Tag: CET college

  • ಸಿಇಟಿ ಕಾಲೇಜಿಗೆ ವರದಿ ಮಾಡಿಕೊಳ್ಳದ 2,348 ಅಭ್ಯರ್ಥಿಗಳಿಗೆ ಶೋಕಾಸ್‌ ನೋಟಿಸ್‌ – ಕೆಇಎ

    ಬೆಂಗಳೂರು: ಯುಜಿಸಿಇಟಿ-2024ರ (UGCET-2024) ಎರಡನೇ ಮುಂದುವರಿದ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದೆ. ಶುಲ್ಕ ಪಾವತಿಸಿ ಸಂಬಂಧಪಟ್ಟ ಎಂಜಿನಿಯರಿಂಗ್‌ ಕಾಲೇಜುಗಳಿಗೆ ವರದಿ ಮಾಡಿಕೊಳ್ಳದ ಒಟ್ಟು 2,348 ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA), ಕಾರಣ ಕೇಳಿ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

    ಪ್ರತಿಷ್ಠಿತ ಕಾಲೇಜುಗಳು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಈ ಅಭ್ಯರ್ಥಿಗಳು ವರದಿ ಮಾಡಿಕೊಳ್ಳದ ಕಾರಣ ಅವರ ನಂತರದ ಮೆರಿಟ್‌ ವಿದ್ಯಾರ್ಥಿಗಳಿಗೆ ಈ ಸೀಟುಗಳು ಸಿಗದೆ ಅನ್ಯಾಯ ಮಾಡಿದಂತಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಈ ಅಭ್ಯರ್ಥಿಗಳ ನೋಂದಾಯಿತ ಇ-ಮೇಲ್‌ಗೆ ನೋಟಿಸ್‌ ಕಳುಹಿಸಲಾಗಿದೆ. ಮೂರು ದಿನಗಳಲ್ಲಿ ಅವರು ಸಮಜಾಯಿಸಿ ನೀಡಬೇಕು. ಇಲ್ಲದಿದ್ದರೆ, ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸೀಟು ಹಂಚಿಕೆ ನಂತರ ಶುಲ್ಕ ಕಟ್ಟದವರು, ಶುಲ್ಕ ಕಟ್ಟಿಯೂ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳದವರು ಹಾಗೂ ಅಪೂರ್ಣ ಶುಲ್ಕ ಕಟ್ಟಿದವರು- ಹೀಗೆ ಒಟ್ಟು ಮೂರು ವಿಭಾಗಗಳನ್ನು ಮಾಡಿಕೊಂಡು, ನೋಟಿಸ್‌ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಅಭ್ಯರ್ಥಿಗಳು ನೀಡುವ ಉತ್ತರ ನೋಡಿಕೊಂಡು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

    ವಿವಿಧ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾಗಿದ್ದರೂ ಒಟ್ಟು 2,208 ಮಂದಿ ಶುಲ್ಕ ಪಾವತಿಸಿಲ್ಲ. 95 ಮಂದಿ ಶುಲ್ಕ ಪಾವತಿಸಿದ್ದರೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ಹೋಗಿಲ್ಲ. 45 ಮಂದಿ ಅಲ್ಪಸ್ವಲ್ಪ ಶುಲ್ಕ ಪಾವತಿಸಿದ್ದಾರೆ. ಇಷ್ಟೂ ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.