Tag: CET

  • ವೈದ್ಯ, ನರ್ಸ್ ಕಾವಲಿನಲ್ಲಿ ಸಿಇಟಿ ಬರೆದ ಸೋಂಕಿತ ವಿದ್ಯಾರ್ಥಿ

    ವೈದ್ಯ, ನರ್ಸ್ ಕಾವಲಿನಲ್ಲಿ ಸಿಇಟಿ ಬರೆದ ಸೋಂಕಿತ ವಿದ್ಯಾರ್ಥಿ

    ಚಿಕ್ಕಮಗಳೂರು: ವೈದ್ಯ ಹಾಗೂ ನರ್ಸ್ ಕಾವಲಿನ ಮಧ್ಯೆ ಕೊರೊನಾ ಸೋಂಕಿತ ವಿದ್ಯಾರ್ಥಿ ಪ್ರತ್ಯೇಕ ಕೊಠಡಿಯಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ವಿದ್ಯಾರ್ಥಿಗೆ ಬುಧವಾರ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಜಿಲ್ಲಾಡಳಿತ ವಿದ್ಯಾರ್ಥಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತ್ತು. ವಿದ್ಯಾರ್ಥಿಗೆ ಕೊರೊನಾ ಲಕ್ಷಣಗಳು ತೀರಾ ಕಡಿಮೆ ಇದ್ದ ಕಾರಣ ಹೋಮ್ ಐಸೋಲೇಷನ್‍ನಲ್ಲಿ ಚಿಕಿತ್ಸೆಗೆ ಅವಕಾಶ ನೀಡಲಾಗಿತ್ತು. ಇಂದು ಬೆಳಗ್ಗೆ ಅರ್ಧ ಗಂಟೆ ಮುಂಚಿತವಾಗಿ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆ ತರಲಾಗಿದೆ.

    ಮೂಡಿಗೆರೆ ತಾಲೂಕಿನ ಹಳ್ಳಿಯಿಂದ ಪ್ರತ್ಯೇಕ ಅಂಬುಲೆನ್ಸ್ ನಲ್ಲಿ ಓರ್ವ ನರ್ಸ್ ಜೊತೆ ಚಿಕ್ಕಮಗಳೂರಿಗೆ ಕರೆತರಲಾಗಿದೆ. ಚಿಕ್ಕಮಗಳೂರು ನಗರದ ಮಧುವನ ಲೇ ಔಟ್‍ನಲ್ಲಿನ ಕೆಎಸ್‍ಓಯು ಕಟ್ಟಡದಲ್ಲಿರುವ ಕೋವಿಡ್-19 ಸೆಂಟರ್‍ನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿ ಪರೀಕ್ಷೆ ಬರೆಯುವ ವೇಳೆ ಆತನ ಜೊತೆ ಓರ್ವ ವೈದ್ಯ ಹಾಗೂ ನರ್ಸ್ ಕೂಡ ಇದ್ದರು.

    ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಯನ್ನು ಮತ್ತೆ ಅಂಬುಲೆನ್ಸ್ ನಲ್ಲಿ ಮೂಡಿಗೆರೆ ತಾಲೂಕಿನ ಹಳ್ಳಿಯಲ್ಲಿನ ಆತನ ಮನೆಗೆ ಕಳುಹಿಸಲಾಗಿದೆ. ವಿದ್ಯಾರ್ಥಿಗೆ ನಾಳೆಯೂ ಪರೀಕ್ಷೆ ಇದ್ದು, ನಾಳೆಯೂ ಇದೇ ರೀತಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ವಿದ್ಯಾರ್ಥಿ ಪರೀಕ್ಷೆ ಬರೆಯುವ ವೇಳೆ ವೈದ್ಯ ಹಾಗೂ ನರ್ಸ್ ತೀವ್ರ ನಿಗಾ ವಹಿಸಿಸಿದ್ದರು ಎಂದು ಡಿಡಿಪಿಯು ನಾಗರಾಜ್ ಮಾಹಿತಿ ನೀಡಿದ್ದಾರೆ.

  • ನಿಗದಿಯಂತೆ ನಡೆಯಲಿದೆ ಸಿಇಟಿ – ಹೈಕೋರ್ಟ್‌ನಲ್ಲಿ ಮ್ಯಾರಥಾನ್‌ ವಿಚಾರಣೆ

    ನಿಗದಿಯಂತೆ ನಡೆಯಲಿದೆ ಸಿಇಟಿ – ಹೈಕೋರ್ಟ್‌ನಲ್ಲಿ ಮ್ಯಾರಥಾನ್‌ ವಿಚಾರಣೆ

    ಬೆಂಗಳೂರು: ನಾಳೆ ನಿಗದಿಯಾದಂತೆ ಸಿಇಟಿ ಪರೀಕ್ಷೆ ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದ ಸಿಇಟಿ ಪರೀಕ್ಷೆಯನ್ನು  ಮುಂದೂಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಮಹತ್ವದ ಆದೇಶ ಪ್ರಕಟಿಸಿದೆ.

    ಕೊರೊನಾ ಸಮಯದಲ್ಲಿ ಸಿಇಟಿ ನಡೆಸುತ್ತಿರುವುದನ್ನು ಪ್ರಶ್ನಿಸಿ ವಕೀಲರಾದ ಎಸ್.ಪಿ. ಪ್ರದೀಪ್ ಕುಮಾರ್, ಅಬ್ದುಲ್ಲಾ ಖಾನ್‌, ಎನ್‌ಎಸ್‌ಯುಐ ವಿದ್ಯಾರ್ಥಿಗಳು ಸಲ್ಲಿಸಿದ್ದ ಪಿಐಎಲ್‌ ವಿಚಾರಣೆ ನ್ಯಾ. ಅರವಿಂದ ಕುಮಾರ್ ಮತ್ತು ನ್ಯಾ. ಎಂ.ಐ ಅರುಣ್ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು. ಮಧ್ಯಾಹ್ನ 2:30ಕ್ಕೆ ಆರಂಭಗೊಂಡ ವಿಚಾರಣೆ ಸಂಜೆ 5:30ರ ವರೆಗೆ ನಡೆಯಿತು. ಬಳಿಕ 15 ನಿಮಿಷ ಮುಂದೂಡಿ ಮತ್ತೆ ಆರಂಭವಾಗಿ ಮತ್ತೆ ಮುಂದೂಡಲಾಗಿತ್ತು. ಅಂತಿಮವಾಗಿ ರಾತ್ರಿ 7:30ಕ್ಕೆ ಆದೇಶ ಪ್ರಕಟಕೊಂಡಿತು.

    ಸಿಇಟಿಯನ್ನು ಮುಂದೂಡಿದರೆ ಏನು ನಷ್ಟವಾಗಲಿದೆ? ಮುಂದೂಡಿದರೆ ಸರಿಪಡಿಸಲಾಗದಷ್ಟು ತೊಂದರೆಯಾಗಲಿದೆಯೇ ಎಂದು ನ್ಯಾ. ಅರವಿಂದ್‌ ಕುಮಾರ್‌ ಸರ್ಕಾರವನ್ನು ಪ್ರಶ್ನೆ ಮಾಡಿದರು. ಮುಂದೂಡಿದರೆ ಈಗಾಗಲೇ ಸಿದ್ಧಗೊಂಡಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದು ಎಎಜಿ ಧ್ಯಾನ್ ಚಿನ್ನಪ್ಪ ಉತ್ತರ ನೀಡಿದರು.

    ಕಂಟೈನ್ಮೆಂಟ್ ಝೋನ್ ನಿಂದ ಬರುವವರಿಗೆ ಸೂಕ್ತ ವ್ಯವಸ್ಥೆ ‌ಮಾಡಬೇಕು. ಎಲ್ಲಾ ಪೊಲೀಸರಿಗೆ ಈ ಬಗ್ಗೆ ಮಾಹಿತಿ‌ ನೀಡಬೇಕು. ಅವರ ಕೈಯಲ್ಲಿ ಇರುವ ಹಾಲ್ ಟಿಕೆಟ್‌ ಪಾಸ್ ಎಂದು ಪರಿಗಣಿಸಬೇಕು ಎಂದು ಹೈಕೋರ್ಟ್‌ ಸರ್ಕಾರಕ್ಕೆ ಸೂಚಿಸಿತು.

    ವಾದ ಹೀಗಿತ್ತು:
    ಅರ್ಜಿದಾರರ ಪರ ಹಿರಿಯ ವಕೀಲ ಪೊನ್ನಣ್ಣ, ಪರೀಕ್ಷಾ ಪ್ರಾಧಿಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇತ್ತು. ಈಗ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ಬೆಂಗಳೂರು ನಗರದಲ್ಲಿ 48 ಸಾವಿರ ಪ್ರಕರಣವಿದೆ. ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ವಾದಿಸಿದರು.

    ಅರ್ಜಿದಾರರ ಪರ ವಕೀಲ ಅನಿಲ್‌ ಕುಮಾರ್‌ ವಾದ ಮಂಡಿಸಿ, 97 ಕೇಂದ್ರಗಳಲ್ಲಿ ಎರಡು ದಿನ ಪರೀಕ್ಷೆ ನಡೆಯಲಿದೆ. ಪಾಸಿಟಿವ್‌ ಇರುವವರು ಸ್ವಂತ ಅಂಬುಲೆನ್ಸ್‌ನಲ್ಲಿ 2 ಗಂಟೆ ಮೊದಲು ಬರಬೇಕು. ಜೊತೆ ಲಂಚ್‌ ಬಾಕ್ಸ್‌ ತರಬೇಕು ಎಂದು ಮಾರ್ಗಸೂಚಿ ಹೇಳಿದೆ. ಆದರೆ ಈಗ ಆಸ್ಪತ್ರೆಗೆ ತೆರಳಲು ಅಂಬುಲೆನ್ಸ್‌ ಇಲ್ಲದಿರುವಾಗ ವಿದ್ಯಾರ್ಥಿಗಳು ಹೇಗೆ ಬರಬೇಕು ಎಂದು ಪ್ರಶ್ನಿಸಿದರು.

    ವಕೀಲ ಅಬ್ದುಲ್ ಮನನ್ ಖಾನ್, ಪರೀಕ್ಷೆಯಲ್ಲಿ ಬೆರಳಚ್ಚು ತೆಗೆದುಕೊಳ್ಳಲು ಇಂಕ್ ಪ್ಯಾಡ್ ಬಳಸುತ್ತಾರೆ. ಎಲ್ಲರೂ ಅದೇ ಇಂಕ್ ಪ್ಯಾಡ್ ಬಳಸಿದರೆ ಕೊರೊನಾ ಒಬ್ಬರಿಂದ ಒಬ್ಬರಿಗೆ ಹಬ್ಬುವ ಸಾಧ್ಯತೆಯಿದೆ. ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳೇ ಈಗ ಪರೀಕ್ಷೆ ಬೇಡ ಎಂದು ಆಂದೋಲನ ಮಾಡುತ್ತಿದ್ದಾರೆ. ಹೀಗಾಗಿ ಈ ಸಮಯದಲ್ಲಿ ಪರೀಕ್ಷೆ ಮಾಡುವುದು ಬೇಡ ಎಂದು ವಾದಿಸಿದರು.

    ಸರ್ಕಾರ ಪರ ಎಎಜಿ ಧ್ಯಾನ್ ಚಿನ್ನಪ್ಪ, ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿದ್ದಾರೆ. ಅವರೆಲ್ಲ ನಾಳೆ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು. ಪೊನ್ನಣ್ಣ ಅವರು ಪಕ್ಕದ ತೆಲಂಗಾಣದಲ್ಲಿ ಪರೀಕ್ಷೆಯನ್ನು ಮುಂದೂಡಿದ್ದಾರೆ ಎಂದಾಗ ಎಎಜಿ, ಎರಡು ವಾರದ ಹಿಂದೆ ಕೇರಳದಲ್ಲಿ ಎಂಜಿನಿಯರಿಂಗ್ ಪರೀಕ್ಷೆ ಮಾಡಿದ್ದಾರೆ ಎಂದು ಕೋರ್ಟ್‌ ಗಮನಕ್ಕೆ ತಂದರು.

    ಕಲಾಪದ ವೇಳೆ ಹೈಕೋರ್ಟ್‌ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಂತೆ ಸಿಇಟಿಯಲ್ಲೂ ವಂಚಿತರಾದವರಿಗೆ ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತಾ ಎಂದು ಪ್ರಶ್ನಿಸಿತು. ಇದಕ್ಕೆ ಎಎಜಿ 40 ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಅವರಿಗೆ ಈಗಾಗಲೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲೂ ಕೊರೊನಾ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಉತ್ತರಿಸಿದರು.

    ನ್ಯಾ. ಅರವಿಂದ ಕುಮಾರ್ ಮತ್ತೊಮ್ಮೆ ಪರೀಕ್ಷೆಯಿಂದ ವಂಚಿತರಾದವರ ಕಥೆ ಏನು? ಪರೀಕ್ಷೆಗೆ ಇನ್ನು ಕೆಲ ಗಂಟೆ ಇದೆ ಆದರೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಇಷ್ಟು ಆತುರದಿಂದ ಪರೀಕ್ಷೆಯನ್ನು ಯಾಕೆ ನಡೆಸಲಾಗುತ್ತದೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.

    ನೀವು ಪರೀಕ್ಷೆ ದಿನ ನಿಗದಿ ಪಡಿಸಿದ್ದೀರಿ. ಪರೀಕ್ಷೆ ದಿನಾಂಕ ಪ್ರಕಟವಾಗುವಾಗ ಸಂಖ್ಯೆ ಬಹಳ ಕಡಿಮೆ ಇತ್ತು. ಈಗ ವಿದ್ಯಾರ್ಥಿಗಳನ್ನು ತೊಂದರೆಗೆ ಸಿಲುಕಿಸಲು ಸಾಧ್ಯವಾಗುತ್ತಾ ಎಂದು ಪ್ರಶ್ನಿಸಿ ಸರ್ಕಾರದ ಮಾರ್ಗಸೂಚಿಯ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

    ನಾಳೆ ಪಾಸಿಟಿವ್ ಇರುವ ವಿದ್ಯಾರ್ಥಿ ಬಂದರೆ ಆತ ಎಲ್ಲಿ ಇರಬೇಕು? ವಿದ್ಯಾರ್ಥಿಯ ಉಷ್ಣಾಂಶ ಜಾಸ್ತಿ ಆದರೆ ಅವನ ಗತಿ ಏನು? ನಿಮ್ಮ ಎಸ್‌ಒಪಿ ಜುಲೈ 18 ರಂದು ಬಂದಿದೆ. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸ ಇದೆ ಅಲ್ವಾ? ಈಗಾಗಲೇ ಮನೆಯವರಿಗೆ ಪಾಸಿಟಿವ್‌ ಇದ್ದು, ಆ ವಿದ್ಯಾರ್ಥಿಗಳು ಪರೀಕ್ಷೆಗೆ ಬಂದರೆ ಏನು ಕ್ರಮ ತೆಗೆದುಕೊಂಡಿದ್ದೀರಿ? ಕಂಟೈನ್ಮೆಂಟ್ ಝೋನ್ ಗಳು ಈಗ ಬದಲಾಗಿದೆ ಎಲ್ಲವೇ ಎಂದು ಜಡ್ಜ್‌ ಸರ್ಕಾರವನ್ನು ಪ್ರಶ್ನಿಸಿದರು.

    ಈ ಪ್ರಶ್ನೆಗೆ ಎಎಜಿ, ನಿನ್ನೆ ಎಲ್ಲಾ ಜಿಲ್ಲಾಡಳಿತದ ಜೊತೆ ಸಭೆ ಮಾಡಲಾಗಿದೆ. ಎಲ್ಲರೂ ಪರೀಕ್ಷೆ ಗೆ ಸಿದ್ದರಾಗಿದ್ದಾರೆ. 8,100 ರೂಂ ‌ಗಳ ವ್ಯವಸ್ಥೆ ಇದೆ. 1,94000 ವಿದ್ಯಾರ್ಥಿಗಳು ಬರೆಯುತ್ತಾರೆ. ಯುಜಿಸಿ ಪರೀಕ್ಷೆಗಳು ಸೆಪ್ಟೆಂಬರ್ 30ಕ್ಕೆ ಮುಕ್ತಾಯ ಆಗುತ್ತದೆ. ಕೊರೋನಾ ಕಡಿಮೆ ಆಗುತ್ತಾ? ಜಾಸ್ತಿ ಆಗುತ್ತಾ ಎನ್ನುವುದು ನಮಗೂ ಗೊತ್ತಿಲ್ಲ ಎಂದು ಉತ್ತರಿಸಿದರು.

    ಈಗಾಗಲೇ 37 ಸಾವಿರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ಬದಲಾಯಿಸಿದ್ದಾರೆ. ಪಿಯುಸಿ ಇಂಗ್ಲಿಷ್‌, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ವಿಯಾಗಿದೆ. ಎಲ್ಲ ಕೇಂದ್ರಗಳಲ್ಲಿ ಒಂದು ಕೊಠಡಿಯನ್ನು ಮೀಸಲಿಡಲಾಗುತ್ತದೆ. ಉಷ್ಣಾಂಶದಲ್ಲಿ ವ್ಯತ್ಯಾಸ ಆದರೆ ಅಲ್ಲಿಗೆ ಶಿಫ್ಟ್ ಮಾಡಲಾಗುತ್ತದೆ ಎಂದು ಉತ್ತರಿಸಿದರು. ಎರಡು ಕಡೆಯ ವಾದವನ್ನು ಆಲಿಸಿದ ಕೋರ್ಟ್ ರಾತ್ರಿ 7:30ಕ್ಕೆ ತನ್ನ‌  ಆದೇಶವನ್ನು ಪ್ರಕಟಿಸಿತು.

    ಅರ್ಜಿಯಲ್ಲಿ ಏನಿತ್ತು?
    ರಾಜ್ಯದಲ್ಲಿ 2020ನೇ ಸಾಲಿನ ಸಿಇಟಿ ಪರೀಕ್ಷೆ ಜುಲೈ 30, 31 ಹಾಗೂ ಆಗಸ್ಟ್ 1ಕ್ಕೆ ನಿಗದಿ ಪಡಿಸಿ ಮೇ 13ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ಜುಲೈ 18ರಂದು ಪ್ರಾಧಿಕಾರ ಪರೀಕ್ಷಾ ಕೇಂದ್ರಗಳು ಯಾವ ರೀತಿ ತಯಾರಿ ನಡೆಸಬೇಕು ಎಂಬುದರ ಸಂಬಂಧವಾಗಿ ಮಾರ್ಗಸೂಚಿಯನ್ನು ಪ್ರಕಟಿಸಿದೆ.

    ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ. ಹೀಗಾಗಿ ಸಿಇಟಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಪಿಯು ಅಂಕಗಳ ಆಧಾರದಲ್ಲಿ ವೃತ್ತಿ ಶಿಕ್ಷಣ ಕೋರ್ಸ್‍ಗಳಿಗೆ ಪ್ರವೇಶ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದರು.

    ರಾಜ್ಯದಲ್ಲಿ ಕೊರೊನಾ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ 2020ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮುಂದೂಡಿ ನಂತರ ಪರೀಕ್ಞಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

    ಜುಲೈ 30 ರಂದು ಜೀವಶಾಸ್ತ್ರ, ಗಣಿತ ಜುಲೈ 31 ರಂದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ನಡೆದರೆ ಆಗಸ್ಟ್‌ ಒಂದರಂದು ಬೆಂಗಳೂರು ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕನ್ನಡ ಭಾಷಾ ಪರೀಕ್ಷೆಯನ್ನು 50 ಅಂಕಗಳಿಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ನಡೆಸಲಾಗುತ್ತದೆ. ಇತರೆ ವಿಷಯಗಳ ಪರೀಕ್ಷೆಗಳನ್ನು 60 ಅಂಕಗಳಿಗೆ ನಡೆಸಲಾಗುತ್ತದೆ.

    ಮೊದಲನೇ ವರ್ಷದ / ಮೊದಲನೇ ಸೆಮಿಸ್ಟರ್ ನ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನದ ಕೋರ್ಸ್‌ಗಳು ಮತ್ತು ಬಿ-ಫಾರ್ಮಾ-ಡಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.

  • ಸಿಇಟಿ, ಪದವಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಸಿಎಂ ಮನೆಗೆ ಮುತ್ತಿಗೆ

    ಸಿಇಟಿ, ಪದವಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಸಿಎಂ ಮನೆಗೆ ಮುತ್ತಿಗೆ

    – ಶಿವಮೊಗ್ಗದ ವಿನೋಬನಗರ ಬಡಾವಣೆಯಲ್ಲಿನ ಸಿಎಂ ನಿವಾಸಕ್ಕೆ ಮುತ್ತಿಗೆ

    ಶಿವಮೊಗ್ಗ: ಸಿಇಟಿ ಹಾಗೂ ಪದವಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಎನ್‍ಎಸ್‍ಯುಐ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಸಿಎಂ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸರ್ಕಾರ ಸಿಇಟಿ ಹಾಗೂ ಅಂತಿಮ ವರ್ಷದ ಪದವಿ ಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿರುವುದನ್ನು ಖಂಡಿಸಿ ಎನ್‍ಎಸ್‍ಯುಐ ಕಾರ್ಯಕರ್ತರು ನಗರದ ವಿನೋಬಗರ ಬಡಾವಣೆಯಲ್ಲಿರುವ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಪಿಪಿಇ ಕಿಟ್ ಧರಿಸಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರಕಾರ ಈ ಕೂಡಲೇ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾದ ಕಾರ್ಯಕರ್ತರನ್ನು ವಿನೋಬನಗರ ಠಾಣೆ ಪೊಲೀಸರು ವಶಪಡಿಸಿಕೊಂಡರು.

  • ಊರಿಗೆ ತೆರಳಿರೋ ಸಿಇಟಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

    ಊರಿಗೆ ತೆರಳಿರೋ ಸಿಇಟಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಊರಿಗೆ ತೆರಳಿರುವ ಸಿಇಟಿ ಬರೆಯುತ್ತಿರೋ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುಡ್ ನ್ಯೂಸ್ ನೀಡಿದೆ.

    ಹೌದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳು ಇರುವ ಕಡೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 75 ಕೇಂದ್ರಗಳನ್ನು ಹೊಸದಾಗಿ ಗುರುತಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಾವು ಇರುವ ಹತ್ತಿರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದುದಾಗಿದೆ.

    ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳಲು ಎರಡು ದಿನಗಳ ಅವಕಾಶ ನೀಡಲಾಗಿದೆ. ಮೇ 20 ಸಂಜೆ 6 ಗಂಟೆಯಿಂದ ಮೇ 22ರ ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಿ ಕೇಂದ್ರ ಬದಲಾವಣೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಆದ್ಯತೆ ಮೇರೆಗೆ 3 ಆಯ್ಕೆ ಕೊಡಬೇಕು. ಈ ಮೂಲಕ ಪರೀಕ್ಷಾ ಕೇಂದ್ರದ ಲಭ್ಯತೆಯ ಆಧಾರದ ಮೇಲೆ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಕೇಂದ್ರವನ್ನ ಹಂಚಿಕೆ ಮಾಡಲಿದೆ.

    ಜುಲೈ 30, 31 ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಜುಲೈ 30 ಜೀವಶಾಸ್ತ್ರ, ಗಣಿತ ಪರೀಕ್ಷೆ ಇದ್ದರೆ ಜುಲೈ 31 ರಂದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿವೆ. ಆಗಸ್ಟ್ 1ರಂದು ಹೊರನಾಡು – ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ.

    ಈ ಹಿಂದೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್, ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಎಂದಿನಂತೆ ಆಫ್ ಲೈನ್‍ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದರು.

    ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿರುವ ಕಾರಣ ಕೊಠಡಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಬೇಕಾಗುತ್ತದೆ. ಹೀಗಾಗಿ ಈ ಬಾರಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವಿವರಿಸಿದ್ದರು.

  • ಜುಲೈ 30, 31ಕ್ಕೆ ಸಿಇಟಿ ಪರೀಕ್ಷೆ – ಯಾವ ದಿನ ಯಾವ ಪರೀಕ್ಷೆ?

    ಜುಲೈ 30, 31ಕ್ಕೆ ಸಿಇಟಿ ಪರೀಕ್ಷೆ – ಯಾವ ದಿನ ಯಾವ ಪರೀಕ್ಷೆ?

    ಬೆಂಗಳೂರು: ಜುಲೈ 30, 31 ರಂದು ನಡೆಯಲಿರುವ ಸಿಇಟಿ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.

    ಜುಲೈ 30 ಜೀವಶಾಸ್ತ್ರ, ಗಣಿತ ಪರೀಕ್ಷೆ ಇದ್ದರೆ ಜುಲೈ 31 ರಂದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಆಗಸ್ಟ್ 1 ರಂದು ಹೊರನಾಡು – ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ.

    ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಎಂದಿನಂತೆ ಆಫ್ ಲೈನ್ ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಇಟಿ, ನೀಟ್ ಪರೀಕ್ಷೆ- ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಕ್ಲಾಸ್

    ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿರುವ ಕಾರಣ ಕೊಠಡಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಬೇಕಾಗುತ್ತದೆ. ಹೀಗಾಗಿ ಈ ಬಾರಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವಿವರಿಸಿದರು. ಈ ಮೊದಲು ಏಪ್ರಿಲ್ 22, 24 ರಂದು ಸಿಇಟಿ ಪರೀಕ್ಷೆ ನಿಗದಿಯಾಗಿತ್ತು.

    ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮಾತ್ರ ಬಾಕಿ ಇದ್ದು, ಶೀಘ್ರವೇ ಪಿಯುಸಿ ಬೋರ್ಡ್ ದಿನಾಂಕವನ್ನು ನಿಗದಿ ಮಾಡಲಿದೆ. ಡಿಗ್ರಿ ಕಾಲೇಜ್ ಗಳು ಈ ವರ್ಷದ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಪರೀಕ್ಷೆ, ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಮೆಡಿಕಲ್ ಸೀಟ್ ಬ್ಲಾಕಿಂಗ್ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಈಗಾಗಲೇ ಕಮಿಟಿ ರಚನೆ ಮಾಡಿ ವರದಿ ನೀಡಿದೆ. ವರದಿ ಏನಿದೆ ಅಂತ ಸಚಿವರು ನೋಡಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಅಶ್ವಥ್ ನಾರಾಯಣ್ ಉತ್ತರಿಸಿದರು.

    ಎಂಜಿನಿಯರಿಂಗ್ ಸೀಟ್ ಶುಲ್ಕ ಹೆಚ್ಚಳ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ, ಶುಲ್ಕ ಹೆಚ್ಚಳ ಮಾಡಬೇಕು ಅಂತ ಮನವಿ ಬಂದಿದೆ. ಈ ಬಗ್ಗೆ ಸರ್ಕಾರ ಏನು ನಿರ್ಧಾರ ಮಾಡಿಲ್ಲ. ಕೊರೊನಾ ಇರುವ ಕಾರಣ ಈ ಬಾರಿ ಅಡ್ಮಿಷನ್ ಆಗುವುದೇ ದೊಡ್ಡ ವಿಷಯವಾಗಲಿದೆ. ಶುಲ್ಕ ಹೆಚ್ಚಳದ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಚಿಂತನೆ ಮಾಡಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

  • ಸಿಇಟಿ, ನೀಟ್ ಪರೀಕ್ಷೆ- ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಕ್ಲಾಸ್

    ಸಿಇಟಿ, ನೀಟ್ ಪರೀಕ್ಷೆ- ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಕ್ಲಾಸ್

    ಬೆಂಗಳೂರು: ಜುಲೈ 30, 31 ಸಿಇಟಿ ಪರೀಕ್ಷೆ ನಡೆಯಲಿದ್ದು, ಅಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರ್ಯಾಶ್ ಕೋರ್ಸ್ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಲಾಕ್‍ಡೌನ್‍ನಿಂದಾಗಿ ಸಿಇಟಿ, ನೀಟ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ರ್ಯಾಶ್ ಕೋರ್ಸ್ ತರಗತಿ ಆರಂಭಿಸಲಾಗಿದೆ. ಗೆಟ್ ಸಿಇಟಿ ಗೊ (Get CET go) ಹೆಸರಿನಲ್ಲಿ ಕ್ರ್ಯಾಶ್ ಕೋರ್ಸ್ ನಡೆಸಲಾಗುತ್ತಿದ್ದು, ಪರೀಕ್ಷೆ ನಡೆಯುವವರೆಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಕರು ಆನ್‍ಲೈನ್‍ನಲ್ಲಿ ಕ್ಲಾಸ್ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಜುಲೈ 30, 31 ರಂದು ಸಿಇಟಿ ಪರೀಕ್ಷೆ – ಸೆಪ್ಟೆಂಬರ್‌ನಲ್ಲಿ ಡಿಗ್ರಿ ಕಾಲೇಜ್ ಆರಂಭ

    ಈಗಾಗಲೇ ಕ್ರ್ಯಾಶ್ ಕೋರ್ಸ್ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ 1,60,510 ಜನರು ಈ ಪೇಜ್ ನೋಡಿದ್ದಾರೆ. 76,913 ವಿದ್ಯಾರ್ಥಿಗಳು ಲಾಗಿನ್ ಆಗಿದ್ದಾರೆ. ಈ ಪೈಕಿ 38 ಸಾವಿರ ವಿದ್ಯಾರ್ಥಿಗಳು ಆಪ್ ಮೂಲಕ ಲಾಗಿನ್ ಆಗಿದರೆ, 38 ಸಾವಿರ ವಿದ್ಯಾರ್ಥಿಗಳು ವೆಬ್ ಪೋರ್ಟಲ್ ಮೂಲಕ ಲಾಗಿನ್ ಆಗಿದ್ದಾರೆ. 51,975 ವಿದ್ಯಾರ್ಥಿಗಳು ಈಗಾಗಲೇ ಟೆಸ್ಟ್ ತೆಗೆದುಕೊಂಡಿದ್ದಾರೆ ಎಂದರು.

    ಕ್ರ್ಯಾಶ್ ಕೋರ್ಸ್ ಕುರಿತು ವಿದ್ಯಾರ್ಥಿಗಳಿಗೆ ಉಂಟಾಗುವ ಗೊಂದಲಗಳನ್ನು ಬಗೆಹರಿಸಲು ಸಹಾಯವಾಣಿಯನ್ನು ಕೂಡ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

  • ಜುಲೈ 30, 31 ರಂದು ಸಿಇಟಿ ಪರೀಕ್ಷೆ – ಸೆಪ್ಟೆಂಬರ್‌ನಲ್ಲಿ ಡಿಗ್ರಿ ಕಾಲೇಜ್ ಆರಂಭ

    ಜುಲೈ 30, 31 ರಂದು ಸಿಇಟಿ ಪರೀಕ್ಷೆ – ಸೆಪ್ಟೆಂಬರ್‌ನಲ್ಲಿ ಡಿಗ್ರಿ ಕಾಲೇಜ್ ಆರಂಭ

    ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಸಿಇಟಿ ಪರೀಕ್ಷೆಗಳು ಜುಲೈ 30, 31ರಂದು ನಡೆಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.

    ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಅಶ್ವಥ್ ನಾರಾಯಣ್, ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಎಂದಿನಂತೆ ಆಫ್ ಲೈನ್ ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

    ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿರುವ ಕಾರಣ ಕೊಠಡಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಬೇಕಾಗುತ್ತದೆ. ಹೀಗಾಗಿ ಈ ಬಾರಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವಿವರಿಸಿದರು. ಈ ಮೊದಲು ಏಪ್ರಿಲ್ 22, 24 ರಂದು ಸಿಇಟಿ ಪರೀಕ್ಷೆ ನಿಗದಿಯಾಗಿತ್ತು.

    ದ್ವೀತಿಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮಾತ್ರ ಬಾಕಿ ಇದ್ದು, ಶೀಘ್ರವೇ ಪಿಯುಸಿ ಬೋರ್ಡ್ ದಿನಾಂಕವನ್ನು ನಿಗದಿ ಮಾಡಲಿದೆ. ಡಿಗ್ರಿ ಕಾಲೇಜ್ ಗಳು ಈ ವರ್ಷದ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಪರೀಕ್ಷೆ, ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಮೆಡಿಕಲ್ ಸೀಟ್ ಬ್ಲಾಕಿಂಗ್ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಈಗಾಗಲೇ ಕಮಿಟಿ ರಚನೆ ಮಾಡಿ ವರದಿ ನೀಡಿದೆ. ವರದಿ ಏನಿದೆ ಅಂತ ಸಚಿವರು ನೋಡಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಅಶ್ವಥ್ ನಾರಾಯಣ್ ಉತ್ತರಿಸಿದರು.

    ಎಂಜಿನಿಯರಿಂಗ್ ಸೀಟ್ ಶುಲ್ಕ ಹೆಚ್ಚಳ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ, ಶುಲ್ಕ ಹೆಚ್ಚಳ ಮಾಡಬೇಕು ಅಂತ ಮನವಿ ಬಂದಿದೆ. ಈ ಬಗ್ಗೆ ಸರ್ಕಾರ ಏನು ನಿರ್ಧಾರ ಮಾಡಿಲ್ಲ. ಕೊರೊನಾ ಇರುವ ಕಾರಣ ಈ ಬಾರಿ ಅಡ್ಮಿಷನ್ ಆಗುವುದೇ ದೊಡ್ಡ ವಿಷಯವಾಗಲಿದೆ. ಶುಲ್ಕ ಹೆಚ್ಚಳದ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಚಿಂತನೆ ಮಾಡಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

  • ನೀಟ್ ಮಾದರಿಯಲ್ಲಿ ಸಿಇಟಿ ಪರೀಕ್ಷೆ- ಮೆಡಿಕಲ್, ಡೆಂಟಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

    ನೀಟ್ ಮಾದರಿಯಲ್ಲಿ ಸಿಇಟಿ ಪರೀಕ್ಷೆ- ಮೆಡಿಕಲ್, ಡೆಂಟಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

    ಬೆಂಗಳೂರು : ಮುಂದಿನ ವರ್ಷದಿಂದ ನೀಟ್ ಮಾದರಿಯಲ್ಲಿ ಸಿಇಟಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಬುಧವಾರ ನಡೆದ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹೊಸ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ರು.

    ವೃತ್ತಪರ ಕೋರ್ಸ್ ಗೆ ಕೆಇಎ(ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಸಿಇಟಿ ಪರೀಕ್ಷೆ ನಡೆಸುತ್ತಿದೆ. ಸದ್ಯ 4 ವಿಷಯಗಳಿಗೆ ಎರಡು ದಿನ ಪರೀಕ್ಷೆಯನ್ನ ಕೆಇಎ ನಡೆಸುತ್ತಿದೆ. ಇದನ್ನ ಬದಲಾವಣೆ ಮಾಡಿ ನೀಟ್ ಮಾದರಿ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದೆ. ನೀಟ್ ನಲ್ಲಿ ಒಂದೇ ದಿನ ಎರಡು ವಿಷಯಗಳ ಪರೀಕ್ಷೆ ನಡೆಯಲಿದೆ. ಈ ಮಾದರಿ ಸಿಇಟಿಗೆ ತರಲು ನಿರ್ಧಾರ ಮಾಡಿದ್ದು, ಮುಂದಿನ ವರ್ಷದಿಂದ ಜಾರಿಗೆ ಇಲಾಖೆ ತರಲಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗರು ಎಂದಿನಂತೆ ಪರೀಕ್ಷೆಗಳು ಇರಲಿದೆ.

    ಇದೇ ವೇಳೆ ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್ ಪಡೆಯೋಕೆ ಆಸಕ್ತಿ ಇರೋ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ನೀಡಿದೆ. ದ್ವೀತಿಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಪಾಸ್ ಆದವರಿಗೂ ಮೆಡಿಕಲ್ ಮತ್ತು ಡೆಂಟಲ್ ಸೀಟು ನೀಡಲು ಇಲಾಖೆ ನಿರ್ಧಾರ ಮಾಡಿದೆ. ಇಷ್ಟು ದಿನ ಎಂಜಿನಿಯರಿಂಗ್ ಸೀಟುಗಳಿಗೆ ಮಾತ್ರ ಪೂರಕ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ನೀಡಲಾಗುತ್ತಿತ್ತು. ಈಗ ಇದನ್ನ ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್ ಗೂ ವಿಸ್ತರಣೆ ಮಾಡಿದ್ದು, ಪೂರಕ ಪರೀಕ್ಷೆಯಲ್ಲಿ ಪಾಸ್ ಆಗಿ ನೀಟ್ ನಲ್ಲಿ ರ‌್ಯಾಂಕ್ ಪಡೆದವರಿಗೂ ಸೀಟ್ ಸಿಗಲಿದೆ ಅಂತ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ರು.

  • ಶಿಕ್ಷಕರ ಸಿಇಟಿ ಪರೀಕ್ಷಾ ಗೊಂದಲ ನಿವಾರಿಸಲಾಗುವುದು: ಸುರೇಶ್ ಕುಮಾರ್

    ಶಿಕ್ಷಕರ ಸಿಇಟಿ ಪರೀಕ್ಷಾ ಗೊಂದಲ ನಿವಾರಿಸಲಾಗುವುದು: ಸುರೇಶ್ ಕುಮಾರ್

    ತುಮಕೂರು: ಶಿಕ್ಷಕರ ನೇಮಕಾತಿ ವಿಚಾರವಾಗಿ ನಡೆಸುವ ಸಿಇಟಿ ಪರೀಕ್ಷೆಯಲ್ಲಿನ ತೊಡಕುಗಳನ್ನು ನಿವಾರಿಸಲು ಚರ್ಚೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ತುಮಕೂರಿನ ರಾಮಕೃಷ್ಣ ಆಶ್ರಮದಲ್ಲಿ 27ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಿಇಟಿ ಪರೀಕ್ಷೆಯಲ್ಲಿ ಅರ್ಹತಾ ಮಟ್ಟ ಹೆಚ್ಚಿಸಲು ಸಿ ಆ್ಯಂಡ್ ಆರ್ ನಿಯಮವನ್ನು ಇಡಲಾಗಿದೆ. ಈ ಸಿ ಆ್ಯಂಡ್ ಆರ್ ರೂಲ್ಸ್ ನಲ್ಲಿನ ತೊಡಕನ್ನ ನಿವಾರಿಸಲು ಚರ್ಚಿಸಿದ್ದು, ಶೀಘ್ರವೇ ನಿವಾರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಸಿ ಆ್ಯಂಡ್ ಆರ್ ರೂಲ್ಸ್‍ನಿಂದ ಶಿಕ್ಷಕರ ಆಯ್ಕೆ ಕಠಿಣವಾಗುತ್ತಿದೆ. ಹಾಗಾಗಿ ಈ ನಿಯಮವನ್ನು ನಡೆಸಬೇಕೋ ಅಥವಾ ಬೇಡವೋ ಎಂಬ ಚರ್ಚೆ ನಡೆಯುತ್ತಿದ್ದು, ಶೀಘ್ರವೇ ಒಂದು ನಿರ್ಧಾರಕ್ಕೆ ಬರಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಆರ್.ಟಿ.ಇ ಬಗ್ಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಹಿಂದಿನ ಸರ್ಕಾರದ ಅವಧಿಯಲ್ಲಿ ಹೊರಡಿಸಿರುವ ಆದೇಶವನ್ನೇ ಮುಂದುವರಿಸುವುದಾಗಿ ಖಡಕ್ಕಾಗಿ ನುಡಿದ ಅವರು, ಬದಲಾವಣೆ ಬಗ್ಗೆ ಸಿ.ಎಂ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

    ಸರ್ಕಾರಿ ಶಾಲೆಗಳನ್ನು ಸದೃಢವನ್ನಾಗಿ ಮಾಡಬೇಕೆಂಬುದು ನನ್ನ ಆಶಯ ಎಂದ ಸಚಿವರು, ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆರ್.ಒ ಪ್ಲಾಂಟ್‍ಗಳನ್ನು ಕೊಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಹೆಚ್ಚು ನೀರು ಕುಡಿಸುವ ಅಭ್ಯಾಸ ಕೂಡ ಆಗಬೇಕಿದೆ. ಕೇರಳ ಮಾದರಿಯಲ್ಲಿ ವಾಟರ್ ಬೆಲ್ ಪದ್ಧತಿಯನ್ನು ಕೂಡ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಸರ್ಕಾರಿ ಶಾಲೆಯ ಆಂಗ್ಲ ಮಾಧ್ಯಮದ ತರಗತಿಗಳು ಚೆನ್ನಾಗಿ ನಡೆಯುತ್ತಿವೆ ಎಂಬ ಅಂಶ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಹೆಚ್ಚು ಪಬ್ಲಿಕ್ ಶಾಲೆಗಳು ಬೇಕೆಂದು ಶಾಸಕರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ

    ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ

    ಬೆಂಗಳೂರು: ಲೋಕಸಭೆ ಚುನಾವಣೆಯಿಂದ ಮುಂದೂಡಲ್ಪಟ್ಟಿದ್ದ ಸಿಇಟಿ ಪರೀಕ್ಷೆ ಇಂದಿನಿಂದ ಪ್ರಾರಂಭವಾಗಲಿದೆ. 3 ದಿನಗಳ ಕಾಲ ಸಿಇಟಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ಪೂರ್ಣಗೊಳಿಸಿದೆ.

    ಈ ಬಾರಿ 1,94,311 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು 97,716 ಮತ್ತು ವಿದ್ಯಾರ್ಥಿನಿಯರು 96,585 ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯಾದ್ಯಂತ 431 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನ 84 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಮೊದಲ ದಿನವಾದ ಇಂದು ಜೀವಶಾಸ್ತ್ರ ಮತ್ತು ಗಣಿತ ವಿಭಾಗದ ಪರೀಕ್ಷೆ ನಡೆಯಲಿದೆ.

    ಮಂಗಳವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೇ 1 ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರದ ಜೊತೆ ಪ್ಯಾನ್, ಆಧಾರ್, ಬಸ್ ಪಾಸ್, ಡ್ರೈವಿಂಗ್ ಲೈಸೆನ್ಸ್, 2 ನೇ ಪಿಯುಸಿ ಪ್ರವೇಶ ಪತ್ರ ಸೇರಿದಂತೆ ಯಾವುದಾದರು ಒಂದು ಮಾನ್ಯತೆ ಹೊಂದಿರುವ ಗುರುತಿನ ಪತ್ರವನ್ನ ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.

    ಪರೀಕ್ಷಾ ಅಕ್ರಮ ತಡೆಯಲು 431 ವೀಕ್ಷಕರು, 862 ವಿಶೇಷ ದಳದ ಸದಸ್ಯರು, 9,700 ಕೊಠಡಿ ಮೇಲ್ವಿಚಾರಕರು, ಸೇರಿ ಒಟ್ಟಾರೆ 28,245 ಜನರನ್ನ ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ವಾಚ್, ಮೊಬೈಲ್, ಕ್ಯಾಲ್ಯುಕೇಟರ್, ಟಾಬ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನ ತೆಗೆದುಕೊಂಡು ಹೋಗುವಂತಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಪ್ರಶ್ನೆ ಪತ್ರಿಕೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇರಲಿದೆ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ ಕಡೆಯಿಂದ ಆಲ್ ದಿ ಬೆಸ್ಟ್.