Tag: cescom

  • ವಿದ್ಯುತ್ ಕಂಬ ಮುರಿದುಬಿದ್ದು ಮಹಿಳೆಗೆ ಗಂಭೀರ ಗಾಯ – ಚೆಸ್ಕಾಂ ವಿರುದ್ಧ ಸ್ಥಳೀಯರ ಆಕ್ರೋಶ

    ವಿದ್ಯುತ್ ಕಂಬ ಮುರಿದುಬಿದ್ದು ಮಹಿಳೆಗೆ ಗಂಭೀರ ಗಾಯ – ಚೆಸ್ಕಾಂ ವಿರುದ್ಧ ಸ್ಥಳೀಯರ ಆಕ್ರೋಶ

    ಹಾಸನ: ಮಹಿಳೆಯೊಬ್ಬರ ಮೇಲೆ ವಿದ್ಯುತ್ ಕಂಬ ಮುರಿದುಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಸಕಲೇಶಪುರದ (Sakleshpura) ಗಾಳಿಗುಡ್ಡ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಶಾರದ (45) ಗಂಭೀರವಾಗಿ ಗಾಯಗೊಂಡ ಮಹಿಳೆ. ಅವರು ಮನೆಯಿಂದ ಹೊರಗೆ ಬಂದಿದ್ದ ವೇಳೆ ವಿದ್ಯುತ್‌ ಕಂಬ ಏಕಾಏಕಿ ಮುರಿದುಬಿದ್ದಿದೆ. ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

    ವಿದ್ಯುತ್ ಕಂಬ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಬದಲಿಸುವಂತೆ ಗ್ರಾಮಸ್ಥರು ಹಲವು ಬಾರಿ ಚೆಸ್ಕಾಂಗೆ (CESCOM) ಮನವಿ ಮಾಡಿದ್ದರು. ಆದರೆ ವಿದ್ಯುತ್ ಕಂಬ ಬದಲಿಸದೇ ಚೆಸ್ಕಾಂ ಅಧಿಕಾರಿಗಳು ಹಾಗೂ ನೌಕರರು ನಿರ್ಲಕ್ಷ್ಯ ತೋರಿದ್ದು ಅಧಿಕಾರಿಗಳ ನಿರ್ಲಕ್ಷತನದಿಂದಲೇ ಅವಘಡ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಗಾಯಗೊಂಡ ಮಹಿಳೆಗೆ ಜಿಲ್ಲಾಸ್ಪತ್ರೆಯ ಐಸಿಯುವಿಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಜೂನ್‌ 14 ಆದ್ರೂ ಇನ್ನೂ ಬಂದಿಲ್ಲ ವಿದ್ಯುತ್‌ ಬಿಲ್‌!

    ಜೂನ್‌ 14 ಆದ್ರೂ ಇನ್ನೂ ಬಂದಿಲ್ಲ ವಿದ್ಯುತ್‌ ಬಿಲ್‌!

    ಮಂಡ್ಯ: ವಿದ್ಯುತ್‌ ಬಿಲ್‌ (Electricity Bill) ಏರಿಕೆಯಾಗಿದೆ ಎಂದು ರಾಜ್ಯದ ಹಲವು ಕಡೆ ಜನರು ಪ್ರತಿಭಟನೆ ನಡೆಸುತ್ತಿದ್ದರೆ ಮಂಡ್ಯ ನಗರದಲ್ಲಿ (Mandya) ಇನ್ನೂ ವಿದ್ಯುತ್‌ ಬಿಲ್‌ ಜನರ ಕೈ ಸೇರಿಲ್ಲ.

    ಸಾಧಾರಣ ರಾಜ್ಯದೆಲ್ಲಡೆ ಪ್ರತಿ ತಿಂಗಳ ಮೊದಲ ವಾರ ಮೀಟರ್‌ ರೀಡರ್‌ ಮನೆಗೆ ಬಂದು ಲೆಕ್ಕ ಹಾಕಿ ಬಿಲ್‌ ನೀಡುತ್ತಾರೆ. ಆದರೆ ಈ ಬಾರಿ ಜೂನ್‌ 14 ಆದರೂ ಮೀಟರ್‌ ರೀಡರ್‌ ಮನೆ ಬಂದಿಲ್ಲ.  ಇದನ್ನೂ ಓದಿ: ಪ್ರಿಯಕರನಿಗೋಸ್ಕರ ಪತಿಯನ್ನೇ ಮುಗಿಸಿದ ಖತರ್ನಾಕ್ ಲೇಡಿ – ಕೊನೆಗೇನಾಯ್ತು ನೋಡಿ

    ಅರ್ಧ ತಿಂಗಳು ಕಳೆದ ಬೆನ್ನಲ್ಲೇ ಜನರು ಈಗ ಗೊಂದಲಕ್ಕೆ ಒಳಗಾಗಿದ್ದಾರೆ. ವಿದ್ಯುತ್ ಬಿಲ್‌ ಜಾಸ್ತಿ ಮಾಡಲು ಚೆಸ್ಕಾಂ (CHESCOM) ಮುಂದಾಗಿದ್ಯಾ ಎಂದು ಜನ ಪ್ರಶ್ನಿಸುತ್ತಿದ್ದಾರೆ.

    ಈ ಬಗ್ಗೆ ಚೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಶೀಘ್ರವೇ ಬಿಲ್‌ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಬಿಲ್‌ ಇನ್ನೂ ಯಾಕೆ ಬಂದಿಲ್ಲ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಕ್ಕಿಲ್ಲ.

    ಮಂಡ್ಯ ಮಾತ್ರವಲ್ಲ ರಾಜ್ಯದ ಹಲವು ಭಾಗಗಳಲ್ಲಿ ಈ ಬಾರಿ ವಿದ್ಯುತ್‌ ಬಿಲ್‌ ಮನೆ ಮಾಲೀಕರಿಗೆ ಸಿಕ್ಕಿಲ್ಲ.

  • ಗಾರ್ಡನ್ ಕ್ಲೀನ್ ಮಾಡೋಕೆ ಹೇಳಿದ್ದಕ್ಕೆ ಮಹಿಳಾ ಎಂಜಿನಿಯರ್‌ಗೆ ಮಚ್ಚಿನೇಟು

    ಗಾರ್ಡನ್ ಕ್ಲೀನ್ ಮಾಡೋಕೆ ಹೇಳಿದ್ದಕ್ಕೆ ಮಹಿಳಾ ಎಂಜಿನಿಯರ್‌ಗೆ ಮಚ್ಚಿನೇಟು

    ಹಾಸನ: ಗಾರ್ಡನ್ ಸ್ವಚ್ಛಗೊಳಿಸು ಎಂದು ಹೇಳಿದಕ್ಕೆ ಸಹಾಯಕನೋರ್ವ ಸೆಸ್ಕಾಂ ಎಇಇ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಹಾಸನದ ಸಂತೆಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಡೆದಿದೆ.

    ಸೆಸ್ಕಾಂ ಎಇಇ ಸ್ವಾತಿ ದೀಕ್ಷಿತ್ ಅವರ ಮೇಲೆ ಸ್ಟೇಷನ್ ಅಟೆಂಡೆಂಟ್ ಮಂಜುನಾಥ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಸಂತೆಪೇಟೆ ವಿದ್ಯುತ್ ವಿತರಣಾ ಕೇಂದ್ರದ ಗಾರ್ಡನ್ ಸ್ವಚ್ಛಗೊಳಿಸುವಂತೆ ಸ್ವಾತಿ ಅವರು ಮಂಜುನಾಥ್‍ಗೆ ಹೇಳಿದ್ದಾರೆ. ಆದರೆ ಈ ಚಿಕ್ಕ ವಿಷಯಕ್ಕೆ ಕೋಪಗೊಂಡ ಮಂಜುನಾಥ್, ಸ್ವಾತಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಸಹೋದ್ಯೋಗಿ ವೆಂಕಟೇಗೌಡನಿಗೂ ಕೂಡ ಮಚ್ಚಿನೇಟು ಬಿದ್ದಿವೆ.

    ಗಲಾಟೆಯಲ್ಲಿ ಸ್ವಾತಿ ಅವರ ಕುತ್ತಿಗೆ, ತಲೆಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಎರಡು ಬೆರಳು ತುಂಡಾಗಿದೆ. ಸದ್ಯ ಹಲ್ಲೆಗೊಳಗಾದ ಸಿಬ್ಬಂದಿ ಹಾಗೂ ಮಹಿಳಾ ಎಂಜಿನಿಯರ್ ಇಬ್ಬರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಆರೋಪಿ ಮಂಜುನಾಥ್ ವಿರುದ್ಧ ದೂರು ದಾಖಲಾಗಿದ್ದು, ನಗರಠಾಣೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಖಾಕಿ ಕರೆತಂದ ಸೆಸ್ಕಾಂ – ಗ್ರಾಮಸ್ಥರ ಅಕ್ರೋಶ

    ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಖಾಕಿ ಕರೆತಂದ ಸೆಸ್ಕಾಂ – ಗ್ರಾಮಸ್ಥರ ಅಕ್ರೋಶ

    ಮೈಸೂರು: ಗ್ರಾಮದ ಮನೆಗಳ ವಿದ್ಯುತ್ ಬಾಕಿ ಹಿನ್ನೆಲೆಯಲ್ಲಿ ರೈತರಿಂದ ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕಾಂ) ಅಧಿಕಾರಿಗಳು ಹೊಸ ರೀತಿಯ ವರಸೆ ಆರಂಭಿಸಿದ್ದು, ಪೊಲೀಸರ ಸಮ್ಮುಖದಲ್ಲಿ ಹಣ ಕಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.

    ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಪೊಲೀಸರ ಜೊತೆ ಆಗಮಿಸಿದ ಸೆಸ್ಕಾಂ ಅಧಿಕಾರಿಗಳು ರೈತರಿಂದ ಬಾಕಿ ವಸೂಲಿ ಮಾಡಲು ಮುಂದಾಗಿದ್ದಾರೆ. ಸದ್ಯ ಸೆಸ್ಕಾಂ ಸಿಬ್ಬಂದಿಗಳ ಈ ವರ್ತನೆಗೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದ್ದಾರೆ.

    ಒಂದು ಗಂಟೆಗೂ ಹೆಚ್ಚು ಕಾಲ ಸೆಸ್ಕಾಂ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಈ ಕುರಿತು ಮಾತಿನ ಚಕಮಕಿ ನಡೆಯಿತು. ಸೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸರಿಗೆ ಗ್ರಾಮದ ಒಳಗೆ ಕಾಲಿಡದಂತೆ ಗ್ರಾಮಸ್ಥರು ರೈತರು ತಡೆಯೊಡ್ಡಿದರು.

    ಈ ಕುರಿತು ಗ್ರಾಮಸ್ಥರೊಂದಿಗೆ ತಮ್ಮ ಕಾರ್ಯದ ಕುರಿತು ವಾದ ಮಂಡಿಸಿದ ಅಧಿಕಾರಿಗಳು, ಹಲವು ವರ್ಷಗಳಿಂದ ವಿದ್ಯುತ್ ಬಿಲ್ ಬಾಕಿ ಇದೆ. ಬಿಲ್ ಕೇಳಲು ಬಂದರೆ ನೀವು ನಮ್ಮ ಮೇಲೆ ದರ್ಪ ಮಾಡಿತ್ತೀರಾ. ಈ ಹಿನ್ನಲೆಯಲ್ಲಿ ಪೊಲೀಸರನ್ನು ಜೊತೆಗೆ ಕರೆದುಕೊಂಡು ಬಂದಿದ್ದೇವೆ. ವಿದ್ಯುತ್ ಹಣವನ್ನು ಸ್ಥಳದಲ್ಲೇ ಪಾವತಿ ಮಾಡುವಂತೆ ಪಟ್ಟು ಹಿಡಿದರು. ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ ಮಳೆ ಬೆಳೆ ಇಲ್ಲದೇ ನಷ್ಟ ಅನುಭವಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಎಲ್ಲಾ ಹಣ ನೀಡಲು ಸಾಧ್ಯವಿಲ್ಲ ಮೊದಲಿನಂತೆ ಹಂತ ಹಂತವಾಗಿ ಹಣ ಪಾವತಿ ಮಾಡುವುದಾಗಿ ಹೇಳಿದ್ದಾರೆ.

  • ಧಗ ಧಗನೇ ಹೊತ್ತಿ ಉರಿದ ರಸ್ತೆ ಪಕ್ಕದ ಮರ

    ಧಗ ಧಗನೇ ಹೊತ್ತಿ ಉರಿದ ರಸ್ತೆ ಪಕ್ಕದ ಮರ

    ಮೈಸೂರು: ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನ ಹಾದನೂರು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ರಸ್ತೆ ಪಕ್ಕದ ಮರವೊಂದು ಹೊತ್ತಿ ಉರಿದಿದೆ.

    ವಿದ್ಯುತ್ ಸ್ಪರ್ಶದಿಂದ ಮರ ಹೊತ್ತಿ ಉರಿಯುತ್ತಿರುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಒಂದು ದೊಡ್ಡ ಮರದ ಮಧ್ಯದ ಕೊಂಬೆಗೆ ವಿದ್ಯತ್ ಸ್ಪರ್ಶಿಸಿ ಉರಿಯಲು ಆರಂಭಿಸಿದೆ. ಧಗ ಧಗವಾಗಿ ಉರಿಯುತ್ತಿರುವ ಮರದಿಂದ ಬೆಂಕಿಯ ಕಿಡಿಗಳು ನೆಲಕ್ಕೆ ಬೀಳುತ್ತಿದೆ. ಈ ಸಂದರ್ಭದಲ್ಲಿ ಜನರಾಗಲಿ, ಯಾವುದೇ ಸಾರಿಗೆ ಬಸ್‍ಗಳಾಗಲಿ ಓಡಾಡುತ್ತಿರಲಿಲ್ಲ. ಆದ್ದರಿಂದ ಯಾರೊಬ್ಬರಿಗೂ ಅಪಾಯ ಸಂಭವಿಸಿಲ್ಲ.

    ಮರದಲ್ಲಿ ಬೆಂಕಿ ಕಾಣಿಕೊಂಡ ತಕ್ಷಣ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದ ಕಾರಣ ಮರ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ತನಕ ಗಂಟೆಗಟ್ಟಲೆ ಹೊತ್ತಿ ಉರಿದಿದೆ.

    ಈ ಅವಘಡ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    https://youtu.be/2SpJi1bP_pk