತ್ಯ ಒಂದಿಲ್ಲೊಂದು ಭಾಗದಲ್ಲಿ ಕಳ್ಳತನ ನಡೆಯುತ್ತಲೇ ಇವೆ.

    ನಗರದ ಕೃಷಿ ವಿವಿ ಬಳಿಯ ಮೈತ್ರಿ ಟವರ್ಸ್ ಅಪಾರ್ಟ್ ಮೆಂಟ್‍ನಲ್ಲಿ ಎರಡು ಮನೆ ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣ ಕದ್ದು ಬರುವ ವೇಳೆ ಕಳ್ಳರ ಮುಖಚರ್ಯೆಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಗ್ಯಾಂಗ್ ರೈಸ್ ಮಿಲ್‍ ಗಳು ಸೇರಿ ಎಲ್ಲೆಡೆಯೂ ಕಾಂಪೌಂಡ್ ಹಾರಿ ಬೀಗ ಮುರಿದು ಒಂದೇ ರೀತಿಯಲ್ಲೇ ಕಳ್ಳತನ ಮಾಡಿದ್ದಾರೆ ಎಂದು ಮನೆ ಮಾಲೀಕರಾದ ಅಶ್ವಿನಿ ಹೇಳಿದ್ದಾರೆ.


    ಮೂರು ವರ್ಷಗಳ ಕೆಳಗೆ ರಾಯಚೂರಿನಲ್ಲಿ ಚಡ್ಡಿ ಗ್ಯಾಂಗ್ ಹಾವಳಿ ಜೋರಾಗಿತ್ತು, ಈಗ ಮತ್ತೆ ಶುರುವಾಗಿದೆ. ಬರಗಾಲವಿದ್ದಾಗಲೆಲ್ಲಾ ಈ ರೀತಿಯ ಕಳ್ಳತನ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಲಿವೆ. ಹರಣಿ ಶಿಕಾರಿ ಅಥವಾ ಪಾರ್ಸಿ ಅಲೆಮಾರಿ ಗ್ಯಾಂಗ್‍ ಗಳು ಈ ರೀತಿಯ ಕಳ್ಳತನಗಳನ್ನ ಮಾಡುತ್ತಾರೆ ಎನ್ನಲಾಗುತ್ತಿದೆ. ಓಡಲು ಸುಲಭವಾಗಬೇಕು ಅಂತ ಚಡ್ಡಿಯನ್ನ ಹಾಕಿಕೊಂಡು ಕಳ್ಳತನ ಮಾಡುತ್ತಾರಂತೆ ಎಂದು ಸ್ಥಳೀಯ ಅಶೋಕ್ ಜೈನ್ ತಿಳಿಸಿದ್ದಾರೆ.

    ಕಳೆದ ಒಂದು ತಿಂಗಳಲ್ಲಿ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ. ನಿಜಕ್ಕೂ ಒಂದೇ ಗ್ಯಾಂಗ್ ರಾಯಚೂರಿನಲ್ಲಿ ಎಲ್ಲಡೆ ಕಳ್ಳತನ ನಡೆಸಿದೆಯಾ? ಇಲ್ಲಾ ಪ್ರತ್ಯೇಕ ಗ್ಯಾಂಗ್‍ ಗಳು ಕಳ್ಳತನ ಮಾಡುತ್ತಿವೆಯಾ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಕಳ್ಳತನ ಮಾಡುವ ರೀತಿ ಮಾತ್ರ ಎಲ್ಲಾ ಪ್ರಕರಣಗಳಲ್ಲೂ ಒಂದೇ ಆಗಿದೆ. ಈಗಲಾದರೂ ಪೊಲೀಸ್ ಇಲಾಖೆ ಕಳ್ಳರ ಬಂಧನಕ್ಕೆ ಮುಂದಾಗಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv